Homeಕರ್ನಾಟಕಕೆಜಿಎಫ್: ದಲಿತ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ- 10 ದಿನ ಕಳೆದರೂ ಆರೋಪಿಗಳನ್ನು ಬಂಧಿಸದ ಪೊಲೀಸರು!

ಕೆಜಿಎಫ್: ದಲಿತ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ- 10 ದಿನ ಕಳೆದರೂ ಆರೋಪಿಗಳನ್ನು ಬಂಧಿಸದ ಪೊಲೀಸರು!

“ಇದು ತುಂಬಾ ಸೂಕ್ಷ್ಮವಾದ ವಿಷಯವಾಗಿದ್ದು, ತನಿಖೆಯಿಂದ ಸತ್ಯಾಂಶ ಹೊರ ಬರಲಿದೆ. ಅದಕ್ಕೂ ಮೊದಲೇ ಏನನ್ನೂ ಹೇಳಲು ಇಚ್ಚಿಸುವುದಿಲ್ಲ” ಎಂದು ಕೆಜಿಎಫ್ ಶಾಸಕರಾದ ರೂಪ ಶಶಿಧರ್ ಹೇಳಿದ್ದಾರೆ.

- Advertisement -
- Advertisement -

ದಲಿತರೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ, ಜಾತಿ ನಿಂದನೆ ಮಾಡಿರುವ ಘಟನೆ ಕೆಜಿಎಫ್ ನ ಕೆ.ಸಿ.ರೆಡ್ಡಿ ಗಾಂಡ್ಲ ಹಳ್ಳಿಯಲ್ಲಿ ನಡೆದಿದೆ ಎಂದು ತಾಲೂಕಿನ ಆಂಡರ್‌ಸನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆಗೊಳಗಾದ ವ್ಯಕ್ತಿ ಶಿವರಾಮಪ್ಪ, ಈ ಸಂಬಂಧ ತನ್ನದೇ ಗ್ರಾಮದವರಾದ ಮಂಜುನಾಥ ರೆಡ್ಡಿ ಮತ್ತು ಚಂದ್ರಾ ರೆಡ್ಡಿ ಎಂಬುವವರ ಮೇಲೆ ದೂರು ನೀಡಿದ್ದು, ಐಪಿಸಿ ಸೆಕ್ಷನ್ 323, 324, 504, 506 ಮತ್ತು 34 ಹಾಗೂ SC, ST ದೌರ್ಜನ್ಯ ಪ್ರತಿಬಂಧಕ ಕಾಯ್ದೆ-2005 (ತಿದ್ದುಪಡಿ)ರ ಅಡಿಯಲ್ಲಿ ಎಫ್.ಐ.ಆರ್ ದಾಖಲಾಗಿದೆ.

ಆಗಸ್ಟ್ 29, 2020 ರಂದು ಪ್ರಕರಣ ದಾಖಲಿಸಿದ್ದರೂ ಸಹ, ಆರೋಪಿಗಳನ್ನು ಇನ್ನೂ ಬಂಧಿಸಲಾಗಿಲ್ಲ ಎಂದು ಶಿವರಾಮಪ್ಪನವರ ಸಹೋದರರಾದ ನಾರಾಯಣ್ ಕ್ಯಾಸಂಬಳ್ಳಿ ಆರೋಪಿಸಿದ್ದಾರೆ.

“ಆಗಸ್ಟ್ 29 ರಂದು ಬೆಳಿಗ್ಗೆ 9 ಗಂಟಗೆ ಈ ಪ್ರಕರಣದ ದೂರನ್ನು ಪೊಲೀಸ್ ಠಾಣೆಗೆ ನೀಡಿದ್ದರೂ, ಅಂದು ಸಂಜೆಯವರೆಗೂ ಯಾವುದೇ ರೀತಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳದೇ, ಯಾವುದೇ ಕ್ರಮ ಕೈಗೊಂಡಿರಲಿಲ್ಲ. ನಂತರ ಉನ್ನತ ಅಧಿಕಾರಿಗಳಿಂದ ಒತ್ತಡ ಹಾಕಿಸಿದ್ದರಿಂದ ಅಂದು ರಾತ್ರಿ 11 ಗಂಟೆಗೆ ಪ್ರಕರಣ ದಾಖಲಿಸಿ ಎಫ್.ಐ.ಆರ್ ಹಾಕಿದ್ದಾರೆ” ಎಂದು ಅವರು ಹೇಳಿದರು.

ಶಿವರಾಮಪ್ಪನವರು ತಮಗೆ ಸೇರಿದ ಖಾಲಿ ನಿವೇಶನದಲ್ಲಿ ಕಲ್ಲುಗಳಿಂದ ಕಾಂಪೌಂಡ್ ಕಟ್ಟುತ್ತಿದ್ದ ವೇಳೆ ಅದೇ ಊರಿನ ರಘುರಾಮ ರೆಡ್ಡಿ ಎಂಬುವವರ ಮಕ್ಕಳಾದ ಮಂಜುನಾಥ ರೆಡ್ಡಿ ಮತ್ತು ಚಂದ್ರಾ ರೆಡ್ಡಿ ಎಂಬುವವರು, ಶಿವರಾಮಪ್ಪನವರ ಮೇಲೆ ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಸೈಜುಗಲ್ಲು ಎತ್ತಿ ಹಾಕಿ ದೊಣ್ಣೆ ಮತ್ತು ಮಚ್ಚುಗಳಿಂದ ಮಾರಣಾಂತಿಕವಾದ ಹಲ್ಲೆ ನಡೆಸಿದ್ದಾರೆ ಎಂದು ದೂರು ದಾಖಲಾಗಿದೆ.

ಇದನ್ನೂ ಓದಿ: ಮೋದಿ ಜಿಂದಾಬಾದ್, ಜೈ ಶ್ರೀ ರಾಮ್ ಎನ್ನಲು ನಿರಾಕರಿಸಿದ ಮುಸ್ಲಿಂ ಆಟೋ ಡ್ರೈವರ್ ಮೇಲೆ ಹಲ್ಲೆ

“ದೂರು ದಾಖಲಾಗಿ 10 ದಿನಗಳು ಕಳೆದರೂ, ಈವರೆಗೆ ಆರೋಪಿಗಳನ್ನು ಬಂಧಿಸದ ಪೋಲಿಸರ ವರ್ತನೆಯನ್ನು ಖಂಡಿಸಿ, ಜಿಲ್ಲೆ ಮತ್ತು ತಾಲ್ಲೂಕಿನ ದಸಂಸ ಮತ್ತು ಇತರ ದಲಿತ ಸಂಘಟನೆಗಳು ಕಳೆದ 8 ದಿನಗಳಿಂದ ಪ್ರತಿಭಟನೆ ಮಾಡುತ್ತಿದೆ. ಇಂದೂ ಕೂಡ ಕೆಜಿಎಫ್ ನ ತಾಲ್ಲೂಕು ಕಛೇರಿ ಮುಂಭಾಗ ದಲಿತ ಸಂಘಟನೆಗಳು ಜಂಟಿಯಾಗಿ ಪ್ರತಿಭಟನೆಯನ್ನು ಹಮ್ಮಿಕೊಂಡಿತ್ತು. ಎಲ್ಲಾ ಅಗತ್ಯ ದಾಖಲೆಗಳೂ ಹಲ್ಲೆಗೊಳಗಾದವರ ಪರವಾಗಿವೆ ಎಂದು ತಹಶೀಲ್ದಾರ್ ಅವರೇ ಹೇಳಿದ್ದಾರೆ. ಆದರೂ ಪೊಲೀಸರು ಆರೋಪಿಗಳನ್ನು ಬಂಧಿಸಿಲ್ಲ” ಎಂದು ನಾರಾಯಣ ಕ್ಯಾಸಂಬಳ್ಳಿ ಆರೋಪಿಸಿದ್ದಾರೆ.

ಈ ನಡುವೆ ಕೋಲಾರ ಜಿಲ್ಲಾ ಅಟ್ರಾಸಿಟಿ ಕಾಯ್ದೆಯಡಿ ದಲಿತ ದೌರ್ಜನ್ಯ ತಡೆ ಸಮಿತಿ ಗ್ರಾಮಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿದೆ‌. ದೌರ್ಜನ್ಯಕ್ಕೆ ಒಳಗಾದ ಶಿವರಾಮಪ್ಪ ಕುಟುಂಬದವರಿಗೆ ಧೈರ್ಯವನ್ನು ತುಂಬಿದೆ.

ಪ್ರಸ್ತುತ ಪ್ರಕರಣದ ವಿವಾದಿತ ಖಾಲಿ ನಿವೇಶನವನ್ನು ಶಿವರಾಮಪ್ಪನವರ ಸಹೋದರರಾದ ಸತ್ಯಮೂರ್ತಿ ಅವರು 2013 ರಲ್ಲಿಯೇ ಖರೀದಿಸಿದ್ದರು. ಈ ನಿವೇಶನವು ಅದೇ ಗ್ರಾಮದವರಾದ ಕದಿರೆಪ್ಪ ಎಂಬುವವರಿಗೆ 1975ರಲ್ಲಿ ಪಂಚಾಯಿತಿಯ ಕಡೆಯಿಂದ ಮಂಜೂರಾಗಿದ್ದು, ಆಗಲೇ ಇದಕ್ಕೆ ಸಂಬಂಧಿಸಿದ ಹಕ್ಕು ಪತ್ರವನ್ನು ಪಡೆದುಕೊಂಡಿದ್ದರು.

“ಆದರೆ ಈಗ, ಆರೋಪಿಗಳು ಈ ಸ್ಥಳ ತಮಗೆ ಸೇರಿದ್ದೆಂದು ಹಲವು ದಿನಗಳಿಂದ ತೊಂದರೆ ಕೊಡುತ್ತಿದ್ದರು. ಇಲ್ಲಿ ನಾವು ಸಾವಿತ್ರಿಭಾಯಿ ಫುಲೆ ಅವರ ಹೆಸರಿನಲ್ಲಿ ಗ್ರಂಥಾಲಯವೊಂದನ್ನು ಕಟ್ಟಿಸಿ, ಪ್ರಗತಿಪರ ಚಟುವಟಿಕೆಗಳ ತಾಣವನ್ನಾಗಿ ಮಾಡಬೇಕು ಎಂಬ ಬಯಕೆಯನ್ನು ಹೊಂದಿದ್ದೆವು. ಆದರೆ ಆರೋಪಿಗಳು ಬಂದು ಇಲ್ಲಿ ದೇವಸ್ಥಾನ ಕಟ್ಟಿಸಬೇಕು ಎಂದು ದಲಿತರನ್ನೇ ದಲಿತರ ಮೇಲೆ ಎತ್ತಿಕಟ್ಟಿ ಪರಿಸ್ಥಿತಿ ಬಿಗಡಾಯಿಸುವಂತೆ ಮಾಡಿದ್ದಾರೆ” ಎಂದು ನಾರಾಯಣ್ ಕ್ಯಾಸಂಬಳ್ಳಿ ಹೇಳಿದ್ದಾರೆ.

ಇದನ್ನೂ ಓದಿ: ಪೊಲೀಸರ ಎದುರೇ ದಲಿತರ ಮೇಲೆ ಹಲ್ಲೆ ಆರೋಪ: ಠಾಣೆ ಎದುರು ಪ್ರತಿಭಟನೆ

“ಸುಮಾರು 10 ದಿನಗಳಿಂದ ಇಷ್ಟೆಲ್ಲಾ ಬೆಳವಣಿಗೆಗಳಾದರೂ ಯಾವುದೇ ಜನಪ್ರತಿನಿಧಿಗಳು ಗ್ರಾಮದತ್ತ ಸುಳಿದು ಸಾಂತ್ವನ ಹೇಳುವ‌ ಕೆಲಸ ಮಾಡಿಲ್ಲ. ಆದರೆ ಕಳೆದ ಸೆಪ್ಟಂಬರ್ 4 ರಂದು ತನ್ನ ಬೆಂಬಲಿಗರೊಂದಿಗೆ ನಾಲ್ಕಾರು ಕಾರುಗಳಲ್ಲಿ ಗ್ರಾಮಕ್ಕೆ ದಿಢೀರ್ ಭೇಟಿಕೊಟ್ಟ ಕೆಜಿಎಫ್ ಕ್ಷೇತ್ರದ MLA ರೂಪ ಶಶಿಧರ್ ಅವರು, ನಮ್ಮನ್ನಾಗಲಿ ಅಥವಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಿವರಾಮಪ್ಪ ಅವರನ್ನಾಗಲಿ ಸೌಜನ್ಯಕ್ಕೂ ಭೇಟಿ ಮಾಡದೆ, ಆರೋಪಿಗಳ ತಂದೆಯಾದ ರಘುರಾಮ ರೆಡ್ಡಿ ಮತ್ತು ಅವರ ಬೆಂಬಲಿತರೂ ಸೇರಿದಂತೆ ಗ್ರಾಮದ ಸವರ್ಣೀಯ ಸಮುದಾಯದವರೊಂದಿಗೆ ಪಂಚಾಯತಿ ಮಾಡಿ ಹಲ್ಲೆಗೊಳಗಾದವರು ಕೇಸು ದಾಖಲಿಸಿದ್ದೇ ತಪ್ಪು ಎಂಬಂತೆ ಮಾತನಾಡಿರುವುದು ನಿಜಕ್ಕೂ ದುರಂತ” ಎಂದು ಕುಟುಂಬಸ್ಥರು ತಮ್ಮ ಅಳಲು ತೋಡಿಕೊಂಡಿದ್ದಾರೆ.

“ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ತಡೆದು ರಕ್ಷಣೆ ನೀಡಬೇಕಾದ, ಸ್ವತಃ ದಲಿತ ಸಮುದಾಯದವರೇ ಆದ ಶಾಸಕರೇ ಹಲ್ಲೆಮಾಡಿದ ಆರೋಪಿಗಳ ಪರವಾಗಿ ನಿಂತಿರುವುದು ಅಮಾನವೀಯ ಮತ್ತು ಖಂಡನೀಯ. ಆರೋಪಿಗಳಾದ ಮಂಜುನಾಥ ರೆಡ್ಡಿ ಮತ್ತು ಚಂದ್ರಾ ರೆಡ್ಡಿ ಮತ್ತು ಅವರ ಕುಟುಂಬಕ್ಕೆ ಬೆಂಬಲವಾಗಿ ನಿಂತಿರುವ MLA ರೂಪ ಶಶಿಧರ್ ಅವರ ದಲಿತ ವಿರೋಧಿ ನಡೆಯನ್ನು ಖಂಡಿಸಬೇಕಿದೆ” ಎಂದು ಕುಟುಂಬದವರು ಆರೋಪಿಸಿದ್ದಾರೆ.

ಈ ಕುರಿತು ನಾನುಗೌರಿ.ಕಾಂಗೆ ಪ್ರತಿಕ್ರಿಯಿಸಿದ ಕೆಜಿಎಫ್ ಶಾಸಕರಾದ ರೂಪ ಶಶಿಧರ್ ಅವರು, “ಇದು ತುಂಬಾ ಸೂಕ್ಷ್ಮವಾದ ವಿಷಯವಾಗಿದ್ದು, ತನಿಖೆಯಿಂದ ಸತ್ಯಾಂಶ ಹೊರ ಬರಲಿದೆ. ಅದಕ್ಕೂ ಮೊದಲೇ ಏನನ್ನೂ ಹೇಳಲು ಇಚ್ಚಿಸುವುದಿಲ್ಲ” ಎಂದು ಹೇಳಿದರು.

“ವಾಸ್ತವದಲ್ಲಿ ಏನಾಗಿದೆ ಎಂಬುದು ನನಗೂ ಗೊತ್ತಿಲ್ಲ. ಹಾಗಾಗಿ ನೀವು ಇದರ ಕುರಿತು ಪೊಲೀಸಿನವರನ್ನೇ ಕೇಳಬೇಕು. ಅವರು ಪ್ರಕರಣದ ಎಲ್ಲಾ ವಿಷಯಗಳ ವಿವರ ನೀಡುತ್ತಾರೆ. ಸಂಪೂರ್ಣವಾಗಿ ತಿಳಿದುಕೊಂಡು ನಂತರ ನನ್ನನ್ನು ಪ್ರಶ್ನಿಸಿ. ಅದಾಗ್ಯೂ, ದಲಿತರೊಬ್ಬರ ಮೇಲಿನ ಹಲ್ಲೆಯ ಈ ಪ್ರಕರಣವನ್ನು ಸೂಕ್ಷ್ಮವಾಗಿ ಬಗೆಹರಿಸಿ, ಯಾರಿಗೂ ತೊಂದರೆಯಾಗದಂತೆ ಕ್ರಮ ತೆಗೆದುಕೊಳ್ಳಬೇಕು. ಈಗ ಇದಕ್ಕೆ ಸಂಬಂಧಿದಂತೆ ಹೋರಾಟ ಮಾಡುತ್ತಿರುವ ಸಂಘಟನೆಗಳಿಗೆ ಇದು ಬೇಕಿಲ್ಲ. ಈ ಸಮಸ್ಯೆಯನ್ನು ಗ್ರಾಮಸ್ಥರ ಸಮ್ಮುಖದಲ್ಲೇ ಬಗೆಹರಿಸಬಹುದಿತ್ತು. ಆದರೆ ಇದರ ಹಿಂದೆ ಬೇರೆ ಉದ್ದೇಶವೇ ಇದೆ. ಹಾಗಾಗಿ ಇದಕ್ಕೆ ಸಂಬಂಧಿಸಿದಂತೆ ಈಗ ನಾನು ಪ್ರತಿಕ್ರಿಯಿಸುವುದಿಲ್ಲ” ಎಂದು ಶಾಸಕಿ ರೂಪ ಶಶಿಧರ್ ಹೇಳಿದ್ದಾರೆ.

“ವಿಳಂಬವಾಗಿ ದೂರು ದಾಖಲಿಸಿಕೊಂಡಿದ್ದೇ ಅಲ್ಲದೆ ಆರೋಪಿಗಳನ್ನ ಬಂಧಿಸಲು ವಿಳಂಬ ಮಾಡುತ್ತಿರುವ, ಪರೋಕ್ಷವಾಗಿ ಆರೋಪಿಗಳಿಗೆ ಸಹಕರಿಸುತ್ತಿರುವ KGFನ ಆಂಡ್ರಸನ್ ಪೇಟೆ ಪೋಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಮುನಿಯಪ್ಪ ಅವರನ್ನು ಕೂಡಲೇ ಸೇವೆಯಿಂದ ಅಮಾನತು ಮಾಡಲು ಒತ್ತಾಯಿಸೋಣ. ಅಲ್ಲದೆ ದಲಿತರೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ಮತ್ತು ಜಾತಿ ನಿಂದನೆ ಮಾಡಿರುವ ಆರೋಪಿಗಳಾದ ಮಂಜುನಾಥ ರೆಡ್ಡಿ ಮತ್ತು ಚಂದ್ರಾ ರೆಡ್ಡಿ ಅವರನ್ನು ಕೂಡಲೇ ಬಂಧಿಸಿ ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು. ಹಲ್ಲೆಗೊಳಗಾದ ಶಿವರಾಮಪ್ಪ ಕುಟುಂಬಕ್ಕೆ ಸೂಕ್ತ ನ್ಯಾಯ ಮತ್ತು ರಕ್ಷಣೆಯನ್ನು ಒದಗಿಸಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (DSS), ಜಿಲ್ಲೆ ಮತ್ತು ತಾಲೂಕಿನ ಎಲ್ಲಾ ದಲಿತಪರ ಸಂಘಟನೆಗಳ ಒಕ್ಕೂಟ ಹಾಗೂ ದಲಿತ ಮಾನವ ಹಕ್ಕುಗಳ ವೇದಿಕೆ  ಒತ್ತಾಯಿಸುತ್ತದೆ. ಮತ್ತು ಮುಂದಿನ ದಿನಗಳಲ್ಲಿ ಉಗ್ರ ಹೋರಾಟಕ್ಕೆ ಮುಂದಾಗಲಿವೆ” ಎಂದು ಗೋವಿಂದರಾಜ ಬೈಚಗುಪ್ಪೆ ಹೇಳಿದ್ದಾರೆ.


ಇದನ್ನೂ ಓದಿ: ಜಾತಿ-ತಾರತಮ್ಯ: ವರದಿ ಮಾಡಿದ್ದ ತಮಿಳುನಾಡಿನ ಪತ್ರಕರ್ತನ ಮೇಲೆ ಹಲ್ಲೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಾಸನ ಪೆನ್‌ಡ್ರೈವ್ ಪ್ರಕರಣ: ಎಸ್‌ಐಟಿ ರಚಿಸಲು ಕೋರಿ ಮಹಿಳಾ ಆಯೋಗದಿಂದ ಸಿಎಂಗೆ ಪತ್ರ

0
ಹಾಸನ ಜಿಲ್ಲೆಯಲ್ಲಿ ಹರಿದಾಡುತ್ತಿರುವ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ವಿಶೇಷ ತಂಡ ರಚನೆ ಮಾಡುವಂತೆ ಕೋರಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ಅವರು ಸಿಎಂ ಸಿದ್ದರಾಮಯ್ಯ, ಗೃಹ ಸಚಿವ...