ಮಧುರೈನ ತಿರುಪರಂಕುಂದ್ರಂ ಬೆಟ್ಟದ ಮೇಲಿರುವ ದರ್ಗಾದ ಸಮೀಪದ ಕಲ್ಲಿನ ಸ್ತಂಭದ ಮೇಲೆ ಸಾಂಪ್ರದಾಯಿಕ ಕಾರ್ತಿಕ ದೀಪವನ್ನು ಬೆಳಗಿಸಲು ಅನುಮತಿ ನೀಡಿದ್ದ ಮದ್ರಾಸ್ ಹೈಕೋರ್ಟ್ ಆದೇಶಕ್ಕೆ ತಡೆ ನೀಡುವಂತೆ ತಮಿಳುನಾಡು ಸರ್ಕಾರ ಬುಧವಾರ (ನ.18) ಸುಪ್ರೀಂ ಕೋರ್ಟ್ಗೆ ಮನವಿ ಮಾಡಿದೆ. ಹೈಕೋರ್ಟ್ ತೀರ್ಪನ್ನು ಜಾರಿಗೆ ತರಲು ಅವಕಾಶ ನೀಡಿದರೆ ದೇಶದಾದ್ಯಂತ ಇರುವ ಸಾವಿರಾರು ಸರ್ವೆ ಕಲ್ಲುಗಳು (ಸರ್ವೆ ಸ್ತಂಭಗಳು) ಧಾರ್ಮಿಕ ಸ್ವರೂಪವನ್ನು ಪಡೆದುಕೊಳ್ಳುವ ಸಾಧ್ಯತೆಯಿದೆ ಎಂದು ಸರ್ಕಾರ ಹೇಳಿದೆ.
ತಮಿಳುನಾಡು ಜಿಲ್ಲಾಧಿಕಾರಿಗಳ ಪರವಾಗಿ ಹಾಜರಾದ ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣನ್ ಅವರು ನ್ಯಾಯಮೂರ್ತಿ ಅರವಿಂದ್ ಕುಮಾರ್ ಮತ್ತು ನ್ಯಾಯಮೂರ್ತಿ ವಿಪುಲ್ ಎಂ. ಪಾಂಚೋಲಿ ಅವರನ್ನೊಳಗೊಂಡ ಪೀಠಕ್ಕೆ, ವಿವಾದಿತ ಕಂಬವು ಸಂಪೂರ್ಣವಾಗಿ ಬೇರೆಯದೇ ಉದ್ದೇಶಕ್ಕಾಗಿ ಅಸ್ತಿತ್ವಕ್ಕೆ ಬಂದಿದ್ದು, ಅದು ದೇವಾಲಯದ ದೀಪ ಹಚ್ಚಲು ಉದ್ದೇಶಿಸಲಾದ ‘ದೀಪತ್ತೂಣ್’ (ಕಲ್ಲಿನ ಸ್ತಂಭ) ಆಗಿರಲಿಲ್ಲ ಎಂದು ತಿಳಿಸಿದ್ದಾರೆ. “ಈ ತೀರ್ಪಿಗೆ ತಡೆ ನೀಡದೆ ಹಾಗೆಯೇ ಉಳಿಸಿದರೆ, ಇಂತಹ ಎಲ್ಲಾ ಕಂಬಗಳು ಧಾರ್ಮಿಕ ಬಣ್ಣ ಪಡೆದುಕೊಳ್ಳುತ್ತವೆ ಮತ್ತು ಜನರು ಇಂತಹ ಕೃತ್ಯಗಳನ್ನು ಮಾಡಲು ಪ್ರಾರಂಭಿಸುತ್ತಾರೆ ಎಂಬುದೇ ರಾಜ್ಯ ಸರ್ಕಾರವಾಗಿ ನಮ್ಮ ಆತಂಕವಾಗಿದೆ” ಎಂದು ಅವರು ವಾದ ಮಂಡಿಸಿದ್ದಾರೆ.
“ನ್ಯಾಯಾಲಯದ ವ್ಯಾಪ್ತಿಯನ್ನು ವಿಸ್ತರಿಸುವುದು ಬೇಡ, ಇಲ್ಲದಿದ್ದರೆ ದೇಶದಾದ್ಯಂತ ಇರುವ ಸಾವಿರಾರು ಸರ್ವೆ ಕಲ್ಲುಗಳು (ಸರ್ವೆ ಸ್ತಂಭಗಳು) ಧಾರ್ಮಿಕ ಸ್ವರೂಪ ಪಡೆದುಕೊಳ್ಳಲು ಪ್ರಾರಂಭಿಸುತ್ತವೆ” ಎಂದು ಅವರು ಹೇಳಿದ್ದಾರೆ.
ಬೆಟ್ಟದ ತಪ್ಪಲಿನಲ್ಲಿರುವ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನ ಮತ್ತು ಇನ್ನೊಂದು ಬದಿಯಲ್ಲಿರುವ ದರ್ಗಾವನ್ನು ತೋರಿಸುತ್ತಾ, ಶಂಕರನಾರಾಯಣನ್ ಅವರು ಬೆಟ್ಟದ ಛಾಯಾಚಿತ್ರಗಳು ಮತ್ತು ಡ್ರೋನ್ ಚಿತ್ರವನ್ನು ಪೀಠದ ಗಮನಕ್ಕೆ ತಂದಿದ್ದಾರೆ. ಸಾಂಪ್ರದಾಯಿಕವಾಗಿ ದೀಪವನ್ನು ಬೆಳಗಿಸುತ್ತಿರುವ ಏಕೈಕ ಸ್ಥಳವೆಂದರೆ ಉಚ್ಚಿ ಪಿಳ್ಳೈಯಾರ್ ದೇವಸ್ಥಾನ (ಇದನ್ನು ದೀಪ ಮಂಟಪದ ಸ್ಥಳ ಎಂದೂ ಕರೆಯಲಾಗುತ್ತದೆ) ಮಾತ್ರ. ಬೇರೆ ಸ್ಥಳಗಳಲ್ಲಿ ದೀಪ ಬೆಳಗಿಸುವ ಪ್ರಯತ್ನಗಳನ್ನು ಈ ಹಿಂದೆ ಕನಿಷ್ಠ ಮೂರು ಬಾರಿ ತಿರಸ್ಕರಿಸಲಾಗಿದೆ. ಹೆಚ್ಚುವರಿ ಸ್ಥಳಕ್ಕೆ ಅನುಮತಿ ನೀಡುವುದರಿಂದ ಸ್ಥಾಪಿತ ಪದ್ಧತಿಯ ಪಾವಿತ್ರ್ಯಕ್ಕೆ ಧಕ್ಕೆಯಾಗುತ್ತದೆ ಮತ್ತು ಧಾರ್ಮಿಕ ಆಚರಣೆಯ ಇಂತಹ ವಿಷಯಗಳಲ್ಲಿ ನ್ಯಾಯಾಲಯಗಳು ಈ ರೀತಿಯಾಗಿ ಹಸ್ತಕ್ಷೇಪ ಮಾಡಬಾರದು ಎಂದು ಅವರು ವಾದಿಸಿದ್ದಾರೆ.
ಸಿಕಂದರ್ ಬಾದುಶಾ ದರ್ಗಾದಿಂದ ಸುಮಾರು 50 ಮೀಟರ್ ದೂರದಲ್ಲಿರುವ ವಿವಾದಿತ ಕಲ್ಲಿನ ಸ್ತಂಭದ ಬಳಿ ಕಾರ್ತಿಕ ದೀಪವನ್ನು ಬೆಳಗಿಸುವಂತೆ ಅರುಳ್ಮಿಗು ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದ ಆಡಳಿತ ಮಂಡಳಿಗೆ ನಿರ್ದೇಶನ ನೀಡಿದ್ದ ಡಿಸೆಂಬರ್ 2025ರ ಏಕಸದಸ್ಯ ಪೀಠದ ಆದೇಶವನ್ನು ಮದ್ರಾಸ್ ಹೈಕೋರ್ಟ್ನ ವಿಭಾಗೀಯ ಪೀಠವು ಜನವರಿ 2026ರ ತೀರ್ಪಿನಲ್ಲಿ ಎತ್ತಿಹಿಡಿದಿತ್ತು. ಈ ವಿಭಾಗೀಯ ಪೀಠದ ತೀರ್ಪಿಗೆ ತಡೆ ನೀಡುವಂತೆ ರಾಜ್ಯ ಸರ್ಕಾರ ತನ್ನ ಅರ್ಜಿಯಲ್ಲಿ ಕೋರಿದೆ. ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆಯಾಗುತ್ತದೆ ಎಂಬ ರಾಜ್ಯ ಸರ್ಕಾರದ ಆತಂಕವನ್ನು ‘ಕಾಲ್ಪನಿಕ ಭೂತ’ ಎಂದು ತಳ್ಳಿಹಾಕಿದ್ದ ಹೈಕೋರ್ಟ್, ಆ ಕಲ್ಲಿನ ಸ್ತಂಭವು ದೇವಸ್ಥಾನದ ಜಾಗದಲ್ಲೇ ಇದೆ ಎಂದು ಅಭಿಪ್ರಾಯಪಟ್ಟಿತ್ತು.
ವಿವಾದಿತ ಸ್ತಂಭದ ಬಳಿ ದೀಪವನ್ನು ಬೆಳಗಿಸುವ ಯಾವುದೇ ಸ್ಥಾಪಿತ ಪದ್ಧತಿ ಇಲ್ಲ ಮತ್ತು ಕಳೆದ 150 ವರ್ಷಗಳಿಗೂ ಹೆಚ್ಚು ಕಾಲದಿಂದ ಈ ಆಚರಣೆಯು ಉಚ್ಚಿ ಪಿಳ್ಳೈಯಾರ್ ದೇವಸ್ಥಾನದ ಬಳಿಯ ಸಾಂಪ್ರದಾಯಿಕ ಸ್ಥಳಕ್ಕೆ ಮಾತ್ರ ಸೀಮಿತವಾಗಿದೆ ಎಂದು ತಮಿಳುನಾಡು ಸರ್ಕಾರ ಪ್ರತಿಪಾದಿಸಿದೆ. ಅಲ್ಲದೆ, ಈ ರಚನೆಯು ಧಾರ್ಮಿಕ ‘ದೀಪತ್ತೂಣ್’ ಆಗಿರದೆ ತ್ರಿಕೋನಮಿತಿಯ ಸರ್ವೆ (ಟ್ರಿಗೊನೊಮೆಟ್ರಿಕಲ್ ಸರ್ವೆ) ಕೆಲಸಕ್ಕೆ ಸಂಬಂಧಿಸಿದ ಸರ್ವೆ ಕಂಬವಾಗಿದೆ ಎಂದು ಅದು ವಾದಿಸಿದೆ. ನವೆಂಬರ್ 24ರಂದು ನಡೆಯಲಿರುವ ಹಬ್ಬಕ್ಕೂ ಮುನ್ನ ಹೈಕೋರ್ಟ್ ನಿರ್ದೇಶನವನ್ನು ಜಾರಿಗೊಳಿಸಿದರೆ, ಕೋಮು ಉದ್ವಿಗ್ನತೆಯ ಇತಿಹಾಸವಿರುವ ಈ ಸೂಕ್ಷ್ಮ ಪ್ರದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆ ಎದುರಾಗುವ ಅಪಾಯವಿದೆ ಎಂದೂ ಸರ್ಕಾರ ಹೇಳಿದೆ.
ಸಿಕಂದರ್ ಬಾದುಶಾ ದರ್ಗಾದ ಪರವಾಗಿ ಹಾಜರಾದ ಹಿರಿಯ ವಕೀಲ ಹುಝೇಫಾ ಅಹ್ಮದಿ ಅವರು, ಹೈಕೋರ್ಟ್ ನಿಯಮಗಳ ಪ್ರಕಾರ ಉತ್ತರವನ್ನು ಸಲ್ಲಿಸಲು ತಮಗೆ ಸಾಕಷ್ಟು ಸಮಯವನ್ನು ನೀಡದೆ ಏಕಸದಸ್ಯ ಪೀಠವು ಆದೇಶವನ್ನು ಹೊರಡಿಸಿದೆ ಎಂದು ವಾದಿಸಿದ್ದಾರೆ. ಆದೇಶವನ್ನು ಹೊರಡಿಸುವ ಮೊದಲು ಏಕಸದಸ್ಯ ನ್ಯಾಯಾಧೀಶರು ದರ್ಗಾಕ್ಕೆ ಯಾವುದೇ ನೋಟಿಸ್ ನೀಡದೆ ಸ್ಥಳ ಪರಿಶೀಲನೆ ನಡೆಸಿದ್ದರು ಎಂದು ಹೇಳಿದ್ದಾರೆ. ‘ದೀಪತ್ತೂಣ್’ ನೆಲ್ಲಿತೋಪು ಮತ್ತು ದರ್ಗಾದ ನಡುವಿನ ಪ್ರದೇಶದಲ್ಲಿದೆ ಎಂದ ಅವರು, ಸ್ಥಳ ಪರಿಶೀಲನೆಗೂ ಮುನ್ನ ದರ್ಗಾಕ್ಕೆ ನೋಟಿಸ್ ನೀಡಿದ್ದರೆ, ಅದು ದೇವಾಲಯದ ಆಸ್ತಿಯ ಒಳಗಿದೆ ಎಂಬ ತೀರ್ಮಾನಕ್ಕೆ ಏಕಸದಸ್ಯ ನ್ಯಾಯಾಧೀಶರು ಬರುತ್ತಿರಲಿಲ್ಲ ಎಂದು ಹೇಳಿದ್ದಾರೆ.
ದರ್ಗಾಕ್ಕೆ ಸಾಕಷ್ಟು ಅವಕಾಶ ನೀಡಿಲ್ಲ ಎಂಬ ವಾದವನ್ನು ವಿಭಾಗೀಯ ಪೀಠವು ಬಹುತೇಕ ಒಪ್ಪಿಕೊಂಡಿತ್ತು. ಆದರೆ ಮೇಲ್ಮನವಿಯಲ್ಲಿ ಅವರ ವಾದವನ್ನು ಆಲಿಸಿರುವುದರಿಂದ ಆ ಲೋಪವು ಸರಿಪಡಿಸಲ್ಪಟ್ಟಿದೆ ಎಂದು ಅಭಿಪ್ರಾಯಪಟ್ಟಿದೆ. ಎಂಬುದಾಗಿ ಅಹ್ಮದಿ ಅವರು ಮುಂದುವರಿದು ವಿವರಿಸಿದ್ದಾರೆ.
ಹೊಸ ಸ್ಥಳದಲ್ಲಿ ದೀಪ ಬೆಳಗಿಸುವ ಮನವಿಯನ್ನು ತಿರಸ್ಕರಿಸಿದ ಈ ಹಿಂದಿನ ತೀರ್ಪುಗಳಿವೆ ಎಂಬುದನ್ನು ಬೆಟ್ಟು ಮಾಡಿ ತೋರಿಸಿದ ಅಹ್ಮದಿ ಅವರು, ಹೊಸ ಪದ್ಧತಿಯನ್ನು ಸ್ಥಾಪಿಸಲು ಬಯಸುವುದಾದರೆ ಅದನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (ಪಿಐಎಲ್) ಬದಲು ಸಿವಿಲ್ ದಾವೆಯ ಮೂಲಕವೇ ಮಾಡಬೇಕಾಗುತ್ತದೆ ಎಂದು ಹೇಳಿದ್ದಾರೆ.
ನಿನ್ನೆ (ನ.17) ನ್ಯಾಯಾಲಯವು ರಾಜ್ಯ ಸರ್ಕಾರದ ಪರವಾಗಿ ಹಿರಿಯ ವಕೀಲರಾದ ಜಯದೀಪ್ ಗುಪ್ತಾ, ಶೇಖರ್ ನಾಫಡೆ ಮತ್ತು ಹೆಚ್ಚುವರಿ ಅಡ್ವೊಕೇಟ್ ಜನರಲ್ ಪಿ.ಸಿ. ಸೇನ್ ಅವರ ವಾದಗಳನ್ನು ಆಲಿಸಿತ್ತು. ಬೆಟ್ಟದ ತುದಿಯಲ್ಲಿ ದೀಪವನ್ನು ಬೆಳಗಿಸುವ ಯಾವುದೇ ಸ್ಥಾಪಿತ ಪದ್ಧತಿ ಇಲ್ಲ ಮತ್ತು ಆಗಮ ಪದ್ಧತಿಯ ಪ್ರಕಾರ, ಅದನ್ನು ಸಾಂಪ್ರದಾಯಿಕವಾಗಿ (ಬೆಳಗಿಸಲಾಗುತ್ತಿತ್ತು) ಎಂದು ಅವರು ಮುಖ್ಯವಾಗಿ ವಾದಿಸಿದ್ದರು. ವಿಚಾರಣೆ ನಾಳೆ ಮುಂದುವರಿಯಲಿದೆ.
Courtesy :livelaw.in


