Homeಕರ್ನಾಟಕಬೆಂಗಳೂರು: ಫೇಸ್‌ಬುಕ್‌ ಗೆಳತಿಯಿಂದ ವಂಚನೆ, 37 ಲಕ್ಷ ರೂ. ಕಳೆದುಕೊಂಡ ಸ್ವಾಮೀಜಿ

ಬೆಂಗಳೂರು: ಫೇಸ್‌ಬುಕ್‌ ಗೆಳತಿಯಿಂದ ವಂಚನೆ, 37 ಲಕ್ಷ ರೂ. ಕಳೆದುಕೊಂಡ ಸ್ವಾಮೀಜಿ

- Advertisement -
- Advertisement -

ಸಾಮಾಜಿಕ ಮಾಧ್ಯಮವಾದ ಫೇಸ್‌ಬುಕ್‌ನಲ್ಲಿ ಪರಿಚಯವಾದ ಯುವತಿಯೊಬ್ಬರು ಕಂಬಾಳು ಮಹಾಸಂಸ್ಥಾನದ ಚನ್ನವೀರ ಶಿವಾಚಾರ್ಯ ಸ್ವಾಮೀಜಿಯವರಿಗೆ 37 ಲಕ್ಷ ರೂಪಾಯಿ ವಂಚಿಸಿರುವುದು ಬೆಳಕಿಗೆ ಬಂದಿದೆ.

ಫೇಸ್‌ಬುಕ್‌ನಲ್ಲಿ ಪರಿಚಯವಾಗಿ, ನಂತರ ವಿಡಿಯೊ ಕಾಲ್‌ಗಳ ಮೂಲಕ ಸಲುಗೆ ತೋರುತ್ತಿದ್ದ ಯುವತಿಯು ಚನ್ನವೀರ ಶಿವಾಚಾರ್ಯ ಸ್ವಾಮೀಜಿಯಿಂದ 37 ಲಕ್ಷ ರೂಪಾಯಿ ಕಸಿದುಕೊಂಡಿರುವ ಸಂಬಂಧ ದಾಬಸ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ಆಗಿದೆ.

“ಚನ್ನವೀರ ಶಿವಾಚಾರ್ಯ ಸ್ವಾಮೀಜಿ ಅವರು ಹಣ ವರ್ಗಾವಣೆ ದಾಖಲೆ ಸಮೇತ ವಂಚನೆ ಬಗ್ಗೆ ದೂರು ನೀಡಿದ್ದಾರೆ. ಆರೋಪಿ ಎನ್ನಲಾದ ಯುವತಿ ವರ್ಷಾ ಹಾಗೂ ಇತರರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ‘ಪ್ರಜಾವಾಣಿ’ ವರದಿ ಮಾಡಿದೆ.

ಏನಿದು ಪ್ರಕರಣ?

ಶಿವಾಚಾರ್ಯ ಸ್ವಾಮೀಜಿಗೆ 2020ರಲ್ಲಿ ವರ್ಷಾ ಎಂಬ ಹೆಸರಿನ ಫೇಸ್‌ಬುಕ್ ಖಾತೆಯಿಂದ ಫ್ರೆಂಡ್ ರಿಕ್ವೆಸ್ಟ್‌ ಬಂದಿತ್ತು. ಅವರನ್ನು ಸ್ವಾಮೀಜಿ ಫ್ರೆಂಡ್ ಮಾಡಿಕೊಂಡಿದ್ದರು. ಅಧ್ಯಾತ್ಮದಲ್ಲಿ ಆಸಕ್ತಿ ಇದೆ ಎನ್ನುತ್ತಾ ಯುವತಿಯು ಸ್ವಾಮೀಜಿಯೊಂದಿಗೆ ಚಾಟ್ ಮಾಡುತ್ತಿದ್ದಳು. ಸ್ವಾಮೀಜಿಯ ಮೊಬೈಲ್ ನಂಬರ್‌ ಪಡೆದು, ತನ್ನ ನಂಬರ್‌ ಕೂಡ ಶೇರ್‌ ಮಾಡಿಕೊಂಡಿದ್ದಳು ಎಂದು ದೂರಿನಲ್ಲಿ ವಿವರಿಸಲಾಗಿದೆ.

“ಮೊಬೈಲ್ ನಂಬರ್ ಪಡೆದ ಬಳಿಕ ವಾಟ್ಸ್‌ಆ್ಯಪ್‌ನಲ್ಲಿ ಚಾಟ್‌ ಕೂಡ ಮಾಡುತ್ತಿದ್ದರು. ತಾನೊಬ್ಬ ಅನಾಥೆ ಎನ್ನುತ್ತಿದ್ದ ವರ್ಷಾ, ವಿಡಿಯೊ ಕಾಲ್‌ ಮಾಡಲಾರಂಭಿಸಿದ್ದಳು. ಹಲವು ಬಾರಿ ವಿಡಿಯೊ ಕರೆ ಮಾಡಿದ್ದ ಯುವತಿ, ಎಂದಿಗೂ ಮುಖ ತೋರಿಸಿರಲಿಲ್ಲ. ಕೈ–ಕಾಲುಗಳನ್ನು ಮಾತ್ರ ತೋರಿಸಿ ಮಾತನಾಡುತ್ತಿದ್ದಳು” ಎಂದೂ ಸ್ವಾಮೀಜಿ ದೂರಿನಲ್ಲಿ ಹೇಳಿದ್ದಾರೆ.

“ಹೋಟೆಲ್ ಮ್ಯಾನೇಜ್‌ಮೆಂಟ್ ಕೋರ್ಸ್ ಮಾಡುತ್ತಿರುವುದಾಗಿ ಹೇಳಿಕೊಂಡು 2 ಲಕ್ಷ ರೂಪಾಯಿ ನನ್ನಿಂದ ಪಡೆದುಕೊಂಡಿದ್ದಳು. ತನ್ನ ಹೆಸರಿನಲ್ಲಿರುವ ಜಮೀನನ್ನು ಮಠದ ಹೆಸರಿಗೆ ಬರೆದುಕೊಡುವುದಾಗಿ ಹೇಳಿ, ಹಂತಹಂತವಾಗಿ ಹೆಚ್ಚುವರಿಯಾಗಿ 35 ಲಕ್ಷ ರೂಪಾಯಿ ವರ್ಗಾವಣೆ ಮಾಡಿಸಿಕೊಂಡಿದ್ದಳು” ಎಂದು ಸ್ವಾಮೀಜಿ ತಿಳಿಸಿದ್ದಾರೆ.

“ಜಮೀನು ದಾಖಲೆ ತರುವ ವೇಳೆ ನನ್ನ ಮೇಲೆ ಹಲ್ಲೆಯಾಗಿದೆ, ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾಖಲಾಗಿದ್ದೇನೆ ಎಂದು ವರ್ಷಾ ಹೇಳಿಕೊಂಡಿದ್ದರು. ಆಸ್ಪತ್ರೆಯ ಬಿಲ್ ಪಾವತಿಗಾಗಿ ಮತ್ತೆ ಹಣದ ಕೋರಿಕೆ ಇಟ್ಟಿದ್ದಳು. ಆನಂತರ ಅನುಮಾನಗೊಂಡು ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ಪರಿಚಯಸ್ಥರೊಬ್ಬರನ್ನು ಕಳಿಸಿ ವಿಚಾರಿಸಿದೆ. ವರ್ಷಾ ಎಂಬವರು ಯಾರೂ ದಾಖಲಾಗಿಲ್ಲ ಎಂದು ತಿಳಿಯಿತು” ಎಂದಿದ್ದಾರೆ ಸ್ವಾಮೀಜಿ.

ಇದನ್ನೂ ಓದಿರಿ: ಚಂಡೀಗಢ: ಬಿಜೆಪಿ ಸಂಸದೆ ಜೊತೆ ವಾಗ್ವಾದ; ಸದನದಿಂದ ಎಎಪಿ ಕೌನ್ಸಿಲರ್‌ಗಳ ಅಮಾನತು

“ವರ್ಷಾ ಸ್ನೇಹಿತೆ ಎನ್ನಲಾದ ಮಂಜುಳಾಗೆ ಕಾಲ್‌ ಮಾಡಿದಾಗ, 55 ಲಕ್ಷ ರೂಪಾಯಿ ಸಾಲ ಮಾಡಿ ವರ್ಷಾರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಕೊಂಡು ಬಂದಿದ್ದೇನೆ ಎಂದು ಹೇಳಿದ್ದರು. ಆಸ್ಪತ್ರೆಗೆ ನೀಡಿರುವ ಹಣವನ್ನು ಸಾಲದ ರೂಪದಲ್ಲಿ ತಂದಿದ್ದು, ಅದನ್ನು ತೀರಿಸಬೇಕು. ನೀವು ಹಣ ನೀಡದಿದ್ದರೆ ವರ್ಷಾ ಜೊತೆಗಿನ ಸಲುಗೆಯ ವಿಷಯವನ್ನು ಎಲ್ಲರಿಗೂ ಹೇಳಿ ಮರ್ಯಾದೆ ತೆಗೆಯುತ್ತೇನೆ ಎಂದು ಬೆದರಿಸಲಾಗಿತ್ತು” ಎಂದು ಸ್ವಾಮೀಜಿ ಹೇಳಿರುವುದಾಗಿ ವರದಿಯಾಗಿದೆ.

ವರ್ಷಾ ಕಡೆಯವರು ಎನ್ನಲಾದ ಮಂಜುಳಾ ಹಾಗೂ ಇತರರು ಮೇ 23ರಂದು ಮಠಕ್ಕೆ ಹೋಗಿ ಗಲಾಟೆ ಮಾಡಿದ್ದರು. 55 ಲಕ್ಷ ರೂಪಾಯಿ ವಾಪಸ್‌ ಕೊಡುವಂತೆ ಸ್ವಾಮೀಜಿಗೆ ಧಮ್ಕಿ ಹಾಕಿದ್ದರು. ಇದಾದ ನಂತರ ಸ್ವಾಮೀಜಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ ಎನ್ನಲಾಗಿದೆ.

ಸ್ವಾಮೀಜಿ ಸುಮಾರು 50 ಲಕ್ಷ ರೂಪಾಯಿವರೆಗೂ ಹಣ ಕಳೆದುಕೊಂಡಿರುವ ಸಾಧ್ಯತೆ ಇದೆ. ವರ್ಷಾ ಮತ್ತು ಮಂಜುಳಾ ನಡುವಿನ ಸಂಬಂಧ ಏನೆಂಬುದು ತನಿಖೆಯಿಂದ ಬಯಲಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಫೇಸ್‌ಬುಕ್‌ ಮೂಲಕ ಪರಿಚಯವಾಗಿ, ಬೆತ್ತಲೆ ವಿಡಿಯೊ ಕಾಲ್ ಮಾಡುವ ಮೂಲಕ ಜನರನ್ನು ವಂಚಿಸುತ್ತಿರುವ ಪ್ರಕರಣಗಳು ಸಾಕಷ್ಟು ವರದಿಯಾಗಿವೆ. ಸ್ವಾಮೀಜಿಯೇ ಇಂತಹದ್ದೊಂದು ಜಾಲಕ್ಕೆ ಸಿಲುಕಿರುವುದು ಹಲವು ಚರ್ಚೆಗೆ ಅವಕಾಶ ನೀಡಿದೆ. ಚನ್ನವೀರ ಶಿವಾಚಾರ್ಯ ಸ್ವಾಮೀಜಿಯವರು ಇಷ್ಟು ಕಾಲ ಎಚ್ಚೆತ್ತುಕೊಳ್ಳದೆ ಇದ್ದದ್ದು ಏಕೆ? 37 ಲಕ್ಷ ರೂಪಾಯಿಯವರೆಗೂ ಅಪರಿಚಿತ ಯುವತಿಗೆ ಹಣ ವರ್ಗಾಯಿಸಿದ್ದು ಹೇಗೆ? ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅಮೇಥಿ ಕಾಂಗ್ರೆಸ್ ಕಚೇರಿ ಮೇಲೆ ದಾಳಿ, ಕಾರ್ಯಕರ್ತನಿಗೆ ಹಲ್ಲೆ: ಬಿಜೆಪಿ ಮುಖಂಡರು ಸೇರಿ 10...

0
ಉತ್ತರ ಪ್ರದೇಶದ ಅಮೇಥಿಯಲ್ಲಿ ಕಾಂಗ್ರೆಸ್ ಪಕ್ಷದ ಕಚೇರಿ ಮೇಲೆ ಭಾನುವಾರ (ಮೇ 5) ಮಧ್ಯರಾತ್ರಿ ಅಪರಿಚಿತ ದುಷ್ಕರ್ಮಿಗಳ ಗುಂಪೊಂದು ದಾಳಿ ಮಾಡಿದೆ. ಪಕ್ಷದ ಕಚೇರಿಯ ಹೊರಗೆ ನಿಲ್ಲಿಸಿದ್ದ ಹಲವು ವಾಹನಗಳನ್ನು ಧ್ವಂಸಗೊಳಿಸಿದ ದುಷ್ಕರ್ಮಿಗಳು,...