Homeಮುಖಪುಟವಸೂಲಾಗದ ಬ್ಯಾಂಕ್ ಸಾಲಗಳು ಮತ್ತು ಬ್ಯಾಡ್ ಬ್ಯಾಂಕ್

ವಸೂಲಾಗದ ಬ್ಯಾಂಕ್ ಸಾಲಗಳು ಮತ್ತು ಬ್ಯಾಡ್ ಬ್ಯಾಂಕ್

- Advertisement -
- Advertisement -

“ಸಜ್ಜನರ ಸಂಗವದು ಹೆಜ್ಜೇನು ಸವಿದಂತೆ, ದುರ್ಜನರ ಸಂಗವದು ಬಚ್ಚಲಿನ ರೊಜ್ಜಿನಂತಿಕ್ಕು”, ಎನ್ನುವುದು ಸರ್ವಜ್ಞ ಕವಿಯ ಮಾತು. ಆದರೆ, ಜನರ ಸಂಗವ ಮಾಡದೆಯೇ ಸಜ್ಜನರಾರು, ದುರ್ಜನರಾರು ಎಂಬುದು ಅರಿವಿಗೆ ಬರುವುದು ಕಷ್ಟ. ನೋಡಲು ಸಜ್ಜನರಂತೆ ಕಂಡರೂ ಒಳಗೆ ವಂಚಕರಾಗಿರಬಹುದು ಅಥವಾ ಹೊರನೋಟಕ್ಕೆ ಕೆಟ್ಟವರಿರಬಹುದೆಂದೆನಿಸಿದರೂ ಒಳಗೆ ಸಜ್ಜನರಾಗಿರಬಹುದು. ಕಂಡ ಜನರನ್ನು ಅರಿಯುವುದು ನಮ್ಮನಮ್ಮ ಅನುಭವ ಮತ್ತು ತಿಳಿವಳಿಕೆಗೆ ಬಿಟ್ಟದ್ದು. ಅಷ್ಟಕ್ಕೂ ಇನ್ನೊಬ್ಬರ ಸಂಗ, ಸಹವಾಸಗಳನ್ನು ಮಾಡುವುದು ಸಹಜ ಸಾಮಾಜಿಕ ಸಂಬಂಧಗಳ ಹರವಿನ ಗುಣ ಮತ್ತು ಸಾಂದರ್ಭಿಕ ಅಗತ್ಯ. ಎಲ್ಲಾ ಕಾಲಕ್ಕೂ, ಎಲ್ಲ ಸಂದರ್ಭಗಳಲ್ಲೂ ನಮ್ಮ ಸಂಪರ್ಕಕ್ಕೆ ಬರುವ ಎಲ್ಲ ಜನರನ್ನು ಒಳ್ಳೆಯವರೋ, ಕೆಟ್ಟವರೋ ಎಂದು ತೂಗಿ ನೋಡಿ ಮಾತನಾಡುವುದಾಗಲೀ, ಸಂಬಂಧ-ಸಂಪರ್ಕವಿಟ್ಟುಕೊಳ್ಳುವುದಾಗಲೀ ಸಾಧ್ಯವೂ ಇಲ್ಲ, ಸಾಧುವೂ ಅಲ್ಲ. ಪರಸ್ಪರ ನಂಬಿಕೆಯಿಲ್ಲದೆ ಯಾವ ಕೆಲಸಗಳೂ ಆಗುವುದಿಲ್ಲ ಮತ್ತು ಯಾವ ಸಂಬಂಧಗಳೂ ಏರ್ಪಡುವುದಿಲ್ಲ.

ಹಾಗೆಯೇ, ಸಾಲ ಕೊಡುವ ಮತ್ತು ಪಡೆಯುವ ಹಣಕಾಸಿನ ಸಂಬಂಧಗಳು ಏರ್ಪಡುವಾಗಲೂ ಕೂಡ. ಪಡೆಯುವವನ ನಿಷ್ಠೆಯೇ ಕೊಡುವವನ ನಂಬಿಕೆ. ನಮ್ಮ ಅಳಿವು-ಉಳಿವು, ಪ್ರಗತಿ-ವಿಗತಿಗಳು ಇಂಥ ನಂಬಿಕೆಯ ಮೇಲೆಯೇ ನಿಂತಿವೆ. ಯಾವುದೇ ವ್ಯಕ್ತಿ, ಕುಟುಂಬ ಅಥವಾ ದೇಶದ ಪ್ರಗತಿ ನಮ್ಮ ಒಟ್ಟು ಸಂಬಂಧಗಳಲ್ಲಿ ಒಂದಾದ ಹಣಕಾಸು ವ್ಯವಹಾರಗಳನ್ನ ಆಧರಿಸಿದೆ. ಈ ವ್ಯವಹಾರಗಳನ್ನು ಮಾಡುವ ಇವತ್ತಿನ ನಮ್ಮ ಸಾಂಸ್ಥಿಕ ವ್ಯವಸ್ಥೆಯ ಬಹುಮುಖ್ಯ ಅಂಗಗಳೇ ಬ್ಯಾಂಕುಗಳು. ಯಾರಲ್ಲಿ ಹೆಚ್ಚುವರಿ ಹಣವಿದೆಯೋ ಅವರಿಂದ ಅದನ್ನು ಠೇವಣಿಯಾಗಿ ಪಡೆದು, ಅಭಿವೃದ್ಧಿ ಕೆಲಸಗಳಿಗೆ ಮತ್ತು ದೈನಿಕ ಖರ್ಚು-ವೆಚ್ಚಗಳಿಗೆ ಅಗತ್ಯವಿರುವವರಿಗೆ ಸಾಲವಾಗಿ ನೀಡುವುದು ಅವುಗಳ ಕೆಲಸ. ನೀಡಿದ ಸಾಲಗಳ ಮೇಲೆ ಪಡೆಯುವ ಬಡ್ಡಿ ಮತ್ತು ಠೇವಣಿಗಳ ಮೇಲೆ ನೀಡುವ ಬಡ್ಡಿಯ ಮೊತ್ತಗಳ ನಡುವಿನ ವ್ಯತ್ಯಾಸದ ಹಣವೇ ಆ ಬ್ಯಾಂಕುಗಳಿಗೆ ಸಿಗುವ ಲಾಭ. ಸಾಲ ಪಡೆದವರು ಅಸಲು ಮತ್ತು ಬಡ್ಡಿ ಹಣವನ್ನು ಒಪ್ಪಿತ ಸಮಯಕ್ಕೆ ಸರಿಯಾಗಿ ಕೊಡಲಿಲ್ಲವೆಂದರೆ, ಠೇವಣಿದಾರರಿಗೆ ಬಡ್ಡಿ ಕೊಡಲು ಸಾಧ್ಯವಿಲ್ಲ ಮತ್ತು ಸಿಬ್ಬಂದಿಗೆ ವೇತನ ಕೊಡಲು ಮತ್ತು ಆಡಳಿತಾತ್ಮಕ ವೆಚ್ಚಗಳನ್ನು ತೂಗಿಸಿಕೊಂಡು ಹೋಗುವುದು ಆಗುವುದಿಲ್ಲ. ಪಡೆದ ಸಾಲವನ್ನು ಎಲ್ಲ ಸಾಲಗಾರರು ಸಮಯಕ್ಕೆ ಸರಿಯಾಗಿ ವಾಪಸ್ಸು ಮಾಡುವುದಾಗಿದ್ದಿದ್ದರೆ ಬಹುಶಃ ‘ವಸೂಲಾತಿ’ ಎನ್ನುವ ಶಬ್ದವೇ ಹುಟ್ಟಿಕೊಳ್ಳುತ್ತಿರಲಿಲ್ಲವೇನೋ. ಅದೇ ಸರ್ವಜ್ಞ ಕವಿಯ ಮಾತಿನಲ್ಲೇ ಹೇಳುವುದಾದರೆ, “ಸಾಲವನು ಕೊಂಬಾಗ ಹಾಲೋಗರವುಂಡಂತೆ, ಸಾಲವನು ಮರಳಿ ಕೊಡುವಾಗ ಕಿಬ್ಬದಿಯ ಕೀಲು ಮುರಿದಂತೆ”. ಇವತ್ತಿನ ದಿನಮಾನಗಳಲ್ಲಿ ಇದನ್ನು ಇನ್ನೊಂದಿಷ್ಟು ಉಬ್ಬಿಸಿ ಹೇಳುವುದಾದರೆ, ಕೆಲವೊಂದು ಜನಗಳಿಗೆ ಸಾಲ ವಾಪಾಸು ಕೊಡದಿರುವುದೇ ಖುಷಿ. ಇಂಥವರನ್ನು ಉದ್ದೇಶಪೂರಕವಾಗಿ ವಾಪಾಸುಕೊಡದಿರುವವರು ಎಂದು ಕರೆಯಲಾಗಿದೆ. ಅಂದರೆ, wilful defaulter ಎಂದು. ಇಂಥವರಿದ್ದಾಗ, ನಿಜಕ್ಕೂ ಕಿಬ್ಬದಿಯ ಕೀಲು ಮುರಿದಂತಾಗುವುದು ಸಾಲಕೊಟ್ಟು ಇಂಗು ತಿಂದು ಮಂಗನಂತಾದವರಿಗಷ್ಟೆ.

ಬ್ಯಾಂಕೇತರ ಸಂಸ್ಥೆಗಳು ಮತ್ತು ವ್ಯಕ್ತಿಗಳು ಕೂಡ ಹಣ ಲೇವಾದೇವಿದಾರರಾಗಿ ಸಾಲ ನೀಡುತ್ತಾರೆ ನಿಜ. ಆದರೆ ಅವರು ಸಾಲ ವಸೂಲಿ ಮಾಡುವ ವಿಧಾನಕ್ಕೂ ಮತ್ತು ಬ್ಯಾಂಕುಗಳ ನಿಯಂತ್ರಣ ಕಾಯಿದೆ-1949 ಪ್ರಕಾರ ಕಾರ್ಯ ನಿರ್ವಹಿಸುವ ಬ್ಯಾಂಕುಗಳಿಗೂ ಹೋಲಿಸುವಂತಿಲ್ಲ. ಬ್ಯಾಂಕುಗಳು ತನ್ನೆಲ್ಲ ಚಟುವಟಿಕೆಗಳನ್ನು ಕಾನೂನಿಗನುಗುಣವಾಗಿಯೇ ಮಾಡಬೇಕಾಗುತ್ತದೆ. ಇಲ್ಲವಾದಲ್ಲಿ, ಅಲ್ಲಿನ ಸಿಬ್ಬಂದಿ ವರ್ಗ ಕರ್ತವ್ಯಲೋಪದ ಅಪರಾಧಗಳಿಗೆ ಮತ್ತು ಕಾನೂನು ಉಲ್ಲಂಘನೆಯ ಶಿಸ್ತು ಕ್ರಮ ಮತ್ತು ಶಿಕ್ಷೆಗಳಿಗೆ ಗುರಿಯಾಗಬೇಕಾಗುತ್ತದೆ. ಇದೇ ಕಾರಣಕ್ಕೆ ಹೆದರಿ, ಕೆಲವೊಮ್ಮೆ ಬ್ಯಾಂಕಿನ ಅಧಿಕಾರಿಗಳು ಸಾಲ ಮಂಜೂರು ಮಾಡಲು ಹಿಂದುಮುಂದು ನೋಡಿ ಸಮಯಕ್ಕೆ ಸರಿಯಾಗಿ ಸಾಲ ಕೊಡಲು ಹಿಂಜರಿಯುವುದೂ ಉಂಟು. ಹಾಗಾಗಿ, ಅವಧಿ ಮೀರಿಯೂ ವಸೂಲಾಗದ ಸಾಲಗಳನ್ನು ನಿರ್ವಹಿಸುವ ಸಲುವಾಗಿ ಭಾರತದ ಕೇಂದ್ರ ಬ್ಯಾಂಕಾದ ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಭಾರತ ಸರ್ಕಾರದ ಆರ್ಥಿಕ ಇಲಾಖೆ ಒಟ್ಟಾಗಿ ನಿಯಮಾವಳಿಗಳನ್ನು ರಚಿಸಿವೆ. ಆ ಪ್ರಕಾರವೇ ಕ್ರಮ ಕೈಗೊಳ್ಳಬೇಕು. ವಸೂಲು ಮಾಡಲು ಎಲ್ಲ ಪ್ರಯತ್ನಗಳನ್ನು ಮಾಡಿಯೂ ವಸೂಲಾಗದ ಸಾಲಗಳನ್ನು ಒಂದು ನಿರ್ದಿಷ್ಟ ಅವಧಿಯ ನಂತರ ಕೆಟ್ಟ ಸಾಲಗಳೆಂದು ಪರಿಗಣಿಸಿ, ವಾರ್ಷಿಕ ಆರ್ಥಿಕ ದಾಖಲೆಗಳಾದ ಲಾಭ-ನಷ್ಟ ತಃಖ್ತೆ ಮತ್ತು ಬ್ಯಾಲೆನ್ಸ್ ಶೀಟ್‌ಗಳಲ್ಲಿ ತೋರಿಸುವ ಪರಿಪಾಠ ಬ್ಯಾಂಕ್ ವಲಯದಲ್ಲಿದೆ. ಮುಂದೊಂದು ದಿನ ಅವು ಶಾಶ್ವತವಾಗಿ ವಸೂಲಾಗುವುದಿಲ್ಲ ಎಂದು ತಿಳಿದು ಬಂದಾಗ ಆಗುವ ನಷ್ಟವನ್ನು ತುಂಬಿಕೊಳ್ಳಲು ವಾರ್ಷಿಕ ಲಾಭಾಂಶದಲ್ಲಿ ಒಂದಷ್ಟು ಮೊತ್ತವನ್ನು ತೆಗೆದಿಟ್ಟು, “ಮುನ್ನೆಚ್ಚರಿಕಾ ಮೀಸಲು ನಿಧಿ”ಯನ್ನು, ಅಂದರೆ “ಪ್ರಾವಿಷನ್ ಫಾರ್ ಬ್ಯಾಡ್ ಡೆಟ್ಸ್” ನಿಧಿಯನ್ನು ಸೃಷ್ಟಿಸಿಕೊಳ್ಳಲಾಗುತ್ತದೆ. ನಿರೀಕ್ಷಿತ ಮೊತ್ತಕ್ಕಿಂತ ಹೆಚ್ಚಿನ ಮಟ್ಟದ ಕೆಟ್ಟ ಸಾಲಗಳು ಸೃಷ್ಟಿಯಾದರೆ ಹೀಗೆ ಕೂಡಿಟ್ಟುಕೊಂಡ ಮೀಸಲು ನಿಧಿ ಕೂಡ ಸಾಕಾಗದೆ ಬ್ಯಾಂಕು ಸಂಕಷ್ಟದ ಸ್ಥಿತಿಗೆ ತಲುಪುತ್ತದೆ.

ಅಲ್ಲಿಗೆ, ಬ್ಯಾಂಕುಗಳ ದುಃಸ್ಥಿತಿಗೆ ಅವು ಕೊಟ್ಟ ಸಾಲಗಳು ಸರಿಯಾಗಿ ಮರುಪಾವತಿಯಾಗದಿರುವುದೇ ಮುಖ್ಯ ಕಾರಣ ಎಂದಾಯಿತು. ಗ್ರಾಹಕರ ನಂಬಿಕೆಯೇ ಬ್ಯಾಂಕುಗಳ ಅಸ್ತಿತ್ವವಾಗಿರುವುದರಿಂದ, ಇಲ್ಲಿ ವ್ಯತ್ಯಯಗಳಾದಾಗ ಠೇವಣಿದಾರರು ಬ್ಯಾಂಕುಗಳ ಮೇಲೆ ವಿಶ್ವಾಸವಿಟ್ಟು ಇಟ್ಟ ಠೇವಣಿ ಮೊತ್ತ ಮತ್ತು ಬಡ್ಡಿಯನ್ನು ಪಾವತಿಸುವುದು ಕಷ್ಟವಾಗುತ್ತದೆ. ಬ್ಯಾಂಕುಗಳ ಬಗೆಗಿನ ಗ್ರಾಹಕರ ನಂಬಿಕೆ ಕುಸಿಯುತ್ತದೆ. ಅಲ್ಲಿಂದ ಆ ಬ್ಯಾಂಕು ಸಂಕಷ್ಟಗಳ ಸುಳಿಗೆ ಸಿಕ್ಕಂತೆಯೇ ಸರಿ. ಏಕೆಂದರೆ, ಸಾಲ ಕೊಡುವಾಗ ಸಾಲ ಭದ್ರತೆಗಾಗಿ ಅಡಮಾನು ಮಾಡಿಕೊಂಡ ಚಿರ-ಚರಾಸ್ಥಿಗಳನ್ನು ಕಾನೂನು ರೀತ್ಯ ವಿಲೇವಾರಿ ಮಾಡಿ ಸಾಲದ ಕಡೆಗೆ ಜಮಾ ಮಾಡಿಕೊಳ್ಳಲು ಬ್ಯಾಂಕುಗಳಿಗೆ ಸಾಕಷ್ಟು ಎಡರುತೊಡರುಗಳು ಎದುರಾಗುವುದು ಸಹಜ. ಹೆಚ್ಚು ಸಮಯವೂ ಬೇಕಾಗಬಹುದು. ಹೀಗೆ ದೇಶದ ಅಭಿವೃದ್ಧಿಗೆ ಪೂರಕವಾದ ಬಹುಮುಖ್ಯ ಹಣಕಾಸು ಸಂಸ್ಥೆಗಳಾದ ಬ್ಯಾಂಕುಗಳಲ್ಲಿ ಕೆಟ್ಟ ಸಾಲಗಳ ಪ್ರಮಾಣ ಹೆಚ್ಚಾದಷ್ಟೂ ಅವು ಅಳಿವಿನ ಅಂಚಿನತ್ತ ವಾಲುತ್ತವೆ. ಇಂಥ ಸಂದರ್ಭಗಳಲ್ಲಿ ಠೇವಣಿದಾರರು ಮತ್ತು ಬ್ಯಾಂಕುಗಳಿಬ್ಬರನ್ನೂ ಸಂಕಷ್ಟದಿಂದ ಪಾರುಮಾಡುವ ಸಾಮಾಜಿಕ ಹೊಣೆಗಾರಿಕೆ ಎಲ್ಲ ದೇಶಗಳಲ್ಲಿ ಆಯಾ ದೇಶದ ಕೇಂದ್ರ ಬ್ಯಾಂಕು ಮತ್ತು ಸರ್ಕಾರಗಳದ್ದಾಗಿದೆ. ಅದರಂತೆ ಭಾರತದಲ್ಲೂ ಕೂಡ ಅದು ಒಕ್ಕೂಟ ಸರ್ಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕುಗಳ ಜಂಟಿ ಹೊಣೆಗಾರಿಕೆಯಾಗಿದೆ. ಈ ಕಾರಣಕ್ಕೆ, ಈ ಎರಡೂ ಸಂಸ್ಥೆಗಳು ಕೂಡಿ ವಿವಿಧ ಕಾಲಘಟ್ಟಗಳಲ್ಲಿ ವಿವಿಧ ಕಾನೂನುಗಳನ್ನು ಮತ್ತು ನಿಯಮಾವಳಿಗಳನ್ನು ರಚಿಸುತ್ತಾ ಬಂದಿವೆ.

ಇಂಥ ನಿಯಮಾವಳಿಗಳ ಜಾರಿಯ ನಿಟ್ಟಿನಲ್ಲಿ ಇತ್ತೀಚಿನ ದಶಕಗಳಲ್ಲಿ ಆಗಿರುವ ಎರಡು ಮುಖ್ಯ ಬೆಳವಣಿಗೆಗಳನ್ನು ಗುರುತಿಸಬಹುದು. ಒಂದು, ಹಣಕಾಸು ವಲಯದ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಸುಧಾರಣೆಗಳನ್ನು ಸೂಚಿಸಲು ನೇಮಕವಾದ ನರಸಿಂಹಂ ಸಮಿತಿ ಮಾಡಿದ ಶಿಫಾರಸ್ಸಿನಂತೆ ಸರಫೇಸಿ ಕಾಯಿದೆ-2002 (SARFAESI- Securitization and Reconstruction of Financial Assets and Enforcement of Securities Interest Act) ರಚಿಸಿ ಜಾರಿಗೊಳಿಸಿರುವುದು; ಇನ್ನೊಂದು, 2021ರ ಮುಂಗಡ ಪತ್ರದಲ್ಲಿ ಪ್ರಸ್ತಾಪಿಸಿ ಜಾರಿಗೆ ತರಲಾಗಿರುವ ‘ಬ್ಯಾಡ್ ಬ್ಯಾಂಕ್’ ಸ್ಥಾಪನೆ. ಈ ಕಾಯಿದೆಯ ಪ್ರಕಾರ ಯಾವೊಬ್ಬ ಸಾಲಗಾರ ತಾನು ಪಡೆದ ಸಾಲಗಳ ಮೇಲಿನ ಬಡ್ಡಿ ಮತ್ತು ಅಸಲಿನ ಕಂತುಗಳನ್ನು ವಾಯಿದೆ ಮೀರಿದ ನಂತರದ 60 ದಿನಗಳ ಒಳಗಾಗಿ ಪಾವತಿಸದಿದ್ದರೆ, ಅಂಥ ಸಾಲವನ್ನು ವರ್ಗೀಕೃತಗೊಳಸಿ “ವಸೂಲಾಗದ ಅಥವಾ ಕಾರ್ಯಶೀಲವಲ್ಲದ ಆಸ್ತಿ”, ಅಂದರೆ “ನಾನ್ ಪರ್ಫಾರ್ಮಿಂಗ್ ಅಸ್ಸೆಟ್” ಎಂದು ಪರಿಗಣಿಸಿ, ಆ ಸಾಲಕ್ಕೆ ಭದ್ರತೆಯಾಗಿ ಕೊಟ್ಟ ಚಿರ-ಸ್ಥಿರ ಆಸ್ತಿಗಳನ್ನು ತನ್ನ ವಶಕ್ಕೆ ಪಡೆಯುವ ಹಕ್ಕನ್ನು ಸಾಲಕೊಟ್ಟ ಬ್ಯಾಂಕು ಹೊಂದುತ್ತದೆ. ಹೀಗೆ ವಶಕ್ಕೆ ಪಡೆದ ಭದ್ರತಾ ಆಸ್ತಿಗಳನ್ನು ಸೂಕ್ತ ರೀತಿಯಲ್ಲಿ ಮಾರಾಟ ಮಾಡಿ ಬಂದ ಮೊತ್ತವನ್ನು ಸಾಲದ ಕಡೆಗೆ ಜಮಾ ಮಾಡಿಕೊಳ್ಳಬಹುದಾಗಿದೆ. ಈ ಪ್ರಕಾರ ಎಲ್ಲವೂ ಸುಗಮವಾಗಿ ನಡೆದರೆ, ಅಂದರೆ ಕೊಟ್ಟ ಸಾಲವೊಂದು ಕೆಟ್ಟಸಾಲವಾಗಿ ಮಾರ್ಪಟ್ಟು, ಅದರ ಮೇಲೆ ಅಡಮಾನಾದ ಆಸ್ತಿಗಳು ಕೂಡಲೇ ಕಾಲಮಿತಿಯಲ್ಲಿ ಮಾರಾಟವಾಗಿ, ಅದರಿಂದ ಬಂದ ಮೊತ್ತ ಸಾಲದ ಕಡೆಗೆ ಜಮಾ ಆದರೆ, ಒಳ್ಳೆಯ ಸಾಲ ಕೆಟ್ಟ ಸಾಲವಾಗಿ ಪರಿವರ್ತನೆಯಾದ ಕನಿಷ್ಟ ಆರು ತಿಂಗಳೊಳಗಾಗಿ ಬ್ಯಾಂಕು ತನ್ನ ಅಸಲು ಮತ್ತು ಬಡ್ಡಿಯನ್ನು ಪಡೆಯಬುಹುದಿತ್ತು.

ಇದನ್ನೂ ಓದಿ: ಈ ಬಿಕ್ಕಟ್ಟು ಅದಾನಿಯದ್ದಲ್ಲ, ಮೋದಾನಿಯದ್ದು

ಆದರೆ, ಬಹಳಷ್ಟು ಕಡೆ ಇರುವ ನಿಜಸ್ಥಿತಿಯೇ ಬೇರೆ. ಯಾವಯಾವುದೋ ಕಾರಣಗಳಿಂದಾಗಿ ಸರ್ಕಾರಿ ವಲಯದ ಬ್ಯಾಂಕುಗಳೂ ಒಳಗೊಂಡಂತೆ, ಕೆಲವು ಖಾಸಗಿ ಬ್ಯಾಂಕುಗಳು ದೊಡ್ದ ಉದ್ದಿಮೆದಾರರಿಗೆ ಕೊಟ್ಟ ದೊಡ್ಡ ಮೊತ್ತದ ಸಾಲಗಳು ಸಮಯಕ್ಕೆ ಸರಿಯಾಗಿ ವಸೂಲಾಗದೆ ಕೆಟ್ಟಸಾಲಗಳಾಗಿ ಪರಿಗಣಿತವಾದವು. ಈ ವಲಯದಲ್ಲಿ ಕೆಲಸ ಮಾಡಿದ ಕೆಲವು ಅನುಭವಿಗಳು ಮತ್ತು ತಜ್ಞರ ಪ್ರಕಾರ, ಅಧ್ಯಯನ ವರದಿಗಳ ಪ್ರಕಾರ, ಸಾಲ ನೀಡಿಕೆಯ ಸಂದರ್ಭಗಳಲ್ಲಿ ಸಂಬಂಧಪಟ್ಟ ಬ್ಯಾಂಕುಗಳ ಕೆಲವು ಅಧಿಕಾರಿಗಳು ತೋರಿರುವ ನಿರ್ಲಕ್ಷ್ಯ ಮತ್ತು ಸಾಲ ಪಡೆದುಕೊಂಡವರು ಮಾಡಿದ ಸಾಲದ ದುರುಪಯೋಗವೇ ಈ ಕೆಟ್ಟಸಾಲಗಳ ಉಲ್ಬಣಕ್ಕೆ ಕಾರಣವೆನ್ನುವುದಾಗಿದೆ. ಇನ್ನುಳಿದ ಕಾರಣಗಳೇನೇ ಇದ್ದರೂ ಕೊಟ್ಟ ಸಾಲ ಮರುಪಾವತಿಯಾಗದಿದ್ದುದಂತೂ ನಿಜ. ಈ ಸಾಲಗಳ ಭದ್ರತೆಗಾಗಿ ಅಡಮಾನು ಮಾಡಿಕೊಂಡ ಆಸ್ತಿಪಾಸ್ತಿಗಳನ್ನು ಜಪ್ತಿಮಾಡಿಕೊಂಡು ಮಾರಾಟಮಾಡುವ ಕೆಲಸ ಸಾಲಕೊಟ್ಟ ಬ್ಯಾಂಕುಗಳಿಗೊಂದು ದೊಡ್ಡ ತಲೆನೋವಾಯಿತು. ಏಕೆಂದರೆ, ‘ಸರಫೇಸಿ ಕಾಯಿದೆ? ಪ್ರಕಾರ ಸಾಲದ ವಿರುದ್ಧ ಅಡಮಾನವಾದ ಆಸ್ತಿಗಳನ್ನು ಮಾರಾಟ ಮಾಡುವ ಹೊಣೆಗಾರಿಕೆ ಸಾಲಕೊಟ್ಟ ಬ್ಯಾಂಕುಗಳ ಹೆಗಲಿಗೆ ಬಿದ್ದದ್ದು. ಕಾನೂನು ರೀತಿಯಲ್ಲಿ ನಿಗದಿತ ವಸೂಲಿ ಪ್ರಕ್ರಿಯೆಗಳನ್ನು ನಿರ್ವಹಿಸಿ, ಆಸ್ತಿ ಮಾರಿ ಹಣ ವಾಪಸ್ಸು ಪಡೆಯುವುದು ಸುಲಭದ ಮಾತೇನಲ್ಲ. ಆ ಕೆಲಸಕ್ಕೆಂದೇ ಕೆಟ್ಟ ಸಾಲಗಳ ಸುಳಿಗೆ ಸಿಕ್ಕ ಬ್ಯಾಂಕುಗಳು ಪ್ರತ್ಯೇಕ ಶಾಖೆಗಳನ್ನು, ಅಂದರೆ Asset Recovery Branchಗಳನ್ನು ತೆರೆದವು. ಕೆಟ್ಟ ಸಾಲಗಳೆಂದು ಪರಿಗಣಿತವಾದ ಸಾಲಗಳಿಗೆ ಸಂಬಂಧಿಸಿದಂತೆ ಪಡೆದ ಭದ್ರತಾ ಆಸ್ತಿಗಳನ್ನು ತಮ್ಮ ವಶಕ್ಕೆ ಪಡೆದು, ವಿಲೇವಾರಿ ಮಾಡಿ, ಸಾಲದ ಖಾತೆಗೆ ಜಮಾ ಮಾಡುವುದು ಈ ಶಾಖೆಗಳ ಸಂಪೂರ್ಣ ಜವಾಬ್ದಾರಿಯಾಯಿತು.

ಬರುಬರುತ್ತಾ, ಈ ಜವಾಬ್ದಾರಿಯಾದರೂ ನಿಭಾಯಿಸಲು ಕಡುಕಷ್ಟವಾದ ಮತ್ತು ಹೆಸರಿಗೆ ಕಳಂಕ ತರುವಂತಹ ಸ್ಥಿತಿ ತಂತು. ಅಡಮಾನು ಮಾಡಿಕೊಂಡ ಆಸ್ತಿಗಳನ್ನು ಮಾರಾಟ ಮಾಡಲು ಮುಂದಾದಾಗ, ಅವುಗಳನ್ನು ಕೊಳ್ಳಲು ಕೆಲವೊಮ್ಮೆ ಯಾರೂ ಮುಂದೆ ಬರದಾದರು! ದೊಡ್ಡದೊಡ್ಡ ಪತ್ರಿಕೆಗಳಲ್ಲಿ ಪುಟಗಟ್ಟಲೇ ಜಾಹೀರಾತು ಕೊಟ್ಟರೂ ಕೂಡ! ಇದಕ್ಕೆ ಕಾರಣಗಳನ್ನು ಶೋಧಿಸಿದಾಗ ಕಂಡುಬಂದ ಬಹುಮುಖ್ಯ ಅಂಶಗಳೆಂದರೆ, ಮೊದಲನೆಯದಾಗಿ, ಆ ಆಸ್ತಿಗಳ ಮೇಲೆ ಕೆಲವೊಂದು ಕಾನೂನು ತಕರಾರುಗಳಿರುವುದು ಅಥವಾ ಕೊಂಡ ಮೇಲೆ ಅಂಥ ತಕರಾರುಗಳು ಬರುವ ಸಾಧ್ಯತೆಗಳಿರುವುದು. ಹಣ ಹೂಡಿ ತಕರಾರುಗಳನ್ನು ಅನುಭವಿಸಲು ಯಾರು ತಾನೆ ಮುಂದೆ ಬಂದಾರು? ಎರಡನೆಯದಾಗಿ, ಆ ಆಸ್ತಿಗಳು ತಕ್ಷಣಕ್ಕೆ ಉಪಯೋಗಕ್ಕೆ ಬಾರದೆ ಇರುವ ಸ್ಥಿತಿಯಲ್ಲಿರುವುದು. ಇನ್ನು ಮಾರುಕಟ್ಟೆ ಬೆಲೆಗಿಂತ ಹೆಚ್ಚಿನ ಬೆಲೆ ತೆರಬೇಕಾಗಬಹುದೆನ್ನುವುದು ಕೊನೆಯ ಮಾತು. ಹಾಗಾಗಿ, ಒಂದು ಕಡೆ ಬ್ಯಾಂಕುಗಳ ಬ್ಯಾಲನ್ಸ್ ಶೀಟುಗಳಲ್ಲಿ ಕೆಟ್ಟ ಸಾಲದ ಪ್ರಮಾಣ ಎದ್ದು ಕಾಣತೊಡಗಿದರೆ, ಇನ್ನೊಂದು ಕಡೆ ಆಸ್ತಿ ಮಾರಾಟಕ್ಕಾಗಿ ಅತಿವೆಚ್ಚದ ಜಾಹೀರಾತುಗಳನ್ನು ಕೊಟ್ಟು, ಸಾಲ ಕೊಟ್ಟ ಬ್ಯಾಂಕುಗಳೇ ಅಪಪ್ರಚಾರಕ್ಕೊಳಗಾಗುವಂತಾದುದು. ಜಾಹೀರಾತುಗಳನ್ನು ನೋಡಿದ ಬಹಳಷ್ಟು ಜನ, ಸಾಲ ಹಿಂದಿರುಗಿಸಲು ವಿಫಲರಾದ ಸುಸ್ತಿದಾರರಿಗಿಂತ ಸಾಲಕೊಟ್ಟ ಬ್ಯಾಂಕುಗಳನ್ನೇ ಅನುಮಾನಿಸುವಂತಾಯಿತು. ಯಾರೋ ಕೆಲವರು ಮಾಡಿದ ಲೋಪಗಳಿಗೆ ಇಡೀ ಬ್ಯಾಂಕ್ ವಲಯವೇ ಅಪನಂಬಿಕೆಗೆ ಗುರಿಯಾಗುವ ಗತಿಬಂತು. ಇದರಿಂದ ಪಾರಾಗಲು ಬ್ಯಾಂಕುಗಳು ಕಂಡುಕೊಂಡ, ಭಾರತ ಸರ್ಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ಅನುಮೋದಿತ ಪರಿಹಾರ ಮಾರ್ಗವೆಂದರೆ, ಅಂಥ ಕೆಲವೊಂದು ಆಯ್ದ ಕೆಟ್ಟ ಸಾಲಗಳನ್ನು ಆ ಬ್ಯಾಂಕುಗಳ ‘ಬ್ಯಾಲನ್ಸ್ ಶೀಟ್’ಗಳಿಂದ ಕೈಬಿಡುವ, ಅರ್ಥಾತ್ ‘ರೈಟಾಫ್ (write off)’ ಮಾಡುವ ಪರಿಪಾಠ. ‘ರೈಟಾಫ್’? ಮಾಡುವುದೆಂದರೆ ನಿರ್ಧರಿತ ಕೆಟ್ಟ ಸಾಲವನ್ನು ಮನ್ನಾ ಮಾಡುವುದಲ್ಲ. ಸಾಲ ‘ಮನ್ನಾ’ ಮಾಡಿದಾಗ ಸಾಲಕೊಟ್ಟ ಬ್ಯಾಂಕು ಸಾಲದ ಭದ್ರತೆಗಾಗಿ ಸಾಲಗಾರರಿಂದ ಪಡೆದ ಆಸ್ತಿಪಾಸ್ತಿಗಳ ಮೇಲಿನ ಹಕ್ಕನ್ನು ಕಳೆದುಕೊಳ್ಳುತ್ತದೆ. ಆದರೆ, ‘ರೈಟಾಫ್’? ಮಾಡಿದಾಗ ಕೇವಲ ಬ್ಯಾಲನ್ಸ್ ಶೀಟ್‌ನಲ್ಲಿನ ಕೆಟ್ಟ ಸಾಲದ ಅಂಕಿಗಳು ಇಲ್ಲವಾಗಿ, ನೋಡುಗರಿಗೆ ಬಿಳಿ ಬಟ್ಟೆಯ ಶುಭ್ರ ವಸ್ತ್ರವಾಗಿ ಕಾಣುತ್ತದೆಯೇ ಹೊರತು ಸಾಲ ತೀರಿದಂತಲ್ಲ. ಇದು ಬ್ಯಾಂಕಿಂಗ್‌ಗೆ ಅಂಟಿದ ರೋಗ ಮೇಲ್ನೋಟಕ್ಕೆ ವಾಸಿಯಾದಂತೆ ಕಾಣಬಹುದೇ ಹೊರತು, ಒಳಗೆ ವಾಸಿಯಾದಂತಲ್ಲ. ಸಾಲ ವಸೂಲು ಮಾಡುವ ಜವಾಬ್ದಾರಿ ಒಬ್ಬರಿಂದ ಇನ್ನೊಬ್ಬರಿಗೆ ಹಸ್ತಾಂತರವಾದಂತಷ್ಟೆ. ರೋಗ ವಾಸಿಯಾಗಬೇಕಾದರೆ ಅಡವಿಟ್ಟುಕೊಂಡ ಆಸ್ತಿಗಳು ಸಾಲದ ಮೊತ್ತಕ್ಕೆ ಸಮನಾದ ಪೂರ್ಣ ಬೆಲೆಗೆ ಮಾರಾಟವಾಗಬೇಕು. ಇದನ್ನು ಪ್ರಾಮಾಣಿಕವಾಗಿ, ಶ್ರದ್ಧೆಯಿಂದ ನಿರ್ವಹಿಸುವವರಾರು? ಏಕೆಂದರೆ, ಒಮ್ಮೆ ಬ್ಯಾಲನ್ಸ್ ಶೀಟ್‌ನಿಂದ ಕೆಟ್ಟ ಸಾಲಗಳ ಅಂಕಿ-ಸಂಖ್ಯೆಗಳು ಮಾಯವಾದ ಕೂಡಲೇ, ಆ ಬ್ಯಾಂಕ್ ಸಿಬ್ಬಂದಿಗೆ ಆರಾಮಾದಂತೆನಿಸಿ, ಅಡಮಾನು ಆಸ್ತಿಗಳ ವಿಲೇವಾರಿಗೆ ತಲೆಕೆಡಿಸಿಕೊಳ್ಳದಂತಾದರು. ಇದರ ಗಂಭೀರತೆ ಎಷ್ಟಾಯಿತೆಂದರೆ, ಕಳೆದ ಒಂದೂವರೆ ದಶಕದಲ್ಲಿ ಹೀಗೆ ರೈಟಾಫ್ ಮಾಡಿದ ಸಾಲಗಳ ಮೊತ್ತ ಸುಮಾರು 15 ಲಕ್ಷ ಕೋಟಿ ರೂಪಾಯಿಗಳನ್ನು ಮೀರುವಂತಾಯಿತು! ಯುಪಿಎ ಸರ್ಕಾರವಿದ್ದಾಗಿನಿಂದಲೂ ಆರಂಭವಾದ ಈ ಕ್ರಮ ಇತ್ತೀಚಿನ ಐದಾರು ವರ್ಷಗಳಲ್ಲಿ ಸುಮಾರು 10 ಲಕ್ಷ ಕೋಟಿ ರೂಪಾಯಿಗಳನ್ನು ದಾಟಿದೆ. ಮಾನ್ಯ ವಿತ್ತ ಸಚಿವರು ಲೋಕಸಭೆಯಲ್ಲಿ ದಿನಾಂಕ 28.12.2022ರಂದು ನೀಡಿದ ಮಾಹಿತಿಯ ಪ್ರಕಾರ ಹೀಗೆ ರೈಟಾಫ್ ಮಾಡಿದ ಕೆಟ್ಟ ಸಾಲಗಳ ಆಸ್ತಿಗಳನ್ನು ಮಾರಿದ್ದರಿಂದ ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ ಜಮಾ ಅದ ಮೊತ್ತ ರೂ.1.03 ಟ್ರಿಲಿಯನ್, ಅಂದರೆ ಸುಮಾರು 1.03 ಲಕ್ಷ ಕೋಟಿ ರೂಪಾಯಿಗಳು! ಕೈಬಿಟ್ಟ ಸಾಲಗಳ ಶೇ.10ಕ್ಕಿಂತ ಕಡಿಮೆ. ಒಟ್ಟಿನಲ್ಲಿ, ಕೆಟ್ಟ ಸಾಲವಿದ್ದೂ ಇಲ್ಲದಂತೆ ತೋರಿಸುವ ಈ ವಿಧಾನದಿಂದ ಆದ ಒಟ್ಟು ನಷ್ಟವೆಷ್ಟು ಎನ್ನುವುದು ಖಚಿತವಾಗಿ ಯಾರಿಗೂ ತಿಳಿಯದಾಯಿತು. ನಿಜವಾದ ಉತ್ತರದಾಯಿಗಳ್ಯಾರು ಎನ್ನುವ ಗೊಂದಲ ಸೃಷ್ಟಿಯಾಯಿತು. ಇದಕ್ಕೆ ಪರಿಹಾರ ಕ್ರಮವಾಗಿ ವಿದೇಶೀ ಮೂಲದಿಂದ ಹುಟ್ಟಿಕೊಂಡದ್ದೇ ‘ಬ್ಯಾಡ್ ಬ್ಯಾಂಕ್’ ಕಲ್ಪನೆ. ಇತರೆ ದೇಶಗಳಲ್ಲಿ ಯಶಸ್ವಿಯಾಗಿದೆಯೆನ್ನುವ ಈ ವ್ಯವಸ್ಥೆಯನ್ನು ಭಾರತ ಸರ್ಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್‌ಗಳಿಗೆ ಶಿಫಾರಸು ಮಾಡಿದ್ದು ‘ಭಾರತೀಯ ಬ್ಯಾಂಕುಗಳ ಸಂಘಟನೆ’.

ಕೆಟ್ಟ ಸಾಲಗಳ ಕೆಟ್ಟ ಪರಿಣಾಮಗಳ ಪರಿಹಾರಕ್ಕೊಂದು ಕೆಟ್ಟ ಬ್ಯಾಂಕು ಎನ್ನುವಂತೆ ಧ್ವನಿಸುವ, ಈ ‘ಬ್ಯಾಡ್ ಬ್ಯಾಂಕ್’ ಎನ್ನುವ ಕಲ್ಪನೆಯನ್ನು ಮೊದಲಿಗೆ ಅದ್ಯಾರು ಕೊಟ್ಟರೋ ಏನೋ, ಬೇರೆಬೇರೆ ದೇಶಗಳಲ್ಲಿ ಬೇರೆಬೇರೆ ಹೆಸರುಗಳಲ್ಲಿ ಈ ಬ್ಯಾಂಕುಗಳು ಸ್ಥಾಪನೆಯಾದವು. ಇವುಗಳ ಕೆಲಸವೆಂದರೆ, ಮೊದಲನೆಯದಾಗಿ ವಾಣಿಜ್ಯ ಬ್ಯಾಂಕುಗಳ ಕೆಟ್ಟ ಸಾಲಗಳನ್ನು ಅವುಗಳಿಗೆ ಸಂಬಂಧಿಸಿದ ಅಡಮಾನು ಆಸ್ತಿಗಳೊಂದಿಗೆ ಸಾರಾಸಗಟಾಗಿ ಪಡೆದುಕೊಳ್ಳುವುದು. ಆ ಬ್ಯಾಂಕುಗಳ ತುರ್ತು ನಿರ್ವಹಣಾ ದ್ರವ್ಯತೆಗೆ ಅಗತ್ಯವಾಗಿ ಒಂದಷ್ಟು ನಗದನ್ನು ಕೊಡುವುದು ಅಥವಾ ಆ ಅಸ್ತಿಗಳಿಗೆ ಪರಸ್ಪರ ಒಪ್ಪಿತ ಬೆಲೆಕಟ್ಟಿ ಒಟ್ಟು ಮೊತ್ತವನ್ನು ನೀಡುವುದು; ಮತ್ತೆ ತಾವೇ ಖುದ್ದಾಗಿ ನಿಂತು ಈ ಅಸ್ತಿಗಳನ್ನು ಮಾರಾಟ ಮಾಡಿ ಹಣ ಪಡೆಯುವುದು. ಈ ವಹಿವಾಟಿನಲ್ಲಿ ಲಾಭ-ನಷ್ಟ ಏನೇ ಆದರೂ ಅದು ಅವುಗಳಿಗೇ ಬಿಟ್ಟದ್ದು. ಅಂತೂ ಇದರಿಂದ ಬ್ಯಾಂಕುಗಳಿಗಾಗುವ ಮೊದಲ ಅನುಕೂಲವೆಂದರೆ, ಕೆಟ್ಟ ಸಾಲಗಳೆಂಬ ಕಸವನ್ನು ತಲೆಮೇಲೆಹೊತ್ತು ಅದಕ್ಷತೆಯ ಹಣೆಪಟ್ಟಿ ಕಟ್ಟಿಕೊಂಡು ನಷ್ಟದ ಹಾದಿಯಲ್ಲಿ ಸಾಗುವ ಸ್ಥಿತಿಯಿಂದ ಪಾರಾಗುವುದು. ಮೊದಲಿನಂತೆ ಸಾಲ ನೀಡುವ ಶಕ್ತಿ ಹೊಂದಿ ಆತ್ಮವಿಶ್ವಾಸದಿಂದ ಮುನ್ನಡೆವ ಹೊಸ ಚೈತನ್ಯ ತಂದುಕೊಳ್ಳುವುದು. ಒಂದರ್ಥದಲ್ಲಿ ಹೇಳುವುದಾದರೆ, ಈ ಹೊಸ ವ್ಯವಸ್ಥೆ ಕಸದ ಸೃಷ್ಟಿಗೆ ಕಾರಣರಾದವರ ತಲೆಮೇಲಿನ ಕಸದಬುಟ್ಟಿಯನ್ನು ಇನ್ನೊಬ್ಬನ ಮೇಲೆ ಹೊರಿಸಿ ಅರಾಮಾದಂತೆಯೇ ಹೊರತು ಖಚಿತವಾಗಿ ನಷ್ಟಪರಿಹಾರವಾದಂತಲ್ಲ.

ನಮ್ಮ ದೇಶದಲ್ಲಿ ಈ ಬ್ಯಾಡ್ ಬ್ಯಾಂಕ್ ಮಾದರಿಯಲ್ಲಿ ‘ನ್ಯಾಶನಲ್ ಅಸೆಟ್ ರಿಕನ್‌ಸ್ಟ್ರಕ್ಷನ್ ಕಂಪನಿ ಲಿಮಿಟೆಡ್’ ಎನ್ನುವ ಸಂಸ್ಥೆಯನ್ನು ಸ್ಥಾಪಿಸಲಾಯಿತು. 2021ರ ಮುಂಗಡಪತ್ರದಲ್ಲಿ ಪ್ರಸ್ತಾಪಿಸಲ್ಪಟ್ಟು ಜಾರಿಗೊಂಡ ಈ ಸಂಸ್ಥೆ 6 ಸಾವಿರ ಕೋಟಿ ರೂಪಾಯಿಗಳ ಆರಂಭಿಕ ಬಂಡವಾಳ ಹೊಂದಿದ್ದು, ಇದರಲ್ಲಿ ಸಾರ್ವಜನಿಕ ವಲಯದ ಬ್ಯಾಂಕುಗಳ ಪಾಲು ಶೇ.51. ಇನ್ನುಳಿದದ್ದು ಖಾಸಗಿ ಬ್ಯಾಂಕುಗಳ ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳ ಹೂಡಿಕೆಯಾಗಿರುತ್ತದೆ. ಭಾರತ ಸರ್ಕಾರ 30,600 ಕೋಟಿ ರೂಪಾಯಿಗಳ ಭರವಸೆಯ ನೆರವನ್ನು ಈ ಸಂಸ್ಥೆಗೆ ನೀಡಿದೆ. 2020ರಲ್ಲಿ ಭಾರತದಲ್ಲಿ ವಾಣಿಜ್ಯ ಬ್ಯಾಂಕುಗಳ ಒಟ್ಟು ಕೆಟ್ಟ ಸಾಲ ಒಟ್ಟು ಸಾಲ ನೀಡಿಕೆಯ ಮೊತ್ತದ ಶೇ.8 ಇದೆ ಎನ್ನಲಾಗಿತ್ತು. ಕೋವಿಡ್-19ರ ಕಾರಣಕ್ಕೆ ಆರ್ಥಿಕ ವಲಯದಲ್ಲಾದ ತಲ್ಲಣಗಳಿಂದಾಗಿ, ನಂತರದ ವರ್ಷಗಳಲ್ಲಿ ಇದು ಇನ್ನಷ್ಟು ಹೆಚ್ಚುತ್ತಾ ಬಂದು, ಬರುವ ವರ್ಷದಲ್ಲಿ ಶೇ.14.1 ಆಗಬಹುದೆಂದು ಅಂದಾಜಿಸಲಾಗಿದೆ. ಮುಂಬರುವ ವರ್ಷಗಳಲ್ಲಿ ಬ್ಯಾಂಕಿಂಗ್ ವಲಯದಲ್ಲಿ ದೊಡ್ಡ ಬ್ಯಾಂಕುಗಳನ್ನು ಹೊಂದಿದ್ದು, ಇದರ ಸಲುವಾಗಿ ಆಗಬಹುದಾದ ವಿಲೀನಿಕರಣ ಮತ್ತು ಒಗ್ಗೂಡುವಿಕೆಯಿಂದಾಗಿ ಕೆಟ್ಟ ಸಾಲಗಳ ಪ್ರಮಾಣ ಇನ್ನೂ ದೊಡ್ಡದಾಗಬಹುದೆಂಬ ಮುಂದಾಲೋಚನೆಯಿಂದಲೇ ಈ ಬ್ಯಾಂಕನ್ನು ಅಸ್ತಿತ್ವಕ್ಕೆ ತರಲಾಗಿದೆಯೆನ್ನುವುದು ಹಣಕಾಸು ವಹಿವಾಟು ವಲಯದ ತಜ್ಞರ ಅಭಿಪ್ರಾಯ. ಈಗ ಈ ಕೆಟ್ಟ ಸಾಲಗಳ ಪಟ್ಟಿಯಲ್ಲಿರುವ ದೇಶದ ದೊಡ್ಡ ಅಸ್ತಿ ನಿರ್ಮಾಪಕರ ಸಾಲಿನಲ್ಲಿ ಅದಾನಿ ಕುಟುಂಬ ಮೂಲದ ಕಂಪನಿಗಳ ಸಾಲಗಳು ಸೇರುವ ಸಾಧ್ಯತೆಗಳು ನಮ್ಮ ಕಣ್ಮುಂದಿವೆ. ಒಟ್ಟಿನಲ್ಲಿ, ಈಗ ಬ್ಯಾಡ್ ಬ್ಯಾಂಕ್ ಸ್ಥಾಪನೆ ಬಗೆಗಿನ ಈ ಪ್ರಯತ್ನವನ್ನು ಕುರಿತು ನಿರಾಶೆ ಹೊಂದುವುದಕ್ಕೆ ಮುನ್ನ, ಇದು ಇತರೆ ಯಾವ ದೇಶಗಳಲ್ಲಿ ಯಶಸ್ವಿಯಾಗಿ ಕಾರ್ಯಗತಗೊಂಡಿದೆಯೋ, ಅದೇ ಮಾದರಿಯಲ್ಲಿ ಈ ಬ್ಯಾಂಕಿನ ನಿರ್ವಹಣೆಯಾಗುವಂತೆ ಎಚ್ಚರ ವಹಿಸಬೆಕಾಗಿದೆ. ಏಕೆಂದರೆ, ದಶಕಗಳ ಹಿಂದೆ, ಇದೇ ರೀತಿ ಹತ್ತಿಬಟ್ಟೆ ಉತ್ಪಾದನಾ ವಲಯದಲ್ಲಿನ ರೋಗಗ್ರಸ್ತ ಘಟಕಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡು, ಅವುಗಳಿಗೆ ಮರುಹುಟ್ಟು ಕೊಡಲು ಮುಂದಾದ ‘ನ್ಯಾಷನಲ್ ಟೆಕ್ಸಟೈಲ್ ಕಾರ್ಪೊರೇಶನ್’, ಎಲ್ಲರ ರೋಗವನ್ನು ಮೈಮೇಲೆ ಹೊತ್ತಿಕೊಂಡು ತಾನೇ ರೋಗಿಯಾಗಿಹೋಯಿತು. ಈ ಸ್ಥಿತಿ ಬ್ಯಾಡ್ ಬ್ಯಾಂಕ್ ತತ್ಸಮ ಭಾರತೀಯ ಸಂಸ್ಥೆಗೆ ಬರಬಾರದೆನ್ನುವ ಆಶಯ ಎಲ್ಲರದ್ದಾಗಿದೆ.

ಇದನ್ನೂ ಓದಿ: ಸಂಸದರ ವಾಕ್ ಸ್ವಾತಂತ್ರ್ಯಕ್ಕೂ ಸೆನ್ಸಾರ್!

ಸದ್ಯಕ್ಕೆ ಈ ಹೊಸ ಬ್ಯಾಂಕಿನ ಮುಂದಿರುವ ಸವಾಲುಗಳೆಂದರೆ, ಹೆಚ್ಚುತ್ತಿರುವ ಕೆಟ್ಟ ಸಾಲಗಳ ಮೇಲೆ ಭದ್ರತೆಯಾಗಿ ಅಡಮಾನಾಗಿ ಪಡೆದಿರುವ ಚಿರ-ಚರಾಸ್ತಿಗಳನ್ನು ಲಾಭದಾಯಕವಾದ, ಅಥವಾ ಕೊನೇಪಕ್ಷ ಯಥಾಸ್ಥಿತಿ ಕಾಯ್ದುಕೊಳ್ಳಲು ಸಾಧ್ಯವಾಗಬಹುದಾದಂತಹ ಬೆಲೆಗೆ ಮಾರಾಟ ಮಾಡುವ ಕ್ರಿಯಾ ಯೋಜನೆಯನ್ನು ತಯಾರು ಮಾಡಿಕೊಂಡು ಕಾರ್ಯೋನ್ಮುಖವಾಗುವುದು. ಈ ಹಿಂದೆ, ಬ್ಯಾಂಕು ವ್ಯವಹಾರಗಳಲ್ಲಿ, ವಿಶೇಷವಾಗಿ ಸಾಲ ಮಂಜೂರಾತಿಯಲ್ಲಿ ರಾಜಕೀಯ ಹಸ್ತಕ್ಷೇಪ, ವ್ಯಾಪಕ ಭ್ರಷ್ಟಾಚಾರ, ಸಾಮಾಜಿಕ ಹೊಣೆಗಾರಿಕೆಯಿಲ್ಲದ ಹಣಕಾಸು ವ್ಯವಹಾರ, ಸಾಮಾನ್ಯ ಸಾರ್ವಜನಿಕ ಆಡಳಿತ ಉದ್ದೇಶಕ್ಕಾಗಿ ನೇಮಕಗೊಂಡ ವೃತ್ತಿಪರವಲ್ಲದ ಮತ್ತು ಅಧಿಕಾರಸ್ಥ ರಾಜಕಾರಣಿಗಳನ್ನು ಓಲೈಸುವ ಅಧಿಕಾರಿಗಳನ್ನು ಬ್ಯಾಂಕುಗಳ ಆಡಳಿತಕ್ಕೆ ನಿಯೋಜಿಸುವುದು ಮುಂತಾದ ಕಾರಣಗಳಿಂದಾಗಿಯೇ ಕೆಟ್ಟ ಸಾಲಗಳ ಪ್ರಮಾಣ ಆತಂಕಕಾರಿಯಾಗಿ ಹೆಚ್ಚಿತೆನ್ನುವುದು ಸುಳ್ಳಲ್ಲ. ಈ ಶತಮಾನದ ಆರಂಭದ ದಶಕದ ಮಧ್ಯಭಾಗದಲ್ಲಿ ಸಾಲ ನೀಡುವಾಗ ತೋರಿದ ಅತಿ ಉದಾರತೆ ಕೂಡ ಇವತ್ತಿನ ಕೆಟ್ಟ ಸಾಲಗಳಿಗೆ ಮುಳುವಾಯಿತೆನ್ನುವುದು ಒಂದು ಕಡೆಯಾದರೆ, ಇತ್ತೀಚಿನ ವರ್ಷಗಳಲ್ಲಿ ವಿತರಣೆಯಾಗಿರುವ ಸಾಲಗಳ ಸ್ಥಿತಿ ಇದಕ್ಕಿಂತ ಭಿನ್ನವಿಲ್ಲ ಎನ್ನುವುದನ್ನು ಕಾದು ನೋಡಬೇಕಿದೆ. ಇದನ್ನು ತಪ್ಪಿಸದೇಹೋದರೆ ಬ್ಯಾಂಕಿಂಗ್ ವಲಯದಲ್ಲಿ ಯಾವುದೇ ಪ್ರಗತಿಯನ್ನು ಕಾಣಲು ಸಾಧ್ಯವಿಲ್ಲ. ಇನ್ನು ಖಾಸಗೀಕರಣ ಪರಿಹಾರವಾಗಬಹುದೆಂದು ಭಾವಿಸಿ ಬ್ಯಾಂಕುಗಳ ಖಾಸಗೀಕರಣಕ್ಕೆ ಮುಂದಾದರಂತೂ, ಬೆಂಕಿಯಿಂದ ಬಾಣಲೆಗೆ ಎಂಬ ಸ್ಥಿತಿ ಖಚಿತ. ಇದಕ್ಕೆ ಇತ್ತೀಚೆಗಿನ ‘ಬೆಸ್ಟ್ ಬ್ಯಾಂಕಿ’ನ ವ್ಯವಹಾರಗಳ ನಡೆಯೇ ಬೆಸ್ಟ್ ಎಕ್ಸಾಂಪಲ್ ಎನ್ನಬಹುದು. ‘ಭಾರತೀಯ ಸ್ಟೇಟ್ ಬ್ಯಾಂಕ್’ ಈ ಬ್ಯಾಂಕನ್ನು ತನ್ನ ವಶಕ್ಕೆ ತೆಗೆದುಕೊಳ್ಳದಿದ್ದರೆ, ಅಲ್ಲಿನ ಠೇವಣಿದಾರರ ಸ್ಥಿತಿ ಏನಾಗಿರುತಿತ್ತು ಎನ್ನುವುದನ್ನು ಯಾರಾದರೂ ಊಹಿಸಬಹುದು. ಇನ್ನು ದೇಶದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅದೆಷ್ಟೋ ಸಹಕಾರಿ ಬ್ಯಾಂಕುಗಳಲ್ಲಿ ಗ್ರಾಹಕರು ನಂಬಿಕೆಯಿಂದಿಟ್ಟ ಠೇವಣಿಗಳಿಗೆ ಕುತ್ತು ತಂದಿವೆ. ಇದಕ್ಕೆಲ್ಲಾ ಕಾರಣ ಆರ್ಥಿಕ ಮತ್ತು ಆಡಳಿತಾತ್ಮಕ ವಲಯದಲ್ಲಿ ಕುಸಿಯುತ್ತಿರುವ ವೃತ್ತಿ ಮೌಲ್ಯಗಳೇ ಎನ್ನಬಹುದು. ಜೊತೆಗೆ ಅಪರಾಧಿಗಳಿಗೆ ಕಾಲಮಿತಿಯಲ್ಲಿ ಶಿಕ್ಷೆಯಾಗದೆ ಕಂಡವರ ಗಂಟನ್ನು ಲೂಟಿಹೊಡೆದೂ ರಾಜಾರೋಷವಾಗಿ ಐಷಾರಾಮಿ ಜೀವನ ನಡೆಸುವವರ ಉದಾಹರಣೆ ಕೂಡ ಇದೆ. ಇವುಗಳಿಗೆ ಪರಿಹಾರ ಹೇಗೆ ಎನ್ನುವುದು ನಿಜಕ್ಕೂ ಮಿಲಿಯನ್ ಡಾಲರ್ ಪ್ರಶ್ನೆ. ಅದೇನೇ ಇರಲಿ, ಒಟ್ಟಿನಲ್ಲಿ ಬ್ಯಾಂಕುಗಳ ಅಸ್ತಿತ್ವಕ್ಕೆ ಧಕ್ಕೆ ತರುವಂತಹ ಕೆಟ್ಟ ಸಾಲಗಳ ಸಮಸ್ಯೆ ನಿರ್ವಹಣೆಗಾಗಿ ಸ್ಥಾಪಿಸಲಾಗಿರುವ ‘ಬ್ಯಾಡ್ ಬ್ಯಾಂಕ್’ ಪರಿಕಲ್ಪನೆಯ “ರಾಷ್ಟ್ರೀಯ ಸ್ವತ್ತು ಪುನಾರಚನಾ ಕಂಪನಿ ಲಿಮಿಟೆಡ್” ವೆರಿ ಗುಡ್ ಬ್ಯಾಂಕಾಗಿ ಬೆಳೆಯಲಿ ಎನ್ನುವ ಸದಾಶಯ ಎಲ್ಲರದ್ದು. ಸರ್ವಜ್ಞ ಕವಿ ಆಶಯದ ಸಜ್ಜನರ ಸಂಗ ಎಂದರೆ ಜನಮುಖಿಯಾಗಿರುವ ಸಾಂಸ್ಥಿಕ ಸುವ್ಯವಸ್ಥೆಯೇ ಅಲ್ಲವೇ?

ಡಾ. ಜಿ.ಎನ್. ಮಲ್ಲಿಕಾರ್ಜುನಪ್ಪ

ಡಾ. ಜಿ. ಎನ್. ಮಲ್ಲಿಕಾರ್ಜುನಪ್ಪ
ವಿಶ್ರಾಂತ ಪ್ರಾಧ್ಯಾಪಕರು ಮತ್ತು ಆರ್ಥಿಕ, ಸಾಮಾಜಿಕ ಚಿಂತಕರು, ಚಿತ್ರದುರ್ಗ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರೋಹಿತ್‌ ವೇಮುಲಾ ಪ್ರಕರಣ ಮರುತನಿಖೆ ನಡೆಸುವಂತೆ ತೆಲಂಗಾಣ ಸಿಎಂಗೆ ಭೇಟಿ ಮಾಡಿದ ರಾಧಿಕಾ ವೇಮುಲಾ

0
ಹೈದರಾಬಾದ್ ವಿಶ್ವವಿದ್ಯಾಲಯದ ಪಿಎಚ್‌ಡಿ ವಿದ್ಯಾರ್ಥಿ ರೋಹಿತ್ ವೇಮುಲಾ ಸಾವಿನ ಪ್ರಕರಣದಲ್ಲಿ ತೆಲಂಗಾಣ ಪೊಲೀಸರು ಪ್ರಕರಣದ ಮುಕ್ತಾಯದ ವರದಿಯನ್ನು ಕೋರ್ಟ್‌ಗೆ ಸಲ್ಲಿಸಿದ್ದರು, ಇದೀಗ ಪ್ರಕರಣದ ಮರು ತನಿಖೆ ನಡೆಸುವಂತೆ ರೋಹಿತ್ ವೇಮುಲಾ ತಾಯಿ ರಾಧಿಕಾ...