Homeಕರ್ನಾಟಕಕುತೂಹಲ ಮೂಡಿಸಿದ ಬಿಜೆಪಿ ಸಂಸದ ಶ್ರೀನಿವಾಸ್ ಪ್ರಸಾದ್-ಸಿಎಂ ಸಿದ್ದರಾಮಯ್ಯ ಭೇಟಿ

ಕುತೂಹಲ ಮೂಡಿಸಿದ ಬಿಜೆಪಿ ಸಂಸದ ಶ್ರೀನಿವಾಸ್ ಪ್ರಸಾದ್-ಸಿಎಂ ಸಿದ್ದರಾಮಯ್ಯ ಭೇಟಿ

- Advertisement -
- Advertisement -

ಸಿದ್ದರಾಮಯ್ಯ ಮೇಲಿನ ಮುನಿಸಿನ ಕಾರಣಕ್ಕೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಹಿರಿಯ ರಾಜಕಾರಣಿ, ಸಂಸದ ವಿ. ಶ್ರೀನಿವಾಸ್ ಪ್ರಸಾದ್ ಅವರ ಮೈಸೂರಿನ ಜಯಲಕ್ಷ್ಮಿಪುರಂ ನಿವಾಸಕ್ಕೆ ಖುದ್ದು ಮುಖ್ಯಮಂತ್ರಿಗಳೆ ಇಂದು ಭೇಟಿ ಕೊಟ್ಟಿರುವುದು ಕುತೂಹಲ ಮೂಡಿಸಿದೆ.

ಮೈಸೂರು-ಕೊಡಗು ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ಅವರನ್ನು ಗೆಲ್ಲಿಸಲೇಬೇಕು ಎಂದು ಹಠಕ್ಕೆ ಬಿದ್ದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಶ್ರೀನಿವಾಸ ಪ್ರಸಾದ್‌ ಜತೆಗಿನ ಹಲವು ವರ್ಷಗಳ ಮನಸ್ಥಾಪ ಮರೆತು, ಅವರ ಮನೆಗೆ ಭೇಟಿ ಕೊಟ್ಟಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ‘ಕೈ’ ಅಭ್ಯರ್ಥಿ ಬೆಂಬಲಿಸುವಂತೆ ಮನವಿ ಮಾಡಿದ್ದಾರೆ ಎನ್ನಲಾಗುತ್ತಿದೆ.

ಮುನಿಸು ಶಮನ:

ಸಿದ್ದರಾಮಯ್ಯ ಅವರು ಮೊದಲ ಅವಧಿಗೆ ಮುಖ್ಯಮಂತ್ರಿ ಆಗಿದ್ದಾಗ ಶ್ರೀನಿವಾಸ್ ಪ್ರಸಾದ್ ಕಂದಾಯ ಸಚಿವರಾಗಿದ್ದರು. ನಂತರ, ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು. ಲೋಕಸಭಾ ಚುನಾವಣೆ ಹೊತ್ತಲ್ಲಿ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಪಕ್ಷ ಬಲಪಡಿಸಲು ಸಿಎಂ ಸಿದ್ದರಾಮಯ್ಯ ಮುಂದಾಗಿರುವಂತೆ ಕಾಣುತ್ತಿದ್ದು, ಹಲವು ವರ್ಷಗಳಿಂದ ಇದ್ದ ಮುನಿಸನ್ನು ಮರೆತು ಬಿಜೆಪಿ ಸಂಸದ ವಿ.ಶ್ರೀನಿವಾಸ್‌ ಪ್ರಸಾದ್ ಅವರನ್ನು ಭೇಟಿಯಾಗುವ ಮೂಲಕ ಇಬ್ಬರು ನಾಯಕರು ಮುನಿಸು ಅಂತ್ಯಗೊಳಿಸಿದ್ದಾರೆ.

ಚುನಾವಣಾ ಪ್ರಚಾರಕ್ಕಾಗಿ ಪ್ರಧಾನಿ ಮೋದಿ ನಾಳೆ ಮೈಸೂರಿಗೆ ಆಗಮಿಸಲಿದ್ದು, ಈ ಹೊತ್ತಿನಲ್ಲೇ ಬಿಜೆಪಿ ಸಂಸದ ಶ್ರೀನಿವಾಸ ಪ್ರಸಾದ್ ಅವರನ್ನು ಸಿಎಂ ಭೇಟಿಯಾಗಿರುವುದು ರಾಜಕೀಯ ವಲಯದಲ್ಲಿ ಅಚ್ಚರಿ ಮೂಡಿಸಿದೆ. ಕಳೆದ ಆರೇಳು ವರ್ಷಗಳಿಂದ ಈ ಇಬ್ಬರು ನಾಯಕರು ಪರಸ್ಪರ ಮುಖಾಮುಖಿಯಾಗಿರಲಿಲ್ಲ. ಸಿದ್ದರಾಮಯ್ಯ ಕುರಿತು ಶ್ರೀನಿವಾಸ್ ಪ್ರಸಾದ್ ಅವರು ತಮ್ಮ ಕಟುವಾದ ಮಾತುಗಳಿಂದ ಟೀಕಿಸುತ್ತಿದ್ದರು. ಇದೀಗ ಚುನಾವಣೆ ಹೊಸ್ತಿಲಲ್ಲಿ ಪ್ರಸಾದ್ ಮನೆಗೆ ಸಿದ್ದರಾಮಯ್ಯ ನೀಡಿರುವುದು ಕಮಲ ನಾಯಕರಿಗೆ ಶಾಕ್ ನೀಡಿದೆ.

ಇಬ್ಬರೂ ನಾಯಕರು ಅರ್ಧ ಗಂಟೆಗೂ ಹೆಚ್ಚು ಕಾಲ ಚರ್ಚಿಸಿದ್ದು, ಈ ಚುನಾವಣೆಯಲ್ಲಿ ಮೈಸೂರು- ಕೊಡಗು ಲೋಕಸಭಾ ‌ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ‌. ಲಕ್ಷ್ಮಣ ಹಾಗೂ ಚಾಮರಾಜನಗರ ಲೋಕಸಭಾ ಕ್ಷೇತ್ರದ ಸುನೀಲ್ ಬೋಸ್ ಅವರನ್ನು ಬೆಂಬಲಿಸುವಂತೆ ಕೋರಿದರು ಎಂದು ತಿಳಿದುಬಂದಿದೆ.

ಪ್ರಸಾದ್ ಭೇಟಿ ಬಳಿಕ ಮಾತನಾಡಿದ ಸಿದ್ದರಾಮಯ್ಯ, “ನಾನು ಹಾಗೂ ಪ್ರಸಾದ್ ದೀರ್ಘಕಾಲದಿಂದ ಸ್ನೇಹಿತರು; ಜೊತೆಯಲ್ಲೇ ರಾಜಕಾರಣ ಮಾಡಿದವರು. ರಾಜಕೀಯವಾಗಿ ನಾನು ಕಾಂಗ್ರೆಸ್‌ನಲ್ಲಿದ್ದೆ, ಅವರು ಬಿಜೆಪಿಗೆ ಹೋಗಿದ್ದರು. ಈಗ ಅವರು ರಾಜಕೀಯದಿಂದ ನಿವೃತ್ತರಾಗಿದ್ದು, ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಲು ಬಂದಿದ್ದೆ” ಎಂರು.

“ನಾನು ಯಾವ ಪಕ್ಷಕ್ಕೂ ಬೆಂಬಲ ಕೊಡುವುದಿಲ್ಲ” ಎಂದು ಪ್ರಸಾದ್ ಹೇಳಿದ್ದಾರೆ.‌ ಆದ್ದರಿಂದ, ಅವರಿಂದ ರಾಜಕೀಯವಾಗಿ ಬೆಂಬಲ ಕೋರುವುದರಲ್ಲಿ ಅರ್ಥವಿಲ್ಲ. ರಾಜಕೀಯವಾಗಿ ಏನನ್ನೂ ಚರ್ಚೆ ಮಾಡಿಲ್ಲ. ಆದರೆ, ಕಾಂಗ್ರೆಸ್ ಅಭ್ಯರ್ಥಿಗಳ ಬಗ್ಗೆ ಅನುಕಂಪವಿರಲಿ ಎಂದು ಕೇಳಿಕೊಂಡಿದ್ದೇನೆ” ಎಂದು ತಿಳಿಸಿದರು.

ಮೋದಿ ಸಮಾವೇಶಕ್ಕೆ ಆಹ್ವಾನ ಬಂದಿಲ್ಲ: ಪ್ರಸಾದ್

ಸಿಎಂ ಜತೆಗಿನ ಮಾತುಕತೆ ಬಳಿಕ ಮಾಧ್ಯಮ ಪ್ರತಿನಿಧಿಗಳ‌ ಜೊತೆ ಮಾತನಾಡಿದ ಶ್ರೀನಿವಾಸ ಪ್ರಸಾದ್, “ನಾಳೆ ಮೈಸೂರಿನಲ್ಲಿ ನಡೆಯಲಿರುವ ಮೋದಿ ಸಮಾವೇಶಕ್ಕೆ ಆಗಮಿಸುವಂತೆ ನನಗೆ ಆಹ್ವಾ ನ ಬಂದಿಲ್ಲ; ಬರುವುದೂ‌ ಇಲ್ಲ. ಅವರು ಕರೆದಿಲ್ಲ, ಕರೆಯುವುದೂ ಇಲ್ಲ, ನಾನು ಹೋಗುವುದೂ ಇಲ್ಲ” ಎಂದು ಬಿಜೆಪಿ ನಾಯಕರ ವಿರುದ್ಧ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದರು.

“ಸಿದ್ದರಾಮಯ್ಯನವರ ಜೊತೆಗಿನ ಮಾತುಕತೆಯಲ್ಲಿ ನಾನು ರಾಜಕೀಯದ ಚರ್ಚೆ ನಡೆಸಿಲ್ಲ; ಅವರ ಭೇಟಿ ನನಗೆ ಸಹಜವಾಗಿಯೇ ಖುಷಿ ಕೊಟ್ಟಿದೆ. ಅವರು ಬೆಂಬಲ ಕೇಳಿದ್ದಾರೆ; ನಾನು ರಾಜಕೀಯವಾಗಿ ನಿವೃತ್ತಿಯಾಗಿದ್ದೇನೆ ಎಂದು ಹೇಳಿದ್ದೇನಷ್ಟೆ. ಚಾಮರಾಜನಗರದಲ್ಲಿ ಕಾಂಗ್ರೆಸ್‌ಗೆ ಉತ್ತಮವಾದ ವಾತಾವರಣ ಇದೆ” ಎಂದು ಅವರು ಕಾಂಗ್ರೆಸ್ ಪರವಾಗಿ ಒಲವು ವ್ಯಕ್ತಪಡಿಸಿದ್ದಾರೆ.

ಬೋಸ್ ಹೇಳಿಕೆಯಿಂದ ಬಿಜೆಪಿಯಲ್ಲಿ ತಳಮಳ:

ಈ ಎಲ್ಲ ಬೆಳವಣಿಗೆಗಳ ನಡುವೆಯೇ, ಚಾಮರಾಜನಗರ ಲೋಕಸಭಾ ಕ್ಷೇತ್ರ ಕಾಂಗ್ರೆಸ್‌ ಅಭ್ಯರ್ಥಿ ಸುನೀಲ್ ಬೋಸ್ ಮಾತನಾಡಿ, “ನಮಗೆ ಶ್ರೀನಿವಾಸ ಪ್ರಸಾದ್‌ ಅವರ ಬೆಂಬಲ ಇದೆ” ಎಂದು ಬಹಿರಂಗವಾಗಿ ಹೇಳಿದ್ದು, ಬಿಜೆಪಿಯಲ್ಲಿ ತಳಮಳ ಶುರುವಾಗಿದೆ.

ಚಾಮರಾಜನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಸುನೀಲ್‌ ಬೋಸ್‌, “ಶ್ರೀನಿವಾಸ ಪ್ರಸಾದ್‌ ಅವರ ಸಂಪೂರ್ಣ ಬೆಂಬಲ ಕಾಂಗ್ರೆಸ್‌ಗೆ ಇದೆ. ಬಿಜೆಪಿ ಸಂಸದರ ಆಶೀರ್ವಾದ ಪಡೆದಿದ್ದೇನೆ. ಗೆದ್ದು ಬಾ ಎಂದು ನನಗೆ ಆಶೀರ್ವಾದ ಮಾಡಿದ್ದಾರೆ; ಅವರ ಬೆಂಬಲಿಗರು ಕೂಡ ಕಾಂಗ್ರೆಸ್‌ ಸೇರಿದ್ದು, ನನ್ನ ಗೆಲುವು ನಿಶ್ಚಿತ” ಎಂದು ಬೋಸ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ; ಬಡ ಕುಟುಂಬಕ್ಕೆ ವಾರ್ಷಿಕ ₹1 ಲಕ್ಷ, 1 ಕೋಟಿ ಸರ್ಕಾರಿ ಉದ್ಯೋಗ: ಆರ್‌ಜೆಡಿ ಭರವಸೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರೋಹಿತ್ ವೇಮುಲಾ ‘ಪರಿಶಿಷ್ಟ ಜಾತಿ’ಗೆ ಸೇರಿದವರಲ್ಲ: ಪ್ರಕರಣದ ಫೈಲ್ ಕ್ಲೋಸ್ ಮಾಡಿದ ಪೊಲೀಸರು

0
ದೇಶದಾದ್ಯಂತ ಭಾರೀ ಸದ್ದು ಮಾಡಿದ್ದ ಹೈದರಾಬಾದ್ ವಿಶ್ವವಿದ್ಯಾಲಯದ ಪಿಎಚ್‌ಡಿ ವಿದ್ಯಾರ್ಥಿ ರೋಹಿತ್ ವೇಮುಲಾ ಸಾವಿನ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು, ತೆಲಂಗಾಣ ಪೊಲೀಸರು ಪ್ರಕರಣದ ಮುಕ್ತಾಯದ ವರದಿಯನ್ನು ಸಲ್ಲಿಸಿದ್ದಾರೆ. 2016ರ ಜನವರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ...