ಲೈಂಗಿಕ ಕಿರುಕುಳದ ಆರೋಪಿ, ಬಿಜೆಪಿ ಸಂಸದ, ಭಾರತೀಯ ಕುಸ್ತಿ ಫೆಡರೇಷನ್ ಅಧ್ಯಕ್ಷ ಬ್ರಿಜ್‌ಭೂಷಣ್ ಶರಣ್ ಸಿಂಗ್‌ನನ್ನು ಬಂಧಿಸಬೇಕೆಂದು ದೇಶದ ಪ್ರಖ್ಯಾತ ಕುಸ್ತಿಪಟುಗಳು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಇದು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ತೀವ್ರ ಮುಜುಗರಕ್ಕೆ ಈಡು ಮಾಡಿದ್ದು, ಅದನ್ನು ಮರೆಮಾಚಲು ಕುಸ್ತಿಪಟುಗಳ ಚಾರಿತ್ರ್ಯ ಹರಣ ಮಾಡುವಂತಹ ಪೋಸ್ಟ್‌ಗಳನ್ನು ಹರಿಬಿಡಲಾಗುತ್ತಿದೆ.
ಹೋರಾಟಕ್ಕೆ ಕುಳಿತವರನ್ನು ದೇಶ ವಿರೋಧಿಗಳೆನ್ನುವುದು, ಖಲಿಸ್ತಾನಿಗಳೆನ್ನುವುದು ಇದೇ ಮೊದಲೇನೂ ಅಲ್ಲ. ವಿವಾದಿತ ಕೃಷಿ ಕಾಯ್ದೆಗಳ ವಿರುದ್ಧ ಒಂದು ವರ್ಷ ಕಾಲ ದೆಹಲಿಯಲ್ಲಿ ಚಳವಳಿ ನಡೆಸಿದ ರೈತರ ವಿರುದ್ಧವೂ ಇಂತಹದ್ದೇ ಅಪಪ್ರಚಾರವನ್ನು ‘ಫೇಕ್ ಪಡೆ’ ಮಾಡಿತ್ತು. ಈಗ ಕುಸ್ತಿಪಟುಗಳ ವಿರುದ್ಧವೂ ಇದೇ ತಂತ್ರವನ್ನು ಬಳಸುತ್ತಾ, ಸಂತ್ರಸ್ತರನ್ನೇ ಅಪರಾಧಿಗಳನ್ನಾಗಿ ಚಿತ್ರಿಸಿ, ಆರೋಪಿ ಪರ ನಿಲ್ಲುವ ಪಿತೂರಿ ನಡೆಯುತ್ತಿದೆ.
“ರೈತ ಹೋರಾಟದಲ್ಲಿ ಕೇವಲ ಪಂಜಾಬ್, ಹರಿಯಾಣ ರೈತರಷ್ಟೇ ಯಾಕೆ ಇದ್ದಾರೆ? ದೇಶದ ಇತರೆ ರಾಜ್ಯಗಳಲ್ಲಿ ಏಕೆ ಹೋರಾಟ ನಡೆಯುತ್ತಿಲ್ಲ?” ಎಂಬಂತಹ ಸುಳ್ಳುಗಳನ್ನು ಹರಿಬಿಡಲಾಗಿತ್ತು. ಆದರೆ ದೇಶದ ವಿವಿಧ ರಾಜ್ಯಗಳಲ್ಲಿ ಹೋರಾಟಕ್ಕೆ ಬೆಂಬಲ ವ್ಯಕ್ತವಾಗಿದ್ದನ್ನು ಗಮನಿಸಬಹುದು. ಹೀಗೆಯೇ ದೇಶದ ಪ್ರಜ್ಞಾವಂತ ನಾಗರಿಕರು ಕುಸ್ತಿಪಟುಗಳ ಹೋರಾಟಕ್ಕೆ ಬೆಂಬಲ ನೀಡುತ್ತಿದ್ದರೂ ‘ಇದು ಕೆಲವೇ ಕೆಲವರ ಹೋರಾಟ’ ಎಂದು ಬಿಂಬಿಸಲು ನಕಲಿ ಸುದ್ದಿಗಳನ್ನು ಹರಡಲಾಗುತ್ತಿದೆ.
‘ಫೇಕ್ ಪಡೆ’ಯ ಪ್ರಶ್ನಾವಳಿ
“ಕುಸ್ತಿಪಟುಗಳ ಹೋರಾಟ ಒಂದು ಟೂಲ್‌ಕಿಟ್ ಆಗಿದೆ. ಹೋರಾಟದಲ್ಲಿ ಕೇವಲ ಹರಿಯಾಣದ 3 ಕುಸ್ತಿ ಪಟುಗಳು ಯಾಕಿದ್ದಾರೆ? ಬೇರೆ ರಾಜ್ಯದ ಕುಸ್ತಿ ಪಟುಗಳು ಯಾಕೆ ಇವರ ಜೊತೆ ಭಾಗವಹಿಸುತ್ತಿಲ್ಲ? ಕಣ್ಣಿಗೆ ಕಾಣಿಸದೆ ಇದೆಲ್ಲವನ್ನೂ ನಡೆಸುತ್ತಿರುವ ದೀಪೇಂದರ್ ಹೂಡಾ ಯಾರು? ಆತನಿಗೂ ಈಗ ಪೋಕ್ಸೋ ಕೇಸ್ ಎದುರಿಸುತ್ತಿರುವ ಬ್ರಿಜ್ ಭೂಷಣ್ ಶರಣ್ ಸಿಂಗ್‌ಗೂ ಇರುವ ವೈರತ್ವವೇನು? ಜಂತರ್ ಮಂತರ್‌ಗೆ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಹೋಗಿ, ಲೈಂಗಿಕ ದೌರ್ಜನ್ಯ ಆರೋಪಗಳ ಸಂಬಂಧ ಪರಿಶೀಲನಾ ಸಮಿತಿಯನ್ನು ಮಾಡಿದರೂ ಯಾಕೆ ಧರಣಿ ಹಿಂತೆಗೆದುಕೊಳ್ಳುತ್ತಿಲ್ಲ? ನಾವು ನ್ಯಾಷನಲ್ ಲೆವೆಲ್‌ನ ಅರ್ಹತಾ ರೌಂಡ್‌ನಲ್ಲಿ ಭಾಗವಹಿಸುವುದಿಲ್ಲ, ನಾವು ಡೈರೆಕ್ಟ್ ಆಗಿ ಒಲಂಪಿಕ್‌ನಲ್ಲಿ ಭಾಗವಹಿಸುತ್ತೇವೆ ಎಂದು ಕುಸ್ತಿಪಟುಗಳು ಹೇಳಿದ್ಯಾಕೆ? ಆದ ಲೈಂಗಿಕ ದೌರ್ಜನ್ಯದ ಕುರಿತು ಸಮಿತಿಗೆ ತಿಳಿಸದೆ ದೆಹಲಿ ಪೊಲೀಸ್ ಸ್ಟೇಷನ್‌ಗೆ ಹೋದದ್ಯಾಕೆ? ಭಾರತೀಯ ಒಲಿಂಪಿಕ್ ಸಂಸ್ಥೆ ಚೇರ್ಮನ್, ದೇಶದ ಹೆಮ್ಮೆಯ ಮಗಳು ಪಿ.ಟಿ.ಉಷಾ ಅವರು ಕುಸ್ತಿಪಟುಗಳ ಕಷ್ಟ ಕೇಳಲು ಬಂದಾಗ ಅವರನ್ನು ಅವಮಾನಿಸಿ ಓಡಿಸಿದ್ಯಾಕೆ?” – ಈ ರೀತಿಯ ಪ್ರಶ್ನೆಗಳನ್ನು ತೇಲಿಬಿಡಲಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಇವು ವೈರಲ್ ಕೂಡ ಆಗುತ್ತಿವೆ.
ಸುಳ್ಳು 1: ಹರಿಯಾಣದ ಕುಸ್ತಿಪಟುಗಳಷ್ಟೆ ಹೋರಾಟ ನಡೆಸುತ್ತಿದ್ದಾರೆ, ಉಳಿದವರು ಇಲ್ಲ
ಇಂತಹದ್ದೇ ಪ್ರಶ್ನೆಯನ್ನು ರೈತ ಹೋರಾಟದ ಸಂದರ್ಭದಲ್ಲೂ ‘ಫೇಕ್’ಗಳು ಹರಿಬಿಟ್ಟಿದ್ದರು. ರೈತ ಹೋರಾಟದಲ್ಲಿ ಪಂಜಾಬ್, ಹರಿಯಾಣ ರೈತರಷ್ಟೇ ಇದ್ದಾರೆಂದು ಬಿಂಬಿಸಲಾಗಿತ್ತು. ಈಗ ನಡೆಯುತ್ತಿರುವ ಹೋರಾಟದ ಮುಂಚೂಣಿಯಲ್ಲಿರುವುದು ದೇಶಕ್ಕೆ ಒಲಂಪಿಕ್ ಪದಕಗಳನ್ನು ತಂದುಕೊಟ್ಟ ಬಜರಂಜ್ ಪೂನಿಯಾ, ಸಾಕ್ಷಿ ಮಲ್ಲಿಕ್, ರವಿ ದಹಿಯಾ ಮತ್ತು ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ವಿನೇಶ್ ಎಂಬುದನ್ನು ಗಮನಿಸಬೇಕು. ಅವರು ಯಾವ ರಾಜ್ಯದವರಾದರೇನು ಅಲ್ಲವೇ? ಸಂತ್ರಸ್ತ ಹೆಣ್ಣುಮಕ್ಕಳ ಪರವಾಗಿ ಯಾರೂ ದನಿ ಎತ್ತಬಾರದು ಎಂಬಂತೆ ‘ಫೇಕ್’ಗಳು ಮನೋವಿಕೃತಿ ಮೆರೆಯುತ್ತಿದ್ದಾರೆ. ಈ ಕುಸ್ತಿಪಟುಗಳೊಂದಿಗೆ ಇತರ ಕ್ರೀಡಾಪಟುಗಳು ಇದ್ದಾರೆಂಬುದನ್ನು ಗಮನಿಸಬಹುದು. ಒಲಿಂಪಿಕ್ಸ್ ಪದಕ ವಿಜೇತ ನೀರಜ್ ಚೋಪ್ರಾ, ಅಭಿನವ್ ಬಿಂದ್ರಾ, ಫುಟ್ಬಾಲ್ ಆಟಗಾರ ಸುನಿಲ್ ಛೆಟ್ರಿ ಮತ್ತು ಮಾಜಿ ಕ್ರಿಕೆಟಿಗರಾದ ಅನಿಲ್ ಕುಂಬ್ಳೆ, ಇರ್ಫಾನ್ ಪಠಾಣ್ ಅವರು ಕುಸ್ತಿಪಟುಗಳಿಗೆ ತಮ್ಮ ಬೆಂಬಲವನ್ನು ನೀಡಿದ್ದಾರೆ. ನ್ಯಾಯಕ್ಕಾಗಿ ಹೋರಾಡುತ್ತಿರುವ ಅವರ ಪರ ದನಿ ಎತ್ತಿದ್ದಾರೆ. ಕುಸ್ತಿಪಟುಗಳನ್ನು ಪೊಲೀಸರು ನಡೆಸಿಕೊಂಡ ರೀತಿಯ ಕುರಿತು ಖಂಡನೆ ವ್ಯಕ್ತಪಡಿಸಿದ್ದಾರೆ. ಕೆಲವೇ ಕೆಲವು ಕುಸ್ತಿಪಟುಗಳಷ್ಟೇ ಯಾಕೆ ಹೋರಾಟ ನಡೆಸುತ್ತಿದ್ದಾರೆ ಎಂಬುದು ಪ್ರಶ್ನೆಯಲ್ಲ; “ಈ ಹೋರಾಟಕ್ಕೆ ದೇಶದ ಪ್ರಖ್ಯಾತ ಕ್ರಿಕೆಟಿಗರು, ಇತರೆ ಕ್ರೀಡೆಗಳ ಆಟಗಾರರು ಏಕೆ ಬೆಂಬಲಿಸುತ್ತಿಲ್ಲ?” ಎಂದು ಕೇಳುವುದು ಸರಿಯಾದ ಪ್ರಶ್ನೆಯಾಗುತ್ತದೆ. “ಅಧಿಕಾರಶಾಹಿಯ ವಿರುದ್ಧ ದನಿ ಎತ್ತುವ ಕೆಚ್ಚು ಈ ಕೆಲವೇ ಕೆಲವು ಹೋರಾಟಗಾರರಿಗೆ ಬಿಟ್ಟರೆ ಬೇರೆಯವರಿಗೆ ಏಕಿಲ್ಲ?” ಎಂದು ಪ್ರಶ್ನಿಸಿಕೊಳ್ಳಬೇಕಾಗಿದೆ.
ಸುಳ್ಳು 2: ಹೋರಾಟದ ಹಿಂದೆ ದೀಪೇಂದರ್ ಹೂಡಾ ಇದ್ದಾರೆ, ಬ್ರಿಜ್‌ಭೂಷಣ್‌ಗೂ ಇವರಿಗೂ ಏನು ಸಂಬಂಧ?
ದೀಪೇಂದರ್ ಹೂಡಾ ಯಾರೆಂದು ಕೇಳುವುದೇ ದಿಕ್ಕು ತಪ್ಪಿಸುವ ಪ್ರಶ್ನೆ. ನಿಜ, ಅವರು ಕಾಂಗ್ರೆಸ್ ನಾಯಕ ಮತ್ತು ಸಂಸದರು. ಇಂತಹ ಸಂದರ್ಭದಲ್ಲಿ ಸಂತ್ರಸ್ತರ ಪರ ನಿಲ್ಲುವುದು ಯಾವುದೇ ವಿರೋಧ ಪಕ್ಷಗಳ ಕರ್ತವ್ಯ. ಹೂಡಾ ಅವರಾಗಲೀ, ಇನ್ನ್ಯಾರೇ ಆಗಲಿ ಸಂತ್ರಸ್ತರ ಪರ ದನಿ ಎತ್ತಬಾರದು ಎನ್ನುವುದು ಅಸಾಂವಿಧಾನಿಕ. ಹೂಡಾ ಅಥವಾ ಇನ್ನ್ಯಾವುದೇ ರಾಜಕಾರಣಿಗಳಿಗೆ ರಾಜಕೀಯ ಕಾರಣಗಳಿದ್ದೀತು. ವಿರೋಧ ಪಕ್ಷದಲ್ಲಿ ಕುಳಿತು ಕೆಲಸ ಮಾಡಬೇಕಾದದ್ದು ಅವರ ಹೊಣೆಗಾರಿಕೆ. ಪೋಕ್ಸೋ ಸೇರಿದಂತೆ ಸುಮಾರು 70ಕ್ಕೂ ಹೆಚ್ಚು ಗಂಭೀರ ಪ್ರಕರಣಗಳು ಬ್ರಿಜ್ ಭೂಷಣ್ ಶರಣ್ ಸಿಂಗ್ ಮೇಲಿವೆ. ಆತನ ಅಪರಾಧ ಕೃತ್ಯಗಳು ಈಗ ಜನಜನಿತವಾಗಿವೆ. ಅಷ್ಟಕ್ಕೂ ಪ್ರತಿಪಕ್ಷಗಳು ಹೋರಾಟಗಾರರಲ್ಲಿ ಹೋಗುವ ಮೊದಲೇ ಪ್ರಧಾನಿ ಮೋದಿ ಅಲ್ಲಿಗೆ ಹೋಗಿ, ಸಮಸ್ಯೆಯನ್ನು ಆಲಿಸಿದ್ದರೆ ಸಮಸ್ಯೆ ಬಗೆಹರಿಯುತ್ತಿತ್ತು ಅಲ್ಲವೇ? ಮೋದಿ ಬಾರದಿದ್ದಾಗ ಸ್ಥಳಕ್ಕೆ ಹೋದ ಪ್ರತಿಪಕ್ಷಗಳನ್ನು ಹೋರಾಟಗಾರರು ಅವಲಂಬಿಸುವುದು ಅನಿವಾರ್ಯವಾಗುತ್ತದೆ. ಪ್ರಶ್ನೆ ಕೇಳಬೇಕಾದದ್ದು ದೀಪೇಂದರ್ ಹೂಡರಿಗೋ ಪ್ರಧಾನಿ ಮೋದಿಗೋ? ಸಂತ್ರಸ್ತರನ್ನೇ ತಪ್ಪಿತಸ್ಥರ ಸ್ಥಾನದಲ್ಲಿ ನಿಲ್ಲಿಸುವ ಈ ವಿಕೃತಿಗೆ ಮಿತಿ ಇಲ್ಲವೇ?
ಇದನ್ನೂ ಓದಿರಿ: ಕುಸ್ತಿಪಟುಗಳಿಗೆ ಸವಾಲಾಗಿರುವ ‘ಬ್ರಿಜ್ ಭೂಷಣ್ ಶರಣ್ ಸಿಂಗ್’ ಯಾರು? ಆತನ ಹಿನ್ನಲೆ, ಪ್ರಭಾವವೇನು?
ಒಮ್ಮೆ ಯೋಗೋದ್ಯಮಿ ರಾಮದೇವ್ ವಿರುದ್ಧ ಬ್ರಿಜ್ ವಾಗ್ದಾಳಿ ನಡೆಸಿದ್ದನು. “ರಾಮದೇವ್ ಕಂಪನಿ ಪತಂಜಲಿ ನಕಲಿ ತುಪ್ಪವನ್ನು ಮಾರಾಟ ಮಾಡುತ್ತಿದೆ. ಪತಂಜಲಿ ಉತ್ಪನ್ನಗಳ ವಿರುದ್ಧ ರಾಷ್ಟ್ರವ್ಯಾಪಿ ಆಂದೋಲನ ನಡೆಸುತ್ತೇನೆ. ರಾಮ್‌ದೇವ್ ಒಬ್ಬ ‘ಕಲಬೆರಕೆ ರಾಜ’” ಎಂದಿದ್ದನು. ಈಗ ರಾಮದೇವ್, ಬ್ರಿಜ್ ವಿರುದ್ಧ ಮಾತನಾಡಿದ್ದಾರೆ. ಸ್ವಹಿತಾಸಕ್ತಿ, ವೈಯಕ್ತಿಕ ದ್ವೇಷ ರಾಮ್‌ದೇವ್‌ಗೂ ಬ್ರಿಜ್ ಭೂಷಣ್ ಮೇಲೆ ಇರಬಹುದು. ಹಾಗೆಂದು ರಾಮದೇವ್ ಹೇಳಿದ್ದು ತಪ್ಪು ಎಂದು ‘ಫೇಕ್’ ಪಡೆ ಹೇಳಿಬಿಟ್ಟರೆ ಮುಗಿಯಿತೇ?
ಸುಳ್ಳು 3: ಲೈಂಗಿಕ ದೌರ್ಜನ್ಯದ ಕುರಿತು ಪರಿಶೀಲಿಸಲು ಅನುರಾಗ್ ಠಾಕೂರ್ 6 ಜನರ ಸಮಿತಿ ಮಾಡಿದರೂ ಹೋರಾಟ ಹಿಂತೆಗೆದುಕೊಳ್ಳುತ್ತಿಲ್ಲ. ಲೈಂಗಿಕ ದೌರ್ಜನ್ಯದ ಕುರಿತು ಸಮಿತಿಗೆ ತಿಳಿಸದೆ ದೆಹಲಿ ಪೊಲೀಸ್ ಸ್ಟೇಷನ್‌ಗೆ ಹೋಗಿದ್ದಾರೆ
-ಹೀಗೆ ಕೇಳುವವರು ಕುಸ್ತಿಪಟುಗಳನ್ನೇ ಅಪರಾಧಿಗಳನ್ನಾಗಿ ನೋಡುತ್ತಿದ್ದಾರೆ ಎಂಬುದು ಸ್ಪಷ್ಟ. ಸಮಿತಿ ನಿಷ್ಪಕ್ಷಪಾತವಾಗಿ ತನಿಖೆ ಮಾಡುತ್ತಿಲ್ಲ ಎಂದೆನಿಸಿದಾಗ, ಅನುರಾಗ್ ಠಾಕೂರ್ ತಾವು ನೀಡಿದ ಭರವಸೆಯನ್ನು ಈಡೇರಿಸದಿದ್ದಾಗ ಈ ಹೋರಾಟ ಪುನಾರಂಭವಾಗಿದ್ದು ಅಲ್ಲವೇ? ಬ್ರಿಜ್ ಭೂಷಣ್‌ನನ್ನು ಕುಸ್ತಿ ಫೆಡರೇಷನ್‌ನಿಂದ ಇಳಿಸುವುದಾಗಿ ಹೇಳಿ, ಅನುರಾಗ್ ಮಾತು ತಪ್ಪಿದ್ದೇಕೆ?
“ನಾವು ಕೇಂದ್ರ ಕ್ರೀಡಾ ಸಚಿವ (ಅನುರಾಗ್ ಠಾಕೂರ್) ಅವರೊಂದಿಗೆ ಮಾತನಾಡಿದ ನಂತರ ನಮ್ಮ ಪ್ರತಿಭಟನೆಯನ್ನು ಕೊನೆಗೊಳಿಸಿದ್ದೆವು. ಎಲ್ಲಾ ಅಥ್ಲೀಟ್‌ಗಳು ಲೈಂಗಿಕ ಕಿರುಕುಳದ ಬಗ್ಗೆ ಅವರಿಗೆ ತಿಳಿಸಿದ್ದರು. ಸಮಿತಿಯನ್ನು ರಚಿಸುವ ಮೂಲಕ ಅವರು ವಿಷಯವನ್ನು ಹತ್ತಿಕ್ಕಲು ಪ್ರಯತ್ನಿಸಿದರು; ಆ ಸಮಯದಲ್ಲಿ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ” ಎಂದು ಕುಸ್ತಿಪಟುಗಳು ಹೇಳುತ್ತಿರುವುದು ‘ಫೇಕ್’ಗಳಿಗೆ ಕೇಳಿಸುತ್ತಿಲ್ಲವೇಕೆ?
ಸುಳ್ಳು 4: ‘ನಾವು ನ್ಯಾಷನಲ್ ಲೆವೆಲ್‌ನ ಅರ್ಹತಾ ರೌಂಡ್‌ನಲ್ಲಿ ಭಾಗವಹಿಸುವುದಿಲ್ಲ. ನಾವು ಡೈರೆಕ್ಟ್ ಆಗಿ ಒಲಂಪಿಕ್‌ನಲ್ಲಿ ಭಾಗವಹಿಸುತ್ತೇವೆ’ ಎಂದು ಕುಸ್ತಿಪಟುಗಳು ಹೇಳಿದ್ದಾರೆ
ಈ ರೀತಿಯ ಯಾವುದೇ ಅವಕಾಶ ಇರಲು ಸಾಧ್ಯವಿಲ್ಲ. ಇಂತಹ ಹೇಳಿಕೆಯನ್ನು ಕ್ರೀಡಾಪಟುಗಳು ಹೇಳಿರುವ ಸಂಬಂಧ ಯಾವುದೇ ವರದಿಯಾಗಿಲ್ಲ. ಅಲ್ಲದೇ ಈ ಹೋರಾಟದಿಂದಾಗಿ ತಮ್ಮ ಭವಿಷ್ಯ ಡೋಲಾಯಮಾನವಾಗಿದೆ ಎಂದು ಕುಸ್ತಿಪಟುಗಳು ಆತಂಕ ವ್ಯಕ್ತಪಡಿಸಿದ್ದಾರೆಯೇ ಹೊರತು ಈ ರೀತಿಯ ಯಾವುದೇ ಹೇಳಿಕೆಯನ್ನು ನೀಡಿಲ್ಲ.
ಗಮನಿಸಬೇಕಾದ ವಿಚಾರವೆಂದರೆ- ಒಲಂಪಿಕ್ ವಿಚಾರವಾಗಿ ಕೇಂದ್ರ ಸರ್ಕಾರ ಕೈಗೊಂಡ ನಿರ್ಧಾರವನ್ನು ಬ್ರಿಜ್ ವಿರೋಧಿಸಿದ್ದಾನೆ. ಮುಂದಿನ ಒಲಿಂಪಿಕ್ಸ್‌ಗೆ ಕ್ರೀಡಾಪಟುಗಳನ್ನು ತಯಾರಿ ಮಾಡಲು ಕೇಂದ್ರ ಸರ್ಕಾರ ರೂಪಿಸಿದ ‘ಟಾರ್ಗೆಟ್ ಒಲಿಂಪಿಕ್ ಪೋಡಿಯಂ (ಟಾಪ್)’ ಯೋಜನೆ ವಿರುದ್ಧ ಆತ ಮಾತನಾಡಿದ್ದಾನೆ. ಈ ಯೋಜನೆಯಡಿ ಕ್ರೀಡಾಪಟುಗಳನ್ನು ನೇರವಾಗಿ ಸಂಪರ್ಕಿಸದಂತೆ ಸರ್ಕಾರಕ್ಕೆ ಹೇಳಿದ್ದಾನೆ.
ಕಳೆದ ವರ್ಷ ಟೋಕಿಯೊ ಒಲಿಂಪಿಕ್ ನಂತರ ನೀಡಿದ ಹೇಳಿಕೆ ಹೀಗಿತ್ತು: “ಕುಸ್ತಿಪಟುಗಳನ್ನು ಬೆಂಬಲಿಸುವ ಖಾಸಗಿ ಹಾಗೂ ಲಾಭೋದ್ದೇಶವಿಲ್ಲದ ಸಂಸ್ಥೆಗಳ ಮೇಲೆ ಫೆಡರೇಷನ್ ಕಣ್ಣಿಡುತ್ತದೆ.”
ಸುಳ್ಳು 5: ಕಷ್ಟ ಕೇಳಲು ಹೋದಾಗ ಪಿ.ಟಿ. ಉಷಾ ಅವರನ್ನು ಕುಸ್ತಿಪಟುಗಳು (ಸ್ಥಳದಿಂದ) ಓಡಿಸಿದ್ದಾರೆ
ಭಾರತೀಯ ಒಲಂಪಿಕ್ ಅಸೋಸಿಯೇಷನ್ ಅಧ್ಯಕ್ಷೆ ಪಿ.ಟಿ.ಉಷಾ ಅವರನ್ನು ಹೋರಾಟನಿರತ ಕುಸ್ತಿಪಟುಗಳು ಓಡಿಸಿದ್ದಾರೆಂಬುದು ಸುಳ್ಳು. ಇದಕ್ಕಿಂತ ಮುಖ್ಯವಾಗಿ ಪಿ.ಟಿ.ಉಷಾ ಅವರೇ ವ್ಯತಿರಿಕ್ತ ಹೇಳಿಕೆ ನೀಡಿದ್ದರು. “ಆಟಗಾರರು ಬೀದಿಗಿಳಿದು ಪ್ರತಿಭಟನೆ ಮಾಡಬಾರದಿತ್ತು. ಕನಿಷ್ಠ ಸಮಿತಿಯ ವರದಿಗಾಗಿ ಕಾಯಬೇಕಿತ್ತು. ಅವರು ಮಾಡಿರುವುದು ಆಟಕ್ಕೆ ಮತ್ತು ದೇಶಕ್ಕೆ ಒಳ್ಳೆಯದಲ್ಲ. ಇದು ನಕಾರಾತ್ಮಕ ಧೋರಣೆ” ಎಂದಿದ್ದರು. ಆದರೆ ಟೀಕೆಗಳು ವ್ಯಕ್ತವಾದ ಬಳಿಕ ಯೂಟರ್ನ್ ಹೊಡೆದಿದ್ದರು. ಕುಸ್ತಿಪಟುಗಳ ಹೋರಾಟದ ಸ್ಥಳಕ್ಕೆ ಪಿ.ಟಿ.ಉಷಾ ಭೇಟಿ ನೀಡಿ, ಅವರೊಂದಿಗೆ ಮಾತನಾಡಿದ್ದರು. ಆದರೆ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆಯನ್ನು ನೀಡಿರಲಿಲ್ಲ.
ಕುಸ್ತಿಪಟು ಬಜರಂಗ್ ಪುನಿಯಾ ಅವರು, ತಮ್ಮೊಂದಿಗೆ ಪಿ.ಟಿ.ಉಷಾ ಅವರು ಆಡಿರುವ ಮಾತುಗಳನ್ನು ಹಂಚಿಕೊಂಡಿದ್ದರು. “ಆಟಗಾರರಿಗೆ ಸಹಾಯ ಮಾಡುವ ಭರವಸೆಯನ್ನು ಅವರು ನೀಡಿದ್ದಾರೆ. ಉಷಾ ಅವರ ಹೇಳಿಕೆಗಳನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ತಿಳಿಸಿದ್ದಾರೆ. ನಾನು ಮೊದಲು ಕ್ರೀಡಾಪಟು ಮತ್ತು ನಂತರ ಅಧಿಕಾರಿ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ನಮ್ಮೊಂದಿಗಿರುವುದಾಗಿ ಭರವಸೆ ನೀಡಿದ್ದಾರೆ. ನಮ್ಮ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ಮತ್ತು ನಮಗೆ ನ್ಯಾಯ ದೊರಕಿಸಲು ಪ್ರಯತ್ನಿಸಲಿದ್ದಾರೆ’’ ಎಂದು ಪುನಿಯಾ ವಿವರಿಸಿದ್ದರು.
ಕುಸ್ತಿಪಟುಗಳ ಫೋಟೋಗಳನ್ನು ತಿರುಚಿ ಹರಿಬಿಟ್ಟಿರುವುದು, ಹೋರಾಟ ಮಾಡುವುದೇ ತಪ್ಪೆಂದು ಬಿಂಬಿಸುವುದು ಎಗ್ಗಿಲ್ಲದೆ ನಡೆಯುತ್ತಿದೆ. ಪ್ರಶ್ನೆ ಕೇಳುವವರನ್ನೇ ಬಾಯಿ ಮುಚ್ಚಿಸುವ ವಿಕೃತಿ ಮತ್ತು ಸರ್ವಾಧಿಕಾರಿ ಧೋರಣೆಯನ್ನು ತೋರಲಾಗುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಫೇಕ್ ಅಕೌಂಟ್‌ಗಳ ಮೂಲಕ ಕುಸ್ತಿಪಟುಗಳ ವಿರುದ್ಧ ವಿಷಕಾರಲಾಗುತ್ತಿದೆ.