Homeಅಂಕಣಗಳುಸಂಪಾದಕರ ಸಂಪಾದಕ ವಿನೋದ್ ಮೆಹ್ತಾರ ಆತ್ಮ ಚರಿತ್ರೆ ಲಖನೌ ಹುಡುಗ...

ಸಂಪಾದಕರ ಸಂಪಾದಕ ವಿನೋದ್ ಮೆಹ್ತಾರ ಆತ್ಮ ಚರಿತ್ರೆ ಲಖನೌ ಹುಡುಗ…

ಮೆಹ್ತಾ ತನ್ನ ಪತ್ರಿಕೆಯ ಓದುಗರಿಗೆ “ದೇಶಾದ್ಯಂತ ಹಿಂಸೆ ರಕ್ತಪಾತ ನಡೆಯುತ್ತಿರುವ ಹೊತ್ತಲ್ಲಿ ‘ಏನೂ ಆಗಿಲ್ಲ, ದೇಶದ ಆತ್ಮ ಶಾಂತವಾಗಿದೆ’ ಎಂದು ನಂಬುವ ವ್ಯಕ್ತಿಯನ್ನು ಪ್ರಧಾನಿಯನ್ನಾಗಿ ಪಡೆದ ದೇಶದ ಹಣೆಬರಹದ ಬಗ್ಗೆ ಒಂದಿಷ್ಟು ಯೋಚಿಸಿ” ಎಂದು ಬರೆಯುತ್ತಾರೆ.

- Advertisement -
- Advertisement -

ಮುದ್ದು ನೋಡಿ ಮಾಟ ನೋಡಿ ಮೊಲೆಯ ನೋಡಿ
ಕರಗುವುದೆನ್ನ ಮನ ಕೊರಗುವುದೆನ್ನ ಮನ
ಲಿಂಗ ಪೂಜೆಯೆಂದರೆ
ಕರಗದೆನ್ನ ಮನ ಕೊರಗದೆನ್ನ ಮನ
– ಬಸವಣ್ಣ

ಓ.ಎಲ್. ನಾಗಭೂಷಣಸ್ವಾಮಿ ತಮ್ಮ ‘ಏಕಾಂತ ಲೋಕಾಂತ’ ಕೃತಿಯಲ್ಲಿ, ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಅತ್ಯುನ್ನತ ಸ್ಥಾನದಲ್ಲಿದ್ದವರು ಯಾವ ಮಟ್ಟದ ಆತ್ಮ ವಿಮರ್ಶೆಯನ್ನು ಹೊಂದಿರಬೇಕು ಎಂಬುದಕ್ಕೆ ಈ ಮೇಲಿನ ವಚನವನ್ನ ಉದಾಹರಿಸುತ್ತಾರೆ. ಅದಾಗಲೇ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿ ಪದವಿಯಲ್ಲಿದ್ದ ಮತ್ತು ಸಮಾಜದಲ್ಲಿ ಬದಲಾವಣೆಯ ಹರಿಕಾರ ಎಂದೂ ಹೆಸರು ಮಾಡಿದ್ದ ಬಸವಣ್ಣ ಅದೇ ಸಂದರ್ಭದಲ್ಲಿ ಈ ಮೇಲಿನಂತೆ ತನ್ನನ್ನ ತಾನು ವಿಮರ್ಶೆ ಮಾಡಿಕೊಳ್ಳುತ್ತಾನೆ. ಈ ವಚನ ನೆನಪಿಸಿದ್ದು ವಿನೋದ್ ಮೆಹ್ತಾರ ಆತ್ಮಚರಿತ್ರೆ ‘ಲಖನೌ ಹುಡುಗ’.

ಯಾವುದೇ ಒಂದು ಕೃತಿ ಹೆಚ್ಚು ಆಪ್ಯಾಯಮಾನವಾಗುವುದು ಅದರಲ್ಲಿರುವ ‘ಯುನಿವರ್ಸಲ್’ ಗುಣದಿಂದ. ಅದರಲ್ಲಿರುವ ವ್ಯಕ್ತಿಗಳು, ಪರಿಸರ ಮತ್ತು ಅನುಭವ ಇವುಗಳೆಲ್ಲಾ ನಮ್ಮ ಸುತ್ತಮುತ್ತಲಿನದೇ ಅಲ್ಲಿರುವರೆಲ್ಲಾ ನಮ್ಮಂತವರೆ ಅಥವಾ ನಮ್ಮವರೇ ಅನಿಸಿದಾಗ ಮಾತ್ರ. ಹಾಗಾಗಿ ‘ಲಖನೌ ಹುಡುಗ’ ನನಗೆ ‘ಮಂಡ್ಯ ಹುಡುಗ’ ಕೂಡ ಹೌದು. ವಿನೋದ್ ಮೆಹ್ತಾರ ಬರವಣಿಗೆಯ ಶೈಲಿ ವಿಶೇಷವಾದ ಹೊಸ ಅನುಭೂತಿಯನ್ನು ನೀಡುತ್ತದೆ ಎಂಬುದು ಉತ್ಪ್ರೇಕ್ಷೆ ಮಾತಂತೂ ಅಲ್ಲ. ಮೆಹ್ತಾರ ಆತ್ಮ ಚರಿತ್ರೆ, ಪ್ರಸ್ತಾವನೆ ಹೊರತುಪಡಿಸಿ ಒಟ್ಟು ಏಳು ಅಧ್ಯಾಯಗಳಲ್ಲಿದೆ. ಈ ಏಳೂ ಅಧ್ಯಾಯಗಳನ್ನು ಮೊದಲೆರಡು, ನಂತರದ ಎರಡು ಮತ್ತು ಕೊನೆಯ ಮೂರು ಅಧ್ಯಾಯ ಎಂದು ಮೂರು ಭಾಗದಲ್ಲಿ ನೋಡಬಹುದು. ಯಾಕೇ ಹೀಗೆ ಭಾಗ ಮಾಡಿದೆ ಎಂದರೆ ಮೆಹ್ತಾರ ಖಾಸಗಿ ವಿಚಾರ ಅವರ ಬದುಕು ಪರಿಸರ ಎಲ್ಲಾ ಬರುವುದು ಮೊದಲೆರಡು ಅಧ್ಯಾಯಗಳಲ್ಲಿ ಮಾತ್ರ. ನಂತರದವುಗಳಲ್ಲಿ ಖಾಸಗಿ ಮತ್ತು ವೃತ್ತಿಜೀವನ ಎರಡನ್ನೂ ಪ್ರತ್ಯೇಕವಾಗಿ ನೋಡಲಾರದಷ್ಟು ಒಂದಕ್ಕೊಂದು ಹೆಣೆದುಕೊಂಡಿವೆ. ಕೊನೆಯ ಮೂರು ಅಧ್ಯಾಯಗಳಲ್ಲಿ ಮೊದಲನೆಯದು ಪತ್ರಿಕಾರಂಗದಲ್ಲಿ ಇರುವವರಿಗೆ ‘ಟಿಪ್ಸ್’ಗಳಿಗೆ ಮೀಸಲು. ಇದನ್ನ ‘ಉಪದೇಶ ಎಂದು ಅವರು ಕರೆದುಕೊಳ್ಳುವುದಿಲ್ಲ ಆದರೆ ನನಗೆ ಮಾತ್ರ ಈ ಅಧ್ಯಾಯ ಉಪದೇಶ ಅಂತಾಲೇ ಅನಿಸಿದ್ದು.

ಯದುನಂದನ್‌ ಕೀಲಾರ

ಮೊದಲ ಅಧ್ಯಾಯ ‘ಊರು ಮನೆ’ಯಲ್ಲಿ ಮೆಹ್ತಾ ತಮ್ಮ ಪೂರ್ವಿಕರು, ಸ್ನೇಹಿತರು ಮತ್ತು ಲಖನೌ ನಗರಕ್ಕೆ ಸಹಜವಾಗಿದ್ದ ಸೆಕ್ಯೂಲರ್ ಜೀವನಶೈಲಿ ಬಗ್ಗೆ ಹೇಳುತ್ತಾರೆ. ಇಲ್ಲಿ ಹೆಚ್ಚು ಕಾಡಿದ್ದು ‘ಸಫ್ದರ್’ ಎಂಬ ವ್ಯಕ್ತಿಯ ಬಗ್ಗೆ. ಸಫ್ದರ್ ಬಗ್ಗೆ ಮೆಹ್ತಾ ಹೀಗೆ ಬರೆಯುತ್ತಾರೆ “ಹೊಸ ಲಖನೌದಲ್ಲಿ ಸಫ್ದರ್ ಅನಪೇಕ್ಷಿತನಾದ, ಆತನಂತಹ ಪ್ರತಿಭೆಗೆ ಅಲ್ಲಿ ಅಂತಹ ಬೇಡಿಕೆ ಇರಲಿಲ್ಲ. 90ರ ದಶಕದಲ್ಲಿ ಅಕ್ಷರಶಃ ಬೀದಿಪಾಲಾಗಿ, ಅನಾಥನಾಗಿದ್ದ ಸಫ್ದರ್‍ನನ್ನು ದೆಹಲಿಯಲ್ಲಿ ಭೇಟಿಯಾದಾಗ ನನ್ನ ಎದೆ ಒಡೆದುಹೋಯಿತು. ಟೈಗರ್ ಪಟೌಡಿ ಅವರ ತಾಯಿಯ ಪರಿಚಯದ ಮೂಲಕ ಸಫ್ದರ್, ದೆಹಲಿಯ ಪಟೌಡಿ ಮ್ಯಾನ್ಷನ್‍ನಲ್ಲಿ ಆಶ್ರಯ ಪಡೆದಿದ್ದ. ತಾಯಿಗೆ ಸಫ್ದರ್ ಒಡನಾಟ ಖುಷಿ ಕೊಟ್ಟಿದ್ದರೂ, ಶರ್ಮಿಳಾ ಮತ್ತು ಟೈಗರ್‍ಗೆ ಸಫ್ದರ್ ಅಲ್ಲಿರುವುದು ಇಷ್ಟವಿರಲಿಲ್ಲ. ಆತನನ್ನು ಅಲ್ಲಿಂದ ಹೊರಕಳಿಸಲಾಯಿತು.”

ವಲಸೆ ಮತ್ತು ಜಾಗತೀಕರಣದಿಂದ ಲಖನೌ ಹೊಸ ಪೈಪೋಟಿಗೆ ಎದುರಾದ ಸಂದರ್ಭದ ವಿವರಣೆಯಂತೂ ಮೆಹ್ತಾ’ರ ಸೂಕ್ಷ್ಮ ಗ್ರಾಹಿತ್ವಕ್ಕೆ ಸಾಕ್ಷಿ. ಲಖನೌ ಶ್ರೀಮಂತ ಮುಸ್ಲಿಂ ಸಮುದಾಯದವರಿಗೆ ಈ ಪೈಪೋಟಿಯ ವಾಸ್ತವ ಅರಿವಿದ್ದರೂ ಅದಕ್ಕೆ ತಕ್ಕನಾದ ತಯಾರಿ ಮಾಡಿಕೊಳ್ಳಲಿಲ್ಲ ಹಾಗು ಅವರ ಹಿಂದಿನ ಐಷಾರಾಮಿ ಜೀವನಶೈಲಿಯನ್ನೂ ಬಿಡಲಿಲ್ಲ, ನಿಧಾನವಾಗಿ ಅವರ ಆಸ್ತಿ ಕರಗಲು ಶುರುವಾಯ್ತು ಕಡೆಯದಾಗಿ ಅವರು ತಮ್ಮ ಮನೆಯಲ್ಲಿದ್ದ ದುಬಾರಿ ವಸ್ತುಗಳನ್ನು ಹಿಂದೂಗಳಿಗೆ ಮಾರಲು ಪ್ರಾರಂಭಿಸಿದರು. ಮಾರಾಟ ಮಾಡುವುದಕ್ಕೆ ಅವರಲ್ಲಿದ್ದ ಒಂದೇ ಒಂದು ಷರತ್ತು ‘ಕೊಳ್ಳುವವರು ಮಾತ್ರ ರಾತ್ರಿ ಸಮಯದಲ್ಲಿ ಬರಬೇಕು’ ಎಂಬುದಾಗಿತ್ತು. ಮೆಹ್ತಾರಿಗೆ ತನ್ನ ಒಬ್ಬ ಮುಸ್ಲಿಂ ಗೆಳೆಯ ಹೇಳಿದ್ದನ್ನು ಈ ರೀತಿ ದಾಖಲಿಸುತ್ತಾರೆ “ನಾನು ತುಂಬಾ ಅಮೂಲ್ಯ ವಸ್ತುಗಳನ್ನೆಲ್ಲಾ ಮಾರಿಬಿಟ್ಟೆ ಕಣೋ.. ಆದರೆ ಅದಕ್ಕಾಗಿ ಪಶ್ಚಾತ್ತಾಪವೇನೂ ಇಲ್ಲ. ಅದು ಹಾಗೆ ಆಗಲೇಬೇಕಿತ್ತು. ಆದರೆ ಕಳೆದವಾರ ಮಾತ್ರ ನನಗೆ ಬಹಳ ಅವಮಾನ ಎನಿಸಿತು. ಯಾಕೆಂದರೆ, ನಾನು ನನ್ನ ಬಂದೂಕನ್ನು ಮಾರಿಬಿಟ್ಟೆ.”

ಎರಡನೇ ಅಧ್ಯಾಯ ‘ಇಂಗ್ಲೆಂಡ್ ಯಾನ’ದಲ್ಲಿ ಮುಖ್ಯ ಅನಿಸಿದ್ದು, ಹೊಸ ಕಲಿಕೆಯ ವಿವರಣೆಗಳು. ಹಲವಾರು ಪುಸ್ತಕ, ಸಿನಿಮಾ, ಪತ್ರಿಕೆ ಮತ್ತು ಅವರ ಮೇಲೆ ಪ್ರಭಾವ ಬೀರಿದ ಲೇಖಕರ ಮತ್ತು ಅವರ ಕೃತಿಗಳ ಕುರಿತ ವಿವರಣೆಗಳು. ಇಲ್ಲಿ ನೆಹರು, ಮಾಕ್ರ್ಸ್, ಚೆಗುವಾರ, ಎರಿಕ್ ಫ್ರಾಮ್, ಬ್ರಿಟನ್ನಿನ ಪ್ರತಿಷ್ಠಿತ ಪತ್ರಿಕೆ ಗಾರ್ಡಿಯನ್, ಸತ್ಯಜೀತ್ ರೇ ಹೀಗೆ ಹಲವರ ಹಲವು ವಿಷಯಗಳ ಬಗ್ಗೆ ಬಹಳ ಒಳನೋಟವಿರುವ ವಿವರಣೆಗಳನ್ನು ಮೆಹ್ತಾ ನೀಡುತ್ತಾರೆ. ಎರಿಕ್ ಫ್ರಾಮ್ ಅಂತೂ ಮೆಹ್ತಾರ ಮೇಲೆ ಸಾಕಷ್ಟು ಪ್ರಭಾವ ಬೀರಿದ್ದಾನೆ ಎಂಬಂದು ಅವರು, ಅವನ ಮತ್ತು ಅವನ ಕೃತಿಗಳ ಬಗ್ಗೆ ಬರೆದಿರುವ ಪುಟಗಳ ಸಂಖ್ಯೆಯೇ ಹೇಳುತ್ತದೆ. ವಿನೋದ್ ಮೆಹ್ತಾರಿಗೆ ನಾನು ಇದುವರೆಗೂ ಎಲ್ಲೂ ಓದದ ಯಾರಲ್ಲೂ ನೋಡದ ವಿಶೇಷವಾದ sence of humour ಇದೆ. ಅದು ಎಷ್ಟರ ಮಟ್ಟಿನದು ಅಂದರೆ ನಾನು ಈ ಪುಸ್ತಕ ಓದುವಾಗ ಕೆಲವು ಬಾರಿ ಜೋರಾಗಿ ನಕ್ಕು ನಕ್ಕು ಸುಸ್ತಾಗಿದ್ದೇನೆ. ಉದಾಹರಣೆಗೆ: ಮೆಹ್ತಾರಿಗೆ ಪ್ರಭಾವ ಬೀರಿದವರಲ್ಲಿ ವರದಿಗಾರ ನಾರ್ಮನ್ ಮೇಲರ್ ಕೂಡ ಒಬ್ಬ, ಅವನ ಬಗ್ಗೆ ಈ ರೀತಿ ಬರೆಯುತ್ತಾರೆ “ನನ್ನ ಪಾಲಿಗೆ ನಾರ್ಮನ್ ಮೇಲರ್, ಒಳಿತು – ಕೆಡುಕಿನ ಮಿಶ್ರಫಲ ನೀಡಿದ ವ್ಯಕ್ತಿ. 70ರ ದಶಕದಲ್ಲಿ ನಟಿ ಮೀನಾಕುಮಾರಿಯ ಜೀವನಚರಿತ್ರೆ ಬರೆಯಲು ಒಪ್ಪಿಕೊಂಡಿದ್ದೆ. ಅದೇ ತಾನೆ ಮೇಲರ್ ಕೂಡ ಮರ್ಲಿನ್ ಕುರಿತು ತನ್ನ ಪುಸ್ತಕ ಪ್ರಕಟಿಸಿದ್ದ. ಅದನ್ನು ಓದಿದ ನಾನು, ಮೇಲರ್ ಶೈಲಿಯಲ್ಲಿಯೇ ಮೀನಾಕುಮಾರಿ ಜೀವನಕಥೆ ಬರೆಯಲು ಪ್ರಯತ್ನಿಸಿದೆ. ಆದರೆ ಅದರ ಪರಿಣಾಮ ಬಹಳ ಕೆಟ್ಟದಾಗಿತ್ತು. ಹಾಗಾಗಿ ನನಗೆ ಮೇಲರ್ ಕಲಿಸಿದ ಪಾಠಗಳಲ್ಲಿ ‘ಪ್ರಭಾವ ಸರಿ, ಅನುಕರಣೆ ತಪ್ಪು’ ಎಂಬುದೂ ಒಂದು.”

ಮೆಹ್ತಾರ ಆತ್ಮಚರಿತ್ರೆಯ ಮೂರು ಮತ್ತು ನಾಲ್ಕನೇ ಅಧ್ಯಾಯಗಳು ಯಾವ ರೋಚಕ ಸಂಗತಿಗಳಿಗೂ ಕಡಿಮೆಯಿಲ್ಲದ ಸಂಪಾದಕ ವೃತ್ತಿಯ ಸಾಹಸಗಾಥೆ. ಇದು ಓದುವಾಗ ನನಗೆ ಹೆನ್ರಿ ಷರಾರೆ’ಯ ಆತ್ಮಕತೆ ‘ಪ್ಯಾಪಿಲಾನ್’ ನೆನಪಾಗಿದ್ದು ಸುಳ್ಳಲ್ಲ. ಮೆಹ್ತಾ ಸಂಪಾದಕರಾಗಿ ವೃತ್ತಿಜೀವನ ಪ್ರಾರಂಭಿಸಿದ ‘ಡೆಬೊನೇರ್’ ಪತ್ರಿಕೆ ಅದಾಗಲೇ ‘ಅಶ್ಲೀಲ ಮತ್ತು ಪೋಲಿ ಪತ್ರಿಕೆ’ ಎಂದು ಕುಖ್ಯಾತಿ ಪಡೆದಿತ್ತು. ಮಹಿಳೆಯರ ನಗ್ನ ಚಿತ್ರಗಳನ್ನು ಪ್ರಕಟಿಸಲೇಬೇಕು ಎಂಬ ಮಾಲಿಕರ ಷರತ್ತಿಗೆ ಒಪ್ಪಿಯೇ ‘ಡೆಬೊನೇರ್’ನ್ನು ಕಲೆ, ಸಾಂಸ್ಕೃತಿಕ ಮತ್ತು ರಾಜಕೀಯ ವರದಿಗಳನ್ನೊಳಗೊಂಡ ಬಹು ವಿಚಾರಗಳ ಯಶಸ್ವಿ ಪತ್ರಿಕೆಯಾಗಿ ರೂಪಿಸಿದ್ದು ಮೆಹ್ತಾರ ಮೊದಲ ಯಶಸ್ಸು ಎಂದು ಹೇಳಬಹುದು. ಮೆಹ್ತಾ ಒಂದು ಪತ್ರಿಕೆಯನ್ನು ಬಹಳ ಯಶಸ್ವಿ ಮಟ್ಟಕ್ಕೆ ತರುತ್ತಿದ್ದಂತೆ ಅವರ ಸಂಪಾದಕನ ಹುದ್ದೆಗೆ ಕುತ್ತು ಬರುತ್ತಿತ್ತು ಅದಕ್ಕೆ ಅವರ ಆಳದಲ್ಲಿದ್ದ ತಾತ್ವಿಕ ಬದ್ಧತೆಯೇ ಕಾರಣ, ಪತ್ರಿಕೆ ಮಾಲಿಕರ ಭಾಷೆಯಲ್ಲಿ ಹೇಳುವುದಾದರೆ ‘ಅವಿಧೇಯತೆ’.

ಮೆಹ್ತಾರ ನಂತರದ ರೋಚಕ ಅಥವಾ ಸಾಹಸಗಾಥೆ ‘ಸಂಡೇ ಅಬ್ಸರ್ವರ್’. ಈ ಯೋಜನೆ ಹೊಳೆದದ್ದು ಲಂಡನ್ ನಿಂದ ಪ್ರತಿ ಭಾನುವಾರ ಬರುತ್ತಿದ್ದ ‘ಅಬ್ಸರ್ವರ್’ ಎಂಬ ವಾರ ಪತ್ರಿಕೆಯಿಂದ. ಈ ಪತ್ರಿಕೆಯಲ್ಲಿ ಒಂದು ಸ್ವಾರಸ್ಯಕರ ಸಂದರ್ಶನ ಮಾಡಿ ಮೆಹ್ತಾ ಪ್ರಕಟಿಸುತ್ತಾರೆ. ಅದು ಇಸ್ರೇಲ್ ದೇಶದ ಕಾನ್ಸುಲ್ ಜನರಲ್ ‘ಯೂಸಫ್ ಹಸೀನ್’ದು. ಇಲ್ಲೂ ಮೆಹ್ತಾ ಹೆಚ್ಚು ದಿನ ಇರಲಿಲ್ಲ. ನಂತರ ಅವರು ಪ್ರಾರಂಭಿಸಿ ಸಂಪಾದಕರಾಗಿದ್ದು ‘ಇಂಡಿಯನ್ ಪೋಸ್ಟ್’ನಲ್ಲಿ. ಪ್ರತಿ ಪತ್ರಿಕೆ ಪ್ರಾರಂಭಿಸಿದಾಗಲೂ ಅದಕ್ಕೊಂದು ವಿನೂತನ ಸ್ವರೂಪವನ್ನು ಮೆಹ್ತಾ ನೀಡುತ್ತಿದ್ದದ್ದು ಅವರ ವಿವರಣೆಗಳಿಂದಲೇ ತಿಳಿಯುತ್ತದೆ ಆದರೆ ಅದು ಯಶಸ್ವಿಯ ಉತ್ತುಂಗದಲ್ಲಿದ್ದಾಗಲೇ ಅವರ ಸಂಪಾದಕನ ಹುದ್ದೆಗೆ ರಾಜಿನಾಮೆ ಕೊಡುವ ಪರಿಸ್ಥಿತಿ ಉದ್ಭವವಾಗುತ್ತಿದ್ದದ್ದು ವಿಪರ್ಯಾಸ.

ಮೆಹ್ತಾ ಬಹಳ ಅಲ್ಪಾವಧಿ ಸಂಪಾದಕರಾಗಿ ಕೆಲಸ ಮಾಡಿದ ದಾಖಲೆಯಿರುವುದು ‘ಇಂಡಿಪೆಂಡೆಂಟ್’ನಲ್ಲಿ. ಕೇವಲ 29 ದಿನಗಳ ಸಂಪಾದಕರು. ಸುದೀರ್ಘ ಅವಧಿಗೆ ಕೆಲಸ ಮಾಡಿದ ‘ಔಟ್ ಲುಕ್’ ಸೇರುವ ಮೊದಲು ಕಾರ್ಯ ನಿರ್ವಹಿಸಿದ್ದು ‘ದಿ ಪಯನೀರ್’ನಲ್ಲಿ. ಈ ಪತ್ರಿಕೆಯನ್ನು ಬಿಟ್ಟಿದ್ದು 1994ರಲ್ಲಿ. ಇದನ್ನ ಮೆಹ್ತಾ ‘ನನ್ನ ಪಾಲಿನ ದುರಂತದ ವರ್ಷ’ ಎಂದೂ ಹೇಳಿಕೊಳ್ಳುತ್ತಾರೆ. ಪಯನೀರ್‍ನಲ್ಲಿ ಕೆಲವು ಮುಖ್ಯ ಸಂಗತಿಗಳನ್ನು ಪ್ರಸ್ತಾಪ ಮಾಡುವುದಿದ್ದರೆ ಅದು ಡಿಸೆಂಬರ್ 6 1992ರಂದು ಬಾಬ್ರಿ ಮಸೀದಿ ಧ್ವಂಸ ಕುರಿತಂತೆ ಪ್ರಧಾನಮಂತ್ರಿಯವರ ದಿವ್ಯ ನಿರ್ಲಕ್ಷ್ಯವನ್ನು ಟೀಕೆ ಮಾಡಿ ಬರೆದ ಮುಖಪುಟ ಸಂಪಾದಕೀಯ. ಮೆಹ್ತಾ ತನ್ನ ಪತ್ರಿಕೆಯ ಓದುಗರಿಗೆ “ದೇಶಾದ್ಯಂತ ಹಿಂಸೆ ರಕ್ತಪಾತ ನಡೆಯುತ್ತಿರುವ ಹೊತ್ತಲ್ಲಿ ‘ಏನೂ ಆಗಿಲ್ಲ, ದೇಶದ ಆತ್ಮ ಶಾಂತವಾಗಿದೆ’ ಎಂದು ನಂಬುವ ವ್ಯಕ್ತಿಯನ್ನು ಪ್ರಧಾನಿಯನ್ನಾಗಿ ಪಡೆದ ದೇಶದ ಹಣೆಬರಹದ ಬಗ್ಗೆ ಒಂದಿಷ್ಟು ಯೋಚಿಸಿ” ಎಂದು ಬರೆಯುತ್ತಾರೆ. ಮತ್ತೊಂದು ಮುಖ್ಯ ಸಂಗತಿ. 1992ರಲ್ಲಿ ಭೂಸೇನಾ ಮುಖ್ಯಸ್ಥರಾಗಿದ್ದ ಎಸ್ ಎಫ್ ರಾಡ್ರಿಗ್ಸ್‍ರ ಸಂದರ್ಶನ. ಈ ಸಂದರ್ಶನದಲ್ಲಿ ರಾಡ್ರಿಗ್ಸ್ ಭಾರತದ ರಾಜಕಾರಣಿಗಳನ್ನು ‘ಹೆಗ್ಗಣಗಳು’ ಎಂದು ಕರೆಯುತ್ತಾರೆ. ಈ ಸಂದರ್ಶನ ಪ್ರಕಟಣೆ, ಮಾಲೀಕ ಥಾಪರ್ ಮತ್ತು ಮೆಹ್ತಾ ನಡುವೆ ಮನಸ್ತಾಪಕ್ಕೆ ಕಾರಣವಾಗಿ ಮೆಹ್ತಾ ರಾಜೀನಾಮೆ ನೀಡುತ್ತಾರೆ.

ಔಟ್‍ಲುಕ್’ ಪತ್ರಿಕೆಯಲ್ಲಿನ ಮೆಹ್ತಾರ ಅನುಭವಗಳು ಕೇವಲ ಅವರ ಸಂಗತಿಗಳನ್ನು ತಿಳಿಯಲಷ್ಟೇ ವಿಶೇಷವಾದುದ್ದಲ್ಲ, ಸುಮಾರು ಒಂದೂವರೆ ದಶಕಗಳ ರಾಷ್ಟ್ರ ರಾಜಕಾರಣವನ್ನು ತಿಳಿಯುವ ದೃಷ್ಟಿಯಿಂದಲೂ ವಿಶೇಷ ಜೊತೆಗೆ ಮಹತ್ವದ್ದೂ ಹೌದು. ಈ ಅವಧಿಯಲ್ಲಿ ಪ್ರಕಟಗೊಂಡ ವರದಿಗಳು ‘ಮೈಲಿಗಲ್ಲಾ’ಗಿ ಉಳಿದಿವೆ. ಕೆಲವನ್ನು ಪ್ರಸ್ತಾಪ ಮಾಡುವುದಾದರೆ, ಕಾಶ್ಮೀರದಲ್ಲಿ ‘ಮೋಡ್’ ಖಾಸಗಿ ಏಜನ್ಸಿಯ ಸಹಾಯದಿಂದ ‘ಓಪಿನಿಯನ್ ಪೋಲ್’ ಮಾಡಿದ್ದು. ಕಾಶ್ಮೀರದ ನಾಗರಿಕರು ಭಾರತ ಸೇರಲು ಬಯಸುತ್ತಾರೋ ಪಾಕಿಸ್ತಾನ ಸೇರಲು ಬಯಸುತ್ತಾರೋ ಅಥವಾ ಸ್ವತಂತ್ರರಾಗಿರಲು ಬಯಸುತ್ತಾರೋ ಎಂಬುದು ಅದರ ಉದ್ದೇಶ. ಶೇಕಡ 80 ಮಂದಿ ಸ್ವತಂತ್ರರಾಗಿರಲು ಬಯಸುವುದರ ಜೊತೆಗೆ ಕಾಶ್ಮೀರದಲ್ಲಿ ಭಾರತೀಯ ಸೇನೆ ನಡೆಸುತ್ತಿದ್ದ ಹಿಂಸೆಯನ್ನು ತಕ್ಷಣ ನಿಲ್ಲಿಸಬೇಕು ಎಂಬುದು ಅವರ ಆಗ್ರಹ ಆಗಿತ್ತು. ಆಗಿನ ಪ್ರಧಾನ ಮಂತ್ರಿ ಪಿ.ವಿ.ನರಸಿಂಹರಾವ್ ಅವರ ಅಪ್ರಕಟಿತ ಕಾದಂಬರಿಯ ಬಗ್ಗೆ ವರದಿ ಮಾಡಿದ್ದು ಕೂಡ ಬಹಳ ಸ್ವಾರಸ್ಯಕರ ಮತ್ತು ತಮಾಷೆಯಾಗಿದೆ. ಈ ವರದಿ ಪ್ರಧಾನಿಗಳಿಗೆ ಇರಿಸುಮುರಿಸು ಮಾಡಿದ್ದು ನಿಜ.

‘ಕ್ರಿಕೆಟ್’ ಭಾರತಕ್ಕೆ ಕೇವಲ ಒಂದು ಕ್ರೀಡೆಯಲ್ಲ ಅದೊಂದು ಧರ್ಮ. ಮೆಹ್ತಾರ ಅಭಿಪ್ರಾಯವೇ ಬಹುಸಂಖ್ಯಾತರದು ಹೌದು. ಆದರೆ ‘ಔಟ್‍ಲುಕ್’ ಕ್ರಿಕೆಟ್ ಮ್ಯಾಚ್ ಫಿಕ್ಸಿಗ್ ಬಗ್ಗೆ ನಡೆಸಿದ ಕಾರ್ಯಾಚರಣೆ, ಮಾಡಿದ ವರದಿ ಮಾತ್ರ ದೇಶವನ್ನೇ ದಿಗ್ಭ್ರಮೆಗೊಳಿಸಿತ್ತು. ಕ್ರಿಕೆಟ್‍ನ ದೇವರು ಎಂದು ಆರಾಧಿಸುವ ಅಭಿಮಾನಿಗಳೆಲ್ಲಾ ಕನಿಷ್ಟ ಮೆಹ್ತಾ ಆತ್ಮಚರಿತ್ರೆಯ ಈ ಭಾಗವನ್ನಾದರೂ ಓದಲೇಬೇಕು. ಕೆಲವು ಆಟಗಾರರ ಮೇಲೆ ಪರಮ ಅಸಹ್ಯ ಬರುವಷ್ಟು ಅವರು ಬೆತ್ತಲಾಗಿದ್ದಾರೆ. ಆದರೆ ಶಿಕ್ಷೆಯಾಗಿದ್ದು ಮಾತ್ರ ಕೆಲವರಿಗೆ ಮಾತ್ರ. ಅಲ್ಲೂ ಧರ್ಮ ಕೆಲಸ ಮಾಡಿದ್ದು ವಿಪರ್ಯಾಸ. ಮತ್ತೊಂದು ವಾಜಪೇಯಿ ಪ್ರಧಾನಿ ಆಗಿದ್ದಾಗ ನಡೆದ ‘ಪೊಖ್ರಾನ್ ಪರೀಕ್ಷೆ’ ಬಗೆಗಿನ ಮೆಹ್ತಾರ ದೀರ್ಘ ಸಂಪಾದಕೀಯ ‘How a tired PM became a bold PM’ ಮತ್ತು ಅದಕ್ಕೆ ಸಂಬಂಧಿಸಿದಂತೆ ಅರುಂಧತಿ ರಾಯ್ ಬರೆದ ಲೇಖನ ‘The End of Imagination’ ಬಹಳ ಮಹತ್ವದಾದವು. ವಾಜಪೇಯಿಯವರ ಸಾಕು ಮಗಳು ಮತ್ತು ಅಳಿಯ ಪ್ರಧಾನ ಮಂತ್ರಿ ಕಚೇರಿ ದುರುಪಯೋಗದ ಸಂಗತಿಗಳನ್ನೆಲ್ಲಾ ಬಹಳ ವಿಸ್ತಾರವಾಗಿ ಮೆಹ್ತಾ ತಮ್ಮ ಆತ್ಮಚರಿತ್ರೆಯಲ್ಲಿ ಬರೆಯುತ್ತಾರೆ. ಇವುಗಳು ವಾಜಪೇಯಿ ಅವರನ್ನು ತಕ್ಕಷ್ಟು ಅರ್ಥಮಾಡಿಕೊಳ್ಳಲು ಸಹಕಾರಿಯಾಗಿದೆ. ವಾಜಪೇಯಿ ಬರೆದ ಕವನಕ್ಕೆ ವಿಮರ್ಶೆ ಬರೆಯಲು ಕೋರಿದ ಸಂಗತಿ ಓದಿದಾಗಲಂತೂ ನಕ್ಕು ನಕ್ಕು ಉರುಳಾಡಿದ್ದೇನೆ. ಅದು ಸ್ವಲ್ಪ ದೀರ್ಘವಾಗಿದೆ ಅದನ್ನ ಪುಸ್ತಕದಲ್ಲೇ ಓದಬೇಕು.

2002ರ ಗುಜರಾತ್ ಗಲಭೆಯಲ್ಲಿ ‘ಔಟ್‍ಲುಕ್’ ಮಾಡಿದ ವರದಿ ಪ್ರಮುಖವಾದದ್ದು. ಆಗಿನ ಗುಜರಾತ್ ಮುಖ್ಯಮಂತ್ರಿ ಗಲಭೆಗೆ ಪ್ರಚೋದನಾಕಾರಿ ಹೇಳಿಕೆ ನೀಡಿದ್ದಾರೆಂದು ಮಾಡಿದ ವರದಿಗೆ ಈಗಲೂ ಕೋರ್ಟಿನಲ್ಲಿ ಪ್ರಕರಣ ಇರುವುದನ್ನ ಮೆಹ್ತಾ ನೆನೆಯುತ್ತಾರೆ. ಆದರೆ ಆನಂತರದ ಮೆಹ್ತಾರ ವಿವರಣೆ ಗಾಬರಿ ಬೀಳಿಸುವಂತದ್ದು. ಈ ರೀತಿಯ ಹೇಳಿಕೆ ನೀಡಿದ್ದಾರೆಂಬುದಕ್ಕೆ ನೇರ ಸಾಕ್ಷಿಗಳೆಲ್ಲಾ ಕಾಲಕ್ರಮೇಣ ಅನುಮಾನಾಸ್ಪದವಾಗಿ ಸಾವಿಗೀಡಾಗುತ್ತಾರೆ. 2010ರ 2ಜಿ ಸ್ಕ್ಯಾಂ ಮತ್ತು ಅದಕ್ಕೆ ಸಂಬಂಧಿಸಿದಂತೆ ಬಂದ ರಾಡಿಯಾ ಟೇಪ್ ಪ್ರಕರಣ ಮಾತ್ರ ಅದುವರೆಗಿನ ಭ್ರಷ್ಟಾಚಾರ ಪ್ರಕರಣಗಳಲ್ಲೇ ರಾಜಕಾರಣಿಗಳ ಲಜ್ಜೆಗೇಡಿತನವನ್ನ ಬಟಾಬಯಲು ಮಾಡಿದ ವರದಿಗಳು ಮೆಹ್ತಾರ ಔಟ್‍ಲುಕ್‍ನಲ್ಲಿ ಪ್ರಕಟಗೊಳ್ಳುತ್ತವೆ.

ಕಡೆಯ ಎರಡು ಅಧ್ಯಾಯಗಳ ಬಗ್ಗೆ ನಾನು ಇಲ್ಲಿ ಹೆಚ್ಚು ಹೇಳುವುದಿಲ್ಲ. ಅವರು ಮಾಡಿದ ಇಬ್ಬರೂ ವ್ಯಕ್ತಿ ಚಿತ್ರದ ಬಗ್ಗೆ ಮಾತ್ರ ಇಲ್ಲಿ ಪ್ರಸ್ತಾಪ ಮಾಡುತ್ತೇನೆ. ಒಂದು ಮೆಹ್ತಾರ ಸಾಕು ನಾಯಿ ಮತ್ತು ಸೋನಿಯಗಾಂಧಿ. ಮೆಹ್ತಾ ತಮ್ಮ ಸಾಕು ನಾಯಿಗೆ ‘ಎಡಿಟರ್’ ಎಂದು ನಾಮಕರಣ ಮಾಡುತ್ತಾರೆ. ಇದು ನನಗೆ ಬಹಳ ವಿಶೇಷ ಎನಿಸಿತು. ಅದು ಬಹಳ ಅವಿಧೇಯ ನಾಯಿ. ‘ಎಡಿಟರ್’ನ ಈ ಸ್ವಭಾವ ನನಗೆ ಬಹಳ ಇಷ್ಟ ಎಂದೂ ಹೇಳಿಕೊಳ್ಳುತ್ತಾರೆ. ಮತ್ತೊಂದು ಸೋನಿಯಾ ಗಾಂಧಿ ಹತ್ತಿರ ಯಾವ ನಿರೀಕ್ಷೆ, ಹತ್ತಿರದ ಸಂಬಂಧ ಏನೂ ಇಲ್ಲದಿದ್ದರೂ ಮೆಹ್ತಾ ಸೋನಿಯಾ ಬಗ್ಗೆ ಬಹಳ ಅಭಿಮಾನವನ್ನು ಹೊಂದಿರುತ್ತಾರೆ.

ಮೆಹ್ತಾರ ಕೆಲವು ನಿಲುವುಗಳು ಮತ್ತು ಅಭಿಪ್ರಾಯಗಳ ಬಗ್ಗೆ ನನಗೆ ಕೆಲವು ಪ್ರಶ್ನೆಗಳಿವೆ. 1. ಅವರು ಮಹಿಳೆಯರ ಬಗ್ಗೆ ಯಾವ ನಿಲುವನ್ನು ಹೊಂದಿದ್ದರು ಎಂಬುದು. 2. ಮೆಹ್ತಾರಿಗೆ ಪ್ರಾದೇಶಿಕ ಭಾಷಾ ಪತ್ರಿಕೆಗಳ ಬಗ್ಗೆ ಯಾವ ಅಭಿಪ್ರಾಯವಿತ್ತು? ದೇಶದ ಬಹುಪಾಲು ಜನರನ್ನು ಅದರಲ್ಲೂ ಸಾಮಾನ್ಯರನ್ನು ತಲುಪುತ್ತಿದ್ದ ಇಂತಹ ಪತ್ರಿಕೆಗಳ ಬಗ್ಗೆ ಇವರ ಆತ್ಮಚರಿತ್ರೆಯಲ್ಲಿ ಎಲ್ಲೂ ಪ್ರಸ್ತಾಪ ಇಲ್ಲ. ಇನ್ನು ರಾಷ್ಟ್ರ ರಾಜಕಾರಣದ ಬಗ್ಗೆ ಸಾಕಷ್ಟು ತಿಳಿವಳಿಕೆ ಒಳನೋಟಗಳು ಮೆಹ್ತಾರಿಗೆ ಇದ್ದವು ಎಂಬುದು ಅವರ ಬರವಣಿಗೆಯಲ್ಲೆ ತಿಳಿಯುತ್ತದೆ. ಆದರೆ ರಾಜ್ಯ ರಾಜಕಾರಣದ ಬಗ್ಗೆಯೂ ಪ್ರಸ್ತಾಪವೇ ಇಲ್ಲ(ಗುಜರಾತ್ ಹೊರತುಪಡಿಸಿ, ಅದು ಕೂಡ ರಾಷ್ಟ್ರಮಟ್ಟದ ವಿಷಯವಾದಾಗ). ಸುಮಾರು ಮೂರು ಬಾರಿ ಮೆಹ್ತಾರ ‘ಔಟ್ ಲುಕ್’ ಮಾಡಿದ ಚುನಾವಣಾ ಪೂರ್ವ ಸಮೀಕ್ಷೆ ಉಲ್ಟ ಹೊಡೆದದ್ದು ಇದೇ ಕಾರಣಕ್ಕಿರಬಹುದಾ? 3. ದಕ್ಷಿಣ ರಾಜ್ಯ ಮತ್ತು ಪತ್ರ್ರಿಕೆಗಳ ಬಗ್ಗೆ ಏನೂ ಇಲ್ಲ. ಹಿಂದೂ ಪತ್ರಿಕೆ ಬಗ್ಗೆ ಒಂದೆರಡು ಕಡೆ ಉಲ್ಲೇಖ ಬಿಟ್ಟರೇ ಮತ್ತೇನು ಇಲ್ಲ.

ಅನುವಾದದ ಕುರಿತು: ವಿನೋದ್ ಮೆಹ್ತಾರ ಆತ್ಮಚರಿತ್ರೆಯ ಕನ್ನಡ ಅನುವಾದ ‘ಲಖನೌ ಹುಡುಗ’ದ ಓದು ನನಗೆ ವಿಶೇಷವಾದ ಅನುಭೂತಿಯನ್ನು ನೀಡಿದೆ. ಇದು ಅನುವಾದ ಕೃತಿ ಎಂದು ಬುದ್ಧಿಗೆ ಗೊತ್ತಿದ್ದರೂ ಓದುವಾಗ ಮಾತ್ರ ಮನಸ್ಸಿಗೆ ಕನ್ನಡದ್ದೇ ಈ ಕೃತಿ ಎಂಬ ಅನುಭವವನ್ನು ಕೊಟ್ಟಿದ್ದಂತೂ ಸತ್ಯ. ಇಷ್ಟರ ಮಟ್ಟಿಗೆ ಇದು ಅನುವಾದಗೊಂಡಿದೆಯೆಂದರೆ ಅನುವಾದಕರಾದ ಸತೀಶ್‌ ಜಿ.ಟಿ ಮತ್ತು ಶಶಿ ಸಂಪಳ್ಳಿಯವರಿಗೆ ಈ ಕೃತಿ ಸುಮಾರು ವರ್ಷಗಳ ಕಾಲ ‘ಆತ್ಮ ಸಂಗಾತಿ’ ಆಗಿರಬೇಕು. ಹಾಗಿದ್ದಾಗ ಮಾತ್ರ ಇಂತಹ ಅನುವಾದ ಸಾಧ್ಯವಾಗಬಹುದೇನೋ!.

ಶಶಿ ಸಂಪಳ್ಳಿ
ಸತೀಶ್‌ ಜಿ.ಟಿ

ಪ್ರಕಾಶನ: ಲೇಖಕ ಮತ್ತು ಪ್ರಕಾಶನ ಜೀವಂತವಾಗಿದೆ ಎಂದು ಭಾವಿಸುವುದು, ಅವರು ಸಮಕಾಲಿನ ತಲ್ಲಣಗಳಿಗೆ ಸ್ಪಂದಿಸಿದಾಗ ಮಾತ್ರ. ಅದರಲ್ಲೂ ಪ್ರಕಾಶನದ ಜವಾಬ್ದಾರಿ ಹೆಚ್ಚು. ಅವರು ಹೊಸ ತಲೆಮಾರಿನ ಆಲೋಚನೆಗಳನ್ನು ಸಮುದಾಯಕ್ಕೆ ತಿಳಿಸಬೇಕಾಗಿದೆ. ಅದನ್ನು ‘ಅಹರ್ನಿಶಿ’ ಪ್ರಕಾಶನ ಮಾಡುತ್ತಿದೆ. ಬಲಿತ ಮತ್ತು ಹಿರಿಯ ಲೇಖಕರು ಮತ್ತು ಪ್ರಕಾಶಕರು ಇದನ್ನು ಮಾಡಿದರೆ ನಮ್ಮಂತ ಯುವ ಸಮುದಾಯ ಎಚ್ಚೆತ್ತುಕೊಳ್ಳಲು ಸಹಕಾರಿಯಾಗುತ್ತದೆ. ಆ ಆಶಯ ಕೂಡ ಜೀವಂತವಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಂಡ್ಯ | ಹೆಣ್ಣು ಭ್ರೂಣ ಹತ್ಯೆ ಪ್ರಕರಣ : ಮತ್ತೆ ಮೂವರ ಬಂಧನ

0
ಮಂಡ್ಯ ಜಿಲ್ಲೆಯ ಪಾಂಡವಪುರ, ಬೆಳ್ಳೂರು, ಮೇಲುಕೋಟೆ ಪೊಲೀಸ್ ಠಾಣೆಗಳಲ್ಲಿ ದಾಖಲಾದ ಭ್ರೂಣ ಪತ್ತೆ ಮತ್ತು ಹೆಣ್ಣು ಭ್ರೂಣ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ. ರಾಮಕೃಷ್ಣ ಅಲಿಯಾಸ್...