Homeಮುಖಪುಟಮುದ್ದು ಮೇಲೆ ಕೇಸು ದಾಖಲಿಸಲು ಹೋಗಿ, ಕೊನೆಗೆ ಮದುವೆಗೆ ಸಾಕ್ಷಿ ಆದೆ - ಅಮೆರಿಕಾದಿಂದ ಜಿ.ಬಿ.ರಂಗಸ್ವಾಮಿ

ಮುದ್ದು ಮೇಲೆ ಕೇಸು ದಾಖಲಿಸಲು ಹೋಗಿ, ಕೊನೆಗೆ ಮದುವೆಗೆ ಸಾಕ್ಷಿ ಆದೆ – ಅಮೆರಿಕಾದಿಂದ ಜಿ.ಬಿ.ರಂಗಸ್ವಾಮಿ

ಇದೆಲ್ಲವನ್ನೂ ಮುದ್ದು ಆಗಾಗ್ಗೆ ನೆನಪಿಸಿ ನಗುತ್ತಿದ್ದರು. ಮುದ್ದು - ಇಂದ್ರಾಣಿಯವರು  ಆದರ್ಶ ದಂಪತಿಗಳಾಗಿ ಬಾಳ್ವೆ ಮಾಡಿದರು ಅಷ್ಟೇ ಅಲ್ಲ. ಅನೇಕ ಸರಳ, ಅಂತರ್ಜಾತಿಯ ಒಲವಿನ ಮದುವೆಗಳನ್ನು ಮಾಡಿಸಿ ಅದೆಷ್ಟೋ ಯುವಜೋಡಿಗಳಿಗೆ ಆಸರೆಯಾಗಿದ್ದರು. ಆದರ್ಶವಾಗಿದ್ದರು. 

- Advertisement -
- Advertisement -

|ಜೆ.ಬಿ.ರಂಗಸ್ವಾಮಿ| ಸಿಯಾಟಲ್ US

ಮೈಸೂರಿನವರಾದ ಮುದ್ದು ಕೃಷ್ಣ ಮತ್ತು ಇಂದ್ರಾಣಿ ದಂಪತಿಗಳು ಅಪರಿಮಿತ ಜೀವನೋತ್ಸಾಹ ಹೊಂದಿದ್ದವರು. ಮೈಸೂರಿನ ರಂಗಾಯಣದ ಮೂಲಕ ರಂಗಚಟುವಟಿಕೆಗಳಿಗೆ ರಂಗದ ಹಿಂದಿದ್ದುಕೊಂಡೇ ಕೆಲಸ ಮಾಡಿದ, ಎಂದೂ ವೇದಿಕೆಯನ್ನು ಬಯಸದ ಮುದ್ದು ಕೃಷ್ಣರವರು ಸಿನಿಮಾ ರಂಗಭೂಮಿಯ ಕುರಿತು ಅಪಾರ ಒಲವಿಟ್ಟುಕೊಂಡವರು. ಸಿನಿಮಾ ವಿಶ್ಲೇಷಣೆ, ಫೋಟೊಗ್ರಫಿ, ಪ್ರವಾಸ, ವೈವಿಧ್ಯ ಊಟ ಪರಿಚಯ ಸೇರಿದಂತೆ ಹಲವು ಹವ್ಯಾಸಗಳ ಮೂಲಕ ಗಮನ ಸೆಳೆದಿದ್ದರು. ಸಾಮಾಜಿಕ ಆಗುಹೋಗುಗಳಿಗೆ ಸಕ್ರಿಯವಾಗಿ ಸ್ಪಂದಿಸುತ್ತಿದ್ದ ಈ ಜೋಡಿ ಉತ್ತರ ಪ್ರದೇಶದ ಪ್ರವಾಸದಲ್ಲಿದ್ದಾಗ ಅಪಘಾತದಿಂದ ಇಹಲೋಕ ತ್ಯಜಿಸಿದ್ದಾರೆ. ಈ ಕುರಿತು ಅವರ ಒಡನಾಡಿಗಳು ಕಂಬನಿ ಮಿಡಿದಿದ್ದು ಅವರ ಸ್ನೇಹಿತರಾದ ಜೆ.ಬಿ ರಂಗಸ್ವಾಮಿಯವರು ಅವರ ಮದುವೆಯ ತಲ್ಲಣದ ಘಟನೆಗಳನ್ನು ಹಂಚಿಕೊಳ್ಳುವ ಮೂಲಕ ಮುದ್ದು ಕೃಷ್ಣರವರನ್ನು ಸ್ಮರಿಸಿದ್ದಾರೆ.

ಮುದ್ದೂ ಮದುವೆ 

ಅಮೇರಿಕಾದ ಸಿಯಾಟಲ್ ನ ಛಳಿಯಲ್ಲಿ ಕಳೆದ ತಿಂಗಳು BREAKING BAD ಎಂಬ 2008 ರ ಟಿವಿ ಸೀರಿಯಲ್ ಅನ್ನು ಬಿಡದೆ ನೋಡುತ್ತಿದ್ದಾಗ ಹಲವು ಹತ್ತು ಬಾರಿ ಮುದ್ದು ( ಕೃಷ್ಣ ) ನೆನಪಾಗಿದ್ದರು. ಆ ಮೆಗಾ ಸೀರಿಯಲ್ ಎಂಬತ್ತನಾಲ್ಕು (ಗಂಟೆ) ಎಪಿಸೋಡಿನದು.

ಹತ್ತು ದಿನ ಕುಳಿತು ಬಿಡದೆ ನೋಡಿದೆ. ನಮ್ಮ ಮುದ್ದುವೂ ಹಾಗೆಯೇ. ಚಲನಚಿತ್ರೋತ್ಸವಗಳಿಗೆ ಬಂದರೆಂದರೆ ದಿನಕ್ಕೆ ಆರು ಸಿನಿಮಾಗಳನ್ನು ಆಸ್ವಾದಿಸುವ ಅಭಿಮಾನಿ. ವೀಕ್ಷಿಸುವ ಪ್ರತಿ ಚಿತ್ರದ  ಬಗ್ಗೆಯೂ  ಮೊದಲೇ ಅಧ್ಯಯನ ಮಾಡಿಕೊಂಡು ನಂತರ ನೋಡುವ ಪ್ರವೃತ್ತಿ ಅವರದು. ನಾನು  ಚಿತ್ರೋತ್ಸವಗಳಿಗೆ  ಹೋದರೆ ಅವರನ್ನು ಹುಡುಕಿಕೊಂಡು ಹೋಗುತ್ತಿದ್ದೆ. ಆಯಾ ದಿನ ನೋಡಬೇಕಾದ ಅತ್ಯುತ್ತಮ ಚಿತ್ರಗಳನ್ನು ಅವರಿಂದ ಗುರ್ತು ಹಾಕಿಸಿಕೊಳ್ಳುತ್ತಿದ್ದೆ. ಕೆಲವು ಮುಖ್ಯ ಚಿತ್ರಗಳನ್ನು ನೋಡುವಾಗ ಗಮನಿಸಬೇಕಿರುವ ಮಹತ್ವದ ಅಂಶಗಳ ಬಗ್ಗೆ ಬೆಳಕು ಚೆಲ್ಲುತ್ತಿದ್ದರು.

ಮೈಸೂರಿನಲ್ಲಿ ಸಿನಿಮಾ ಸಮಯ ಕೂಟದ ಮೂಲಕ ಅನೇಕ ಅಪರೂಪದ ಚಿತ್ರಗಳನ್ನು ಕಾಣಿಸಿದವರು ಅವರು. ಸಮುದಾಯದ ರಂಗ ಚಟುವಟಿಕೆ, ಪಕ್ಷಿವೀಕ್ಷಣೆ, ಅಂಚೆಸಂಗ್ರಹ ಹೀಗೆ ನಾನಾ ಚಟುವಟಿಕೆಗಳಲ್ಲಿದ್ದ ಅವರು ಪರಿಚಯವಾದದ್ದು ಓರ್ವ ಅಪರಾಧಿಯಾಗಿ !

ಅದು 1983.

ಹೌದು ಅವರ ಮೇಲೆ ಹುಡುಗಿಯೊಬ್ಬಳನ್ನು ಕಿಡ್ನ್ಯಾಪ್ ಮಾಡಿದ್ದಾರೆಂಬ ದೂರು ಬಂದಿತ್ತು. ಅವರು ಕೆಲಸದಲ್ಲಿದ್ದ  ಬ್ಯಾಂಕ್, ಮನೆ ಹೀಗೆ ಎಲ್ಲೆಡೆ ತಲಾಶ್ ಮಾಡುತ್ತಿದ್ದೆ.

ಅಷ್ಟರಲ್ಲಿ ಮಿತ್ರ ಆಂದೋಲನದ  ರಾಜಶೇಖರ ಕೋಟಿಯವರ ಫೋನ್ ಬಂತು. ಮುದ್ದುಕೃಷ್ಣನನ್ನು ಕಳಿಸಿಕೊಡುತ್ತೇನೆಂದು ಪ್ರಾಮಿಸ್ ಮಾಡಿದರು.

ಸಂಜೆ ವೇಳೆಗೆ ಲಿಂಗದೇವರು ಹಳೆಮನೆ ಮುಂತಾದ ನಾಲ್ಕಾರು ಗೆಳೆಯರೊಂದಿಗೆ ಆರೋಪಿ ಮುದ್ದುಕೃಷ್ಣ  ಹಾಜರಾದ . ನೋಡಿದರೆ ಪರಿಚಿತ ಆಸಾಮಿಯೇ!. ಗೋಕಾಕ್ ಚಳವಳಿಯಲ್ಲಿ ಪಾಲ್ಗೊಂಡಿದ್ದ ಮನುಷ್ಯ.

ಆಗ ಚಳುವಳಿಕೋರ. ಈಗ ಕಿಡ್ನ್ಯಾಪಿಂಗ್ ಅಪರಾಧಿ!.

ಜೊತೆಗೆ ಬಂದಿದ್ದವರನ್ನು ಹೊರ ಕಳಿಸಿ ವಿಚಾರಿಸಿದೆ.

“ನಾನು ಯಾರನ್ನೂ ಕಿಡ್ನ್ಯಾಪ್ ಮಾಡಿಲ್ಲ. ಆ ಹುಡುಗಿ ಎಲ್ಲಿದ್ದಾಳೋ ಗೊತ್ತಿಲ್ಲ. ನನ್ನ ಮೇಲೆ ಸುಳ್ಳು ಕಂಪ್ಲೇಂಟ್ ಕೊಟ್ಟಿದ್ದಾರೆ.” ಮುದ್ದುಕೃಷ್ಣನ ಮುದ್ದು ಮಾತು !

“ಈ ಕ್ಷಣ ಆ ಹುಡುಗಿನ ಒಪ್ಪಿಸಲಿಲ್ಲಾ ಅಂದ್ರೆ ಲಾಕಪ್ಪಲ್ಲಿ ಹಾಕಿ ತೀಡುತ್ತೀನಿ ಮಗನೇ.  ಕೆಲಸದಿಂದ ಡಿಸ್ಮಿಸ್ ಮಾಡ್ಸಿ ಜೀವಾವಧಿ ಜೈಲಲ್ಲಿ ಕೂರಿಸುತ್ತೇನೆ” ಅಂತ ಮಾಮೂಲಿ ಗುಟುರು ಹಾಕಿದೆ.

ಹೊರಗಿದ್ದ ಅವರ ಜೊತೆಗಾರರು ಒಳಬಂದರು. ಹಳೆಮನೆಯವರು, ಮುದ್ದುವಿನ ಪ್ರೇಮ ಪ್ರವರ ಬಿಚ್ಚಿಟ್ಟರು.

“ಹುಡುಗಿ ಸೇಫಾಗಿ ಸ್ನೇಹಿತರ ಮನೆಯಲ್ಲಿದ್ದಾಳೆ. ತಿಂಗಳ ಹಿಂದೆಯೇ ರಿಜಿಸ್ಟರ್ ಮ್ಯಾರೇಜ್ ಗೆ ಅರ್ಜಿ ನೀಡಿದ್ದಾರೆ. ಇನ್ನು ನಾಲ್ಕೈದು ದಿನಕ್ಕೆ ಮದುವೆ”. ಅಂತ ದಾಖಲಾತಿಗಳನ್ನು ತೋರಿಸಿದರು.

“ನಿಮ್ಮ ಪುರಾಣ ಎಲ್ಲಾ ಪಕ್ಕಕ್ಕಿಡ್ರೀ. ಇನ್ನು ಅರ್ಧ ಗಂಟೆಯೊಳಗೆ ಆ ಹುಡುಗಿ ಇಲ್ಲಿರಬೇಕು. ಇಲ್ಲಾಂದ್ರೆ ನಾನು ಕೇಸು ರಿಜಿಸ್ಟರ್ ಮಾಡೋದೇ. ಆಮೇಲೆ ಯಾರೇನು ತಿಪ್ಪರಲಾಗ ಹೊಡೆದರೂ ಏನೂ ಮಾಡೋದಿಕ್ಕೆ ಆಗೋದಿಲ್ಲ. ಕಿಡ್ನ್ಯಾಪ್ ಮಾಡಿಲ್ಲ ಅಂತ ಆ ಹುಡುಗೀನೇ  ಇಲ್ಲಿ ಬಂದು ಹೇಳಬೇಕು.” ನಿಷ್ಠುರವಾಗಿ ಹೇಳಿದೆ.

“ಹುಡುಗಿಗೆ  ಇಪ್ಪತ್ತೈದು ವರ್ಷ, ಮೇಜರ್ ಆಗಿದ್ದಾಳೆ. ಅವಳ ಬರ್ತ್ ಸರ್ಟಿಫಿಕೇಟ್ ಇದೆ. ಸಬ್ ರಿಜಿಸ್ಟ್ರಾರ್ ಆಫೀಸಿನಲ್ಲಿ ಅರ್ಜಿ ಕೊಟ್ಟಿದ್ದಾರೆ. ಯಾವುದೇ ವಿಷಯ ಮುಚ್ಚಿಟ್ಟಿಲ್ಲ. ಮದುವೆ ಬಗ್ಗೆ ತಕರಾರಿದ್ದರೆ ಅಲ್ಲಿ ಅರ್ಜಿ ಕೊಡಬೇಕಲ್ಲವೇ?. ಇದು ಸುಳ್ಳು ಕಂಪ್ಲೇಂಟ್ ಸಾರ್. . . .  ”

ಅವರ ವಾದವನ್ನು ತಡೆದು , “ನಿಮ್ಮ ಯಾವ ಮಾತೂ ಈಗ ಬೇಡಿ. ಹುಡುಗೀನೇ‌ ಬಂದು ಹೇಳಿಕೆ ಕೊಡಲಿ. ಆಮೇಲೆ ನೋಡೋಣ” ಎಂದೆ.

ಅಷ್ಟರಲ್ಲಿ ದೂರು ಕೊಟ್ಟಿದ್ದ ಹುಡುಗಿಯ  ಕಡೆಯವರು ನಜರ್ ಬಾದ್  ಸ್ಟೇಷನ್ ಮುಂದೆ ಜಮಾಯಿಸಿದ್ದರು. ಆಗಿನ ಶಾಸಕ ಅಜೀಜ್ ಸೇಠ್ ಮೊದಲ್ಗೊಂಡು ಅನೇಕರ ಫೋನ್ ಬಂದಿತ್ತು.

ಹುಡುಗಿ ಕಡೆಯ ಕೆಲವರು ಮುದ್ದುಕೃಷ್ಣನ ಮೇಲೆ ಉಗ್ರ ಕ್ರಮ ಜರುಗಿಸಬೇಕೆಂದು ವರಾತ ಶುರು ಮಾಡಿದ್ದರು.

ರಾತ್ರಿ ಎಂಟು ಗಂಟೆಯ ವೇಳೆಗೆ ಹುಡುಗಿಯನ್ನು ಕರೆತಂದರು. ಅವಳ ಕಡೆಯವರೆಲ್ಲಾ ಠಾಣೆಯ ತುಂಬಾ ತುಂಬಿಕೊಂಡರು.

ಓಪನ್ ಎನ್ ಕ್ವಯರಿ ಮಾಡಲಾದೀತೇ?. ಎಲ್ಲರನ್ನೂ ಹೊರಕಳಿಸಿ ಕಂಪ್ಲೇಂಟ್ ಕೊಟ್ಟವರ ಕಡೆಯ ನಾಲ್ಕಾರು ಜನ ಹಿರಿಯರು ಮತ್ತು ಹುಡುಗನ ಪರ ಒಂದಿಬ್ಬರನ್ನು ಇರಿಸಿಕೊಂಡೆ. ವಿಚಾರಣೆ ಶುರುವಾಯಿತು.

ತಮ್ಮಿಬ್ಬರ ಸ್ನೇಹ ಪ್ರೇಮ ತಿಳಿಸಿದ ಹುಡುಗಿ ತಾನಾಗಿ ಸ್ವತಃ ಮನೆಯಿಂದ ಹೋಗಿದ್ದೇನೆ. ಯಾರೂ ಬಲವಂತವಾಗಿ ಕರೆದೊಯ್ದಿಲ್ಲ. ತಾನೇ  ತನ್ನ ಆಪ್ತರ ಮನೆಯಲ್ಲಿ ಉಳಿದುಕೊಂಡಿದ್ದೇನೆ.‌ ಮದುವೆಯಾಗುವ ತನಕ ಅಲ್ಲಿಯೇ ಇರುತ್ತೇನೆಂದು ಹೇಳಿಕೆ ಕೊಟ್ಟಳು.

“ಅವಳಿಗೆ ಏನೂ ಗೊತ್ತಾಗೋದಿಲ್ಲ. ಅವನು ಹುಟ್ಟು ಪೋಲಿ. ಮಂಕುಬೂದಿ ಎರಚಿ ಕರೆದುಕೊಂಡು ಹೋಗಿದ್ದಾನೆ. ಅವಳು ಮೈನರ್ ಬೇರೆ. ನಮ್ಮ ವಶದಿಂದ ಕಿಡ್ನ್ಯಾಪ್ ಆಗಿದ್ದಾಳೆ. ನಮ್ಮ ಜೊತೆಗೆ ಕಳಿಸಿಕೊಡಿ”. ಹುಡುಗಿ ಕಡೆಯವರು ಪಟ್ಟು ಹಿಡಿದರು. ಏನು ಸಮಾಧಾನ ಹೇಳಿದರೂ ಕೇಳುವ ಸ್ಥಿತಿಯಲ್ಲಿ ಅವರಿರಲಿಲ್ಲ.

“ಹುಡುಗ ಒಳ್ಳೆಯ ಕೆಲಸದಲ್ಲಿದ್ದಾನೆ. ಕಪ್ಪಗಿದ್ರೂ ಲಕ್ಷಣವಾಗಿದ್ದಾನೆ. ಚೆನ್ನಾಗಿ ನೋಡಿಕೊಳ್ತಾನೆ ಬಿಡ್ರೀ. ಅವರಿಬ್ಬರೂ ಪ್ರೀತಿಸಿ  ಮದುವೆಯಾಗ್ತಿದ್ದಾರೆ. ನೀವೇ ಮುಂದೆ ನಿಂತು ಆಶೀರ್ವಾದ ಮಾಡಿ ಒಳ್ಳೆಯದಾಗುತ್ತೆ.” ಇತ್ಯಾದಿ ಹೇಳಿದೆ.

ಕಿಡ್ನ್ಯಾಪ್ ಮಾಡಿದೋನನ್ನು ಒದ್ದು ಲಾಕಪ್ಪಿನಲ್ಲಿ ಹಾಕ್ತೀನಿ ಅಂತ ಭರವಸೆ ಕೊಟ್ಟಿದ್ದ ಸಬ್ ಇನ್ಸ್ ಪೆಕ್ಟರ್ ‌ಈಗ ಪ್ಲೇಟ್ ತಿರುಗಿಸಿ , ಅಪರಾಧಿಗೇ ಸಪೋರ್ಟ್ ಮಾಡ್ತಿದ್ದಾನೆ !. ಹುಡುಗಿ ಕಡೆಯವರು ಕನಲಿ ಹೋದರು.

“ಯಾವ ಸೀಮೆ  ಪ್ರೀತಿ ಮಾಡಿದ್ದಾರೆ ಸಾರ್. ಮೂರು ದಿನವೂ ಬಾಳ್ಮೆ ಮಾಡದೆ ಮೂರಾಬಟ್ಟೆಯಾಗಿರೋರನ್ನು ದಿನವೂ ನೋಡ್ತಿದ್ದೇವೆ. ಇವರು ಬರಕತ್ತಾಗೋದಿಲ್ಲ. ಇಬ್ಬರನ್ನೂ ಬೇರೆ ಮಾಡಿಸಿಕೊಡಿ.”

“ನೋಡ್ರೀ, ಇಬ್ಬರೂ ಪ್ರೀತಿಸಿದ್ದು, ಹುಡುಗ ಮದುವೆಯಾಗೋದಿಲ್ಲ ಅಂತ ಠಲಾಯಿಸುತ್ತಿದ್ದಾನೆ ಅಂದರೆ ಆಗ ಬೇರೆಯಾಗಿ ಅಂತ ಬುದ್ದಿ  ಹೇಳಬಹುದು. ಆದರೆ ಇಲ್ಲಿ ಕಾನೂನು ಪ್ರಕಾರ ಮದುವೆಯಾಗೋದಿಕ್ಕೆ ಅರ್ಜಿ ಕೊಟ್ಟಿದ್ದಾರೆ. ಈಗ ಏನೂ ಮಾಡೋದಿಕ್ಕೆ ಬರೋದಿಲ್ಲ. ”

ಕಂಪ್ಲೇಂಟ್ ಕೊಟ್ಟರೆ ನೀವೇ ಅವರಿಗೆ ಸಪೋರ್ಟ್ ಮಾಡ್ತಿದ್ದೀರಲ್ಲಾ ಸಾರ್ ? ಅವಳನ್ನ ನಮ್ಜೊತೆ ಯಾಕೆ ಕಳಿಸಿಕೊಡೋದಿಲ್ಲ ?” ಅಂತ ಕಾರ್ಪೊರೇಟರ್ ಸಮೇತ ಮುಗಿಬಿದ್ದರು.

“ಇಪ್ಪತ್ತೈದು ಆಗೋತನಕ ಮದುವೆ ಮಾಡಿಲ್ಲ ಅಂದರೆ ನಿಮಗೆ ಮದುವೆ ಮಾಡೋದಿಕ್ಕೆ ಯೋಗ್ತಿ ಇಲ್ಲ ಅಂತ. (ಆಗೆಲ್ಲ 20-22 ವರ್ಷದೊಳಗೆ ಹುಡುಗಿಯರ ಮದುವೆ ಮಾಡುತ್ತಿದ್ದರು. ) ಟೈಮ್ ಬಾರಾಗಿದೆ (bar). ಹುಡುಗಿ ವಿದ್ಯಾವಂತೆ ತನಗೆ ಬೇಕಾದ ಹುಡುಗನನ್ನು ಆಯ್ಕೆ ಮಾಡಿಕೊಂಡಿದ್ದಾಳೆ. ತಾನಾಗಿ ಸ್ವಯಿಚ್ಚೆಯಿಂದ ಮನೆಯಿಂದ ಹೋಗಿದ್ದಾಳೆ. ನಾವೇನೂ ಮಾಡೋದಿಕ್ಕೆ ಆಗೋದಿಲ್ಲ. ಕಾನೂನೇ ಅವರ ಪರ ಇದೆ.

“ಇಲ್ಲೀ ತನಕ ನೀವೂ ಹಠ ಮಾಡಿದಿರಿ, ಸರಿ. ಈಗ ಕೈ ಮೀರಿಹೋಗಿದೆ. ನಿಮ್ಮ ಹುಡುಗಿ ಸರಿಯಾಗಿ ಬಾಳಲಿ ಅಂತಿದ್ರೆ ಆಶೀರ್ವಾದ ಮಾಡಿ. ಇಲ್ಲಾಂದ್ರೆ ಸುಮ್ಮನೆ ಇದ್ದುಬಿಡಿ. ನೀವೀಗ ಕೋರ್ಟಿಗೆ ಹೋದ್ರೂ ಉಪಯೋಗ ಆಗೊಲ್ಲ. ” ಅಂತ ತೀರ್ಮಾನ ಹೇಳಿದೆ.

ಅಲ್ಲಿಗೆ ಎಲ್ಲರೂ ಮೌನವಾದರು.

ಇನ್ನು ಹುಡುಗಿಯನ್ನೀಗ ಯಾರ ಸುಫರ್ದಿನಲ್ಲಿ ಕಳಿಸಿಕೊಡಬೇಕು?. ಸಮಸ್ಯೆ ಎದುರಾಯಿತು.

ಹುಡುಗನ ಜೊತೆಗಂತೂ ಕಳಿಸುವಂತಿರಲಿಲ್ಲ. ಇಬ್ಬರು ಹಿರಿಯ ಗೃಹಸ್ಥರನ್ನು ಕರೆಸಿ ಅವರ ಸುಫರ್ದಿನಲ್ಲಿ ಮದುವೆ ತನಕ ಹುಡುಗಿ ಇರತಕ್ಕದ್ದೆಂದು ಮುಚ್ಚಳಿಕೆ ಬರೆಸಿಕೊಂಡೆವು. ಹುಡುಗಿ ಯಾರ ಮನೆಯಲ್ಲಿ ಉಳಿದುಕೊಳ್ಳುತ್ತಾಳೆಂದು ಯಾರಿಗೂ ಗೊತ್ತಾಗಲಿಲ್ಲ.

ಇವೆಲ್ಲವೂ ನಡೆಯುವ ವೇಳೆಗೆ ಹುಡುಗಿ ಕಡೆಯವರು, ಮರ್ಡರ್ ಮಾಡ್ತೀವಿ ಎಂದೆಲ್ಲಾ ಕೂಗಾಡಿದ್ದರಿಂದ, ಅವರ ಬಳಿಯೂ ಮುಚ್ಚಳಿಕೆ ಬರೆಸಿಕೊಂಡೆವು.
“ನೀವು ಮರ್ಡರ್ ಮಾಡೋದಿರಲಿ. ಹುಡುಗ ಹುಡ್ಗಿ ತಾವೇ ಏನಾದ್ರೂ ಮಾಡಿಕೊಂಡ್ರೂ ನೀವೇ ಅದಕ್ಕೆ  ಜವಾಬ್ದಾರಿ. ಹುಷಾರ್ !” ಎಂದು ಹೆದರಿಸಿ ಕಳಿಸಿದೆವು.

ಇಷ್ಟಾಗುವ ವೇಳೆಗೆ ರಾತ್ರಿ ಎರಡು ಗಂಟೆಯಾಗಿತ್ತು. ಹುಡುಗನಿಗೂ ಬೇರೆ ಅಜ್ಞಾತ ಸ್ಥಳದಲ್ಲಿ ಇರುವಂತೆ ವ್ಯವಸ್ಥೆಯಾಯಿತು.

ಪೊಲೀಸ್ ಬಂದೋಬಸ್ತ್ ನಲ್ಲಿ ಸಬ್ ರಿಜಿಸ್ಟ್ರಾರ್ ಕಛೇರಿಯಲ್ಲಿ ಮದುವೆ ನಡೆಯಿತು. ಬಹುಶಃ ನಾನೂ ಸಾಕ್ಷಿ ಸಹಿ ಹಾಕಿದೆನೆಂಬ ನೆನಪು.

“ನೋಡ್ರೀ ಮುದ್ದೂ. ಎಲ್ಲರೂ ನಿಮಗಾಗಿ ರಿಸ್ಕ್ ತಗೊಂಡು ಮದುವೆ ಮಾಡಿಸಿದ್ದಾರೆ. ಲವ್ ಮ್ಯಾರೇಜ್ ಅಂದರೆ ಯಾರಿಗೂ ನಂಬಿಕೆ ಇಲ್ಲ.  ಹುಡುಗೀನ ನೀವು ಸರಿಯಾಗಿ ಬಾಳಿಸಬೇಕು. ಇಲ್ಲಾಂದ್ರೆ ಗ್ರಾಚಾರ ಬಿಡಿಸ್ತೀವಿ” ಅಂದೆ. ಇದು ಅವರ ಮದುವೆಗೆ ಕೊಟ್ಟ ರೋಫ್ ದಾರಿಕೆ ಉಡುಗೊರೆ !.

ಇದೆಲ್ಲವನ್ನೂ ಮುದ್ದು ಆಗಾಗ್ಗೆ ನೆನಪಿಸಿ ನಗುತ್ತಿದ್ದರು. ಮುದ್ದು – ಇಂದ್ರಾಣಿಯವರು  ಆದರ್ಶ ದಂಪತಿಗಳಾಗಿ ಬಾಳ್ವೆ ಮಾಡಿದರು ಅಷ್ಟೇ ಅಲ್ಲ. ಅನೇಕ ಸರಳ, ಅಂತರ್ಜಾತಿಯ ಒಲವಿನ ಮದುವೆಗಳನ್ನು ಮಾಡಿಸಿ ಅದೆಷ್ಟೋ ಯುವಜೋಡಿಗಳಿಗೆ ಆಸರೆಯಾಗಿದ್ದರು. ಆದರ್ಶವಾಗಿದ್ದರು.

ಅವರಿಗೆ ಇಂತಹ ವಿದ್ರಾವಕ ಕೊನೆ ಬರಬಾರದಿತ್ತು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇರಳದ 13ನೇ ಮುಖ್ಯಮಂತ್ರಿ ವಿ.ಡಿ. ಸತೀಶನ್: ವಿದ್ಯಾರ್ಥಿ ನಾಯಕನಿಂದ ಸಿಎಂ ಸ್ಥಾನದವರೆಗೆ ಸತೀಶನ್ ಪಯಣ

ತಿರುವನಂತಪುರಂ: ಕೇರಳಂನ ನೂತನ ಮುಖ್ಯಮಂತ್ರಿಯಾಗಿ ವಿ.ಡಿ. ಸತೀಶನ್ ಅವರನ್ನು ಕಾಂಗ್ರೆಸ್ ಹೈಕಮಾಂಡ್ ಆಯ್ಕೆ ಮಾಡಿದೆ. ಆ ಮೂಲಕ ಹಲವು ದಿನಗಳಿಂದ ಈ ಬಗ್ಗೆ ನಡೆಯುತ್ತಿದ್ದ ಕುತೂಹಲ ಮತ್ತು ಚರ್ಚೆಗಳಿಗೆ ತೆರೆ ಬಿದ್ದಿದೆ.  ಅಖಿಲ ಭಾರತ...

ದಲಿತರ ನ್ಯಾಯಕ್ಕೆ ಹೊಸ ಅಡ್ಡಿಯಾಗಲಿದೆಯೇ ‘ಸಾರ್ವಜನಿಕ ವೀಕ್ಷಣೆ’ ನಿಯಮ? ಪರಿಶಿಷ್ಟರನ್ನು ಆತಂಕಕ್ಕೆ ತಳ್ಳಿದ ಸುಪ್ರೀಂ ತೀರ್ಪು

ಸಾರ್ವಜನಿಕರು ನೋಡದ ಜಾಗದಲ್ಲಿ, ಅಂದರೆ ಯಾರೂ ನೋಡದ ಜಾಗದಲ್ಲಿ ಜಾತಿ ನಿಂದನೆ ಅಥವಾ ಅವಮಾನ ನಡೆದರೆ, ಅದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆ 1989ರ ಅಡಿಯಲ್ಲಿ ಅಪರಾಧ...

ಪಶ್ಚಿಮ ಬಂಗಾಳ: “ಇದು ಬುಲ್ಡೋಜರ್ ರಾಜ್ಯವಲ್ಲ”: ಚುನಾವಣೋತ್ತರ ಹಿಂಸಾಚಾರದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಚುನಾವಣೋತ್ತರ ಹಿಂಸಾಚಾರದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಗುರುವಾರ ವಕೀಲರ ನಿಲುವಂಗಿಯನ್ನು ಧರಿಸಿ ಕಲ್ಕತ್ತಾ ಹೈಕೋರ್ಟ್‌ಗೆ ಬಂದ ಅವರು ವಿಧಾನಸಭಾ...

ದಾವಣಗೆರೆ ಉಪ ಚುನಾವಣೆ ಅಡ್ಡ ಪರಿಣಾಮ: ಮುಸ್ಲಿಮ್ ಮುಖಂಡರ ಮೇಲೆ ಖರ್ಗೆ-ಡಿಕೆಶಿ ಶಿಸ್ತು ಪ್ರಹಾರ ಕಾಂಗ್ರೆಸ್‌ನ ಆತ್ಮಹತ್ಯಾತ್ಮಕ ರಾಜಕಾರಣ!!

ದಾವಣಗೆರೆ ದಕ್ಷಿಣ ಉಪ ಚುನಾವಣೆ ರಾಜ್ಯದ ಆಡಳಿತಾರೂಢ ಕಾಂಗ್ರೆಸ್‌ನ ಗದ್ದುಗೆ ಗುದ್ದಾಟಕ್ಕೆ ರೋಚಕ ಆಯಾಮ ನೀಡಿಬಿಟ್ಟಿದೆ. ಅಹಿಂದ ಸಮುದಾಯವೇ ಬಹುಜನರಾಗಿರುವ ದಾವಣಗೆರೆ ದಕ್ಷಿಣ ಅಸೆಂಬ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್ ನ್ಯಾಯವಾಗಿ ಆ ವರ್ಗದ ಅರ್ಹರೊಬ್ಬರಿಗೆ...

ನೀಟ್ ವಿವಾದ: ಪ್ರಶ್ನೆ ಪತ್ರಿಕೆ ಸೋರಿಕೆ ಜೊತೆಗೆ ಹೆಚ್ಚುತ್ತಿರುವ ವಿದ್ಯಾರ್ಥಿಗಳ ಆತ್ಮಹತ್ಯೆ

ರಾಜಸ್ಥಾನದಲ್ಲಿ ನಡೆದ ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ (ಸಿಬಿಐ) ತನಿಖೆ ವೇಗ ಪಡೆದುಕೊಂಡಿದೆ. ದೇಶದಾದ್ಯಂತ ಹಲವು ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಆರೋಪದ ಮೇಲೆ...

ಎಸ್‌ಐಆರ್‌ನಲ್ಲಿ ಮತದಾನದ ಹಕ್ಕು ಹೋಯ್ತು..ಈಗ ಸರ್ಕಾರಿ ಸೌಲಭ್ಯದ ಸರದಿ..ಮುಂದೆ ನಾಗರಿಕತ್ವ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುವುದು ಚುನಾವಣಾ ಆಯೋಗ ಭಾರತದ ಕೋಟ್ಯಾಂತರ ನಾಗರಿಕ ಅಮೂಲ್ಯವಾದ ಮತದಾನದ ಹಕ್ಕನ್ನು ಕಿತ್ತುಕೊಂಡ ಒಂದು ವ್ಯವಸ್ಥಿತ ಸಂಚು ಎನ್ನಬಹುದು. ಬಿಹಾರ, ಪಶ್ಚಿಮ ಬಂಗಾಳ, ತಮಿಳುನಾಡು,...

ಜೋಸೆಫ್ ವಿಜಯ್‌ ಅವರ ಐತಿಹಾಸಿಕ ಗೆಲುವು: ರಾಜ್ಯಪಾಲರ ಸೋಲು ಮತ್ತು ದ್ರಾವಿಡ ನೆಲದ ರಾಜಕೀಯ: ಒಂದು ವಿಶ್ಲೇಷಣೆ

ತಮಿಳಗ ವೆಟ್ರಿ ಕಝಗಂ (TVK) ಪಕ್ಷವು ತಮಿಳುನಾಡು ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಿ ಸರ್ಕಾರ ರಚಿಸುವ ಜವಾಬ್ದಾರಿ ತೆಗೆದುಕೊಂಡಿದೆ. ಮೇ 13, 2026ರ ಬುಧವಾರ ನಡೆದ ನಾಟಕೀಯ ವಿಶ್ವಾಸ ಮತಯಾಚನೆಯಲ್ಲಿ 144 ಮತಗಳ ಬೆಂಬಲ...

FACT CHECK: ಟಿವಿಕೆ ಪಕ್ಷ ಅಧಿಕಾರಕ್ಕೆ ಬರುತ್ತಿದಂತೆ ಹಿಂದಿ ಹೇರಿಕೆ ವಿರುದ್ದ ಪ್ರತಿಭಟನೆ ಎಂದು ಹಳೆಯ ವಿಡಿಯೋ ಹಂಚಿಕೆ

ಹಿಂದಿ ಹೇರಿಕೆ ವಿರುದ್ದದ ಹೋರಾಟವು ತಮಿಳುನಾಡಿಗೆ ಹೊಸದೇನು ಅಲ್ಲ. ಆದರೆ ಚೆನ್ನೈನ ಜವಾಹರಲಾಲ್ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷ ಅಧಿಕಾರ ವಹಿಸಿಕೊಂಡ ನಂತರ ...

ನೀಟ್: ಪ್ರಶ್ನೆಪತ್ರಿಕೆ ಸೋರಿಕೆಯ ಆತಂಕ ಮತ್ತು ಪ್ರಾದೇಶಿಕ ಹಿತಾಸಕ್ತಿಗಳ ಬಲಿ

ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಆರೋಪದ ಮೇಲೆ ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ...

ಕೇಂದ್ರ ಸಚಿವ ಬಂಡಿ ಸಂಜಯ್ ಮಗನ ವಿರುದ್ಧ ಪೋಕ್ಸೋ ಕೇಸ್ : ಕ್ರಮ ಕೈಗೊಳ್ಳದೆ ಕಥೆ ಹೇಳುತ್ತಿರುವ ಪೊಲೀಸರು, ಅಂತರ ಕಾಯ್ದುಕೊಂಡ ಬಿಜೆಪಿ

ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ, ತೆಲಂಗಾಣದ ಪ್ರಮುಖ ಬಿಜೆಪಿ ನಾಯಕ ಬಂಡಿ ಸಂಜಯ್ ಕುಮಾರ್ ಅವರ ಮಗ ಬಂಡಿ ಸಾಯಿ ಭಗೀರತ್ ವಿರುದ್ಧ 17 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಪೋಕ್ಸೋ...