ಉತ್ತರ ಪ್ರದೇಶದ ರಾಯ್ಬರೇಲಿಯ ಜಿಲ್ಲಾ ಮಹಿಳಾ ಆಸ್ಪತ್ರೆಯ ಗೇಟ್ ಬಳಿಯೇ ಗರ್ಭಿಣಿಯೊಬ್ಬರು ಮಗುವಿಗೆ ಜನ್ಮ ನೀಡಿದ ಅತ್ಯಂತ ಆಘಾತಕಾರಿ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ. ಶನಿವಾರ (ಅಕ್ಟೋಬರ್ 3) ತಡರಾತ್ರಿ ಈ ಘಟನೆ ಸಂಭವಿಸಿದ್ದು, ಹೆರಿಗೆ ಮಾಡಿಸಲು ಆಸ್ಪತ್ರೆ ಸಿಬ್ಬಂದಿ ಲಂಚ ನೀಡುವಂತೆ ಪಟ್ಟು ಹಿಡಿದಿದ್ದರು ಹಾಗೂ ಹಣ ನೀಡಲು ಸಾಧ್ಯವಾಗದಿದ್ದಾಗ ಗರ್ಭಿಣಿಯನ್ನು ಆಸ್ಪತ್ರೆಯಿಂದ ಹೊರಗೆ ಕಳುಹಿಸಿದರು ಎಂದು ಸಂತ್ರಸ್ತೆ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಆಸ್ಪತ್ರೆಯ ಮುಖ್ಯ ಗೇಟ್ ಬಳಿ ಗರ್ಭಿಣಿ ರಸ್ತೆಯಲ್ಲೇ ಹೆರಿಗೆ ನೋವಿನಿಂದ ನರಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಬೆನ್ನಲ್ಲೇ ಈ ಘಟನೆ ತೀವ್ರ ಸಂಚಲನ ಮೂಡಿಸಿದೆ.
ವರದಿಗಳ ಪ್ರಕಾರ, ರಾಯ್ಬರೇಲಿ ಜಿಲ್ಲೆಯ ಸಲೋನ್ ನಿವಾಸಿ ಪ್ರತಿಭಾ ಎಂಬ ಗರ್ಭಿಣಿಯನ್ನು ಆಕೆಯ ವಿಕಲಚೇತನ ಪತಿ ಶನಿವಾರ ಬೆಳಿಗ್ಗೆ 11 ಗಂಟೆಯ ಸುಮಾರಿಗೆ ಹೆರಿಗೆಗಾಗಿ ಜಿಲ್ಲಾ ಮಹಿಳಾ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಆಸ್ಪತ್ರೆಯ ಸಿಬ್ಬಂದಿ ಹೆರಿಗೆ ಮಾಡಿಸಲು ಆರಂಭದಲ್ಲಿ 10,000 ರೂಪಾಯಿ ಲಂಚ ನೀಡುವಂತೆ ಬೇಡಿಕೆಯಿಟ್ಟಿದ್ದರು, ನಂತರ ಈ ಮೊತ್ತವನ್ನು 15,000 ರೂಪಾಯಿಗೆ ಹೆಚ್ಚಿಸಿದ್ದರು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ತೀವ್ರ ಬಡತನದಲ್ಲಿದ್ದ ಕುಟುಂಬವು ಇಷ್ಟೊಂದು ದೊಡ್ಡ ಮೊತ್ತವನ್ನು ನೀಡಲು ಅಸಮರ್ಥತೆ ವ್ಯಕ್ತಪಡಿಸಿದಾಗ, ಸಿಬ್ಬಂದಿ ಚಿಕಿತ್ಸೆ ನೀಡದೆ ನಿರ್ಲಕ್ಷಿಸಿ ಆಕೆಯನ್ನು ಆಸ್ಪತ್ರೆಯ ಹೊರಗೆ ನಡೆಯುವಂತೆ ಸೂಚಿಸಿದರು ಎನ್ನಲಾಗಿದೆ. ಇದರಿಂದಾಗಿ ಹೆರಿಗೆ ನೋವು ಹೆಚ್ಚಾಗಿ ತಡರಾತ್ರಿ 11 ಗಂಟೆಯ ಸುಮಾರಿಗೆ ಆಸ್ಪತ್ರೆಯ ಮುಖ್ಯ ಗೇಟ್ ಬಳಿಯೇ ಪ್ರತಿಭಾ ಮಗುವಿಗೆ ಜನ್ಮ ನೀಡುವಂತಾಯಿತು. ಈ ಕುರಿತು ಎಲ್ಲಿಯೂ ದೂರು ನೀಡದಂತೆ ಸಿಬ್ಬಂದಿ ಬೆದರಿಕೆ ಹಾಕಿದ್ದರು ಎಂದೂ ಸಂಬಂಧಿಕರು ಆರೋಪಿಸಿದ್ದಾರೆ.
ಮತ್ತೊಂದೆಡೆ, ಈ ಎಲ್ಲಾ ಗಂಭೀರ ಆರೋಪಗಳನ್ನು ಆಸ್ಪತ್ರೆಯ ಆಡಳಿತ ಮಂಡಳಿಯು ನಿರಾಕರಿಸಿದೆ. ಘಟನೆಯ ಕುರಿತು ಜಿಲ್ಲಾ ಮುಖ್ಯ ವೈದ್ಯಾಧಿಕಾರಿ (CMS) ಡಾ. ನಿರ್ಮಲಾ ಸಾಹು ಅವರು, ಪ್ರತಿಭಾ ಅವರನ್ನು ಆಕೆಯ ಪತಿ ಆಸ್ಪತ್ರೆಗೆ ಸೇರಿಸಿದ್ದು ನಿಜ. ಆದರೆ ಆಕೆ ಮಾನಸಿಕವಾಗಿ ಅಸ್ವಸ್ಥಳಾಗಿದ್ದು, ಸಿಬ್ಬಂದಿಗೆ ಮಾಹಿತಿ ನೀಡದೆ ಸ್ವತಃ ತಾನೇ ಹಾಸಿಗೆಯಿಂದ ಎದ್ದು ಆಸ್ಪತ್ರೆಯ ಹೊರಗೆ ಹೋಗಿದ್ದಳು ಎಂದು ಸಮರ್ಥಿಸಿಕೊಂಡಿದ್ದಾರೆ. ಗೇಟ್ ಬಳಿ ಆಕೆಗೆ ಹೆರಿಗೆ ನೋವು ಕಾಣಿಸಿಕೊಂಡ ತಕ್ಷಣವೇ ಆಸ್ಪತ್ರೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಆಕೆಯನ್ನು ಮತ್ತು ಮಗುವನ್ನು ತಕ್ಷಣವೇ ಒಳಗೆ ಕರೆತಂದು ತುರ್ತು ಚಿಕಿತ್ಸೆ ನೀಡಿದ್ದಾರೆ ಎಂದು ಆಸ್ಪತ್ರೆ ಆಡಳಿತ ಮಂಡಳಿ ಪ್ರತಿಪಾದಿಸಿದೆ.
ಪ್ರಸ್ತುತ ತಾಯಿ ಮತ್ತು ನವಜಾತ ಶಿಶು ಇಬ್ಬರನ್ನೂ ಆಸ್ಪತ್ರೆಯಲ್ಲಿ ದಾಖಲಿಸಿಕೊಂಡು ಸೂಕ್ತ ಚಿಕಿತ್ಸೆ ನೀಡಲಾಗುತ್ತಿದ್ದು, ನವಜಾತ ಶಿಶುವನ್ನು ತೀವ್ರ ನಿಗಾ ಘಟಕಕ್ಕೆ (ICU) ಸ್ಥಳಾಂತರಿಸಲಾಗಿದೆ. ಬಡ ಕುಟುಂಬದ ಲಂಚದ ಆರೋಪ ಮತ್ತು ಆಸ್ಪತ್ರೆಯ ಆಡಳಿತ ಮಂಡಳಿಯ ಸ್ಪಷ್ಟನೆಗಳ ನಡುವೆ ವಿರೋಧಾತ್ಮಕ ಹೇಳಿಕೆಗಳು ವ್ಯಕ್ತವಾಗಿದ್ದು, ಘಟನೆಯ ಕುರಿತು ನಿಷ್ಪಕ್ಷಪಾತ ತನಿಖೆಗೆ ಒತ್ತಾಯ ಕೇಳಿಬರುತ್ತಿದೆ.


