Homeಕರ್ನಾಟಕಬೆಂಗಳೂರು ಸೇರಿದಂತೆ 11 ಜಿಲ್ಲೆಗಳಲ್ಲಿ ‘ಯೆಲ್ಲೋ ಅಲರ್ಟ್’ ಘೋಷಣೆ

ಬೆಂಗಳೂರು ಸೇರಿದಂತೆ 11 ಜಿಲ್ಲೆಗಳಲ್ಲಿ ‘ಯೆಲ್ಲೋ ಅಲರ್ಟ್’ ಘೋಷಣೆ

- Advertisement -
- Advertisement -

ಬೆಂಗಳೂರು ಸೇರಿದಂತೆ ರಾಜ್ಯದ ಹನ್ನೊಂದು ಜಿಲ್ಲೆಗಳಲ್ಲಿ ಭಾರತೀಯ ಹವಾಮಾನ ಇಲಾಖೆಯು ಮಂಗಳವಾರ ‘ಯೆಲ್ಲೋ’ (ಹಳದಿ) ಅಲರ್ಟ್ ಘೋಷಣೆ ಮಾಡಿದೆ.

ಬೆಂಗಳೂರು, ಕೊಡಗು, ಮೈಸೂರು, ಉಡುಪಿ, ಗುಲ್ಬರ್ಗ, ಶಿವಮೊಗ್ಗ, ಚಿತ್ರದುರ್ಗ, ಹಾಸನ, ಚಾಮರಾಜನಗರ, ಚಿಕ್ಕಮಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಹಳದಿ (ಯೆಲ್ಲೋ) ಅಲರ್ಟ್ ಜಾರಿಯಾಗಿದೆ.

“ಕೆಲವು ಪ್ರದೇಶಗಳಲ್ಲಿ ತಾತ್ಕಾಲಿಕವಾಗಿ ವಿದ್ಯುತ್ ವ್ಯತ್ಯಯ ಮತ್ತು ಸಣ್ಣ ಮಟ್ಟದ ಸಂಚಾರ ದಟ್ಟಣೆ ಆಗಬಹುದು, ಮರ ಮತ್ತು ಕೊಂಬೆಗಳು ಮುರಿದು ಬೀಳುವ ಸಾಧ್ಯತೆ ಇದೆ” ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

ಬೆಂಗಳೂರಿನಲ್ಲಿ ಜೂನ್ 3ರವರೆಗೆ ಸಾಧಾರಣ ಮಳೆಯಾಗಲಿದೆ ಎಂದು ಇಲಾಖೆ ತಿಳಿಸಿದೆ. ಮಾರ್ಚ್ 1ರಿಂದ ನಗರದಲ್ಲಿ 277 ಮಿಮೀ ಮಳೆ ದಾಖಲಾಗಿದ್ದರೆ, ಕಳೆದ ವರ್ಷ ಇದೇ ಅವಧಿಯಲ್ಲಿ ನಗರದಲ್ಲಿ 421 ಮಿಮೀ ಮಳೆಯಾಗಿತ್ತು.

ಹವಾಮಾನ ಇಲಾಖೆಯ ವಿಜ್ಞಾನಿಗಳ ಪ್ರಕಾರ, ಜೂನ್ 4 ರಂದು ಕೇರಳದ ಮೇಲೆ ನೈಋತ್ಯ ಮಾನ್ಸೂನ್ ಪ್ರವೇಶಿಸಲಿದೆ.

“ನೈಋತ್ಯ ಮಾನ್ಸೂನ್ ಇಂದು ನೈಋತ್ಯ ಬಂಗಾಳ ಕೊಲ್ಲಿಯ ಕೆಲವು ಭಾಗಗಳು, ಆಗ್ನೇಯ ಬಂಗಾಳ ಕೊಲ್ಲಿಯ ಕೆಲವು ಭಾಗಗಳು, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಪೂರ್ವ ಮಧ್ಯ ಬಂಗಾಳ ಕೊಲ್ಲಿಯ ಕೆಲವು ಭಾಗಗಗಳಲ್ಲಿ ಮುಂದುವರಿದಿದೆ. ಹೀಗಾಗಿ ಕರಾವಳಿ ಆಂಧ್ರಪ್ರದೇಶದಲ್ಲಿ, ತೆಲಂಗಾಣದ ಕೆಲವು ಭಾಗಗಳಲ್ಲಿ, ತಮಿಳುನಾಡು, ಕರ್ನಾಟಕ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಕರ್ನಾಟಕದಲ್ಲಿ ಮಳೆಯಾಗಿದೆ. ನಾಳೆಯೂ ಮಳೆ ಮುಂದುವರಿಯುತ್ತದೆ. ಮೇ 30ರಿಂದ ಜೂನ್ 3 ರವರೆಗೆ ಕೇರಳದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ” ಎಂದು ಇಲಾಖೆಯ ವಿಜ್ಞಾನಿಗಳು ತಿಳಿಸಿದ್ದಾರೆ.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಈಗಾಗಲೇ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದ್ದಾರೆ. “ಮಳೆಯಿಂದ ಬೆಂಗಳೂರಿನ ನಿವಾಸಿಗಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಜನರೊಂದಿಗೆ ಸೌಹಾರ್ದಯುತವಾಗಿ ಬಿಬಿಎಂಪಿ ಸ್ಪಂದಿಸಬೇಕು. ಮಳೆಗಾಲದಲ್ಲಿ ಮಳೆ ನೀರು ಮುಕ್ತವಾಗಿ ಹರಿಯುವಂತೆ ವ್ಯವಸ್ಥೆ ಮಾಡಬೇಕು” ಎಂದು ನಿರ್ದೇಶಿಸಿದ್ದಾರೆ.

ಏನಿವು ಅಲರ್ಟ್‌ಗಳು?

ಮಳೆಗಾಲದಲ್ಲಿ ಅಥವಾ ಯಾವುದೇ ಅನಿರೀಕ್ಷಿತ ಚಂಡಮಾರುತಗಳು ಬೀಸುವ ಸಂದರ್ಭದಲ್ಲಿ ಜನಸಾಮಾನ್ಯರ ಸುರಕ್ಷತೆಯ ದೃಷ್ಟಿಯಿಂದ ಭಾರತೀಯ ಹವಾಮಾನ ಇಲಾಖೆಯು ಹಸಿರು, ಕಿತ್ತಳೆ, ಕೆಂಪು ಮತ್ತು ಹಳದಿ ಅಲರ್ಟ್‌ಗಳನ್ನು ಹೊರಡಿಸುತ್ತದೆ. ಅವುಗಳ ಅರ್ಥವೇನು? ಅವು ಏನನ್ನು ಸೂಚಿಸುತ್ತವೆ?

ನಮ್ಮ ದೇಶದಲ್ಲಿ ಭಾರತೀಯ ಹವಾಮಾನ ಇಲಾಖೆ (IMD)ಯು ಈ ಎಚ್ಚರಿಕೆಗಳನ್ನು ನೀಡುತ್ತದೆ ಮತ್ತು ವಿಭಿನ್ನ ಸಂದೇಶಗಳನ್ನು ವಿವರಿಸಲು 4 ವಿಭಿನ್ನ ಬಣ್ಣದ ಕೋಡ್‌ಗಳನ್ನು ಬಳಸುತ್ತದೆ.

1. ಹಸಿರು ಎಚ್ಚರಿಕೆ (ಗ್ರೀನ್ ಅಲರ್ಟ್)

ಗ್ರೀನ್ ಅಲರ್ಟ್ ಎಂದರೆ ಸಾಮಾನ್ಯವಾಗಿ ಹವಾಮಾನ ಪರಿಸ್ಥಿತಿಗಳು ಉತ್ತಮವಾಗಿವೆ ಎಂದರ್ಥ. ಬಹುತೇಕ ಸಮಯದಲ್ಲಿ ಈ ಅಲರ್ಟ್ ಜಾರಿಯಲ್ಲಿರುತ್ತದೆ. ಅಲ್ಲದೆ ಈ ಎಚ್ಚರಿಕೆಯ ಸಮಯದಲ್ಲಿ ಭಾರತೀಯ ಹವಾಮಾನ ಇಲಾಖೆಯು ನಾಗರಿಕರಿಗೆ ಯಾವುದೇ ಸಲಹೆಯನ್ನು ನೀಡುವುದಿಲ್ಲ.

2. ಹಳದಿ ಎಚ್ಚರಿಕೆ (ಯೆಲ್ಲೋ ಅಲರ್ಟ್)

ಹವಾಮಾನ ಇಲಾಖೆಯು ಜನರಿಗೆ ಎಚ್ಚರಿಕೆ ನೀಡಲು ಹಳದಿ ಅಲರ್ಟ್ ಅನ್ನು ನೀಡುತ್ತದೆ. 7.5 ರಿಂದ 15 ಮಿಮೀ ವರೆಗೆ ಭಾರೀ ಮಳೆಯಾಗಲಿದ್ದು, ಇದು ಮುಂದಿನ 1 ಅಥವಾ 2 ಗಂಟೆಗಳ ಕಾಲ ಮುಂದುವರಿಯುವ ಸಾಧ್ಯತೆಯಿದೆ ಎಂದಾಗ ಇದನ್ನು ಹೊರಡಿಸುತ್ತದೆ. ಅಂದರೆ ಇದು ಕೇವಲ ಮುಂದೊದಗಬಹುದಾದ ಅಪಾಯದ ಬಗ್ಗೆ ಎಚ್ಚರವಿರಲಿ ಎಂದರ್ಥ. ಹಳದಿ ಎಚ್ಚರಿಕೆಯ ಸಮಯದಲ್ಲಿ ಹವಾಮಾನವನ್ನು ನಿರಂತರವಾಗಿ ಮತ್ತು ನಿಕಟವಾಗಿ ಮೇಲ್ವಿಚಾರಣೆ ಮಾಡಲಾಗುತ್ತದೆ.

3. ಕಿತ್ತಳೆ ಎಚ್ಚರಿಕೆ (ಆರೆಂಜ್ ಅಲರ್ಟ್)

ಹವಾಮಾನವು ಹದಗೆಟ್ಟಾಗ, ಹಳದಿ ಎಚ್ಚರಿಕೆಯನ್ನು ಆರೆಂಜ್ ಅಲರ್ಟ್ ಆಗಿ ಬದಲಾಯಿಸಲಾಗುತ್ತದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳುತ್ತದೆ. “ಈ ಚಂಡಮಾರುತವು ಹವಾಮಾನ ಪರಿಸ್ಥಿತಿಗಳು ಹದಗೆಡಲು ಕಾರಣವಾಗಬಹುದು. ಇದು ರಸ್ತೆ ಮತ್ತು ವಾಯು ಸಾರಿಗೆಗೆ ಹಾನಿಯನ್ನುಂಟುಮಾಡುತ್ತದೆ ಮತ್ತು ಜೀವ ಮತ್ತು ಆಸ್ತಿ ನಷ್ಟವನ್ನು ಉಂಟುಮಾಡಬಹುದು” ಎಂಬುದನ್ನು ಆರೆಂಜ್ ಅಲರ್ಟ್ ವಿವರಿಸುತ್ತದೆ.

ಹೀಗಾಗಿ ಆರೆಂಜ್ ಅಲರ್ಟ್ ಘೋಷಿಸಿದ ಸಮಯದಲ್ಲಿ ಜನರು ತಮ್ಮ ಮನೆಗಳಲ್ಲಿಯೇ ಇರುವಂತೆ ಸೂಚಿಸಲಾಗುತ್ತದೆ. ಅಂತಹ ಪರಿಸ್ಥಿತಿಗಳಲ್ಲಿ ಗಾಳಿಯ ವೇಗ ಗಂಟೆಗೆ 65 ರಿಂದ 75 ಕಿಮೀ ಮತ್ತು 15 ರಿಂದ 33 ಮಿಮೀ ಮತ್ತು ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಎಚ್ಚರಿಕೆ ನೀಡಲಾಗಿದೆ. ಆರೆಂಜ್ ಅಲರ್ಟ್ ಘೋಷಿಸಿದಾಗ ಮಳೆ ಪೀಡಿತ ಪ್ರದೇಶದಲ್ಲಿ ಅಪಾಯಕಾರಿ ಪ್ರವಾಹದ ಸಾಧ್ಯತೆಯಿರುವುದರಿಂದ ಪೀಡಿತ ಪ್ರದೇಶದಿಂದ ಜನರನ್ನು ಸ್ಥಳಾಂತರಿಸಲು ಯೋಜನೆಯನ್ನು ಸಿದ್ಧಪಡಿಸಬೇಕು ಎಂದು ಸ್ಥಳೀಯ ಆಡಳಿತಗಳಿಗೆ ಸೂಚಿಸಲಾಗುತ್ತದೆ.

4. ಕೆಂಪು ಎಚ್ಚರಿಕೆ (ರೆಡ್ ಅಲರ್ಟ್)

ರೆಡ್ ಅಲರ್ಟ್ ಎಂದರೆ ಅಪಾಯಕಾರಿ ಪರಿಸ್ಥಿತಿ ಎಂದರ್ಥ. ಇದು ಅಂತಿಮ ಎಚ್ಚರಿಕೆಯಾಗಿದೆ. ಈ ಸಮಯದಲ್ಲಿ ಜನರು ಹೊರಗಡೆ ಹೋಗದಂತೆ ಸೂಚಿಸಲಾಗುತ್ತದೆ. ಚಂಡಮಾರುತವು ಗಂಟೆಗೆ 130 ಕಿಮೀ ಗಾಳಿಯ ವೇಗದ ತೀವ್ರತೆಯೊಂದಿಗೆ ಬೀಸಿದಾಗ ಮತ್ತು ತೀವ್ರ ಮಳೆ ಬಂದಾಗ ಭಾರತೀಯ ಹವಾಮಾನ ಇಲಾಖೆಯು ಕೆಂಪು ಎಚ್ಚರಿಕೆ ನೀಡುತ್ತದೆ. ಆ ಪ್ರದೇಶದ ಆಡಳಿತವು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚಿಸಲಾಗುತ್ತದೆ.

ಹವಾಮಾನವು ಅಪಾಯಕಾರಿ ಮಟ್ಟಕ್ಕೆ ತಲುಪಿದಾಗ ಮತ್ತು ಭಾರೀ ಹಾನಿಯ ಅಪಾಯವಿದ್ದರೆ, ಆಗ ರೆಡ್ ಅಲರ್ಟ್ ನೀಡಲಾಗುವುದು ಎಂದು ಹವಾಮಾನ ಇಲಾಖೆ ಹೇಳಿದೆ. 30 ಮಿ.ಮೀ.ಗಿಂತ ಹೆಚ್ಚು ಮಳೆಯಾಗುವ ಸಾಧ್ಯತೆ ಮತ್ತು ಕನಿಷ್ಠ 2 ಗಂಟೆಗಳ ಕಾಲ ಇದು ಮುಂದುವರಿಯುವ ಸಾಧ್ಯತೆ ಇದ್ದಾಗ ಮಾತ್ರ ಈ ರೀತಿಯ ಎಚ್ಚರಿಕೆಯನ್ನು ಘೋಷಿಸಲಾಗುತ್ತದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...