ಕಾಂಗ್ರೆಸ್ ಗೆ ನ್ಯಾಯಯುತ, ವಾಸ್ತವಿಕ ನೆಲೆಗಟ್ಟಿನ ಅಧ್ಯಕ್ಷರ ಅಗತ್ಯವಿದೆ: ಕಪಿಲ್ ಸಿಬಲ್
Photo Courtesy: Hindusthan times

ಕೇಂದ್ರ ಸಚಿವನ ಪುತ್ರ ನಡೆಸಿದ ಲಖಿಂಪುರ್ ಖೇರಿ ಹತ್ಯಾಕಾಂಡದಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಆರ್ಯನ್ ಖಾನ್ ಪ್ರಕರಣ ಯಶಸ್ವಿಯಾಗಿದೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್ ಹೇಳಿದ್ದಾರೆ.

ಆರ್ಯನ್ ಖಾನ್ ಪ್ರಕರಣದ ಕುರಿತು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋದ ತನಿಖೆಯ ಕುರಿತು ಅಸಮಾಧಾನ ವ್ಯಕ್ತಪಡಿಸಿರುವ ಅವರು, ಇದರಿಂದ ಆಶಿಶ್ ಮಿಶ್ರಾ ಮತ್ತು ಲಖಿಂಪುರ್ ಖೇರಿ ಪ್ರಕರಣದಿಂದ ಗಮನವನ್ನು ಯಶಸ್ವಿಯಾಗಿ ಬೇರೆಡೆಗೆ ತಿರುಗಿಸಲಾಗಿದೆ ಎಂದಿದ್ದಾರೆ.

ಎನ್‌ಸಿಬಿಯ ತನಿಖೆಯನ್ನು ಹೊಸ ಕಾನೂನು ವ್ಯವಸ್ಥೆಯೆಂದು ಕರೆದಿರುವ ಅವರು, ಅಲ್ಲಿ ಡ್ರಗ್ಸ್ ಸೇವಿಸಿದ್ದಕ್ಕೆ, ಸಾಗಿಸಿದ್ದಕ್ಕೆ ಪುರಾವೆಗಳಿಲ್ಲ. ಆದರೂ ‘ತಾನು ನಿರಪರಾಧಿ ಎಂದು ಸಾಬೀತಾಗುವವರೆಗೂ ತಪ್ಪಿತಸ್ಥ’ ನೆಂಬ ಪ್ರಕರಣ ಇದಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

ಅಕ್ಟೋಬರ್ 03 ರಂದು ಉತ್ತರ ಪ್ರದೇಶದ ಲಖಿಂಪುರ್ ಖೇರಿಯಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಕೇಂದ್ರ ಸಚಿವ ಅಜಯ್ ಮಿಶ್ರಾರವರ ಮಗ ಆಶಿಶ್ ಮಿಶ್ರಾ ಕಾರು ಹರಿಸಿ ನಾಲ್ವರು ರೈತರು ಸೇರಿದಂತೆ 8 ಜನರ ಹತ್ಯೆಗೆ ಕಾರಣನಾಗಿದ್ದಾನೆ ಎಂಬ ಆರೋಪ ಎದುರಿಸುತ್ತಿದ್ದಾನೆ. ಇದಕ್ಕು ಮುನ್ನ ಅವರ ತಂದೆ ರೈತರ ವಿರುದ್ಧ ಪ್ರಚೋದನಾಕಾರಿ ಭಾಷಣ ಮಾಡಿದ್ದರು. ಹಾಗಾಗಿ ಈ ಘಟನೆ ದೇಶಾದ್ಯಂತ ಬಿಜೆಪಿ, ಕೇಂದ್ರ ಸರ್ಕಾರ ಮತ್ತು ಉತ್ತರ ಪ್ರದೇಶ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ಹುಟ್ಟಿಸಿತು. ದೇಶಾದ್ಯಂತ ಪ್ರತಿಭಟನೆಗಳು ನಡೆದು ಆರೋಪಿ ಆಶಿಶ್ ಮಿಶ್ರಾನನ್ನು ಬಂಧಿಸಲಾಗಿದೆ.

ಈ ರೈತರ ಹತ್ಯಾಕಾಂಡ ನಡೆದ ಕೆಲವೇ ಗಂಟೆಗಳಲ್ಲಿ ಖ್ಯಾತ ಬಾಲಿವುಡ್ ನಟ ಶಾರುಖ್ ಖಾನ್‌ರವರ ಮಗ ಆರ್ಯನ್ ಖಾನ್‌ನನ್ನು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ  ಗೋವಾ ವ್ಯಾಪ್ತಿಯ ಕ್ರೂಸ್ ಹಡಗಿನಿಂದ ಬಂಧಿಸಿತು.

ಆರ್ಯನ್ ಖಾನ್ ಡ್ರಗ್ಸ್ ಹೊಂದಿರಲಿಲ್ಲ ಆದರೆ ಆತನ ಸ್ನೇಹಿತ ಅರ್ಬಾಜ್ ಮರ್ಚೆಂಟ್ ನಿಂದ 6 ಗ್ರಾಂ ಚರಸ್‌ ಪತ್ತೆಯಾಗಿದೆ. ಇಲ್ಲಿ ಡ್ರಗ್ಸ್‌ ಪ್ರಮಾಣ ಎಷ್ಟಿತ್ತು ಎಂಬುದು ಮುಖ್ಯವಲ್ಲ, ಆದರೆ ಇದು ಪಿತೂರಿ, ಅಕ್ರಮ ಮಾದಕವಸ್ತು ಕಳ್ಳಸಾಗಣೆ ಪ್ರಕರಣವಾಗಿದೆ. ಆರ್ಯನ್ ಖಾನ್ ಡ್ರಗ್ಸ್‌ಗೆ ಹೊಸಬನಲ್ಲ ಮತ್ತು ಅರ್ಬಾಜ್ ಡ್ರಗ್ಸ್ ಸಾಗಿಸುತ್ತಿದ್ದುದ್ದು ಆತನಿಗೆ ತಿಳಿದಿತ್ತು ಎಂದು ಎನ್‌ಸಿಬಿ ಹೇಳಿದೆ.

ಆರ್ಯನ್ ಖಾನ್ ಬಂಧನದ ನಂತರ ಮಾಧ್ಯಮಗಳ ಬಹುಪಾಲು ಸುದ್ದಿ ಆತನದೇ ಆಗಿದೆ. ಆತನಿಗೆ ನ್ಯಾಯಾಲಯ ಇನ್ನು ಜಾಮೀನು ನೀಡಿಲ್ಲ. ಈ ಬಗ್ಗೆಯೇ ನೂರಾರು ವರದಿಗಳು ಬಂದಿವೆ. ಹಾಗಾಗಿ ಲಖಿಂಪುರ್ ಖೇರಿ ಘಟನೆಯಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಆರ್ಯನ್ ಖಾನ್ ಪ್ರಕರಣವನ್ನು ಹುಟ್ಟುಹಾಕಲಾಗಿದೆ ಎಂದು ಕಪಿಲ್ ಸಿಬಲ್ ಆರೋಪಿಸಿದ್ದಾರೆ.


ಇದನ್ನೂ ಓದಿ: ರೈತ ಹೋರಾಟ: ರಾವಣನ ಬದಲು ಪ್ರಧಾನಿ ಮೋದಿ ಪ್ರತಿಕೃತಿ ದಹಿಸಿ ದಸರಾ ಆಚರಣೆ

LEAVE A REPLY

Please enter your comment!
Please enter your name here