ಉದ್ಯೋಗ, ಉನ್ನತ ವ್ಯಾಸಂಗದಂತಹ ಅನೇಕ ಕನಸುಗಳನ್ನು ಹೊತ್ತು ಗ್ರಾಮೀಣ ಪ್ರದೇಶದಿಂದ ನಗರಗಳಿಗೆ ಯುವಪೀಳಿಗೆಯ ಜನ ಆಗಮಿಸುತ್ತಾರೆ. ಎಷ್ಟೋ ಸಂದರ್ಭಗಳಲ್ಲಿ ತಮ್ಮ ಕನಸುಗಳನ್ನು ಈಡೇರಿಸಿಕೊಳ್ಳದೇ ಖಾಲಿ ಕೈಯಲ್ಲಿ ಹತಾಶೆಯಿಂದ ತಮ್ಮ ಸ್ವಂತ ಊರುಗಳಿಗೆ ಮರಳಬೇಕಾದ ಇಲ್ಲವೇ ಪರಿಸ್ಥಿತಿಗೆ ಬಲಿಯಾಗಿ ಅಲ್ಲೇ ಉಳಿದುಕೊಂಡು ಸಂಕಟ, ಅಸಹಾಯಕತೆಯಿಂದ ಕಷ್ಟಗಳನ್ನು ಅನುಭವಿಸಬೇಕಾದ ಅನಿವಾರ್ಯತೆಗೆ ಸಿಕ್ಕಿಹಾಕಿಕೊಳ್ಳುತ್ತಾರೆ. ಇವರ ಮೂಲ ಆಸೆ, ಆಕಾಂಕ್ಷೆ, ಕನಸುಗಳು ಪಟ್ಟಭದ್ರ ಹಿತಾಸಕ್ತಿಗಳ ಕುತಂತ್ರಗಳಿಂದ ನುಚ್ಚುನೂರಾಗುತ್ತವೆ. ನಿಯಾಝ್ ಫಾರೂಕಿಯ ‘An ordinary Man’s Guide To Radicalism Growing Up Muslim in India’ ಎಂಬ ಚೊಚ್ಚಲ ಕೃತಿ ಇಂತಹ ನೂರಾರು ತಲ್ಲಣಗಳನ್ನು ಅನಾವರಣಗೊಳಿಸುವ ಅತ್ಮಕಥೆಯಾಗಿದೆ.

ನಿಯಾಝ್ ಕೂಡ ಇಂತಹ ಯುವಕರಂತೆ ಆಸೆ ಆಕಾಂಕ್ಷೆಗಳನ್ನು ಹೊತ್ತು ನಗರಕ್ಕೆ ಬಂದ ತರುಣ. ಈತನ ಈ ಆತ್ಮಕತೆಯು ಕೇವಲ ವೈಯಕ್ತಿಕವಾದ ಅನುಭವವಾಗಿರದೇ ಸಾಮಾನ್ಯವಾಗಿ ಮುಸ್ಲಿಂ ಸಮುದಾಯ ಅನುಭವಿಸುವ ನೋವು, ಯಾತನೆಗಳ ಕೃತಿಯಾಗಿದೆ. ಇದನ್ನು “ಪದ ಕುಸಿಯೆ ನೆಲವಿಲ್ಲ” ಎಂಬ ಶೀರ್ಷಿಕೆಯೊಂದಿಗೆ ಹಲವು ವರ್ಷಗಳ ಕಾಲ ಪ್ರಜಾವಾಣಿ ಪತ್ರಿಕೆಯ ದೆಹಲಿ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸಿದ್ದ ಡಿ.ಉಮಾಪತಿಯವರು ಬಹಳ ಅಚ್ಚುಕಟ್ಟಾಗಿ ಕನ್ನಡದ್ದೇ ಎನ್ನುವ ಹಾಗೆ ಅನುವಾದಿಸಿದ್ದಾರೆ. ಇವರು ಪತ್ರಿಕಾ ವರದಿಗಾರರಾಗಿ ಮುಸ್ಲಿಮರ ತವಕ ತಲ್ಲಣಗಳನ್ನು ಅತ್ಯಂತ ಸಾಮಿಪ್ಯದಿಂದ ಕಂಡಿರುವುದರಿಂದ ಈ ಬಗೆಯ ಸಹಜ ನಿರೂಪಣೆ ಸಾಧ್ಯವಾಗಿದೆ. ಮುಖ್ಯವಾಗಿ ಮುಸ್ಲಿಂ ಸಮುದಾಯದಲ್ಲಿ ಸಹಜವಾಗಿ ಬಳಕೆಯಾಗುವ ಅರೆಬಿಕ್ ಭಾಷೆಯ ಪದಗಳನ್ನು ಬಳಸಿರುವ ರೀತಿ, ಅವರ ಬರಹದ ತಲ್ಲೀನತೆಗೆ ಹಿಡಿದ ಕೈಗನ್ನಡಿಯಾಗಿದೆ.

ಡಿ.ಉಮಾಪತಿ

ಬಹುತ್ವದ ಚರಿತ್ರೆಯಿರುವ ಭಾರತದಲ್ಲಿ ಮುಸ್ಲಿಮರ ಅಸ್ಮಿತೆ ಸಮಕಾಲೀನ ಸಂದರ್ಭದ ಬಹುದೊಡ್ಡ ಪ್ರಶ್ನೆಯಾಗಿದೆ. ಸಾಮಾನ್ಯವಾಗಿ ಯಾವುದೇ ವ್ಯಕ್ತಿಗೆ ಸಾಮುದಾಯಿಕ ಬದುಕು ಭದ್ರತಾ ಭಾವನೆಯನ್ನು ಮೂಡಿಸಬೇಕು. ಆದರೆ ಅಸುರಕ್ಷತಾ ಭಾವನೆ ಮೂಡಿಸುತ್ತಿರುವುದು ಖೇದಕರ ಸಂಗತಿಯಾಗಿದೆ. ಕ್ರಿ.ಶ 7ನೇ ಶತಮಾನದಿಂದ ಭಾರತದಲ್ಲಿ ನೆಲೆಸಿರುವ ಮುಸ್ಲಿಮರು ತಮ್ಮ ಧರ್ಮ ತತ್ವಗಳ ಜೊತೆಗೆ ಬೇರೆ ಮತ, ಧರ್ಮಗಳ ತತ್ವಸಾರ ಗೌರವಿಸಿ, ಸ್ವೀಕರಿಸಿ ಸೌಹಾರ್ದಯುತವಾಗಿ ಬದುಕುತ್ತಿದ್ದಾರೆ. ಆದರೂ, ಪ್ರತಿಯೊಂದು ಸಮುದಾಯವು ಮತ, ಧರ್ಮ, ಸಂಪ್ರದಾಯ, ಆಚರಣೆಗಳ ಹಿನ್ನಲೆಯಲ್ಲಿ ಒಂದು ನಿರ್ದಿಷ್ಟ ಚೌಕಟ್ಟನ್ನು ಹಾಕಿಕೊಂಡು ಸಾಮಾಜಿಕ ಬದುಕಿನಲ್ಲಿ ಪ್ರತ್ಯೇಕತೆಯ ದೂರವನ್ನು ಕಾಯ್ದುಕೊಂಡಿರುವುದರಿಂದ ಮುಸಲ್ಮಾನರ ಕುರಿತಾದ ಪೂರ್ವಗ್ರಹದ ಗ್ರಹಿಕೆಗಳು, ಅವರನ್ನು ಅನ್ಯರಂತೆ ಕಾಣುವ ಹಾಗೆ ಮಾಡುತ್ತಿದೆಯೇ ಹೊರತು ಬೇರೆ ಕಾರಣಗಳಿಂದಲ್ಲ ಎಂಬುದನ್ನು ಈ ಕೃತಿಯಲ್ಲಿ ನಿಯಾಝ್ ಫಾರೂಕಿ ಅತ್ಯಂತ ಸೂಕ್ಷ್ಮವಾಗಿ ನಿರೂಪಿಸಿದ್ದಾರೆ.

ಪ್ರಸ್ತುತ ‘ಪದ ಕುಸಿಯೆ ನೆಲವಿಲ್ಲ’ ಕೃತಿಯಲ್ಲಿ ಒಬ್ಬ ಯುವ ಪತ್ರಕರ್ತ ಸಮಾಜವನ್ನು ವಸ್ತುನಿಷ್ಟತೆಯಿಂದ ನೋಡುವ ಪರಿ, ತಾನೊಬ್ಬ ನಿರ್ದಿಷ್ಟ ಸಮುದಾಯಕ್ಕೆ ಸೇರಿದ್ದೇನೆಂಬ ಕಾರಣಕ್ಕೆ ಅನುಭವಿಸಬೇಕಾದ ಯಾತನೆಗಳು, ಮುಸಲ್ಮಾನರನ್ನು ಸದಾ ಶಂಕೆಯ ಕಟಕಟೆಯಲ್ಲಿ ನಿಲ್ಲಿಸುವ ಉನ್ಮಾದಕಾರಿ ಸಮೂಹ ಮಾಧ್ಯಮಗಳ ಪೂರ್ವಗ್ರಹಪೀಡಿತ ಮನಸ್ಥಿತಿಯ ಅನಾವರಣ, ಮಕ್ಕಳ ಒಳಿತಿಗಾಗಿ ನಿತ್ಯ ನೇಮಗಳ ಮೂಲಕ ‘ದುವಾ’ ಮಾಡುವ ತಾಯಿ, ತನ್ನ ಸ್ವಾರ್ಥವೆಲ್ಲವನ್ನು ಬಿಟ್ಟು ಸಂಸಾರಕ್ಕಾಗಿ ಕೊಲ್ಲಿ ದೇಶದಲ್ಲಿ ದುಡಿಯುವ ತಂದೆ, ಆದರ್ಶ ಬದುಕಿಗೆ ಸಾಕ್ಷಿಯಂತಿರುವ ‘ದಾದಾ’ನ ಚಿತ್ರಣ, ಒಂದರೊಡನೊಂದು ಅಂಟಿಕೊಂಡಿರುವ ಶಾಹೀನ್ ಬಾಗ್, ಓಖ್ಲಾ ವಿಹಾರ್, ಜೋಹ್ರೀ ಫಾರಮ್, ಹಾಜಿ ಕಾಲನಿಗಳಲ್ಲಿ ವಾಸವಿರುವ ಮುಸಲ್ಮಾನರು ಜೊತೆಗೆ, ದೇಶದ ಬೇರೆ ಬೇರೆ ಪ್ರದೇಶಗಳಿಂದ ಕೋಮುಗಲಭೆಯ ದಳ್ಳುರಿಗೆ ನಲುಗಿ ಹೇಗೋ ತಮ್ಮ ಪ್ರಾಣಗಳನ್ನು ರಕ್ಷಿಸಿಕೊಂಡು ಬಂದವರನ್ನು ತನ್ನ ಒಡಲಿಗೆ ಎಗ್ಗಿಲ್ಲದೇ ತುಂಬಿಸಿಕೊಂಡು ‘ಘೆಟ್ಟೋ’ಗಳಾಗಿ (ಒಂದು ನಿರ್ದಿಷ್ಟ ಸಮುದಾಯ ವಾಸವಿರುವ ಸ್ಥಳ) ಪಿತಪಿತಗುಟ್ಟುವ ‘ಮೊಹಲ್ಲಾ’ಗಳ ಚಿತ್ರಣವಿದೆ. ಇದು ಜಾತಿ, ಧರ್ಮದ ತಾರತಮ್ಯತೆಯನ್ನು ಎಳೆಎಳೆಯಾಗಿ ತೆರೆದಿಡುವ ನಿಯಾಝ್ ಫಾರೂಕಿಯ ಮೊದಲ ಕೃತಿಯಾದರೂ, ಎಲ್ಲಿಯೂ ಪ್ರಚೋದನೆಯಾಗಲಿ, ಉದ್ವಿಗ್ನತೆಯಾಗಲಿ ಕಂಡುಬರುವುದಿಲ್ಲ.

ಬಿಹಾರದ ಇಂದರ್ವಾಲ್ ಬೈರಾಮ್ ಎಂಬ ಚಿಕ್ಕ ಹಳ್ಳಿಯ ಧಾರ್ಮಿಕ ಶ್ರದ್ಧೆಯುಳ್ಳ ಅವಿಭಕ್ತ ಕುಟುಂಬದ ಮುಗ್ಧ ಬಾಲಕ ನಿಯಾಝ್ ಫಾರೂಕಿ, ತನ್ನ ದಾದಾನ ಲಾಲನೆ-ಪಾಲನೆಯಲ್ಲಿ ಬಾಲ್ಯದ ಹತ್ತು ವರ್ಷಗಳನ್ನು ಕಳೆದು, ಆನಂತರದಲ್ಲಿ ದಾದಾನ ಆಸೆಯಂತೆ ಐ.ಎ.ಎಸ್‍ಗಾಗಿ ದೆಹಲಿಗೆ ಕಳಿಸಲ್ಪಡುತ್ತಾನೆ. ದೆಹಲಿಯ ಜಾಮಿಯಾ ನಗರ ನಿಯಾಝ್ ಫಾರೂಕಿಯ ವಾಸದ ತಾಣವಾಗುತ್ತದೆ. ಸುರಕ್ಷತಾ ಮನೋಭಾವನೆಯಿಂದ ಮುಸ್ಲಿಮರು ಒಟ್ಟುಗೂಡಿ ವಾಸಿಸುತ್ತಿದ್ದ ‘ಮೊಹಲ್ಲಾ’ ಅದು. ‘ಭಾರತ ದೆಹಲಿಗೆ ಬಂದಿಳಿಯುತ್ತದೆ, ಮುಸಲ್ಮಾನರು ಜಾಮಿಯಾನಗರಕ್ಕೆ ಬಂದಿಳಿಯುತ್ತಾರೆ’ ಎಂಬುದು ದೆಹಲಿಯಲ್ಲಿ ಜನಜನಿತವಾಗಿರುವ ಗಾದೆಮಾತು. ಜಾಮಿಯಾನಗರ ಟಿಪಿಕಲ್ ಇಂಡಿಯಾದಂತಿದೆ. ಕೋಮು ಗಲಭೆಗಳು, ತಾರತಮ್ಯಗಳು, ಬಲಿಪಶು ಭಾವನೆ, ಭಾರತದ ನಾನಾ ಭಾಗಗಳಿಂದ ಕಲೆತು ಸಮಾವೇಶಗೊಂಡಿರುವ ಕಲ್ಪಿತ ಮತ್ತು ನೈಜ ಚಿತ್ತಭ್ರಾಂತಿಗಳನ್ನು ಹೊಂದಿದೆ.

photo courtesy: Book Brahma

ಇಂತಹ ನಗರಭಾಗದಲ್ಲಿ ತಮ್ಮ ಆಪ್ತರನ್ನು ಬಿಟ್ಟು ನಗರಗಳಿಗೆ ಬರುವ ಅನೇಕ ವಿದ್ಯಾರ್ಥಿಗಳಂತೆ, ನಿಯಾಝ್ ಫಾರೂಕಿ ಕೂಡ ಅಪರಿಚಿತ ನಗರದಲ್ಲಿ ದುಗುಡ, ದುಮ್ಮಾನ, ಸಂಕಟ, ತಳಮಳಗಳಿಂದ ವಾಸವಿರುವ ಸಂದರ್ಭದಲ್ಲೇ ಎನ್ಕೌಂಟರ್‌ನಲ್ಲಿ ನೆರೆಮನೆಯ ಮುಸ್ಲಿಂ ಯುವಕರಿಬ್ಬರೂ ಹತರಾಗುತ್ತಾರೆ. ಇವರು ಹತರಾದ ಜಾಗದಿಂದ ನಿಯಾಝ್ ಫಾರೂಕಿಯ ಮನೆ ಕೇವಲ ಸುಮಾರು 200 ಮೀಟರ್ ದೂರದಲ್ಲಿರುತ್ತದೆ. ಎನ್ಕೌಂಟರ್‌ನಲ್ಲಿ ಸತ್ತ ಆ ಇಬ್ಬರು ಯುವಕರು ಇವನಂತೆಯೇ ಬಾಲ್ಯದಿಂದಲೂ ತಮ್ಮ ಕುಟುಂಬದಿಂದ ದೂರ ಇದ್ದವರೇ. ಇವರ ಬಗ್ಗೆ ಸಮೂಹ ಮಾಧ್ಯಮಗಳು ಅನಧಿಕೃತ ಮೂಲಗಳನ್ನು ಆಧರಿಸಿ ಹತರಾದ ಇಬ್ಬರು ಭಯೋತ್ಪಾದಕರೆಂದು ಘೋಷಿಸಿಬಿಡುತ್ತವೆ. ಸುತ್ತಮುತ್ತ ಇದ್ದ ವಿದ್ಯಾರ್ಥಿಗಳನ್ನು ಸಂಶಯದಿಂದ ನೋಡಲಾಗುತ್ತದೆ. ಪ್ರತಿಯೊಂದು ಹೆಜ್ಜೆಯ ಮೇಲೆ ಪ್ರಭುತ್ವ ನಿಗಾ ಇಡುತ್ತದೆ. ತಮ್ಮ ಬದುಕನ್ನು ಕಸಿದುಕೊಳ್ಳಲು ಕಾದು ಕುಳಿತಿರುವ ವ್ಯವಸ್ಥೆಯ ಬಗ್ಗೆ ನಿಯಾಝ್‍ನಂತಹ ಅನೇಕ ಯುವ ವಿದ್ಯಾರ್ಥಿಗಳಿಗೆ ಜಿಗುಪ್ಸೆಯುಂಟಾಗುತ್ತದೆ. ಈ ಘಟನೆ ನಡೆದ ಮೇಲೆ ಭವಿಷ್ಯತ್ತಿನ ಗುರಿ ತಲುಪುವ ದಾರಿ ಕತ್ತಲುಮಯವಾಗಿ ಗೋಚರಿಸುತ್ತದೆ. ಎನ್ಕೌಂಟರ್ ನಂತರ ದೆಹಲಿಯಲ್ಲಿ ವಾಸವಿದ್ದ ಎಷ್ಟೋ ಜನ ಮನೆಗಳನ್ನು ಖಾಲಿ ಮಾಡುತ್ತಾರೆ. ಆಟೋರಿಕ್ಷಾಗಳು ಕೂಡ ಜಾಮಿಯಾನಗರದ ಕಡೆ ಸುಳಿಯುವುದಿಲ್ಲ.

ಈ ಘಟನೆ ನಿಯಾಝ್‍ನ ಮನಸ್ಸಿನ ಮೇಲೆ ಅಗಾಧ ಪರಿಣಾಮವನ್ನುಂಟು ಮಾಡುತ್ತದೆ. ದಾದಾನ ಆಸೆಯಂತೆ ಈ ವ್ಯವಸ್ಥೆಯಲ್ಲಿ ಐ.ಎ.ಎಸ್ ಅಧಿಕಾರಿ ಆಗಲು ಕಷ್ಟಸಾಧ್ಯವೆಂದು ಅರಿತ ನಿಯಾಝ್ ಎಂ.ಬಿ.ಎ. ಮಾಡಬಯಸುತ್ತಿದ್ದಾಗಲೇ ಈ ಎನ್ಕೌಂಟರ್, ಪತ್ರಕರ್ತನಾಗಲು ಪ್ರೇರೇಪಿಸುತ್ತದೆ. ನಿಯಾಝ್‍ನಂತಹ ಅಮಾಯಕರು ನಿಶ್ಚಿಂತೆಯಿಂದ ವರ್ತಮಾನದಲ್ಲಿ ಬದುಕಲು ಸಾಧ್ಯವಾಗದಿರುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ತೀರ ಸಮೀಪದಲ್ಲಿ ನಡೆದ ಈ ವಿದ್ಯಮಾನ ನಿಯಾಝ್‍ನನ್ನು ಇನ್ನಿಲ್ಲದಂತೆ ಕಾಡುತ್ತದೆ. ಎನ್ಕೌಂಟರ್ ನಂತರ ವಿದ್ಯಾರ್ಥಿಗಳಲ್ಲಿ ಎಷ್ಟು ಭಯವುಂಟಾಗಿರುತ್ತದೆಂದರೆ ಸಂಶೋಧನೆಯ ಉದ್ದೇಶಕ್ಕೂ ಇಸ್ಲಾಮ್‍ಗೆ ಸಂಬಂಧಿಸಿದ ಇಲ್ಲವೇ ಗಲಭೆಗಳ ಕುರಿತ ಪುಸ್ತಕಗಳನ್ನು ಗ್ರಂಥಾಲಯದಿಂದ ಎರವಲು ಪಡೆಯುವುದನ್ನು ನಿಲ್ಲಿಸಿಬಿಟ್ಟರು. ಫೋನಿನಲ್ಲಿ ಮಾತನಾಡುವಾಗ ಬಹಳ ಎಚ್ಚರಿಕೆಯಿಂದಿರುತ್ತಿದ್ದರು. ಏಕೆಂದರೆ ಇಂತಹ ಅಮಾಯಕ ವಿದ್ಯಾರ್ಥಿಗಳ ಮಾತುಗಳನ್ನು ಕೇಳಿಸಿಕೊಳ್ಳುವವರು, ದೇಶವಿರೋಧಿ ಚಟುವಟಿಕೆಯಲ್ಲಿ ಇದ್ದಾರೆಂದು ವ್ಯಾಖ್ಯಾನಿಸಬಾರದೆಂಬ ಉದ್ದೇಶದಿಂದ. ಜಾಮಿಯಾ ವಿಶ್ವವಿದ್ಯಾಲಯದ ಪ್ರತಿಯೊಬ್ಬ ವಿದ್ಯಾರ್ಥಿಯೂ ಶಂಕಿತ ಉಗ್ರನೇ ಎಂದು ವಿದ್ಯಾರ್ಥಿಗಳ ಪ್ರತಿ ಹೆಜ್ಜೆಯ ಮೇಲೆ ಪೋಲೀಸ್ ಪಹರೆ ನಿಗಾ ಇರಿಸಿದಾಗ, ಪ್ರತಿಯೊಬ್ಬ ಜಾಮಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಯ ಯೌವ್ವನದ ಜೀವನೋತ್ಸಾಹ, ಲವಲವಿಕೆ ಬತ್ತಿಹೋಗುತ್ತಿರುತ್ತದೆ.

ಸತ್ತವರು ಬೇರೆ ಯಾರೋ ಇಬ್ಬರಾದರೂ, ಈ ಇಬ್ಬರು ನಾನೇ ಎಂಬಂತೆ ನಿಯಾಝ್‍ಗೆ ಅನಿಸಿರುತ್ತದೆ. ಕಾರಣ ಈ ಇಬ್ಬರ ಪೈಕಿ ಒಬ್ಬ ಐ.ಎ.ಎಸ್. ಅಧಿಕಾರಿ ಆಗಬೇಕೆಂದು, ಮತ್ತೊಬ್ಬ ಪೈಲಟ್ ಆಗಬೇಕೆಂಬ ಆಸೆ ಹೊತ್ತವನು. ರಾಷ್ಟ್ರಕ್ಕಾಗಿ ದುಡಿಯುವ ಉದ್ಯೋಗದಲ್ಲಿ ತೊಡಗಿಕೊಳ್ಳುವ ಆಸೆ-ಆಕಾಂಕ್ಷೆಯನ್ನು ಹೊತ್ತ ಈ ಇಬ್ಬರು ಭಯೋತ್ಪಾದಕರಾಗಲು ಹೇಗೆ ಸಾಧ್ಯ ಎಂಬ ಪ್ರಶ್ನೆ ನಿಯಾಝ್‍ನನ್ನು ಕಾಡುತ್ತದೆ. ಪ್ರಭುತ್ವ ತನ್ನನ್ನು ಅನುಮಾನದಿಂದ ನೋಡುತ್ತಿರುವಾಗ ತನ್ನನ್ನು ತಾನು, ತೀವ್ರವಾದೀಯೇ? ಭಯೋತ್ಪಾದಕನೇ? ಸಾಧಾರಣ ಮನುಷ್ಯನೆ? ಎಂಬ ಪ್ರಶ್ನೆಗಳನ್ನು ಕೇಳಿಕೊಂಡು ಪರಿಸ್ಥಿತಿಯನ್ನು ಎದುರುಗೊಳ್ಳಬೇಕಾಗುತ್ತದೆ ಹಾಗೂ ತನ್ನ ಕನಸನ್ನು ಮರೆತು ಪರ್ತಕರ್ತನಾಗುವ ಉದ್ದೇಶದಿಂದ ಜಾಮಿಯಾ ವಿಶ್ವವಿದ್ಯಾಲಯದಲ್ಲಿ ಮಾಸ್ ಕಮ್ಯುನಿಕೇಶನ್‍ನಲ್ಲಿ ಪದವಿ ಪಡೆಯಬೇಕಾಗುತ್ತದೆ. ಇದು ಪ್ರಭುತ್ವದ ನಡೆಗೆ ನೀಡುವ ಪ್ರತಿರೋಧದಂತಿದೆ.

ಈ ಕೃತಿಯು ಮುಸ್ಲಿಂ ಸಮುದಾಯದ ಹೊರ ಮತ್ತು ಒಳ ವಿದ್ಯಮಾನಗಳನ್ನು ದಿಟ್ಟವಾಗಿ ತೆರೆದಿಡುತ್ತದೆ. ಮುಸ್ಲಿಂ ಒಳಪಂಗಡಗಳ ಭಿನ್ನಭೇದಗಳನ್ನು ಸಹ ಅತ್ಯಂತ ಪ್ರಾಮಾಣಿಕತೆಯಿಂದ ಚಿತ್ರಿಸಿದೆ. ಸ್ವಾತಂತ್ರ್ಯ, ಸಮಾನತೆ ಹಾಗೂ ಸೋದರಭಾವಗಳನ್ನು ಮೈಗೂಡಿಸಿಕೊಂಡು ಬದುಕುತ್ತಿರುವ ಪ್ರೊ. ಮುಷಿರುಲ್ ಹಸನ್ ಅವರಂತಹ ಜಾತ್ಯತೀತ, ಬುದ್ಧಿಜೀವಿ ಉಪಕುಲಪತಿಯ ಅವಶ್ಯಕತೆ ಜಾಮಿಯಾ ವಿಶ್ವವಿದ್ಯಾಲಯದ ಉಳಿವಿಗೆ ಬೇಕಾಗಿದೆ – ತನ್ಮೂಲಕ ಮುಸ್ಲಿಮರಿಗೆ ಅಂಟಿಕೊಂಡಿರುವ ಕಳಂಕವನ್ನು, ಅನುಮಾನವನ್ನು ಹೋಗಲಾಡಿಸಲು ಸಾಧ್ಯವಿದೆಯೆಂದು ಹಾಗೂ ಮುಸ್ಲಿಂ ಯುವ ಸಮುದಾಯವನ್ನು ಮುನ್ನಡೆಸಲು ಬೌದ್ಧಿಕ ಸಾಮಥ್ರ್ಯವುಳ್ಳ ನಾಯಕರ ಅವಶ್ಯಕತೆಯಿದೆ ಎಂದು ಈ ಕೃತಿ ಒತ್ತಿ ಹೇಳುತ್ತದೆ.

ಇಷ್ಟೇ ಅಲ್ಲದೇ ಸ್ಥಳ ಸಂಸ್ಕೃತಿ ಹಾಗೂ ಧರ್ಮದ ಪ್ರಭಾವದಿಂದಾಗಿ ಕುಡಿತದಿಂದ ದೂರವಿದ್ದ ನಿಯಾಝ್ ಗೆಳೆಯರ ಜೊತೆ ಪಾರ್ಟಿಗೆ ಹೋದಾಗ ಅನುಭವಿಸಿದ ಮುಜುಗರವನ್ನು ಮತ್ತು ಇನ್ನಿತರ ಕೆಲವು ಗುಪ್ತ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಗೆಳೆಯರ ಜೊತೆ ಇಸ್ಲಾಂ- ಮುಸಲ್ಮಾನರು, ಅಮೆರಿಕೆಯೊಂದಿಗಿನ ಪರಮಾಣು ಒಪ್ಪಂದ, ಅಶ್ಲೀಲ ಕಾಮಪ್ರಚೋದಕ ವಿಷಯಗಳು, ತಮ್ಮ ಮುಂದೆ ಹಾದು ಹೋಗುತ್ತಿದ್ದ ಹುಡುಗಿಯರ ದೇಹ ವರ್ಣನೆ ಇಂತಹ ಅನೇಕ ವಿಷಯಗಳ ಕುರಿತಾದಂತೆ ಚರ್ಚೆ ನಡೆಯುವುದರ ಬಗ್ಗೆ ಪ್ರಸ್ತಾಪಿಸಿದ್ದಾರೆ. ಹಾಗೆ ಧಾರ್ಮಿಕ ಸಂಘರ್ಷಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುವ ಯುವ ಸಮುದಾಯವನ್ನು ಎಚ್ಚರಿಸುವಂತೆ ಮುಸ್ಲಿಂ – ಹಿಂದೂ ಸಮುದಾಯಗಳ ಸಾಮ್ಯತೆಯನ್ನು ದೇವಸ್ಥಾನಕ್ಕೆ ಹೋದಾಗ ಕಂಡುಕೊಂಡದ್ದನ್ನು ಹಂಚಿಕೊಂಡಿದ್ದಾರೆ. ಒಂದು ದಿನ ಮಂದಿರದ ಮುಂದೆ ಹಿಂದೂ ಯುವಕನನ್ನು ಸಂದರ್ಶಿಸಲು ಮುಂದಾದಾಗ ದೇವಸ್ಥಾನದಿಂದ ಸಂಸ್ಕೃತ ಶ್ಲೋಕಗಳು ಗುನುಗುಡುತ್ತಿರುತ್ತವೆ; ಮಸೀದಿಯಲ್ಲಿ ಮಧುರವಾಗಿ ಕೇಳಿಬರುವ ಅರೇಬಿಕ್ ಶ್ಲೋಕಗಳಂತೆ; ವ್ಯತ್ಯಾಸಗಳೇನೂ ಇರಲಿಲ್ಲ. ಕಿವಿಗೆ ಇಂಪಾಗಿ ಕೇಳಿಸುತ್ತಿದ್ದರೂ ಅರೆಬಿಕ್ ಭಾಷೆಯಂತೆ ಸಂಸ್ಕೃತ ಶ್ಲೋಕಗಳು ಏನೂ ಅರ್ಥವಾಗುತ್ತಿರುವುದಿಲ್ಲ. ‘ಮಸೀದಿಯಲ್ಲಿ ಈದ್ ಮತ್ತು ಶುಕ್ರವಾರಗಳಂದು ಕಾಣಿಕೆ ಸಲ್ಲಿಸುವಂತೆ, ಇಲ್ಲಿಯೂ ಗರ್ಭಗುಡಿ ಪ್ರದಕ್ಷಿಣೆ ಹಾಕಿ, ಆರತಿ ತಟ್ಟೆಗೆ ಕಾಣಿಕೆ ಸಲ್ಲಿಸಿದೆ’ ಎಂದು ಧಾರ್ಮಿಕ ಸಾಮ್ಯತೆಯನ್ನು ಗುರುತಿಸಿ ಸೋದರಭಾವನೆಯಿಂದ ಬದುಕುವ ದಾರಿಯನ್ನು ತೆರೆದಿಡುತ್ತಾರೆ. ಈ ಕೃತಿ ಕೆಲವೊಮ್ಮೆ ಗಂಭೀರವಾಗಿ ಯೋಚಿಸುವಂತೆ, ಓದುಗರ ಮನಸನ್ನು ಅನುಕಂಪದಿಂದ ಭಾರವಾಗಿಸುವಂತೆ, ಕೆಲವೊಮ್ಮೆ ಅಳುವಂತೆ, ಕೆಲವೊಮ್ಮೆ ನಗುವಂತೆ ಮಾಡುತ್ತದೆ.

ಬಹುತೇಕ ದಲಿತ ಆತ್ಮಕಥೆಗಳು ಮರಾಠಿಯಿಂದ ಕನ್ನಡಕ್ಕೆ ಅನುವಾದಗೊಂಡಿವೆ. ಅನೇಕ ದಲಿತ ಲೇಖಕರು ತಮ್ಮ ಬದುಕಿನ ಅವಮಾನಗಳನ್ನು ತಮ್ಮ ಆತ್ಮಕಥೆಗಳಲ್ಲಿ ತೋಡಿಕೊಂಡಿದ್ದಾರೆ. ಆದರೆ ಮುಸ್ಲಿಂ ಸಮುದಾಯದಿಂದ ಬಂದ ಕನ್ನಡದ ಬಹುತೇಕ ಲೇಖಕರು ತಮ್ಮ ಆತ್ಮಕಥೆಗಳನ್ನು ಬರೆದುಕೊಂಡಿಲ್ಲ. ಏಕೆ ಬರೆದಿಲ್ಲ ಎಂಬುದೇ ಒಂದು ಅಚ್ಚರಿಯ ಸಂಗತಿಯಾಗಿದೆ. ನಿಯಾಝ್ ಫಾರೂಕಿಯ ಕೃತಿ ‘ಪದ ಕುಸಿಯೆ ನೆಲವಿಲ್ಲ’ ಕನ್ನಡಕ್ಕೆ ಅನುವಾದಗೊಂಡಿರುವುದು ಈ ಕೊರತೆಯನ್ನು ಕೊಂಚಮಟ್ಟಿಗೆ ನೀಗಿಸಿದೆ. ಮುಸ್ಲಿಂ ಲೇಖಕರು ಅನುಭವಿಸುವ ತಲ್ಲಣಗಳು, ಅನಾಥಪ್ರಜ್ಞೆ, ಪರಕೀಯತೆ, ಆಂತರಿಕ ತಳಮಳ, ಸಾಮುದಾಯಿಕವಾಗಿ ಅನುಭವಿಸುವ ನೋವುಗಳನ್ನು ಆತ್ಮಕಥೆಯ ರೂಪದಲ್ಲಿ ನಿವೇದಿಸಿಕೊಳ್ಳಲು ಈ ಕೃತಿ ಪ್ರೇರಣೆಯಾಗಬಲ್ಲದು.

 

ರಿಯಾಜ್‍ ಪಾಷ

(ರಿಯಾಜ್‍ ಅವರು ಪ್ರಸ್ತುತ ಯಲಹಂಕದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. “ಜನಪದ ಸಾಹಿತ್ಯದಲ್ಲಿ ವರ್ಗ ಸಂಘರ್ಷದ ನೆಲೆಗಳು” ವಿಷಯದ ಕುರಿತು ಸಂಶೋಧನೆ ನಡೆಸಿ ಕನ್ನಡ ವಿಶ್ವವಿದ್ಯಾಲಯದಿಂದ ಪಿ.ಹೆಚ್‍ಡಿ ಪದವಿ ಪಡೆದಿದ್ದಾರೆ.)


ಇದನ್ನೂ ಓದಿ: ಕೃಷಿ ಮಸೂದೆ ವಿರೋಧಿಸಿ ಒಂದಾದ 31 ರೈತ ಸಂಘಟನೆಗಳು: ಸೆ.25ರಂದು ಪಂಜಾಬ್ ಬಂದ್‌ಗೆ ಕರೆ

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ರಿಯಾಜ್‍ ಪಾಷ

LEAVE A REPLY

Please enter your comment!
Please enter your name here