ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಲ್ಲಿ ಇದುವರೆಗಿನ ಅತಿ ದೊಡ್ಡ ತಿದ್ದುಪಡಿ ಕರ್ನಾಟಕದಲ್ಲಿ ಆಗಿದ್ದು, ಮತದಾನದ ಹಕ್ಕನ್ನು ಕಳೆದುಕೊಳ್ಳುವ ಹಂತದಲ್ಲಿದ್ದ ಸುಮಾರು 3 ಲಕ್ಷ ಜನರನ್ನು ಮತ್ತೆ ಮತದಾರರ ಪಟ್ಟಿಗೆ ಸೇರಿಸಲಾಗಿದೆ ಎಂದು ಟೈಮ್ಸ್ ಆಫ್ ಇಂಡಿಯಾ ಆಗಸ್ಟ್ 10ರಂದು ವರದಿ ಮಾಡಿದೆ.
ಕರಡು ಪಟ್ಟಿ ಪ್ರಕಟಿಸುವ ಮುನ್ನ ಗುಣಮಟ್ಟ ತಪಾಸಣೆಯ ಭಾಗವಾಗಿ, ಮತದಾನದ ಹಕ್ಕನ್ನು ಕಳೆದುಕೊಳ್ಳುವ ಹಂತದಲ್ಲಿದ್ದ ಸುಮಾರು 3 ಲಕ್ಷ ಮತದಾರರನ್ನು ಮತ್ತೆ ಮತದಾರರ ಪಟ್ಟಿಗೆ ಸೇರಿಸಲಾಗಿದೆ. ಈ ಮತದಾರರು ಈ ಹಿಂದೆ ಎಎಸ್ಡಿಡಿಒ (ಗೈರುಹಾಜರು, ವಲಸೆ ಹೋದವರು, ಮೃತರು, ನಕಲಿ ಮತ್ತು ಇತರೆ) ಪಟ್ಟಿಯಲ್ಲಿದ್ದರು.
ಕರಡು ಮತದಾರರ ಪಟ್ಟಿ ಪ್ರಕಟಣೆಗೆ ಮುನ್ನ ಚುನಾವಣಾ ಆಯೋಗ ನಡೆಸುತ್ತಿರುವ ಗುಣಮಟ್ಟ ತಪಾಸಣೆಯಿಂದಾಗಿ, ಆಗಸ್ಟ್ 3 ಮತ್ತು 9 ರ ನಡುವೆ ಕರ್ನಾಟಕದ ಎಎಸ್ಡಿಡಿಒ ಪಟ್ಟಿಯಿಂದ ಸುಮಾರು 2.9 ಲಕ್ಷ ಮತದಾರರನ್ನು ಕೈಬಿಡಲಾಗಿದ್ದು, ಇದರಲ್ಲಿ ಬೆಂಗಳೂರು ನಗರದಲ್ಲೇ ಅತಿ ಹೆಚ್ಚು ಸಂಖ್ಯೆಯ ಕಡಿತ ದಾಖಲಾಗಿದೆ ಎಂದು ವರದಿ ಉಲ್ಲೇಖಿಸಿದೆ.
ಸದ್ಯ ಕರ್ನಾಟಕದ ಎಎಸ್ಡಿಡಿಒ ಪಟ್ಟಿಯಲ್ಲಿ 1 ಕೋಟಿಗೂ ಹೆಚ್ಚು ಹೆಸರುಗಳಿದ್ದು, ಪಟ್ಟಿಯಲ್ಲಿ ಮುಂದುವರಿಯಲು ಅಥವಾ ಅದರಿಂದ ಹೊರಹೋಗಲು ಜನರು ತಮ್ಮ ಗುರುತಿನ ಪುರಾವೆಗಳನ್ನು ಸಲ್ಲಿಸಬೇಕಾಗಿದೆ. ಎಎಸ್ಡಿಡಿಒ ಪ್ರಮಾಣ ಕರ್ನಾಟಕದ ಒಟ್ಟು ಮತದಾರರ ಸಂಖ್ಯೆಯ ಸುಮಾರು ಶೇಕಡಾ 20 ರಷ್ಟು ಅಥವಾ ಆರನೇ ಒಂದು ಭಾಗದಷ್ಟಿದೆ ಎಂದು ವರದಿ ಹೇಳಿದೆ.
SIR ಪ್ರಕ್ರಿಯೆಯ ಬಗ್ಗೆಯೇ ಪ್ರಶ್ನೆಗಳನ್ನು ಮೂಡಿಸಿದ ವರದಿ
ಟೈಮ್ಸ್ ಆಫ್ ಇಂಡಿಯಾದ ಮೇಲಿನ ವರದಿ ಕರ್ನಾಟಕದ ಒಟ್ಟಾರೆ ಎಸ್ಐಆರ್ ಪ್ರಕ್ರಿಯೆ ಬಗ್ಗೆಯೇ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
1. ಗುಣಮಟ್ಟ ತಪಾಸಣೆಯ ಭಾಗವಾಗಿ ಎಎಸ್ಡಿಡಿಒ ಪಟ್ಟಿಯಿಂದ ಲಕ್ಷಾಂತರ ಜನರನ್ನು ಕೈಬಿಡಲಾಗಿದೆ ಎಂದು ವರದಿ ಹೇಳುತ್ತದೆ. ಹಾಗಾದರೆ, ಈ ತಪಾಸಣೆ ಮಾಡದೇ ಇದ್ದಿದ್ದರೆ ಈ ಜನರು ತಮ್ಮ ಹಕ್ಕು ಕಳೆದುಕೊಳ್ಳುತ್ತಿರಲಿಲ್ಲವೇ?
2. ಲಕ್ಷಾಂತರ ಮತದಾರರನ್ನು ಡಿಲೀಟ್ ಪಟ್ಟಿಗೆ ಹಾಕುವಷ್ಟು ಕಳಪೆ ಗುಣಮಟ್ಟದಿಂದ ಈ ಎಸ್ಐಆರ್ ಪ್ರಕ್ರಿಯೆ ನಡೆಯುತ್ತಿದೆಯಾ? ಜನರ ಅಮೂಲ್ಯವಾದ ಸಾಂವಿಧಾನಿಕ ಹಕ್ಕನ್ನು ಚುನಾವಣಾ ಆಯೋಗ ಇಷ್ಟೊಂದು ತುಚ್ಚವಾಗಿ ನೋಡುತ್ತಿದೆಯಾ?
3. ಗುಣಮಟ್ಟ ತಪಾಸಣೆ ವೇಳೆ ಇಷ್ಟೊಂದು ಸಂಖ್ಯೆಯಲ್ಲಿ ಜನರನ್ನು ಪಟ್ಟಿಯಿಂದ ಕೈಬಿಟ್ಟರೆ, ಇನ್ನುಳಿದ ಪಟ್ಟಿಯಲ್ಲಿ ಇರುವ ಜನರ ಬಗ್ಗೆ ಚುನಾವಣಾ ಆಯೋಗ ಕೊಟ್ಟ ತೀರ್ಪನ್ನು ಸರಿ ಎಂದು ನಂಬುವುದಾದರೂ ಹೇಗೆ?
4. ಈಗ ಎಎಸ್ಡಿಡಿಒ ಪಟ್ಟಿಯಿಂದ ಕೈಬಿಡಲಾದ ಜನರನ್ನು ಕೆಲ ದಿನಗಳ ಹಿಂದೆ ಮುಖ್ಯ ಚುನಾವಣಾ ಆಯುಕ್ತರೇ ಎಎಸ್ಡಿಡಿಒಗಳು ಎಂದು ತೀರ್ಪು ಕೊಟ್ಟಿದ್ದರು. ಸರಿಯಾಗಿ ಪರಿಶೀಲನೆ ಮಾಡದೆ ಈ ತೀರ್ಮಾನಕ್ಕೆ ಆಯೋಗ ಬಂದಿದ್ದು ಹೇಗೆ?
5. ಬದುಕಿರುವ ವ್ಯಕ್ತಿಯನ್ನು ಸತ್ತಿದ್ದಾನೆ ಎಂದು ತೀರ್ಪು ಕೊಟ್ಟು, ಈಗ ಇಲ್ಲಾ ಸತ್ತಿಲ್ಲ ಎನ್ನುವಂತಹ ಈ ಎಸ್ಐಆರ್ ಪ್ರಕ್ರಿಯೆಯನ್ನು ನಂಬುವುದಾರೂ ಹೇಗೆ?
6. ಬರೀ ಎಎಸ್ಡಿಡಿಒ ಮಾತ್ರವಲ್ಲದೆ ಇದುವರೆಗೆ ನಡೆದಿರುವ ಮತ್ತು ಮುಂದೆ ನಡೆಯಲಿರುವ ಎಸ್ಐಆರ್ ಪ್ರಕ್ರಿಯೆಯ ಸಮರ್ಪಕತೆ, ಪಾರದರ್ಶಕತೆ ಮತ್ತು ಗುಣಮಟ್ಟತೆಯನ್ನು ಜನರು ನಂಬುವುದು ಹೇಗೆ ಎಂಬ ಪ್ರಶ್ನೆ ಮೂಡುತ್ತದೆ.
ಒಟ್ಟಾರೆಯಾಗಿ ಎಎಸ್ಡಿಡಿಒ ಪಟ್ಟಿಯ ಸಂಖ್ಯೆ ಇಳಿಕೆಯಾಗಿದೆ ಎಂದು ಜನರು ನಿರಾಳರಾಗುವ ಸಮಯ ಇದಲ್ಲ. ಟೈಮ್ಸ್ ಆಫ್ ಇಂಡಿಯಾದ ವರದಿ ಇಡೀ ಎಸ್ಐಆರ್ ಪ್ರಕ್ರಿಯೆಯ ಬಗ್ಗೆಯೇ ಹಲವು ಪ್ರಶ್ನೆಗಳು ಹುಟ್ಟು ಹಾಕಿದೆ ಮತ್ತು ಆತಂಕವನ್ನು ಮೂಡಿಸಿದೆ. ಇವೆಲ್ಲದಕ್ಕೂ ಚುನಾವಣಾ ಆಯೋಗ ಸಮಂಜಸವಾದ ಉತ್ತರ ಕೊಡಲೇ ಬೇಕಿದೆ. ಏಕೆಂದರೆ, ಪ್ರತಿಯೊಬ್ಬ ಅರ್ಹರ ಮತದಾನದ ಹಕ್ಕು ತುಚ್ಚವಾಗಿ ಕಾಣುವಂತದಲ್ಲ. ಅದು ಅತ್ಯಂತ ಅಮೂಲ್ಯವಾದದ್ದಾಗಿದೆ.


