Homeಮುಖಪುಟಉದ್ದಗಲ ಹರಡುತ್ತಿದೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಎಂಬ ಮನುಷ್ಯ ಸೃಷ್ಟಿಯ ಮಾಯೆ

ಉದ್ದಗಲ ಹರಡುತ್ತಿದೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಎಂಬ ಮನುಷ್ಯ ಸೃಷ್ಟಿಯ ಮಾಯೆ

- Advertisement -
- Advertisement -

ಕಳೆದ ಕೆಲವು ವಾರಗಳಿಂದ ಇಂಟರ್ನೆಟ್‌ನಲ್ಲಿ ಒಂದೇ ಬಹು ಮುಖ್ಯ ಚರ್ಚೆ. ಚಾಟ್‌ಜಿಪಿಟಿ. ಓಪನ್ ಎಐ ಮುಕ್ತ ತಂತ್ರಜ್ಞಾನ ಅಭಿವೃದ್ಧಿ ಪಡಿಸಿದ ಚಾಟ್‌ಬಾಟ್ ಇದು. ನೀವು ಯಾವುದೇ ವಿಷಯಕ್ಕೆ ಸಂಧಿಸಿದ ಮಾಹಿತಿಯನ್ನು ಕೇಳಿದರೆ ಕ್ಷಣ ಮಾತ್ರದಲ್ಲಿ ನೀಡುವ ಈ ಬಾಟ್ (ರೋಬಾಟ್), ಗೂಗಲ್‌ಅನ್ನು ಮುಂದೆ ಮೀರಿಸುವಂತೆ ಸಂವಾದ ನಡೆಸುತ್ತದೆ. ಕೇಳಿದ ಪ್ರಶ್ನೆಗೆ ಉತ್ತರ ನೀಡುವುದಷ್ಟೇ ಅಲ್ಲ, ನಿಮಗೆ ಬೇಕಾದ್ದನ್ನು ಬರೆದುಕೊಡುತ್ತದೆ (ಸದ್ಯಕ್ಕೆ ಇಂಗ್ಲಿಷ್‌ನಲ್ಲಿ ಮಾತ್ರ)!

ಕಳೆದ ಒಂದೂವರೆ ದಶಕದಿಂದ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ವಲಯದಲ್ಲಿ ಭಾರಿ ಸಂಶೋಧನೆಗಳು ನಡೆಯುತ್ತಾ ಬಂದಿವೆ. ಆದರೆ ಕಳೆದ ನಾಲ್ಕಾರು ವರ್ಷಗಳಲ್ಲಿ ಆಗಿರುವ ಬೆಳವಣಿಗೆಗಳು ವಿಸ್ಮಯ, ಬೆರಗು ಹುಟ್ಟಿಸುವಂತಹವು. ಅದರ ಜೊತೆಗೆ ಆತಂಕವನ್ನೂ ಹುಟ್ಟಿಸುವಂತಹವು.

ಮನುಷ್ಯನ ಕಲಿಕೆ, ಸಂವಹನ ಹಾಗೂ ಸೇವೆಯ ಸಾಧ್ಯತೆಗಳನ್ನು ಈ ಹೊಸ ಆವಿಷ್ಕಾರದ ಬೆಳವಣಿಗೆ ವಿಸ್ತರಿಸಿದೆ. ತಂತ್ರಜ್ಞಾನ ಹಾಗೂ ಡೇಟಾ ಮೇಳೈಸಿದ ಈ ಕಲ್ಪನೆ ತಾಂತ್ರಿಕವೂ ಯಾಂತ್ರಿಕವೂ ಆಗಿದ್ದ ಪ್ರಕ್ರಿಯೆಗೆ ಸೃಜನಶೀಲತೆಯ ಆಯಾಮವನ್ನು ಒದಗಿಸಿದೆ. ಹಾಗಾಗಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಈಗ ಎಲ್ಲರ ನಾಲಿಗೆಯ ಮೇಲೆ ನುಲಿಯುತ್ತಿದೆ.

ಸ್ಯಾಮ್ ಆಲ್ಟ್‌ಮ್ಯಾನ್ ಮತ್ತು ಇಲಾನ್ ಮಸ್ಕ್ ಕೂಡಿ ಆರಂಭಿಸಿದ ಸ್ವತಂತ್ರ ಸಂಶೋಧನಾ ಸಂಸ್ಥೆ ಓಪನ್ ಎಐ. ನಂತರ ಹಲವು ತಂತ್ರಜ್ಞಾನ ಸಂಸ್ಥೆಗಳು ಇದಕ್ಕೆ ಕೈಜೋಡಿಸಿವೆ. ಈ ಸಂಸ್ಥೆಯ ಮೂಲಕ ಅಭಿವೃದ್ಧಿಪಡಿಸಿದ ಚಾಟ್‌ಬಾಟ್ ಈ ಚಾಟ್‌ಜಿಪಿಟಿ. ಬಿಡುಗಡೆಯಾದ ಒಂದೇ ಒಂದು ವಾರದಲ್ಲಿ 10 ಲಕ್ಷ ಬಳಕೆದಾರರು ಚಾಟ್ ಜಿಪಿಟಿಯ ಜೊತೆಗೆ ಹರಟೆ ಹೊಡೆದಿದ್ದಾರೆ. ಮೈಕ್ರೋಸಾಫ್ಟ್‌ನ ಸಿಇಒಯಿಂದ ಹಿಡಿದು ಸಾಮಾನ್ಯ ಯುವಕ/ಯುವತಿಯೂ ಈ ಚಾಟ್ ಜಿಪಿಟಿಯ ಸೆಳೆತಕ್ಕೆ ಒಳಗಾಗಿದ್ದಾರೆ.

ಚಾಟ್‌ಜಿಪಿಟಿ ಮಾತನಾಡುವುದಿಲ್ಲ. ಆದರೆ ಚಾಟ್ ಮಾಡುತ್ತದೆ. ಕ್ವಾಂಟಂ ಫಿಸಿಕ್ಸ್‌ನಂತಹ ಸಂಕೀರ್ಣ ವಿಷಯವನ್ನು ವಿವರಿಸುವುದೇ ಆಗಿರಲಿ, ಪದ್ಯವನ್ನು ಬರೆಯುವುದೇ ಇರಲಿ ಸಲೀಸಾಗಿ ಮಾಡಿಬಿಡುತ್ತದೆ. ಈ ಲೇಖನ ಬರೆಯುವ ಹೊತ್ತಿಗೆ ಚಾಟ್‌ಜಿಪಿಟಿ ಜನಪ್ರಿಯತೆ ಎಷ್ಟರ ಮಟ್ಟಿಗೆ ಇತ್ತೆಂದರೆ, ಬಳಕೆದಾರರ ಬೇಡಿಕೆ ಪೂರೈಸುವುದಕ್ಕೆ ಕಸರತ್ತು ಪಡುವಷ್ಟು. ಈ ನೆಪದಲ್ಲಿ ತನ್ನ ಮೇಲೆ ತಾನೇ ಒಂದು ಸಾನೆಟ್ ಬರೆದು ಪ್ರಕಟಿಸಿತ್ತು! ಕೇಳಿದರೆ ಜೋಕ್ ಹೇಳುತ್ತದೆ, ಹಾಗೆಯೇ ಯಾವುದಾದರೂ ಖಾದ್ಯ ಮಾಡುವ ವಿಧಾನವನ್ನು ಹೇಳಿಕೊಡುತ್ತದೆ.

ಇವೆಲ್ಲವೂ ನಮಗೆ ಸರ್ಚ್‌ನಲ್ಲಿ ಸಿಗುತ್ತಿರಲಿಲ್ಲವೇ ಅಂದಿರಾ? ಇಷ್ಟು ದಿನ ನಮ್ಮೆಲ್ಲರಿಗೂ ಸಿಗುತ್ತಿದ್ದ ಯಂತ್ರದ ಶುಷ್ಕ ಪ್ರತಿಕ್ರಿಯೆಯ ಬದಲು, ಆಲೋಚಿಸುವ, ಆಪ್ತವಾಗಿ ಸ್ಪಂದಿಸುವ ವ್ಯಕ್ತಿಯೊಂದಿಗಿನ ಸಂವಾದದ ಅನುಭವವನ್ನು ಇದು ನೀಡುತ್ತಿದೆ. ಭಾಷೆಗೆ ಸಂಬಂಧಿಸಿದ ಸೇವೆಯನ್ನು ರೂಪಿಸುವ ನಿಟ್ಟಿನಲ್ಲಿ ಗೂಗಲ್, ಫೇಸ್‌ಬುಕ್ ಸಾಕಷ್ಟು ಕೆಲಸ ಮಾಡಿವೆ. ಆದರೆ ಇಷ್ಟೊಂದು ಸಮರ್ಥವಾದ, ಅಗಾಧ ಸಾಧ್ಯತೆಯ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಸೇವೆಯೊಂದು ಸಾರ್ವಜನಿಕವಾಗಿ ಮುಕ್ತವಾಗಿ ಲಭ್ಯವಾಗಿರುವುದು ಇದೇ ಮೊದಲು.

ಚಾಟ್‌ಜಿಪಿಟಿಯೊಂದೇ ದೊಡ್ಡ ಆವಿಷ್ಕಾರವಲ್ಲ. ಕಳೆದ ವರ್ಷ ಡಾಲ್-ಇ ಎಂಬ, ಇನ್ನೊಂದು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಆಧರಿಸಿದ ಕಲಾಕೃತಿ ರಚಿಸುವ ಬಾಟ್ ಸದ್ದುಮಾಡಿತ್ತು. ಇದು ವಿಶಿಷ್ಟ ರೀತಿಯಲ್ಲಿ ಕಲಾಕೃತಿಗಳನ್ನು ರಚಿಸಿಕೊಡಲು ಆರಂಭಿಸಿತ್ತು. ನೀವು ನಿಮಗೆ ಅಗತ್ಯವಿರುವ ಚಿತ್ರದ ವಿವರಣೆಯನ್ನು ನೀಡಿದರೆ, ಈ ಬಾಟ್ ಚಿತ್ರವನ್ನು ಸಿದ್ಧಪಡಿಸಿಕೊಡುತ್ತದೆ. ಕಲಾಸೃಷ್ಟಿಯ ಈ ಸಾಧ್ಯತೆಯನ್ನೂ ಸಾಧ್ಯವಾಗಿಸಿರುವುದು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್! ತರಹೇವಾರಿ ಶೈಲಿಯ ಕಲಾಕೃತಿಗಳನ್ನ ಈ ಬಾಟ್ ಬಳಸಿ ಸಿದ್ಧಪಡಿಸಿ ಲಕ್ಷಾಂತರ ಬಳಕೆದಾರರು ಬೆರಗಾಗಿಹೋಗಿದ್ದಾರೆ. ಬಳಕೆದಾರರು ನಿರೀಕ್ಷೆಯ ಶೇ. 80ರಷ್ಟು ನಿಖರತೆಯ ಚಿತ್ರಗಳನ್ನು ಇದು ಸಿದ್ಧಪಡಿಸುತ್ತಿದೆ!

ಮೇಲಿನ ಎರಡು ಉದಾಹರಣೆಗಳು ಇತ್ತೀಚಿನವು ಹಾಗೂ ತಂತ್ರಜ್ಞಾನದ ತಿಳಿವಳಿಕೆ ಇಲ್ಲದವರೂ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮೋಡಿಗೆ ಒಳಗಾಗಿರುವುದನ್ನು ವಿವರಿಸುವಂತಹವು.

ಇದನ್ನೂ ಓದಿ: ಸಾಹಿತ್ಯ ಪ್ರಾತಿನಿಧ್ಯವನ್ನು ಗೇಲಿ ಮಾಡುವ ಪ್ರತಿಗಾಮಿತನ

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ರೋಗ ಸಾಧ್ಯತೆಯ ಭವಿಷ್ಯ ನುಡಿಯುವ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಆರೋಗ್ಯ ಕ್ಷೇತ್ರದಲ್ಲಿ ಇದೊಂದು ಕ್ರಾಂತಿಕಾರಿ ಬೆಳವಣಿಗೆ. ಈ ತಂತ್ರಜ್ಞಾನ ಯಾವ ಮಟ್ಟಿಗೆ ಚಾಚಿಕೊಳ್ಳುತ್ತಿದೆ ಎಂದರೆ ವ್ಯಕ್ತಿಗತವಾದ ಔಷಧ ಪದ್ಧತಿಯನ್ನು ರೂಪಿಸಲು ಸಾಧ್ಯವಿದೆ ಎಂಬುದನ್ನು ಕಂಡುಕೊಂಡಿದೆ. ವ್ಯಕ್ತಿಯೊಬ್ಬರ ಆರೋಗ್ಯದ ಇತಿಹಾಸ, ಆಹಾರ ಪದ್ಧತಿ, ಜೀವನ ಶೈಲಿ ಆಧರಿಸಿ ವೈದ್ಯ ಸೇವೆಯನ್ನು ಖಾಸಗಿ ಹಾಗೂ ವ್ಯಕ್ತಿಗತವಾಗಿಸಬಹುದು ಎಂಬುದನ್ನು ಕಂಡುಕೊಳ್ಳಲಾಗಿದೆ.

ಹೀಗೆ ಆಟೋಮೇಷನ್, ಭಾಷೆ, ರೊಬೊಟಿಕ್ಸ್, ಫೇಷಿಯಲ್ ರೆಕಗ್ನಿಷನ್ ಸೇರಿದಂತೆ 10ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್‌ಅನ್ನು ವ್ಯಾಪಕವಾಗಿ ಬಳಸಿ ಪ್ರಯೋಗಕ್ಕೆ ಒಡ್ಡಲಾಗುತ್ತಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಅನ್ವಯದ ಪ್ರಮಾಣದ ದುಪ್ಪಟ್ಟಾಗಿದೆ ಎಂದು ಮೆಕೆನ್ಸಿ ವರದಿ ಹೇಳುತ್ತದೆ. ಕೋವಿಡ್ ಸೋಂಕಿನ ನಂತರ ಜಾಗತಿಕವಾಗಿ ಈ ತಂತ್ರಜ್ಞಾನ ವೇಗವಾಗಿ ಬೆಳೆದಿದೆ. ಭಾರತ ಕೂಡ ಈ ತಂತ್ರಜ್ಞಾನದ ಬಹುಮುಖ್ಯ ಭಾಗವಾದ ಅಲ್ಗಾರಿದಮ್, ಡೆಟಾ ಅನಾಲಿಸಿಸ್ ವಿಷಯದಲ್ಲಿ ಮಹತ್ವದ ಪ್ರಗತಿಯನ್ನು ಸಾಧಿಸಿದೆ. ಇಂಟರ್‌ನ್ಯಾಷನಲ್ ಡೆಟಾ ಕಾರ್ಪೊರೇಷನ್ ಸ್ಟಡಿಯ ಪ್ರಕಾರ ಭಾರತ 3.1 ಬಿಲಿಯನ್ ಡಾಲರ್‌ನಷ್ಟಿದ್ದ ಭಾರತದ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಉದ್ಯಮ ಈಗ 8 ಬಿಲಿಯನ್ ಡಾಲರ್ ಗಡಿ ಮುಟ್ಟುವತ್ತ ಸಾಗಿದೆ!

ವೈಜ್ಞಾನಿಕ ಸಂಶೋಧನೆ, ಪ್ರಯೋಗಗಳ ವಿಧಾನದಲ್ಲಿಯೇ ಕ್ರಾಂತಿಕಾರಿ ಬದಲಾವಣೆ ತರುವ ಭರವಸೆಯನ್ನು ಈ ತಂತ್ರಜ್ಞಾನ ಮೂಡಿಸಿದೆ. ವಿದೇಶಾಂಗ ವ್ಯವಹಾರಗಳ ನೀತಿಯನ್ನು ರೂಪಿಸುವಲ್ಲೂ ಈ ತಂತ್ರಜ್ಞಾನ ನಿರ್ಣಾಯಕವಾಗುತ್ತಿದೆ ಎಂಬುದು ಈ ತಂತ್ರಜ್ಞಾನಕ್ಕಿರುವ ರಾಜಕೀಯ ಆಯಾಮ. ಅಮೆರಿಕ ಈ ನಿಟ್ಟಿನಲ್ಲಿ ಸಾಕಷ್ಟು ಚಿಂತನೆ ನಡೆಸಿದೆ. ಇನ್ನು ಸಾಮಾನ್ಯ ಬಳಕೆದಾರ ಅಥವಾ ಗ್ರಾಹಕರ ಕೊಳ್ಳುವ ಅನುಭವವನ್ನು ಹಿಗ್ಗಿಸಲಿದೆ ಎಂಬುದು ಮತ್ತೊಂದು ಸಾಧ್ಯತೆ. ಹವಾಮಾನ ವೈಪರೀತ್ಯ ಜಾಗತಿಕವಾಗಿ, ಕೃಷಿ, ಆಹಾರ, ಪರಿಸರ ಸೇರಿದಂತೆ ಹಲವು ಕ್ಷೇತ್ರಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಇದನ್ನು ಅರ್ಥ ಮಾಡಿಕೊಳ್ಳಲು ಮತ್ತು ಪರಿಹಾರ ಕಂಡುಕೊಳ್ಳಲು ಕೂಡ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಪ್ರಮುಖ ಅಸ್ತ್ರವಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಸಮಾಜ ಮತ್ತು ಆರ್ಥಿಕತೆ ಎರಡೂ ವಲಯದಲ್ಲಿ ನಿರ್ಣಾಯಕ ಪಾತ್ರವಹಿಸಲಿದೆ ಎಂಬುದು ಈ ತಂತ್ರಜ್ಞಾನದ ಬಗ್ಗೆ ಹೆಚ್ಚಿಸಿರುವ ಕುತೂಹಲ.

ಅಭಿವೃದ್ಧಿ, ಪ್ರಗತಿಯ ಆಯಾಮದಲ್ಲಿ ವಿಸ್ಮಯ ಹುಟ್ಟಿಸಿರುವ ಈ ತಂತ್ರಜ್ಞಾನ ಆತಂಕ ಮತ್ತು ಸವಾಲುಗಳನ್ನೂ ಸೃಷ್ಟಿಸಿದೆ. ಈ ಸವಾಲುಗಳ ಬಗ್ಗೆ ಜಗತ್ತಿನ ಶ್ರೇಷ್ಠ ಚಿಂತಕರಲ್ಲಿ ಒಬ್ಬರಾದ, ನೋಮ್ ಚಾಮ್‌ಸ್ಕಿ ಈ ಕುರಿತು ಅಭಿಪ್ರಾಯಪಟ್ಟಿರುವುದು ಹೀಗೆ: “ಡೀಪ್ ಲನಿಂಗ್ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಅವಲಂಬಿತ ಯಂತ್ರಾಧರಿತ ಕಲಿಕೆ) ಹಲವು ಕ್ಷೇತ್ರಗಳಿಗೆ ಉಪಯುಕ್ತವಾದ ಸಾಧನಗಳನ್ನು ಒದಗಿಸಬಹುದು. ಆದರೆ ಈ ಉಪಯುಕ್ತತೆಯ ಆಚೆಗೆ ಒಂದು ನಿರ್ದಿಷ್ಟ ಭಾಷೆಯ ಹಿನ್ನೆಲೆಯಲ್ಲಿ ಗ್ರಹಿಕೆ, ಆಲೋಚನೆಯ ನಿಟ್ಟಿನಲ್ಲಿ ನಮ್ಮ ಕಲಿಕೆ ಏನು? ಇಂತಹ ಕಲಿಕೆ ನಮಗೆ ಅಗಾಧವಾದ ಮಾಹಿತಿ ಕೊಡುತ್ತಿರುವಂತೆಯೇ ಅಗಾಧವಾದ ಸೋಲುಗಳನ್ನು ತಂದು ನಿಲ್ಲಿಸುತ್ತದೆ”.

ಚಾಮ್‌ಸ್ಕಿ ಮಾತಿನಲ್ಲಿರುವ ತಥ್ಯವೆಂದರೆ, ತಾಂತ್ರಿಕವಾಗಿ, ಯಾವುದೇ ಸೇವೆಯ ಚೌಕಟ್ಟನ್ನು ನಿರ್ಧರಿಸಬಹುದು. ಉದಾಹರಣೆಗೆ ಒಂದು ಪಠ್ಯವನ್ನು ಸಿದ್ಧಪಡಿಸಿದರೆ, ಅದರ ವ್ಯಾಕರಣ, ಸರಿಯಾದ ಪದ ಬಳಕೆ ಇತ್ಯಾದಿ ವಿಷಯಗಳಲ್ಲಿ ಸಮರ್ಪಕವಾಗಿರಬಹುದು. ಆದರೆ ತರ್ಕ ಮತ್ತು ಸಂವೇದನೆಯಲ್ಲಿ ಲೋಪಗಳಿರುತ್ತವೆ. ಮೂಲದಲ್ಲಿ ನಾವು ಅವಲಂಬಿಸಬೇಕಿರುವುದೇ ಈ ಅಂಶಗಳ ಮೇಲೆ. ಆದರೆ ಡೇಟಾ ಆಧರಿಸಿ, ನಿರ್ಮಿಸುವ ದೊಡ್ಡದೊಡ್ಡ ಕಾರ್ಯವಿಧಾನಗಳು ಮತ್ತು ಅವುಗಳನ್ನು ಕ್ರಿಯಾಶೀಲವಾಗಿಸಿರುವ ಚಾಣಾಕ್ಷ ಪ್ರೊಗ್ರಾಮಿಂಗ್‌ಗಳಲ್ಲಿ ಈ ಸೂಕ್ಷ್ಮಗಳು ಇರುವುದಿಲ್ಲ ಎಂಬುದನ್ನು ಚಾಮ್‌ಸ್ಕಿ ವಿವರಿಸುತ್ತಾರೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಎಲ್ಲರೂ ಸೃಜನಶೀಲರಾಗುವಂತೆ ಮಾಡುತ್ತಿದೆ (ಬರವಣಿಗೆಗೆ, ಚಿತ್ರ ರಚನೆಗೆ ಸಹಕರಿಸಿ). ಆದರೆ ಮೂಲಭೂತವಾಗಿ ಅದಕ್ಕೆ ಇರಬೇಕಾದ ಕೌಶಲ್ಯವನ್ನೇ ಕಲಿಸುವುದಿಲ್ಲ!

ಎಲ್ಲ ತಂತ್ರಜ್ಞಾನಗಳಿಗೆ ಇರುವಂತೆಯೇ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್‌ಗೂ ಎರಡು ಆಯಾಮಗಳು ಇವೆ. ಒಂದು ಒಳಿತನದ್ದು, ಇನ್ನೊಂದು ಕೆಡುಕಿನದ್ದು. ಅಸಾಧ್ಯಗಳನ್ನು ಸಾಧಿಸುವ ಹುಮ್ಮಸ್ಸಿನ ತಂತ್ರಜ್ಞಾನ, ಮುಕ್ತ ತಂತ್ರಜ್ಞಾನ ಸಂಪನ್ಮೂಲಗಳನ್ನು ಇನ್ನಷ್ಟು ಮುಕ್ತವಾಗಿಸಬಹುದು. ತಂತ್ರಜ್ಞಾನ ಕ್ಷೇತ್ರದಲ್ಲಿ ವಿಕೇಂದ್ರೀಕರಣಕ್ಕೆ ಇನ್ನಷ್ಟು ಬಲವನ್ನು ಒದಗಿಸಬಹುದು. ಅದರೊಟ್ಟಿಗೆ ಸಮಸ್ಯೆಗಳ ಸಾಗರವನ್ನೇ ಇದು ಸೃಷ್ಟಿಸಬಲ್ಲದು ಎಂದೂ ಪರಿಣಿತರು ಅಭಿಪ್ರಾಯ ಪಡುತ್ತಾರೆ. ಮಾಹಿತಿ ರೂಪದಲ್ಲಿರುವ ಯಾವುದೇ ಸಂಗತಿಯನ್ನು ಒಂದು ನಿರ್ದಿಷ್ಟ ಮಾದರಿಯನ್ನಾಗಿ ಅನುಸರಿಸುವ ಈ ತಂತ್ರಜ್ಞಾನ, ಪೂರ್ವಗ್ರಹಗಳನ್ನು ಕಳಚುವುದು, ಸಾಮಾಜಿಕ ಸೂಕ್ಷ್ಮಗಳನ್ನು ಕಲಿಯುವುದು ಕಷ್ಟವೆಂಬುದು ಅವರ ಕಾಳಜಿ.

ಉಳಿದೆಲ್ಲಾ ಜೀವಿಗಳಿಗಿಂತ ಭಿನ್ನವಾಗಿಸುವ ಮನುಷ್ಯನ ಆಲೋಚನಾ ಶಕ್ತಿಯನ್ನು ಈಗ ಯಂತ್ರಗಳೂ ಪಡೆಯಲಾರಂಭಿಸಿವೆ. ಆದರೂ ಈ ಆಲೋಚನೆಯ ಜೊತೆಗಿರುವ ಕೌಶಲ್ಯ ಮತ್ತು ಸಂವೇದನೆಯನ್ನು ಯಂತ್ರಗಳು ಎಷ್ಟರ ಮಟ್ಟಿಗೆ ನಕಲು ಮಾಡಬಲ್ಲವು ಎಂಬು ಕುತೂಹಲ ಇನ್ನೂ ಉಳಿದಿದೆ.

ಎಸ್ ಕುಮಾರ್
ಹಿರಿಯ ಪತ್ರಕರ್ತರು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...