Homeಮುಖಪುಟಅತಂತ್ರ ಮನುಷ್ಯ ಮತ್ತು ಅಗೋಚರ ಸೋಂಕು : ‘ದಿ ಪ್ಲೇಗ್’ ಎಂಬ ಆಧುನಿಕ ಕ್ಲಾಸಿಕ್

ಅತಂತ್ರ ಮನುಷ್ಯ ಮತ್ತು ಅಗೋಚರ ಸೋಂಕು : ‘ದಿ ಪ್ಲೇಗ್’ ಎಂಬ ಆಧುನಿಕ ಕ್ಲಾಸಿಕ್

ಆಧುನಿಕ ಅಭಿಜಾತ ಕೃತಿಗಳಲ್ಲಿ ಒಂದೆAದು ಮಾನ್ಯತೆ ಗಳಿಸಿರುವ ಅಲ್ಬೆ ಕಮೂವಿನ ‘ದಿ ಪ್ಲೇಗ್’ (ಫ್ರೆಂಚ್‌ನಲ್ಲಿ ಲ ಪೆಸ್ತ್) ಕಾದಂಬರಿ ಮೊದಲಬಾರಿಗೆ ಪ್ರಕಟಗೊಂಡಿದ್ದು 1947ರಲ್ಲಿ. ವಿಶ್ವಾದ್ಯಂತ ಪ್ರತಿದಿನವೂ ಹೊಸ ಓದುಗರನ್ನು ಗಳಿಸಿಕೊಳ್ಳುವ ಗುಣವಿರುವ, ನೂರಾರು ಲೇಖಕರ ಕ್ರಿಯಾಶೀಲತೆಗೆ ಸ್ಫೂರ್ತಿಯಾಗಿ ಕೆಲಸಮಾಡಿರುವ, ಅಪಾರ ರೂಪಕಶಕ್ತಿಯನ್ನು ತನ್ನೊಳಗಿಟ್ಟುಕೊಂಡಿರುವ ಕಾದಂಬರಿ.

- Advertisement -
- Advertisement -

ಕಥೆ ನಡೆಯುವುದು, 1940ರ ದಶಕದ ಸುಮಾರಿನ ಫ್ರೆಂಚ್ ವಸಾಹತು ಅಲ್ಜೀರಿಯಾದ ರೇವು ಪಟ್ಟಣ ಒರಾನ್‌ನಲ್ಲಿ.

ನೈತಿಕ ಶುದ್ಧನೆಂದು ಗುರುತಿಸಲಾಗುವ ವೈದ್ಯ ಬರ್ನಾರ್ಡ್ ರಿಯೊ ಕಥಾನಿರೂಪಕ. ಮೊದಲ ಅಧ್ಯಾಯದಲ್ಲಿ ಕೊಳಕಾದ, ಆದರೆ ಶುದ್ಧಗಾಳಿ ಬೀಸುವ, ಪಾರಿವಾಳ, ಮರಗಿಡ, ನಗರವನಗಳಿಲ್ಲದ ಪುಟ್ಟ ಕರಾವಳಿ ಪಟ್ಟಣ ಒರಾನ್ ಬಣ್ಣನೆಯಿಂದ ಆರಂಭವಾಗುತ್ತದೆ. ಇಲ್ಲಿನ ಜನ ಶ್ರಮಜೀವಿಗಳು. ಸಿರಿವಂತರಾಗಲು ದುಡಿಯುವವರು. ಅವರ ಬದುಕಿನ ಮುಖ್ಯ ಗುರಿ ‘ವಹಿವಾಟು ನಡೆಸುವುದು’. ಸಮುದ್ರಸ್ನಾನ, ಪ್ರೀತಿ, ಸಿನಿಮಾಗಳನ್ನು ವಾರಾಂತ್ಯಕ್ಕಿಟ್ಟು ಉಳಿದ ದಿನಗಳಲ್ಲಿ ಸಾಧ್ಯವಾದಷ್ಟು ಕಾಸು ಸಂಪಾದಿಸುವುದರಲ್ಲಿಯೇ ಅವರಿಗೆ ನೆಮ್ಮದಿ. ಕಾಯಿಲೆ ಬೀಳುವುದನ್ನು, ಸಾಯುವುದನ್ನು ಇಲ್ಲಿನ ಜನ ಒಪ್ಪರು. ವಿಪರೀತದ ಹವಾಮಾನ, ವಹಿವಾಟಿನ ಒತ್ತಡ, ಧಿಡೀರನೆ ಬಂದಿಳಿವ ಇರುಳು… ಹೀಗಿರುವಾಗ ಕಾಯಿಲೆಗೆ, ಸಾವಿಗೆ ಸಮಯವಾದರೂ ಎಲ್ಲಿ?

ಏಪ್ರಿಲ್ 16ರ ಬೆಳಗ್ಗೆ ಶಸ್ತ್ರಚಿಕಿತ್ಸೆ ಪೂರೈಸಿದ ಬಳಿಕ ಡಾಕ್ಟರ್ ಬರ್ನಾರ್ಡ್ ರಿಯೊ ಕಚೇರಿಯಿಂದ ಹೊರ ಬರುವಾಗ ಕಾಲಿಗೆ ಮೆತ್ತನೆಯದೇನೊ ತಾಕಿದಂತಾಗುತ್ತದೆ. ನೋಡಿದರೆ ಇಲಿಯೊಂದು ಸತ್ತು ಬಿದ್ದಿದೆ. ಮರು ಯೋಚಿಸದೆ, ಅದನ್ನು ಪಕ್ಕಕ್ಕೆ ತಳ್ಳಿ ಮೆಟ್ಟಿಲಿಳಿದು ರಸ್ತೆ ಸೇರಲು ಹೊರಟು ಬಿಡುತ್ತಾನೆ. ಆಮೇಲಷ್ಟೆ ಸತ್ತ ಇಲಿಯ ಬಗ್ಗೆ ಯೋಚಿಸಿ, ಮರಳಿಬಂದು ಆ ಕುರಿತು ಕಾವಲುಗಾರನನ್ನು ವಿಚಾರಿಸುತ್ತಾನೆ. ಕಾವಲುಗಾರ ಮಿಶೆಲ್, ‘ಈ ಕಟ್ಟಡದಲ್ಲಿಯೇ ಇಲಿಗಳಿಲ್ಲ’ವೆಂದು ರೇಗುತ್ತಾನೆ. ಇದ್ದರೂ ಯಾರೋ ತರಲೆ ತರುಣರು ಹೊರಗಿನಿಂದ ತಂದು ಹಾಕಿರಬೇಕಷ್ಟೇ, ಎಂಬುದು ಅವನ ಅಂಬೋಣ.

ಆ ಸಂಜೆ ವೈದ್ಯ ರಿಯೊ ಮೇಲ್ಮಹಡಿಯ ತನ್ನ ಅಪಾರ್ಟ್ಮೆಂಟಿಗೆ ಹೋಗಲು ಕಿಸೆಯಲ್ಲಿನ ಕೀಲಿಕೈ ಹುಡುಕುವಾಗ ಆತನೆದುರು ಸಂದಿಯೊಳಗಿಂದ ದೊಡ್ಡ ಇಲಿಯೊಂದು ಬರುತ್ತಿರುವುದು ಕಾಣುತ್ತದೆ. ಹರಿದಾಡುತ್ತಿದ್ದ ಅದರ ರೋಮಗಳು ತೊಯ್ದು ತೊಪ್ಪಟೆಯಾಗಿದೆ. ನೆತ್ತರು ಜಿನುಗುತ್ತಿದೆ. ಅರೆಕ್ಷಣ ಅದರತ್ತ ನೋಡಿ, ರಿಯೊ ಮಹಡಿ ಹತ್ತುತ್ತಾನೆ. ತಲೆಯ ತುಂಬೆಲ್ಲ ಮಡದಿಯದೇ ಚಿಂತೆ. ಆತನ ಹೆಂಡತಿ ವರ್ಷದಿಂದ ಕ್ಷಯದಿಂದ ನರಳುತ್ತಿದ್ದಾಳೆ. ಮರುದಿನ ಚಿಕಿತ್ಸೆಗಾಗಿ ಬೆಟ್ಟದ ಮೇಲಿನ ಆರೋಗ್ಯಧಾಮಕ್ಕೆ ತೆರಳಲಿದ್ದಾಳೆ. ಮೂವತ್ತರ ಆತನ ಹೆಂಡತಿ, ಮೊದಲಿಗಿಂತ ಈಗೆಷ್ಟೋ ಗೆಲುವಾಗಿದೆ, ಎಂದು ಹೇಳಿದರೂ ಜಡ್ಡು ಆಕೆಯ ಚೆಲುವನ್ನು ಕುಂದಿರಿಸಿರುವುದು ಮುಖದಲ್ಲಿ ಕಾಣುತ್ತದೆ. ಈಗಂತೂ ಮಲಗಿ ವಿಶ್ರಾಂತಿ ಪಡೆ, ನಾಳೆ ಮಧ್ಯಾಹ್ನ ರೈಲು ಹಿಡಿಯಬೇಕು, ಎಂದು ರಿಯೋ ಹೇಳುತ್ತಾನೆ.

ಮರುದಿನ ಬೆಳಗ್ಗೆ ರಿಯೊ ಹೊರ ಹೋಗುವಾಗ ಆತನನ್ನು ನಿಲ್ಲಿಸಿದ ಕಾವಲುಗಾರ, ಕಿಡಿಗೇಡಿ ಹುಡುಗರು ಮೂರು ಸತ್ತು ಇಲಿಗಳನ್ನು ತಂದು ಹಾಕಿದ್ದಾರೆ. ಅವು ರಕ್ತ ಸುರಿಸುತ್ತಿದ್ದವು, ಆ ಹುಡುಗರನ್ನು ಹಿಡಿಯದೇ ಬಿಡೊಲ್ಲ, ಎಂದು ಹೇಳುತ್ತಾನೆ.

ಗೊಂದಲಕ್ಕೆ ಬಿದ್ದ ವೈದ್ಯ ರಿಯೊ, ತನ್ನ ಬಹಪಾಲು ಬಡ ರೋಗಿಗಳು ವಾಸಿಸುವ ನಗರದ ಹೊರಪ್ರದೇಶದತ್ತ ಕಾರು ಓಡಿಸುತ್ತಾನೆ. ಈ ಪ್ರದೇಶದಲ್ಲಿ ಕಸಕಡ್ಡಿಯನ್ನು ತೆಗೆಯುವುದು ಬೆಳಗಿನ ಬಿಸಿಲೇರಿದ ಮೇಲೆಯೇ. ರಸ್ತೆಯುದ್ದಕ್ಕೂ ಕಾಲುದಾರಿಯಂಚಲ್ಲಿ ಒಟ್ಟಿದ್ದ ಕೊಳೆಕಸದಲ್ಲಿ ಸುಮಾರು ಸತ್ತ ಇಲಿಗಳು ಕಾಣುತ್ತವೆ. ತಾನು ಚಿಕಿತ್ಸೆ ನೀಡುತ್ತಿದ್ದ ಅಸ್ತಮಾ ರೋಗಿಯ ಮನೆಗೆ ಹೋದಾಗ, ಎಲ್ಲೆಂದರಲ್ಲಿ ಇಲಿ ಸತ್ತು ಬೀಳುತ್ತಿವೆಯಂತೆ. ನನ್ನ ನೆರೆಮನೆಯವನೂ ನೋಡಿದ್ದಾನೆ, ಎಂಬ ಮಾಹಿತಿಯನ್ನು ಆತ ನೀಡುತ್ತಾನೆ. ಈ ಪ್ರದೇಶದಲ್ಲಿ ಎಲ್ಲೆಡೆ ಇಲಿಗಳದ್ದೇ ಚರ್ಚೆ, ಎಂದು ಡಾಕ್ಟರ್‌ಗೆ ಮನವರಿಕೆಯಾಗುತ್ತದೆ. ರೋಗಿಗಳನ್ನು ಭೇಟಿಯಾದ ಮೇಲೆ ಮನೆಯ ಕಡೆ ಡ್ರೈವ್ ಮಾಡುತ್ತಾನೆ.

ಮನೆಯಲ್ಲಿ ಆತನ ತಾಯಿಯ ಟೆಲಿಗ್ರಾಂ ಆತನಿಗಾಗಿ ಕಾಯುತ್ತಿರುತ್ತದೆ. ಹೆಂಡತಿಯ ಗೈರುಹಾಜರಿಯಲ್ಲಿ ಮಗನನ್ನು ಬೇಕುಬೇಡಗಳನ್ನು ನೋಡಿಕೊಳ್ಳಲು ಆಕೆ ಮರುದಿನ ಬರಲಿರುವ ವಿಷಯ ತಿಳಿಯುತ್ತದೆ. ಹೆಂಡತಿ ಚಿಕಿತ್ಸೆಗಾಗಿ ದೂರ ಹೋಗುತ್ತಿರುವುದು ರಿಯೊನಿಗೆ ನೋವು ತಂದಿದೆ. ನಿನ್ನನ್ನು ಇನ್ನೂ ಚೆನ್ನಾಗಿ ನೋಡಿಕೊಳ್ಳಬಹುದಿತ್ತು. ನನ್ನನ್ನು ಕ್ಷಮಿಸು. ನೀನು ಮರಳಿ ಬಂದಾಗ ಎಲ್ಲ ಇನ್ನೂ ಉತ್ತಮವಾಗಿರುತ್ತದೆ. ನಾವು ಹೊಸದಾಗಿ ಬದುಕನ್ನು ಆರಂಭಿಸೋಣವೆಂದು ಪತ್ನಿಗೆ ಅಭಯ ನೀಡುತ್ತಾನೆ.

ಅಂದು ಇಳಿ ಮಧ್ಯಾಹ್ನ ರಿಯೋನನ್ನು ರೇಮಂಡ್ ರಾಂಬರ್ಟ್ ಎಂಬ ಯುವ ಪತ್ರಕರ್ತ ಭೇಟಿಯಾಗಿ, ಅರಬ್ಬರ ಬದುಕಿನ ಸ್ಥಿತಿಗತಿ ಅದರಲ್ಲೂ ಶುಚಿತ್ವ, ಆರೋಗ್ಯದ ಕುರಿತು ಮಾಹಿತಿ ಹಂಚಿಕೊಳ್ಳಲು ಕೇಳುತ್ತಾನೆ. ಈಗಿನ ದಯನೀಯ ಸ್ಥಿತಿಯನ್ನು ಹೇಳಿದರೆ ಪ್ರಕಟಿಸುತ್ತೀಯ ಎಂದು ರಿಯೊ ಪ್ರಶ್ನಿಸುತ್ತಾನೆ. ಪರಿಸ್ಥಿತಿ ತೀರಾ ಹದಗೆಟ್ಟಿದೆ ಎನ್ನುತ್ತಾನೆ.

ಕಾದಂಬರಿ ಬೆಳೆಯತೊಡಗಿದಂತೆ ಪ್ಲೇಗಿನ ಗಡ್ಡೆಗಳನ್ನು ಹೊತ್ತ ಇಲಿಗಳು ನಗರದಲ್ಲಿ ಎಲ್ಲೆಂದರಲ್ಲಿ ಸತ್ತು ಬೀಳುವುದು ಹೆಚ್ಚಾಗುತ್ತದೆ. ನಗರವೀಗ ಮಾರಣಾಂತಿಕ ಪ್ಲೇಗಿನ ದಾಳಿಗೆ ತುತ್ತಾಗಿದೆ. ಸ್ಥಿತಿ ಭಯಾನಕವಾಗುತ್ತ ಪುರುಷರು, ಮಹಿಳೆಯರು, ಮಕ್ಕಳು ಪ್ಲೇಗು ಮಾರಿಗೆ ತುತ್ತಾಗತೊಡಗುತ್ತಾರೆ. ಉದಾಸೀನತೆ, ಮೈಗಳ್ಳತನಗಳನ್ನು ತುಂಬಿಕೊಂಡ ಅಧಿಕಾರಶಾಹಿ ಆರಂಭದಲ್ಲಿ ಸನ್ನಿವೇಶದ ಭೀಕರತೆಗೆ ಸ್ಪಂದಿಸದಿದ್ದರೂ ಸಾವುನೋವುಗಳು ಹೆಚ್ಚಾದಂತೆ ಪ್ರತಿಕ್ರಿಯಿಸಲೇಬೇಕಾಗುತ್ತದೆ. ಒರಾನ್ ಪಟ್ಟಣದಲ್ಲಿ ಪ್ಲೇಗ್ ಸೋಂಕು ಹರಡಿದೆ ಎಂದು ಘೋಷಿಸಿ, ಹೊರ ಜಗತ್ತಿನಿಂದ ಪಟ್ಟಣದ ಸಂಪರ್ಕವನ್ನು ಸ್ಥಗಿತಗೊಳಿಸಲಾಗುತ್ತದೆ.

ಹೊರ ಸಂಪರ್ಕವನ್ನು ಕಳೆದುಕೊಂಡ ಪಟ್ಟಣದ ಜನ ಅನಾಥಪ್ರಜ್ಞೆಯನ್ನು ಅನುಭವಿಸತೊಡಗುತ್ತಾರೆ. ಈ ಅಂತರಂಗದ ಸೆರೆಯು ಆತ್ಮಶೋಧನೆಗೆ ಹಚ್ಚುತ್ತದೆ. ತಮಗೆ ಪ್ರೀತಿಯೆಂಬುದೇ ತಿಳಿದಿರಲಿಲ್ಲ, ತಮಗೆ ಅಸ್ತಿತ್ವ ನೀಡುವ ಕಸುವು ಗೊತ್ತಿಲ್ಲ, ನಮಗೆ ಎಲ್ಲವನ್ನೂ ಧೈರ್ಯವಾಗಿ ಎದುರಿಸುವ ಬಗೆ ತಿಳಿದಿಲ್ಲ ಎಂಬ ಕನವರಿಕೆಯಲ್ಲಿ ಬದುಕತೊಡಗುತ್ತಾರೆ. ಪ್ಯಾರೀಸ್ ಪತ್ರಕರ್ತ ರಾಂಬರ್ಟ್ ಎಲ್ಲರಿಗೂ ಅಪರಿಚಿತನಾಗಿ ಬದುಕುತ್ತಾನೆ. ಗೊತ್ತಿಲ್ಲದಂತೆಯೇ ಜೀವನ ಸಾಗುತ್ತಿದೆ. ಕಾಫಿಹೌಸ್, ಚಿತ್ರಮಂದಿರಗಳು ತುಂಬಿ ತುಳುಕುತ್ತವೆ.

ಪಾದ್ರಿ ಪನೆಲೊ, ಇಗರ್ಜಿಯಲ್ಲಿ ದೇವಾರಾಧನೆಯನ್ನು ಏರ್ಪಡಿಸುತ್ತಾರೆ. ಪ್ಲೇಗ್ ದೇವರು ನೀಡುತ್ತಿರುವ ಉಪದ್ರವವಾಗಿದೆ. ದೇವರು ಪ್ರತ್ಯಕ್ಷವಾದಾಗಲೊಮ್ಮೆ ಯಾತನೆಯು ಅಮರ್ತ್ಯದ ಆರಂಭವಾಗಿದೆ ಎಂದು ಸೂಚಿಸಲು ದೇವಕನ್ಯೆ ಪ್ಲೇಗಿನ ರೂಪದಲ್ಲಿ ಬಂದಿದ್ದಾಳೆ ಎಂಬುದು ಪಾದ್ರಿಗಳ ನಂಬಿಕೆ. ಸೋಂಕು ಹಬ್ಬುತ್ತ ಜನರ ಶ್ವಾಸಕೋಶವನ್ನು ವ್ಯಾಪಿಸಿಕೊಳ್ಳುತ್ತದೆ. ಸ್ವಯಂಸೇವಕರಿಗೆ ಆರೋಗ್ಯ ಶಿಬಿರ ನಡೆಸುವಂತೆ ಡಾಕ್ಟರ್ ರಿಯೊನಿಗೆ ಜಾನ್ ತರೊ ಸೂಚಿಸುತ್ತಾನೆ. ಅದಕ್ಕೆ ರಿಯೊ ಒಪ್ಪುತ್ತಾನೆ.

ನಮ್ಮ ವಿಧಿಲಿಖಿತ, ಎಲ್ಲಾ ನಮ್ಮ ಕರ್ಮ ಎಂಬ ವೈಯಕ್ತಿಯ ನೆಲೆಯ ಭಾವನಗೆ ಹೋಗಿ, ಪ್ಲೇಗ್ ಒಂದು ಸಾಮೂಹಿಕ ಯಾತನೆ ಎಂಬ ಅರಿವು ಮೂಡತೊಡಗುತ್ತದೆ. ಪಟ್ಟಣದ ಜನ ತಮ್ಮ ಮನೆಗಳನ್ನು ಸುಡತೊಡಗುತ್ತಾರೆ. ಕೊಳ್ಳೆ ಹೊಡೆಯುವುದು ಸಾಮಾನ್ಯವಾಗುತ್ತದೆ. ರಾತ್ರಿಯ ಕರ್ಫ್ಯೂ ನಗರವನ್ನು ಸ್ತಬ್ದವಾಗಿಸುತ್ತದೆ. ಅಂತಿಮ ವಿಧಿವಿಧಾನಗಳಿಲ್ಲದೆ ಶವಗಳನ್ನು ಸುಡಲಾಗುತ್ತದೆ. ಒಂಬತ್ತು ತಿಂಗಳು ಪಟ್ಟಣವನ್ನು ಹಿಂಡಿಹಿಪ್ಪೆ ಮಾಡಿದ ಪ್ಲೇಗ್ ಜನೆವರಿ ಬಳಿಕ ನಿಧಾನಕ್ಕೆ ಕಾಲುಕಿತ್ತುತ್ತಿರುವಂತೆ ಭಾಸವಾಗುತ್ತದೆ. ಫೆಬ್ರವರಿಯಲ್ಲಿ ಒರಾನ್ ಪಟ್ಟಣದ ಮಹಾದ್ವಾರಗಳು ತೆರೆದುಕೊಳ್ಳುತ್ತವೆ. ಬೇರ್ಪಟ್ಟ ಪ್ರೇಮಿಗಳು ಒಬ್ಬರನ್ನೊಬ್ಬರು ಸಂಧಿಸುವ ಸಮಯ. ನಿಧಾನಕ್ಕೆ ಜನ ಸಾಮಾನ್ಯ ಬದುಕಿಗೆ ಮರಳತೊಡಗುತ್ತಾರೆ. ವೈದ್ಯರ, ಸೇವಾ ಕಾರ್ಯಕರ್ತರ, ಧಾರ್ಮಿಕ ಮುಖಂಡರ ಪ್ರಯತ್ನದ ಹೊರತಾಗಿಯೂ ಅಪಾರ ಸಂಖ್ಯೆಯ ಸಾವುಗಳಾಗುತ್ತವೆ.

ಕಾದಂಬರಿಯಲ್ಲಿ ಬರುವ ಮುಖ್ಯಪಾತ್ರಗಳ ಸೆಣೆಸಾಟವು ಪ್ರಯಾಸಕರವಾದುದೇ. ಜಾನ್ ತರೊ, ಪಾದ್ರಿ ಪನೆಲೊ ಸಾವನ್ನಪ್ಪಿದರೆ, ಬದುಕುಳಿವ ಪತ್ರಕರ್ತ ರೇಮಂಡ್ ರಾಂಬರ್ಟ್ ಮತ್ತು ಕಾಟರ್ ಸಂಪೂರ್ಣ ಬದಲಾಗುತ್ತಾರೆ. ಬದುಳಿದವರಿಗೆ ತಾವು ಸಾವಿನಿಂದ ಜಯಶಾಲಿಗಳಾದೆವೊ ಅಥವ ಕೇವಲ ಆಕಸ್ಮಿಕವಾಗಿ ಪಾರಾದೆವೊ ಎಂಬುದು ಕೂಡ ತಿಳಿಯದು.

ಕಾದಂಬರಿಯ ಕೊನೆಗೆ ವೈದ್ಯ ರಿಯೊ ಕೇಳಿಕೊಳ್ಳುವುದು ಇಂಥದ್ದೇ ಪ್ರಶ್ನೆಯನ್ನು. ಬದುಕಿಗಾಗಿ ನಡೆಸುವ ಹೋರಾಟವು ಅತ್ಯಂತ ಮೌಲ್ಯಯುತವಾದುದು. ಆದಾಗ್ಯೂ, ಪ್ಲೇಗಿನ ಮಾರಿ ಯಾವಾಗ ಬೇಕಾದರೂ ಮತ್ತೆ ಅಪ್ಪಳಿಸಬಹದು. ಕಾಲವನ್ನು ಸೋಲಿಸುವವರು ಯಾರೂ ಇಲ್ಲ, ತಾನು ಹೇಳುತ್ತಿರುವ ಕಥೆಯ ಅಂತ್ಯವು, ಇದೇ ಕೊನೆ ಎಂಬ ಸತ್ಯದ ಕಥೆಯಲ್ಲ. ಕರಾಳತೆಯನ್ನು ಹೊಡೆದೋಡಿಸಲು ಮತ್ತೆ ಮತ್ತೆ ಹೋರಾಡಲೇಬೇಕಾಗುತ್ತದೆ. ಯಾವುದೇ ವಿಷಗಳಿಗೆಯಲ್ಲಿ ಬಿಲದೊಳಗಿಂದ ಇಲಿಗಳು ನುಗ್ಗಿಬಂದು ಸುಖೀ ನಗರವನ್ನು ಸರ್ವನಾಶ ಮಾಡಬಲ್ಲುದು, ಅಂದುಕೊಳ್ಳುತ್ತಾನೆ.

*

ಮನುಷ್ಯ ಏಕಾಂಗಿಯಾಗಿ, ಸಮುದಾಯವಾಗಿ ಸಾವಿನೊಂದಿಗೆ ನಡೆಸುವ ಹೋರಾಟ ಮತ್ತು ಒಡನಾಟಗಳನ್ನು ‘ದಿ ಪ್ಲೇಗ್’ನಷ್ಟು ಸಾಂಕೇತಿಕವಾಗಿ ಪ್ರಸ್ತುತಪಡಿಸುವ ಕೃತಿ ಇನ್ನೊಂದಿರಲಾರದು. ಪ್ರಕಟಗೊಂಡ ಎಪ್ಪತ್ತು ವರ್ಷಗಳ ಬಳಿಕವೂ ಓದುಗರು-ವಿಮರ್ಶಕರು ಅದರಲ್ಲಿ ಹೆಸ ಒಳಾರ್ಥವನ್ನು ಕಂಡುಕೊಳ್ಳುತ್ತಿದ್ದಾರೆ. ಎರಡನೆಯ ಮಹಾಯುದ್ಧ ಸೃಷ್ಟಿಸಿದ ಭಯಾನಕತೆ, ತಲ್ಲಣಗಳ ಹಿನ್ನೆಲೆಯಲ್ಲಿ ರಚನೆಗೊಂಡ ಈ ಕಾದಂಬರಿ ಹಿಂದೆಗಿಂತ ಇಂದು ಪ್ರಸ್ತುತವಾಗುತ್ತಿದೆ ಎಂಬ ಹೊಸ ನೆಲೆಯ ಚರ್ಚೆಯೂ ಇತ್ತೀಚೆಗಷ್ಟೇ ಆರಂಭವಾಗಿದೆ. ಒರಾನ್ ಎಂಬ ಪುಟ್ಟ ಬಂದರು ಪಟ್ಟಣವನ್ನು ಆಕ್ರಮಿಸುವ ಪ್ಲೇಗ್ ರೂಪಕ ಅರ್ಥದಲ್ಲಿ, ನಾಗರಿಕತೆಗಳನ್ನು ಧ್ವಂಸ ಮಾಡಿದ ನಾಜಿ ಆಕ್ರಮಣವನ್ನು ಸಂಕೇತಿಸುತ್ತದೆ. ಆಕ್ರಮಣಕ್ಕೆ ಒಳಗಾಗಿ ಯಾತನೆಪಟ್ಟವರು, ಸಾಕ್ಷಿಭೂತರಾದವರು ಹೇಳುವ ಕಥೆಯಿದು. ಮನುಷ್ಯನ ಮೇಲೆ ಎರಗುವ ಈ ಹೆಮ್ಮಾರಿಯನ್ನು ಯಾವ ಧರ್ಮ, ಸಿದ್ಧಾಂತಗಳೂ ಸಮರ್ಥಿಸಲಾರವು ಎಂಬುದು ಅನುಭವವನ್ನು ಕಥಿಸುವವರು ಹೇಳುತ್ತಾರೆ. ಆದರೆ, ಆಕ್ರಮಣಕ್ಕೆ ಒಳಗಾದರೆಲ್ಲರೂ ಸಂಘಟಿತರಾಗಿ ತಮ್ಮ ವಿಧಿಯನ್ನೆದುರಿಸಬೇಕು; ಮತ್ತು ನಿಷ್ಕ್ರಿಯತೆ, ಗಳಿಕೆಗಳೇ ಜೀವನಶೈಲಿಯಾದ ಜನಾಂಗವು ತನ್ನನ್ನು ತಾನೇ ವಿಮರ್ಶಿಸಿಕೊಳ್ಳಬೇಕು ಎಂಬುದು, ನಿರೂಪಕ ಹಾಗೂ ಕಾದಂಬರಿಕಾರನ ನಿಲುವಾಗಿದೆ.

ಕಾದಂಬರಿಯಲ್ಲಿ ನಿಷ್ಕ್ರಿಯಗೊಂಡ ಅಧಿಕಾರಶಾಹಿಗಳು, ದೈವಕೃಪೆಯಲ್ಲಿ ಅಪಾರ ನಂಬಿಕೆಯುಳ್ಳವರು, ಸತತ ಮನುಷ್ಯ ಪ್ರಯತ್ನದಲ್ಲಿ ವಿಶ್ವಾಸವಿಟ್ಟವರು, ಕೊಳ್ಳೆ ಹೊಡೆವವರು, ಯಾಂತ್ರಿಕತೆ, ಗಳಿಕೆಯೇ ಜೀವನದ ಪರಮಗುರಿ ಎಂಬ ಭ್ರಮೆಯವರು… ಎಲ್ಲರೂ ಇದ್ದಾರೆ. ಕಾದಂಬರಿಯ ಅತ್ಯಂತ ಸಣ್ಣ ಪಾತ್ರ ಆಡುವ ಮಾತು ಕೂಡ ಗಹನವಾದುದು. ತನ್ನೆದುರು ಇಲಿ ಸಾಯುತ್ತ ಬೀಳುತ್ತಿದ್ದರೂ, ಈ ಕಟ್ಟಡದಲ್ಲಿ ಯಾವ ಇಲಿಯೂ ಇಲ್ಲ, ಎಂದೂ, ಸತ್ತ ಇಲಿಗಳನ್ನು ಉಪದ್ವ್ಯಾಪಿ ಹಡುಗರು ತಂದು ಹಾಕಿದ್ದೆಂದು ವಾದಿಸುವ ಕಾವಲುಗಾರನಿಂದ ಹಿಡಿದು, ಸದಾ ಎಚ್ಚರಿಕೆಯ, ಒಳಿತಿನಲ್ಲಿ ನಂಬಿಕೆಯಿಡುತ್ತಲೆ, ಭವಿಷ್ಯದಲ್ಲಿ ಎರಗಬಹದಾದ ಅಪಾಯದ ಕುರಿತು ಚಿಂತಿಸಬಲ್ಲ ಸಂವೇದನಾಶೀಲ ಡಾಕ್ಟರ್ ಬರ್ನಾರ್ಡ್ ರಿಯೊನವರೆಗೆ ಎಲ್ಲರ ಮಾತುಗಳೂ ಮುಖ್ಯವೇ.

ಕಮೂನ ಅಸಂಗತವಾದ ಸಿದ್ಧಾಂತವನ್ನು ಸಹ ಕಾದಂಬರಿ ತುಂಬ ಚೆನ್ನಾಗಿ ನಿರೂಪಿಸುತ್ತದೆ. ಮನುಷ್ಯ ಮತ್ತು ಲೋಕದ ಅಸಂಬದ್ಧತೆ, ತರ್ಕಹೀನತೆಗಳಿಗೂ ಇರುವ ಸಂಬಂಧವನ್ನು ಕಾದಂಬರಿ ಶೋಧಿಸುತ್ತದೆ.

ಮನುಷ್ಯ ಕಾರ್ಯಕಾರಣವನ್ನು ಹುಡುಕುವವನು.

ಆದರೆ, ಲೋಕ ಯಾವಾಗಲೂ ವಿಶ್ಲೇಷಣೆಯನ್ನು ನಿರಾಕರಿಸುವುದು. ಇದರಿಂದ ಹುಟ್ಟುವ ಹೇವರಿಕೆ, ಅಸಹನೆಗಳನ್ನು ಕಾದಂಬರಿ ಹುಡುಕುತ್ತದೆ.

ಕೊನೆಗೂ ಲೋಕ ನಿಯಮವನ್ನು ಅರಿತುಕೊಳ್ಳುವುದು, ‘ಸಾಮುದಾಯಿವಾಗಿ ಎದುರಾದ ಕಂಟಕವನ್ನು ಸಾಮುದಾಯಿಕವಾಗಿಯೇ ಎದುರಿಸುವುದು ಕಂಡುಕೊಳ್ಳಬೇಕಾದ ಸತ್ಯವಾಗಿದೆ’,ಎಂದು ಕಾದಂಬರಿ ಹೇಳುತ್ತದೆ.

ಕಮೂ: ತರುಣ ವಾಚಿಕೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರತ್ಯೇಕ ರಾಜ್ಯದ ಬೇಡಿಕೆ: ನಾಗಾಲ್ಯಾಂಡ್‌ನ 6 ಜಿಲ್ಲೆಗಳಲ್ಲಿ ಶೂನ್ಯ ಮತದಾನ

0
ನಾಗಾಲ್ಯಾಂಡ್‌ನ ಏಕೈಕ ಲೋಕಸಭಾ ಸ್ಥಾನಕ್ಕೆ ಶುಕ್ರವಾರ ಒಂದೇ ಹಂತದಲ್ಲಿ ಮತದಾನ ನಡೆದಿದೆ. ಆದರೆ, ಈಶಾನ್ಯ ರಾಜ್ಯದ ಆರು ಜಿಲ್ಲೆಗಳಲ್ಲಿ ಪ್ರತ್ಯೇಕ ರಾಜ್ಯದ ಬೇಡಿಕೆ ಮುಂದಿಟ್ಟುಕೊಂಡು ಜನರು ಮತದಾನದಿಂದ ದೂರ ಉಳಿದಿದ್ದಾರೆ ಎಂದು 'ಇಂಡಿಯಾ...