| ಭರತ್ ಹೆಬ್ಬಾಳ್ |

 

 

ಇಂಗ್ಲಿಷ್ ನಲ್ಲಿ ಓದಲು ಇಲ್ಲಿ ಕ್ಲಿಕ್ ಮಾಡಿ

ಜಗತ್ತಿನ ಹಲವೆಡೆ ಪ್ರಜಾತಾಂತ್ರಿಕ ಆಡಳಿತವನ್ನು ಬೆಂಬಲಿಸುವ ಮುಖವಾಡ ಹೊತ್ತು ತನಗೆ ವಿರುದ್ಧವಾಗಿರುವ ಚುನಾಯಿತ ಸರ್ಕಾರಗಳನ್ನೇ ಕಿತ್ತು ಹಾಕುವ ಕೆಲಸವನ್ನು ಅಮೆರಿಕಾ ಮಾಡುತ್ತಾ ಬರುತ್ತಿದೆ. ಈಗ ಆ ಕೆಲಸವನ್ನು ಟ್ರಂಪ್ ಮಾಡುತ್ತಿದ್ದಾರಷ್ಟೆ. ಅಂತಹ ಯತ್ನವನ್ನು ಮತ್ತೊಮ್ಮೆ ವೆನಿಜುವೆಲದಲ್ಲಿ ಮಾಡಲು ಹೋಗಿ, ಅಲ್ಲಿನ ಜನತೆ ತಿರುಗೇಟು ನೀಡಿ, ತಮ್ಮ ಸರ್ಕಾರವನ್ನು ಉಳಿಸಿಕೊಂಡಿರುವುದರ ಕುರಿತು ‘ಭರತ್ ಹೆಬ್ಬಾಳ’ ಬರೆದಿದ್ದಾರೆ.

ವೆನಿಜುವೆಲದಲ್ಲಿ ನಿಕೊಲಸ್ ಮಡುರೋ ಅವರ ನೇತೃತ್ವದ ಪ್ರಜಾಸತ್ತಾತ್ಮಕವಾಗಿ ಆಯ್ಕೆಗೊಂಡ ಸರ್ಕಾರವನ್ನು ಅಮೆರಿಕ ಆಡಳಿತದ ನೆರವಿನಿಂದ ಕಿತ್ತೊಗೆಯಲು ಯತ್ನಿಸಿದ ಜುಯಾನ್ ಗುಯುಡೋಯ ‘ಕ್ಷಿಪ್ರ’ ದಂಗೆ ಮತ್ತೆ ವಿಫಲವಾಗಿದೆ. ಇದು ಅಂತರಾಷ್ಟ್ರೀಯ ಕಾನೂನುಗಳ ಉಲ್ಲಂಘನೆ ಅಷ್ಟೇ ಅಲ್ಲ, ಜಗತ್ತಿನಾದ್ಯಂತ ಸಮಾಜಗಳಲ್ಲಿ ಪ್ರಜಾಸತ್ತಾತ್ಮಕ ಮೌಲ್ಯಗಳು ಅಧ:ಪತನ ಹೊಂದುತ್ತಿರುವ ವಿದ್ಯಮಾನದ ಪ್ರತಿಫಲನವೂ ಆಗಿದೆ. ಒಂದು ಶತಮಾನದೀಂದ ನಡೆಯುತ್ತಿರುವ ಅಮೆರಿಕದ ಈ ಹುನ್ನಾರವು ಹಾಲಿವುಡ್ ಸೇರಿದಂತೆ ಜಗತ್ತಿನ ಮುಖ್ಯವಾಹಿನಿ ಮಾಧ್ಯಮಗಳಿಂದ ನಿರ್ಲಕ್ಷಿಸಲ್ಪಟ್ಟಿದೆ, ಇಲ್ಲವೇ ತಪ್ಪಾಗಿ ಬಿಂಬಿಸಲ್ಪಟ್ಟಿದೆ.

1999ರಲ್ಲಿ ಹ್ಯೂಗೋ ಚಾವೇಜ್ ನಾಯಕತ್ವದಲ್ಲಿ ಜಾರಿಗೆ ಬಂದ ‘ಬೊಲೆವಿರಿಯನ್ ಕ್ರಾಂತಿ’ಯನ್ನು, ಅದರ ಹಿಂದಿನ ಸದಾಶಯವನ್ನು ಒಡೆದು ಹಾಕಲು ಅಮೆರಿಕ ಹತಾಶೆಯಲ್ಲಿ ವಿಫಲ ಯತ್ನಗಳನ್ನು ಮಾಡುತ್ತಲೇ ಇದೆ. ಇಂಥದ್ದೇ ‘ಕ್ಷಿಪ್ರ ದಂಗೆ’ಗಳನ್ನು 2002ರಲ್ಲಿ ಚಾವೇಜ್ ವಿರುದ್ಧ, 2016ರಲ್ಲಿ ಮಡುರೋ ವಿರುದ್ಧ ನಡೆಸಲು ಅಮೆರಿಕಾ ಯತ್ನಿಸಿದಾಗ ಅದನ್ನು ಅಲ್ಲಿಯ ಜನತೆ ಸೋಲಿಸಿದ್ದಾರೆ.

ಅಮೆರಿಕದಿಂದ ಮಧ್ಯಂತರ ಅಧ್ಯಕ್ಷನೆಂದು ಘೋಷಿಸಲ್ಪಟ್ಟ ಜುಯಾನ್ ಗುಯುಡೋ ಏಪ್ರಿಲ್ 30ರಂದು ವಿಡಿಯೊ ಮೂಲಕ ಪ್ರತ್ಯಕ್ಷನಾದ. ತನ್ನ ಜೊತೆ ಮಿಲಿಟರಿ ಇದೆ ಎಂದು ತೋರಿಸಲೆಂದೇ ದೊಡ್ಡ ಸಂಖ್ಯೆಯಲ್ಲಿ ಸಶಸ್ತ್ರ ಸೈನಿಕರನ್ನೂ ಇಟ್ಟುಕೊಂಡು, ಮಿಲಿಟರಿ ಕ್ಷಿಪ್ರ ದಂಗೆಯ ಸುಳಿವನ್ನು ನೀಡಿದ. ಈ ವಿಡಿಯೋವನ್ನು ರಾಜಧಾನಿ ಕಾರಾಕಸ್‍ನ ‘ಜನರಿಲಸ್ಮೊ ಫ್ರಾಂಕಿಸ್ಕೊ ಡಿ ಮೆರಂಡೊ ಏರ್‍ಬೇಸ್‍ನಲ್ಲಿ ಚಿತ್ರೀಕರಿಸಲಾಗಿತ್ತು. ಸರ್ಕಾರಿ ವಿರೋಧಿ ದಂಗೆಗಳಲ್ಲಿ ಹಿಂಸೆಯನ್ನು ಉತ್ತೇಜಿಸಿದ ಕಾರಣಕ್ಕಾಗಿ ಗೃಹಬಂಧನಕ್ಕೆ ಒಳಗಾಗಿದ್ದ ವಿರೋಧ ಪಕ್ಷದ ನಾಯಕ ಲಿಯೊಪೊಲ್ಡೊ ಲೊಪೆಜ್ ಕೂಡ ಗುಯುಡೋ ಜೊತೆ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದ. ಅಮೆರಿಕ ಅಧ್ತಕ್ಷ ಟ್ರಂಪ್, ಉಪಾಧ್ಯಕ್ಷ ಪೆನ್ಸ್ ಮತ್ತು ರಾಷ್ಟ್ರೀಯ ಸುರಕ್ಷತಾ ಸಲಹೆಗಾರ ಜಾನ್ ಬೊಲ್ಟನ್ ಕೂಡಲೇ ಟ್ವೀಟ್ ಮಾಡಿ, ಮಿಲಿಟರಿ ದಂಗೆಯ ಸಾಧ್ಯತೆಯ ಬಗ್ಗೆ, ವೆನಿಜುವೆಲದ ಶಾಸನಬದ್ಧ ಸರ್ಕಾರದ ವಿರುದ್ಧ ಮಿಲಿಟರಿ ಕ್ರಮದ ಬಗ್ಗೆ ಎಚ್ಚರಿಕೆ ನೀಡಿ ಜನರ ಬೆಂಬಲವನ್ನು ಕೇಳಿದ್ದರು. ಈ ಅಮೆರಿಕ ಬೆಂಬಲಿತ ಉದ್ದೇಶಿತ ಕ್ಷಿಪ್ರ ದಂಗೆಯ ಯತ್ನಕ್ಕೆ ‘ಆಪರೇಷನ್ ಲಿಬಿರ್ಟಿ’ ಎಂದು ಹೆಸರಿಸಲಾಗಿತ್ತು. ಇದಕ್ಕೆ ಅಮೆರಿಕದ ನಾಯಕರು, ಅಧಿಕಾರಿಗಳು ಮತ್ತು ಅಮೆರಿಕದ ಸ್ನೇಹಿತರಾದ ಲ್ಯಾಟಿನ್ ಅಮೆರಿಕದ ಕೆಲವು ದೇಶಗಳ ನಾಯಕರು ಧ್ವನಿಗೂಡಿಸಿದ್ದರು.

ಆದರೆ ಉದ್ದೇಶಿಸಿದಂತೆ ಈ ಕ್ಷಿಪ್ರ ದಂಗೆ ಸಫಲವಾಗಲಿಲ್ಲ. ಗುಯುಡೋ ಪ್ರತಿಪಾದಿಸಿದಂತೆ, ಆತನ ಬೆಂಬಲಿಗರು ‘ಜನರಿಲಸ್ಮೊ ಫ್ರಾಂಕಿಸ್ಕೊ ಡಿ ಮೆರಂಡೊ ಏರ್‍ಬೇಸ್’ ಅನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವಲ್ಲಿ ವಿಫಲರಾದರು. ಮೊದಲ ಅರ್ಧ ದಿನ ಸರ್ಕಾರಿ ವಿರೋಧಿ ಪ್ರತಿಭಟನಾಕಾರರು ಏರ್‍ಬೇಸ್‍ನ ಹೊರಗಿನ ಮುಖ್ಯ ಬೀದಿ ಮತ್ತು ಮಿಲಿಟರಿ ನೆಲೆಗಳಿದ್ದ ಹೈವೇಯಲ್ಲಿ ಪ್ರತಿಭಟನೆ ನಡೆಸಿದರು. ಸಂಜೆ ಹೊತ್ತಿಗೆ ಅಲ್ಲಿಂದ ಹೆಚ್ಚೂ ಕಡಿಮೆ ಎಲ್ಲ ಪ್ರತಿಭಟನಾಕಾರರನ್ನು ತೆರವು ಮಾಡಲಾಗಿತು. ಕೆಲವು ದಂಗೆಕೋರರು ಅಧ್ಯಕ್ಷರ ಕಾರ್ಯಕ್ಷೇತ್ರವಾದ ಪೆಲಾಸಿಯೊ ಡಿ ಮೆರಫ್ಲೊರ್ಸ್ ಕಡೆಗೆ ನುಗ್ಗಲು ಯತ್ನಿಸಿದರಾದರೂ, ಅದನ್ನು ವಿಧ್ವಂಸ ಮಾಡುವಷ್ಟು ಸಶಕ್ತರಾಗಿರಲಿಲ್ಲ. ಇಡೀ ದಿನ ಅಮೆರಿಕದ ಅಧಿಕಾರಿಗಳು ತಮ್ಮ ಹೇಳಿಕೆಯ ಮೂಲಕ ಮತ್ತು ಅಮೆರಿಕದ ಚಾನೆಲ್ಲುಗಳು ತಮ್ಮ ಸ್ಟೋರಿಗಳ ಮೂಲಕ, ಪ್ರಜಾಪ್ರಭುತ್ವ ಜಯದ ಹಾದಿಯಲ್ಲಿದೆ ಎಂದೂ, ಅಧ್ಯಕ್ಷ ಮದುರೋ ರಷ್ಯಾಕ್ಕೆ ಓಡಿ ಹೋಗುವ ಯತ್ನದಲ್ಲಿದ್ದಾರೆ ಎಂದು ಪ್ರತಿಪಾದಿಸಿದವು. ಆದರೆ ಇದ್ಯಾವುದೂ ಸಾಧ್ಯವಾಗಲಿಲ್ಲ. ಸ್ಥಳೀಯ ಜನರ ಬೆಂಬಲವಿಲ್ಲದ ಕಾರಣದಿಂದ ಗುಯಡೋ ನಡೆಸಿದ ಎರಡನೇ ವಿಫಲ ಕ್ಷಿಪ್ರ ದಂಗೆ ಇದಾಗಿತ್ತು.

ತನ್ನ ಮೂರನೇ ಯತ್ನದಲ್ಲಿ, ಮೇ 1 ಅಂತರಾಷ್ಟ್ರೀಯ ಕಾರ್ಮಿಕ ದಿನದಂದು ಸರ್ಕಾರವನ್ನು ಕಿತ್ತೊಗೆಯಲು ಜುಯಾನ್ ಗುಯಡೊ ಸಾಮಾಜಿಕ ಜಾಲತಾಣಗಳ ಮೂಲಕ ಕರೆ ಕೊಟ್ಟ. ಆದರೆ ಸರ್ಕಾರದ ಪರ ಕಾರ್ಮಿಕರು ಮತ್ತು ಎಡ ಸಂಘಟನೆಗಳ ಜನರು ಬೀದಿಗೆ ಬಂದಿದ್ದರಿಂದ ಗುಯಡೋನ ಮೂರನೇ ಯತ್ನವೂ ವಿಫಲವಾಗಿತು. ಅಮೆರಿಕದ ಸಂಚನ್ನು ವಿಫಲಗೊಳಿಸಲು ಜನ ಸಂಘಟಿತರಾಗಬೇಕು ಎಂದು ಅಧ್ಯಕ್ಷ ಮದುರೋ ಕರೆ ಕೊಟ್ಟರು. ಅಮೆರಿಕ ಘೋಷಿತ ಅಧ್ಯಕ್ಷನನ್ನು ಸೇನೆಯು ತಿರಸ್ಕರಿಸಿದೆ ಎಂದು ರಕ್ಷಣಾ ಸಚಿವ ವ್ಲಾಡಿಮಿರ್ ಪಡ್ರಿನೊ ಮತ್ತೆ ಸ್ಪಷ್ಟಪಡಿಸಿದರು. ವಿಶ್ವಸಂಸ್ಥೆ ರಾಯಭಾರಿ ವೆನಿಜುವೆಲದ ಸ್ಯಾಮುಯೆಲ್ ಮೊಂಕಡಾ, ‘ವೆನಿಜುವೆಲದಲ್ಲಿ ವಿದೇಶಿ ಶಕ್ತಿಗಳು ನಾಗರಿಕ ಯುದ್ಧ ಸೃಷ್ಟಿಸಲು ಸಂಚು ಮಾಡಿವೆ’ ಎಂದು ದೂರಿದರು. ನಂಬಲರ್ಹ ವರದಿಗಳ ಪ್ರಕಾರ, ಗುಯಡೊ ಜೊತೆ ಶಾಮೀಲಾದ ಸೈನಿಕರು ಮತ್ತು ಸುರಕ್ಷತಾ ಅಧಿಕಾರಿಗಳ ಸಂಖ್ಯೆ ಕೇವಲ 80ರಿಂದ 100 ಮಾತ್ರ. ಗುಯಡೊ ಬೆಂಬಲಕ್ಕೆ ನಿಂತ ಸೈನಿಕರ ಸಣ್ಣ ಗುಂಪನ್ನು ವೆನಿಜುವೆಲ ಸರ್ಕಾರವು ದೇಶದ್ರೋಹಿಗಳೆಂದು ಗುರುತಿಸಿದೆ. ರಾಜಧಾನಿ ಸುತ್ತ ಹೆಚ್ಚಿನ ಭದ್ರತಾ ಕ್ರಮಗಳನ್ನು ಕೈಗೊಂಡಿದ್ದು, ಕ್ಷಿಪ್ರ ಸೇನಾದಂಗೆಗೆ ಬೆಂಬಲ ನೀಡುವ ವರದಿ ಮಾಡುತ್ತಿದ್ದ ಸಿಎನ್‍ಎನ್ ಮತ್ತು ಬಿಬಿಸಿಗಳನ್ನು ನಿಷೇಧಿಸಲಾಗಿದೆ.

ವಿದೇಶಗಳ ನೇರ ಬೆಂಬಲವಿಲ್ಲದೇ ಗುಯಡೊ ಮತ್ತು ಬೆಂಬಲಿಗರು ಅಧಿಕಾರ ಪಡೆಯುವುದು ಅಸಾಧ್ಯ ಅನಿಸುತ್ತದೆ. ಅಂತಹ ಬೆಂಬಲ ಅಮೆರಿಕ ನೇತೃತ್ವದ ಗುಂಪಿನ ಅತಿಕ್ರಮಣದಿಂದ ಮಾತ್ರ ಸಾಧ್ಯ. ‘ಬ್ಲ್ಯಾಕ್ ವಾಟರ್’ ಎಂಬ ಖಾಸಗಿ ಸೇನೆ ಸ್ಥಾಪಿಸಿದ ನಟೋರಿಯಸ್ ಎರಿಕ್ ಪ್ರಿನ್ಸ್, ಸರ್ಕಾರದ ವಿರುದ್ಧದ ದಂಗೆಗೆ 5 ಸಾವಿರ ಸೈನಿಕರನ್ನು ನಿಯೋಜಿಸಿ ಎಂದು ಅಮೆರಿಕಕ್ಕೆ ಸಲಹೆ ನೀಡಿದ್ದಾನೆ ಎಂದು ಕೆಲವು ವರದಿಗಳು ಹೇಳುತ್ತಿವೆ.

ಅಕ್ರಮ ದಿಗ್ಬಂಧನಗಳ ಮೂಲಕ ಎರಡು ದಶಕಗಳ ಕಾಲ ವೆನಿಜುವೆಲದ ಆರ್ಥಿಕತೆಯನ್ನು ಡೋಲಾಯಮಾನ ಮಾಡಿ, ಲಕ್ಷಾಂತರ ಜನರನ್ನು ಹಸಿವಿಗೆ ದೂಡಿದ ಅಮೆರಿಕ ಈಗ ಪ್ರಜಾತಂತ್ರದ ಬಗ್ಗೆ ಮಾತಾಡುತ್ತಿರುವುದು ಚೋದ್ಯ. ‘ವೆನಿಜುವೆಲದಲ್ಲಿ ಅಲ್ಲಿನ ಜನರ ಆಡಳಿತವೇ ಇರಬೇಕು, ಬಾಹ್ಯ ಶಕ್ತಿಗಳು ಆಡಳಿತ ನಡೆಸಲು ನಾವು ಬಯಸುವುದಿಲ್ಲ’ ಎಂದು ಈಗ ಅಮೆರಿಕದ ರಾಷ್ಟ್ರೀಯ ಸುರಕ್ಷತಾ ಸಲಹಾಗಾರ ಜಾನ್ ಬೋಲ್ಟನ್ ಹೇಳುತ್ತಿರುವುದು ಹಾಸ್ಯಾಸ್ಪದವಾಗಿದೆ. ಮುಗ್ಧ ನಾಗರಿಕರ ವಿರುದ್ಧ ಸಶಸ್ತ್ರ ಸೇನೆಯನ್ನು ಬಳಸಬಾರದು ಎಂದು ಬೋಲ್ಟನ್ ಅಧ್ಯಕ್ಷ ಮರುಡೊಗೆ ಎಚ್ಚರಿಸಿದ್ದಾರೆ. ಬೋಲ್ಟನ್ ಹೇಳುವ ‘ಮುಗ್ಧ ನಾಗರಿಕರು’ ಎಂದರೆ ಚುನಾಯಿತ ಸರ್ಕಾರವನ್ನು ಕಿತ್ತೊಗೆಯಲು, ಸ್ವಘೋಷಿತ ಅಧ್ಯಕ್ಷ ಗುಯಡೊನನ್ನು ಬೆಂಬಲಿಸಲು ಹಿಂಸೆಯನ್ನು ಸೃಷ್ಟಿಸುತ್ತಿರುವ ಕೆಲವು ಸೈನಿಕರು ಮತ್ತು ಪಶ್ಚಿಮ ಬೆಂಬಲಿತ ದಂಗೆಕೋರರ ಸಣ್ಣ ಗುಂಪು ಅಷ್ಟೇ.

ಮಡುರೋ ಏನೂ ಚಾವೆಜ್ ಅಲ್ಲ. ಮಡುರೊ ಆಡಳಿತದಲ್ಲಿ ಸಾಕಷ್ಟು ಭ್ರಷ್ಟಾಚಾರವಿದ್ದರೂ, ಅಲ್ಲಿನ ಬಹುಪಾಲು ಜನತೆ ಬೊಲಿವೆರಿಯನ್ ಕ್ರಾಂತಿಗೆ ಬದ್ಧರಾಗಿದ್ದು, ಪ್ರಜಾತಾಂತ್ರಿಕವಾಗಿ ಆಯ್ಕೆಗೊಂಡ ಮಡುರೊ ಸರ್ಕಾರದ ಪರವಾಗಿಯೇ ಇದ್ದಾರೆ. ವೆನಿಜುವೆಲದಲ್ಲಿ ಅಮೆರಿಕದ ಸೇನಾತ್ಮಕ ಅತಿಕ್ರಮಣವನ್ನು ಸಹಿಸುವುದಿಲ್ಲ ಎಂದು ಅಧ್ಯಕ್ಷ ಮಡುರೊ ಎಚ್ಚರಿಸಿದ್ದಾರೆ. ಅಫಘಾನಿಸ್ತಾನ, ಸಿರಿಯಾ, ಇರಾಕ್, ಲಿಬ್ಯಾ, ಯೆಮೆನ್‍ಗಳಲ್ಲಿ ಹಸ್ತಕ್ಷೇಪ, ಅತಿಕ್ರಮಣ ನಡೆಸಿದ್ದ, ಈಗ ಇರಾನ್ ವಿರುದ್ಧ ಹೊಸ ಯುದ್ಧಕ್ಕೆ ಸಂಚು ಮಾಡುತ್ತಿರುವ ಅಮೆರಿಕ ವೆನಿಜುವೆಲದ ಮಡುರೊ ಸರ್ಕಾರವನ್ನು ಬೀಳಿಸುವ ಯತ್ನವನ್ನೂ ಮಾಡುತ್ತಿದೆ. ಜಗತ್ತಿನ ಎಲ್ಲೆಡೆ ಪ್ರಜಾತಾಂತ್ರಿಕ ಆಡಳಿತವನ್ನು ಬೆಂಬಲಿಸುವ ಮುಖವಾಡ ಹೊತ್ತ ಟ್ರಂಪ್ ನೇತೃತ್ವದ ಆಡಳಿತವು ಹಸ್ತಕ್ಷೇಪದ ಮೂಲಕ ಜಗತ್ತಿನ ಎಲ್ಲ ಮೂಲೆಗಳನ್ನು ನಿಯಂತ್ರಿಸುವ ದುಸ್ಸಾಹಸ ಮಾಡುತ್ತಿದೆ.

LEAVE A REPLY

Please enter your comment!
Please enter your name here