Homeಅಂತರಾಷ್ಟ್ರೀಯಅಲ್ಜೀರಿಯಾದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳಿಂದ ನಾವು ಕಲಿಯುವುದೇನು?

ಅಲ್ಜೀರಿಯಾದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳಿಂದ ನಾವು ಕಲಿಯುವುದೇನು?

- Advertisement -
- Advertisement -

| ಕಿಶೋರ್ |

| ಕನ್ನಡಕ್ಕೆ: ರಾಜಶೇಖರ್ ಅಕ್ಕಿ |

ಕಳೆದ ಫೆಬ್ರವರಿ 2019ರಿಂದ ಅಲ್ಜೀರಿಯಾದಲ್ಲಿ ಮಾಜಿ ಅಧ್ಯಕ್ಷ ಅಬ್ದೆಲ್‍ಅಝಿಝ್ ಬೋಟೆಫ್ಲಿಕಾ ಅವರ ವಿರುದ್ಧ ದೇಶಾದ್ಯಂತ ವ್ಯಾಪಕ ಪ್ರತಿಭಟನೆಗಳು ನಡೆಯುತ್ತಿವೆ. ಈ ಪ್ರತಿಭಟನೆಗಳ ಪರಿಣಾಮವಾಗಿ ಬೋಟೆಫ್ಲಿಕಾ ಅವರು ಈ ಬಾರಿ ಅಲ್ಜ್ಭಿರಿಯಾದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿಲ್ಲ. ಇನ್ನೊಮ್ಮೆ ಅಧ್ಯಕ್ಷರಾಗಿದ್ದರೆ ಐದನೇ ಅವಧಿಗೆ ಅಧ್ಯಕ್ಷರಾಗುತ್ತಿದ್ದರು. ಕಳೆದ 20 ವರ್ಷದಿಂದ ಬೋಟೆಫ್ಲಿಕಾ ಅಲ್ಜ್ಭಿರಿಯಾದ ಆಧ್ಯಕ್ಷರಾಗಿದ್ದರು. ಇತ್ತೀಚಿನ ವರ್ಷಗಳಲ್ಲಿ ಅವರ ಆಳ್ವಿಕೆ ಕುಸಿಯುತ್ತಿದೆ. ವೈಯಕ್ತಕವಾಗಿ, 82 ವಸಂತಗಳನ್ನು ಮುಗಿಸಿರುವ ಬೊಟೆಫ್ಲಿಕಾ ಅವರ ಆರೋಗ್ಯ ಕೆಡುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ರಾಷ್ಟ್ರದಲ್ಲಿ ನಿರುದ್ಯೋಗ ದರ ಏರುತ್ತಲಿದ್ದು, ವಿತ್ತೀಯ ಸಮತೋಲನ ಕೆಡುತ್ತಿದ್ದು ಅದರೊಂದಿಗೆ ವಿದೇಶಿ ನಿಕ್ಷೇಪಗಳು ಬರಿದಾಗಿವೆ. ನಾಲ್ಕು ಅಲ್ಜೀರಿಯನ್ ವ್ಯಕ್ತಿಗಳಲ್ಲಿ ಇಂದು ಒಬ್ಬರು ನಿರುದ್ಯೋಗಿಯಾಗಿದ್ದಾರೆ. ಇತ್ತೀಚಿಗೆ ತೈಲ ಬೆಲೆಗಳಲ್ಲಿ ಕುಸಿತ ಕಂಡುಬಂದಿರುವುದರಿಂದ ವಿದೇಶಿ ಹಣವೂ ಬರಿದಾಗುತ್ತಿದೆ.

ಬೋಟೆಫ್ಲಿಕಾ ಅವರ ವಿರುದ್ಧ ಪ್ರತಿಭಟನೆಯ ಕರೆಗಳು ಕೆಲವೇ ತಿಂಗಳ ಹಿಂದೆ ಬಾಬ್ ಎಲ್ ಕ್ವೆಡ್ ಪ್ರದೇಶದಲ್ಲಿ ಶುರುವಾದವು. ಆ ಪ್ರತಿಭಟನೆಗಳನ್ನು ಅಲ್ಜೀರಿಯಾದ ಪೊಲೀಸರು ಯಶಸ್ವಿಯಾಗಿ ಹತ್ತಿಕ್ಕಿದರು. ಅಲ್ಜೀರಿಯಾದ ಉತ್ತರ ಭಾಗದಲ್ಲಿ ಮಾತ್ರ ಪ್ರತಿಭಟನೆಗಳು ಫೆಬ್ರವರಿ ತನಕ ಮುಂದುವರೆದವು, ಆ ನಂತರ ದೇಶದ ಇತರ ಭಾಗಗಳಲ್ಲಿಯೂ ಹರಡತೊಡಗಿದವು. ಅವರ ಪ್ರತಿಭಟನೆಯ ಒಂದು ವಿಧಾನ ಬೋಟೆಫ್ಲಿಕಾ ಅವರ ಭಿತ್ತಿಪತ್ರಗಳನ್ನು ಸಾರ್ವಜನಿಕವಾಗಿ ಹರಿದುಹಾಕುವುದು. ಸಾಮಾಜಿಕ ಜಾಲತಾಣಗಳನ್ನು ಯಶಸ್ವಿಯಾಗಿ ಬಳಸಿ ಪುಟ್ಟ ನಗರಗಳಲ್ಲಿ ಮತ್ತು ದೂರದೂರದ ಊರುಗಳಲ್ಲೂ ಪ್ರತಿಭಟನೆಗಳನ್ನು ಆಯೋಜಿಸಲಾಯಿತು. ಈ ಆಂದೋಲನವನ್ನು ಮೊವಾಟಾನಾ ಎಂದು ಕರೆಯಲಾಯಿತು. ಅಂದರೆ ನಾಗರಿಕತ್ವ ಮತ್ತು ಪ್ರಜಾಪ್ರಭುತ್ವ. ಅಲ್ಜೀರಿಯಾದಲ್ಲಿ ರಾಜಕೀಯ ಗಣ್ಯರು ಜಾಗ ಖಾಲಿಮಾಡಬೇಕಿದೆ ಎಂದು ಈ ಆಂದೋಲನ ಗಟ್ಟಿಯಾಗಿ ಪ್ರತಿಪಾದಿಸಿತು.

ಮಾರ್ಚ್ ತಿಂಗಳಲ್ಲಿ ಈ ಆಂದೋಲನದ ನಿಗ್ರಹ ಹಿಂಸಾತ್ಮಕ ರೂಪ ತಳೆದುಕಕೊಂಡು 183 ಜನರು ಗಾಯಗೊಂಡರು. ಹಾಗೂ ಮಾಜಿ ಅಧ್ಯಕ್ಷರೊಬ್ಬರ ಮಗ ಹಸನ್ ಬೆನ್‍ಖೆಡ್ಡಾ ಈ ಆಂದೋಲನದಲ್ಲಿ ಪಾಲ್ಗೊಂಡು, ಹೃದಯಾಘಾತದಿಂದ ಸಾವನಪ್ಪಿದರು. ಈ ಪ್ರತಿಭಟನೆಗಳಿಂದ ಚುನಾವಣೆಗಳಲ್ಲಿ ವಿಳಂಬ ಆಗುವುದು ಎಂದು ಕೆಲವರು ಅಭಿಪ್ರಾಯಪಟ್ಟರು. ಅಲ್ಲಿಯವರೆಗೆ ಈ ಪ್ರತಿಭಟನೆಗಳನ್ನು ವರದಿ ಮಾಡದ ಟಿವಿ ಮಾಧ್ಯಮ, ಮಾರ್ಚ್ ತಿಂಗಳಿಂದ ವರದಿ ಮಾಡಲು ಪ್ರಾರಂಭಿಸಿತು ಹಾಗೂ ಪ್ರತಿಭಟನೆಗಳಲ್ಲಿ ಪಾಲ್ಗೊಳ್ಳುತ್ತಿರುವ ಜನರ ಸಂಖ್ಯೆ ಹತ್ತು ಲಕ್ಷಕ್ಕೂ ಮೀರತೊಡಗಿತು. ಅಧ್ಯಕ್ಷೀಯ ಸ್ಪರ್ಧೆಯಿಂದ ಅನೇಕ ಅಭ್ಯರ್ಥಿಗಳು ಹಿಂದಕ್ಕೆ ಸರಿದರು, ಅದರಿಂದ ಪ್ರತಿಭಟನೆಗಳ ಕಾವು ಇನ್ನಷ್ಟು ಹೆಚ್ಚಿತು. ವಿಧ್ಯಾರ್ಥಿಗಳು ಸಾಮೂಹಿಕವಾಗಿ ತರಗತಿಗಳನ್ನು ಬಹಿಷ್ಕರಿಸಿದರು ಹಾಗೂ ಸಾವಿರಾರು ವಕೀಲರು ಪ್ರತಿಭಟನೆ ನಡಿಗೆ ಮಾಡಿ ಪ್ರದರ್ಶಿಸಿದರು.

ಈ ಪ್ರತಿಭಟನೆಗಳ ಒಂದು ವಾರ ತರುವಾಯ ಮಾರ್ಚ್ 11ರಂದು ಬೋಟೆಫ್ಲಿಕಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲವೆಂದು ಹಾಗೂ ಪ್ರಧಾನಮಂತ್ರಿ ಅಹ್ಮದ್ ಔಹಿಯಾ ರಾಜೀನಾಮೆ ನೀಡುವರೆಂದು ಘೋಷಿಸಲಾಯಿತು. ಅಧ್ಯಕ್ಷೀಯ ಚುನಾವಣೆಯನ್ನು ಅನಿರ್ಧಿಷ್ಟಾವಧಿ ಮುಂದೂಡಲಾಯಿತು. ಈ ಘೋಷಣೆಯ ಮರುದಿನವೇ ವಿಶ್ವವಿದ್ಯಾಲಯಗಳ ವಿಧ್ಯಾರ್ಥಿಗಳು ‘ನೋ ಟ್ರಿಕ್ಸ್, ಬೋಟೆಫ್ಲಿಕಾ’ ಎನ್ನುವ ಘೋಷಣೆಯಡಿ ರಾಷ್ಟ್ರವ್ಯಾಪಿ ಪ್ರತಿಭಟನೆಗಳನ್ನು ಮತ್ತೆ ಹಮ್ಮಿಕೊಂಡರು. ಅದರ ಮಾರನೆಯ ದಿನವೇ ಶಿಕ್ಷಕರು, ವಕೀಲರು ಮತ್ತು ನ್ಯಾಯಾಧೀಶರು ಈ ಪ್ರತಿಭಟನೆಗಳನ್ನು ಸೇರಿಕೊಂಡರು. ಅಲ್ಜೀರಿಯಾದ ವಿದೇಶಾಂಗ ನೀತಿಯ ಮೇಲೆ ಪ್ರತಿಭಟನಾಕಾರರು ಮಾಡಿದ ದಾಳಿಯಿಂದಲೂ ಪ್ರತಿಭಟನೆ ತೀವ್ರವಾಗಲು ಕಾರಣವಾಯಿತು. ‘ನಿರ್ಧಾರ ಮಾಡುವವರು ಇಲ್ಲಿಯ ಜನರೇ ಹೊರತು ಫ್ರಾನ್ಸ್ ಅಲ್ಲ’ ಎನ್ನುವ ಬ್ಯಾನರ್‍ಗಳು ಕಾಣಿಸಿಕೊಂಡವು. ‘ಮ್ಯಾಕ್ರನ್, ನೀವು ನಿಮ್ಮ ಹಳದಿ ಅಂಗಿಗಳನ್ನು ನೋಡಿಕೊಳ್ಳಿ’ ಹಾಗೂ ‘ಎಲಿಸಿ (ಫ್ರಾನ್ಸ್ ಅಧ್ಯಕ್ಷರ ಕಛೇರಿಯ ಹೆಸರು) , ನಿಲ್ಲು! ಇದು 1830 ಅಲ್ಲ, 2019” ಎನ್ನುವ ಬ್ಯಾನರ್‍ಗಳೂ ಕಾಣಿಸಿಕೊಂಡವು.

31 ಮಾರ್ಚ್ 2019 ರಂದು ಹೊಸ ಸರಕಾರವನ್ನು ಹೆಸರಿಸಲಾಯಿತು ಹಾಗೂ ಎರಡು ದಿನಗಳ ನಂತರ ಬೋಟೆಫ್ಲಿಕಾ ರಾಜೀನಾಮೆ ನೀಡಿದರು.
ಹಿನ್ನಲೆ :
ಫ್ರೆಂಚ್ ಕ್ರಾಂತಿಯ ತರುವಾಯ 1830 ರಲ್ಲಿ ಅಲ್ಜೀರಿಯಾ ದೇಶವನ್ನು ಫ್ರಾನ್ಸ್ ತನ್ನ ವಸಾಹತುವನ್ನಾಗಿಸಿಕೊಂಡಿತು. 19 ನೇ ಶತಮಾನದಲ್ಲಿ ಫ್ರೆಂಚ್ ಸಾಮ್ರಾಜ್ಯ ತನ್ನ ದಕ್ಷಿಣಕ್ಕೆ ವಿಸ್ತರಿಸಿಕೊಂಡಿತು. ಆ ಭಾಗದಲ್ಲಿ ಶರಿಯಾ ಕಾನೂನನ್ನು ಬಿಟ್ಟುಕೊಟ್ಟರೆ ಮತ್ತು ತಮ್ಮ ಮುಸ್ಲಿಮ್ ಗುರುತನ್ನು ಬಿಟ್ಟುಕೊಡುವ ಈ ಎರಡು ಷರತ್ತುಗಳ ಮೇಲೆ ಫ್ರೆಂಚ್ ನಾಗರಿಕತ್ವ ನೀಡುವುದಾಗಿ ಫ್ರಾನ್ಸ್ ಘೋಷಿಸಿತು. ಬಹುತೇಕ ಅಲ್ಜೀರಿಯಾ ದೇಶದ ನಾಗರಿಕರು ತಮ್ಮ ಮೇಲೆ ಹೇರಿದ ಈ ಆಯ್ಕೆಯನ್ನು ವಿರೋಧಿಸಿದರು.

ಎರಡನೇ ಮಹಾಯುದ್ಧದ ನಂತರ ಅಲ್ಜೀರಿಯಾದ ರಾಷ್ಟ್ರೀಯ ಚಳವಳಿ ಗಟ್ಟಿಗೊಂಡಿತು. ಫ್ರೆಂಚ್ ವಿರೋಧಿ ಮುಸ್ಲಿಮ್ ನಾಯಕ ಫೆರ್ಹಾತ್ ಅಬ್ಬಾಸ್ ಅವರು ತಮ್ಮ ಪ್ರಣಾಳಿಕೆಯನ್ನು ಜನರ ಮುಂದಿಟ್ಟರು. ಈ ಪ್ರಣಾಳಿಕೆಗೆ 56 ಅಲ್ಜೀರಿಯಾದ ಮತ್ತು ಅಂತರರಾಷ್ಟ್ರೀಯ ನಾಯಕರು ಸಹಿ ಹಾಕಿದ್ದರು. ಅಲ್ಜೀರಿಯಾದ ಮುಸ್ಲಿಮರಿಗೆ ಸಮಾನ ಕಾನೂನಾವಕಾಶ, ಪರಿಣಾಮಕಾರಿ ಮತ್ತು ತಕ್ಷಣ ರಾಜಕೀಯ ಪಾಲ್ಗೊಳ್ಳುವಿಕೆಯನ್ನು ಖಾತ್ರಿಪಡಿಸುವ ಸಂವಿಧಾನದ ಬೇಡಿಕೆಯನ್ನಿಟ್ಟರು. ಇದರ ತರುವಾಯ 1954 ರಿಂದ 1962ರವರಗೆ ಅಲ್ಜೀರಿಯಾದ ಸ್ವಾತಂತ್ರ್ಯ ಸಮರ ನಡೆಯಿತು. ಈ ಸಂಘರ್ಷದ ಸಂದರ್ಭದಲ್ಲಿ ರಾಷ್ಟ್ರೀಯ ಆಂದೋಲನದೊಳಗಡೆಯೇ ಪರಸ್ಪರ ಪೈಪೋಟಿ ಕಾಣಿಸಿಕೊಂಡಿತು ಹಾಗೂ ಫ್ರೆಂಚ್ ಆಳ್ವಿಕೆಯು ಕ್ರೂರವಾಗಿ ಹತ್ತಿಕ್ಕಿದ್ದು ಜಗಜ್ಜಾಹಿರವಾಯಿತು. ಆದರೆ, ಇದರೆಲ್ಲರ ಪರಿಣಾಮವಾಗಿ ಅಲ್ಜೀರಿಯಾದಿಂದ ಫ್ರೆಂಚ್‍ರನ್ನು ಹರದಬ್ಬಲು ಒಂದು ಏಕೀಕೃತವಾದ ಆಂದೋಲನ ತಳೆದುಕೊಂಡಿತು.

1970ರ ದಶಕವು ಅಲ್ಜೀರಿಯಾ ದೇಶಕ್ಕೆ ಅತ್ಯಂತ ಕಷ್ಟಕರ ದಶಕವಾಗಿತ್ತು. ಫ್ರಾನ್ಸ್‍ದಿಂದ ಸ್ವಾತಂತ್ರ ಪಡೆದುಕೊಳ್ಳುವುದರಿಂದ ಫ್ರೆಂಚ್ ನಾಗರಿಕತ್ವ ಪಡೆದುಕೊಂಡವರೆಲ್ಲರೂ ದೇಶದಿಂದ ಓಡಿಹೋದರು. ಅದರಲ್ಲಿ ಬಹುತೇಕ ಸರಕಾರೀ ಉದ್ಯೋಗಿಗಳು, ಇಂಜಿನೀಯರ್‍ಗಳು, ಶಿಕ್ಷಕರು, ಡಾಕ್ಟರ್‍ಗಳು ಮತ್ತು ಇತರ ಕೌಶಲ್ಯ ಕಾರ್ಮಿಕರು ಸೇರಿದ್ದರು. ಜೀವಗಳ, ಮೂಲಸೌಕರ್ಯಗಳ ಮತ್ತು ಮನೆಗಳ ಧ್ವಂಸವಾಗಿದ್ದರಿಂದ ಅಲ್ಜೀರಿಯನ್ ಜನರು ಅತಂತ್ರ ಸ್ಥಿತಿಗೆ ತಲುಪಿದ್ದರು. ಅಧಿಕಾರದಲ್ಲಿದ್ದ ಪ್ರಮುಖ ಪಕ್ಷವಾದ ಫ್ರಂಟ್ ದೆ ಲಿಬರೇಷನ್ (ಎಫ್‍ಎಲ್‍ಎನ್) ರಾಷ್ಟ್ರದ ಪ್ರಮುಖ ರಾಜಕೀಯ ಧ್ವನಿಯಾಗಿ ಹೊರಹೊಮ್ಮಿತು. ಕೆಲವು ವರ್ಷಗಳ ತರುವಾಯ, ಹೌಆರಿ ಬೋಮೆದಿಯೆನ್ ಎನ್ನುವ ಅರ್ಮಿ ನಾಯಕ ಒಂದು ರಕ್ತರಹಿತ ಮಿಲಿಟರಿ ಕ್ಷಿಪ್ರಕಾರ್ಯಾಚರಣೆಯಲ್ಲಿ ದೇಶದ ಆಳ್ವಿಕೆಯನ್ನು ತನ್ನ ಕೈಗೆತ್ತಿಕೊಂಡರು. ಹಾಗೂ ಆಧುನಿಕ ಅಲ್ಜೀರಿಯಾದ ಆರ್ಥಿಕ ನೀತಿಗಳನ್ನು ಈ ಆಳ್ವಿಕೆ ಅಳವಡಿಸಿಕೊಂಡಿತು. ಎಫ್‍ಎಲ್‍ಎನ್ ಪಕ್ಷವೂ ಸಹ ಒಂದು ಮೃದು ಸಮಾಜವಾದಿ ಪಕ್ಷದಿಂದ ಒಂದು ನವಉದಾರೀಕರಣದ ಪಕ್ಷವಾಗಿ ಮಾರ್ಪಾಡಾಯಿತು. ದುರದೃಷ್ಟವಷಾತ್, ಈ ನೀತಿಗಳನ್ನು ರೂಪಿಸಿದ್ದು ಫ್ರಾನ್ಸ್‍ನ ನವಉದಾರೀಕರಣದ ಪ್ರಭಾವಗಳು ಹಾಗಾಗಿ ಅಲ್ಜೀರಿಯನ್ ಜನರಿಗೆ ನಿಜವಾದ ಪ್ರಜಾಪ್ರಭುತ್ವ ಎನ್ನುವುದು ಮಟ್ಟಲೇ ಇಲ್ಲ. ಮೋಮೆದಿಯನ್ 1979ರಲ್ಲಿ ತೀರಿಕೊಂಡ ನಂತರ ಅಲ್ಜೀರಿಯ ಇನ್ನಷ್ಟು ಪ್ರಕ್ಷುಬ್ದ ಮತ್ತು ಅಸ್ಥಿರವಾಗಿ 1988ರಲ್ಲಿ ಆಂತರಿಕ ಯುದ್ಧವೇ ಶುರುವಾಯಿತು. ಎಫ್‍ಎಲ್‍ಎನ್‍ನ ಜನಪ್ರಿಯ ಇಸ್ಲಾಮಿಕ್ ಸಾಲ್ವೇಷನ್ ಫ್ರಂಟ್ ಹಾಗೂ ಸೇನೆಯ ನಡುವಿನ ಉದ್ವಿಗ್ನತೆಗಳು ಹೆಚ್ಚಿ ಒಂದು ದಶಕದ ತನಕ ಸಂಘರ್ಷಗಳು ಮುಂದುವರೆದವು.

1996ರಲ್ಲಿ ಸಂವಿದಾನಕ್ಕೆ ಜನಮತಸಂಗ್ರಹದಿಂದ ತಿದ್ದುಪಡಿಗಳನ್ನು ತರಲಾಯಿತು; ಅಧ್ಯಕ್ಷರಿಗಿರುವ ಅಧಿಕಾರವ್ಯಾಪ್ತಿಯನ್ನು ಹೆಚ್ಚಿಸಿಲಾಯಿತು ಹಾಗೂ ಇಸ್ಲಾಮಿಸ್ಟ್ ಪಕ್ಷಗಳನ್ನು ನಿಷೇಧಿಸಲಾಯಿತು. 1999ರಲ್ಲಿ ಅಧ್ಯಕ್ಷೀಯ ಚುನಾವಣೆಗಳು ನಡೆದವು. ಆ ಚುನಾವಣೆಗೆ ಏಳು ಅಭ್ಯರ್ಥಿಳು ಅರ್ಹರಾಗಿದ್ದರೂ, ಎಫ್‍ಎಲ್‍ಎನ್ ಮತ್ತು ಸೇನೆಯ ಬೆಂಬಲ ಹೊಂದಿದ್ದ ಅಬ್ದೆಲ್‍ಅಝಿಝ್ ಅವರೊಬ್ಬರನ್ನು ಬಿಟ್ಟು ಇತರ ಎಲ್ಲ ಅಭ್ಯರ್ಥಿಗಳು ಚುನಾವಣಾ ಹಗರಣಗಳ ಆರೋಪಗಳ ಮಧ್ಯೆ ಚುನಾವಣಾ ಕಣದಿಂದ ಹೊರಸರಿದರು. ಹಾಕಿದ ಮತಗಳಲ್ಲಿ 70% ಮತಗಳನ್ನು ಬೋಟೆಫ್ಲಿಕಾ ಪಡೆದರು.

ಅಧಿಕಾರ ವಹಿಸಿಕೊಂಡ ನಂತರ ಯುದ್ಧದಿಂದ ತಲ್ಲಣಗೊಂಡಿದ್ದ ದೇಶಕ್ಕೆ ಸ್ಥಿರತೆಯನ್ನು ತರುವಲ್ಲಿ ಸರಕಾರದ ಗಮನವನ್ನು ಕೇಂದ್ರಿಕರಿಸಿದರು. ಇಸ್ಲಾಮಿಕ್ ಸಾಲ್ವೇಷನ್ ಫ್ರಂಟ್‍ನ ಸಾವಿರಾರು ಸದಸ್ಯರಿಗೆ ಕ್ಷಮಾದಾನ ಮಾಡಿ ಬಿಡುಗಡೆ ಮಾಡಿದರು. ಇದರಿಂದ ಹಿಂಸೆ ಗಣನೀಯ ಪ್ರಮಾಣದಲ್ಲಿ ತಗ್ಗಿತು. ದೇಶದ ಆಳ್ವಿಕೆಯ ವಿರುದ್ಧ ಹೋರಾಡುತ್ತಿದ್ದವರಲ್ಲಿ 80% ಜನರು ಕ್ಷಮಾದಾನದ ಪ್ರಸ್ತಾಪವನ್ನು ಒಪ್ಪಿಕೊಂಡರು.

ಇವೆಲ್ಲವುಗಳ ನಂತರ ಬಂದ ಚುನಾವಣೆಗಳಲ್ಲಿ ಸೇನೆಯ ಯಾವುದೇ ಹಸ್ತಕ್ಷೇಪವಿಲ್ಲದೇ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದ ಬೋಟೆಫ್ಲಿಕಾ ಅವರ ಜನಪ್ರಿಯತೆ ಹಚ್ಚಿತು. 2005ರಲ್ಲಿ ಚಾರ್ಟರ್ ಫಾರ್ ಪೀಸ್ ಮತ್ತು ರಾಷ್ಟ್ರೀಯ ಸಾಮರಸ್ಯ ದ ಪ್ರಕ್ರಿಯೆಯನ್ನು ಜಾರಿಗೊಳಿಸಿ ಇಸ್ಲಾಮಿಕ್ ದಂಗೆಯಲ್ಲಿ ಅತ್ಯಂತ ಹಿಂಸಾತ್ಮಕವಾಗಿ ಪಾಲ್ಗೊಂಡವರನ್ನು(ಬಂಡುಕೋರರೊಂದಿಗೆ ಹೋರಾಟ ಮಾಡುತ್ತಿರುವಾಗ ತಮ್ಮ ಅಧಿಕಾರ ದುರಪಯೋಗ ಮಾಡಿದ ರಕ್ಷಣಾ ಪಡಗಳನ್ನು ಒಳಗೊಂಡಂತೆ) ಬಿಟ್ಟು ಮಿಕ್ಕವರಿಗೆಲ್ಲ ಕ್ಷಮಾದಾನ ಮಾಡಲಾಯಿತು.

2009ರಲ್ಲಿ ಪ್ರತಿಪಕ್ಷಗಳು ಬೋಟೆಫ್ಲಿಕಾ ಮೇಲೆ ಚುನಾವಣೆಗಳಲ್ಲಿ ಅಕ್ರಮ ಎಸಿಗಿದರು ಎಂದು ಆರೋಪಮಾಡತೊಡಗಿದವು. ಅಲ್ಲಿಂದ ಬೋಟೆಫ್ಲಿಕಾ ಅವರ ಜನಪ್ರಿಯತೆಯಲ್ಲಿ ಕುಸಿತ ಕಂಡುಬಂದಿತು. 2009ರಲ್ಲಿ ಪ್ರತಿಪಕ್ಷಗಳು ಚುನಾವಣೆಯನ್ನು ಭಹಿಷ್ಕರಿಸಿದವು. ಆಗತಾನೆ ಆಗುತ್ತಿದ್ದ ಅರಬ್ ಸ್ಪ್ರಿಂಗ್ ದಿಂದ ಉಂಟಾದ ರಾಷ್ಟ್ರವ್ಯಾಪೀ ಪ್ರತಿಭಟನೆಗಳ ಭಾವನೆಗಳನ್ನು ಬೋಟೆಫ್ಲಿಕಾ ವಿರುದ್ಧ ಬಳಸಿಕೊಳ್ಳಲಾಯಿತು. ಇತರ ದೇಶಗಳಲ್ಲಿ ಆದಷ್ಟು ದೊಡ್ಡ ಪ್ರಮಾಣದಲ್ಲಿ ಪ್ರತಿಭಟನೆಗಳಾಗದಿದ್ದರೂ ಸಾವಿರಾರು ಜನರು ಪಾಲ್ಗೊಂಡು ಮಾಧ್ಯಮಗಳ ಮೇಲೆ ಇರುವ ಸರಕಾರದ ನಿಯಂತ್ರಣ ಮತ್ತು ರಾಜಕೀಯ ಭ್ರಷ್ಟಾಚಾರವನ್ನು ಕೊನೆಗೊಳಿಸಲು ಕರೆ ನೀಡಿದರು. ಅಲ್ಲಿಯ ಆಳ್ವಿಕೆ ಹತ್ತಿಕ್ಕಲು ಸರ್ಕಾರ ಪ್ರಯತ್ನಿಸಿದರೂ ಈ ಪ್ರತಿಭಟನೆಗಳು ನಡೆದವು.

ಬೋಟೆಫ್ಲಿಕ ಅವರ ಆರೋಗ್ಯ ಹದಗೆಡಲಾರಂಭಿಸಿತು. 2008ರಲ್ಲಿ ಅವರಿಗೆ ಜಠರದ ಕ್ಯಾನ್ಸರ್ ಆಗಿದೆಯೆಂದು ತಿಳಿಯಿತು. ಇದರಿಂದ ಚೇತರಿಸಿಕೊಂಡ ನಂತರ ಹೃದಯದ ಸಮಸ್ಯೆಗಳು ಶುರುವಾಗಿ ಅದರಿಂದ ಅವರಿಗೆ ಮಾತಾಡಲೂ ಕಷ್ಟವಾಯಿತು. ಅವರ ಆರೋಗ್ಯದಲ್ಲಿ ಕುಸಿತದೊಂದಿಗೆ ಅವರ ವಿರುದ್ಧದ ಪ್ರತಿಭಟನೆಗಳ ತೀವ್ರತೆಯೂ ಹೆಚ್ಚುತ್ತ ಬಂದಿತು.

ಬೋಟೆಫ್ಲಿಕಾ ಅವರ ವಿರುದ್ಧದ ಪ್ರತಿಭಟನೆಗಳು ನವಉದಾರೀಕರಣದ ನೀತಿಗಳು ಮತ್ತು ಅದರಿಂದ ಉಂಟಾದ ಆರ್ಥಿಕ ಅಸ್ಥಿರತೆಯನ್ನು ಪ್ರತಿನಿಧಿಸುತ್ತವೆ. ಸರಕಾರಿ ಉದ್ಯೋಗಗಳಲ್ಲಿ ಕುಸಿತ, ಹೆಚ್ಚುತ್ತಿರುವ ನಿರುದ್ಯೋಗಿ ಯುವಜನರ ಸಂಖ್ಯೆ ಹಾಗೂ ಶಿಕ್ಷಣ ವಲಯದ ದುರ್ಲಕ್ಷ್ಯ, ಇವೆಲ್ಲ ಸಮಸ್ಯೆಗಳನ್ನು ಭಾರತವೂ ಎದುರಿಸುತ್ತಿದೆ. ಬೋಟೆಫ್ಲಿಕಾ ಅವರ ರಾಜೀನಾಮೆಯ ನಂತರ ಈ ಆಂದೋಲನ ಯಾವ ತಿರುವನ್ನು ಪಡೆದುಕೊಳ್ಳಬಹುದು ಎನ್ನುವುದು ಇನ್ನೂ ಅಸ್ಪಷ್ಟ. ವಿಶ್ವಾದ್ಯಂತ ಇಂದು ಆಗುತ್ತಿರುವುದೇ ಅಲ್ಜೀರಿಯದಲ್ಲೂ ಕಾಣಿಸಿಕೊಳ್ಳುತ್ತಿವೆ. ಬೋಟೆಫ್ಲಿಕಾ ರಾಜಕೀಯದ ಹಳೆಯ ಸ್ಥಂಬಗಳು ಕೆಳಗಿಳಿಯುತ್ತಿರುವುದನ್ನು ಪ್ರತಿನಿಧಿಸುತ್ತಾರೆ. ಇತರೆ ದೇಶಗಳಲ್ಲಿ ಈ ಹಳೆಯ ರಾಜಕೀಯದ ನಿರ್ಗಮನದ ನಂತರ ಬಲಪಂಥೀಯ ಶಕ್ತಿಗಳು ಸಬಲವಾಗುತ್ತಿರುವುದು ಕಂಡುಬಂದಿದೆ. ಅಲ್ಜಿರಿಯಾದಲ್ಲಿ ಏನಾಗುತ್ತೋ ನೋಡಬೇಕು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...