ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಕಳೆದ ಮೂರು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದ ಹೈದರಾಬಾದ್ ಗಾಂಧೀ ಸಾರ್ವಜನಿಕ ಆಸ್ಪತ್ರೆಯ ಕಿರಿಯ ವೈದ್ಯರು 15 ದಿನಗಳ ಗಡುವು ನೀಡಿ ಪ್ರತಿಭಟನೆ ಹಿಂತೆಗೆದುಕೊಂಡಿದ್ದಾರೆ.
ತೆಲಂಗಾಣ ಜೂನಿಯರ್ ಡಾಕ್ಟರ್ ಅಸೋಸಿಯೇಷನ್ ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ್ದು 15 ದಿನದೊಳಗೆ ಸರ್ಕಾರ ನೀಡಿದ ಭರವಸೆಯನ್ನು ಈಡೇರಿಸದಿದ್ದರೆ ಮತ್ತೆ ಹೋರಾಟವನ್ನು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದೆ.
ಕೋವಿಡ್-19 ವಾರಿಯರ್ ಗಳಾಗಿ ಕೆಲಸ ಮಾಡುತ್ತಿದ್ದ ವೈದ್ಯರ ಮೇಲೆ ಹಲ್ಲೆ ನಡೆಸಿರುವುದನ್ನು ಖಂಡಿಸಿ ಮಂಗಳವಾರದಿಂದ ಗಾಂಧೀ ಸಾರ್ವಜನಿಕ ಆಸ್ಪತ್ರೆಯ ಕಿರಿಯ ವೈದ್ಯರು ಪ್ರತಿಭಟನೆ ನಡೆಸುತ್ತಿದ್ದರು. ಸರ್ಕಾರದ ಭರವಸೆಯ ಮೇರೆಗೆ ಪ್ರತಿಭಟನೆ ಸ್ಥಗಿತಗೊಳಿಸಿದ್ದು ಕರ್ತವ್ಯಕ್ಕೆ ಹಾಜರಾಗುವುದಾಗಿ ಹೇಳಿದೆ.
ಸರ್ಕಾರ ನಡೆಸುತ್ತಿರುವ ಆಸ್ಪತ್ರೆಗಳು ಮತ್ತು ಜಿಲ್ಲಾಸ್ಪತ್ರೆಗಳಲ್ಲಿ ಕೊರೊನಾ ಸೋಂಕು ಪ್ರಕರಣಗಳಿಗೆ ಚಿಕಿತ್ಸೆ ನೀಡಲು ಮತ್ತು ಗಾಂಧೀ ಸಾರ್ವಜನಿಕ ಆಸ್ಪತ್ರೆಯ ಒತ್ತಡವನ್ನು ಕಡಿಮೆ ಮಾಡುವುದಾಗಿ ಆರೋಗ್ಯ ಸಚಿವರು ಭರವಸೆ ನೀಡಿದ್ದಾರೆ. ಅದರಂತೆ ಸರ್ಕಾರ ನಡೆದುಕೊಳ್ಳಬೇಕು ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಡಾ.ಲೋಹಿತ್ ರೆಡ್ಡಿ ಮಾತನಾಡಿ, ಸರ್ಕಾರ ಗಾಂಧೀ ಆಸ್ಪತ್ರೆಯಲ್ಲಿ ಕೋವಿಡ್ ಅಲ್ಲದ ರೋಗಿಗಳ ಚಿಕಿತ್ಸೆಗೆ ಅವಕಾಶ ನೀಡುವ ಭರವಸೆ ಕೊಟ್ಟಿದೆ. ಜಿಲ್ಲಾಸ್ಪತ್ರೆಗಳು ಸೇರಿದಂತೆ ಬೇರೆ ಆಸ್ಪತ್ರೆಗಳಲ್ಲೂ ಕೊರೊನ ಸೋಂಕಿತರಿಗೆ ಚಿಕಿತ್ಸೆಗೆ ಅವಕಾಶ ಕಲ್ಪಿಸುವ ಭರವಸೆ ಸಿಕ್ಕಿದೆ ಎಂದು ತಿಳಿಸಿರುವುದಾಗಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
ಕೋವಿಡ್-19 ಚಿಕಿತ್ಸೆ ವಿಕೇಂದ್ರೀಕರಣಗೊಳ್ಳಬೇಕು. ಈ ಸಂಬಂಧ ಸಚಿವ ಸಂಪುಟದ ಜೊತೆ ಮಾತನಾಡುವ ಭರವಸೆ ಆರೋಗ್ಯ ಸಚಿವರಿಂದ ದೊರೆತಿದೆ. 15 ದಿನಗಳೊಳಗೆ ಭರವಸೆ ಈಡೇರಿಸದಿದ್ದರೆ, ಕೆಲಸ ಬಹಿಷ್ಕರಿಸಿ ಹೋರಾಟ ತೀವ್ರಗೊಳಿಸುತ್ತೇವೆ ಎಂದು ತೆಲಂಗಾಣ ಕಿರಿಯ ವೈದ್ಯರ ಅಸೋಸಿಯೇಷನ್ ಎಚ್ಚರಿಕೆ ನೀಡಿದೆ.
ನಮ್ಮ ಬೇಡಿಕೆಗಳ ಈಡೇರಿಕೆಗೆ ಆರೋಗ್ಯ ಸಚಿವರು ಸಮ್ಮತಿಸಿದ್ದಾರೆ. ಖಾಲಿ ಇರುವ ವೈದ್ಯರು, ನರ್ಸ್, ರೋಗಿಯ ಸೇವಕರು ಮತ್ತು ಸಚ್ಛತಾ ಕಾರ್ಮಿಕರ ಹುದ್ದೆಗಳನ್ನು ಶೀಘ್ರವೇ ಭರ್ತಿ ಮಾಡುವುದಾಗಿ ಹೇಳಿದ್ದಾರೆ. ಶೇಕಡ 30ರಷ್ಟು ಹೆಚ್ಚುವರಿ ಸಿಬ್ಬಂದಿಯನ್ನು ಮೀಸಲಿಡಬೇಕು ಎಂಬ ಮನವಿಗೆ ಸ್ಪಂದಿಸಿದ್ದಾರೆ.
ಎಲ್ಲಾ ಸರ್ಕಾರಿ ವೈದ್ಯಕೀಯ ಕಾಲೇಜುಗಳು ಮತ್ತು ಆಸ್ಪತ್ರೆಗಳಿಗೆ ಮುನ್ನೆಚ್ಚರಿಕಾ ಕ್ರಮವಾಗಿ ವಿಶೇಷ ರಕ್ಷಣಾ ದಳವನ್ನು ನಿಯೋಜನೆ ಮಾಡುವುದಾಗಿ ಮತ್ತು, ನೇಮಕಾತಿ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದು ಸಚಿವರು ಹೇಳಿರುವುದಾಗಿ ಹೇಳಿಕೆಯಲ್ಲಿ ತಿಳಿಸಿದೆ.
ಗಾಂಧೀ ಸಾರ್ವಜನಿಕ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಹೃದಯ ಸಂಬಂಧಿ, ಜ್ವರ, ಬಿಪಿ, ಶುಗರ್ ನಂಥ ಕಾಯಿಲೆಗಳಿಗೆ ಚಿಕಿತ್ಸೆ ನೀಡುವುದರಿಂದ ಬಡರೋಗಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಅಸೋಸಿಯೇಷನ್ ಹೇಳಿದೆ.
ಕೊರೊನಾ ನಿಯಂತ್ರಣದಲ್ಲಿ ತೊಡಗಿರುವ ಸಿಬ್ಬಂದಿ ವೈಯಕ್ತಿಕ ರಕ್ಷಣಾ ಕಿಟ್ ಗಳನ್ನು ನೀಡಬೇಕು. ಎಲ್ಲಾ ಕಡೆಯು ಪಿಪಿಇ ಕಿಟ್ ಗಳು ಸಿಗುವಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದೆ.
ಇದನ್ನೂ ಓದಿ: ಪೊಲೀಸ್ ಬ್ಯಾರಿಕೇಡ್ ಕಿತ್ತೆಸೆದ ವೈದ್ಯರು: ಹೈದರಾಬಾದ್‌ನಲ್ಲಿ ಭಾರೀ ಪ್ರತಿಭಟನೆ


