Homeಕರ್ನಾಟಕಹೊಸ ಮಂತ್ರಿಮಂಡಲ ಹಳೆಯ ಅಸಮತೋಲನ: ಎ ನಾರಾಯಣ

ಹೊಸ ಮಂತ್ರಿಮಂಡಲ ಹಳೆಯ ಅಸಮತೋಲನ: ಎ ನಾರಾಯಣ

- Advertisement -
- Advertisement -

ಭಾರತೀಯ ಜನತಾ ಪಕ್ಷದ ದೆಹಲಿ ದರ್ಬಾರ್‌ನವರು ಕರ್ನಾಟಕದಲ್ಲಿ ಮುಖ್ಯಮಂತ್ರಿಯನ್ನು ಬದಲಿಸಿದ್ದು ಮುಂದಿನ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುವ ಉದ್ದೇಶದಿಂದ. ಹೊಸ ಮುಖ್ಯಮಂತ್ರಿಯವರ ಹೊಸ ಮಂತ್ರಿಮಂಡಲ ನೋಡಿದರೆ ಆಡಳಿತಕ್ಕೆ ಹೊಸ ರೂಪ ನೀಡಿ ಚುನಾವಣೆಗೆ ತಯಾರಿ ನಡೆಸುವುದಕ್ಕಿಂತ ಮೊದಲು, ಇರುವ ಸರಕಾರವನ್ನು ಚುನಾವಣೆ ಬರುವತನಕ ಉಳಿಸಿಕೊಳ್ಳುವ ಚಿಂತೆಯೇ ಬಿಜೆಪಿಗೆ ಪ್ರಧಾನವಾಗಿ ಕಾಡುತ್ತಿದೆ ಅನ್ನಿಸುತ್ತದೆ.

ಹೊಸ ಮಂತ್ರಿಮಂಡಲದ ಸಾಮಾಜಿಕ ಚರ್ಯೆ, ಪ್ರಾದೇಶಿಕ ಚಹರೆ ಇತ್ಯಾದಿಗಳ ವಿಚಾರಕ್ಕೆ ಮತ್ತೆ ಬರೋಣ. ಮೊದಲಿಗೆ ಗಮನಿಸಬೇಕಾದದ್ದು ಏನೆಂದರೆ, ಮುಖ್ಯಮಂತ್ರಿಯನ್ನು ಬದಲಿಸುವಾಗಲೂ, ಮಂತ್ರಿಮಂಡಲ ರಚಿಸುವಾಗಲೂ ಕರ್ನಾಟಕದ ಮಟ್ಟಿಗೆ ಬಿಜೆಪಿಯ ಪ್ರಬಲ ಹೈಕಮಾಂಡ್‌ನ ಆಟ ಪೂರ್ತಿ ನಡೆಯಲಿಲ್ಲ ಎನ್ನುವುದು. ಮೊದಲಿಗೆ ತಮಗೆ ಬೇಕಾದವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿ ಕರ್ನಾಟಕದ ಆಡಳಿತವನ್ನು ಸಂಪೂರ್ಣ ದೆಹಲಿಯ ನಿಯಂತ್ರಣಕ್ಕೆ ತೆಗೆದುಕೊಂಡು, ಇಲ್ಲಿನ ರಾಜಕೀಯವನ್ನು ಹಿಂದುತ್ವದಲ್ಲಿ ಅದ್ದಿ ಓಟಿನ ಹೊಸ ಫಸಲು ಪಡೆಯಬೇಕು ಎನ್ನುವುದು ಬಿಜೆಪಿಯ ಹೈಕಮಾಂಡ್‌ನವರ ಲೆಕ್ಕಾಚಾರ ಇದ್ದಂತೆ ಇತ್ತು. ಪಕ್ಷದ ರಾಜ್ಯ ಅಧ್ಯಕ್ಷರ ಸೋರಿಕೆಯಾದ ಫೋನ್ ಸಂಭಾಷಣೆ ಇದನ್ನೇ ತಾನೇ ಹೇಳಿದ್ದು. ದೆಹಲಿಯಿಂದ ಮುಖ್ಯಮಂತ್ರಿಯೊಬ್ಬರು ಬರುತ್ತಾರೆಂದೂ, ಮಂತ್ರಿಮಂಡಲದಲ್ಲಿ ’ಹಳಬರ್‍ಯಾರೂ’ ಇರುವುದಿಲ್ಲವೆಂದೂ ಆ ಸಂಭಾಷಣೆಯ ಸಾರವಾಗಿತ್ತು. ಆ ಸಂಭಾಷಣೆ ತನ್ನದಲ್ಲ ಅಂತ ಅವರು ಹೇಳಿದ್ದನ್ನು ನಂಬುವಷ್ಟು ಕರ್ನಾಟಕದ ಜನ ಪೆದ್ದರಾಗಿದ್ದರೆ ಬಿಜೆಪಿಯ ವರಿಷ್ಠರಿಗೆ ಕರ್ನಾಟಕದಲ್ಲಿ ತಾವಂದದ್ದನ್ನೆಲ್ಲಾ ಮಾಡಿ ಕೈತೊಳೆದುಕೊಳ್ಳಲು ಇಷ್ಟೊಂದು ಕಷ್ಟ ಆಗುತ್ತಿರಲಿಲ್ಲ.

ಕೊನೆಗೀಗ ಆಗಿದ್ದೇನೆಂದರೆ, ವರಿಷ್ಠರಿಗೆ ತಾವು ಅಂದುಕೊಂಡ ಮುಖ್ಯಮಂತ್ರಿಯನ್ನು ಪ್ರತಿಷ್ಠಾಪಿಸಲು ಆಗಿಲ್ಲ. ಯಡಿಯೂರಪ್ಪನವರನ್ನು ಪೂರ್ತಿ ಎದುರುಹಾಕಿಕೊಂಡು ಹೊಸ ಮುಖ್ಯಮಂತ್ರಿಯನ್ನು ಪ್ರತಿಷ್ಠಾಪಿಸಲು ಹೈಕಮಾಂಡ್‌ನವರಿಗೆ ಧೈರ್ಯ ಸಾಲಲಿಲ್ಲ. ಹಾಗೆಯೇ ಈಗ ಮಂತ್ರಿಮಂಡಲದ ವಿಚಾರದಲ್ಲೂ ಕೂಡ. ಬೇಕಾದವರನ್ನು ಮಂತ್ರಿ ಮಾಡಿ ಉಳಿದವರನ್ನು ತೆಪ್ಪಗಿರುವಂತೆ ಮಾಡಿಬಿಡುತ್ತೇವೆ ಎನ್ನುವ ಹೈಕಮಾಂಡ್‌ನ ನೀತಿ ಕರ್ನಾಟಕದ ಮಟ್ಟಿಗೆ ಕೆಲಸಕ್ಕೆ ಬರಲಿಲ್ಲ ಅಂತಲೇ ಹೇಳಬೇಕು. ಹೊಸ ಮುಖ್ಯಮಂತ್ರಿಯೇನೋ ’ಯಡಿಯೂರಪ್ಪನವರ’ ಜನ ಎಂದಾದರೂ ಅವರನ್ನು ಬೇಕಾದಹಾಗೆ ದುಡಿಸಿಕೊಳ್ಳುವುದು ಹೈಕಮಾಂಡ್‌ನವರಿಗೆ ಕಷ್ಟವಾಗದು. ಆದರೆ, ಹೊಸ ಮಂತ್ರಿಮಂಡಲವೊಂದನ್ನು ರಚಿಸಿ ಕರ್ನಾಟಕದಲ್ಲೊಂದು ಹೊಸ ಪ್ರಯೋಗ ಮಾಡಿಬಿಡುತ್ತೇವೆ ಎಂದು ಹೊರಟ ನಿರೀಕ್ಷೆ ಹುಸಿಯಾದಂತೆ ಕಾಣುತ್ತದೆ. ಯಡಿಯೂರಪ್ಪನವರ ಸಂಪುಟದಲ್ಲಿದ್ದ ಏಳು ಸಚಿವರನ್ನು ಕೈಬಿಡಲಾಗಿದೆ ಎನ್ನುವುದನ್ನು ಬಿಟ್ಟರೆ, ಬಹುತೇಕ ಎಲ್ಲವೂ ಹಳೆಯ ಜಾಡಿನಲ್ಲೇ ಇದೆ. ಹದಿನೆಂಟು ಮಂದಿ ಹಳಬರ ಖಾತೆ ಕೂಡ ಅಭಾದಿತವಾಗಿ ಮುಂದುವರಿದಿದೆ. ಬಹುಪಾಲು ಸ್ಥಾನಗಳು ಪ್ರಬಲ ಜಾತಿಗಳ ಪಾಲಾಗಿದೆ. ಮುಂದಿನ ಚುನಾವಣೆಯವರೆಗೆ ಸರಕಾರ ಉಳಿಸಲು ಯಾವ ರೀತಿಯ ಮಂತ್ರಿಮಂಡಲ ರಚಿಸಬೇಕಿತ್ತೋ ಅಂತಹದ್ದೊಂದು ಮಂತ್ರಿಮಂಡಲವನ್ನೀಗ ರಚಿಸಲಾಗಿದೆ.

ಮಂತ್ರಿಮಂಡಲಕ್ಕೆ ಯಾರನ್ನು ತೆಗೆದುಕೊಳ್ಳಬೇಕು, ಯಾರನ್ನು ಬಿಡಬೇಕು ಮತ್ತು ಯಾರಿಗೆ ಯಾವ ಖಾತೆ ಇರಬೇಕು ಎನ್ನುವಲ್ಲಿ ದೊಡ್ಡ ಮಟ್ಟದ ಚೌಕಾಸಿ ನಡೆದಿರುವುದು ಮೇಲ್ನೋಟಕ್ಕೆ ಕಾಣಿಸುತ್ತದೆ. ಈ ಚೌಕಾಸಿ ಈ ಸರಕಾರವನ್ನು ನಿಯಂತ್ರಿಸುವ ಮೂರು ಶಕ್ತಿಗಳ ಕಡೆಯಿಂದ ಆಗಿರುವಂತಿದೆ. ಈ ಮೂರು ಶಕ್ತಿಗಳೆಂದರೆ ಒಂದು ಹೈಕಮಾಂಡ್, ಇನ್ನೊಂದು ಆರ್‌ಎಸ್‌ಎಸ್ ಪ್ರಣೀತ ಪಕ್ಕಾ ಬಲಪಂಥೀಯ ಗುಂಪು, ಮತ್ತೊಂದು ಯಡಿಯೂರಪ್ಪ ಮತ್ತು ಅವರ ಕುಟುಂಬ/ಆಪ್ತರ ಬಣ. ಇದರ ಜತೆಗೆ ಕಾಂಗ್ರೆಸ್ ಮತ್ತು ಜನತಾ ದಳಗಳಿಂದ ಖರೀದಿಸಿ ತಂದ ಶಾಸಕರ ಮತ್ತೊಂದು ಬಣ. ಹೊಸ ಮಂತ್ರಿ ಮಂಡಲದಲ್ಲಿ ಈ ಎಲ್ಲಾ ಬಣಗಳನ್ನು ಸಂತೃಪ್ತಿಪಡಿಸಲು ಹೊರಟಿರುವುದರಿಂದ ಪ್ರಾದೇಶಿಕ ಸಮತೋಲನ ಇಲ್ಲ ಎನ್ನುವ ಒಂದು ವಾದ ಇದೆ. ಸುಮಾರು 13 ಜಿಲ್ಲೆಗಳಿಗೆ ಮಂತ್ರಿಮಂಡಲದಲ್ಲಿ ಪ್ರಾತಿನಿಧ್ಯವೇ ಇಲ್ಲ ಎನ್ನುವುದು ಎದ್ದುಕಾಣುವ ಅಂಶ. ಬಹುಶಃ ಇತ್ತೀಚೆಗಿನ ವರ್ಷಗಳಲ್ಲಿಯೇ ಪ್ರಾದೇಶಿಕವಾಗಿ ಇಷ್ಟೊಂದು ಅಸಮಾನತೆಯಿಂದ ಕೂಡಿದ ಮಂತ್ರಿಮಂಡಲವೊಂದು ಇರಲೇ ಇಲ್ಲ ಎನ್ನಬಹುದು. ಆದರೆ ಮಂತ್ರಿಮಂಡಲದಲ್ಲಿ ಪ್ರಾದೇಶಿಕ ಅಸಮತೋಲನ ಇದೆ ಎನ್ನುವುದು ಬಿಜೆಪಿಗೆ ರಾಜಕೀಯವಾಗಿ ದೊಡ್ಡ ನಷ್ಟವನ್ನೇನೂ ಉಂಟುಮಾಡಲಾರದು. ಅಂದರೆ, ಒಂದು ಜಿಲ್ಲೆಯಲ್ಲಿ ಒಬ್ಬ ಮಂತ್ರಿ ಇದ್ದಾನೆ ಎನ್ನುವ ಕಾರಣಕ್ಕೆ ಹೆಚ್ಚು ಓಟುಗಳು ಬರಬಹುದು ಅಥವಾ ಒಂದು ಜಿಲ್ಲೆಯಿಂದ ಯಾವುದೇ ಮಂತ್ರಿ ಇಲ್ಲ ಎನ್ನುವ ಕಾರಣಕ್ಕೆ ಅಲ್ಲಿಂದ ಬರುವ ಓಟುಗಳ ಸಂಖ್ಯೆ ಕಡಿಮೆಯಾಗಬಹುದು ಎನ್ನುವ ರೀತಿಯಲ್ಲಿ ಚುನಾವಣಾ ರಾಜಕೀಯ ಇಲ್ಲ ಎನ್ನುವ ಕಾರಣಕ್ಕೆ ಇಂತಹದ್ದೊಂದು ಅಸಮತೋಲನದ ಬಗ್ಗೆ ಬಿಜೆಪಿ ದೊಡ್ಡಮಟ್ಟಿಗೆ ತಲೆಕೆಡಿಸಿಕೊಳ್ಳಲಿಕ್ಕಿಲ್ಲ.

ಉಳಿದಂತೆ ಜಾತಿವಾರು, ಉಪಜಾತಿವಾರು ಲೆಕ್ಕಾಚಾರಗಳೆಲ್ಲಾ ಯಥಾಪ್ರಕಾರ ಮುಂದುವರಿದಂತೆ ಕಾಣುತ್ತವೆ. ಈ ಹಂಚಿಕೆಯನ್ನು ಕೂಡಾ ಚುನಾವಣೆಯ ಲೆಕ್ಕಚಾರದಲ್ಲೇ ಮಾಡಲಾಗಿದೆ. ಲಿಂಗಾಯತರು ಸಿಂಹಪಾಲು ಪಡೆದಿದ್ದಾರೆ. ಮುಖ್ಯಮಂತ್ರಿಯೂ ಲಿಂಗಾಯತರೇ. ಲಿಂಗಾಯತರ ಬೆಂಬಲ ಇಲ್ಲದೆ ಹೋದರೆ ಬಿಜೆಪಿ ಕರ್ನಾಟಕದಲ್ಲಿ ಅಧಿಕಾರ ಉಳಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುವುದನ್ನು ಮನಗಂಡೇ ಮತ್ತೆ ಲಿಂಗಾಯತರೊಬ್ಬರನ್ನು ಮುಖ್ಯಮಂತ್ರಿ ಮಾಡಿರುವುದು. ಆ ಜಾತಿಯನ್ನು ಮತ್ತು ಅದರ ಪ್ರಮುಖ ಉಪಜಾತಿಗಳನ್ನೆಲ್ಲ ವಿಶೇಷವಾಗಿ ಓಲೈಸಿಕೊಳ್ಳಬೇಕಾದ ಅನಿವಾರ್ಯತೆ ಪಕ್ಷಕ್ಕಿದೆ. ಒಕ್ಕಲಿಗರ ಮತವನ್ನು ಎಷ್ಟು ಸಾಧ್ಯವಾಗುತ್ತದೋ ಅಷ್ಟು ಉಳಿಸಿಕೊಳ್ಳಬೇಕು ಮತ್ತು ಹೊಸದಾಗಿ ಸೃಷ್ಟಿಸಿಕೊಳ್ಳಬೇಕು ಎನ್ನುವ ದೃಷ್ಟಿಯಿಂದ ಒಕ್ಕಲಿಗ ಸಮುದಾಯದವರಿಗೆ ಎಲ್ಲಾ ಒತ್ತಡಗಳ ನಡುವೆ ಎಷ್ಟು ಸ್ಥಳಗಳನ್ನು ನೀಡಬಹುದೋ ಅಷ್ಟು ಸ್ಥಾನಗಳನ್ನು ನೀಡಲಾಗಿದೆ.

ಒಂದರ್ಥದಲ್ಲಿ, ಖರೀದಿತ ಶಾಶಕರ ಪೈಕಿ ಎಲ್ಲಾ ವರ್ಗಗಳಿಗೆ ಸೇರಿದವರೂ ಇದ್ದ ಕಾರಣ ಅವರನ್ನು
ಸೇರಿಸಿಕೊಂಡು ಆಯಕಟ್ಟಿನ ಸ್ಥಾನ ನೀಡುವುದು ಸುಲಭವೇ ಆಗಿದೆ ಎನ್ನಿಸುತ್ತದೆ. ಹಾಗೆ ಎಲ್ಲಾ ಸೇರಿದರೆ, ಮುಖ್ಯಮಂತ್ರಿಗಳೂ ಸೇರಿದಂತೆ 10 ಲಿಂಗಾಯತರು, 07 ಒಕ್ಕಲಿಗರು, 02 ಬ್ರಾಹ್ಮಣರು ಸೇರಿ ಪ್ರಬಲ ಜಾತಿಯವರಿಗೆ ಒಟ್ಟು 19 ಮಂತ್ರಿ ಸ್ಥಾನಗಳು. ಅಂದರೆ, ಮೂರು ಜಾತಿಗಳಿಗೆ ಶೇ.65 ರಷ್ಟು ಸ್ಥಾನಗಳು. ಉಳಿದ ಎಲ್ಲಾ ಸಮುದಾಯಗಳಿಗೆ ಸೇರಿ 11 ಸ್ಥಾನಗಳು (ಶೇ.35). ಎಂಬಲ್ಲಿಗೆ ಪ್ರಾದೇಶಿಕ ಅಸಮತೋಲನದ ಜತೆಗೆ ಮಂತ್ರಿಮಂಡಲದ ಸಾಮಾಜಿಕ ಸಮತೋಲನವೂ ದುತ್ತೆಂದು ಕಣ್ಣಮುಂದೆ ನಿಲ್ಲುತ್ತದೆ. ಅಷ್ಟೇ ಅಲ್ಲ, ದೊಡ್ಡ ಖಾತೆಗಳಲ್ಲೇ ಪ್ರಭಾವಿ ಖಾತೆಗಳು ಅನ್ನಿಸಿಕೊಂಡ ಗೃಹ ಖಾತೆ, ಕಂದಾಯ ಖಾತೆ, ಬೃಹತ್ ಕೈಗಾರಿಕಾ ಖಾತೆ, ಕೃಷಿ ಖಾತೆ ಇತ್ಯಾದಿಗಳೆಲ್ಲವೂ ಪ್ರಬಲ ಜಾತಿಯವರ ಕೈಯ್ಯಲ್ಲೇ ಇದೆ.

PC : ETV Bharat

ಗೃಹ ಖಾತೆಯನ್ನು ಪಡೆದವರು ಒಕ್ಕಲಿಗ ಎನ್ನುವ ನೆಲೆಯಲ್ಲಿ ಪ್ರಬಲಜಾತಿಯೊಂದನ್ನು ಪ್ರತಿನಿಧಿಸಿದರೆ, ಸಂಘದ ಅಂಗಣದಲ್ಲಿ ಬೆಳೆದವರು ಎನ್ನುವ ಕಾರಣಕ್ಕೆ ತೀವ್ರ ಹಿಂದುತ್ವದ ಪ್ರತಿನಿಧಿಯಾಗಿಯೂ ಅವರು ಸ್ಥಾನ ಪಡೆದಿದ್ದಾರೆ. ಲೋಕೋಪಯೋಗಿ ಮತ್ತು ಬೃಹತ್ ಕೈಗಾರಿಕಾ ಖಾತೆಗಳನ್ನು ಪಡೆದವರು ಲಿಂಗಾಯತರು ಮಾತ್ರವಲ್ಲ, ಪ್ರಬಲವಾಗಿ ತಮ್ಮ ಹಕ್ಕು ಪ್ರತಿಪಾದಿಸುವ ಲಿಂಗಾಯತರ ಉಪಪಂಗಡಕ್ಕೆ ಸೇರಿದವರು ಎನ್ನುವುದು ಮುಖ್ಯವಾಗುತ್ತದೆ. ಜಾತಿಯ ಜತೆಗೆ ದೊಡ್ಡದಾಗಿ ಧ್ವನಿ ಎತ್ತಬಲ್ಲವರತ್ತ ಕರ್ನಾಟಕದಲ್ಲಿ ಅಧಿಕಾರ ಪ್ರವಹಿಸುತ್ತದೆ ಅಂತ ಮತ್ತೊಮ್ಮೆ ಸಾಬೀತಾಗಿದೆ. ಪ್ರಬಲ ಜಾತಿಗಳಿಗೆ ಮಂತ್ರಿ ಸ್ಥಾನ ನೀಡದಿದ್ದರೆ ಆ ಜಾತಿಗಳ ಮತ ಬರುವುದಿಲ್ಲವೆಂದೂ, ದುರ್ಬಲ/ಹಿಂದುಳಿದ ಜಾತಿಗಳಿಗೆ ಪ್ರಾತಿನಿಧ್ಯ ನೀಡದಿದ್ದರೂ ಅವರ ಮತಗಳು ಬಂದೇಬರುತ್ತವೆ ಎಂದೂ ಬಿಜೆಪಿಗೆ ತಿಳಿದಿದೆ.

ಮಂತ್ರಿಮಂಡಲ ರಚನೆಗೆ ಸಂಬಂಧಿಸಿದಂತೆ ಇತ್ತೀಚೆಗಿನ ದಶಕಗಳಲ್ಲಿ ಕಂಡ ಒಂದೇ ಒಂದು ವಿಶೇಷ ಎಂದರೆ ಅದು ಸಿದ್ದರಾಮಯ್ಯ ಮುಖ್ಯ ಮಂತ್ರಿಯಾಗಿದ್ದಾಗ ಅವರು ತೆಗೆದುಕೊಂಡ ಒಂದು ನಿಲುವು. ಅವರು ರಚಿಸಿದ ಮೊದಲ ಮಂತ್ರಿಮಂಡಲದಲ್ಲಿ ತಮ್ಮ ಜಾತಿಗೆ ಸೇರಿದ ಯಾರನ್ನೂ ಮಂತ್ರಿ ಮಾಡಿರಲಿಲ್ಲ. ಅದಕ್ಕೆ ಅವರು ನೀಡಿದ ಕಾರಣ ಏನೆಂದರೆ, ಮುಖ್ಯಮಂತ್ರಿಯನ್ನೇ ಪಡೆದ ಜಾತಿಗೆ ರಾಜಕೀಯವಾಗಿ ಮತ್ತೂ ಹೆಚ್ಚಿನ ಪ್ರಾತಿನಿಧ್ಯ ಬೇಕು ಎನ್ನುವುದು ಸರಿಯಲ್ಲವೆಂದು. ಅದು ಒಂದು ಕ್ರಾಂತಿಕಾರಿ ನಿಲುವು. ಅದು ಮುಂದಿನ ಎಲ್ಲಾ ಮುಖ್ಯಮಂತ್ರಿಗಳಿಗೂ ಮಾದರಿಯಾಗಬೇಕಿತ್ತು. ಆದರೆ ಆದದ್ದೇ ಬೇರೆ. ಉಳಿದವರಿಗೆ ಮಾದರಿಯಾಗುವುದು ಬಿಡಿ. ಸ್ವತಹ ಸಿದ್ದರಾಮಯ್ಯನವರಿಗೂ ಈ ನೈತಿಕ ನಿಲುವಿಗೆ ಬದ್ಧರಾಗಿ ಬಹುಕಾಲ ಉಳಿಯಲು ಸಾಧ್ಯವಾಗಲಿಲ್ಲ. ಎರಡನೆಯ ಬಾರಿ ಮಂತ್ರಿಮಂಡಲ ವಿಸ್ತರಣೆ ಮಾಡುವಾಗ ಅವರ ಜಾತಿಯವರನ್ನೂ ಸಿದ್ದರಾಮಯ್ಯ ಮಂತ್ರಿಮಂಡಲಕ್ಕೆ ಸೇರಿಸಿಕೊಂಡರು. ಭಾರತದಲ್ಲಿ ಮತ್ತು ಭಾರತದ ತನುಜಾತೆಯಾದ ಕರ್ನಾಟಕದಲ್ಲಿ ಯಾವತ್ತಿದ್ದರೂ ರಾಜಕೀಯ ಅಧಿಕಾರ ಎನ್ನುವುದು ಪ್ರವಹಿಸುವುದು ಜಾತಿಯ ಗಟಾರಗಳ ಮೂಲಕವೇ ಅಲ್ಲವೇ. ಈ ಎಲ್ಲದರ ನಡುವೆ ಮಂತ್ರಿ ಪದವಿ ಸಿಗದೇ ಹೋದರೆ ಸದಾ ತಂಟೆ ಮಾಡುವ ಒಂದಷ್ಟು ಮಂದಿಯನ್ನು ಹೊರಗಿಡಲಾಗಿದೆ. ಇವರು ಕರ್ನಾಟಕದ ಜನತೆಯನ್ನು ಮುಂಬರುವ ದಿನಗಳಲ್ಲಿ ಯಾವ ರೀತಿಯಲ್ಲಿ ರಂಜಿಸಲಿದ್ದಾರೆ ಎನ್ನುವುದು ಅಷ್ಟೇ ಕುತೂಹಲದ ವಿಷಯ.

ಎ ನಾರಾಯಣ

ಎ ನಾರಾಯಣ
ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರು


ಇದನ್ನೂ ಓದಿ : ಶಿವರಾಮ ಕಾರಂತ್ ಬಡಾವಣೆ ಎಂಬ ‘ಅಭಿವೃದ್ಧಿ’ ಯೋಜನೆ; ದಲಿತರು-ಬಡಬಗ್ಗರ ಮೇಲೆ ಪ್ರಹಾರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...