Homeಅಂಕಣಗಳುಮಾಧ್ಯಮಗಳು ಪ್ರಜಾಪ್ರಭುತ್ವದ ಕಾವಲು ನಾಯಿಗಳೋ? ಆಳುವವರ ಸಾಕು ನಾಯಿಗಳೋ?

ಮಾಧ್ಯಮಗಳು ಪ್ರಜಾಪ್ರಭುತ್ವದ ಕಾವಲು ನಾಯಿಗಳೋ? ಆಳುವವರ ಸಾಕು ನಾಯಿಗಳೋ?

- Advertisement -
- Advertisement -

ಹಂಗಾರ ಅಧಿಕಾರ ದಾಗ ಇದ್ದವರು ಏನು ಮಾಡಿದರೂ ಸುದ್ದಿಮನೆಯವರು ಸುಮ್ಮನೇ ಇರಬೇಕ? ಅವರು ಬೇಕಾದ್ದು ಮಾತಾಡಿದರೂ ಜೀ ಹುಜೂರ್ ಅನ್ನಬೇಕ? ಸುದ್ದಿ ಬರಬೇಕಾದ್ದು ಎಲ್ಲಿಂದ? ಅಧಿಕಾರಸ್ಥರಿಂದನೋ ಅಥವಾ ಸಾಮಾನ್ಯ ಜನರಿಂದನೋ?

ಸುದ್ದಿಯ ಮೂಲವೇ ಈ ಸಲದ ಸುದ್ದಿ. ಸುದ್ದಿ ಎಲ್ಲಿಂದ ಬರತದ ಅನ್ನೋದು ಬಲ್ಲಿರೇನಯ್ಯ? ಮೊನ್ನೆ ಏನಾತಪಾ ಅಂದರ ವಿಶ್ವದ ಅತಿ ಶ್ರೀಮಂತರ ಪೈಕಿ ಒಬ್ಬರಾದ ಜೆಫರಿ ಬೆಜೋಸ್ ಅನ್ನೋ ಅಮೇಜಾನ್ ಕಂಪನಿ ಮಾಲಿಕರು ದೆಹಲಿಗೆ ಬಂದಿದ್ದರು.

ಪ್ರತಿ ಸಾರಿ ಸಾಹುಕಾರರು ಬಂದಾಗ ಸರಕಾರಿ ಸಾಲಿಗೆ ಸಾಹೇಬರು ಬಂದಾಗ ಹುಡುಗರು ನೀಟಾಗಿ ಸಮವಸ್ತ್ರ ಹಕ್ಕೊಂಡು, ಸಾಲಾಗಿ ನಿಂತು ನಮಸ್ಕಾರ ಅಂತಾರಲ್ಲ, ಹಂಗ ಪ್ರಧಾನ ಮಂತ್ರಿ ಆದಿಯಾಗಿ ಎಲ್ಲ ಮಂತ್ರಿವರೇಣ್ಯರು ನಿಲ್ಲತಿದ್ದರು. ಐಟಿ, ಬಿಟಿ, ಕೋಟಿ, ಚೀಟಿ, ರೋಟಿ ಕಂಪನಿಗಳ ಮಾಲಿಕರು ಅವರ ಕೈಕುಲುಕಿ ನಮಗೊಂದಿಷ್ಟು ಕೂಲಿ ಕೊಡಿ ಅಂತ ಅಂತಿದ್ದರು. ಆದರ ಈ ಸಲೆ ಮಾತ್ರ ಮನಿಷಾನ್ನ ಯಾರು ಭೇಟಿ ಆಗಲಿಲ್ಲ. ಅವರು ನಮ್ಮ ದೇಶದಾಗ ಸಾವಿರ ಕೋಟಿ ಡಾಲರ್ ಬಂಡವಾಳ ಹೂಡಿ ಲಕ್ಷಾಂತರ ಜನರಿಗೆ ಉದ್ಯೋಗ ಕೊಡತೇನಿ ಅಂದರು. ಆದರೂ ಸಹಿತ ಯಾರೂ ಅವರ ಸಂಗತೆ ಮಾತಾಡಲಿಲ್ಲ. ಹೋಗಲಿ, ಕೇಂದ್ರ ಹಣಕಾಸು ಸಚಿವರು ಅವರು ಬಂಡವಾಳ ಹೂಡೋದೇನು ನಮ್ಮ ಮ್ಯಾಲ ಉಪಕಾರ ಮಾಡಲಿಕ್ಕೆ ಹತ್ತಿಲ್ಲ, ಅಂತ ಒಂದು ಡ್ಯಾಷ್ ಡ್ಯಾಷ್ ನೋಟ ಬೀರಿದರು. ಏ ಅಮ್ಮೀಜಾನ್, ಈ ಇಂಡಿಯಾಕ್ಕ ಹೋಗೋ ಐಡಿಯಾ ಕೊಟ್ಟವ ಯಾವಾನವಾ ಅಂತ ಅವರು ತಮ್ಮ ಕಚೇರಿ ಒಳಗ ಜೋರಾಗಿ ಕೂಗಾಡಿರಬೇಕು.

ಆ ಅಂತರಜಾಲಿಯ ಮ್ಯಾಲೆ ನಮ್ಮನ್ನಾಳುವವರ ರಂಜಿಷ್ಗೆ ಕಾರಣ ಏನು ಇದ್ದಿರಬಹುದು? ಬೇಜೋಸ್ ಅವರು ನೆಹರೂ ಜಾಕೆಟ್ ಹಕ್ಕೊಂಡು ಮಹಾತ್ಮಾಗಾಂಧಿ ಸಮಾಧಿಗೆ ಭೇಟಿ ನೀಡಿದ್ದರು. ಅದೂ ಒಂದು ಕಾರಣ ಇರಬಹುದು ಅಂತ ಮೋಷಾ ವಿರೋಧಿಗಳು ಹೇಳಿಕೋತ ಅಡ್ಯಾಡಲಿಕ್ಕೆ ಹತ್ಯಾರಂತ.

ಆದರ ಖರೇ ಸಿಟ್ಟು ಯಾಕಂದರ ಅಮೇರಿಕದ ವಾಷಿಂಗಟನ್ ಪೋಸ್ಟ್ ಪತ್ರಿಕೆ ವರದಿಗಾರರು, ಅಂಕಣಕಾರರು ಭಾರತದ ಸರಕಾರದ ಬಗ್ಗೆ ಸಕಾರಣ ಟೀಕೆ ಮಾಡಿ ಒಂದಿಷ್ಟು ಸುದ್ದಿ ಬರದಾರ. ಬೇಜೋಸ್ ಅವರು ಆ ಪತ್ರಿಕೆ ಮಾಲಿಕರು. ಅಷ್ಟ.

ನಾಕಾಣಿ ಅನ್ನೋ ಹೆಸರಿಟ್ಟುಕೊಂಡಿರುವ ಆಳುವ ಪಕ್ಷದ ನಾಯಕರೊಬ್ಬರು ಮೊನ್ನೆ ರಾತ್ರೋ ರಾತ್ರಿ ಫೇಮಸ್ ಆದರು. ಅವರು ಮಾಡಿದ್ದಿಷ್ಟೇ. ಅವರು ಟ್ವೀಟು ಮಾಡಿದರು. ನಾವು ಸಣ್ಣವರಿದ್ದಾಗ ಕೆಲಸ ಇಲ್ಲದ ಬಡಿಗ್ಯಾ ಮಗಾ ಕೂಡಲಿಕ್ಕೆ ಮೂರು ಮಣಿ ಮಾಡಿದ್ದನಂತ ಅಂತ ಒಂದು ಗಾದಿ ಮಾತು ಇತ್ತು. ಈಗ ಅದು ಬದಲಾಗಿ. ಮಾಡಲಿಕ್ಕೆ ಕೆಲಸ ಇರಲಾರದವರು ಟ್ವೀಟು ಮಾಡಿದ್ದರಂತ ಅಂತ ಆಗೇದ. ಈ ಚೌಥಾಯಿಯಾ ಅನ್ನೋರು ಬೇಜೋಸ್ ಅವರ ಹೆಸರಿಗೆ ಟ್ವೀಟು ಮಾಡಿದರು. “ನೀವು ಇಲ್ಲಿ ಬಂದು ನಮ್ಮ ದೇಶ ಛಲೋ ಅಂದರ ಸಾಲಂಗಿಲ್ಲ. ಅದನ್ನ ಹೋಗಿ ವಾಷಿಂಗಟನ್ನಿನ ನಿಮ್ಮ ನೌಕರರಿಗೆ ಹೇಳಿರಿ” ಅದರ ಅರ್ಥ ಏನಂದರ ವಾಪೋ ಪತ್ರಿಕೆ ಮೋಷಾ ಸರಕಾರದ ಬಗ್ಗೆ ದನಾತ್ಮಕವಾಗಿ ಬರೀಬೇಕು ಅಂತ. ಅವರ ಪ್ರಕಾರ ಅತಳ ಪತಳ ರಸಾತಳದಾಗಿನ ಯಾರೂ ನಮ್ಮ ಸರಕಾರವನ್ನು ಟೀಕೆ ಮಾಡಬಾರದು. ಚಿಕಿತ್ಸಕ ದೃಷ್ಟಿಯಿಂದ ನೋಡಬಾರದು. ಎಲ್ಲರೂ ಉಘೇ ಉಘೇ ಅನ್ನಬೇಕು.

ಅದನ್ನ ನೋಡಿ, ಅದರ ಹಿಂದಿನ ಭಾವನೆ ಅರ್ಥ ಮಾಡಿಕೊಂಡ ಪತ್ರಿಕೆಯ ಜಾಗತಿಕ ಅಭಿಪ್ರಾಯ ವಿಭಾಗದ ಸಂಪಾದಕ ಎಲ್ಲೀ ಲೋಪೆಜ್ ಅವರು ಸಟಕ್ಕನ ಉತ್ತರ ಕೊಟ್ಟರು. “ಜೆಫ್ ಬೆಜೋಸ್ ಅವರು ನಮ್ಮ ಪತ್ರಿಕೆಯೊಳಗ ನಾವು ಏನು ಬರೀಬೇಕು ಅಂತ ಹೇಳಿಕೊಡಂಗಿಲ್ಲ” ಅಂತ. ಅದರ ಅರ್ಥ ನಿಮ್ಮ ದೇಶದಾಗ ನೀವು ಪತ್ರಿಕೆ ಮಾಲಿಕರ ಮಾತು ಕೇಳಿ ಸುದ್ದಿ ಬರೀತೀರಿ ಅಂತನೂ ಆಗಬಹುದು. “ಸ್ವತಂತ್ರ ಪತ್ರಿಕೋದ್ಯಮದ ಕೆಲಸ ಅಂದರೆ ಸರಕಾರಕ್ಕ ಬೆಣ್ಣಿ ಹಚ್ಚೋದಲ್ಲ. ನಾವೇನು ತಪ್ಪು ಮಾಡ್ತಿಲ್ಲ. ಭಾರತದ ಪ್ರಜಾಪ್ರಭುತ್ವದ ತತ್ವ ಭಂಗವಾಗದ ಹಂಗ ನಾವು ಸುದ್ದಿ ಮಾಡ್ತಿದ್ದೇವೆ” ಅಂತ ಒಂದು ಸ್ಪಷ್ಟೀಕರಣನೂ ಕೊಟ್ಟರು.

ಇದನ್ನ ನೋಡಿದರ ಅಮೇರಿಕೆ ಪತ್ರಿಕೋದ್ಯಮದ ದಂತ ಕಥೆ ಎನ್ನಲಾದ ವಾಷಿಂಗಟನ್ ಪೋಸ್ಟಿನ ಮಾಜಿ ಸಂಪಾದಕ ಬೆನಜಮಿನ್ ಬ್ರ್ಯಾಡಲೀ ಅವರ ನೆನಪು ಆಗತದ.

ಅಧ್ಯಕ್ಷ ರಿಚರ್ಡ ನಿಕ್ಸನ್ ಅವರನ್ನ ಕುರ್ಚಿಯಿಂದ ಇಳಿಸಲಿಕ್ಕೆ ಕಾರಣರಾದ ವಾಟರ್ ಗೇಟ ಹಗರಣದ ವರದಿಗಾರರಾದ ಬಾಬ್ ವುಡವರ್ಡ್ ಹಾಗೂ ಕಾರ್ಲ್ ಬರ್ನಸ್ಟೀನ್ ಅವರನ್ನು ಬೆನ್ ಅವರು ಅತ್ಯಂತ ಕಷ್ಟದ ದಿನಗಳಲ್ಲಿ ಬೆಂಬಲಿಸಿದರು. ಆಳುವವರಿಂದ, ತಮ್ಮ ವೃತ್ತಿಯ ಇತರರಿಂದ, ಕುಟುಂಬದಿಂದ, ಇನ್ಯಾವುದೋ ಮೂಲದಿಂದ ಬೆದರಿಕೆ, ಆಮಿಷಗಳು ಬಂದರೂ ಸಹ ಅವರು ಹಿಂಜರಿಯಲಿಲ್ಲ. `ನನ್ನನ್ನು ಎಲ್ಲರೂ ಪ್ರೀತಿಸಲಿ ಎನ್ನುವುದು ಪತ್ರಕರ್ತನ ಧ್ಯೇಯ ಆಗಿರಬಾರದು. ಅವನ ಜೀವನದ ಒಂದೇ ಒಂದು ಗುರಿ- ಸತ್ಯದ ಹುಡುಕಾಟ ಹಾಗೂ ಅದನ್ನು ಜಗತ್ತಿನ ಮುಂದ ಜಾಹೀರು ಪಡಿಸೋದು ಆಗಿರಬೇಕು’ ಅಂತ ತಮ್ಮನ್ನು ವಿಚಾರಣೆಗೆ ಗುರಿಪಡಿಸಿದ ಸಂಸತ್ ಸಮಿತಿಯ ಎದುರು ಹೇಳಿದರು. ಸರಿ ಸುಮಾರು ಮೂವತ್ತು ವರ್ಷ ಪತ್ರಿಕೆಯ ಸಂಪಾದಕರಾಗಿದ್ದ ಬೆನ್ ಅವರು ಕೆಲವು ವರ್ಷಗಳ ಹಿಂದೆ ತೀರಿಹೋದರು.

ಹಂಗಾರ ಅಧಿಕಾರದಾಗ ಇದ್ದವರು ಏನು ಮಾಡಿದರೂ ಸುದ್ದಿಮನೆಯವರು ಸುಮ್ಮನೇ ಇರಬೇಕ? ಅವರು ಬೇಕಾದ್ದು ಮಾತಾಡಿದರೂ ಜೀ ಹುಜೂರ್ ಅನ್ನಬೇಕ? ಸುದ್ದಿ ಬರಬೇಕಾದ್ದು ಎಲ್ಲಿಂದ? ಅಧಿಕಾರಸ್ಥರಿಂದನೋ ಅಥವಾ ಸಾಮಾನ್ಯ ಜನರಿಂದನೋ?

ಜರ್ಮನಿಯಲ್ಲಿ ಹಿಟ್ಲರ್ ಏನೂ ತಪ್ಪು ಮಾಡದ ಆರು ಲಕ್ಷ ಜನ ಯಹೂದಿಗಳನ್ನ ಕೊಂದಾಗ, ಇದಿ ಅಮೀನ ಅವರು ಪ್ರಾಯದ ಯುವಕರ ಮಾಂಸ ಬೇಯಿಸಿ ತಿಂದಾಗ, ಪೋಲ್ ಪೋಟ್ ಅವರು ಚಾಳೀಸು ಹಾಕಿದ ಎಲ್ಲರಿಗೂ ಗುಂಡು ಹಾಕಿರಿ ಅಂತ ಆದೇಶ ಕೊಟ್ಟಾಗ, ಫ್ರೆಂಚ ಸರಕಾರ ಆಫ್ರಿಕಾದ ತನ್ನ ಕಾಲನಿಗಳಲ್ಲಿ ಕರಿಯರನ್ನು ಬಿಡಾಡಿ ದನಗಳಂತೆ ಬಹಿರಂಗ ಹರಾಜು ಹಾಕಿ ಮಾರಾಟ ಮಾಡಿದಾಗ, ಅಮೇರಿಕಾದಾಗ ಗುಲಾಮರನ್ನು ಹತ್ತಿ ಹೂವು ಕದ್ದಿದ್ದಕ್ಕಾಗಿ ಚೌರಸ್ತಾಗಳಲ್ಲಿ ಬೆಂಕಿ ಹಚ್ಚಿದಾಗ, ಇಂಗ್ಲಂಡಿನಲ್ಲಿ ಕೂಲಿ ಮಾಡೋ ಮಹಿಳೆಯರನ್ನ ಮಾಟಗಾತಿಯರು ಅಂತ ಹೇಳಿ ಆರೋಪಿಸಿ ಕೂಟಿನಲ್ಲಿ ಸುಟ್ಟಾಗ, ಅಲ್ಲಿನ ಪತ್ರಿಕೆಗಳು ಸುಮ್ಮನೇ ಇದ್ದದ್ದನ್ನು ನಾವು ಈಗ ಮೆಚ್ಚುತ್ತೇವೋ, ದೂರುತ್ತೇವೋ?

ಧರಾಸನಾ ಉಪ್ಪಿನ ಕಾರಖಾನೆಯೊಳಗ ಶಾಂತಿಯುತ ಪ್ರತಿಭಟನಾಕಾರರನ್ನು ಬ್ರಿಟಿಷರು ಸಾಲು ಹಚ್ಚಿ ಹೊಡೆದು ತಲೆ ಒಡೆದಾಗ ಪತ್ರಿಕರ್ತ ವಿನ್ಸ್ ವಾಕರ್ ಅವರು `ಭಯಂಕರ ಹಿಂಸೆ, ಮಾನವ ಹಕ್ಕುಗಳ ದಮನ’ ಅಂತ ಬರೆದರು. ಜಲಿಯನ್ ವಾಲಾಬಾಗ್ ಹತ್ಯಾಕಾಂಡವನ್ನು ಕೆಲವು ಬ್ರಿಟಿಷ ಪತ್ರಿಕೆಗಳೇ `ಅತಿರೇಕದ ಹಿಂಸೆ’ ಅಂತ ಬರೆದವು. ಹಂಗಾರ ಅವರು ಸರಕಾರದ ವಿರುದ್ಧ ಬರೆದದ್ದು ತಪ್ಪೇ? ಪತ್ರಿಕಾ ಧರ್ಮಕ್ಕೆ ಮಾಡಿದ ದ್ರೋಹವೇ?

ಈಗ ಜಗತ್ ಪ್ರಸಿದ್ಧವಾಗಿರುವ, ಬೆನ್ ಬ್ರ್ಯಾಡಲೀ ಅವರು ಐವತ್ತು ವರ್ಷ ಹಿಂದೆ ನೀಡಿದ ಹೇಳಿಕೆಯೊಂದನ್ನ ಗಮನಿಸೋಣ.

“ಮಾಧ್ಯಮಗಳು ತಮ್ಮನ್ನು ತಾವು ಪ್ರಜಾಪ್ರಭುತ್ವದ ಕಾವಲು ನಾಯಿ ಅಂತ ತಿಳಿದುಕೊಂಡಿರುತ್ತವೆ. ಆದರೆ ಆಳುವವರು ಮಾಧ್ಯಮ ತಮ್ಮ ಸಾಕುನಾಯಿಯಾಗಿರಬೇಕು ಅಂದುಕೊಂಡಿರುತ್ತಾರೆ”. ಇದರಲ್ಲಿ ನಾವು ಏನನ್ನು ನಂಬುತ್ತೇವೋ ಅದು ನಮ್ಮ ಪ್ರಜಾಪ್ರಭುತ್ವದ ವಿಕಾಸವನ್ನು, ನಮ್ಮ ನಾಳೆಗಳನ್ನ, ನಿರ್ಧರಿಸುತ್ತದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...