Homeಅಂಕಣಗಳುಡೊಳ್ಳಿನ ಪದಗಳ `ಹುಡುಗಿಯರ’ ಹಾಡಿಕೆಗೆ ಘನತೆ ತಂದ ಸುಮಿತ್ರ ಮುಗಳಿಹಾಳ

ಡೊಳ್ಳಿನ ಪದಗಳ `ಹುಡುಗಿಯರ’ ಹಾಡಿಕೆಗೆ ಘನತೆ ತಂದ ಸುಮಿತ್ರ ಮುಗಳಿಹಾಳ

- Advertisement -
- Advertisement -

ಬಿ.ಎ, ಬಿ.ಎಡ್ ಮಾಡಿಯೂ ಶಿಕ್ಷಕಿ ಆಗಬೇಕೆನ್ನುವ ಕನಸಿಗಿಂತ ಪಿ.ಎಸ್.ಐ ಆಗಬೇಕೆಂದು ಹುಡುಗಿ ಕನಸು ಕಟ್ಟುತ್ತಾಳೆ. ಅದಕ್ಕಾಗಿ ಕೋಚಿಂಗ್ ಹೋಗುತ್ತಾಳೆ. ಕಷ್ಟಪಟ್ಟು ಓದುತ್ತಾಳೆ. ತುಂಬಾ ಕಡಿಮೆ ಅಂತರದಲ್ಲಿ ಆಯ್ಕೆ ತಪ್ಪಿಹೋಗುತ್ತದೆ. ಎರಡು ಮೂರು ಬಾರಿ ಹೀಗೆಯೇ ಆಗುತ್ತದೆ. ಕೊನೆಗೆ ಈ ಹುಡುಗಿ ಸರಕಾರಿ ನೌಕರಿಗೆ ಹೋಗಬಾರದೆಂದು ನಿರ್ಧರಿಸುತ್ತಾಳೆ.

ಈ ಹುಡುಗಿ ಆ ಹೊತ್ತಿಗಾಗಲೆ ಡೊಳ್ಳಿನ ಹಾಡಿಕೆಯಲ್ಲಿ ಉತ್ತರ ಕರ್ನಾಟಕದಲ್ಲಿ ಜನಪ್ರಿಯಳಾಗಿದ್ದಳು. ಹಾಗಾಗಿ ತನ್ನ ಡೊಳ್ಳಿನ ಹಾಡಿಕೆ ಮೇಳಕ್ಕೆ ಮತ್ತಷ್ಟು ತನ್ನನ್ನು ತಾನು ಅರ್ಪಿಸಿಕೊಳ್ಳುತ್ತಾಳೆ. ಇದೀಗ ಹದಿನೈದಕ್ಕಿಂತ ಹೆಚ್ಚಿನ ಡೊಳ್ಳಿನ ಮೇಳಗಳಿಗೆ ಗುರುವಾಗಿದ್ದಾರೆ. ಈತನಕ ನಾಲ್ಕೈದು ಸಾವಿರಕ್ಕೂ ಹೆಚ್ಚು ಹಾಡಿಕೆ ಪ್ರದರ್ಶನ ಕೊಟ್ಟಿದ್ದಾರೆ. ಕನಿಷ್ಠ ತಿಂಗಳಿಗೆ ಒಂದು ಲಕ್ಷದಷ್ಟು ಆದಾಯವಿದೆ.

ಯೂಟೂಬಲ್ಲಿ ಒಂದೊಂದು ಹಾಡಿಗೆ ನಾಲ್ಕೈದು ಲಕ್ಷ ವೀಕ್ಷಣೆಗಳಿವೆ. ಒಟ್ಟಾರೆ ಇವರ ಹಾಡಿಕೆಗೆ ಮೂರು ಕೋಟಿಗಿಂತ ಹೆಚ್ಚು ವೀಕ್ಷಣೆಗಳಾಗಿವೆ. ಅಂತೆಯೇ ನೂರಾರು ಹುಡುಗಿಯರು ಡೊಳ್ಳಿನ ಹಾಡಿಕೆಗೆ ಬರಲು ಪ್ರೇರಣೆಯಾಗಿದ್ದಾರೆ. ವಾಗ್ವಾದಕ್ಕೆ ನಿಂತರೆ ಗಂಡಸರ ಮೇಳಗಳು ಬೆದರುತ್ತವೆ. ಆ ಹುಡುಗಿಯೇ ಬೆಳಗಾವಿ ಜಿಲ್ಲೆಯ ಸೌದತ್ತಿ ತಾಲೂಕಿನ ಮುಗಳಿಹಾಳದ ಹಾಲುಮತದ ಯಲ್ಲಪ್ಪ-ಯಲ್ಲವ್ವರ ನಾಲ್ಕನೆ ಮಗಳು ಸುಮಿತ್ರ.

ಕುರುಬ ಸಮುದಾಯದ ಹಾಲುಮತದ ಪ್ರಸಾರಕ್ಕಾಗಿ ಹುಟ್ಟಿಕೊಂಡ ಡೊಳ್ಳಿನ ಹಾಡುಗಳು ಜನಪದ ಗೀತ ಸಂಪ್ರದಾಯದಲ್ಲಿ ವಿಶಿಷ್ಟವಾಗಿವೆ. ಉತ್ತರ ಕರ್ನಾಟಕದಿಂದ ಮಹಾರಾಷ್ಟ್ರದವರೆಗಿನ ಹಳ್ಳಿಗಳಲ್ಲಿ ಡೊಳ್ಳಿನ ಹಾಡುಗಳಿಗೆ ಪ್ರಮುಖ ಸ್ಥಾನವಿದೆ. ಡೊಳ್ಳಿನ ಹಾಡುಗಳನ್ನು ಬರೆಯುವ ನೂರಾರು ಕವಿಗಳಿದ್ದಾರೆ.

ಕಳೆದ ಒಂದೆರಡು ದಶಕದಿಂದ ಗಂಡಸರ ಪಾರಮ್ಯವೇ ಆಗಿದ್ದ ಡೊಳ್ಳಿನ ಹಾಡಿಕೆಗೆ ಮಹಿಳೆಯರ ಪ್ರವೇಶವಾಗಿದೆ. ಎಂಬತ್ತರ ದಶಕದಲ್ಲಿ ಬಾಗಲಕೋಟೆ ಜಿಲ್ಲೆಯ ಯಲ್ಲಟ್ಟಿಯ ಅಂಧ ಅಜ್ಜಿ ನೀಲವ್ವ ಬಿರಡಿ ಡೊಳ್ಳಿನ ಹಾಡುಗಳನ್ನು ಹಾಡುತ್ತಿದ್ದರು. ಇದರ ಪ್ರಭಾವ ಎಂಬಂತೆ ಮಣ್ಣೂರಿನ ರೇಣುಕಾ ಮತ್ತು ಅಕ್ಷತಾ ಹಾಡಿಕೆಗೆ ಬಂದರು. ಇಲ್ಲಿಂದ ಹುಡುಗಿಯರು ಡೊಳ್ಳಿನ ಹಾಡಿಕೆಗೆ ಬರುವಿಕೆ ಶುರುವಾಯಿತು. ಈಗ ಆರೇಳು ವರ್ಷದ ಮಕ್ಕಳಿಂದಿಡಿದು ಇಪ್ಪತ್ತೈದರ ವಯೋಮಾನದ ಹುಡುಗಿಯರತನಕ ಐವತ್ತಕ್ಕೂ ಹೆಚ್ಚು ಹುಡುಗಿಯರು ಡೊಳ್ಳಿನ ಪದಗಳನ್ನು ಹಾಡುತ್ತಿದ್ದಾರೆ. ಇದೊಂದು ಹೊಸ ಟ್ರೆಂಡ್ ಆಗಿ ಬದಲಾಗಿದೆ.

ಸುಮಿತ್ರ ಮುಗಳಿಹಾಳ ಡೊಳ್ಳಿನ ಹಾಡಿಕೆಗೆ ಬರುವ ಮುನ್ನ ರೇಣುಕಾ ಮೀನಾಕ್ಷಿ ಮೊದಲಾದವರು ಮೇಷ್ಟ್ರುಗಳು ಬರೆದ ಹಾಡುಗಳನ್ನು ಹಾಡುತ್ತಿದ್ದರಷ್ಟೆ. ವಾಗ್ವಾದ ಚರ್ಚೆ ಬಂದಾಗ ಪದಕಟ್ಟಿದ ಮೇಷ್ಟ್ರು ಚರ್ಚೆ ಸಂವಾದ ಮಾಡುತ್ತಿದ್ದರೆ ವಿನಃ ಹಾಡಿದ ಹುಡುಗಿಯರು ಚರ್ಚೆಸುತ್ತಿರಲಿಲ್ಲ. ಸುಮಿತ್ರ ಹಾಡುತ್ತಾ ಹಾಡುತ್ತಾ, ಹಾಡಿನ ಸಾಹಿತ್ಯಕ್ಕೆ ಪೂರಕವಾದ ಹಾಲುಮತ ಪುರಾಣ ಮತ್ತು ಸಂಶೋಧನೆಗಳನ್ನು ಓದಲು ತೊಡಗುತ್ತಾಳೆ. ಹಾಗಾಗಿ ರಾಮಾಯಣ, ಮಹಾಭಾರತ, ಹಾಲುಮತ ಪುರಾಣ, ಕುರುಬ ಸಮುದಾಯದ ಅಧ್ಯಯನ, ವಚನಕಾರರ, ದಾಸರ, ತತ್ವಪದಕಾರರ ಪುಸ್ತಕಗಳ ಸಂಗ್ರಹ ಸುಮಿತ್ರಾ ಅವರಲ್ಲಿದೆ.

ಪ್ರತಿಬಾರಿ ಹೊಸ ಪದ ಕಟ್ಟುವಾಗ ಹಾಲುಮತದ ಪುರಾಣ ಮುಂತಾದ ಪುಸ್ತಕಗಳನ್ನು ಅಧ್ಯಯನ ಮಾಡುತ್ತಾರೆ. ಹೀಗೆ ಸಾಹಿತ್ಯದ ಓದಿನಿಂದ ಸ್ವತಃ ಡೊಳ್ಳಿನ ಪದಗಳನ್ನು ರಚಿಸುತ್ತಾಳೆ. ಹೀಗಾಗಿ ತಾನೇ ಸ್ವತಃ ರಚಿಸಿದ ಹಾಡನ್ನು ಹಾಡುತ್ತಿದ್ದರಿಂದ ಯಾರೇ ವಾಗ್ವಾದ ಮಾಡಿದರೂ ಅದಕ್ಕೆ ಸುಮಿತ್ರಾಳೇ ಉತ್ತರ ಕೊಡತೊಡಗುತ್ತಾಳೆ. ಸುಮಿತ್ರ ಅವರ ಈ ವಾಗ್ವಾದದ ಮಾದರಿಯ ಪ್ರಭಾವ ಈಗಿನ ಹುಡುಗಿಯರಲ್ಲಿ ಕಾಣುತ್ತಿದೆ.

“ಅಜ್ಜನು ಡೊಳ್ಳಿನ ಪದಗಳನ್ನು ಹಾಡತಿದ್ರು. ಕೌಜಲಗಿ ನಿಂಗಮ್ಮ ನಮ್ಮಜ್ಜನ್ನ ಕರಕೊಂಡು ಹಾಡತಿದ್ದರಂತೆ, ಹಂಗಾಗಿ ನಮ್ಮ ಅಪ್ಪ ಡೊಳ್ಳಿನ ಪದ ಹಾಡಾಕ ಹತ್ತಿದ್ರು. ಹಿಂಗಾಗಿ ಮೊದಲಿನಿಂದ್ಲೂ ಮನಿಯಾಗ ಹಾಡಿಕಿ ಸಂಪ್ರದಾಯವಿತ್ತು. ನಾನು ಸಣ್ಣಾಕಿ ಇದ್ದಾಗ ಹಾಡಿಕೆ ಕೇಳೋದು ನೋಡೋದು ಮಾಡತಿದ್ದೆ. ನಾನು ಹಾಡ್ತೀನಿ ಅಂದ್ರ, ಸಮಾಜದಲ್ಲಿ ಹಂಗ್ ಅಂತಾರ ಹಿಂಗ್ ಅಂತಾರ ಗಂಡಸರ ಮಧ್ಯೆ ನಿಂತು ಹಾಡಬಾರದು ಅನ್ತಿದ್ರು. ಒಟ್ಟ ಡೊಳ್ಳಿನ ಪದದ ಸಪ್ಪಳ ಕೇಳತಂದ್ರ ರಾತ್ರೆಲ್ಲ ನಿದ್ದೆ ಅತ್ತಾಂಗಿಲ್ಲರೀ..ಅದು ಬಂದ್ ಆಗೋಮಟ ಮನಿಯಾಗ ಎದ್ದ ಕುಂದರತಿದ್ದೆ. ದಾಟಿಗಳು ತಲೀಯಾಗ ಉಳೀತಿತ್ತು.

ನೀ ಹಿಂಗ್ ಹಾಡವ್ವಾ, ಹಿಂಗ್ ದಾಟಿ ಬರಕೋ ಅಂತ ಯಾರೂ ಕಲಿಸಿಲ್ಲ. ಅವ್ವ ಸಣ್ಣಾಕಿದ್ದಾಗ ರಾಮಾಯಣ ಮಹಾಭಾರತದ ಕತಿ ಹೇಳತಿದ್ಲು ಅದು ನನ್ನ ತಲಿಯಾಗಿತ್ತು. ನಾನು ಹಾಡೋದಕ್ಕ ಕಾಕಾಗಳು ವಿರೋಧಿಸಿದ್ರು, ಊರಾಗ ವಿರೋಧಿಸಿದ್ರು, ಬಾಳಂದ್ರ ಬಾಳ ಕಾಡಿದ್ರು. ಅದನ್ನ ಹೇಳಿದ್ರ ಕಣ್ಣಾಗ ನೀರು ಬರ್ತಾವ. ಹೆಣ್ಣ ಆದರೂ ಒಂದು ಗಂಡಿನ ರೂಪದಲ್ಲಿ ತೋರಿಸಬೇಕಪಾ ಅಂತೇಳಿ ಎಲ್ಲರ ವಿರೋಧ ಮೀರಿ ಇಲ್ಲಿಗೆ ಬಂದು ನಿಂತೀನಿ” ಎಂದು ಸುಮಿತ್ರ ಹಾಡಿಕೆ ಪಯಣ ನೆನೆಯುತ್ತಾರೆ.

ಮಾಳಿಂಗರಾಯನ ಇತಿಹಾಸದಲ್ಲಿ ಎದುರುಬದುರು ಹಾಡುವಾಗ ಗಂಡಿನವರು ಮಾಳಿಂಗರಾಯನ ಪವಾಡ ಹೇಳಿದರೆ, ಇವರು ಮಾಳಿಂಗರಾಯನ ತಾಯಿಯ ಬಗ್ಗೆ ಹೇಳುತ್ತಾರೆ. ಗಂಡಿನ ಪಾರ್ಟಿ ಮಾಳಿಂಗರಾಯ ನನ ಅಪ್ಪ ಹುಲಿಹಾಲ ತಂದು ಬೀರಪ್ಪನಿಗೆ ಉಣಿಸ್ಯಾನೋ ಅಂತ ಹೇಳಿದ್ರೆ, ಮಾಳಿಂಗರಾಯ ಹುಲಿಹಾಲ ಉಣಿಸಬೇಕಾದ್ರೆ ತಾಯಿ ಹಡದಾಳ, ಉಲುಜಂತಿ ಗ್ರಾಮದಲ್ಲಿ ತಾಯಿ ಕನ್ನವ್ವನ ಆಶೀರ್ವಾದ ತಗಂಡು ಹುಲಿಹಾಲ ತರೋಕ ಹೋಗ್ಯಾನ’ ಅಂತ ಹೇಳತಾ, ಮಾಳಿಂಗರಾಯ ಹೆಚ್ಚು ಎನ್ನುವಾಗಲೂ ಮಾಳಿಂಗರಾಯನ ತಾಯಿಯನ್ನು ಇವರು ಎತ್ತಿ ಹಿಡಿಯುತ್ತಾರೆ. ಇಷ್ಟರಮಟ್ಟಿಗೆ ಒಂದು ಜನಪದ ಪಠ್ಯದ ಹಾಡಿಕೆಗೆ ಹೆಣ್ಣಿನ ಕಣ್ಣೋಟ ಸಾಧ್ಯವಾಗಿದೆ.

ಸುಮಿತ್ರಾರ ಹಾಡುಗಳಲ್ಲಿ ಹೆಣ್ಣು ಗಂಡು ಹೇಳಿದಂಗೆ ಕೇಳಿಕೊಂಡು ಚೆಂದನ ಸಂಸಾರ ಮಾಡಬೇಕು ಎನ್ನುವಂತಹ ಯಥಾಸ್ಥಿತಿಯ ಆಶಯವೂ ಇದೆ. ಆದರೆ ಎದುರು ಗಂಡಿನ ಮೇಳ ಹೆಣ್ಣನ್ನು ಕುಹಕ ಮಾಡಿದಾಗ ನಡೆಯುವ ಬಿರುಸಿನ ಚರ್ಚೆಯಲ್ಲಿ ಸುಮಿತ್ರಾ ಹೆಣ್ಣಿಲ್ಲದೆ ಕೇವಲ ಗಂಡಿಗೆ ಅಸ್ತಿತ್ವವಿಲ್ಲ ಎನ್ನುವುದನ್ನು ತುಂಬಾ ಖಡಕ್ ಆಗಿ ನಿರೂಪಿಸುತ್ತಾರೆ.

ಡೊಳ್ಳಿನ ಹಾಡಿನ ಏರುಧ್ವನಿಯಲ್ಲಿ ಹೆಣ್ಣಿನ ಕೋಮಲ ಧ್ವನಿ ಸಪ್ಪೆಯೆನಿಸುತ್ತದೆ. ಹಾಗಾಗಿ ಸುಮಿತ್ರಾರ ಧ್ವನಿ ಗಂಡಿನಂತೆ ಬಿರುಸು. ಸ್ಟೇಜಿನ ದೇಹಭಾಷೆಯೂ ಗಂಡನ್ನು ಮೀರಿಸುವಂಥದ್ದು. ಹೀಗೆ ಡೊಳ್ಳಿನ ಹಾಡಿನ ನುಡಿಗಟ್ಟನ್ನು ಬದಲಿಸುತ್ತಿರುವ ಸುಮಿತ್ರಾರ ಹಾಡಿಕೆ ಪಯಣಕ್ಕೆ ಡೊಳ್ಳಿನ ಪದದ ಕವಿ ಕೇದಾರ ಕೆಂಪಟ್ಟಿ ಮಾಸ್ತರರ ಮಾರ್ಗದರ್ಶನವಿದೆ. ತನ್ನ ಮೂರುಜನ ಅಕ್ಕಂದಿರಾದ ರೇಣುಕಾ, ಸರೋಜಿನಿ, ಉದ್ದವ್ವರನ್ನು ಮದುವೆ ಮಾಡಿಕೊಟ್ಟು ಮನೆ ಜವಾಬ್ದಾರಿ ಹೊರಲು ಗಂಡು ಮಗನಿರಬೇಕು ಎನ್ನುವ ನಂಬಿಕೆಯನ್ನು ಸುಮಿತ್ರ ಬದಲಿಸಿದ್ದಾರೆ. ಸುಮಿತ್ರಾ ಅವರ ಹಾಡಿಕೆ ಪಯಣ ಮತ್ತಷ್ಟು ಜನರನ್ನು ತಲುಪಲಿ ಎಂದು ಪತ್ರಿಕೆ ಶುಭ ಹಾರೈಸುತ್ತದೆ.

ಸುಮಿತ್ರಾ ಮುಗಳಿಹಾಳ ಎಂದು ಟೈಪಿಸಿದರೆ, ಯೂಟೂಬಿನಲ್ಲಿ ನೂರಾರು ವೀಡಿಯೋಗಳು ನೋಡಲು ಸಿಗುತ್ತವೆ.

ಅರುಣ್ ಜೋಳದಕೂಡ್ಲಿಗಿ


ಓದಿ:

ನಮ್ಮ ನಡುವಿನ ಮಂದಣ್ಣ – ಪರಿಸರ ಪ್ರೇಮಿ ಮಳಿಮಠದ ಪಂಪಯ್ಯ


 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

CBSE ಪರೀಕ್ಷೆಯಲ್ಲಿ OSM ವಿವಾದ | ಸಂಸದೀಯ ಸಮಿತಿಯ ಮುಂದೆ ಹಾಜರಾದ ವಿದ್ಯಾರ್ಥಿ ಸಾರ್ಥಕ್ ಸಿದ್ಧಾಂತ್

ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್‌ಸಿ) ಆನ್-ಸ್ಕ್ರೀನ್ ಮಾರ್ಕಿಂಗ್ (ಒಎಸ್‌ಎಂ) ಮೌಲ್ಯಮಾಪನ ವ್ಯವಸ್ಥೆಯಲ್ಲಿನ ಗಂಭೀರ ಲೋಪಗಳ ಕುರಿತು ವಿವಾದ ಭುಗಿಲೆದ್ದಿರುವ ನಡುವೆ, 17 ವರ್ಷದ ವಿದ್ಯಾರ್ಥಿ ಸಾರ್ಥಕ್ ಸಿದ್ಧಾಂತ್ ನವದೆಹಲಿಯ ಸಂಸತ್ ಭವನದಲ್ಲಿ...

ಬಿಜೆಪಿ ತೊರೆದು ಪ್ರಾದೇಶಿಕ ಪಕ್ಷದತ್ತ ಅಣ್ಣಾಮಲೈ : ದ್ರಾವಿಡ ಮಣ್ಣಿನಲ್ಲಿ ವಿಫಲವಾದ ಹಿಂದುತ್ವ ರಾಜಕೀಯ

ಮಾಜಿ ಐಪಿಎಸ್‌ ಅಧಿಕಾರಿ ಹಾಗೂ ಬಿಜೆಪಿ ತಮಿಳುನಾಡು ರಾಜ್ಯ ಘಟಕದ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ ಬಿಜೆಪಿ ತೊರೆದಿದ್ದು, ಹೊಸ ಪ್ರಾದೇಶಿಕ ಪಕ್ಷ ಕಟ್ಟಲು ಮುಂದಾಗಿದ್ದಾರೆ ಎಂದು ವರದಿಯಾಗಿದೆ. ಮಂಗಳವಾರ...

45 ಲೀಟರ್ ಟ್ಯಾಂಕಿಗೆ 52 ಲೀಟರ್ ಬಿಲ್ ಕೊಟ್ಟ ಚತುರ ಕಳ್ಳರು: ಕಾನ್ಪುರದಲ್ಲಿ ಪೆಟ್ರೋಲ್ ಬಂಕ್ ವಂಚನೆ ಪತ್ತೆ

ಉತ್ತರ ಪ್ರದೇಶದ ಕಾನ್ಪುರದಲ್ಲಿ ಹೊಸ ಕಾರು ಖರೀದಿಸಿದ ಮಾಲೀಕರೊಬ್ಬರು ಸ್ಥಳೀಯ ಪೆಟ್ರೋಲ್ ಬಂಕ್‌ಗೆ ಹೋದಾಗ ಅವರಿಗೆ ಒಂದು ಶಾಕಿಂಗ್ ಅನುಭವವಾಗಿದೆ. ಅವರ ಕಾರಿನ ಗರಿಷ್ಠ ಇಂಧನ ಟ್ಯಾಂಕ್ ಸಾಮರ್ಥ್ಯ ಕೇವಲ 45 ಲೀಟರ್...

ಆರು ಮಕ್ಕಳಿದ್ದರೆ ನೀವು ಮತದಾನದ ಹಕ್ಕನ್ನು ಕಳೆದುಕೊಳ್ಳಬಹುದು: ಮತದಾರರ ಪಟ್ಟಿ ‘ಕ್ಲೀನ್’ ಮಾಡಲು ECI ಹೊಸ ಪ್ಲಾನ್!

ಭಾರತದಲ್ಲಿ 'ಆರು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದಾರೆ' ಎಂಬ ಕಾರಣಕ್ಕೆ ಯಾರಾದರೂ ಮತದಾನದ ಹಕ್ಕನ್ನು ಕಳೆದುಕೊಳ್ಳಲು ಸಾಧ್ಯವೇ? ಮೇಲ್ನೋಟಕ್ಕೆ ಹೌದು ಎನ್ನುವಂತಿದೆ ಉತ್ತರ ಪ್ರದೇಶದ ವಾರಾಣಸಿಯ ಕ್ಯಾಂಟೋನ್ಮೆಂಟ್ ಕ್ಷೇತ್ರದ ಮತದಾರ ಸೋನು...

ಕದನ ವಿರಾಮವೆಂಬ ಕಳ್ಳಾಟ : ಗಾಝಾದಿಂದ ಸಿರಿಯಾವರೆಗೆ ಮುಂದುವರಿದ ಇಸ್ರೇಲ್ ನರಮೇಧ

ಬರೋಬ್ಬರಿ ಎಪ್ಪತ್ತು ಸಾವಿರದಷ್ಟು (ವರದಿಗಳ ಪ್ರಕಾರ 67, 900) ಜನರನ್ನು ಹತ್ಯೆಗೈದು, ಶೇಕಡ 90ರಷ್ಟು ಜನರನ್ನು ನಿರಾಶ್ರಿತರನ್ನಾಗಿ ಮಾಡಿದ ಬಳಿಕ, ಅಕ್ಟೋಬರ್ 10, 2025ರಂದು ಗಾಝಾ ಮೇಲಿನ ಆಕ್ರಮಣಕ್ಕೆ ಸಂಬಂಧಿಸಿದಂತೆ ಇಸ್ರೇಲ್ ಕದನ...

ಚುನಾವಣಾ ಆಯೋಗಕ್ಕೆ ಪೌರತ್ವ ನಿರ್ಧಾರ ಮಾಡುವ ಹಕ್ಕಿದೆಯೇ? SIR ತೀರ್ಪಿನ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ್ದೇನು?

ಮೇ 27 ರಂದು 'ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಮತ್ತು ಭಾರತೀಯ ಚುನಾವಣಾ ಆಯೋಗ (ECI)' ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಚುನಾವಣಾ ಪಟ್ಟಿಗಳ 'ವಿಶೇಷ ತೀವ್ರ ಪರಿಷ್ಕರಣೆ'...

ಮಹಾರಾಷ್ಟ್ರ: 80 ಲಕ್ಷ ಮಹಿಳೆಯರು ‘ಲಡ್ಕಿ ಬಹಿನ್’ ಯೋಜನೆಗೆ ಅನರ್ಹ: ಆರ್ಥಿಕ ಬಿಕ್ಕಟ್ಟಿಗೆ ಸಾಕ್ಷಿ ಎಂದು ವಿಪಕ್ಷಗಳ ಆರೋಪ

ಮುಂಬೈ: ಮಹಾರಾಷ್ಟ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದ 'ಮುಖ್ಯಮಂತ್ರಿ ಮಾಝಿ ಲಡ್ಕಿ ಬಹಿನ್' ಇ-ಕೆವೈಸಿ (e-KYC) ಪ್ರಕ್ರಿಯೆ ಪೂರ್ಣಗೊಳಿಸಲು ನೀಡಿದ್ದ ಗಡುವು ಮುಗಿದಿದ್ದು, ಸುಮಾರು 80 ಲಕ್ಷ ಮಹಿಳೆಯರು ಯೋಜನೆಯಿಂದ ಅನರ್ಹರಾಗಿದ್ದಾರೆ. ರಾಜ್ಯ ಸರ್ಕಾರವು...

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...