ಬಾಗಲಕೋಟೆಯ ವಕೀಲೆ ಸಂಗೀತಾ ಶಿಕ್ಕೇರಿ ಮೆಲಿನ ಅಮಾನುಷ ಹಲ್ಲೆಯನ್ನು ಆಲ್ ಇಂಡಿಯಾ ಲಾಯರ್ಸ್ ಯೂನಿಯನ್ (AILU) ಖಂಡಿಸಿದ್ದು, ವಕೀಲರ ಮೇಲಿನ ಹಲ್ಲೆ ತಡೆಯಲು ರಾಜ್ಯ ಸರ್ಕಾರ ಅಡ್ವೋಕೇಟ್ಸ್ ಪ್ರೊಟೆಕ್ಷನ್ ಆಕ್ಟ್ ಜಾರಿಗೆ ತರಬೇಕೆಂದು ಒತ್ತಾಯಿಸಿದೆ.
AILU ರಾಜ್ಯ ಕಾರ್ಯದರ್ಶಿ ಶ್ರೀನಿವಾಸ್ ಕುಮಾರ್ ಮಾತನಾಡಿ, “ಬಾಗಲಕೋಟೆಯಲ್ಲಿ ವಕೀಲೆಯೊಬ್ಬರ ಮೇಲೆ ಬಿಜೆಪಿ ಬೆಂಬಲಿಗನೊಬ್ಬ ಸಾರ್ವಜನಿಕವಾಗಿ ಹಲ್ಲೆ ಮಾಡಿರುವುದನ್ನು ಆಲ್ ಇಂಡಿಯಾ ಲಾಯರ್ಸ್ ಯೂನಿಯನ್ ತೀವ್ರವಾಗಿ ಖಂಡಿಸುತ್ತದೆ. ಈ ಕೃತ್ಯವನ್ನು ಇಡೀ ವಕೀಲ ಸಮೂಹ ಖಂಡಿಸಬೇಕು” ಎಂದು ಹೇಳಿದ್ದಾರೆ.
ಇತ್ತೀಚೆಗೆ ವಕೀಲರ ಮೇಲೆ ಹಲ್ಲೆಗಳು ಹೆಚ್ಚಾಗುತ್ತಿವೆ. ಕೆಲವೆಡೆ ಕೊಲೆಗಳು ಸಹ ನಡೆದಿವೆ. ಪ್ರತಿನಿತ್ಯ ಸಾರ್ವಜನಿಕ ಸೇವೆಗಾಗಿ ದುಡಿಯುವ ವಕೀಲರಿಗೆ ಭದ್ರತೆ ಇಲ್ಲವಾಗಿರುವುದು ದುರಂತ. ಹಾಗಾಗಿ ವೈದ್ಯರ ರಕ್ಷಣೆಗೆ ಕಾನೂನು ಇರುವ ಹಾಗೆ ವಕೀಲರ ರಕ್ಷಣೆಗೂ ಸರ್ಕಾರ ಕಾನೂನು ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಆಸ್ತಿ ವಿವಾದದ ಹಲವು ಪ್ರಕರಣಗಳಲ್ಲಿ ಬಡವರು, ಅಶಕ್ತರ ಪರವಾಗಿ ವಕಾಲತ್ತು ವಹಿಸಬಾರದೆಂಬ ಬೆದರಿಕೆಗಳು ಮಾಫಿಯಾಗಳಿಂದ ಬರುತ್ತಿರುತ್ತವೆ. ಆಗ ವಕೀಲುರ ಹಿಂದೆ ಸರಿಯಲು ಸಾಧ್ಯವಿಲ್ಲ. ವಕೀಲರು ಬಡಜನರ ಪರ ವಕಾಲತ್ತು ವಹಿಸಿ ನ್ಯಾಯ ಕೊಡಿಸಿದಾಗ ಹತಾಶೆಯಿಂದ ಮಾಫಿಯಾಗಳು ದಾಳಿ ಮಾಡುವುದುಂಟು. ಹಾಗಾಗಿ ವಕೀಲರ ಮೇಲಿನ ಹಲ್ಲೆಗೆ ಸೂಕ್ತ ಶಿಕ್ಷೆ ಇರುವಂತಹ, ಸಮರ್ಪಕ ಭದ್ರತೆ ಒದಗಿಸುವಂತಹ ಕಾನೂನು ಅಗತ್ಯವಾಗಿದೆ ಎಂದು ಶ್ರೀನಿವಾಸ್ ಕುಮಾರ್ ಅಭಿಪ್ರಾಯಪಟ್ಟರು.
ಬಾಗಲಕೋಟೆಯ ಮಹಿಳಾ ವಕೀಲೆ ಸಂಗೀತಾ ಶಿಕ್ಕೇರಿ ಮೇಲೆ ಮಹಾಂತೇಶ್ ಚೋಳದಗುಡ್ಡ ಎಂಬ ವ್ಯಕ್ತಿ ಸಾರ್ವಜನಿಕರ ಎದುರೆ ಕಾಲಿನಿಂದ ಒದ್ದು ಅಮಾನುಷವಾಗಿ ಹಲ್ಲೆ ನಡೆಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ತೀವ್ರ ಖಂಡನೆಗಳು ವ್ಯಕ್ತವಾಗಿವೆ.
ಬಿಜೆಪಿ ಮುಖಂಡ ರಾಜು ನಾಯ್ಕರ್ ಎಂಬುವವರ ಕುಮ್ಮಕ್ಕಿನಿಂದ ಬಾಗಲಕೋಟೆಯ ವಿನಾಯಕ ನಗರದ ನಿವಾಸಿ ಮಹಾಂತೇಶ್ ಚೋಳದಗುಡ್ಡ ಎಂಬುವವರು ನನ್ನ ಮತ್ತು ನನ್ನ ಪತಿ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಹಲ್ಲೆಯಲ್ಲಿ ನನ್ನ ತಲೆ, ಎದೆ ಮತ್ತು ಕಾಲಿಗೆ ಪೆಟ್ಟು ಬಿದ್ದಿದೆ ಎಂದು ಸಂತ್ರಸ್ತ ವಕೀಲೆ ಸಂಗೀತ ಶಿಕ್ಕೇರಿ ಹೇಳಿದ್ದಾರೆ.
ಬಾಗಲಕೋಟೆಯ ವಿನಾಯಕ ನಗರದ ಮೂರನೇ ಕ್ರಾಸ್‌ನಲ್ಲಿ ವಕೀಲೆ ಸಂಗೀತ ಶಿಕ್ಕೇರಿರವರ ಮನೆ ಇದ್ದು, ಅವರ ಕುಟುಂಬದವರಲ್ಲಿ ಮನೆಯ ಯಾರಿಗೆ ಸೇರಬೇಕು ಎಂಬ ವಿವಾದ ಉಂಟಾಗಿ ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು. ಹೀಗಿರುವಾಗಿ ಇಂದು ಬೆಳಿಗ್ಗೆ ಕೆಲವರು ಜೆಸಿಬಿ ತಂದು ಮನೆ ಕೆಡವಲು ಯತ್ನಿಸಲಾಗಿದೆ. ಆ ಸಂದರ್ಭದಲ್ಲಿ ವಕೀಲೆ ಸಂಗೀತಾ ಶಿಕ್ಕೇರಿಯವರು ಪಕ್ಕದ ಮನೆಯವರ ಜೊತೆ ಏಕೆ ಪೊಲೀಸರಿಗೆ ನಮ್ಮ ಮನೆ ತೋರಿಸಿದಿರಿ ಎಂದು ಜಗಳ ಆಡಿದ್ದಾರೆ. ಆ ಸಂದರ್ಭದಲ್ಲಿ ಬಿಜೆಪಿ ಮುಖಂಡ ರಾಜು ನಾಯ್ಕರ್ ಎಂಬುವವರ ಕುಮ್ಮಕ್ಕಿನಿಂದ ಮಹಾಂತೇಶ್ ಚೋಳದಗುಡ್ಡ ತಮ್ಮ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ವಕೀಲೆ ದೂರಿದ್ದಾರೆ.
ಇದನ್ನೂ ಓದಿ: ಬಿಜೆಪಿ ಮುಖಂಡನ ಕುಮ್ಮಕ್ಕು ಆರೋಪ: ಬಾಗಲಕೋಟೆಯಲ್ಲಿ ವಕೀಲೆ ಮೇಲೆ ಅಮಾನುಷ ಹಲ್ಲೆ
ಪ್ರಕರಣ ಕೋರ್ಟ್‌ನಲ್ಲಿದ್ದು, ಜಿಲ್ಲಾ ನ್ಯಾಯಾಧೀಶರು ತಡೆಯಾಜ್ಞೆ ನೀಡಿದ್ದರೂ ಸಹ ಕೆಲವರು ಕಾಂಪೌಂಡ್ ಕೆಡವಿದ್ದಾರೆ. ನೀರು ಮತ್ತು ವಿದ್ಯುತ್ ಸಂಪರ್ಕ ಕಡಿತ ಮಾಡಿದ್ದಾರೆ ಎಂದು ಸಂಗೀತಾ ಆರೋಪಿಸಿದ್ದಾರೆ.