ಮುಂಬೈ: ಭಾರತೀಯ ನ್ಯಾಯಾಂಗ ರಂಗದ ಇತಿಹಾಸದಲ್ಲಿ ಅತ್ಯಂತ ಮಹತ್ವದ ಮತ್ತು ಕ್ರಾಂತಿಕಾರಿ ನಿರ್ಧಾರವೊಂದನ್ನು ಬಾಂಬೆ ಹೈಕೋರ್ಟ್‌ನ ಪ್ರತಿಷ್ಠಿತ ವಕೀಲರ ಸಂಘಟನೆಯಾದ ‘ಅಸೋಸಿಯೇಷನ್ ಆಫ್ ಅಡ್ವೊಕೇಟ್ಸ್ ಆಫ್ ವೆಸ್ಟರ್ನ್ ಇಂಡಿಯಾ’ (AAWI) ಕೈಗೊಂಡಿದೆ ಎಂದು LiveLaw ಮತ್ತು Bar and Bench ಕಾನೂನು ಜಾಲತಾಣಗಳು ವರದಿ ಮಾಡಿವೆ.
ತನ್ನ 162 ವರ್ಷಗಳ ಸುದೀರ್ಘ ಇತಿಹಾಸದಲ್ಲಿ ಮೊದಲ ಬಾರಿಗೆ ಮಹಿಳಾ ವಕೀಲರೊಬ್ಬರನ್ನು ಅಧ್ಯಕ್ಷ ಸ್ಥಾನಕ್ಕೆ ತರಲು ಸಂಘವು ಸರ್ವಾನುಮತದಿಂದ ನಿರ್ಧರಿಸಿದೆ. ಈ ಐತಿಹಾಸಿಕ ಬದಲಾವಣೆಗಾಗಿ ಸಂಘವು ತನ್ನ ಸಂವಿಧಾನ ಮತ್ತು ನಿಯಮಾವಳಿಗಳಿಗೆ ಮಹತ್ವದ ತಿದ್ದುಪಡಿಗಳನ್ನು ತಂದಿದ್ದು, ಅತ್ಯುನ್ನತ ಅಧ್ಯಕ್ಷ ಸ್ಥಾನವನ್ನು ಮಹಿಳೆಯರಿಗೆ ಮೀಸಲಿಟ್ಟ ಭಾರತದ ಮೊದಲ ಬಾರ್ ಅಸೋಸಿಯೇಷನ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಸಂವಿಧಾನ ತಿದ್ದುಪಡಿ ಮತ್ತು ಮಹಿಳಾ ಮೀಸಲಾತಿ
ಆಗಸ್ಟ್ 21 ರಂದು ನಡೆದ ಸಂಘದ ವಿಶೇಷ ಸಾಮಾನ್ಯ ಸಭೆಯಲ್ಲಿ ಈ ಮಹತ್ವದ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ. AAWI ಅಧ್ಯಕ್ಷ ಪ್ರಶಾಂತ್ ರೇಲೇಕರ್ ನೇತೃತ್ವದ ಸಾಂವಿಧಾನಿಕ ತಿದ್ದುಪಡಿ ಸಮಿತಿಯು ನೀಡಿದ ಶಿಫಾರಸುಗಳ ಆಧಾರದ ಮೇಲೆ ಈ ನಿರ್ಧಾರಕ್ಕೆ ಬರಲಾಗಿದೆ.
ಹೊಸ ನಿಯಮಾವಳಿಗಳ ಪ್ರಕಾರ ಸಂಘದ ಚುನಾವಣೆಗಳಲ್ಲಿ ಪ್ರತಿ ಮೂರು ಅವಧಿಗಳ ಪೈಕಿ ಒಂದು ಬಾರಿ ಅಧ್ಯಕ್ಷ ಸ್ಥಾನವನ್ನು ಕಡ್ಡಾಯವಾಗಿ ಮಹಿಳಾ ವಕೀಲರಿಗೆ ಮೀಸಲಿಡಲಾಗುತ್ತದೆ. ಅಧ್ಯಕ್ಷ ಸ್ಥಾನವು ಮಹಿಳೆಯರಿಗೆ ಮೀಸಲಿಲ್ಲದ ಉಳಿದ ಎರಡು ಅವಧಿಗಳ ಪೈಕಿ, ಮೊದಲ ಅವಧಿಯಲ್ಲಿ ಕಾರ್ಯದರ್ಶಿ ಹುದ್ದೆಯನ್ನು ಮಹಿಳಾ ಸದಸ್ಯರಿಗೆ ಕಡ್ಡಾಯವಾಗಿ ಕಾಯ್ದಿರಿಸಲಾಗುತ್ತದೆ.
ಕೇವಲ ಅಧ್ಯಕ್ಷ ಸ್ಥಾನ ಮಾತ್ರವಲ್ಲದೆ, ಇಡೀ ಆಡಳಿತ ಮಂಡಳಿಯಲ್ಲಿ ಲಿಂಗ ಸಮಾನತೆ ತರಲು ಸಂಘ ಮುಂದಾಗಿದೆ. 2018 ರಲ್ಲೇ ಸಂಘವು ಉಪಾಧ್ಯಕ್ಷ ಸ್ಥಾನ ಹಾಗೂ ಕಾರ್ಯಕಾರಿ ಮಂಡಳಿಯ ಎರಡು ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಟ್ಟಿತ್ತು. ಈಗ ಅದನ್ನು ಮತ್ತಷ್ಟು ವಿಸ್ತರಿಸಲಾಗಿದ್ದು, ಕಾರ್ಯಕಾರಿ ಮಂಡಳಿಯ ಒಟ್ಟು 9 ಸ್ಥಾನಗಳ ಪೈಕಿ 4 ಸ್ಥಾನಗಳನ್ನು ಮಹಿಳಾ ವಕೀಲರಿಗೆ ನೀಡಲು ನಿರ್ಧರಿಸಲಾಗಿದೆ. ಇದರೊಂದಿಗೆ ಸಂಘದ ಆಡಳಿತದಲ್ಲಿ ಮಹಿಳೆಯರ ಪ್ರಾತಿನಿಧ್ಯ ಶೇಕಡಾ 30 ಕ್ಕಿಂತಲೂ ಹೆಚ್ಚಾಗಲಿದೆ.
ಇದು ಸುದೀರ್ಘ ಕಾಯುವಿಕೆಯ ನಂತರದ ಐತಿಹಾಸಿಕ ತಿದ್ದುಪಡಿ
1864 ರಲ್ಲಿ ಸ್ಥಾಪನೆಯಾದ AAWI ದೇಶದ ಅತ್ಯಂತ ಹಳೆಯ ಮತ್ತು ಗೌರವಾನ್ವಿತ ವಕೀಲರ ಸಂಘಟನೆಗಳಲ್ಲಿ ಒಂದಾಗಿದೆ. ಆದರೆ ಕಳೆದ ಒಂದೂವರೆ ಶತಮಾನಕ್ಕೂ ಹೆಚ್ಚು ಕಾಲ ಇಲ್ಲಿ ಪುರುಷ ವಕೀಲರೇ ನಾಯಕತ್ವ ವಹಿಸಿದ್ದರು. ಈ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿರುವ ಸಂಘವು, “162 ವರ್ಷಗಳ ಇತಿಹಾಸದಲ್ಲಿ ಒಮ್ಮೆಯೂ ಮಹಿಳೆಯರು ಅಧ್ಯಕ್ಷ ಸ್ಥಾನ ಅಲಂಕರಿಸಿರಲಿಲ್ಲ. ಇಂದಿನ ನಿರ್ಧಾರವು ಸುದೀರ್ಘ ಕಾಲದಿಂದ ಬಾಕಿ ಉಳಿದಿದ್ದ ಐತಿಹಾಸಿಕ ತಿದ್ದುಪಡಿಯಾಗಿದ್ದು, ಇದು ಮಹಿಳಾ ನಾಯಕತ್ವದ ಮೇಲಿರುವ ವಿಶ್ವಾಸವನ್ನು ತೋರಿಸುತ್ತದೆ” ಎಂದು ಹರ್ಷ ವ್ಯಕ್ತಪಡಿಸಿದೆ.
ಸಂಘದ ಉಪಾಧ್ಯಕ್ಷೆ ಪ್ರಾಚಿ ತಾತಕೆ ಮಾತನಾಡಿ, “ಮಹಾರಾಷ್ಟ್ರ ಯಾವಾಗಲೂ ಪ್ರಗತಿಪರ ರಾಜ್ಯವಾಗಿದ್ದು, ಈ ಪ್ರಸ್ತಾಪಕ್ಕೆ ಎಲ್ಲರೂ ಸರ್ವಾನುಮತದಿಂದ ಒಪ್ಪಿಗೆ ನೀಡಿದ್ದಾರೆ” ಎಂದು ಹೆಮ್ಮೆಯಿಂದ ಹೇಳಿದ್ದಾರೆ
ಸುಪ್ರೀಂ ಕೋರ್ಟ್ ಆದೇಶಕ್ಕೆ ಪೂರಕ ಸ್ಪಂದನೆ
ಇತ್ತೀಚೆಗಷ್ಟೇ ಸುಪ್ರೀಂ ಕೋರ್ಟ್ ದೇಶದ ಎಲ್ಲಾ ಬಾರ್ ಕೌನ್ಸಿಲ್ ಹಾಗೂ ವಕೀಲರ ಸಂಘಟನೆಗಳಲ್ಲಿ ಮಹಿಳೆಯರಿಗೆ ಕನಿಷ್ಠ ಶೇಕಡಾ 30 ರಷ್ಟು ಪ್ರಾತಿನಿಧ್ಯ ಇರಬೇಕು ಎಂದು ಕಟ್ಟುನಿಟ್ಟಿನ ಆದೇಶ ನೀಡಿತ್ತು. ಈ ಆದೇಶಕ್ಕೆ ಅತ್ಯಂತ ಸಕಾರಾತ್ಮಕವಾಗಿ ಸ್ಪಂದಿಸಿದ ಮೊದಲ ಸಂಘಟನೆಯಾಗಿ ಬಾಂಬೆ ಹೈಕೋರ್ಟ್‌ನ AAWI ಹೊರಹೊಮ್ಮಿದೆ. ಮುಂಬರುವ ಚುನಾವಣೆಯಲ್ಲೇ ಮೊದಲ ಬಾರಿಗೆ ಮಹಿಳಾ ಅಧ್ಯಕ್ಷರನ್ನು ಕಾಣಲು ಮುಂಬೈ ಕಾನೂನು ವಲಯ ಕಾತರದಿಂದ ಕಾಯುತ್ತಿದೆ.


