ದಲಿತ ಕುಟುಂಬದ ಸದಸ್ಯರ ಮೇಲೆ ಹಲ್ಲೆ ನಡೆಸಿ, ಜಾತಿನಿಂದನೆ ಮಾಡಿ, ಮಹಿಳೆಯೊಬ್ಬರನ್ನು ಪೊಲೀಸ್ ಕಸ್ಟಡಿಯಲ್ಲಿ ಹಿಂಸಿಸಿ, ಆಕೆಯ ಮಗನನ್ನು ನಕಲಿ ಎನ್ಕೌಂಟರ್ನಲ್ಲಿ ಕೊಲ್ಲುವುದಾಗಿ ಬೆದರಿಕೆ ಹಾಕಿದ ಆರೋಪದ ಮೇಲೆ ಸರ್ಕಲ್ ಆಫೀಸರ್ (ಸಿಒ), ಸ್ಟೇಷನ್ ಹೌಸ್ ಆಫೀಸರ್ (ಎಸ್ಎಚ್ಒ) ಸೇರಿದಂತೆ 15 ಪೊಲೀಸರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಉತ್ತರ ಪ್ರದೇಶದ ಅಮ್ರೋಹಾದ ವಿಶೇಷ ಎಸ್ಸಿ/ಎಸ್ಟಿ ನ್ಯಾಯಾಲಯ ಆದೇಶಿಸಿದೆ.
ಸೆಪ್ಟೆಂಬರ್ 20ರಂದು ಮಂಗ್ರೌಲಿ ಗ್ರಾಮದಲ್ಲಿ ದಾರಿ ವಿವಾದಕ್ಕೆ ಸಂಬಂಧಿಸಿದಂತೆ ಈ ಘಟನೆ ನಡೆದಿದೆ ಎನ್ನಲಾಗಿದೆ. ದೂರುದಾರರು ಸಲ್ಲಿಸಿದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ನ್ಯಾಯಾಲಯ, ದೂರುದಾರರ ಆರೋಪಗಳಿಗೆ ಪೂರಕವಾಗಿವೆ ಎಂದು ಅಭಿಪ್ರಾಯಪಟ್ಟಿದೆ. ಅಲ್ಲದೆ, ಹಸನ್ಪುರ ಪೊಲೀಸ್ ಠಾಣೆಗೆ ಸಂಬಂಧವಿಲ್ಲದ ಹಿರಿಯ ಅಧಿಕಾರಿಯೊಬ್ಬರು ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ನಿರ್ದೇಶಿಸಿದೆ.
ಎಸ್ಸಿ/ಎಸ್ಟಿ ಕಾಯ್ದೆಯಡಿ ಸ್ಥಾಪಿಸಿರುವ ವಿಶೇಷ ನ್ಯಾಯಾಲಯದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶೆ ನಸೀಮಾ ಖಾನಂ ಅವರು ಈ ಆದೇಶ ಹೊರಡಿಸಿದ್ದಾರೆ. ಹಸನ್ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಮಂಗ್ರೌಲಿ ಗ್ರಾಮದ ನಿವಾಸಿ ರೀನಾ ದೇವಿ ಸಲ್ಲಿಸಿದ್ದ ದೂರಿನ ವಿಚಾರಣೆ ನಡೆಸಿದ ನ್ಯಾಯಾಲಯ ಈ ನಿರ್ದೇಶನ ನೀಡಿದೆ.
ಸೆಪ್ಟೆಂಬರ್ 20ರಂದು ಸಂಜೆ ಸುಮಾರು 4 ಗಂಟೆಗೆ ತನ್ನ ಪತಿ ರಣವೀರ್ ಸಿಂಗ್ ಮತ್ತು ಮೈದುನ ಧರಂಪಾಲ್ ನಡುವಿನ ದಾರಿ ವಿವಾದಕ್ಕೆ ಸಂಬಂಧಿಸಿದಂತೆ ಸರ್ಕಲ್ ಆಫೀಸರ್ ಪಂಕಜ್ ಕುಮಾರ್ ತ್ಯಾಗಿ, ಅಂದಿನ ಠಾಣಾಧಿಕಾರಿ ರಾಜೇಶ್ ಕುಮಾರ್ ತಿವಾರಿ, ಸಬ್ಇನ್ಸ್ಪೆಕ್ಟರ್ ಸಂಜಯ್ ತೋಮರ್ ಸೇರಿದಂತೆ ಸುಮಾರು 15 ಪೊಲೀಸರು ತಮ್ಮ ಮನೆಗೆ ಬಂದಿದ್ದರು ಎಂದು ರೀನಾ ದೇವಿ ಆರೋಪಿಸಿದ್ದಾರೆ.
ನ್ಯಾಯಾಲಯದ ಆದೇಶದ ಪ್ರಕಾರ, ಪೊಲೀಸರು ಮನೆಯ ಸಿಸಿಟಿವಿ ಕ್ಯಾಮೆರಾಗಳಿಗೆ ಸಂಪರ್ಕ ಹೊಂದಿದ್ದ ಡಿಜಿಟಲ್ ವಿಡಿಯೋ ರೆಕಾರ್ಡರ್ (ಡಿವಿಆರ್) ಅನ್ನು ತೆಗೆದುಕೊಂಡು ಹೋಗಿದ್ದರು. ಅಲ್ಲದೆ, ದಾರಿ ನಿರ್ಮಿಸುವ ಉದ್ದೇಶದಿಂದ ಗೋಡೆಯೊಂದನ್ನು ಕೆಡವುವಂತೆ ಧರಂಪಾಲ್ಗೆ ಸೂಚಿಸಿದ್ದರು ಎಂದು ರೀನಾ ದೂರಿನಲ್ಲಿ ತಿಳಿಸಿದ್ದಾರೆ.
ಇದಕ್ಕೆ ತಾನು ಆಕ್ಷೇಪ ವ್ಯಕ್ತಪಡಿಸಿದಾಗ ಪೊಲೀಸರು ಜಾತಿ ನಿಂದನಾತ್ಮಕ ಪದಗಳನ್ನು ಬಳಸಿ ನಿಂದಿಸಿದರು. ಹಲ್ಲೆ ನಡೆಸಿ, ಬೆರಳುಗಳನ್ನು ತಿರುಚಿ, ಕೂದಲು ಹಿಡಿದು ಎಳೆದಾಡಿದರು ಎಂದು ಅವರು ಆರೋಪಿಸಿದ್ದಾರೆ. ಮಧ್ಯಪ್ರವೇಶಿಸಿದ ತನ್ನ ಮಗ ಹರ್ಷ್ ಕುಮಾರ್ ಮೇಲೆಯೂ ಹಲ್ಲೆ ನಡೆಸಲಾಗಿದ್ದು, ಎಂಟು ವರ್ಷದ ಕಿರಿಯ ಮಗ ರಚಿತ್ನನ್ನೂ ಪೊಲೀಸರು ಥಳಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಬಳಿಕ ಪೊಲೀಸರು ಬಲವಂತವಾಗಿ ತನ್ನನ್ನು ಹಸನ್ಪುರ ಪೊಲೀಸ್ ಠಾಣೆಗೆ ಕರೆದೊಯ್ದು, ಅಲ್ಲಿ ಚರ್ಮದ ಬೆಲ್ಟ್ ಮತ್ತು ಬೆತ್ತಗಳಿಂದ ಹಲ್ಲೆ ನಡೆಸಿದರು. ತನ್ನ ಮಗನನ್ನು ನಕಲಿ ಪೊಲೀಸ್ ಎನ್ಕೌಂಟರ್ನಲ್ಲಿ ಕೊಲ್ಲುವುದಾಗಿ ಬೆದರಿಕೆ ಹಾಕಿದರು ಎಂದು ರೀನಾ ಆರೋಪಿಸಿದ್ದಾರೆ. ಅಲ್ಲದೆ, ಮನೆಯಿಂದ 1.19 ಲಕ್ಷ ರೂಪಾಯಿ ನಗದು ಹಾಗೂ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ಪೊಲೀಸರು ತೆಗೆದುಕೊಂಡು ಹೋಗಿದ್ದಾರೆ ಎಂದೂ ದೂರಿದ್ದಾರೆ.
ದೂರುದಾರರು ಸಾಕ್ಷ್ಯವಾಗಿ ಸಲ್ಲಿಸಿದ್ದ ವಿಡಿಯೋ ದೃಶ್ಯಾವಳಿಗಳನ್ನು ಪರಿಶೀಲಿಸಿದ ನ್ಯಾಯಾಲಯ, ಅವು ದೂರಿನಲ್ಲಿನ ಆರೋಪಗಳಿಗೆ ಪೂರಕವಾಗಿವೆ ಎಂದು ಗಮನಿಸಿದೆ. ಆರೋಪಿತ ಪೊಲೀಸರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಆದೇಶಿಸಿದೆ. ಇದರೊಂದಿಗೆ, ಸಿಸಿಟಿವಿ ದೃಶ್ಯಾವಳಿಗಳು, ಡಿವಿಆರ್ ಮತ್ತು ಮೊಬೈಲ್ ಫೋನ್ಗಳಿಗೆ ಸಂಬಂಧಿಸಿದ ಸಾಕ್ಷ್ಯಗಳನ್ನು ಸುರಕ್ಷಿತವಾಗಿ ಸಂರಕ್ಷಿಸಬೇಕು ಎಂದೂ ನಿರ್ದೇಶಿಸಿದೆ.
ತನಿಖೆಯಲ್ಲಿ ಯಾವುದೇ ಹಿತಾಸಕ್ತಿ ಸಂಘರ್ಷ ಉಂಟಾಗದಂತೆ ಹಸನ್ಪುರ ಪೊಲೀಸ್ ಠಾಣೆಗೆ ಸಂಬಂಧವಿಲ್ಲದ ಹಿರಿಯ ಅಧಿಕಾರಿಯೊಬ್ಬರಿಗೆ ತನಿಖೆಯ ಜವಾಬ್ದಾರಿ ವಹಿಸುವಂತೆ ನ್ಯಾಯಾಲಯ ಸೂಚಿಸಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಅಮ್ರೋಹಾ ಪೊಲೀಸ್ ವರಿಷ್ಠಾಧಿಕಾರಿ ಲಖನ್ ಸಿಂಗ್ ಯಾದವ್, ಪ್ರಕರಣದ ಬಗ್ಗೆ ತಮಗೆ ಮಾಹಿತಿ ಇಲ್ಲ ಎಂದು ತಿಳಿಸಿದ್ದಾರೆ. ಆರೋಪಗಳ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ನ್ಯಾಯಾಲಯದ ಆದೇಶ ಸ್ವೀಕರಿಸಿದ ಬಳಿಕ ನಿಗದಿತ ಪ್ರಕ್ರಿಯೆಯಂತೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.


