ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿದ್ದಾರೆ ಎನ್ನಲಾದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಕಾರ್ಯಕರ್ತನ ಮನೆಗೆ ಹೋಗುತ್ತಿದ್ದಾಗ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇದ್ದ ಕಾರಿನ ಮೇಲೆ ಗುಂಪೊಂದು ದಾಳಿ ನಡೆಸಿದ ಘಟನೆ ಭಾನುವಾರ (ಆ.9) ಉತ್ತರ 24 ಪರಗಣ ಜಿಲ್ಲೆಯ ಹಲಿಸಹರ್‌ನಲ್ಲಿ ನಡೆದಿದೆ.
ಮಮತಾ ಬ್ಯಾನರ್ಜಿ ಮತ್ತು ಟಿಎಂಸಿ ನಾಯಕರು ಇದ್ದ ಕಾರಿನ ಮೇಲೆ ಕಲ್ಲು, ಇಟ್ಟಿಗೆ, ಚಪ್ಪಲಿ ತೂರಲಾಗಿದ್ದು, ಕೆಸರು ಎರಚಲಾಗಿದೆ ಎಂದು ವರದಿಯಾಗಿದೆ. ಈ ಕುರಿತ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
“ಚೋರ್ ಭಗಾವೋ” (ಕಳ್ಳರನ್ನು ಓಡಿಸಿ) ಎಂಬ ಘೋಷಣೆಗಳನ್ನು ಕೂಗುತ್ತಾ ಜನರ ಗುಂಪು ಮಮತಾ ಬ್ಯಾನರ್ಜಿ ಇದ್ದ ಕಾರಿನ ಮೇಲೆ ದಾಳಿ ನಡೆಸಿದೆ ಎಂದು ವರದಿಗಳು ಉಲ್ಲೇಖಿಸಿವೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಮಮತಾ ಬ್ಯಾನರ್ಜಿ, “ನನ್ನ ಕಾರಿನ ಕಿಟಕಿಗಳು ಮುಚ್ಚದೇ ಇದ್ದಿದ್ದರೆ ಕಲ್ಲುಗಳು ನೇರವಾಗಿ ನನ್ನ ತಲೆಗೆ ಬಡಿಯುತ್ತಿದ್ದವು. ಈ ದಾಳಿಯಲ್ಲಿ ನಮ್ಮ ಪ್ರಾಣವೇ ಹೋಗಬಹುದಿತ್ತು. ನಾನು ಬರುವ ಬಗ್ಗೆ ಮೊದಲೇ ಮಾಹಿತಿ ಇದ್ದರೂ, ಪೊಲೀಸರು ಯಾವುದೇ ಭದ್ರತಾ ಕ್ರಮಗಳನ್ನು ಕೈಗೊಳ್ಳದೆ ಮೂಕಪ್ರೇಕ್ಷಕರಾಗಿದ್ದರು” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಡೀ ರಾಜ್ಯ ಗೂಂಡಾಗಳ ನಿಯಂತ್ರಣದಲ್ಲಿದೆ ಎಂದು ಕಿಡಿಕಾರಿದ್ದಾರೆ.
ಪಶ್ಚಿಮ ಬಂಗಾಳದ ಬಿಜೆಪಿ ಈ ದಾಳಿಯನ್ನು ಖಂಡಿಸಿದೆ. ಅಲ್ಲದೆ ಈ ಘಟನೆಯಲ್ಲಿ ತಮ್ಮ ಪಕ್ಷದ ಯಾವುದೇ ಪಾತ್ರವಿಲ್ಲ, ಇದು ಸಾರ್ವಜನಿಕರ ಆಕ್ರೋಶವಾಗಿದೆ ಎಂದು ಸ್ಪಷ್ಟಪಡಿಸಿದ್ದು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಪೊಲೀಸರನ್ನು ಒತ್ತಾಯಿಸಿದೆ.


