ರಾಜ್ಯದಲ್ಲಿ ಡ್ರಗ್ ಜಾಲದ ನಂಟು ಚಿತ್ರರಂಗ, ರಾಜಕೀಯ ರಂಗಗಳ ಜೊತೆಗೆ ಮಾಜಿ ಭೂಗತ ದೊರೆ ದಿವಂಗತ ಮುತ್ತಪ್ಪ ರೈ ಮನೆತನಕ ಬಂದು ನಿಂತಿದೆ. ಡ್ರಗ್ಸ್ ಜಾಲ ಪ್ರಕರಣದಲ್ಲಿ ದಿವಂಗತ ಮುತ್ತಪ್ಪ ರೈ ಅವರ ಪುತ್ರ ರಿಕ್ಕಿ ರೈ ಅವರ ಹೆಸರು ಕೇಳಿಬಂದಿದ್ದು, ರೈ ಮನೆ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಸದಾಶಿವನಗರದ ಮನೆ ಮತ್ತು ರಾಮನಗರ ಬಿಡದಿಯ ಮುತ್ತಪ್ಪ ರೈ ಅವರ ಮನೆಯಲ್ಲಿ ಸಿಸಿಬಿ ಅಧಿಕಾರಿಗಳು ಶೋಧ ಕಾರ್ಯ ಕೈಗೊಂಡಿದ್ದಾರೆ. ರಿಕ್ಕಿ ರೈ ಅವರನ್ನು ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಡ್ರಗ್ ಪ್ರಕರಣ ಸಂಬಂಧ ವಿಚಾರಣೆ ಎದುರಿಸಿದ್ದ ಕೆಲವರು ರಿಕ್ಕಿ ರೈ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಆ ಬಗ್ಗೆ ಮಾಹಿತಿ ಸಂಗ್ರಹಿಸಿದ್ದ ಸಿಸಿಬಿ ಪೊಲೀಸರ ತಂಡ, ಬಿಡದಿಯಲ್ಲಿರುವ ಮನೆ ಮೇಲೆ ದಾಳಿ ಮಾಡಿ ಶೋಧ ನಡೆಸುತ್ತಿದೆ.
ಇದನ್ನೂ ಓದಿ: ಡ್ರಗ್ಸ್ ಜಾಲ: ದೀಪಿಕಾ ಪಡುಕೋಣೆ, ಸಾರಾ ಅಲಿಖಾನ್ಗೆ ನೋಟಿಸ್ ಜಾರಿ
ರಿಕ್ಕಿ ರೈ ಡ್ರಗ್ಸ್ ಪೆಡ್ಲರ್ಸ್ಗಳೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂಬ ಮಾಹಿತಿ ಸಿಸಿಬಿ ಅಧಿಕಾರಿಗಳಿಗೆ ದೊರೆತ ಹಿನ್ನಲೆಯಲ್ಲಿ ನ್ಯಾಯಾಲಯದ ಸರ್ಚ್ ವಾರಂಟ್ನೊಂದಿಗೆ ಎಸಿಬಿ ವೇಣುಗೋಪಾಲ್ ನೇತೃತ್ವದಲ್ಲಿ ದಾಳಿ ನಡೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಕರಣದಲ್ಲಿ ಬಂಧಿತರಾದ ಆರೋಪಿಗಳು ಹಾಗೂ ತಲೆಮರೆಸಿಕೊಂಡಿರುವ ಆರೋಪಿಗಳ ಜೊತೆ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಒಡನಾಟವಿಟ್ಟುಕೊಂಡಿದ್ದರು. ಆರೋಪಿಗಳು ತಲೆಮರೆಸಿಕೊಳ್ಳಲು ರಿಕ್ಕಿ ರೈ ನೆರವು ನೀಡಿದ್ದರೆಂಬ ಸಂಶಯವಿದೆ ಎಂದು ಪೊಲೀಸರು ತಿಳಿಸಿದ್ದಾರೆ.
‘ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಆರೋಪಿಗಳಿಗೆ ರಿಕ್ಕಿ ರೈ ಆಶ್ರಯ ಕೊಟ್ಟಿರುವ ಮಾಹಿತಿ ಇತ್ತು. ಹೀಗಾಗಿ, ನ್ಯಾಯಾಲಯದ ಸರ್ಚ್ ವಾರಂಟ್ ಪಡೆದು ಮನೆ ಮೇಲೆ ದಾಳಿ ಮಾಡಲಾಗಿದೆ’ ಎಂದು ಸಿಸಿಬಿಯ ಜಂಟಿ ಆಯುಕ್ತ ಸಂದೀಪ್ ಪಾಟೀಲ ಹೇಳಿದ್ದಾರೆ.