Homeಮುಖಪುಟಹೂತ ಚಕ್ರ ಎತ್ತುತ್ತಿರುವ ಗ್ರಾಮೀಣ ಭಾಗದ ಮೇಲೆ ಬಿದ್ದ ಬಾಣ: ಉಳಿದುಕೊಳ್ಳುವುದೇ ಗ್ರಾಮೀಣ ಕರ್ನಾಟಕ?

ಹೂತ ಚಕ್ರ ಎತ್ತುತ್ತಿರುವ ಗ್ರಾಮೀಣ ಭಾಗದ ಮೇಲೆ ಬಿದ್ದ ಬಾಣ: ಉಳಿದುಕೊಳ್ಳುವುದೇ ಗ್ರಾಮೀಣ ಕರ್ನಾಟಕ?

ರೈತರು ಬೆಳೆಯುವ ಉತ್ಪನ್ನದ ಮಾರಾಟದ ಬಗ್ಗೆ ಸದಾ ನಿರ್ಲಕ್ಷ್ಯ ಮಾಡುವ ಸರಕಾರ ಈ ಬಾರಿ ಕೈ ಬಿಗಿ ಮಾಡಿ ಕೂತಿರುವ ನಗರ/ಸಣ್ಣ ಪಟ್ಟಣಗಳ ಗ್ರಾಹಕರ ವರ್ತನೆಯನ್ನು ಗಮನಿಸಬೇಕು. ಈ ಅರ್ಥದಲ್ಲಿ ಒಂದು ಕಾರ್ಯಸಾಧು ಯೋಜನೆಯೆಂದರೆ ಸಣ್ಣ ಪಟ್ಟಣಗಳಲ್ಲಿರುವ ತಳ್ಳು ಗಾಡಿ ಮಾರಾಟಗಾರರೇ ಅತ್ಯುತ್ತಮ ಸಪ್ಲೈ ಚೈನ್ ಎಂದು ಗುರುತಿಸಬೇಕು.

- Advertisement -
- Advertisement -

ಮಹಾಭಾರತದಲ್ಲಿ ಹೂತ ರಥದ ಚಕ್ರ ಎತ್ತುವಾಗ ಕರ್ಣನ ಮೇಲೆ ಬಾಣ ಪ್ರಯೋಗ ಮಾಡಿ ಅರ್ಜುನ ಅವನನ್ನು ಕೊಲ್ಲುತ್ತಾನೆ. ಅಧರ್ಮ ಮಾತ್ರ ಅಲ್ಲ; ಅನ್ಯಾಯದ ಸಾವು ಅದು. ಆದರೆ ಈ ಪುರಾಣ ಕತೆಗೆ ದುರಂತದ ಹೀರೋಯಿಸಂ ಆದರೂ ಇದೆ.

ನಮ್ಮ ಗ್ರಾಮ ಭಾರತದ ರೈತರು, ರೈತ ಮಹಿಳೆಯರು, ಕೃಷಿ ಕಾರ್ಮಿಕರಿಗೆ ಕೊರೋನಾ ಇಂಥಾ ದುರ್ಭರ ಸ್ಥಿತಿಯನ್ನು ತಂದಿಟ್ಟಿದೆ.

ಅರ್ಧ ಕರ್ನಾಟಕ ಕಳೆದ ವರ್ಷದ ಅಭೂತಪೂರ್ವ ನೆರೆಯಿಂದ ತತ್ತರಿಸಿ ಹೋಯಿತು. ಸರ್ಕಾರದ ಅಧಿಕೃತ ಲೆಕ್ಕದ ಪ್ರಕಾರ ನಷ್ಟದ ಪ್ರಮಾಣ 40 ಸಾವಿರ ಕೋಟಿ. ಅಂದರೆ ಇದು ರಾಜ್ಯದ ಒಟ್ಟು ಯೋಜನಾ ವೆಚ್ಚದಷ್ಟು. ಪರಿಹಾರ ಘೋಷಣೆ ಮಾಡಿದರೂ ಸಾಲಮನ್ನಾ ಹೊರತಾಗಿ ಮಿಕ್ಕಿದ್ದೇನೂ ಅರ್ಥಪೂರ್ಣವಾಗಿ ತಲುಪಿಲ್ಲ. ಈ ನೆರೆ ತಕ್ಷಣದ ಜೀವನೋಪಾಯವನ್ನಷ್ಟೇ ಅಲ್ಲ, ಹಲವುಕಡೆ ದೀರ್ಘಕಾಲಿಕವಾದ ಹೊಡೆತವನ್ನೂ ನೀಡಿದೆ. ಮರಳು, ನದಿಕಸ ತುಂಬಿ ಜಮೀನು ಹದಗೆಟ್ಟಿರುವುದು ಒಂದೆಡೆಯಾದರೆ, ಮೇಲ್ಮಣ್ಣು ಕೊಚ್ಚಿ ಹೋಗಿ ಜಮೀನು ನಿಸ್ಸಾರವಾದ ಪ್ರಮಾಣವೂ ಸಾಕಷ್ಟಿದೆ. ಇವುಗಳ ಮಣ್ಣು ಸರಿಪಡಿಸುವಿಕೆಗೆ ಬೇಕಾದ ಸರ್ಕಾರದ ಸಹಾಯ ಎಷ್ಟು ಸಿಕ್ಕಿದೆ ಎಂಬ ಮಾಹಿತಿಯೇ ಇಲ್ಲ.

ಇಂಥಾ ಹಿನ್ನೆಲೆಯಲ್ಲೇ ಈ ಹಂಗಾಮಿಗೆ ರೈತರು ತಯಾರಾಗಬೇಕಾದ ಅನಿವಾರ್ಯತೆ ಇತ್ತು. ಬಹುತೇಕ ಉತ್ತರ ಕರ್ನಾಟಕದ ಕುಟುಂಬಗಳು ಎಂದಿಗಿಂತ ಹೆಚ್ಚಾಗಿ ವಲಸೆ ಹೋಗಿದ್ದು ಈ ಕಾರಣಕ್ಕೆ. ಈ ವಲಸೆ ಕೂಲಿ ಮುಖಾಂತರ ಒಂದಷ್ಟು ಕಾಸು ರೂಢಿಸಿಕೊಂಡು ವಾಪಾಸಾಗುವುದು ಆರ್ಥಿಕ ಲೆಕ್ಕಾಚಾರ ಎಂಬುದನ್ನು ಮರೆಯಬಾರದು.

ಕೊರೋನಾ ಅಪ್ಪಳಿಸಿದ್ದು ಈ ಸಂಕ್ರಮಣ ಕಾಲದಲ್ಲಿ.

ಆರ್ಥಿಕ ಹಿಂಜರಿತದ ಕಾರಣಕ್ಕೇ ಕೇಂದ್ರ ಸರಕಾರವೂ ತನ್ನ ಸ್ವಯಂಕೃತ ಅಪರಾಧಗಳಿಂದ ಹೇಗೋ ನಡಕೊಂಡು ಹೋಗುತ್ತಿದ್ದ ಆರ್ಥಿಕತೆಯ ಕಾಲು ಕತ್ತರಿಸುವ ಕೆಲಸ ಮಾಡಿ ಈಗ ಕಾಸಿಲ್ಲದೇ ಒದ್ದಾಡುತ್ತಿದ್ದರೆ ರಾಜ್ಯ ಸರ್ಕಾರ ಕೇಂದ್ರದ ಅನುದಾನ ಮತ್ತು ತೆರಿಗೆ ಪಾಲಿನ ಕಡಿತದಿಂದಾಗಿ ಇನ್ನಷ್ಟು ಸೊರಗಿ ಕೂತಿದೆ. ಈಗ ಲಾಕ್‍ಡೌನ್ ಕಾರಣಕ್ಕೆ ಇಡೀ ದೇಶಕ್ಕೆ ದೇಶದ ವ್ಯವಹಾರವೇ ಲಕ್ವಾ ಹೊಡೆದು ಕೂತಿದೆ. ಹೇಗೆ ಬಿದ್ದರೂ ಅಂಡಿಗೆ ಪೆಟ್ಟು ಅಂತ ಗಾದೆ ಇದೆ. ಇದರಂತೆ ನೆರೆಯ ಹೊಡೆತ ತಿಂದಿದ್ದೂ ನಮ್ಮ ಗ್ರಾಮೀಣರೇ; ಆರ್ಥಿಕ ಹಿಂಜರಿತದ ಹೊಡೆತವೂ ಅವರಿಗೇ ಹೆಚ್ಚು ತಟ್ಟಿದ್ದು. ಈಗ ಈ ಕೊರೋನಾ ಪಿಡುಗು ಅವರ ಬದುಕನ್ನು ಪ್ರಪಾತದಂಚಿಗೆ ನಿಲ್ಲಿಸಿದೆ.

ಈಗ ಮುಂಗಾರು ಬೆಳೆಗೆ ಬೇಕಾದ ತಯಾರಿ ಸಾಂಪ್ರದಾಯಿಕವಾಗಿ ನಡೆಯಬೇಕು. ರೇವತಿ ಮಳೆ ಅಲ್ಲಿ-ಇಲ್ಲಿ ಆಗಿದೆ. ಭರಣಿ ಮಳೆ ಅಂದರೆ ಮೇ ಮೊದಲ ವಾರದಲ್ಲಿ ಮಳೆಯಾದರೆ ಬೇಸಾಯದ ಆರಂಭಿಕ ಕೆಲಸಗಳು ಮಾಡಲೇಬೇಕು.

ಆದರೆ ಈ ಲಾಕ್‍ಡೌನ್ ಮುಂದುವರಿಯುವ ಸೂಚನೆಗಳಿದ್ದು ಇದು ಎಷ್ಟರ ಮಟ್ಟಿಗೆ ಪರಿಣಾಮ ಬೀರುತ್ತದೆಂಬುದು ಊಹೆಗೆ ಬಿಟ್ಟ ವಿಚಾರ.

ಊರಿನ ಕಿರಾಣಿ ಅಂಗಡಿಗಳಲ್ಲಿ ನಿತ್ಯದ ದಿನಸಿ ದಾಸ್ತಾನು ಅಷ್ಟಕ್ಕಷ್ಟೇ ಆಗಿದ್ದು ಇರುವ ವಸ್ತುಗಳನ್ನೂ ದುಬಾರಿಬೆಲೆಗೆ ಮಾರುತ್ತಿರುವ ವರದಿಗಳಿವೆ. ಇನ್ನೊಂದೆಡೆ ರೈತರು ಬೆಳೆದ ಉತ್ಪನ್ನಗಳೂ ಮಾರಾಟವಾಗದೇ ಕೊಳೆಯುತ್ತಿದೆ. ಗ್ರಾಮೀಣ ಭಾಗದ ಬಲಿಷ್ಠ ಆರ್ಥಿಕ ಜಾಲವಾದ ಮಹಿಳೆಯರ ಸ್ವಸಹಾಯ ಸಂಘಗಳ ವ್ಯವಹಾರ ಸ್ತಬ್ಧವಾಗಿದೆ. ಸಣ್ಣ ಪುಟ್ಟ ಅನಾರೋಗ್ಯಕ್ಕೂ ವೈದ್ಯಕೀಯ ಸೌಲಭ್ಯ ದೊರೆಯದೇ ದುಗುಡ ಹೆಚ್ಚಿದೆ.

ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗೆ ಜೀವ ತುಂಬುವ ಮೊದಲ ಕೆಲಸ ಸರ್ಕಾರ ಬೀಜ ಮತ್ತು ಗೊಬ್ಬರದ ಸಂಗ್ರಹ ಮತ್ತು ವಿತರಣೆಯನ್ನು ಖಚಿತಪಡಿಸುವುದು. ನಮ್ಮ ರೈತರು ಸಂಪೂರ್ಣವಾಗಿ ಸರ್ಕಾರದ ಮೇಲೆ ಅವಲಂಬಿತರಾಗಿರುವ ಎರಡು ಅಂಶಗಳಿವು. ಈ ಬಾರಿ ಸರ್ಕಾರ ಇವೆರಡನ್ನೂ ನಿಭಾಯಿಸುವ ಶಕ್ತಿ ಕಳಕೊಂಡಿದೆ. ಕ್ಷೇತ್ರವಾರು ಗಮನಿಸಿದರೆ ಅತ್ಯಂತ ಹೆಚ್ಚು ಹೂಡಿಕೆಯಾಗುತ್ತಿರುವುದು ಕೃಷಿಯಲ್ಲಿ. ಕರ್ನಾಟಕದಲ್ಲೇ ಏನಿಲ್ಲವೆಂದರೂ 50 ಸಾವಿರ ಕೋಟಿಯಷ್ಟು ಮೊತ್ತವನ್ನು ರೈತರು ಬಂಡವಾಳವಾಗಿ ಹೂಡುತ್ತಿದ್ದಾರೆ. ಇದರಲ್ಲಿ ಸರ್ಕಾರದ ನೆರವು ಇರುವುದು ಸಾಲದ ಲಭ್ಯತೆಯನ್ನು ದೃಢೀಕರಿಸುವುದರಲ್ಲಿ ಮಾತ್ರಾ. ಈ ಸಾಲವೂ ಅರ್ಥಶಾಸ್ತ್ರದ ಪ್ರಕಾರ ಹೂಡಿಕೆಯೇ ಹೊರತು ನೆರವಲ್ಲ!! ಸರ್ಕಾರದ ಸಬ್ಸಿಡಿ ಹೆಚ್ಚೆಂದರೆ ಶೇ.10 ಇರಬಹುದು.

ಈ ಬಾರಿ ರೈತರ ಬಂಡವಾಳ ಹೂಡಿಕೆಯ ಸಾಮಥ್ರ್ಯವೇ ಅರ್ಧಕ್ಕರ್ಧ ಕುಸಿದಿದೆ (ಪ್ರಾಯಶಃ ಇನ್ನೂ ಜಾಸ್ತಿ) ಇದನ್ನು ತುಂಬುವ ತಾತ್ವಿಕ ಇಚ್ಛೆಯೂ ಸರ್ಕಾರಕ್ಕೆ ಇದ್ದಂತಿಲ್ಲ.

ಇನ್ನೊಂದೆಡೆ ಸಾಂಪ್ರದಾಯಿಕವಾಗಿ ಕೃಷಿಯಲ್ಲಿ ಸರ್ಕಾರ ಹೇರುತ್ತಿರುವ ಬೆಳೆ ಕ್ಲಸ್ಟರ್ ಮತ್ತು ಬೆಳೆಯ ಆಯ್ಕೆಯ ಮಾನದಂಡ ಈ ಬಾರಿ ಹೇರುವುದು ಉಚಿತವಾಗಲಾರದು.

ಈಗಾಗಲೇ ಊರಿಗೆ ಮರಳಿರುವ ಕಾರ್ಮಿಕರೂ ಊರಲ್ಲೇ ಇರುವ ಅನಿವಾರ್ಯತೆ ಇರುವ ಕಾರಣ ಈ ಬಾರಿಯ ಕೃಷಿ ಹಂಗಾಮಿನ ಪ್ಲಾನಿಂಗ್, ಇದನ್ನು ಮನಸ್ಸಿನಲ್ಲಿಟ್ಟುಕೊಂಡು ನಡೆಯಬೇಕಾಗಿದೆ. ಅರ್ಥಾತ್ ಕೃಷಿ ಇಲಾಖೆಯ ಮಾಮೂಲಿ ಯಾಂತ್ರಿಕ ಲೆಕ್ಕಾಚಾರ ಸಲ್ಲದು.

ಸಾಂಪ್ರದಾಯಿಕವಾಗಿ ಮಾರುಕಟ್ಟೆ ನಂಬಿಕೊಂಡು ಬೆಳೆಯುವ ಹಲವಾರು ಬೆಳೆಗಳು ಈ ಬಾರಿ ಎಷ್ಟರಮಟ್ಟಿಗೆ ರೈತರ ಕೈ ಹಿಡಿಯಬಹುದು ಎಂಬುದರ ಲೆಕ್ಕವೇ ನಡೆದಿಲ್ಲ. ಉದಾ: ಮೆಕ್ಕೆಜೋಳ ಕರ್ನಾಟಕದ ಆಹಾರ ಬೆಳೆಗಳ ಜಾಗವನ್ನು ಆಕ್ರಮಿಸಿದೆ. ಆದರೆ ಇದರ ಮಾರುಕಟ್ಟೆ ಬಿದ್ದಿರುವ ಕಾರಣ ಗೊತ್ತು. ಕುಕ್ಕುಟೋದ್ಯಮ ತತ್ತರಿಸಿದೆ. ಇದೇ ರೀತಿಯಲ್ಲಿ ಉಳಿದ ಬೆಳೆಗಳ ಗತಿ. ಅಕ್ಟೋಬರ್ ವೇಳೆಗೆ ಏನಾಗಬಹುದು ಎಂಬ ಊಹೆಯ ಲೆಕ್ಕವೂ ಇಲ್ಲ.

ಈಗಾಗಲೇ ಕಂಗೆಟ್ಟಿರುವ ನಗರದ ಗ್ರಾಹಕರು ತಮ್ಮಲ್ಲಿರುವ ಸೀಮಿತ ಆದಾಯ ಮತ್ತು ಉಳಿಕೆಯ ಮೇಲೆ ತೀವ್ರ ನಿಗಾ ಇಟ್ಟೇ ಖರ್ಚು ಮಾಡುವವರು. ಆದ್ದರಿಂದ ಆಹಾರ ವಸ್ತುಗಳ ಬಳಕೆ ಪ್ರಮಾಣದಲ್ಲೂ ಕಡಿತವಾಗುವ ಸಂಭವ ಇದೆ. ಅಂದರೆ ಒಂದು ಕೆಜಿ ಬೇಳೆಯ ಖರ್ಚನ್ನು ಮುಕ್ಕಾಲು ಕೇಜಿಗಿಳಿಸುವ ಸಂಗತಿ.

ಇಂಥಾ ಗ್ರಾಹಕ ಹಿಂಜರಿತದ ಸಂಭಾವ್ಯತೆ ನಿಜವಾದರೆ ಸರ್ಕಾರ ಮಧ್ಯಪ್ರವೇಶಿಸುವುದು ಕನಸಿನ ಮಾತು. ಯಾಕೆಂದರೆ ಈ ಬಾರಿ ಮೋದಿ ಸರ್ಕಾರ ಮಾರುಕಟ್ಟೆ ಮಧ್ಯಪ್ರವೇಶಕ್ಕೆ ಇಟ್ಟ ಅನುದಾನ ಕೇವಲ 2000 ಕೋಟಿ. ಇದು ಪುಡಿಗಾಸು. ಕರ್ನಾಟಕದಲ್ಲೇ ಇದಕ್ಕಿಂತ ಅಧಿಕ ಗಾತ್ರದ ಮಧ್ಯಪ್ರವೇಶದ ಅವಶ್ಯಕತೆ ಈ ಹಿಂದೆಯೂ ಬಿದ್ದಿತ್ತು.

ಇನ್ನೊಂದೆಡೆ ಬೇಳೆ ಕಾಳಿಗೆ ಉತ್ತೇಜನ ನೀಡಲು ಪಡಿತರದಲ್ಲಿ ಬೇಳೆ ಕಾಳು ಹಂಚುವ ಪ್ರಸ್ತಾಪವನ್ನು ಮೋದಿ ಗಂಭೀರವಾಗಿ ತೆಗೆದುಕೊಂಡಿಲ್ಲ ಎಂಬುದು ಅದಕ್ಕೆ ಮೀಸಲಿಟ್ಟಿರುವ ಕೇವಲ 800 ಕೋಟಿ ಮೊತ್ತದಿಂದಲೇ ಗೊತ್ತಾಗುತ್ತದೆ.

ಅಂದರೆ ಸಾಂಪ್ರದಾಯಿಕವಾಗಿ ಬೆಳೆದಂತೆ ಈ ಬಾರಿಯೂ ಬೆಳೆಯಿರಿ ಎಂದು ಸರ್ಕಾರ ಹೇಳಿದರೆ ಹಂಗಾಮಿನ ಅಂತ್ಯಕ್ಕೆ ಸರ್ಕಾರ ಕೈ ಎತ್ತುವುದು ಖಂಡಿತ. ದಾಕ್ಷಿಣ್ಯಕ್ಕೆ ಬಸಿರಾಗಿ ಹೆರಲು ಜಾಗವಿಲ್ಲ ಎಂಬ ಗಾದೆ ರೈತರ ಪಾಲಿಗೆ ನಿಜವಾಗುವ ಸಾಧ್ಯತೆ ಇದೆ.

ರೈತರು ಇದನ್ನು ಮನಸ್ಸಿನಲ್ಲಿಟ್ಟುಕೊಂಡು ತಮ್ಮ ಬೆಳೆ ಆಯ್ಕೆಯನ್ನೂ ಮಾಡಬೇಕಿದೆ.

ಇನ್ನೊಂದೆಡೆ ಗ್ರಾಮಭಾರತದ ಭೂರಹಿತ ಕಾರ್ಮಿಕರ ಸ್ಥಿತಿ ಬಗ್ಗೆ ಯಾರೂ ತಲೆ ಕೆಡಿಸಿಕೊಂಡಂತಿಲ್ಲ. ಸ್ಟ್ರಾಟೆಜಿಕ್ ಆಗಿ ವಲಸೆ ಹೋಗಿ ಹೇಗೋ ಹೊಟ್ಟೆ ಹೊರೆಯುತ್ತಿದ್ದ ಈ ಕಾರ್ಮಿಕರನ್ನು ಊರಲ್ಲಿ ಉಳಿಸಿಕೊಳ್ಳಲೆಂದೇ ಜಾರಿಗೆ ಬಂದ ಉದ್ಯೋಗ ಖಾತರಿಯಲ್ಲಿ ತಿಂಗಳಾದರೂ ಕೂಲಿ ಬಾರದ ಅಧ್ವಾನಕ್ಕೆ ಈ ಕಾರ್ಮಿಕರೂ ಅತ್ತ ಸುಳಿಯುತ್ತಿಲ್ಲ.

ಸ್ಥಳೀಯ ಉದಾಸೀನ ಮತ್ತು ಭ್ರಷ್ಟಾಚಾರದ ಪ್ರಮಾಣವೂ ಇದರ ವಿಶ್ವಾಸಾರ್ಹತೆಗೆ ಧಕ್ಕೆ ತಂದಿದೆ. ಆದರೆ ಈ ಬಾರಿಯ ಸನ್ನಿವೇಶ ಎಂಥಾ ಚಾರಿತ್ರಿಕವಾದದ್ದು ಎಂದರೆ ಸರಕಾರ ಕೊಂಚ ಉಡಾಫೆ ಮಾಡಿದರೂ ಇದು ರಾಜ್ಯದ ಅಭಿವೃದ್ಧಿಯ ದಿಕ್ಕನ್ನೇ ತಿರುಗಾ ಮುರುಗಾ ಮಾಡುವ ಸಾಧ್ಯತೆ ಇದೆ.

ಕೃಷಿ ಕಾರ್ಯದೊಂದಿಗೆ ಇದನ್ನು ತಕ್ಷಣವೇ ಸಂಯೋಜಿಸಿ ಈಗಿರುವ ಕುಟುಂಬದ ಕೂಲಿ ದಿನಗಳನ್ನು 150ಕ್ಕೆ ಏರಿಸಬೇಕು. ಯಾಕೆಂದರೆ ಮರಳಿ ಬಂದಿರುವ ಕುಟುಂಬ ಸದಸ್ಯರನ್ನೂ ಪರಿಗಣಿಸಿದರೆ ಒಂದು ಕುಟುಂಬ ಎರಡೇ ತಿಂಗಳೊಳಗೆ ಈ ಕೋಟಾ ಮುಗಿಸಬಹುದು. ಮುಂದಿನ ಮಾರ್ಚ್ ಅಂತ್ಯದವರೆಗೂ ಈ ಆರ್ಥಿಕ ವರ್ಷ ಜಾರಿಯಲ್ಲಿರುತ್ತದೆ ಅಲ್ಲವೇ? ಈ ಸಂಕಷ್ಟ ದೀಪಾವಳಿವರೆಗೂ ಮುಂದುವರಿದರೆ ಆಷಾಢದಲ್ಲೇ ಹುಲ್ಲು ತಿನ್ನಬೇಕಾದೀತು.

ಈಗ ತೋಟಗಾರಿಕಾ ಬೆಳೆಗಳಿಗೆ ಮಾತ್ರ ಉದ್ಯೋಗ ಖಾತರಿಯ ವಿಸ್ತರಣೆ ಇದೆ. ಸೀಜನಲ್ ಬೆಳೆ ಬೆಳೆಯುವ ಅಂದರೆ ನಮ್ಮ ಬಹುಪಾಲು ಮಳೆ ಆಶ್ರಿತ ಆಹಾರ/ ಧಾನ್ಯ, ಕಾಳು ಬೆಳೆಯುವ ರೈತರು ಈ ಅನುಕೂಲದಿಂದ ಹೊರಗಿದ್ದಾರೆ. ಕೂಲಿ ಕೊಡುವ ಕಷ್ಟವೂ ಇವರಿಗೇ ಜಾಸ್ತಿ. ಉದ್ಯೋಗ ಖಾತರಿಯ ಮೂಲಕ ಹೊಲ ಗದ್ದೆಗಳ ಕೃಷಿ ಕೆಲಸ ಮಾಡಿಸುವ ಅವಕಾಶ ಸಿಕ್ಕರೆ ಕಾರ್ಮಿಕರಿಗೂ ಒಳಿತು; ರೈತರೂ ಬಚಾವಾಗುತ್ತಾರೆ.

ಈ ಬಾರಿ ಶಾಶ್ವತ ಆಸ್ತಿ ನಿರ್ಮಾಣ ಎನ್ನುವ ನೆಪದಲ್ಲಿ ಕಟ್ಟಡ ಕಟ್ಟಿಸುವ, ಬಾಕ್ಸ್ ಚರಂಡಿ ಮಾಡುತ್ತಾ ಕಾಸು ಮಾಡುವ ಗುತ್ತಿಗೆದಾರರ ಉದ್ಯೋಗ ಖಾತರಿಗೆ ಇದರಿಂದ ಕಲ್ಲು ಬೀಳುತ್ತದೆ ಅನ್ನುವುದು ಬಿಟ್ಟರೆ ಬೇರೇನೂ ಸಮಸ್ಯೆ ಇಲ್ಲ.

ಅಂದಾಜು ಐದು ಸಾವಿರ ಕೋಟಿಯಷ್ಟು ಈ ಉದ್ದೇಶಕ್ಕೆ ಸರ್ಕಾರ ನಿಗದಿ ಪಡಿಸಿದರೆ ತಳಮಟ್ಟದ ಆರ್ಥಿಕ ಬುನಾದಿಯ ಚೇತರಿಕೆಗೆ ಮೊದಲ ಹೆಜ್ಜೆ ಇಟ್ಟಂತೆ.

ರೈತರು ಬೆಳೆಯುವ ಉತ್ಪನ್ನದ ಮಾರಾಟದ ಬಗ್ಗೆ ಸದಾ ನಿರ್ಲಕ್ಷ್ಯ ಮಾಡುವ ಸರಕಾರ ಈ ಬಾರಿ ಕೈ ಬಿಗಿ ಮಾಡಿ ಕೂತಿರುವ ನಗರ/ಸಣ್ಣ ಪಟ್ಟಣಗಳ ಗ್ರಾಹಕರ ವರ್ತನೆಯನ್ನು ಗಮನಿಸಬೇಕು. ಈ ಅರ್ಥದಲ್ಲಿ ಒಂದು ಕಾರ್ಯಸಾಧು ಯೋಜನೆಯೆಂದರೆ ಸಣ್ಣ ಪಟ್ಟಣಗಳಲ್ಲಿರುವ ತಳ್ಳು ಗಾಡಿ ಮಾರಾಟಗಾರರೇ ಅತ್ಯುತ್ತಮ ಸಪ್ಲೈ ಚೈನ್ ಎಂದು ಗುರುತಿಸಬೇಕು. ಇವರಿಗೆ ಈಗಾಗಲೇ ದಿನವಹಿ ಬೇಕಾದ ಬಂಡವಾಳ ಒದಗಿಸುವ ಯೋಜನೆಯೊಂದಿದೆ, ಆದರೆ ಅದು ಕುಂಟುತ್ತಿದೆ. ನಮ್ಮ ಮುನ್ಸಿಪಾಲಿಟಿಗಳಲ್ಲಿರುವ ಫಂಡ್‍ನಲ್ಲಿ ಕೇವಲ 5 ಲಕ್ಷ ರೂಪಾಯಿಯನ್ನು ಆವರ್ತ ಸಾಲನಿಧಿಯಾಗಿ ಬಳಸಿದರೂ ಈ ಮಾರಾಟಗಾರರು ರೈತರಿಂದಲೇ ನೇರ ಖರೀದಿಸುವ ಶಕ್ತಿ ಹೊಂದುತ್ತಾರೆ. (ದಿನಕ್ಕೆ 3-5 ಸಾವಿರ ಸಾಲ ಇವರಿಗೆ ಬೇಕಾದಷ್ಟು) ರೈತ- ಮಾರಾಟಗಾರರ ಮುಖಾಮುಖಿ ವೇದಿಕೆ ಸೃಷ್ಟಿಸುವುದೂ ಕಷ್ಟವಲ್ಲ.

ಇವೆಲ್ಲಾ ಸಮಸ್ಯೆಗೆ ಪೂರ್ತಿ ಪರಿಹಾರವೆಂದಲ್ಲ. ಸುಮಾರು 40%ದಷ್ಟು ರೈತ ಉತ್ಪನ್ನದ ಮಾರಾಟ ಸುಲಲಿತವಾಗಬಹುದು.

ಬೆಂಗಳೂರು ಒಂದು ಸಂಪೂರ್ಣ ರೋಗಗ್ರಸ್ತ ಗ್ರಾಹಕ ಸಂಸ್ಕೃತಿ ಮತ್ತು ವಿತರಣಾ ಜಾಲ ಹೊಂದಿದ ನಗರವೆಂದೇ ನನ್ನ ಅನಿಸಿಕೆ. ಇಲ್ಲಿಗೆ ರೈತನೊಬ್ಬ ನುಗ್ಗಲು ಸಾಧ್ಯವೇ? ಸರ್ಕಾರದ ಏಜೆನ್ಸಿಗಳು ಈ ನಗರದಲ್ಲಿ ಶೇ.2ರ ಪಾಲನ್ನೂ ಹೊಂದಿಲ್ಲ. ಈ ದೃಷ್ಟಿಯಲ್ಲಿ ಸರಕಾರ ಖರೀದಿ- ಪೂರೈಕೆ ಜಾಲದ ಸಾಧ್ಯತೆ ಬಗ್ಗೆ ರ್‍ಯಾಪಿಡ್ ಅಧ್ಯಯನವೊಂದನ್ನು ಮಾಡುವುದೊಂದೇ ದಾರಿ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಕೊಲೆಗೆ ರಾಜಕೀಯ ಬಣ್ಣ ಬಳಿದ ಅಣ್ಣಾಮಲೈ: ಪ್ರಕರಣ ದಾಖಲು

0
ಮಹಿಳೆಯೋರ್ವರ ಸಾವಿಗೆ ಸಂಬಂಧಿಸಿ ಸಾಮಾಜಿಕ ಮಾಧ್ಯಮದಲ್ಲಿ ಸುಳ್ಳು ಮಾಹಿತಿ ಪೋಸ್ಟ್ ಮಾಡಿದ ಆರೋಪದ ಮೇಲೆ ಬಿಜೆಪಿಯ ತಮಿಳುನಾಡು ರಾಜ್ಯ ಘಟಕದ ಮುಖ್ಯಸ್ಥ ಕೆ ಅಣ್ಣಾಮಲೈ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ತಮಿಳುನಾಡಿನ ಕಡಲೂರು ಜಿಲ್ಲೆಯ ಪಕ್ಕಿರಿಮಣಿಯಂ...