Homeಮುಖಪುಟಕಾರ್ಪೊರೆಟ್ ಧೃತರಾಷ್ಟ್ರ ಬಾಹುಗಳಿಗೆ ವಾಣಿಜ್ಯ ಬ್ಯಾಂಕುಗಳು!

ಕಾರ್ಪೊರೆಟ್ ಧೃತರಾಷ್ಟ್ರ ಬಾಹುಗಳಿಗೆ ವಾಣಿಜ್ಯ ಬ್ಯಾಂಕುಗಳು!

- Advertisement -
- Advertisement -

ನವೆಂಬರ್ 23ರಂದು ಭಾರತೀಯ ರಿಸರ್ವ್ ಬ್ಯಾಂಕ್, ಬ್ಯಾಂಕುಗಳ ಮಾಲಿಕತ್ವದ ಉದಾರೀಕರಣ ಕುರಿತಂತೆ ಮಹತ್ವದ ತೀರ್ಮಾನವೊಂದನ್ನು ಕೈಗೊಂಡಿದೆ. ವ್ಯಾಪಾರ-ವಾಣಿಜ್ಯಗಳಲ್ಲಿ ತೊಡಗಿರುವ ಕಾರ್ಪೊರೆಟ್ ಸಂಸ್ಥೆಗಳು ಬ್ಯಾಂಕುಗಳನ್ನು ಆರಂಭಿಸುವುದಕ್ಕಿದ್ದ ನಿಯಂತ್ರಣವನ್ನು ತೆಗೆದುಹಾಕುವ ನಿರ್ಧಾರವದು. ಈ ನಿಯಂತ್ರಣವನ್ನು ಯಾಕಾಗಿ ಹಾಕಲಾಗಿತ್ತೆನ್ನುವುದರ ಬಗ್ಗೆ ಕಾಳಜಿ ಮೊದಲೇ ಇಲ್ಲ, ಅತ್ತ ಚರ್ಚೆಯೂ ಇಲ್ಲ. ಇಡೀ ದೇಶದಲ್ಲಿ ಬ್ಯಾಂಕ್ ವ್ಯವಹಾರ ಕ್ಷೇತ್ರ ಮತ್ತು ಆರ್ಥಿಕ ಅಭಿವೃದ್ಧಿ ಕ್ಷೇತ್ರದ ಬೆಳವಣಿಗೆಗಳ ಮೇಲೆ ಹದ್ದಿನ ಕಣ್ಣುಗಳನ್ನಿಟ್ಟುಕೊಂಡು ಯಾವುದೇ ಅನಾಹುತ, ವಂಚನೆಗಳಾಗದಂತೆ ಜವಾಬ್ದಾರಿಯುತ ಪಾತ್ರ ವಹಿಸುಕೊಂಡುಬರುತ್ತಿದ್ದ ಭಾರತಿಯ ರಿಸರ್ವ್ ಬ್ಯಾಂಕು, ತನ್ನ ಸ್ವಾಯತ್ತತೆಯನ್ನು ಕೇಂದ್ರ ಸರ್ಕಾರಕ್ಕೆ ಒತ್ತೆ ಇಟ್ಟಿರುವ ರೀತಿಯಲ್ಲಿ ಕಾರ್ಯ ನಿರ್ವಹಿಸತೊಡಗುತ್ತಿರುವುದು ಆತಂಕಕಾರಿ ಬೆಳವಣಿಗೆ. ತನ್ನ ಆಂತರಿಕ ಕಾರ್ಯ ನಿರ್ವಹಣಾ ಘಟಕದ ಬಹುಮತದ ಅಭಿಪ್ರಾಯವನ್ನು ಕಡೆಗಣಿಸಿ, ಅಲ್ಪ ಮತದ ತೀರ್ಮಾನವನ್ನು ಆಧರಿಸಿ ಕಾರ್ಪೊರೆಟ್ ಸಂಸ್ಥೆಗಳು ತಮ್ಮ ಮಾಲಿಕತ್ವದ ಅಡಿಯಲ್ಲಿ ಬ್ಯಾಂಕುಗಳನ್ನು ಹೊಂದಬಹುದು ಎನ್ನುವ ಆದೇಶ ಹೊರಡಿಸುವ ಹಂತಕ್ಕೆ ಈಗ ಆರ್‌ಬಿಐ ಬಂದಿದೆ. ಇದು ಕುರಿ ಕಾಯಲು ತೋಳವನ್ನು ನೇಮಿಸಿದಂತೆ ಎಂದು ತಜ್ಞರ ಅಭಿಪ್ರಾಯ.

ಕಾರ್ಪೊರೆಟ್ ವಲಯವನ್ನು ತೋಳ ಎಂದು ಉಪಮಿಸಲು ಕಾರಣ ಎಂದರೆ, ಇತ್ತೀಚಿನ ವರ್ಷಗಳಲ್ಲಿ ಆ ವಲಯದ ಕೆಲವು ಬಹು ದೊಡ್ಡ ಕಂಪನಿಗಳು ದೇಶದ ಅರ್ಥ ವ್ಯವಸ್ಥೆಗೆ ಮತ್ತು ಬ್ಯಾಂಕಿಂಗ್ ವಲಯಕ್ಕೆ ಕೊಟ್ಟಿರುವ ಕಾಣಿಕೆ: ಲಕ್ಷಾಂತರ ಕೋಟಿ ರೂಪಾಯಿಗಳ ಎನ್‌ಪಿಎ! ಅಂದರೆ ದುಡಿಯದ ಬಂಡವಾಳವನ್ನು ಸೃಷ್ಟಿಸಿರುವುದು ಮತ್ತು ಭಾರತೀಯ ರಿಸರ್ವ್ ಬ್ಯಾಂಕು ಕೇಂದ್ರ ಸರ್ಕಾರದ ಅನುಮೋದನೆ ಮೇರೆಗೆ ಅದನ್ನು ರೈಟ್ ಆಫ್ ಮಾಡಿರುವುದೇ ಆ ಕಾಣಿಕೆ. ಹೀಗೆ ರೈಟ್ ಆಫ್ ಆದ ಎನ್‌ಪಿಎ ಖಾತೆಗಳ ಮೊತ್ತ, ಕಳೆದ ಒಂದೂವರೆ ದಶಕದಲ್ಲಿ, ಹತ್ತಿರ ಹತ್ತಿರ 20 ಲಕ್ಷ ಕೋಟಿ ರೂಪಾಯಿಗಳು. ಈ ನಷ್ಟಗಳ ಅಂತಿಮ ಹೊರೆ ಪರೋಕ್ಷವಾಗಿ ಸರ್ಕಾರಕ್ಕೆ ಮತ್ತು ಸಾರ್ವಜನಿಕರಿಗೆ. ನಷ್ಟಕ್ಕೆ ಕಾರಣರಾದವರು ಕಾನೂನಿನ ಕೈಗಳಿಂದ ಪಾರಾಗುವಷ್ಟು ಜಾಣತನ ಹೊಂದಿಯೇ ಇದ್ದಾರೆ. ಈ ಜಾಣತನವೇ ಈ ದೇಶದ ಕಾರ್ಪೊರೆಟ್ ಧಣಿಗಳ ಸುರಕ್ಷತಾ ಕವಚ.

PC : Inc. Magazine

ರಾಷ್ಟ್ರೀಯ ವರಮಾನಕ್ಕೆ ಗಣನೀಯ ಕೊಡುಗೆ ನೀಡುತ್ತಿದ್ದ ಪ್ರಾಥಮಿಕ ವಲಯಗಳೆಂದು ಪರಿಗಣಿತವಾದ ಕೃಷಿ ಮತ್ತು ಗುಡಿ ಕೈಗಾರಿಕೆಗಳಿಗೆ ಆರ್ಥಿಕ ಸಂಪನ್ಮೂಲ ಒದಗಿಸುವುದಕ್ಕಾಗಿ 1969 ಮತ್ತು 1980ರಲ್ಲಿ ವಾಣಿಜ್ಯ ಬ್ಯಾಂಕುಗಳ ರಾಷ್ಟ್ರೀಕರಣ ಮಾಡಲಾಗಿತ್ತು. ಆ ಮೂಲಕ ದೇಶದ ಅತಿಹೆಚ್ಚು ಜನಸಂಖ್ಯೆಗೆ ಉದ್ಯೋಗ ಕೊಡುವುದರ ಜೊತೆಗೆ ಕೆಲವೇ ಜನರ ಕೈಯಲ್ಲಿ ಆರ್ಥಿಕ ಸಂಪತ್ತು ಮತ್ತು ಸಂಪನ್ಮೂಲಗಳು ಕೇಂದ್ರೀಕೃತವಾಗುವುದನ್ನು ತಪ್ಪಿಸುವ ಉದ್ದೇಶ ಅದಕ್ಕಿತ್ತು. ಈಗ ರಾಷ್ಟ್ರೀಕೃತ ಬ್ಯಾಂಕುಗಳನ್ನು ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳನ್ನು ವಿಲೀನಿಕರಣಕ್ಕೊಳಪಡಿಸುವ ಮೂಲಕ ಬೃಹತ್ ಬ್ಯಾಂಕುಗಳನ್ನು ಸೃಷ್ಟಿಸಿ ಬೃಹತ್ ಉದ್ಯಮಿಗಳ ಉತ್ಪಾದನೆಗಾಗಿ ದೊಡ್ಡ ಪ್ರಮಾಣದ ಸಾಲ ನೀಡುವ ಮೂಲಕ ದೇಶವನ್ನು ಜಗತ್ತಿನ ಬೃಹತ್ ರಾಷ್ಟ್ರಗಳ ಸಾಲಿನಲ್ಲಿ ತರುವ ಉದ್ದೇಶ ಈಗಿನ ಸರ್ಕಾರದ್ದಾಗಿದೆ.

ಸ್ವಾತಂತ್ರ್ಯಾನಂತರದ ಏಳು ದಶಕಗಳಲ್ಲಿ ಯಾವುದನ್ನು ಸಂವಿಧಾನಪರ ಅಭಿವೃದ್ಧಿಯ ರಾಷ್ಟ್ರೀಯ ಆರ್ಥಿಕ ನೀತಿ ಎಂದುಕೊಂಡಿದ್ದೆವೋ, ಅದರ ವಿರುದ್ಧ ದಿಕ್ಕಿನಲ್ಲಿ ಅರ್ಥವ್ಯವಸ್ಥೆಯನ್ನು ಕೊಂಡೊಯ್ಯುವ ನೀತಿ ಇವತ್ತಿನದ್ದಾಗುತ್ತಿದೆ. ಅದನ್ನು ಕೇಂದ್ರ ಸರ್ಕಾರ ಸ್ಪಷ್ಟವಾಗಿ ಘೊಷಿಸಿಕೊಂಡಿದೆ ಕೂಡ. ಈ ವರ್ಷದ ಮುಂಗಡ ಪತ್ರದಲ್ಲಿ ಮತ್ತು ಆರ್ಥಿಕ ಸಮೀಕ್ಷೆಯಲ್ಲಿ ಯಾರನ್ನು ಸಂಪತ್ತು ಸೃಷ್ಟಿಕಾರರು ಎಂದು ಗೌರವಿಸಲಾಗಿದೆಯೋ ಆ ಸಂಪತ್ತು ಸೃಷ್ಟಿಕಾರರೇ ಈ ಕಾರ್ಪೊರೇಟ್ ಸಂಸ್ಥೆಗಳು. ಇಲ್ಲಿನ ದ್ವಂದ್ವ, ಗೊಂದಲ ಮತ್ತು ವಿರೋಧಾಭಾಸಗಳೆಂದರೆ, ಈ ಕಾರ್ಪೊರೆಟ್ ಸಂಸ್ಥೆಗಳನ್ನು ಮುಂದಿಟ್ಟುಕೊಂಡು ಬೃಹತ್ ಯಂತ್ರಗಳನ್ನು ಉಪಯೋಗಿಸಿ ಗ್ರಾಮ ಸ್ವರಾಜ್ಯವನ್ನು, ಆತ್ಮನಿರ್ಭರ ಭಾರತವನ್ನು ಕಟ್ಟುವ ಬಗೆಗೆ ಏನೆನ್ನುವುದು? ದೇಶದ ಆಂತರಿಕ ಆರ್ಥಿಕ ಘಟಕಗಳಿಗೆ ಕನಿಷ್ಟ ಭದ್ರತೆಯನ್ನು ದೃಢಪಡಿಸಿಕೊಳ್ಳದೆ, ಉದ್ಯೋಗ ವ್ಯವಸ್ಥೆಯನ್ನು ಗಟ್ಟಿಗೊಳಿಸಿಕೊಳ್ಳದೆ ಮುಕ್ತ ಮಾರುಕಟ್ಟೆಯಲ್ಲಿನ ಪೈಪೋಟಿಯ ಕಟ್ಟುಗಳನ್ನು ಸಡಿಲಗೊಳಿಸುವುದೆಂದರೆ ದುರ್ಬಲರನ್ನು ಮಾರುಕಟ್ಟೆಯಿಂದ ದೂರವಿಟ್ಟಂತೆಯೇ ಸರಿ.

ಉದ್ದೇಶವೇನು?

ಕಾರ್ಪೊರೆಟ್ ಸಂಸ್ಥೆಗಳ ಮಾಲಿಕತ್ವಕ್ಕೆ ಬ್ಯಾಂಕುಗಳನ್ನು ಮುಕ್ತಗೊಳಿಸುವ ಈ ಯೋಚನೆ ಸರ್ಕಾರಕ್ಕೆ ಬಂದದ್ದು 2013ರಲ್ಲಿ. ಆಗ ಇದೇ ಆಂತರಿಕ ಕಾರ್ಯನಿರತ ಘಟಕ ಮಾಡಿದ ಶಿಫಾರಸ್ಸನ್ನು ಜಾರಿಗೊಳಿಸಲು ಸರ್ಕಾರ ಮುಂದಾಗಿ ವ್ಯತಿರಿಕ್ತ ಸಾರ್ವಜನಿಕ ಅಭಿಪ್ರಾಯದ ಮೇರೆಗೆ 2014ರಲ್ಲಿ ಈ ನಿರ್ಧಾರವನ್ನು ಕೈಬಿಡಲಾಗಿತ್ತು. ಇದೀಗ ಮತ್ತೆ ಈ ತೀರ್ಮಾನಕ್ಕೆ ಕೇಂದ್ರ ರಿಸರ್ವ್ ಬ್ಯಾಂಕು ಬರಲು ಕಾರಣ ಕೇಂದ್ರ ಸರ್ಕಾರದ ಒತ್ತಾಸೆಯಲ್ಲದೆ ಬೇರಿಲ್ಲ. ಅಲ್ಲಿಗೆ ಭಾರತೀಯ ರಿಸರ್ವ್ ಬ್ಯಾಂಕು ತನ್ನ ಸ್ವಾಯತ್ತತೆಯನ್ನು ಕಳೆದುಕೊಳ್ಳುತ್ತಿದೆ ಎಂದೇ ಅರ್ಥ. ಈ ತೀರ್ಮಾನಕ್ಕೆ, ಮಾಧ್ಯಮಗಳಲ್ಲಿ ವರದಿಯಾಗಿರುವಂತೆ, ಕೇವಲ ಒಬ್ಬ ಸದಸ್ಯರನ್ನು ಉಳಿದು ಎಲ್ಲರೂ ವಿರುದ್ಧವಾಗಿರುವುದು ತಿಳಿದುಬಂದಿದೆ. ಅಷ್ಟೇ ಏಕೆ, ಇದೇ ಬ್ಯಾಂಕಿನ ಮಾಜಿ ಗವರ್‍ನರ್ ಮತ್ತು ಡೆಪ್ಯುಟಿ ಗವರ್‍ನರ್‌ಗಳಾದ ರಘುರಾಮ್ ರಾಜನ್ ಮತ್ತು ವಿರಲ್ ಆಚಾರ್ಯ ವಿರೋಧ ವ್ಯಕ್ತಪಡಿಸಿರುವುದನ್ನು ಗಂಭೀರವಾಗಿ ಪರಿಗಣಿಸಿ ಚರ್ಚಿಸಲು ಕೂಡ ಮುಂದಾಗಿಲ್ಲ. ಸರ್ಕಾರದ ನೀತಿ ತೀರ್ಮಾನಗಳಲ್ಲಿ ಪರಿಣಿತರ ಮತ್ತು ಜನಪ್ರತಿನಿಧಿಗಳ ಪಾಲ್ಗೊಳ್ಳುವಿಕೆ ಇಲ್ಲದಿರುವ ಕಾರಣಕ್ಕೇ, ಇಂದು ಪಂಜಾಬ್ ಮತ್ತು ಹರಿಯಾಣದ ರೈತರಷ್ಟೇ ಅಲ್ಲ, ದೇಶಾದ್ಯಂತ ರೈತರು ಕೇಂದ್ರ ಸರ್ಕಾರದ ಇತ್ತೀಚಿನ ಮೂರು ಕೃಷಿ ಕಾಯಿದೆಗಳೆಗೆ ಸಂಬಂಧಿಸಿದಂತೆ ತೀವ್ರ ಪ್ರತಿಭಟನೆಗೆ ಇಳಿದಿರುವುದು.

ಕಾರ್ಪೊರೆಟ್ ಸಂಸ್ಥೆಗಳಿಗೆ ತಮ್ಮ ವ್ಯವಹಾರಕ್ಕೆ ಅನುಕೂಲವಾಗುವಂತೆ ತಮ್ಮದೇ ಆದ ಹಣಕಾಸು ಸಂಸ್ಥೆಯನ್ನು ಸ್ಥಾಪಿಸಿಕೊಳ್ಳುವ ಅವಕಾಶ ನೀಡುವ ಮೂಲಕ, ಅವರದೇ ಸೂಜಿಯನ್ನು ಅವರ ಕಣ್ಣಲ್ಲಿ ಇಡುವ ಯೋಚನೆ ಕೇಂದ್ರ ಸರ್ಕಾರದ್ದು ಎನ್ನುವುದಾದರೆ ಅದು ಒಟ್ಟಾರೆ ಅಸಮಂಜಸವಾದುದು. ಏಕೆಂದರೆ, ಇಲ್ಲಿ ಸಂಭವನೀಯ ಕಾರ್ಪೊರೆಟ್ ಸಂಸ್ಥೆಯ ಬ್ಯಾಂಕಿನಲ್ಲಿ ಠೇವಣಿ ರೂಪದಲ್ಲಿಹಣ ಇಡುವ ಸಾರ್ವಜನಿಕರ ಪಾತ್ರ ಮಹತ್ವದ್ದು. ಮುಂದುವರೆದು, ಈ ತೀರ್ಮಾನದ ಮೂಲಕ ಕೇಂದ್ರ ಸರ್ಕಾರ ಬ್ಯಾಂಕಿಂಗ್ ವಲಯದ ಜವಾಬ್ದಾರಿಯಿಂದ ಹೊರಬರುವ ಆಲೋಚನೆಯಲ್ಲಿದ್ದರೆ, ಈಗಿರುವ ರಾಷ್ಟ್ರೀಕೃತ ಬ್ಯಾಂಕುಗಳನ್ನು ನಿಧಾನವಾಗಿ ಖಾಸಗೀಕರಿಸುವ ಉದ್ದೇಶವನ್ನೂ ಅದು ಹೊಂದಿದೆ ಎಂದೇ ಅರ್ಥ.

ಪರಿಣಾಮಗಳು

ಮೊದಲನೆಯದಾಗಿ, ಹಾಲಿ ವ್ಯವಹಾರ ಮತ್ತು ವಾಣಿಜ್ಯಗಳಲ್ಲಿ ತೊಡಗಿರುವ ಬೃಹತ್ ಖಾಸಗಿ ಕಂಪನಿಗಳು ತಮ್ಮವೇ ಆದ ಬ್ಯಾಂಕುಗಳನ್ನು ಸ್ಥಾಪಿಸಿಕೊಳ್ಳುತ್ತವೆ ಎಂದಿಟ್ಟುಕೊಳ್ಳೋಣ. ಆಗ ಅವು ನೀಡುವ ಸಾಲದ ಆದ್ಯತೆ ಆ ಸಂಸ್ಥೆಗಳ ವ್ಯವಹಾರ ವಹಿವಾಟುಗಳಿಗೆ ಇರುತ್ತದೆಯೇ ಹೊರತು ಸರ್ಕಾರದ
ಆದ್ಯತೆಗಳಿಗನುಗುಣವಾಗಿರುವುದಿಲ್ಲ. ಯಾವುದೇ ಕಂಪನಿ ತಾನು ಹುಟ್ಟು ಹಾಕಿದ ಬ್ಯಾಂಕು ತನಗೇ ನೀಡಿದ ಸಾಲವನ್ನು ತಾನೊಂದು ವೇಳೆ ಮರುಪಾವತಿಸಲು ವಿಫಲವಾದಲ್ಲಿ, ಆ ಕಂಪನಿಯಾದರೂ ಮುಚ್ಚಬಹುದು ಇಲ್ಲಾ ಬ್ಯಾಂಕಾದರೂ ಮುಚ್ಚಬಹುದು. ಅಥವಾ ಎರಡೂ ಏಕಕಾಲಕ್ಕೆ ಮುಚ್ಚಬಹುದು. ಇವುಗಳಲ್ಲಿ ಯಾವುದೊಂದಾದರೂ ಸರಿ, ಅಂತಿಮವಾಗಿ ದುರಂತಕ್ಕೆ ಒಳಗಾಗುವವರು ಠೇವಣಿದಾರ ಸಾರ್ವಜನಿಕರು ಮಾತ್ರ.

PC : StarsUnfolded (ಹರ್ಷದ್ ಮೆಹ್ತಾ)

ಆರಂಭದಲ್ಲಿ ಠೇವಣಿಗಳನ್ನು ಆಕರ್ಷಿಸಲು ಪ್ರಾಯೋಜಿತ ಕಂಪನಿ ಮತ್ತು ಬ್ಯಾಂಕುಗಳೆರಡೂ ವರ್ಣರಂಜಿತ ಚಿತ್ರಣವನ್ನು ಮುಂದಿಡಬಹುದು. ಇಂಥ ಆಕರ್ಷಣೆಗಳಿಗೆ ಬರೀ ಸಾರ್ವಜನಿಕರಷ್ಟೇ ಏಕೆ ಸರ್ಕಾರಗಳೂ ಕೂಡ ಮರುಳಾಗಿ ತಮ್ಮ ಹಣವನ್ನು ಆ ಬ್ಯಾಂಕುಗಳಲ್ಲಿಡಬಹುದು. ತೊಂಬತ್ತರ ದಶಕದ ಹರ್ಷದ್ ಮೆಹ್ತಾ ಪ್ರಕರಣದಲ್ಲಿ ಕಂಡಂತೆ ಭಾರತೀಯ ಎಣ್ಣೆ ನಿಗಮ ಹೂಡಿದ ಸಾವಿರಾರು ಕೋಟಿ ರೂಪಾಯಿಗಳ ಮೊತ್ತ ಮರಳಲ್ಲಿ ಎಣ್ಣೆ ಬೆರೆಸಿದಂತಾಯಿತು. ಅದಕ್ಕೆ ಕಾರಣ ಅಧಿಕ ಬಡ್ಡಿಯ ಮತ್ತು ಕೊಳ್ಳುವ ಷೇರುಗಳ ಮಾರುಕಟ್ಟೆ ಬೆಲೆಯಲ್ಲಿನ ಏರಿಕೆಯ ನಿರೀಕ್ಷೆ. ಇದರಿಂದಾಗಿ ಮಹಾರಾಷ್ಟ್ರದ ಕರಡ್ ಬ್ಯಾಂಕ್ ಮುಚ್ಚಿ ಹೋಯಿತು. ಸಾವಿರಾರು ಬೀಡಿ ಕಾರ್ಮಿಕರ ನೂರಾರು ಕೋಟಿ ಠೇವಣಿ ಮೊತ್ತ ಶೂನ್ಯವಾಯಿತು. ಇವರಿಗೆ ಪರಿಹಾರ ಸಿಕ್ಕ ಸಾಕ್ಷಿಗಳಿಲ್ಲ. ಹಾಗೆಯೇ ಅಲ್ಲಿನ ಮೆಟ್ರೋಪೊಲಿಟಿನ್ ಬ್ಯಾಂಕಿನ ಸ್ಥಿತಿ ಕೂಡ. ಸುಮಾರು 2.5 ಬಿಲಿಯನ್ ರೂಪಾಯಿಗಳಿಗಿಂತಲೂ ಹೆಚ್ಚಿನ ಮೊತ್ತದ ವಹಿವಾಟು ಕೇವಲ ಒಬ್ಬ ವ್ಯಕ್ತಿಯ ಚಾಲನೆಯಿಂದ ಆಗಿಹೋಯಿತು.

PC : Trade Brains (ಕೇತನ್ ಪರೇಕ್)

2000ನೆ ಇಸವಿಯ ಕೇತನ್ ಪರೇಕ್ ಪ್ರಕರಣ, ನೀರವ್ ಮೋದಿ, ಮೆಹುಲ್ ಚೋಕ್ಸಿ ಮತ್ತು ತೀರಾ ಇತ್ತೀಚಿನ ಬೆಸ್ಟ್ ಬ್ಯಾಂಕಿನ ಸ್ಥಿತಿ ಇವೆಲ್ಲವೂ ಕಣ್ಣಮುಂದಿದೆ. ಭಾರತೀಯ ರಿಸರ್ವ್ ಬ್ಯಾಂಕು ಕೇಂದ್ರ ಸರ್ಕಾರದ ಆಣತಿಯ ಮೇರೆಗೆ ಬೆಸ್ಟ್ ಬ್ಯಾಂಕನ್ನು ಭಾರತೀಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ವಶಕ್ಕೆ ಕೊಡುವ ಮೂಲಕ ಠೇವಣಿದಾರರಿಗೆ ಒಂದಷ್ಟು ಭದ್ರತೆ ಒದಗಿಸಿದೆ. ಅದೇ ರೀತಿ ಲಕ್ಷ್ಮಿ ವಿಲಾಸ ಬ್ಯಾಂಕಿನ ಗತಿ ಕೂಡ. ಇದರಿಂದ ನಷ್ಟ ಯಾರಿಗೆ ಎಂದರೆ, ಪಾಪರ್ ಆಗುವ ಬ್ಯಾಂಕುಗಳನ್ನು ವಶಕ್ಕೆ ಪಡೆಯುವ ಮೂಲಕ ಅವುಗಳ ದುಃಸ್ಥಿತಿಯನ್ನು ಮೈಮೇಲೆ ಎಳೆದುಕೊಳ್ಳುವ ಬ್ಯಾಂಕುಗಳಿಗೆ. ಈ ಕ್ರಮಗಳು ಹೀಗೆಯೇ ಮುಂದುವರಿದರೆ, ಮುಂದೊಂದು ದಿನ ಭಾರತೀಯ ಸ್ಟೇಟ್ ಬ್ಯಾಂಕು ಏನಾಗಬಹುದೆಂಬುದಕ್ಕೆ ಎಪ್ಪತ್ತರ ದಶಕದ ಕೊನೆಯ ವರ್ಷಗಳಲ್ಲಿ ಆರಂಭಗೊಂಡ ಎನ್.ಟಿ.ಸಿಯ (ಭಾರತೀಯ ಬಟ್ಟೆ ನಿಗಮ) ಉದಾಹರಣೆ ನಮ್ಮ ಕಣ್ಣ ಮುಂದಿದೆ. ರೋಗಗ್ರಸ್ತ ಘಟಕಗಳನ್ನು ಪುನರುಜ್ಜೀವನಗೊಳಿಸಲು ಹುಟ್ಟು ಹಾಕಿದ ಎನ್.ಟಿ.ಸಿ., ಎಲ್ಲರ ರೋಗಗಳನ್ನು ತಾನು ಅಂಟಿಸಿಕೊಂಡು ರೋಗಗ್ರಸ್ತವಾಗಿ ನೆಲ ಕಚ್ಚಿದ ಸ್ಥಿತಿ ಬಾಂಕ್ ವಲಯದಲ್ಲಿ ಪುನರಾವರ್ತನೆಯಾದರೆ ಆಶ್ಚರ್ಯಪಡಬೇಕಿಲ್ಲ. ಸರಿಯಾದ ಸುರಕ್ಷಾ ಕ್ರಮಗಳ ಎಚ್ಚರಿಕೆ ಇಲ್ಲದೆ ಮುಳುಗುವವನನ್ನು ಉಳಿಸಲು ಮುಂದಾಗಿ ತಾನೇ ಮುಳುಗುವ ಸ್ಥಿತಿ.

ಇಡೀ ಬ್ಯಾಂಕಿಂಗ್ ಉದ್ಯಮ ನಿಂತಿರುವುದು ಠೇವಣಿದಾರರ ನಂಬಿಕೆಯ ಮೇಲೆ. ಠೇವಣಿದಾರರಿಗಾದರೂ ತಮ್ಮ ಠೇವಣಿಯ ಮೇಲೆ ಅವರು ಪಡೆಯುವ ಬಡ್ಡಿ ದರಕ್ಕಿಂತ ಠೇವಣಿಯ ಸುರಕ್ಷತೆಯೇ ಮೊದಲ ಆದ್ಯತೆ. ಈಗ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ಠೇವಣಿಗಳ ಮೇಲೆ ನೀಡುವ ವಿಮಾ ರೂಪದ ಸುರಕ್ಷತಾ ಮೊತ್ತವನ್ನು ಕಳೆದ ಮುಂಗಡ ಪತ್ರದಲ್ಲಿ ವಿತ್ತ ಮಂತ್ರಿಗಳು ರೂ. ಒಂದು ಲಕ್ಷವಿದ್ದದ್ದನ್ನು 5 ಲಕ್ಷಕ್ಕೆ ಏರಿಸಿದ್ದಾರೆ. ಉಳಿದಂತೆ ಠೇವಣಿದಾರರಿಗೆ ಯಾವುದೇ ಭದ್ರತೆ ಇಲ್ಲ. ಈ ಭದ್ರತೆ ಸಿಗಬೇಕೆಂದರೆ ಈ ಕೂಡಲೆ ಕೇಂದ್ರ ಸರ್ಕಾರ ಠೇವಣಿದಾರರು ಇಟ್ಟ ಪೂರ್ಣ ಮೊತ್ತಕ್ಕೆ ಭದ್ರತೆ ನೀಡುವ ಕಾನೂನು ರೂಪಿಸಬೇಕು. ಜೊತೆಗೆ ಆನ್‌ಲೈನ್ ಬ್ಯಾಂಕಿಂಗ್‌ನಲ್ಲಿ ವ್ಯವಹರಿಸುವಾಗ ಬ್ಯಾಂಕಿನ ಯಾವುದೇ ಗ್ರಾಹಕರಿಗೆ ನಷ್ಟವಾದರೆ ಅದರ ಸಂಪೂರ್ಣ ಜವಾಬ್ದಾರಿಯನ್ನು ಆ ಬ್ಯಾಂಕೇ ವಹಿಸಿಕೊಳ್ಳುವಂತಹ ಕಾನೂನನ್ನು ರಚಿಸಬೇಕು. ಇಂಥ ಸುರಕ್ಷತಾ ಕವಚವಿಲ್ಲದೆ ಖಾಸಗಿ ಬ್ಯಾಂಕುಗಳನ್ನು ಮುಕ್ತವಾಗಿ ಬಿಡುವುದೆಂದರೆ ಅದು ಗ್ರಾಹಕರನ್ನು, ಅದರಲ್ಲೂ ನಿರ್ದಿಷ್ಠವಾಗಿ ಠೇವಣಿದಾರರನ್ನು ದುಃಸ್ಥಿತಿಗೆ ತಳ್ಳಿದಂತೆ.

ಎರಡನೆಯದಾಗಿ, ಕಾರ್ಪೊರೆಟ್ ಬ್ಯಾಂಕುಗಳು ಸಣ್ಣಪುಟ್ಟ ತುಂಡು ಭೂಮಿಯ ರೈತರುಗಳಿಗೆ ಸಾಲಸೌಲಭ್ಯ ನೀಡಲು ಮುಂದಾಗುವುದು ಕಡಿಮೆ. ಬದಲಾದ ಸಂದರ್ಭದಲ್ಲಿ ಅಂದರೆ, ಇವತ್ತಿನ ಭೂಸುಧಾರಣಾ ಕಾಯಿದೆಗೆ ತಂದಿರುವ ತಿದ್ದುಪಡಿಗಳನ್ನು ಗಮನದಲ್ಲಿಟ್ಟುಕೊಂಡು ನೋಡಿದರೆ, ಕಾರ್ಪೊರೆಟ್ ಸಂಸ್ಥೆಗಳು ಕೃಷಿ ಭೂಮಿಯನ್ನು ಹೊಂದಲು ಪರವಾನಗಿ ಸಿಕ್ಕ ಮೇಲೆ, ರೈತರುಗಳ ಕೃಷಿ ಭೂಮಿಯನ್ನು ಆಧಾರವಾಗಿಟ್ಟುಕೊಂಡು ಸಾಲ ಕೊಡಬಹುದು. ಮುಂದೆ ಆ ರೈತರುಗಳು ಸಾಲ ಮರುಪಾವತಿ ಮಾಡಲು ತಪ್ಪಿದರೆ ಅವರ ಭೂಮಿಯನ್ನು ಮುಟ್ಟುಗೋಲು ಹಾಕಿಕೊಂಡು ಭೂ ಮಾಲಿಕತ್ವ ಪಡೆಯಬಹುದು. ಅಲ್ಲಿಗೆ, ಭಾರತೀಯ ರಿಸರ್ವ್ ಬ್ಯಾಂಕಿನ ಈ ತೀರ್ಮಾನದಿಂದಾಗಿ ಮುಂದೊಂದು ದಿನ ಕೃಷಿ ಭೂಮಿ ಕಾರ್ಪೊರೆಟ್ ವಲಯದ ಆಸ್ತಿಯಾಗಿ ಮಾರ್ಪಡಲು ದಾರಿಯಾಗುತ್ತದೆ.

ಒಟ್ಟಾರೆಯಾಗಿ ಯಾವ ಮಗ್ಗುಲಿನಿಂದ ನೋಡಿದರೂ ಪ್ರಸ್ತುತ ಸರ್ಕಾರದ ನೀತಿ ಎಲ್ಲ ಕ್ಷೇತ್ರಗಳಲ್ಲಿ ಕಾರ್ಪೊರೆಟ್ ವಲಯಕ್ಕೆ ಕೆಂಪು ಹಾಸು ಹಾಸುವ ದಿಕ್ಕಿನಲ್ಲೇ ದಾಪುಗಾಲಿಡುತ್ತಿರುವುದು ಖಚಿತವಾಗುತ್ತಿದೆ. ಎಲ್ಲಿಯವರೆವಿಗೆ ಬೃಹತ್ ಕಾರ್ಪೊರೇಟ್ ಸಂಸ್ಥೆಗಳು ಬೃಹತ್ತಾಗಿ ಆರ್ಥಿಕ ಚಟುವಟಿಕೆಗಳಾದ ಉತ್ಪಾದನೆ ಮತ್ತು ವಿತರಣೆಯಲ್ಲಿ ನಿರತವಾಗಿರುತ್ತವೆಯೋ, ಅಲ್ಲಿಯವರೆವಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿಕೇಂದ್ರೀಕೃತ ಅಭಿವೃದ್ಧಿ ಸಾಧ್ಯವಾಗುವುದಿಲ್ಲ. ಭಾರತೀಯ ಸಂವಿಧಾನದ ರಾಜ್ಯ ನಿರ್ದೇಶಿತ ತತ್ತ್ವಗಳಲ್ಲಿ ಒಂದಾದ ಕೆಲವೇ ವ್ಯಕ್ತಿಗಳ ಕೈಯಲ್ಲಿ ಆರ್ಥಿಕ ಸಂಪತ್ತು ಕೇಂದ್ರೀಕರಣವಾಗುವುದನ್ನು ತಡೆಯಬೇಕೆನ್ನುವ ಉದ್ದೇಶ ಈಡೇರುವುದಿಲ್ಲ. ಬ್ರಿಟಿಷರ ಕಂಪನಿ ಆಡಳಿತದಿಂದ ಮುಕ್ತವಾದ ಭಾರತ ಮುಂದಿನ ದಿನಗಳಲ್ಲಿ ಈಸ್ಟ್ ಇಂಡಿಯಾ ಕಂಪನಿಯಂತಹ ಕಂಪನಿ ಪ್ರಭಾವ ವಲಯದಲ್ಲಿ ಸರ್ಕಾರಗಳು ಆಡಳಿತ ನಡೆಸುವ ಸ್ಥಿತಿ ಬರಬಹುದು.

ಸುಮ್ಮನೆ ಇತಿಹಾಸದ ಒಂದು ಘಟಟನೆಯನ್ನು ನೆನೆಯುವುದಾದರೆ, ಭಾರತದಲ್ಲಿ ವಿ.ಪಿ. ಸಿಂಗ್ ಅವರು ಪ್ರಧಾನಿಯಾದ ಸಂದರ್ಭದಲ್ಲಿ ನಡೆದ ಸಾರ್ವತ್ರಿಕ ಚುನಾವಣೆಗಳನ್ನು ಸಂವಿಧಾನ ಆಶಯದ ಚುನಾವಣೆ ಎನ್ನುವುದಕ್ಕಿಂತ ಬಾಂಬೆ ಡೈಯಿಂಗ್ ಕಂಪನಿಯ ಭರತ್ ರಾಂ ಮತ್ತು ರಿಲಯೆನ್ಸ್ ಕಂಪನಿಯ ಧೀರೂ ಭಾಯಿ ಅಂಬಾನಿ ಅವರುಗಳ ನಡುವಿನ ಕಾರ್ಪೊರೆಟ್ ವಾರ್ ಎಂದೇ ಕರೆಯಲಾಗಿತ್ತು. ಇಂಥ ವಾರ್‌ಗಳ ನಡುವೆ ಅದಾವ ಗ್ರಾಮ ಸ್ವರಾಜ್ಯ ಸಾಧ್ಯವಾದೀತು? ಎಸ್.ವಿ. ಪರಮೇಶ್ವರ ಭಟ್ಟರ ಪದ್ಯದ ಸಾಲೊಂದು ನೆನಪಾಗುತ್ತದೆ. “ಮದ್ದಾನೆ ಮದ್ದಾನೆ ಗುದ್ದಾಡಿಕೊಳ್ಳುವಾಗ ಎದ್ದೋಡಿ ಗುಬ್ಬಿ ಬೇಡೆಂದು ಹೇಳುವುದು ಸರಿಯೇನೇ ಸರಸೀಯೆ”, ಎನ್ನುವಂತೆ ದೇಶದ ಪ್ರಧಾನಮಂತ್ರ್ರಿಗಳನ್ನು ಆಯ್ಕೆ ಮಾಡುವಲ್ಲಿ ಪ್ರಭಾವ ಬೀರುವಷ್ಟು ಸಬಲವಾದ ಕಂಪನಿಗಳ ಸಂಘರ್ಷದ ನಡುವೆ ಸುಸ್ಥಿರ ಅಭಿವೃದ್ಧಿಯ ಪರವಾದ ಯರಾದರೂ ಸಣ್ಣ ಪುಟ್ಟ ಜನ ಬುದ್ಧಿ ಹೇಳಲು ಸಾಧ್ಯವೆ? ಈ ಎಲ್ಲ ಕಾರಣಗಳಿಗಾಗಿ ಕಾರ್ಪೊರೆಟ್ ವಲಯಕ್ಕೆ ಬ್ಯಾಂಕಿಂಗ್ ಕ್ಷೇತ್ರವನ್ನು ಬಿಟ್ಟುಕೊಡುವುದು ಸೂಕ್ತವಲ್ಲ ಎನ್ನುವುದು ಚಿಂತಕರ ಅಭಿಪ್ರಾಯ.

ಕೊನೆಯದಾಗಿ, ನಮ್ಮ ಬೆಂಗಳೂರಿನಲ್ಲಿಯೇ ಆಗಿರುವ ಪ್ರಕರಣಗಳನ್ನು ನೋಡಿದರೆ ಐ.ಎಮ್.ಎ ಅಂತಹ ಸಂಸ್ಥೆಗಳಲ್ಲಿ, ಬಡವರಿಂದ ಶ್ರೀಮಂತರವರೆಗೆ ತಾವು ಕಷ್ಟಪಟ್ಟು ಗಳಿಸಿದ ಹಣವನ್ನು ಅಧಿಕ ಬಡ್ಡಿಯ ಆಸೆಗೆ ಠೇವಣಿ ಇಟ್ಟು ದುಃಸ್ಥಿತಿ ತಂದು ಕೊಳ್ಳಲು ಕಾರಣರಾದವರಲ್ಲಿ, ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಯಾದರೂ, ಸರ್ಕಾರದ ಹೊಣೆಗಾರಿಕೆ ಇಲ್ಲವೆ? ಇಂಥ ಬ್ಯಾಂಕೇತರ ಹಣಕಾಸು ಸಂಸ್ಥೆಗಳನ್ನು, ಸಹಕಾರಿ ವಲಯದ ಕೆಲವೊಂದು ಪತ್ತಿನ ಸಂಸ್ಥೆಗಳನ್ನು, ಹರ್ಷದ್ ಮೆಹ್ತಾನಂಥವರಿಂದ ವಂಚನೆಗೆ ಒಳಗಾದ ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ಸುಸ್ಥಿತಿಯಲ್ಲಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳುವ ಹೊಣೆಗಾರಿಕೆ ಅಂತಿಮವಾಗಿ ಸರ್ಕಾರಗಳದ್ದೇ ಆಗಿರುತ್ತದೆ. ಸದ್ಯಕ್ಕೆ, ಈ ದೇಶದ ಕನಿಷ್ಠ ಮೊತ್ತದ ಠೇವಣಿ ಇಡುವ ಶಕ್ತಿ ಇರುವ ಎಲ್ಲ ವರ್ಗದ ಗ್ರಾಹಕರ ಸಂಪೂರ್ಣ ಠೇವಣಿ ಮೊತ್ತಕ್ಕೆ ಪೂರ್ಣ ರಕ್ಷಣೆ ನೀಡುವ ಕಾನೂನುಗಳು ಜಾರಿಯಾಗುವವರೆಗೆ ಈಗಿರುವ ಬ್ಯಾಂಕಿಂಗ್ ವ್ಯವಸ್ಥೆ ಮುಂದುವರೆಸುವುದಷ್ಟೇ ಅಲ್ಲ, ಎಲ್ಲ ವರ್ಗದ ಠೇವಣಿದಾರರಿಗೆ ನಷ್ಟವಾಗದಂತೆ ಕ್ರಮಕೈಗೊಳ್ಳಬೇಕಾಗಿದೆ.

ಡಾ. ಜಿ.ಎನ್. ಮಲ್ಲಿಕಾರ್ಜುನಪ್ಪ

ಅರ್ಥಶಾಸ್ತ್ರ ಪ್ರಾಧ್ಯಾಪಕರಾದ ಮಲ್ಲಿಕಾರ್ಜುನಪ್ಪನವರು, ಆರ್ಥಿಕ ವಿದ್ಯಮಾನಗಳ ಬಗ್ಗೆ ಮಹತ್ವದ ಲೇಖನಗಳನ್ನು ಬರೆದಿದ್ದಾರೆ.ಚಿತ್ರದುರ್ಗದ ಎಸ್‌ಜೆಎಂ ತಾಂತ್ರಿಕ ಶಿಕ್ಷಣ ಸಂಸ್ಥೆಯಲ್ಲಿ ಕಾರ್ಯಕಾರಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ.


ಇದನ್ನೂ ಓದಿ: 189 ದೇಶಗಳಲ್ಲಿ 131ನೇ ಸ್ಥಾನ: ಮಾನವ ಅಭಿವೃದ್ದಿ ಸೂಚ್ಯಂಕದಲ್ಲಿ ಮತ್ತೆರೆಡು ಸ್ಥಾನ ಕುಸಿದ ಭಾರತ!
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...