Homeಅಂಕಣಗಳುನಾಗಸುಧೆ ಜಗಲಿಯಿಂದಪರಕಾಯ ಪ್ರವೇಶದ ತಲ್ಲಣದ ಸಾಲುಗಳು - ಪ್ರಕಾಶ ಕಡಮೆ

ಪರಕಾಯ ಪ್ರವೇಶದ ತಲ್ಲಣದ ಸಾಲುಗಳು – ಪ್ರಕಾಶ ಕಡಮೆ

ಉಮಾರವರ ಕವಿತೆಯಲ್ಲಿ ದಿನ ನಿತ್ಯದ ಆಗು-ಹೋಗುಗಳ ಅಭಿವ್ಯಕ್ತಿ ಇದೆ. ಇವೆಲ್ಲವೂ ಬದುಕಿನ ಅನುಭವದಿಂದ ಪುಟಿದೆದ್ದ ಸಾಲುಗಳು...

- Advertisement -
- Advertisement -

ಉಮಾ ಮುಕುಂದ ಕನ್ನಡ ಸಾಹಿತ್ಯಕ್ಕೆ ಒಂದು ಸಾಂಸ್ಕೃತಿಕ ಮನೆಯ ಕೊಡುಗೆ. ಗಂಡ ಮಗ ಇಬ್ಬರೂ ನಾಡಲ್ಲಿ ಹೆಸರು ಮಾಡುತ್ತಿದ್ದಾಗ, ತಮ್ಮ ಬದುಕಿನ ಐದು ದಶಕಗಳ ನಂತರ ಸದ್ದು ಗದ್ದಲವಿಲ್ಲದೇ ಹೊಸ ಕವಿತೆಯ ಸಾಲುಗಳಂತೇ ಸಾಹಿತ್ಯಲೋಕವನ್ನು ಅಧಿಕೃತವಾಗಿ ಪ್ರವೇಶಿಸಿದವರು. ಹಾಗೆಂದ ಮಾತ್ರಕ್ಕೆ ಕಾವ್ಯದ ಅರಿವಿಲ್ಲದವರಂತಲ್ಲ ಇವರು. ತಮ್ಮ ಬದುಕಿನ ಎಲ್ಲಾ ಅನುಭವಗಳನ್ನೂ ಮನದೊಳಗೇ ಹುದುಗಿಸಿಟ್ಟು ಕುದಿಸಿ ತಡೆಲಾರದೇ ಶಾಂತವಾಗಿ ಹೊರಹಾಕಿ, “ಕಡೇ ನಾಲ್ಕು ಸಾಲು” ಸಂಕಲನದ ಮೂಲಕ ಸಾಹಿತ್ಯಾಸಕ್ತರ ಗಮನ ಸೆಳೆದಿರುವರು.

ಬೆಂಗಳೂರಿನ “ಬಹುರೂಪಿ” ಈ ಪುಸ್ತಕ ಪ್ರಕಾಶಿಸಿರುವರು. ಈ ಸಂಕಲನದಲ್ಲಿ ಹಸಿ ಹಸಿಯ ತಾಜಾತನದಿಂದ ಕೂಡಿದ 36 ಸರ್ವಕಾಲಿಕ ಸತ್ಯದ ಕವಿತೆಗಳಿವೆ. ತಮ್ಮ ಸಂಗಾತಿ ಮುಕುಂದಗೆ ಈ ಲವಲವಿಕೆಯ ಅಕ್ಷರದ ಸಾಲುಗಳ ಪದಪುಂಜವನ್ನು ಉಮಾ ಅರ್ಪಿಸಿರುವರು.

ಪೆಚ್ಚಾಗಿ ನಿಂತವಳು ಎಚ್ಚರಾಗಿ
ಒಳಗೆ ಬಂದು ಬಾಗಿಲು ಹಾಕಿದರೆ
ಅವಳ ನಗೆಯ ಘಮಲು ಹೊದ್ದ ಸೊಪ್ಪಿಗೆ
ದಟ್ಟ ನೋವಿನ ವಾಸನೆ

ಎಂದು “ಸೊಪ್ಪಿನವಳು” ಕವಿತೆಯ ಮೂಲಕ ದುಡಿಯುವ ವರ್ಗದ ಮಹಿಳೆಯ ಮೂಕ ವೇದನೆಯನ್ನು ಅವರ ಮನದೊಳಗೆ ನಿಂತು ಬಿಂಬಿಸಿರುವರು. ಸೊಪ್ಪಿನ ಆ ಹೆಂಗಸು ‘ಸೊಪ್ಪಮ್ಮೋ ಸೊಪ್ಪು’ ಎಂದು ಕೂಗುವಾಗ ಅವಳ ಬದುಕಿನ ನೋವೆಲ್ಲಾ ಗಂಟಲಿಗೆ ಬಂದಂತಿರುತ್ತದೆ. ಬದುಕಿನ ಗಾಯದ ಕುರಿತು ಕೇಳಿದರೆ ಏನನ್ನೂ ತೋರ್ಪಡದೇ ಸುಮ್ಮನೇ ನಕ್ಕುಬಿಡುವ ಇವರು ನೋವೆಲ್ಲಾ ನುಂಗಿಕೊಂಡು, ಕೇಳಿದ ಪ್ರಶ್ನೆಗೆ ಪ್ರಶ್ನೆಯಾಗಿಯೇ ಉಳಿದು, ನಗೆಯ ಘಮಲು ಸೊಪ್ಪಿಗೆ ನೋವಿನ ವಾಸನೆ ಸೂಸುತಿತ್ತು ಎಂದು ಕವಿ ಹೆಣ್ಣಿನ, ದುಡಿಯುವ ವರ್ಗದ ಜನರ, ಶೋಷಿತರ ಮನೋವೇದನೆಯನ್ನು ಇಲ್ಲಿ ನಿರೂಪಿಸಿರುವರು.

“ಪುಟ್ಟಕ್ಕನ ಓಲೆ” ಕವನದಲ್ಲಿ

ಬಿಟ್ಟು ಹೋದ ಗಂಡನ ಬಗ್ಗೆ
ಕೆಟ್ಟ ಮಾತಾಡದೇ
ಹುಟ್ಟಿದೆರಡು ಮಕ್ಕಳಿಗಾಗಿ
ಎಂಟುಮನೆ ಕೆಲಸಮಾಡಿ
ಕೊಟ್ಟ ತಿನಿಸು ಕಟ್ಟಿಕೊಂಡು
ಮುಚ್ಚಟೆಯಾಗಿ ಬದುಕುವ
ಮೂವತ್ತರ ಕಪ್ಪು ಚೆಲುವೆ
ಪುಟ್ಟಕ್ಕನೆಂಬೋ ಈ ವಿಶ್ವ ಸುಂದರಿ
ನನಗೊಂದು ಅಚ್ಚರಿ

ಎಂದು ಶೋಷಿತ, ಬಾಯಿಸತ್ತ ಹೆಣ್ಣಿನ ಮನದಾಳದ ಭಾವನೆಗಳನ್ನು ಬಿಚ್ಚಿಟ್ಟಿರುವರು. ಅವಳ ಮೂವತ್ತನೇ ವಯಸ್ಸಿಗೇ ನಡೆಯಬಾರದೆಲ್ಲಾ ನಡೆದುಹೋಗಿದೆ. ಗಂಡ ಬಿಟ್ಟುಹೋಗುವ ಮೊದಲೇ ಮಕ್ಕಳೆರಡನ್ನು ಕೊಟ್ಟು ಹೋಗಿರುವನು. ತನಗೆ ಬಾಳು ಬೇಡವಾದರೂ ಮಕ್ಕಳಿಗಾದರೂ ಬದುಕಿ ಮನೆಗೆಲಸ ಮಾಡಿ ತಾನು ತಿನ್ನಬೇಕಾದ್ದುದನ್ನೇ ಕಂದಮ್ಮಗಳಿಗೆ ಕಟ್ಟಿಟ್ಟು ಜೀವ ಸಹಿಸುವ ಬಡ ಹೆಣ್ಣಿನ ದೈನಂದಿನ ಬದುಕು ದಮನೀಯವಾಗಿದೆ. ಇವಳು ತಾನು ಕಷ್ಟದಲ್ಲಿದ್ದೇನೆ ಎಂದು ಎಂದಿಗೂ ಪರಿತಪಿಸದೇ, ಇಡೀ ಬದುಕಲಿ ಜೀವಸವೆದ ಹಣ, ಒಡವೆ ಎಲ್ಲವನೂ ಮಕ್ಕಳಿಗಾಗಿ ಎಂದು ಹೊಳಪ ಕಣ್ಣ ಪಿಳುಕಿಸುವ ತಾಯಿ ಹೃದಯದ, ಚಿತ್ರಣ ಕವಿ ಇಲ್ಲಿ ಚಿತ್ರಸಿ ಇವಳು ನನಗೊಂದು ಅಚ್ಚರಿ ಎಂದು ದಮನಿತರ ಪರ ನಿಲ್ಲುವರು.

ಜಿ.ಎನ್.ಮೋಹನ್ ‘ಕಾಫಿ ಡೇ’ಯ ಕೆಪುಚಿನೊ ಅಲ್ಲ ಎನ್ನುತ್ತಾ ‘ಉಮಾ ರವರ ಕವಿತೆಗಳು ಸಹಜವಾಗಿ, ಸರಾಗವಾಗಿ ಎಲ್ಲರ ಮಧ್ಯೆ ಓಡಾಡುತ್ತದೆ. ಸೊಪ್ಪು ಕೊಳ್ಳುತ್ತದೆ, ಕೆಪುಚಿನೊಗೆ ಆರ್ಡರ್ ಮಾಡುತ್ತದೆ, ಸಾರನ್ನವೇ ಮುಗಿದಿಲ್ಲದಿರುವಾಗ ವಡೆ-ಪಾಯಸ ಬರುತ್ತಿರುವದನ್ನು ಗೊತ್ತು ಮಾಡಿಕೊಳ್ಳುತ್ತದೆ. ಅಬ್ಬರದ ನಗುವಿನ ಮಧ್ಯೆ ಬಿಕ್ಕುಗಳನ್ನು ಹುಡುಕುತ್ತದೆ, ಇವರ ಕವಿತೆಗೆ ಕಾಲುದಾರಿಯೂ ಗೊತ್ತು, ಹೈವೇಯೂ ಗೊತ್ತು. ಇಲ್ಲಿ ಎಲ್ಲವೂ ಇದೆ. ಕಂಡದ್ದು, ಕೇಳಿದ್ದು, ಸುತ್ತಿದ್ದು, ನಕ್ಕಿದ್ದು, ಹರಟಿದ್ದು’ ಎಂದಿರುವರು.

ಚಿಂದಿ ಹಾಸಿ ಹಸಿವ ಮರೆಸಿ
ತಟ್ಟಿ ತಟ್ಟಿ ಲಾಲಿ ಹಾಡಿ
ಬೆಟ್ಟ ಕಣಿವೆ ಕಡಲು ಮುಗಿಲು
ಹೂವು ಹೊನಲು ಹಕ್ಕಿ ಕುಕಿಲು
ಬಾಡಿನೂಟ ಬಣ್ಣದರಿವೆ
ಪದಗಳಲ್ಲೆ ಹೆಣೆದು ಹೊದಿಸಿ
ಕನಸ ಕದವ ತೆರೆದಳು

ಎಂದು “ಹಸಿವು” ಕವಿತೆಯಲ್ಲಿ ತಾಯಿಯ ಕನಸನ್ನು ಮನಮುಟ್ಟುವಂತೆ ಸಾಲುಗಳಲ್ಲಿ ಹಿಡಿದಿಟ್ಟು ತಮ್ಮ ಕಾವ್ಯ ಕಟ್ಟುವಿಕೆ ಬಗೆಯನ್ನು ಪ್ರದರ್ಶಿಸಿರುವರು. ಕವಿತೆ ಓದುತ್ತಿದ್ದಂತೆ ಸು.ರಂ.ಎಕ್ಕುಂಡಿಯವರ ಕಥನ ಕಾವ್ಯ ಕಣ್ಣಿಗೆ ಕಟ್ಟಿದಂತಾಗುತ್ತದೆ. ಈ ಕವಿತೆಯಲ್ಲಿ ಅರ್ಥಗರ್ಭಿತವಾಗಿ ಪ್ರಾಸಗಳು ಬಂದು ಇಡೀ ಕವಿತೆಯ ಮೌಲ್ಯ ವೃದ್ಧಿಸಿದೆ. ತಾಯಿಯ ನಿಸ್ವಾರ್ಥ ಬದುಕು, ತನ್ನ ಮಗುವಿಗಾಗಿ ತನ್ನದೆಲ್ಲವನ್ನೂ ತ್ಯಾಗಮಾಡಿ, ಹಸಿವಿನಿಂದ ಬಳಲಿದರೂ ತೋರ್ಪಡಿಸದೇ, ನೀರನಷ್ಟೂ ಸುರುವಿಕೊಂಡು ಹೊಟ್ಟೆತುಂಬ ಕುಡಿದಳು ಎಂದು ತಾಯಿಯ ಮಮತೆ ಇಲ್ಲಿ ವ್ಯಕ್ತವಾಗಿದೆ. ಬಾಡಿನೂಟ ಬಣ್ಣದರಿವೆ ಪದಗಳಲ್ಲೇ ಹೆಣೆದು ಹೊದಿಸಿ ಕನಸ ಕದವ ತೆರೆದಳು ಎಂದು ಬಡ ತಾಯಿ ಮಗುವಿಗೆ ಮಲಗಿಸುವಾಗ ಅದ್ಭುತವಾದ ವರ್ಣನೆಯಲ್ಲಿ ಚಿತ್ರಿಸಿದ್ದು ಇವರ ಕಾವ್ಯ ಶಕ್ತಿಯ, ಕಾವ್ಯ ಕಟ್ಟುವಿಕೆಯ ನಿದರ್ಶನವಾಗಿದೆ.

“ಬೇರೆ ಬೇರೆ” ಕವನದಲ್ಲಿ

ಅದೇ ಸೂರ್ಯ ಅದೇ ಬೆಳಗು
ಬೆಳಕಿನಾಟ ಬೇರೆ ಬೇರೆ
ಅದೇ ನಾನು ಅದೇ ಅವನು
ಅನುದಿನದ ಸಾಂಗತ್ಯ
ಬೇರೆ ಬೇರೆ ಬೇರೆ

ಎಂದು ನಮ್ಮ ಅನುದಿನದ ಹೊಚ್ಚ ಹೊಸ ಬದುಕಿನ ರೀತಿ-ನೀತಿಗಳನ್ನು ಚಿತ್ರಿಸಿರುವರು. ದಿನದಿನವೂ ಅದೇ ಸೂರ್ಯ, ಪ್ರಕೃತಿ, ಹಕ್ಕಿ, ಹಾಡು, ಉಡುಗೆ ತೊಡುಗೆಯಿದ್ದರೂ ನಿತ್ಯವೂ ನವನವೀನ. ಸತಿ ಪತಿಗಳ, ಪ್ರೇಮಿಗಳ ಒಡನಾಟವು ಒಂದೇ ಇದ್ದರೂ ಬದುಕು ದಿನ-ದಿನವೂ ಬಗೆ ಬಗೆಯದಾಗಿದ್ದು ನಿನ್ನೆಯಂತಿರದೇ ಹೊಸ ಹೊಸ ಕಾಮನಬಿಲ್ಲಿನಂತೆ ಎಂದು ಹೊಸ ಆಶಾಕಿರಣಕೆ ದಾರಿಮಾಡಿ ಕೊಟ್ಟಿರುವರು.

ಆನ್‌ಲೈನ್ ಮೂಲಕ ಕೃತಿ ಬಿಡುಗಡೆ ಸಂದರ್ಭ

ಸಂಕಲನಕೆ, ಒಳಗು-ಹೊರಗು : ಬೆರಗು-ಕೊರಗು ಎಂದು ಬೆನ್ನುತಟ್ಟಿದ ನಾಡಿನ ಹಿರಿಯ ಬರಹಗಾರರಾದ ಎಚ್.ಎಸ್.ರಾಘವೇಂದ್ರರಾವ್ ‘ಇವರ ಕವಿತೆಯು ಗಹನವಾದ ತಾತ್ವಿಕ ಸಂಗತಿಗಳ ಅನುಸಂಧಾನ ಮಾಡುವ ದಿಕ್ಕಿನಲ್ಲಿ ಚಲಿಸುವದಿಲ್ಲ. ದಿನನಿತ್ಯದ ಬದುಕಿನಲ್ಲಿಯೇ ಮೂಡಿ ಮುಳುಗುವ ತಂಪು, ಬಿಸುಪುಗಳನ್ನು, ಬಯಕೆ-ಭ್ರಮನಿರಸನಗಳನ್ನು ಅನುಭವಿಸುವ ಹಂಚಿಕೊಳ್ಳುವ ಹಂಬಲ ಇವರದು. ತಮ್ಮ ಸರಳತೆಯಲ್ಲಿ ಮತ್ತು ನಮ್ಮ ನಿಮ್ಮಂತ ಸಾಮಾನ್ಯರ ಬದುಕಿನ ಬಗ್ಗೆ ಇರುವ ತೀವ್ರವಾದ ಆಸಕ್ತಿಯಲ್ಲಿ. ಅಂಥ ಕಿರು ಹಣತೆ ಬೆಳಕಿನಲ್ಲಿಯೇ ತಾತ್ವಿಕತೆಯೊಂದು ಸಹಜವಾಗಿಯೇ ಮೂಡಿಬರುತ್ತದೆ. ಇವರ ಕವಿತೆಗಳಲ್ಲಿ ಸವಾಲಾಗಬಹುದಾದ ರೂಪಕ, ಪ್ರತಿಮೆಗೂ ಎಲ್ಲರ ತೆಕ್ಕೆಗೂ ನಿಲುಕುತ್ತದೆ’ ಎಂದಿರುವರು.

ಬೀದಿ ಬದಿ ಕಟ್ಟೆ ನಾಗರಕಲ್ಲಿಗೆ
ಭರಪೂರ ಹಾಲು ತುಪ್ಪದ ಅಭಿಷೇಕ
ಸಿಡಿಲ ಈಡುಗಾಯಿ ಚೂರಿನಾಸೆಗೆ
ಓಡೋಡಿ ಬಂದ ಕೊಳಕು ಲಂಗದ ಪೋರಿ
ಮೈ ತಾಗಿಸಿದಳೆಂದು ಛೀಮಾರಿ ಮಾಡಿ
ದುಡುದುಡು ನಡೆವ ಮಡಿ ಸೀರೆಯವಳು

ಎಂದು “ನಾಗರಪಂಚಮಿ” ಕವಿತೆಯಲ್ಲಿ ಇಂದಿನ ಸಾಮಾಜಿಕ, ಆರ್ಥಿಕ ಪರಿಸ್ಥಿತಿಗಳನ್ನು ವಿವರಿಸುತ್ತಾ ಬಡತನದ ತಲ್ಲಣಗಳಿಗೆ ರೋಸಿ ಹೋಗಿರುವರು. ದೇಶದ ಸ್ಥಿತಿಗತಿಯೇ ಹಾಗಿದೆ, ಶ್ರೀಮಂತ ಬಡವರ ನಡುವಿನ ಕಂದಕ ಕಣ್ಮುಟ್ಟದಂತಾಗಿದೆ. ಹೊತ್ತಿನ ತುತ್ತು ಅನ್ನಕ್ಕಾಗಿ ಬಡವ ಪರಿತಪಿಸುತ್ತಿದ್ದರೆ ಶ್ರೀಮಂತರ ಅಟ್ಟಹಾಸ, ವೈಭವದ ಜೀವನ ಮುಗಿಲು ಮುಟ್ಟಿದೆ. ಕಲ್ಲ ನಾಗರಿಗೆ ಅಭಿಷೇಕದ ಮಹಾಪೂರ, ಹಸಿವೆಯಿಂದ ಬಸವಳಿದ ಮಗುವಿಗೆ ತೊಟ್ಟು ಹಾಲು ನೀಡದೇ ವೈಭವದಲಿ ಮೆರೆಯುವ ಮಂದಿಯ ಧರ್ಮ, ಶಾಸ್ತ್ರಗಳು ಸಾಂಗೋಪಾಂಗವಾಗಿ ನಡೆಯುತಿದೆ. ಇಷ್ಟಾಗಿಯೂ ಹಾಲುಣಿಸುತ್ತ ಹೂಮಾರಿ ಬದುಕ ನಡೆಸುವ ಜನರೊಂದಿಗೂ ಚೌಕಾಸಿಯ ವ್ಯವಹಾರ. ಈ ಕವಿತೆಯಲ್ಲಿ ಪರಿಸ್ಥಿತಿಗೆ ರೋಸಿಹೋಗಿ ಕವಿ ಹಸಿದ ಕಂದಮ್ಮಗಳಿಗೆ ಹೊಟ್ಟೆ ತುಂಬಾ ಹಾಲು ಸಿಗಲಿ ಎಂದು ಕರುಣಾಮಯಿಯಾಗಿ ಬೇಡಿಕೊಳ್ಳುವರು.

ನಾಡಿನ ಹೆಸರಾಂತ ಲೇಖಕಿ ವೈದೇಹಿಯವರು, ‘ನಿನ್ನುಸಿರ ನಾನಾ ಬಗೆಯ ಉಸಿರಾಟ’ ಎಂಬ ಹಿಂಬರಹದಲ್ಲಿ ಉಮಾರಿಗೆ ಆತ್ಮೀಯವಾಗಿ ಬರೆಯುತ್ತಾ ‘ನಿನ್ನ ಸಂವೇದನೆಯ ಸ್ವರೂಪ ಸ್ಪಷ್ಟವಾಗಿ ಕಂಡದ್ದರಿಂದಲೋ ಏನೋ ಈ ಕವಿತೆಗಳು ಎಲ್ಲಿಯೂ ಕವಿತೆಯಾಗಬೇಕೆಂದು ಹುಟ್ಟಿದವಲ್ಲ. ಅಲ್ಲಲ್ಲೇ ಹೂವಿನಂತೆ ಅರಳಿಕೊಂಡಂಥವು ಅಂತನಿಸಿತು. ಒಳಮಾತಿನ, ಹೊರಮಾತಿನ, ಬದುಕಿನ ವಿವಿಧ ತಲ್ಲಣ ತಳಮಳದ, ಸಹಸ್ಪಂದನ, ವಿಸ್ಮಯದ, ತಾಳುವಿಕೆ ಎಂಬ ತಪದ, ವಿಷಾದವಿದ್ದೂ ಅದರಲ್ಲಿ ಅದ್ದಿ ಹೋಗದ ಈ ಕವನಗಳು ನಿಜಕ್ಕೂ ನನಗೆ ಒಂದುರೀತಿಯಲ್ಲಿ ನಿನ್ನುಸಿರ ನಾನಾ ಬಗೆಯ ಉಸಿರಾಟಗಳಾಗಿಯೇ ಕೇಳಿಸಿದವು ಎನ್ನುತ್ತಾ, ಅಲ್ಲಲ್ಲೇ ಏಳುವ ಉರಿಗಾಳಿಯನ್ನು ಸಹಿಸಿ ಶಮನಿಸುತ್ತ ಪ್ರೀತಿಯ ಅಂತರ್ದೀಪ ಆರದಂತೆ ಕಾಪಾಡಿಕೊಂಡು ಬರುವ ದೃಢ ನಡೆಯ ಚಿತ್ರಣ ಇಲ್ಲಿದೆ’ ಎಂದಿರುವರು.

“ಪಯಣ” ಕವಿತೆಯಲ್ಲಿ

ಎಲ್ಲೋ ಹುಟ್ಟಿದ ಅವನು
ಮತ್ತೆಲ್ಲೋ ಹುಟ್ಟಿದ ನಾನು
ಹೇಗೋ ಬೆಸೆದ ಬಂಧ
ಶುರುವಾದ ಪಯಣ
ಸಾಗಿದೆ ಮೂರು ದಶಕಗಳಿಂದ

ಎನ್ನುತ್ತಾ, ಬದುಕಿನ ಸಾಮರಸ್ಯಕ್ಕೆ ಬೆಳಕು ಚೆಲ್ಲಿರುವರು. ಒಂದು ಗಂಡು, ಒಂದು ಹೆಣ್ಣು ಮದುವೆಯ ಪೂರ್ವದಲಿ ಯಾರೋ ಏನೋ ಅವರ ಆಚಾರ, ವಿಚಾರ, ನಂಬಿಕೆಗಳೇ ಬೇರೆ, ಇವರದ್ದೂ ಎಲ್ಲವೂ ವಿಭಿನ್ನ. ಆದರೂ ಒಂದಾಗಿ ಬದುಕ ಕಟ್ಟಿ ಜೀವಿಸಬೇಕು. ಆದರೆ ನಡುವೆ ಜಗಳ, ಸಿಟ್ಟು, ಸೆಡವು ಇದ್ದದ್ದೇ. ಇವೆಲ್ಲಾ ತಾತ್ಕಾಲಿಕ. ಜಗಳದ ನಡುವೆಯೂ ಮಾನವೀಯತೆಯ ತಳಹದಿಯ ಮೇಲೆ ನಾವೆಲ್ಲಾ ಬದುಕಬೇಕಾಗಿದೆ ಎಂದು ಕವಿ ಸಾಮರಸ್ಯದ ಹಾಡು ಹಾಡಿರುವರು, ತಮ್ಮ ಬದುಕನ್ನು ನೆನೆಯುತ್ತಾ.

ಸಂಕಲನದ ಕವಿ ಉಮಾ ಮುಕುಂದ ತಮ್ಮ ಕಾವ್ಯ ಪಯಣ ನೆನೆಯುತ್ತಾ ‘ಮಗುವೊಂದು ನಿಧನಿಧಾನವಾಗಿ ನಡಿಗೆ ಕಲಿಯುವಂತೆ ನನ್ನ ಎರಡು ಸಾಲು, ನಾಲ್ಕು ಸಾಲುಗಳಿಂದ ಕಾವ್ಯ ಲೋಕಕ್ಕೆ ಅಡಿ ಇಟ್ಟೆ. ಇದರಿಂದಾಗಿ ನನಗೆ ಗೊತ್ತಿಲ್ಲದಂತೆಯೇ ನನಗೊಂದು ಹೊಸ ಅಸ್ಮಿತೆಯೂ ದೊರಕಿತು. ಕವಿತೆಯೊಂದು ಬರೆದಾಗ ಆಗುವಷ್ಟು ಸಂತೋಷ, ಬೆರಗು ಇತ್ಯಾದಿ ದಿನ ನಿತ್ಯದ ಬದುಕಿನಲ್ಲಿ ತೊಡಗಿಸಿಕೊಂಡಾಗಲೂ ಅನಿರೀಕ್ಷಿತವಾಗಿ ದಕ್ಕುತ್ತಿರುತ್ತದೆ’ ಎನ್ನುತ್ತಾ ‘ಒಂದು ರೀತಿಯಲ್ಲಿ ನಾನು ಫೇಸ್ಬುಕ್ ಕವಿಯೇ. ಹೀಗೆ ಗುರುತಿಸಿಕೊಳ್ಳಲು ನನಗೆ ಯಾವುದೇ ಹಿಂಜರಿಕೆ ಇಲ್ಲ’ ಎಂದಿರುವರು.

ಹಗಲಿರುಳೆನ್ನದೆ ಬೆನ್ನು ಹತ್ತಿದೆ
ಬಿರಿದೆದ್ದ ನಿನ್ನ ಪಾದ
ಒಂದೇ ಒಂದು ಕಾಳು ಬೆಳೆಯದ ನಾನು
ಕಾದ ನೆಲದ ಮೇಲೆ ಕಾಲಿಡದ ನಾನು,
ಬೆವರು ಬಸಿದ ನೀ ಬೆಳೆದ
ಮೂಟೆ ಮೂಟೆ ಅಕ್ಕಿ ಮುಕ್ಕಿ
ಸೊಕ್ಕಿಬೆಳೆದ ನಾನು
…………………..
ಅನ್ನ ಕಲೆಸಿ ಉಣಿಸಬೇಕು

ಎಂದು “ಪಾದ ಕಾರಣ” ಕವಿತೆಯಲ್ಲಿ ನಾಡಿಗಾಗಿ, ದೇಶದ ಜನರಿಗಾಗಿ ದುಡಿವ ಮಣ್ಣಿನ ಮಕ್ಕಳ ತ್ಯಾಗವ ನೆನೆನೆನೆದು ನಾವು ಬರೀ ಸ್ವಾರ್ಥಿಗಳಾಗಿ ಅವರು ಬೆಳೆದ ಮೂಟೆ ಮೂಟೆ ಅಕ್ಕಿಗಳನು ಮುಕ್ಕುತಿದ್ದೇವೆಯೇ ಹೊರತು ಅವರ ಸ್ಥಿತಿಗತಿಗಳ ಕುರಿತೆಂದೂ ಯೋಚಿಸುವದೇ ಇಲ್ಲ. ಅವರ ಬದುಕಿಗೆ ನಾವು ಕಣ್ಣಾಗಬೇಕು, ಅವರ ದುಃಖ ದಲಿ ನಾವೂ ಪಾಲುದಾರರಾಗಿ ನಮ್ಮ ಸಂತೋಷವನ್ನು ಅವರಿಗೂ ಹಂಚಬೇಕು ಎಂಬ ಮಾನವ ಪರ ಧೋರಣೆಯೊಂದಿಗೆ ಬಡ ಜನರ, ದುಡಿಯುವ ಕೈಗಳಿಗೆ ಶಕ್ತಿಯಾಗಬೇಕು ಎನ್ನುತ್ತಾ ನಮ್ಮ ಇಂದಿನ ಸಿರಿ ಸಂಪತ್ತಿಗೆ ನಿಮ್ಮ ಬೊಕ್ಕೆ ಎದ್ದ ಪಾದಗಳೇ ಕಾರಣ ಎಂದು ಮನಸಾ ದುಡಿಯುವ ಜನಕೆ ವಂದಿಸಿರುವರು.

“ನಡೆ” ಕವಿತೆಯಲ್ಲಿ

ಜೊತೆ ಜೊತೆಗೆ ನಡೆಯುವಾಗ ದೀಪ ಯಾರ ಕೈಯ್ಯಲಿದ್ದರೇನು? ಜೊತೆಗೆ ನಡೆಯುವುದಷ್ಟೇ ಮುಖ್ಯ, ಎನ್ನುತ್ತಾ ನಮ್ಮೆಲ್ಲಾ ಅಂಹಕಾರ, ದುರಹಂಕಾರಗಳ ಮರೆತು ಮನುಷ್ಯರಾಗಿ ಬದುಕುವ. ಹೆಸರಿಗಾಗಿ ಅಧಿಕಾರಕ್ಕಾಗಿ ಮನುಷ್ಯತ್ವವ ಮರೆತು ಬದುಕುವ ಬದಲು, ಜಾತಿ, ಧರ್ಮಗಳೆಲ್ಲಾ ಒಂದಾಗಿ ಎಲ್ಲರೂ ಜೊತೆಯಲೇ ಸಾಗುವಾ, ದೀಪದ ಬೆಳಕಲ್ಲಿ ಎಂಬ ಆಶಾ ಭಾವ ವ್ಯಕ್ತಪಡಿಸಿರುವರು.

ಉಮಾರ ಕವಿತೆಯಲ್ಲಿ ದಿನ ನಿತ್ಯದ ಆಗು-ಹೋಗುಗಳ ಅಭಿವ್ಯಕ್ತಿ ಇದೆ. ಇವೆಲ್ಲವೂ ಬದುಕಿನ ಅನುಭವದಿಂದ ಪುಟಿದೆದ್ದ ಸಾಲುಗಳು. ಮತ್ತೊಬ್ಬರ ಮನದಲಿ ಹೊಕ್ಕಿ ಅವರ ಭಾವನೆಗಳನ್ನು ಹೊರಹಾಕುವ, ಕಾವ್ಯ ಕಟ್ಟುವ ಇವರ ಜೀವಪರ ಮನಸಿಗೆ ಅಭಿನಂದಿಸಿ ಶುಭ ಕೋರುವೆನು.

  • ಪ್ರಕಾಶ ಕಡಮೆ

(ಜನಪರ ಕಾಳಜಿಯ ಕವಿ ಪ್ರಕಾಶ ಕಡಮೆಯವರು ಮೂಲತಃ ಉತ್ತರ ಕನ್ನಡ ಜಿಲ್ಲೆಯವರಾಗಿದ್ದು ಸದ್ಯ ಹುಬ್ಬಳ್ಳಿಯಲ್ಲಿ ನೆಲೆಸಿದ್ದಾರೆ. ಗಾಣದೆತ್ತು ಮತ್ತು ತೆಂಗಿನಮರ, ಆ ಹುಡುಗಿ, ಅಮ್ಮನಿಗೊಂದು ಕವಿತೆ ಎಂಬ ಕವನ ಸಂಕಲನಗಳನ್ನು ರಚಿಸಿದ್ದಾರೆ)


ಇದನ್ನೂ ಓದಿ: ‘ಕತ್ತರಿ ಸಾಣೆಯ ಮುದುಕ’ – ಮಿಸ್ರಿಯಾ ಐ. ಪಜೀರ್ ಬರೆದ ಕವನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...