Homeಮುಖಪುಟಸಸ್ಯಹಾರಿಯಾಗಿದ್ದ ನಾನು ಬಾಡೂಟಕ್ಕೆ ತೆರೆದುಕೊಂಡದ್ದು ಹೀಗೆ...

ಸಸ್ಯಹಾರಿಯಾಗಿದ್ದ ನಾನು ಬಾಡೂಟಕ್ಕೆ ತೆರೆದುಕೊಂಡದ್ದು ಹೀಗೆ…

- Advertisement -
- Advertisement -

ಇತ್ತೀಚಿಗಷ್ಟೇ ನಡೆದ #ಬಾಡೇನಮ್‌ಗಾಡು ಅಭಿಯಾನದ ಬಗ್ಗೆ ತಿಳಿದು, ನಮ್ಮ ಆಫೀಸಿನಲ್ಲಿ ಎಲ್ಲರೂ ಒಟ್ಟಿಗೆ ಬಾಡು ಸೇವಿಸುತ್ತಿದ್ದ ಫೋಟೋಗಳನ್ನ ನೋಡಿದಾಗ, ಇದೇ ನೆಪದಲ್ಲಿ ನಾನು ಸಂಶೋಧನೆ ಇನ್ಸ್ಟಿಟ್ಯೂಟಿನವರೆಲ್ಲರೂ ಒಂದು ದಿನ ಒಟ್ಟಿಗೆ ಬಾಡು ತಿನ್ನಬಹುದಲ್ಲಾ ಅನ್ನಿಸಿತು. ನಾಳೆ ನಾವು ಒಂದಷ್ಟು ಜನ ಮತ್ತಿಕೆರೆಯ ಚಂದ್ರಪ್ಪ ಹೋಟೆಲಿನಲ್ಲಿ ಬಾಡು ತಿನ್ನಲಿದ್ದೇವೆ, ನೀವೂ ಜೊತೆಯಾಗಿ ಎಂದು ಒಂದು ಸ್ಟೇಟಸ್ ಬರೆದು ಹಾಕಿದೆ. ಅದನ್ನು ಗಮನಿಸಿದ ಕಿರಿಯ ಸಂಬಂಧಿಕರೊಬ್ಬರು, ನಮ್ಮ ಕುಟುಂಬದಲ್ಲಿ ಹಿರಿಯರೆನಿಸಿರುವ ಸಂಬಂಧಿಕರಿಗೆ ಆ ಸ್ಟೇಟಸ್‌ಅನ್ನು ಕಳುಹಿಸಿಕೊಟ್ಟು, ನೋಡಿ ನಮ್ಮ ಮನೆತನದ ಗೌರವ ಏನಾಗಬೇಕು, ನೀವಾದರೂ ಬುದ್ಧಿ ಹೇಳಿ ಅಂದರಂತೆ!

ಅದಕ್ಕವರು ನನಗೆ ಕರೆ ಮಾಡಿ, ಹಾಗೆ-ಹೀಗೆ ಅಂತ ’ಬುದ್ಧಿವಾದ’ ಹೇಳಲು ಶುರುವಿಟ್ಟರು. ಅವರು ಹೇಳಿದ್ದು ಇಷ್ಟು. ’ಈಗಿನ ಕಾಲದಲ್ಲಿ ನೀನು ಇದು ತಿನ್ನು ಅದು ತಿನ್ನು ಎಂದೆಲ್ಲಾ ಹೇಳಿದರೆ ನೀವು ಕೇಳುವುದಿಲ್ಲ, ನಾವು ಹೇಳುವುದಕ್ಕೂ ಆಗುವುದಿಲ್ಲ. ತಿನ್ನುವುದು ನಿಮ್ಮ ಹಕ್ಕು ಎನ್ನುತ್ತೀರಿ. ಆದರೆ ಅದನ್ನು ಪ್ರಚಾರ ಮಾಡಬಾರದಿತ್ತು. ಅದು ಅಗತ್ಯವಿರಲಿಲ್ಲ’ ಎಂದರು. ಹಾಗೆಲ್ಲ ಹಾಕಬೇಡ, ಜೋಯಿಸರ ಮನೆಯವರೇ ಹೀಗಾದರೆ ಹೇಗೆ ಎಂದು ಜನ ನಮ್ಮನ್ನು ಆಡಿಕೊಂಡು ನಗುತ್ತಾರೆ, ಪ್ರಶ್ನಿಸುತ್ತಾರೆ. ಅದಕ್ಕೇನು ಹೇಳುವುದು? ನಮಗೆ ಅವಮಾನವಾಗುತ್ತೆ. ಅದು ನಿಮ್ಮ ತಂದೆ-ತಾಯಿಯರಿಗೆ ಎಷ್ಟು ನೋವಾಗಿರಬಹುದು ಎಂದು ಯೋಚಿಸು ಎಂದರು. ಅದೂಅಲ್ಲದೆ, ಅವರು ನಾವು ಬಾಡು ತಿನ್ನಲಿದ್ದ ಜಾಗಕ್ಕೆ ಬಂದು ಅದನ್ನು ನಿಲ್ಲಿಸಲಿಕ್ಕೆ ಹೊರಡುವ ಯೋಚನೆಯಲ್ಲಿದ್ದಾಗ ಅವರನ್ನು ಅವರ ಪತ್ನಿ ತಡೆದರಂತೆ.

ನಾನು ಅವರಿಗೆ ಕೇಳಿದ್ದಿಷ್ಟು. ನಮ್ಮ ಸಂಬಂಧಿಕರೇ ಉಪ್ಪಿಟ್ಟು, ಮೊಸರನ್ನದ ಫೋಟೋಗಳನ್ನ ದಿನನಿತ್ಯ ಹಂಚಿಕೊಂಡಾಗ ಬೇಸರ ಎನಿಸದ ನಮಗೆ, ಬಾಡಿನ ಫೋಟೋಗಳು ನೋಡಿದಾಗ ಯಾಕಿಷ್ಟು ಕಸಿವಿಸಿ ಆಗುತ್ತದೆ? ನನ್ನ ಆಹಾರ ನನ್ನ ಹಕ್ಕು. ನಿಮಗೆ ನಾನು ಬಾಡು ತಿನ್ನುವುದರಿಂದ ಅವಮಾನವಾಗುವುದಾದರೆ ಅದನ್ನು ನೀವೇ ಬಗೆಹರಿಸಿಕೊಳ್ಳಿ. ಒಂದು ಕುಟುಂಬದ ’ಶ್ರೇಷ್ಠ’ತೆಗೂ ಅವರ ಊಟಕ್ಕೂ ಸಂಬಂಧ ಕಟ್ಟುವುದನ್ನೇ ನಾವು ಇಲ್ಲಿ ಪ್ರಶ್ನಿಸುತ್ತಿರುವುದು ಎಂದೆ. ’ನೀನು, ನಿನ್ನ ಬುದ್ಧಿಯಂತೆ, ಇಚ್ಛೆಯಂತೆ ನಡೆದುಕೊಂಡರೂ, ನಮ್ಮ ಕುಟುಂಬಕ್ಕೆ (ಅವರು ಇಲ್ಲಿ ಕುಟುಂಬ ಎಂದು ಹೇಳುತ್ತಿರುವುದು, ನಿಜವಾಗಿ ಜಾತಿಯೇ ಆಗಿದೆ) ಅದು ಬಂದಿಲ್ಲ’ ಎಂಬುದು ಅವರ ವಾದವಾಗಿತ್ತು.

ಇದು ಇಂದಿನ ದಮನಕಾರಿ ವ್ಯವಸ್ಥೆಯ ಮುಖ್ಯ ಲಕ್ಷಣವೊಂದನ್ನು ಮುಂದಿಡುತ್ತಿದೆ. ಜಾತೀಯತೆ, ಪಿತೃಪ್ರಧಾನತೆ ಮತ್ತು ಮತಧರ್ಮಗಳು ಸೇರಿದಂತೆ ಇತರೆ ವ್ಯವಸ್ಥೆಗಳು ಜನರ ಜೀವನವನ್ನು ಮತ್ತು ನಡವಳಿಕೆಗಳನ್ನು ಪ್ರಭಾವಿಸುತ್ತವೆ ಎಂಬುದು ಒಂದು ಸಿದ್ಧಾಂತ. ಅದಕ್ಕೆ ಪ್ರತಿಯಾಗಿ ವ್ಯಕ್ತಿಗಳೇ ತಮ್ಮ ಜೀವನವನ್ನು ನಿರ್ಧರಿಸಿಕೊಳ್ಳುತ್ತಾರೆ ಎಂಬ ವ್ಯಕ್ತಿವಾದದ ಸಿದ್ಧಾಂತವೂ ಇದೆ. ಇಂದು ವ್ಯಕ್ತಿವಾದವನ್ನೇ ಮುಂದಿಡುತ್ತಾ, ನಿಮ್ಮ ಜೀವನವನ್ನು ನೀವು ಕಟ್ಟಿಕೊಳ್ಳುವುದು, ನಿಮ್ಮ ಶ್ರಮವೇ ನಿಮ್ಮ ಜೀವನವನ್ನು ನಿರ್ಧರಿಸುವುದು ಎಂದು ಜನರಿಗೆ ಹೇಳುತ್ತಾ, ವ್ಯಕ್ತಿಯೊಬ್ಬನಿಗೆ ತಾನು ಉಣ್ಣುವ ಆಹಾರವನ್ನು ಆಯ್ದುಕೊಳ್ಳುವ ’ಆಯ್ಕೆ’ಯಿದೆ ಎಂದು ನಂಬಿಸುತ್ತಲೇ, ಮತ್ತೊಂದೆಡೆ ’ಕುಟುಂಬ’ (ಜಾತಿ) ಎಂಬ ವ್ಯವಸ್ಥೆಯ ಕಟ್ಟಲೆಯನ್ನು ಒಟ್ಟೊಟ್ಟಿಗೆ ಮುಂದುವರೆಸಿಕೊಂಡು ಹೋಗುತ್ತಿದೆ. ಈ ವ್ಯವಸ್ಥೆಯು ತನಗೆ ಹಿತವೆನಿಸುವ ರೀತಿಯಲ್ಲಿ ವ್ಯಕ್ತಿವಾದ ಮತ್ತು ದಮನಕಾರಿ ವ್ಯವಸ್ಥೆಗಳನ್ನು ಒಟ್ಟೊಟ್ಟಿಗೆ ಮುಂದೆ ಕೊಂಡೊಯ್ಯುತ್ತಿದೆ. ಈ ವ್ಯವಸ್ಥೆಯಲ್ಲಿ ನನ್ನಂತ ಒಂದಷ್ಟು ಜನರು ಮಾತ್ರವೇ ತಮ್ಮ ’ಆಯ್ಕೆ’ಯನ್ನು ಚಲಾಯಿಸಬಹುದಾಗಿದೆ. ಅವರು ಯಾರು ಎಂಬುದು ಕೂಡ ಜಾತಿ ಮತ್ತು ಇತರೆ ದಮನಕಾರಿ ವ್ಯವಸ್ಥೆಗಳಿಂದಲೇ ನಿರ್ಧಾರವಾಗುತ್ತದೆ. ಹೀಗಿರುವಾಗ, ಆ ’ಆಯ್ಕೆ’ ಸಾಧ್ಯವಿದ್ದಾಗ ನನ್ನಂತೆ ಬ್ರಾಹ್ಮಣ ಜಾತಿಯ-ಮೇಲುಜಾತಿಯೆಂದು ಕರೆದುಕೊಳ್ಳಲ್ಪಟ್ಟ ಶೋಷಕ ಜಾತಿಯ ಮನೆಗಳ-ಮನಸ್ಸುಗಳ ಕೊಳಕನ್ನು ಪ್ರಶ್ನಿಸುವುದಕ್ಕೆ ಆ ’ಆಯ್ಕೆ’ಯನ್ನು ಬಳಸುವುದು ಸೂಕ್ತ ಎಂದು ನಾನು ನಂಬಿದ್ದೇನೆ.

ಇನ್ನೊಂದು ವಿಷಯವಿದೆ. ಪಾಪ ನನ್ನ ಆ ಸಂಬಂಧಿಕರು, ನಾನು ಇದೇ ಮೊದಲಬಾರಿ ಬಾಡು ತಿನ್ನುತ್ತಿರುವುದು ಎಂದು ಎಣಿಸಿರಬೇಕು. ಅದಕ್ಕೆ ಅಷ್ಟು ಕೋಪ, ಸಿಟ್ಟು, ಆಕ್ರೋಶ. ನಾನು ಹೈದರಾಬಾದಿನ ಟಿಸ್‌ನಲ್ಲಿ (TISS) ಕಮ್ಯುನಿಸ್ಟರು, ಅಂಬೇಡ್ಕರವಾದಿಗಳ ಜೊತೆ ಸೇರಿಯೇ ಹೀಗಾದೆ ಎಂದು ಅವರೂ ಸೇರಿದಂತೆ ನನ್ನ ಹೆತ್ತವರೂ ನಂಬಿ ತಿಳಿದಿರುವುದುಂಟು. ಆದರೆ, ಹಾಗೇನಿಲ್ಲ. ಸಸ್ಯಾಹಾರಿತ್ವದ ಬಗ್ಗೆ ಬಹಳ ಹೆಮ್ಮೆಪಡುತ್ತಿದ್ದ ನಾನು, ಒಮ್ಮೆ ಮೈಸೂರಿನಿಂದ ಮಧ್ಯರಾತ್ರಿ ಸೈಕಲಿನಲ್ಲಿ ಬೆಂಗಳೂರಿನ ಕಡೆಗೆ ಹೊರಟೆ. ಶ್ರೀರಂಗಪಟ್ಟಣದ ಬಳಿ ಬರುವ ಹೊತ್ತಿಗೆ ಸುಮಾರು 2 ಗಂಟೆಯಾಗಿತ್ತು. ಹಸಿದಿತ್ತು. ಕಾಸು ಕಡಿಮೆಯಿತ್ತು. ದೊಡ್ಡ ಹೋಟೆಲುಗಳಿಗೆ ಹೋಗುವಷ್ಟಿರಲಿಲ್ಲ. Omn ಗಾಡಿಯೊಂದರಲ್ಲಿ ಊಟ ಸಿಗುತ್ತಿತ್ತು. ಹೋಗಿ ನೋಡಿದೆ. ಪರೋಟ ಮತ್ತು ಚಿಕನ್ ಕರಿಯಷ್ಟೇ ಇದ್ದದ್ದು. ಒಂದು ಕ್ಷಣ ಯೋಚಿಸಿದೆ. ಹಸಿವಿಗೆ ಆಹಾರವೇ ಮುಖ್ಯ. ಏನಾದರೇನು? ಎಂದು ತಿಂದೆ. ಬಹಳ ರುಚಿಕರವಾಗಿದ್ದ ಚಿಕನ್ ತಿಂದ ನನಗೆ, ಇಷ್ಟು ವರ್ಷ ಇಷ್ಟು ರುಚಿಯಾದ ಆಹಾರವನ್ನು ಏಕೆ ತಿನ್ನಲಿಲ್ಲ ಅನ್ನಿಸಿತು. ಅಲ್ಲಿಂದ ಇಲ್ಲಿಗೆ, ಅವಕಾಶ ಸಿಕ್ಕಾಗಲೆಲ್ಲಾ ಚಿಕನ್, ಮಟನ್ ಅಷ್ಟೇ ಅಲ್ಲದೆ ಪೋರ್ಕ್ ಮತ್ತು ಬೀಫ್ ಸೇರಿದಂತೆ ಎಲ್ಲಾ ಬಾಡನ್ನು ಮಿಸ್ ಮಾಡದೆ ತಿನ್ನುತ್ತೇನೆ. ಇಂದು ನನಗೆ ವೈಯಕ್ತಿಕವಾಗಿ, ಮಾಂಸಾಹಾರದಲ್ಲಿರುವಷ್ಟು ರುಚಿ ಮತ್ತು ವೆರೈಟಿಯ ಖಾದ್ಯಗಳು ಸಸ್ಯಾಹಾರದಲ್ಲಿಲ್ಲ ಎನಿಸುತ್ತದೆ. ಮಾಂಸಾಹಾರ ಸೇವನೆ ಇಂದು ನನ್ನ ಸಿದ್ಧಾಂತದ ಒಂದು ಭಾಗ ಎಂಬುದು ಎಷ್ಟು ಸತ್ಯವೋ ನಾನು ಮಾಂಸಾಹಾರ ಸೇವನೆಗೆ ಇಳಿದಿದ್ದು ಹಸಿವಿನಿಂದ, ಸಿದ್ಧಾಂತಗಳಿಂದಲ್ಲ ಎಂಬುದೂ ಅಷ್ಟೇ ಸತ್ಯ.

ಅದರಂತೆಯೇ, ಎಲ್ಲಾ ಜಾತಿ, ವರ್ಗಗಳ ಮಕ್ಕಳು ಸೇರಿ ಬೆರೆಯಬೇಕಿರುವ ಶಾಲಾ-ಕಾಲೇಜುಗಳ ಬಹಳಷ್ಟು ಕ್ಯಾಂಟೀನುಗಳಲ್ಲಿ ದುಡ್ಡುಕೊಟ್ಟರೂ ಮಾಂಸಾಹಾರವೇಕೆ ಸಿಗುವುದಿಲ್ಲ ಎಂಬ ಪ್ರಶ್ನೆಯನ್ನೂ #ಬಾಡೇನಮ್‌ಗಾಡು ಹಿನ್ನೆಲೆಯಲ್ಲಿ ಕೇಳಬೇಕೆನ್ನಿಸಿತು.

  • ಶಶಾಂಕ್, NIASನಲ್ಲಿ ಸಂಶೋಧನಾ ವಿದ್ಯಾರ್ಥಿ

ಇದನ್ನೂ ಓದಿ: ಆಹಾರ ಶ್ರೇಷ್ಠತೆಯ ರಾಜಕೀಯದ ವಿವಿಧ ಮುಖಗಳು

ಇದನ್ನೂ ಓದಿ: ಉತ್ತರ ಕನ್ನಡದಲ್ಲಿ ತರಕಾರಿ ದುಬಾರಿ; ಕೃಷಿಕ-ಗ್ರಾಹಕ ಕಂಗಾಲು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬೆಂಗಳೂರಿನ ಎನ್‌ಎಲ್‌ಎಸ್‌ಐಯು‌ನಲ್ಲಿ ಉಮರ್ ಖಾಲಿದ್ ಸಾಕ್ಷ್ಯಚಿತ್ರ ಪ್ರದರ್ಶನ; ಕೇಂದ್ರದ ಹಸ್ತಕ್ಷೇಪಕ್ಕೆ ಎಬಿವಿಪಿ ಮನವಿ

ಬೆಂಗಳೂರಿನಲ್ಲಿರುವ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು‌) ಜೈಲಿನಲ್ಲಿರುವ ಹೋರಾಟಗಾರ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರದ ಪ್ರದರ್ಶನವನ್ನು ಕಾಯಂ ಆಗಿ ರದ್ದುಗೊಳಿಸಲು ಆರ್‌ಎಸ್ಎಸ್ ಸಂಯೋಜಿತ ವಿದ್ಯಾರ್ಥಿ ಸಂಘಟನೆ ಎಬಿವಿಪಿ ಕೇಂದ್ರ...

‘NAZA’ಗೆ ವೆನಿಸ್ ವಿಶೇಷ ಜ್ಯೂರಿ ಪ್ರಶಸ್ತಿ; ಸ್ವದೇಶ ಇಸ್ರೇಲ್‌ನ ಎಐ ಹತ್ಯಾಕಾಂಡ ಬಯಲಿಗೆಳೆದ ನಿರ್ದೇಶಕರಿಗೆ ಪೌರತ್ವ ಕಸಿಯುವ ಬೆದರಿಕೆ

ವೆನಿಸ್ ಚಲನಚಿತ್ರೋತ್ಸವದಲ್ಲಿ ವಿಶೇಷ ಜ್ಯೂರಿ ಪ್ರಶಸ್ತಿ ಗೆದ್ದ ‘NAZA’ ಸಾಕ್ಷ್ಯಚಿತ್ರದ ನಿರ್ದೇಶಕರ ವಿರುದ್ಧ ಇಸ್ರೇಲಿ ಸಂಸ್ಕೃತಿ ಸಚಿವ ಮಿಕಿ ಜೋಹರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ‘ರಾಜ್ಯಕ್ಕೆ ದ್ರೋಹ’ ಎಸಗಿದ್ದಾರೆಂದು ಆರೋಪಿಸಿ ಅವರ ಇಸ್ರೇಲಿ...

ಕರ್ನಾಟಕದಲ್ಲಿ ಬರದ ಬರೆ; ನೀರು, ವಿದ್ಯುತ್‌ ಕೊರತೆ ಸಾಧ್ಯತೆ: ಸಿಎಂ ಡಿಕೆ ಶಿವಕುಮಾರ್‌ ಎಚ್ಚರಿಕೆ

ದುರ್ಬಲ ಮುಂಗಾರು ಹಾಗೂ ಮಳೆಯ ಕೊರತೆಯಿಂದ ಕರ್ನಾಟಕದಲ್ಲಿ ಬರ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತಿದ್ದು, ಮುಂದಿನ ದಿನಗಳಲ್ಲಿ ರಾಜ್ಯವು ಕುಡಿಯುವ ನೀರು ಮತ್ತು ವಿದ್ಯುತ್‌ ಕೊರತೆಯನ್ನು ಎದುರಿಸುವ ಸಾಧ್ಯತೆಯಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌...

2,000 ರೂ.ವರೆಗಿನ UPI ಪಾವತಿಗೆ ಶುಲ್ಕವಿಲ್ಲ ಎಂದ ಕೇಂದ್ರ ಸರ್ಕಾರ

ಡಿಜಿಟಲ್ ಪಾವತಿ ಬಳಸುವ ಕೋಟ್ಯಂತರ ಸಾಮಾನ್ಯ ಜನರಿಗೆ ಕೇಂದ್ರ ಹಣಕಾಸು ಸಚಿವಾಲಯ ಮಹತ್ವದ ಸ್ಪಷ್ಟನೆ ನೀಡಿದ್ದು, 2,000 ರೂಪಾಯಿವರೆಗಿನ ಯುಪಿಐ (UPI) ವಹಿವಾಟುಗಳಿಗೆ ಯಾವುದೇ ರೀತಿಯ ಶುಲ್ಕ ವಿಧಿಸುವಂತಿಲ್ಲ ಎಂದು ಅಧಿಸೂಚನೆ ಹೊರಡಿಸಿದೆ....

ಯಾದಗಿರಿ| ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತರ ಮೇಲೆ ಮಾರಣಾಂತಿಕ ಹಲ್ಲೆ

ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತ ಸಮುದಾಯದ ಭಕ್ತರ ಮೇಲೆ ಸವರ್ಣೀಯರು ಮಾರಣಾಂತಿಕ ಹಲ್ಲೆ ನಡೆದಿರುವ ಆರೋಪ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗುರುಸುಣಿಗಿ ಗುಡ್ಡದಲ್ಲಿ ಕೇಳಿಬಂದಿದೆ. ಚಾಮನಾಳ ಗ್ರಾಮದ ದಲಿತ ಭಕ್ತರನ್ನು ಗುರಿಯಾಗಿಸಿಕೊಂಡು ಗುರುಸುಣಿಗಿ...

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...