ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣನ ಕುರಿತು ರವಿ ಹಂಜ್ ಎನ್ನುವ ವ್ಯಕ್ತಿ ಆಕ್ಷೇಪಾರ್ಹ ಹಾಗೂ ನಿಂದನೆ ಮಾತುಗಳನ್ನಾಡಿದ್ದರ ಕುರಿತು ಕರವೇ ನಾರಾಯಣಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಕರ್ನಾಟಕ ಕಂಡ ಮಹಾ ಮಾನವತಾವಾದಿ, ದಾರ್ಶನಿಕ, ಸಾಮಾಜಿಕ ಕ್ರಾಂತಿಯ ಹರಿಕಾರ, ಭಕ್ತಿ ಭಂಡಾರಿ ಬಸವಣ್ಣನವರನ್ನು ಕೀಳಾಗಿ ನಿಂದಿಸಿದ್ದ ರವಿ ಹಂಜ್ ಎಂಬಾತನನ್ನು ಪೊಲೀಸರು ಬಂಧಿಸಿರುವುದು ಸ್ವಾಗತಾರ್ಹ. ಈತ ಮಾಡಿರುವುದು ಭಯೋತ್ಪಾದನೆಗೆ ಸಮನಾದ ಕೃತ್ಯ. ಹೀಗಾಗಿ ಈತನ ಮೇಲೆ ಕಠಿಣವಾದ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸುತ್ತೇನೆ.”
“ರವಿ ಹಂಜ್ ರೀತಿಯ ಸಾಂಸ್ಕೃತಿಕ ಭಯೋತ್ಪಾದಕರು ಆಗಾಗ ಸಮಾಜದ ಸ್ವಾಸ್ತ್ಯವನ್ನು ಹಾಳುಗೆಡವುತ್ತಾರೆ. ಇಂಥವರು ಸಮಾಜಕ್ಕೆ ಅಂಟಿದ ಕಳಂಕಗಳು. ನೆಮ್ಮದಿಯ ನಾಡಿನಲ್ಲಿ ಸಮುದಾಯಗಳ ನಡುವೆ ಸಂಘರ್ಷ ಹುಟ್ಟು ಹಾಕುವ ಇಂಥ ರೋಗಿಷ್ಟ ಮನಸ್ಸಿನವರಿಗೆ ತಕ್ಕ ಪಾಠ ಕಲಿಸಬೇಕು.”
“ಅಭಿವ್ಯಕ್ತಿ ಸ್ವಾತಂತ್ರ್ಯ ದ ಹೆಸರಿನಲ್ಲಿ ಕರ್ನಾಟಕದ ಮಹಚೇತನಗಳಿಗೆ ಕೆಸರು ಎರಚುವುದನ್ನು ಯಾವುದೇ ಕಾರಣಕ್ಕೂ ಸಹಿಸಿಕೊಳ್ಳಲು ಸಾಧ್ಯವಿಲ್ಲ. ಅದರಲ್ಲೂ ಇಡೀ ಕನ್ನಡ ಸಮುದಾಯಕ್ಕೆ ನೈತಿಕ ನಡಾವಳಿಯ ಸೂತ್ರವನ್ನೇ ರೂಪಿಸಿಕೊಟ್ಟ, ಜಗತ್ತಿಗೆ ವಿಶ್ವ ಮಾನವತೆಯ ತತ್ವವನ್ನು ಕೊಟ್ಟ ಬಸವಣ್ಣವರನ್ನು ಕೊಲೆಗಾರ, ಕಳ್ಳ ಎಂದು ನಿಂದಿಸುವವರನ್ನು ಸುಮ್ಮನೆ ಬಿಡಲು ಸಾಧ್ಯವಿಲ್ಲ. ಜಗತ್ತಿನ ಶ್ರೇಷ್ಠ ಪರಂಪರೆಗಳಲ್ಲಿ ಒಂದಾದ ಲಿಂಗಾಯತವನ್ನು ಲಿಂಗಾಹತ ಎಂದು ಕರೆಯುವುದು ಈತನ ಹೀನಾಯ ಮನಸ್ಥಿತಿಯನ್ನು ತೋರಿಸುತ್ತದೆ.”
“ಬಸವಣ್ಣನವರು ನಮ್ಮ ಹೆಮ್ಮೆ. ನಿಸ್ಸಂಶಯವಾಗಿ ಅವರು ಕರ್ನಾಟಕದ ಸಾಂಸ್ಕೃತಿಕ ನಾಯಕ. ಅವರು ನಡೆಸಿದ ಸಾಮಾಜಿಕ ಕ್ರಾಂತಿ ನಮಗೆ ಸ್ಫೂರ್ತಿ. ಕರ್ನಾಟಕದ ಸಾಮಾಜಿಕ ಬದುಕನ್ನು ಬದಲಿಸಿ, ಸಮಾನತೆಯ ಬೀಜ ಬಿತ್ತಿದ ಬಸವಣ್ಣನವರನ್ನು ದ್ವೇಷಿಸುವ ಜಾತಿವಾದಿಗಳು, ಯಥಾಸ್ಥಿತಿವಾದಿಗಳು 12ನೇ ಶತಮಾನದಲ್ಲೂ ಇದ್ದರು, ಈ ಆಧುನಿಕ ಕಾಲದಲ್ಲೂ ಇದ್ದಾರೆ. ಈ ಕ್ಷುದ್ರ ಜೀವಿಗಳು ಬಸವಣ್ಣನವರು ಪ್ರತಿಪಾದಿಸಿದ ತತ್ವಗಳ ವಿರೋಧಿಗಳು. ಇವರ ಮಾತುಗಳನ್ನು ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಸಮರ್ಥಿಸಿಕೊಳ್ಳುವವರೂ ಸಹ ಸಮಾಜ ದ್ರೋಹಿಗಳು.”
“ಪೋಲೀಸರು ಮುಲಾಜಿಲ್ಲದೆ ಈ ನಿಕೃಷ್ಟ ಹುಳವನ್ನು ಜೈಲಿಗೆ ಕಳುಹಿಸಬೇಕು. ಈತನ ಪುಸ್ತಕವನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ಈತನ ಬೆನ್ನ ಹಿಂದೆ ನಿಂತು ಕುಮ್ಮಕ್ಕು ಕೊಟ್ಟ ಮುಖೇಡಿಗಳನ್ನೂ ಕಾನೂನಿನ ಅಡಿಯಲ್ಲಿ ಶಿಕ್ಷಿಸಬೇಕು ಎಂದು ಒತ್ತಾಯಿಸುತ್ತೇನೆ.” ಎಂದಿದ್ದಾರೆ
ವಿವಾದಿತ ಪತ್ರಕರ್ತ ವಿಶ್ವೇಶ್ವರ್ ಭಟ್ ನ ಸಂಪಾದಕತ್ವದ ವಿಶ್ವವಾಣಿ ಯೂಟ್ಯೂಬ್ ಚಾನಲ್ ನಲ್ಲಿ ವೀಡಿಯೋ ಪ್ರಸಾರವಾಗಿತ್ತು. ಈಗಾಗಲೇ ರವಿ ಹಂಜ್ ಹಾಗೂ ವಿಶ್ವೇಶ್ವರ ಭಟ್ ವಿರುದ್ದ FIR ದಾಖಲಿಸಲಾಗಿದೆ ಹಾಗೂ ರವಿ ಹಂಜ್ ನನ್ನು ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ವಿಶ್ವೇಶ್ವರ ಭಟ್ ಆಸ್ತ್ರೇಲಿಯಾ ಪ್ರವಾಸದಲ್ಲಿರುವುದಾಗಿ ಹೇಳಿಕೊಂಡಿದ್ದಾರೆ. ಅವರ ಬಂಧನಕ್ಕೂ ಲುಕೌಟ್ ನೋಟೀಸ್ ಜಾರಿ ಮಾಡುತ್ತದೆಯೇ ಕಾದು ನೋಡಬೇಕಿದೆ.
ಕಾರ್ಯಕಾರಿ ಸಂಪಾದಕ, ನಾನುಗೌರಿ.ಕಾಮ್


