Homeಮುಖಪುಟಆನ್‌ಸ್ಕ್ರೀನ್‌ನಲ್ಲಿ ಮಾತ್ರ ಪ್ರತಿಭಾವಂತ ನಟ; ಉಳಿದಂತೆ ಅಂತಃಕರಣವುಳ್ಳ ಸಾಮಾನ್ಯ ಮನುಷ್ಯನಾಗಿದ್ದ ಸಂಚಾರಿ ವಿಜಯ್

ಆನ್‌ಸ್ಕ್ರೀನ್‌ನಲ್ಲಿ ಮಾತ್ರ ಪ್ರತಿಭಾವಂತ ನಟ; ಉಳಿದಂತೆ ಅಂತಃಕರಣವುಳ್ಳ ಸಾಮಾನ್ಯ ಮನುಷ್ಯನಾಗಿದ್ದ ಸಂಚಾರಿ ವಿಜಯ್

- Advertisement -
- Advertisement -

“This quiet dust was gentleman and ladies” ಎನ್ನುವ ಎಮಿಲಿ ಡಿಕೆಸ್ನೆನ್‌ನ ಪದ್ಯದ ಸಾಲಿನಂತೆಯೇ ಸಂಚಾರಿ ವಿಜಯ್ ತಮ್ಮೂರಿನ ತೋಟದ ಮಣ್ಣು ಸೇರಿದರು. ಹೌದು, ಅವರೊಬ್ಬ ಜಂಟಲ್‌ಮನ್. ಕೇವಲ ಸಿನಿಮಾ ಕಾರಣಕ್ಕಂತೂ ಅಲ್ಲ. “ರಾಷ್ಟ್ರ ಪ್ರಶಸ್ತಿ ಎಂಬುದು ಶಾಶ್ವತವಾದ ಟ್ಯಾಗ್‌ಲೈನ್ ಅಲ್ಲ ಸರ್. ಅದೊಂದು ಸಿನಿಮಾದ ಒಂದು ಪಾತ್ರಕ್ಕೆ ಆ ವರ್ಷದಲ್ಲಿ ಬಂದ ಪ್ರಶಸ್ತಿ ಅಷ್ಟೆ. ಪ್ರತೀ ಸಿನಿಮಾಗೂ ಹೊಸ ಪಾತ್ರ, ಹೊಸ ಅನುಭವ ಬೇಕು. ಇದು ನನ್ನನ್ನು ಕಂಪಾರ್ಟ್‌ಮೆಂಟಲೈಸ್ ಮಾಡಿಬಿಡುತ್ತದೆಂಬ ಭಯ ನನಗೆ” ಎನ್ನುತ್ತಿದ್ದರು ಸಂಚಾರಿ ವಿಜಯ್. ಒಬ್ಬ ನಟನಾಗಿ ಚಿತ್ರರಂಗಕ್ಕೆ ಎಷ್ಟು ಅವಶ್ಯವಿದ್ದರೋ ಅದಕ್ಕಿಂತ ಹೆಚ್ಚಾಗಿ ಅವರ ಸಾಮಾಜಿಕ ಬದ್ಧತೆ ಮತ್ತು ಕಾಳಜಿಯ ಮನಸ್ಸಿದ್ದ ಕಾರಣಕ್ಕಾಗಿ ಅವರು ನಮ್ಮೊಡನೆ ಇರಲೇಬೇಕಿತ್ತು.

ಕಳೆದ ವರ್ಷದ ಕೋವಿಡ್ ಸಂದರ್ಭದ ಲಾಕ್‌ಡೌನ್‌ನಲ್ಲಿ ಶುರುವಾದ ಅವರ ಸಮಾಜಸೇವಾ ಕಾರ್ಯ, ಈ ವರ್ಷವಂತೂ ನಿರಂತರವಾಗಿ ಸಾಗಿತ್ತು. ಚಿತ್ರರಂಗದ ಬಹಳ ಜನ ಈ ಸಮಯದಲ್ಲಿ ತಮ್ಮ ’ಶಕ್ತ್ಯಾನುಸಾರ’ ಸೇವೆ ಮಾಡಿರಬಹುದು.

ಆದರೆ ಒಬ್ಬ ನಾಯಕ ನಟನಾಗಿದ್ದ ವಿಜಯ್ “Stay Home, Stay Safe” ಎಂಬ ಸೊಫೆಸ್ಟಿಕೇಟೆಡ್ ಸ್ಲೋಗನ್ ಹೇಳಿಕೊಂಡು ಮನೆಯೊಳಗೆ ಸೇರಲಿಲ್ಲ. ಹೊರಗೆ ಬಂದು ಅವಶ್ಯವಿರುವವರ ಸೇವೆಗಾಗಿ ನಿಂತರು.

ಕೋವಿಡ್ ಪೇಷಂಟ್ ಯಾರಿಗಾದರೂ ಬೆಡ್ ಕೊಡಿಸಲು ಸಾಧ್ಯವಾಗದೆ ಹೋದರೆ ಚಡಪಡಿಸಿಬಿಡುತ್ತಿದ್ದರು. ಐದಾರು ತಿಂಗಳ ಹಿಂದೆ ಸಿನಿಮಾದ ಮುಹೂರ್ತವೊಂದನ್ನು ಮುಗಿಸಿ ಮಾತಾಡುತ್ತಾ ಕೂತಾಗ ಹೊಸ ಕಾರು ಕೊಂಡಿದ್ದೀರಿ ಪಾರ್ಟಿ ಎಲ್ಲಿ ಎಂದದ್ದಕ್ಕೆ “ನನ್ನ ಕಾರಿನ ವಿಷಯ ಹಾಗಿರಲಿ, ಮೊನ್ನೆ ಒಂದು ಚಿಕ್ಕ ಹುಡುಗಿಗೆ ಅದೆಂಥದೋ ಜಗತ್ತಿನ ಅಪರೂಪದ ಕಾಯಿಲೆ ಬಂದಿದೆಯಂತೆ. ಐದು ಲಕ್ಷದಲ್ಲಿ ಒಬ್ಬರಿಗೆ ಬರುವಂಥ ಈ ಕಾಯಿಲೆಗೆ ವಿಪರೀತ ಖರ್ಚಾಗುತ್ತಂತೆ. ಪಾಪ, ಆ ತಂದೆತಾಯಿಗಳಿಗೆ ಲಾಕ್‌ಡೌನ್‌ನಿಂದಾಗಿ ಜೀವನ ನಡೆಸುವುದೇ ಕಷ್ಟ ಆಗಿದೆ. ಇನ್ನು ಇದ್ಹೇಗೆ ಮ್ಯಾನೇಜ್ ಮಾಡ್ತಾರೆ. ಒಂದಷ್ಟು ಜನಕ್ಕೆ ಮಾತಾಡಿದ್ದೀನಿ. ಏನಾದ್ರೂ ಸಹಾಯ ಮಾಡಲೇಬೇಕು” ಎಂದಿದ್ದರು. ಆ ಪ್ರಯತ್ನ ಮಾಡಿದರು ಕೂಡ. ಆದರೆ ಕೆಲ ದಿನಗಳ ನಂತರ ಆ ಹುಡುಗಿ ಸಾವನ್ನಪ್ಪಿದಾಗ ಕರೆ ಮಾಡಿ ಸಂಕಟಪಟ್ಟಿದ್ದರು. ಈ ಮನುಷ್ಯ ಏಕೆ ಹೀಗೆ? ಎಂದು ಅಂತ ಸಂದರ್ಭದಲ್ಲೆಲ್ಲ ಯೋಚಿಸುತ್ತಿದ್ದೆ. ಈಗ ಅವರ ದೇಹದ ಅಂಗಾಂಗಳನ್ನು ದಾನ ಮಾಡಿರುವುದು ನಿಜಕ್ಕೂ ಅವರ ವ್ಯಕ್ತಿತ್ವಕ್ಕೆ ತಕ್ಕುದಾದ ನಿರ್ಧಾರ. ಸಂಜಯ ಗಾಂಧಿ ಆಸ್ಪತ್ರೆಯಲ್ಲಿ ಸಿಟಿ ಸ್ಕ್ಯಾನ್ ದರ ಕಡಿಮೆ ಎಂಬ ಸುದ್ದಿ ನೋಡಿ, ಅವಶ್ಯವಿದ್ದ ಪರಿಚಿತರ ಯಾರನ್ನೋ ಕರೆದೊಯ್ದಾಗ, “ಎಷ್ಟೊಂದು ವಯಸ್ಸಾದ ಜನ ಸಾಲಿನಲ್ಲಿ ಇದ್ದರು. ಇವರನ್ನೆಲ್ಲ ಬಿಟ್ಟು ನಾವು ಪ್ರಭಾವ ಬಳಸಿ ಒಳಗೆ ಹೋಗೋದು ಎಷ್ಟು ಸರಿ? ಹಾಗಾಗಿ ವಾಪಾಸ್ ಬಂದೆ” ಎಂದು ಹೇಳಿಕೊಂಡಿದ್ದರು ವಿಜಯ್.

ಅವರಿಗೆ ರಾಷ್ಟ್ರ ಪ್ರಶಸ್ತಿ ಬಂದಾಗಲೇ ನಾನವರ ಹೆಸರ ಕೇಳಿದ್ದು. ಅದಾಗಿ ಒಂದು ವರ್ಷದ ನಂತರ ನಮ್ಮ ಹೊಂಗಿರಣ ತಂಡದಿಂದ, ಸಾಸ್ವೆಹಳ್ಳಿ ಸತೀಶ್ ನಿರ್ದೇಶನದಲ್ಲಿ ನನ್ನ ಕಥೆಯೊಂದನ್ನು ಕಿರುಚಿತ್ರ ಮಾಡಲು ಕರೆ ಮಾಡಿ ಕೇಳಿಕೊಂಡಾಗ ನಿರಾಸಕ್ತಿಯಿಂದಲೇ ಸಿನಾಪ್ಸಿಸ್ ಕಳಿಸಿ ನೋಡೋಣ ಎಂದವರು, ಅದೇ ಸಂಜೆ ಕಾಲ್ ಮಾಡಿ ನಾನು ಈ ಪಾತ್ರ ಮಾಡುತ್ತೇನೆ. ಭೇಟಿ ಮಾಡೋಣ ಅಂದರು. ಮೂವತ್ತು ನಿಮಿಷದ ಕಿರುಚಿತ್ರಕ್ಕೆ ಜೊತೆಯಾದ ನಾವು ಆನಂತರ ಹತ್ತಿರದ ಗೆಳೆಯರಾದೆವು.

ಓದುವ ಹವ್ಯಾಸ ನಿರಂತರ

ಒಮ್ಮೆ ಬೆಂಗಳೂರಿಂದ ಶಿವಮೊಗ್ಗಕ್ಕೆ ಕಾರ್ಯಕ್ರಮವೊಂದಕ್ಕೆ ಪ್ರಯಾಣಿಸಿದಾಗ ’ಆಧ್ಯಾತ್ಮ ಡೈರಿ’ ಪುಸ್ತಕವನ್ನು ಕಾರಿನ ಪ್ರಯಾಣದಲ್ಲೇ ಓದಿ ಮುಗಿಸಿದರು. ಯಾವುದಾದರೂ ಪುಸ್ತಕ ಓದಿದ ಮೇಲೆ ಕಾಲ್ ಮಾಡಿ ಅದರ ಬಗ್ಗೆ ಮಾತಾಡುತ್ತಿದ್ದರು. ಅವರಿಗೆ ಅಪಘಾತವಾಗುವ ಹಿಂದಿನ ದಿನ ಕುಂ.ವೀ.ಯವರ ’ಗಾಂಧಿ ಕ್ಲಾಸ್’ ಪುಸ್ತಕದ ಫೋಟೋ ಜೊತೆಗೆ ಇದನ್ನು ಓದುತ್ತಿದ್ದೇನೆ ಎಂಬ ಮೆಸೇಜ್ ಕಳಿಸಿದ್ದರು. ಬಹುಶಃ ಈ ವಾರದ ಕಾಲ್‌ನಲ್ಲಿ ಅದರ ಬಗ್ಗೆ ಮಾತಾಡುತ್ತಿದ್ದರೇನೋ. ಅವರೊಂದಿಗಿನ ಸಂಭಾಷಣೆಯಲ್ಲಿ ಕನ್ನಡ ಪದಗಳನ್ನು ಅವರು ತುಂಡು ಮಾಡಿ ಹೊಸ ರೀತಿಯ ಪದಗಳನ್ನು ಹುಟ್ಟು ಹಾಕುತ್ತಿದ್ದರು. ಅವು ತಮಾಷೆಯಾಗಿರುತ್ತಿದ್ದವು. ಇತ್ತೀಚಿಗೆ ಗಿರೀಶ್ ಕಾರ್ನಾಡರ ’ಆಡಾಡುತ ಮನುಷ್ಯ’ ಆಡಿಯೋ ಬುಕ್‌ಗೆ ಧ್ವನಿ ಕೊಡುವಾಗ ತುಂಬಾ ಪ್ರಾಕ್ಟೀಸ್ ಮಾಡಿಹೋಗ್ತೀನಿ, ಅಂಥ ದೊಡ್ಡವರ ಪುಸ್ತಕ ಇದು ಎನ್ನುವ ಎಚ್ಚರ ಅವರಲ್ಲಿತ್ತು.

ಐ.ಕೆ.ಗುಜ್ರಾಲ್ ಅವರ ಸಹೋದರ ಅಂತಾರಾಷ್ಟ್ರೀಯ ಖ್ಯಾತ ಕಲಾವಿದ ಮತ್ತು ಶಿಲ್ಪಿ, ಸತೀಶ್ ಗುಜ್ರಾಲ್ ಅವರಿಗೆ ಬಾಲ್ಯದ ಅಪಘಾತದಿಂದಾಗಿ ಶಾಲೆಗೆ ಹೋಗಲು ಸಾಧ್ಯವಾಗದೆ ಹೋದಾಗ ಅವರ ತಂದೆ ಹೆಚ್ಚೆಚ್ಚು ಪುಸ್ತಕಗಳನ್ನು ತಂದು ಕೊಡುತ್ತಿದ್ದರಂತೆ. ಅವುಗಳನ್ನು ಓದಿದ ಬಾಲಕ ಸತೀಶ್ ’ಪುಸ್ತಕಗಳು ಹೊಸ ಜಗತ್ತನ್ನೇ ನನ್ನ ಮುಂದಿಟ್ಟವು. ಜಗತ್ತಿನಲ್ಲಿರುವ ಸಮಸ್ಯೆಗಳ ಮುಂದೆ ನನ್ನ ಈ ಸಮಸ್ಯೆ ಏನೇನೂ ಅಲ್ಲ ಎಂಬ ಅರಿವಾಯಿತು’ ಎನ್ನುತ್ತಿದ್ದರಂತೆ. ವಿಜಯ್ ಅವರಿಗೆ ಸಮಾಜದ, ತನ್ನ ಸುತ್ತಲಿನವರ ಸಂಕಷ್ಟಗಳು, ಅಸಮಾನತೆಯ ಬಗ್ಗೆ ನಿಲುವು ತಾಳಲು ಅವರ ಓದು ಕಾರಣ ಎಂದೇ ನಾನು ಭಾವಿಸುತ್ತೇನೆ.

ಒಮ್ಮೆ ಅವರು ಎಫ್‌ಬಿಯಲ್ಲಿ ಹಾಕಿದ ಇಂಗ್ಲಿಷ್ ಪೋಸ್ಟ್‌ನಲ್ಲಿ ಸಣ್ಣದೊಂದು ತಪ್ಪಾಗಿತ್ತು. ಅದನ್ನು ಮೆಸೇಜ್ ಮಾಡಿ ತಿಳಿಸಿದೆ. ನಾನು ಸಂಕೋಚದಿಂದಲೇ ಟೈಪಿಂಗ್ ಮಿಸ್ಟೇಕ್ ಇರಬೇಕು ಎಂದೆ. ಅದಕ್ಕವರು, ’ಇಲ್ಲ ನನಗೆ ಅದು ಗೊತ್ತಿರಲಿಲ್ಲ’ ಎಂದರು. ಆ ನಂತರದಲ್ಲಿ ದೀರ್ಘವಾಗಿ ಏನಾದರೂ ಇಂಗ್ಲಿಷ್‌ನಲ್ಲಿ ಹಾಕುವ ಪೋಸ್ಟ್‌ಗಳನ್ನು ಕಳಿಸಿ ’ನೋಡಿ ಹೇಳಿ ಪ್ಲೀಸ್’ ಎನ್ನುವ ಮೆಸೇಜು ಕಳಿಸುತ್ತಿದ್ದರು. ಹಾಗೆ ನೋಡಿದರೆ ಅವುಗಳಲ್ಲಿ ಏನೂ ತಪ್ಪುಗಳಿರುತ್ತಿರಲಿಲ್ಲ. ಆದರೆ ಅವರಿಗೆ ಖಾತರಿಪಡಿಸಿಕೊಳ್ಳುವ ಆ ಪ್ರಾಮಾಣಿಕತೆ ಇತ್ತು. ಇಂಥ ನಡುವಳಿಕೆಯನ್ನು ನಾವು ಎಷ್ಟು ಜನರಲ್ಲಿ ಕಾಣಬಹುದು? ಈ ವಿಚಾರವಾಗಿ, ’ನನ್ನನ್ನು ಬಿಗ್‌ಬಾಸ್‌ಗೆ ಕರೆಯುತ್ತಿದ್ದಾರೆ, ನಾನು ಬರಲ್ಲ ಎಂಬುದನ್ನು ಪೊಲೈಟ್ ಆಗಿ ಮತ್ತು ಡೀಸೆಂಟ್ ಆಗಿ ಹೇಳಬೇಕು ಅಂಥ ಮೆಸೇಜ್ ಡ್ರಾಫ್ಟ್ ಮಾಡಿ ಸರ್’ ಎಂದಾಗ ನಾನು “ಹೇ, ಯಾಕೆ ಸರ್? ಸೋಷಿಯಲ್ ಲೈಫ್ ಈಸ್ ಗೋಲ್ಡನ್ ಲೈಫ್. ನೀವು ಹೋಗಿ ಬನ್ನಿ’ ಎಂದಿದ್ದಕ್ಕೆ , ’ಯಾಕ್ ಸ್ವಾಮಿ, ನಾವು ಹೀಗಿರೋದು ನಿಮ್ಗೆ ಇಷ್ಟ ಇಲ್ವ?’ ಅಂದಿದ್ದರು. ಆಮೇಲೆ ನಾನು ಅಂದೆ, ’ನೀವು ಹೋಗ್ತೀನಿ ಅಂದ್ರೆ, ನಾನೇ ಅದರ ವಿರುದ್ಧ ಕ್ಯಾಂಪೇನ್ ಮಾಡ್ತೀನಿ’ ಎಂದಾಗ ನಕ್ಕಿದ್ದರು.

ಅವರ ಸುದ್ದಿ ಏನಾದರೂ ಟಿವಿಗಳಲ್ಲಿ ಬರುವಾಗ ನಮ್ಮ ಅವ್ಯಕ್ತ ಕಿರುಚಿತ್ರದ ಫುಟೇಜುಗಳು ಬಂದರೆ ತಕ್ಷಣ ಫೋಟೋ ಹೊಡೆದು ಕಳಿಸುತ್ತಿದ್ದೆ. ಅವರು ಆಸ್ಪತ್ರೆ ಸೇರಿದಾಗಿನಿಂದ ನಿರಂತರವಾಗಿ ಅವವೇ ಚಿತ್ರಗಳು ಪರದೆ ಮೇಲೆ ಮೂಡಿ ಬರುತ್ತಿದ್ದಾಗ ವಿಚಿತ್ರ ಸಂಕಟವಾಗುತ್ತಿತ್ತು. ಆ ಫೋಟೋಗಳನ್ನು ಅವರಿಗೆ ಕಳಿಸಿದರೆ ನೋಡುವುದಿಲ್ಲವಲ್ಲ!

’ನೀವು ಸಿನಿಮಾ ಒಪ್ಪಿಕೊಳ್ಳುವ ವಿಷಯದಲ್ಲಿ ಸ್ವಲ್ಪ ಚ್ಯೂಸಿ ಆಗಬೇಕು’ ಎಂದರೆ, ’ಅಯ್ಯೋ ಕೆಲಸ ಸಿಕ್ಕಾಗ ಮಾಡ್ತಾ ಇರಬೇಕು’ ಎನ್ನುತ್ತಿದ್ದವರ ಬಳಿ ಈಗ ಸುಮಾರು ಹದಿನೈದು ಸಿನಿಮಾಗಳಿದ್ದವು. ’ತಲೆದಂಡ’ ಸಿನಿಮಾದ ಪಾತ್ರವೂ ವಿಶೇಷವಾದ ಅಭಿನಯಕ್ಕೆ ಅವಕಾಶ ಕೊಟ್ಟಿರುವ ಪಾತ್ರವಾಗಿದೆ. ನನಗೆ ಅವರ ಸ್ನೇಹ ಸಿಕ್ಕಿದ್ದರ ಬಗ್ಗೆ ಬಹಳ ಹೆಮ್ಮೆಯಿದೆ. ನಮ್ಮನ್ನು ದುಃಖಕ್ಕೆ ತಳ್ಳಿದರು ಎಂಬ ಕೋಪವಿದೆ. ಆದರೆ ಸಿನಿಮಾ ನಟನೊಬ್ಬನಿಗೆ ಬಂದ ದೊಡ್ಡ ಪ್ರಶಸ್ತಿಯೊಂದು ಅವನನ್ನು ಜನರಿಂದ ದೂರ ಮಾಡಿಬಿಡುವ ಸಾಧ್ಯತೆಯೇ ಹೆಚ್ಚು. ಅಂಥದ್ದರಲ್ಲಿ ರಾಷ್ಟ್ರ ಪ್ರಶಸ್ತಿಯ ಹಮ್ಮು ಬಿಮ್ಮು ಎಂದೂ ಇಟ್ಟುಕೊಳ್ಳದೆ ಸಹಜವಾಗಿಯೇ ಸರಳವಾಗಿ ಬದುಕಿದ್ದ ಸಂಚಾರಿ ವಿಜಯ್, ಕನ್ನಡ ಚಿತ್ರರಂಗ ಮತ್ತು ಸಮಾಜ ಸದಾ ನೆನಪಿಟ್ಟುಕೊಳ್ಳಬೇಕಾದ ’ಸಾಮಾನ್ಯ ಮನುಷ್ಯ’. ಸಂಚಾರಿ ವಿಜಯ್ ಎಂದರೆ ಸಹಜ, ಸರಳ, ಸಜ್ಜನಿಕೆ ಮತ್ತು ಸಂಯಮ ಹೊಂದಿದ್ದ ಆನ್‌ಸ್ಕ್ರೀನ್‌ನಲ್ಲಿ ಮಾತ್ರ ನಟನಾಗಿದ್ದ ಪ್ರತಿಭಾವಂತ. ಸದಾ ಆಸ್ಪತ್ರೆಯಲ್ಲಿದ್ದವರ ಚಿಕಿತ್ಸೆಯ ಬಗ್ಗೆ ಯೋಚಿಸುತ್ತಿದ್ದ ವಿಜಯ್, ತಮ್ಮ ಅಂಗಾಂಗಗಳನ್ನು ಆಸ್ಪತ್ರೆಯಲ್ಲೇ ಬಿಟ್ಟು ಪರೋಪಕಾರಿಯಾಗಿದ್ದರೆಂಬ ಗರ್ವ ಇದ್ದಂತೆಯೇ ಆ ರಾತ್ರಿ ಹೆಲ್ಮೆಟ್ ಹಾಕಿರಲಿಲ್ಲ ಎಂದು ಗದರಿಸಬೇಕು ಅನ್ನಿಸುತ್ತದೆ. ಹಾಗೆಯೇ ಅವರಿಗಿದ್ದ ಜನರ ಪ್ರೀತಿಯನ್ನು ಕಾಣಿಸಬೇಕು ಅನ್ನಿಸುತ್ತಿದೆ. ಆದರೇನು ಮಾಡುವುದು?

He has met his maker!

  • ಶಿವಕುಮಾರ್ ಮಾವಲಿ
ಶಿವಕುಮಾರ್ ಮಾವಲಿ

ಶಿವಮೊಗ್ಗ ಮೂಲದ ಶಿವಕುಮಾರ್ ಕಥೆಗಾರ ಮತ್ತು ನಾಟಕಕಾರ. ಇಂಗ್ಲಿಷ್ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಶಿವಕುಮಾರ್ ಅವರ ’ದೇವರು ಅರೆಸ್ಟ್ ಆದ’, ’ಟೈಪಿಸ್ಟ್ ತಿರಸ್ಕರಿಸಿದ ಕಥೆ’ ಕಥಾಸಂಕಲನಗಳು ಪ್ರಕಟವಾಗಿವೆ.


ಇದನ್ನೂ ಓದಿ: ಸಂಚಾರಿ ವಿಜಯ್‌ ನಿಧನಕ್ಕೆ ಕನ್ನಡದಲ್ಲಿ ಸಂತಾಪ ಸೂಚಿಸಿದ ಅಮೆರಿಕಾ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...