Homeನ್ಯಾಯ ಪಥಬಹುಜನ ಭಾರತ: ಕೃಷ್ಣನ ಮೋಹಿಸಿದ ಕಮ್ಯೂನಿಸ್ಟ್ ಮೌಲಾನಾ! - ಡಿ.ಉಮಾಪತಿ

ಬಹುಜನ ಭಾರತ: ಕೃಷ್ಣನ ಮೋಹಿಸಿದ ಕಮ್ಯೂನಿಸ್ಟ್ ಮೌಲಾನಾ! – ಡಿ.ಉಮಾಪತಿ

ಕಾವ್ಯದಲ್ಲಿ ರಮ್ಯವಾದಿಯೂ ರಾಜಕಾರಣದಲ್ಲಿ ಕ್ರಾಂತಿವಾದಿಯೂ ಆಗಿದ್ದರು ಮೋಹಾನಿ

- Advertisement -
- Advertisement -

ಈ ಅಂಕಣ ಬರೆಯಲು ಕುಳಿತಿರುವ ಹೊತ್ತಿನಲ್ಲಿ ಜನಸಮುದಾಯಗಳ ಕವಿ ರಾಹತ್ ಇಂದೋರಿ ತೀರಿ ಹೋಗಿದ್ದಾರೆ. ಆಳುವವರು ಕಾರುತ್ತಿರುವ ಕೋಮುದ್ವೇಷಕ್ಕೆ ಸಿಡಿಲಿನಂತಹ ಕಾವ್ಯದ ಜವಾಬು ನೀಡಿ ಸೆಡ್ಡು ಹೊಡೆದಿದ್ದವರು. ಪೌರತ್ವ ಕಸಿಯುವ ಹುನ್ನಾರದ ವಿರುದ್ಧ ಕೆರಳಿದ್ದರು. ಎಲ್ಲರ ನೆತ್ತರು ಕಲೆತು ಬೆರೆತಿದೆ ಈ ಮಣ್ಣಿನಲಿ, ಹಿಂದುಸ್ತಾನ ಯಾರಪ್ಪನ ಮನೆಯ ಆಸ್ತಿಯಲ್ಲ ಎಂದು ಸಿಡಿದಿದ್ದರು. ಉಸಿರು ನಿಂತ ಮೇಲೆ ಪಕ್ಕಾ ಪ್ರತ್ಯೇಕ ಗುರುತನೊಂದ ಬರೆಯಿರಿ, ನನ್ನ ಕಳೇಬರದ ಮೇಲೆ ನೆತ್ತರಿನಿಂದ ಹಿಂದುಸ್ತಾನಿಯೆಂದು ಬರೆಯಿರಿ ಎಂದು ದುಗುಡ ದುಮ್ಮಾನದಿಂದ ಪ್ರತಿರೋಧದ ಕಿಡಿ ಹಾರಿಸಿ ಹಾಡಿದ್ದರು. ಪ್ರತಿಭಟನೆಯ ಸಶಕ್ತ ದನಿಯಾಗಿದ್ದರು. ಮಣ್ಣು ಗಾಳಿ ಮಾತು ಅನ್ನ ಅರಿವೆ ಎಲ್ಲವನ್ನೂ ಹಿಂದು-ಮುಸ್ಲಿಮ್ ಆಗಿಸಿ ವಿಷ ಹಿಂಡುತ್ತಿರುವ ಫ್ಯಾಸಿಸಮ್‌ನ ದುಷ್ಟ ಕಳೆ ದೇಶವನ್ನೆಲ್ಲ ಸುತ್ತಿ ಆವರಿಸಿಕೊಂಡಿರುವ ಈ ದುರಿತ ದಿನಗಳಲ್ಲಿ ಇಂದೂರಿಯಂತಹ ದನಿ ನಮ್ಮ ನಡುವೆ ಇರುವುದು ಕಾಲದ ಅಗತ್ಯವಾಗಿತ್ತು. ಆದರೆ ಮರಣಕ್ಕೆ ಅಡ್ಡ ನಿಲ್ಲಲಹುದೇ? ಗತಿಸಿರುವ ಇಂದೋರಿ ಜೀವಿಸಿರುವ ಇಂದೋರಿಗಿಂತ ಪ್ರಭಾವಿ ಎಂದು ಬಗೆದು ಮುಂದೆ ಸಾಗಬೇಕಿದೆ.

ರಾಹತ್ ಇಂದೋರಿ

ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರಕ್ಕೆ ಅಡಿಗಲ್ಲಿರಿಸಲಾಗಿದೆ. ‘…ಮಥುರಾ ಕಾಶೀ ಬಾಕಿ ಹೈ…’ ಎಂದಿದ್ದವರು ಇನ್ನು ಕೃಷ್ಣನ ಮಥುರೆಗೆ ಮತ್ತು ವಿಶ್ವನಾಥನ ವಾರಾಣಸಿಯತ್ತ ಮುಖ ಮಾಡಲಿದ್ದಾರೆ. ದ್ವೇಷ ವಿಧ್ವಂಸ ಇನ್ನು ಅತ್ತ ಮೈವೆತ್ತಿ ಪಯಣಿಸಲಿದೆ.


ಇದನ್ನೂ ಓದಿ; ಉರ್ದು ಭಾಷೆಯ ಖ್ಯಾತ ಕವಿ ’ರಾಹತ್ ಇಂದೋರಿ’ ನಿಧನ


ಬಾಬಾಸಾಹೇಬ ಅಂಬೇಡ್ಕರ್ ಅವರು ಕೇಳಿದ ರಾಮ-ಕೃಷ್ಣರ ಒಗಟುಗಳಿಗೆ ಉತ್ತರ ಹೇಳುವವರು ಇನ್ನೂ ಮುಂದೆ ಬರಬೇಕಿದೆ. ಈ ಸಂದರ್ಭದ ಕೃಷ್ಣ ಜನ್ಮಾಷ್ಟಮಿಯಲ್ಲಿ ಹಜರತ್ ಮೋಹಾನಿ ಎಂಬ ಕುತೂಹಲಕರ ಸಮರಸವಾದಿಯ ನೆನೆಯಬೇಕಿದೆ.

ಮಥುರಾದ ಶ್ರೀಕೃಷ್ಣ, ಲೆನಿನ್ನನ ಕಮ್ಯೂನಿಸ್ಟ್ ರಷ್ಯಾ ಹಾಗೂ ತಾನು ನಂಬಿದ್ದ ಇಸ್ಲಾಮ್ ಧರ್ಮವನ್ನು ಒಟ್ಟೊಟ್ಟಿಗೆ ಇಟ್ಟರೆ ಈ ಮೂರೂ ಸಂಗತಿಗಳ ನಡುವೆ ವಿರಸ ವೈರುಧ್ಯವನ್ನು ಕಲ್ಪಿಸುತ್ತದೆ ಇಂದು ನಾವು ಬದುಕಿರುವ ವಿಷಮ ಸಮಾಜ. ಆದರೆ ಇವುಗಳ ನಡುವೆ ಸರಸ ಸಮರಸವನ್ನು ಕಂಡ ವಿಚಿತ್ರ ನಿಷ್ಠುರ ವ್ಯಕ್ತಿ ಮೋಹಾನಿ. ಕೃಷ್ಣ, ಕಮ್ಯೂನಿಸಮ್ ಹಾಗೂ ಇಸ್ಲಾಮನ್ನು ಒಟ್ಟೊಟ್ಟಿಗೆ ಆರಾಧಿಸಿದವರು. ಹಜರತ್ ಮೋಹಾನಿ ಎಂದೇ ಹೆಸರಾಗಿದ್ದ ಇವರ ಅಸಲಿ ಹೆಸರು ಸೈಯದ್ ಫಜಲುಲ್ ಹಸನ್. ಉತ್ತರ ಪ್ರದೇಶದ ಉನ್ನಾವ ಜಿಲ್ಲೆಯ ಮೋಹನದಲ್ಲಿ ಹುಟ್ಟಿದ ಕಾರಣ ಮೋಹಾನಿ ಎಂದು ಕರೆದುಕೊಂಡರು.

1875ರಿಂದ 1951 ರ ನಡುವೆ ಜೀವಿಸಿದ್ದ ಈತ ಸ್ವಾತಂತ್ರ‍್ಯ ಹೋರಾಟಗಾರರು ಉತ್ಕೃಷ್ಟ ಉರ್ದು ಕವಿಯೂ ಆಗಿದ್ದರು. ಮೋಹಾನಿಯವರ ಕಾವ್ಯಪ್ರತಿಭೆಯನ್ನು ವಿಮರ್ಶಕರು- ಬರೆಹಗಾರರು ಪ್ರಶಂಸಿಸಿದ್ದಾರೆ. ತನ್ನ ಕಾಲಘಟ್ಟ ಎಬ್ಬಿಸಿದ್ದ ರಾಜಕೀಯ ತರಂಗಗಳಿಗೆ ಕಾವ್ಯ, ಪತ್ರಿಕೋದ್ಯಮ, ಕ್ರಾಂತಿ ಪಥಗಳ ಮೂಲಕ ಪ್ರತಿಕ್ರಿಯಿಸಿದ್ದರು ಮೋಹಾನಿ. ಕಾವ್ಯದಲ್ಲಿ ರಮ್ಯವಾದಿಯೂ ರಾಜಕಾರಣದಲ್ಲಿ ಕ್ರಾಂತಿವಾದಿಯೂ ಆಗಿದ್ದರು. ಅವರು ಬರೆದ ಮತ್ತು ಅವರ ಕುರಿತು ಬರೆದ ಪುಸ್ತಕಗಳು ನೂರಾರು.

ಮೋಹಾನಿಯವರು ಬಂಡುಕೋರರು. ಒಪ್ಪಿತ ಮೌಲ್ಯಗಳು ಮತ್ತು ಸಂಪ್ರದಾಯಗಳ ಚೌಕಟ್ಟನ್ನು ಮುರಿದು ಬದುಕಿದವರು. ರಾಜಕೀಯ ಮತ್ತು ಸಾಮಾಜಿಕ ವಾಸ್ತವಗಳನ್ನು ತಮ್ಮ ಕಾಲದ ಕಾವ್ಯಕ್ಕೆ ಎಳೆದುತಂದು ಅಳವಡಿಸಿಕೊಂಡಿದ್ದವರು. ಕಡು ನಿಷ್ಠುರಿಯಾಗಿದ್ದವರು. ರಾಜಿ ಮಾಡಿಕೊಳ್ಳುವುದು ಅವರ ಜಾಯಮಾನಕ್ಕೆ ಒಗ್ಗುತ್ತಿರಲಿಲ್ಲ. ಲೋಕಮಾನ್ಯ ಬಾಲಗಂಗಾಧರ ತಿಲಕರು ಹೋಮ್ ರೂಲ್ ಬೇಕು ಎಂದಾಗ ಸಂಪೂರ್ಣ ಸ್ವರಾಜ್ಯವೇ ಆಗಬೇಕು ಎಂದಿದ್ದ ಹಠವಾದಿ. ಆದರೆ ತಿಲಕರನ್ನು ಮೆಚ್ಚಿ ತಮ್ಮ ಪತ್ರಿಕೆಯಲ್ಲಿ ಕವಿತೆಗಳನ್ನು ಬರೆದಿದ್ದರು. ಗಾಂಧೀ ಮತ್ತು ಜಿನ್ನಾ ಇಬ್ಬರನ್ನೂ ವಿರೋಧಿಸುತ್ತಿದ್ದವರು. ದೇಶವಿಭಜನೆಯ ಕಡುವಿರೋಧಿ.

ಮಹಾತ್ಮಾ ಗಾಂಧೀಜಿ ಪ್ರತಿಪಾದಿಸಿದ ಸ್ವಾವಲಂಬನೆಯ ಸಿದ್ಧಾಂತದ ಕಟು ವಿಮರ್ಶಕರಾಗಿದ್ದರು. ಬಡಜನರ ವಿಮುಕ್ತಿಯು ಚರಕ ಸುತ್ತಿ ನೂಲು ತೆಗೆಯುವುದರಲ್ಲಿ ಅಡಗಿಲ್ಲ ಎಂದು ವಾದಿಸಿದ್ದರು. ವ್ಲಾದಿಮಿರ್ ಲೆನಿನ್ ನೇತೃತ್ವದ 1917ರ ರಷ್ಯನ್ ಕ್ರಾಂತಿಯಿಂದ ಪ್ರೇರಣೆ ಪಡೆದಿದ್ದರು. ಅವರು ಲೆನಿನ್‌ರನ್ನು ಭೇಟಿಯಾಗಿದ್ದಾಗಿ ಹೇಳಲಾಗುತ್ತದೆ. ಆದರೆ ಅದಕ್ಕೆ ಪುರಾವೆಗಳಿಲ್ಲ. ಆದರೆ ಸ್ಟಾಲಿನ್‌ರನ್ನು ಭೇಟಿಯಾಗಿ ಗೆರಿಲ್ಲಾ ಕದನ ತಂತ್ರಗಳ ಕುರಿತು ವಿಚಾರವಿನಿಮಯ ನಡೆಸಿದ್ದು ಖಚಿತಪಟ್ಟಿದೆ.

ಅವರು ಸಂವಿಧಾನ ರಚನಾ ಸಭೆಯ ಸದಸ್ಯರಾಗಿದ್ದರು ಕೂಡ. ಬಾಬಾಸಾಹೇಬ ಅಂಬೇಡ್ಕರ್ ಅವರೊಡನೆ ಒಡನಾಡಿದ್ದವರು. ಸಂವಿಧಾನದ ಅಂತಿಮ ಕರಡಿಗೆ ಸಹಿ ಹಾಕದೆ ಉಳಿದ ಏಕೈಕ ಸದಸ್ಯರಿವರು. ದೇಶವಿಭಜನೆಯ ಕುರಿತ ತಮ್ಮ ಅಸಮ್ಮತಿ ದಾಖಲಿಸಲು ತಮ್ಮ ಅಂಕಿತ ಹಾಕಲಿಲ್ಲ ಎಂದು ಕೆಲವರು ಹೇಳಿದರೆ ಮುಸಲ್ಮಾನರ ಹಿತ ಕಡೆಗಣಿಸಲಾಗಿದೆ ಎಂಬ ಕಾರಣಕ್ಕಾಗಿ ಸಹಿ ಹಾಕಲಿಲ್ಲ ಎಂಬ ಎರಡು ಬಗೆಯ ಅಭಿಪ್ರಾಯಗಳಿವೆ.

ಇಸ್ಲಾಮಿಕ್ ಚಿಂತನೆಯ ಪ್ರಕಾಂಡ ಪಂಡಿತರೂ ಗಾಢ ಧಾರ್ಮಿಕರೂ ಆಗಿದ್ದ ಮೋಹಾನಿ ಅಗಾಧ ರೊಮ್ಯಾಂಟಿಕ್ ಕವಿಯಾಗಿ ಹೊಮ್ಮಿದ್ದು ವಿಚಿತ್ರ ವಿದ್ಯಮಾನ. ಉರ್ದು ಸಾಹಿತ್ಯ ವಿಮರ್ಶಕ ಅಖ್ತರ್ ಪಯ್ಯಾಮಿ ಅವರ ಅಭಿಮತವಿದು. ಮೋಹಾನಿ ಜೀವನಶೈಲಿ ಅತಿ ಸರಳ. ಸಮಾಜವಾದೀ ತತ್ವಗಳಿಂದ ಪ್ರೇರಿತರಾಗಿದ್ದರು. ಮೋಹಾನಿ ಉರ್ದು ಪತ್ರಿಕೆ ನಡೆಸುತ್ತಿದ್ದರು. ಈಜಿಪ್ಟ್ನಲ್ಲಿ ಶಿಕ್ಷಣ ಕುರಿತು ಬ್ರಿಟಿಷರ ವಸಾಹತು ನೀತಿಯನ್ನು ಪ್ರಶ್ನಿಸಿದ ಲೇಖನವೊಂದನ್ನು ಅಚ್ಚು ಮಾಡಿದ್ದರು. ಭಾರೀ ಒತ್ತಡದ ನಡುವೆಯೂ ಲೇಖನ ಬರೆದವರ ಹೆಸರನ್ನು ಮೋಹಾನಿ ಬಿಟ್ಟುಕೊಡಲಿಲ್ಲ. ಲೇಖನದ ಎಲ್ಲ ಜವಾಬ್ದಾರಿಯನ್ನು ತಾವೇ ಹೊತ್ತರು. ಅವರ ಮೇಲೆ ಬ್ರಿಟಿಷ್ ಸರ್ಕಾರ ರಾಜದ್ರೋಹದ ಆಪಾದನೆ ಹೊರಿಸಿತು. ಕಠಿಣ ಕಾರಾಗಾರ ಸಜೆ ವಿಧಿಸಿತು. ದಿನಕ್ಕೊಂದು ಮಣ (37.3ಕೆ.ಜಿ) ಗೋಧಿ ಬೀಸಿ ಹಿಟ್ಟು ಮಾಡುವ ದೈಹಿಕ ಶ್ರಮದ ಕಠಿಣ ಶಿಕ್ಷೆ.

1920ರ ದಶಕ. ಕಾನ್ಪುರದಲ್ಲಿ ಭಾರತೀಯ ಕಮ್ಯೂನಿಸ್ಟ್ ಪಕ್ಷದ ಮೊಟ್ಟಮೊದಲ ಸಮ್ಮೇಳನ ಜರುಗಿತ್ತು. ಅದರ ಸಂಘಟಕ ಮತ್ತು ಸ್ವಾಗತ ಸಮಿತಿಯ ಅಧ್ಯಕ್ಷ ಖುದ್ದು ಮೋಹಾನಿಯೇ ಆಗಿದ್ದರು. ಇಂಕ್ವಿಲಾಬ್ ಜಿಂದಾಬಾದ್ (ಕ್ರಾಂತಿ ಚಿರಾಯುವಾಗಲಿ) ಎಂಬ ಘೋಷಣೆಯನ್ನು ಮೋಹಾನಿ ರೂಪಿಸಿದ್ದು ಇದೇ ಸಮ್ಮೇಳನದ ಸಂದರ್ಭದಲ್ಲಿ ಎನ್ನುವವರಿದ್ದಾರೆ. ಸೂಫೀ ವಿಶ್ವಾಸಿ ಮತ್ತು ಕಮ್ಯೂನಿಸ್ಟ್ ಮುಸ್ಲಿಮ್ ಎಂಬುದಾಗಿ ತಮ್ಮನ್ನು ಮೋಹಾನಿ ಬಣ್ಣಿಸಿಕೊಂಡಿದ್ದಾರೆ.

ಮುಸಲ್ಮಾನರ ಪವಿತ್ರ ಹಜ್ ಯಾತ್ರೆಯನ್ನು ಮೋಹಾನಿ ಹನ್ನೊಂದು ಬಾರಿ ಕೈಗೊಂಡಿದ್ದವರು. ಆದರೆ ಹಿಂದೂ ದೈವ ಕೃಷ್ಣನ ಕುರಿತು ಆಳದ ಆರಾಧನೆ ಪ್ರಕಟಿಸುವ ಪದ್ಯಗಳನ್ನು ಬರೆದಿದ್ದಾರೆ. ಕೃಷ್ಣ ಜನ್ಮಾಷ್ಟಮಿ ಆಚರಿಸಲು ಮಥುರೆಗೆ ಹೋಗುತ್ತಿದ್ದರು. ಜೈಲಿನಲ್ಲಿ ಗೋಧಿ ಬೀಸುತ್ತಲೇ ರಚಿಸಿದ ಕವಿತೆಗಳನ್ನು ಕಂಠಪಾಠ ಮಾಡಿ, ಬಿಡುಗಡೆಯ ನಂತರ ಬರೆದಿಡುತ್ತಿದ್ದ ಕವಿ ಇವರು. ರಾಜದ್ರೋಹದ ಅಪರಾಧಕ್ಕೆ ಸಜೆಯಾಗಿ ಪುಣೆಯ ಯರವಾಡ ಜೈಲಿನಲ್ಲಿ ಬಂಧಿಯಾಗಿ ಜನ್ಮಾಷ್ಟಮಿಯಂದು ಮಥುರೆಗೆ ಹೋಗಲು ಹಂಬಲಿಸುತ್ತ ಬರೆದ ಕವಿತೆಗಳೂ ಉಂಟು.

ಮೋಹಾನಿಯವರ ಕೃಷ್ಣಭಕ್ತಿಯ ಕೆಲ ಉರ್ದು ಮತ್ತು ಅವಧಿ ಭಾಷೆಯ ಕವಿತೆಗಳ ಸ್ಥೂಲ ಅನುವಾದ ಹೀಗಿದೆ:
1
ಎಂದೂ ಕಳೆಯದ ಇರುಳಿನ ವಿರಹ, ಬೆಟ್ಟದಷ್ಟು ಭಾರ
ಹತಭಾಗ್ಯರಾದ ಎಮ್ಮನು ತೊರೆದು ತೆರಳಿಹನು
ನಿರ್ದಯೀ ಶ್ಯಾಮ ಮತ್ತೊಂದು ಸೀಮೆಗೆ,
ನಾಡು ನಿರ್ಜನ. ಸರ್ವಸ್ವವನು ಕಿತ್ತೆಸೆದು ಕದವಿಟ್ಟು,
ಚಿಲಕವಿಕ್ಕಿ ಉಳಿಯಬಾರದೇಕೆ ಹಜರತ್ ನಾವು ಮನೆಯೊಳಗೆ?
2
ಬನವಾರಿಯ ವಿನಾ ನಿದ್ದೆ ನೆಮ್ಮದಿಗಳಿಲ್ಲ ಎನಗೆ ಎಂದು
ಯಾರಿಗೆ ಹೇಳಲಿ?
ಮುರಾರಿಯಿಲ್ಲದೆ ಕಂಬನಿಯ ಧಾರೆಗಳು ಎನ್ನ ಇರುಳುಗಳು.
ಏನ ಮಾಡಿದರೇನು, ಇನ್ನೂ ಶೂನ್ಯವೆನ್ನ ಮನ.
ಗಿರಿಧಾರಿಯಿಲ್ಲದೆ ಇಳಿಯಲೊಲ್ಲದು ನಿದಿರೆ ಕಣ್ಣುಗಳಿಗೆ.
ನೋಡು ಗೆಳೆಯಾ ಯಾರೂ ಗುರುತು ಹಿಡಿಯರು ಎಮ್ಮನು,
ಬಲುವಾಗಿ ಬಣ್ಣಗೆಟ್ಟಿದ್ದೇವೆ ಹಜರತ್,
ಬನವಾರಿಯ ಕಾಣದೆ.


ಇದನ್ನೂ ಓದಿ: ಹಿಂದೂಸ್ಥಾನ ಯಾರಪ್ಪನದೂ ಅಲ್ಲ: ರಾಹತ್ ಇಂದೋರಿ ಅವರ ಒಂದು ಗಜಲ್ ಓದಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಆರು ಮಕ್ಕಳಿದ್ದರೆ ನೀವು ಮತದಾನದ ಹಕ್ಕನ್ನು ಕಳೆದುಕೊಳ್ಳಬಹುದು: ಮತದಾರರ ಪಟ್ಟಿ ‘ಕ್ಲೀನ್’ ಮಾಡಲು ECI ಹೊಸ ಪ್ಲಾನ್!

ಭಾರತದಲ್ಲಿ 'ಆರು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದಾರೆ' ಎಂಬ ಕಾರಣಕ್ಕೆ ಯಾರಾದರೂ ಮತದಾನದ ಹಕ್ಕನ್ನು ಕಳೆದುಕೊಳ್ಳಲು ಸಾಧ್ಯವೇ? ಮೇಲ್ನೋಟಕ್ಕೆ ಹೌದು ಎನ್ನುವಂತಿದೆ ಉತ್ತರ ಪ್ರದೇಶದ ವಾರಾಣಸಿಯ ಕ್ಯಾಂಟೋನ್ಮೆಂಟ್ ಕ್ಷೇತ್ರದ ಮತದಾರ ಸೋನು...

ಕದನ ವಿರಾಮವೆಂಬ ಕಳ್ಳಾಟ : ಗಾಝಾದಿಂದ ಸಿರಿಯಾವರೆಗೆ ಮುಂದುವರಿದ ಇಸ್ರೇಲ್ ನರಮೇಧ

ಬರೋಬ್ಬರಿ ಎಪ್ಪತ್ತು ಸಾವಿರದಷ್ಟು (ವರದಿಗಳ ಪ್ರಕಾರ 67, 900) ಜನರನ್ನು ಹತ್ಯೆಗೈದು, ಶೇಕಡ 90ರಷ್ಟು ಜನರನ್ನು ನಿರಾಶ್ರಿತರನ್ನಾಗಿ ಮಾಡಿದ ಬಳಿಕ, ಅಕ್ಟೋಬರ್ 10, 2025ರಂದು ಗಾಝಾ ಮೇಲಿನ ಆಕ್ರಮಣಕ್ಕೆ ಸಂಬಂಧಿಸಿದಂತೆ ಇಸ್ರೇಲ್ ಕದನ...

ಚುನಾವಣಾ ಆಯೋಗಕ್ಕೆ ಪೌರತ್ವ ನಿರ್ಧಾರ ಮಾಡುವ ಹಕ್ಕಿದೆಯೇ? SIR ತೀರ್ಪಿನ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ್ದೇನು?

ಮೇ 27 ರಂದು 'ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಮತ್ತು ಭಾರತೀಯ ಚುನಾವಣಾ ಆಯೋಗ (ECI)' ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಚುನಾವಣಾ ಪಟ್ಟಿಗಳ 'ವಿಶೇಷ ತೀವ್ರ ಪರಿಷ್ಕರಣೆ'...

ಮಹಾರಾಷ್ಟ್ರ: 80 ಲಕ್ಷ ಮಹಿಳೆಯರು ‘ಲಡ್ಕಿ ಬಹಿನ್’ ಯೋಜನೆಗೆ ಅನರ್ಹ: ಆರ್ಥಿಕ ಬಿಕ್ಕಟ್ಟಿಗೆ ಸಾಕ್ಷಿ ಎಂದು ವಿಪಕ್ಷಗಳ ಆರೋಪ

ಮುಂಬೈ: ಮಹಾರಾಷ್ಟ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದ 'ಮುಖ್ಯಮಂತ್ರಿ ಮಾಝಿ ಲಡ್ಕಿ ಬಹಿನ್' ಇ-ಕೆವೈಸಿ (e-KYC) ಪ್ರಕ್ರಿಯೆ ಪೂರ್ಣಗೊಳಿಸಲು ನೀಡಿದ್ದ ಗಡುವು ಮುಗಿದಿದ್ದು, ಸುಮಾರು 80 ಲಕ್ಷ ಮಹಿಳೆಯರು ಯೋಜನೆಯಿಂದ ಅನರ್ಹರಾಗಿದ್ದಾರೆ. ರಾಜ್ಯ ಸರ್ಕಾರವು...

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...