Homeಮುಖಪುಟಭಾರತ ಮೌನವಾಗಿರಬೇಕೆಂದು ಬಿಜೆಪಿ ಬಯಸುತ್ತಿದೆ: ಲಂಡನ್‌ ಸಂವಾದದಲ್ಲಿ ರಾಹುಲ್ ಹೇಳಿಕೆ

ಭಾರತ ಮೌನವಾಗಿರಬೇಕೆಂದು ಬಿಜೆಪಿ ಬಯಸುತ್ತಿದೆ: ಲಂಡನ್‌ ಸಂವಾದದಲ್ಲಿ ರಾಹುಲ್ ಹೇಳಿಕೆ

- Advertisement -
- Advertisement -

“ಭಾರತ ಮೌನವಾಗಿರಬೇಕೆಂದು ಭಾರತೀಯ ಜನತಾ ಪಕ್ಷ (ಬಿಜೆಪಿ) ಬಯಸುತ್ತದೆ” ಎಂದು ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿಯವರು ಲಂಡನ್‌ನಲ್ಲಿ ಆರೋಪಿಸಿದ್ದಾರೆ.

ಲಂಡನ್‌ನಲ್ಲಿ ಭಾರತೀಯ ಪತ್ರಕರ್ತರ ಸಂಘ (ಐಜೆಎ)ದ ಜೊತೆಯಲ್ಲಿ ಸಂವಾದ ನಡೆಸಿರುವ ರಾಹುಲ್‌ ಗಾಂಧಿಯವರಿಗೆ “ಭಾರತದಲ್ಲಿ ಬಿಬಿಸಿ ಡಾಕ್ಯುಮೆಂಟರಿ ಬ್ಯಾನ್‌” ವಿಷಯ ಸೇರಿದಂತೆ ಹಲವಾರು ಪ್ರಶ್ನೆಗಳನ್ನು ಕೇಳಲಾಗಿದೆ.

“ರಾಜಕೀಯ ಮತ್ತು ಸಾರ್ವಜನಿಕರು: ಗ್ರಹಿಕೆಯಿಂದ ಕಾರ್ಯಕ್ಷಮತೆಯೆಡೆಗೆ” ಎಂಬ ವಿಷಯದ ಕುರಿತ ಸಂವಾದ ಇದಾಗಿತ್ತು. ಭಾರತ್ ಜೋಡೋ ಯಾತ್ರೆ, ಚೀನಾ ಮತ್ತು ರಷ್ಯಾದ ಕುರಿತ ಭಾರತದ ವಿದೇಶಾಂಗ ನೀತಿ, ಕ್ರೋನಿ ಕ್ಯಾಪಿಟಲಿಸಂ ಮತ್ತು 2024ರ ಸಾರ್ವತ್ರಿಕ ಚುನಾವಣೆಗಳ ಕುರಿತ ಪ್ರಶ್ನೆಗಳಿಗೆ ಸಂವಾದದಲ್ಲಿ ಅವರು ಉತ್ತರಿಸಿದ್ದಾರೆ.

ಐಜೆಎ ಅಧ್ಯಕ್ಷ ಡ್ಯಾನಿಶ್ ಖಾನ್ ಅವರು ಸಂವಾದವನ್ನು ಆಯೋಜಿಸಿದ್ದರು. ಭಾರತ ಮತ್ತು ಯುಕೆಯ ಪತ್ರಕರ್ತರು ಈ ಚರ್ಚೆಯಲ್ಲಿ ಪಾಲ್ಗೊಂಡಿದ್ದರು. “ಬಿಬಿಸಿ ಸಾಕ್ಷ್ಯಚಿತ್ರದ ಸುತ್ತಲಿನ ವಿವಾದ, ಹೊಸದಿಲ್ಲಿಯ ಬಿಬಿಸಿ ಕಚೇರಿಗಳ ಮೇಲಿನ ದಾಳಿ ಕುರಿತು ರಾಹುಲ್‌ ಅಭಿಪ್ರಾಯವೇನು?” ಎಂದು ಕೇಳಲಾಯಿತು.

“ಭಾರತದಲ್ಲಿ ಎಲ್ಲೆಡೆ ಬಾಯಿ ಮುಚ್ಚಿಸಲಾಗುತ್ತಿದೆ. ಬಿಬಿಸಿ ಸಾಕ್ಷ್ಯಾಚಿತ್ರವೇ ಇದಕ್ಕೆ ಉದಾಹರಣೆ. ಪತ್ರಕರ್ತರನ್ನು (ಭಾರತದಲ್ಲಿ) ಬೆದರಿಸಲಾಗುತ್ತದೆ, ಅವರ ಮೇಲೆ ದಾಳಿ ಮಾಡಲಾಗುತ್ತದೆ. ಸರ್ಕಾರ ಹೇಳಿದಂತೆ ಕೇಳುವ ಪತ್ರಕರ್ತರಿಗೆ ಬಹುಮಾನ ನೀಡಲಾಗುತ್ತದೆ” ಎಂದು ರಾಹುಲ್‌ ದೂರಿದ್ದಾರೆ.

ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ ನೀಡಿದ ಉಪನ್ಯಾಸದ ಅಂಶಗಳನ್ನು ರಾಹುಲ್ ಗಾಂಧಿಯವರು ಇಲ್ಲಿಯೂ ಪ್ರತಿಧ್ವನಿಸಿದರು. “ಭಾರತದಲ್ಲಿನ ಸಂಸ್ಥೆಗಳು ಅಪಾಯದಲ್ಲಿವೆ ಮತ್ತು ಅಲ್ಪಸಂಖ್ಯಾತರು ತೊಂದರೆಗೆ ಸಿಲುಕಿದ್ದಾರೆ” ಎಂದು ಪುನರುಚ್ಚರಿಸಿದ್ದಾರೆ.

“ಅಂತಾರಾಷ್ಟ್ರೀಯ ಪ್ರವಾಸಗಳ ಸಂದರ್ಭದಲ್ಲಿ ಇಂತಹ ಹೇಳಿಕೆ ನೀಡಿದರೆ, ವಿದೇಶಿ ನೆಲದಲ್ಲಿ ನಿಂತು ಭಾರತವನ್ನು ಅವಮಾನಿಸಿದಂತೆ” ಎಂಬ ವಾದಗಳಿಗೆ ಪ್ರತಿಕ್ರಿಯಿಸಿರುವ ರಾಹು‌ಲ್, “ಪ್ರಧಾನಿ ನರೇಂದ್ರ ಮೋದಿ ಅವರು ವಿದೇಶಿ ಪ್ರವಾಸಗಳ ಸಂದರ್ಭದಲ್ಲಿ ಮಾಡಿರುವ ಭಾಷಣಗಳನ್ನು ಗಮನಿಸಿ” ಎಂದು ತಿಳಿಸಿದ್ದಾರೆ.

“60 ವರ್ಷಗಳಲ್ಲಿ ಭಾರತದಲ್ಲಿ ಏನೂ ಆಗಿಲ್ಲ”, “ಭಾರತದಲ್ಲಿ ಅನಿಯಮಿತ ಭ್ರಷ್ಟಾಚಾರವಿದೆ” ಮೊದಲಾಗಿ ಮೋದಿ ಹೇಳಿರುವುದನ್ನು ಪ್ರಸ್ತಾಪಿಸಿರುವ ರಾಹುಲ್‌, “ಭಾರತವನ್ನು ಯಶಸ್ವಿಗೊಳಿಸಲು ಶ್ರಮಿಸಿದ ಎಲ್ಲರನ್ನು ಮೋದಿ ಅವಮಾನಿಸಿದ್ದಾರೆ” ಎಂದಿದ್ದಾರೆ.

“ಹಾಗಾಗಿ, ವಿದೇಶಕ್ಕೆ ಹೋದಾಗ ಭಾರತವನ್ನು ದೂಷಿಸುವ ವ್ಯಕ್ತಿ ಭಾರತದ ಪ್ರಧಾನಿ ಮೋದಿ” ಎಂದು ಟೀಕಿಸಿದ್ದಾರೆ.

“ನಾನು ಎಂದಿಗೂ ನನ್ನ ದೇಶಕ್ಕೆ ಮಾನಹಾನಿ ಮಾಡಿಲ್ಲ. ನಾನು ಅದನ್ನು ಎಂದಿಗೂ ಮಾಡುವುದಿಲ್ಲ” ಎಂದು ರಾಹುಲ್‌ ಸ್ಪಷ್ಟವಾಗಿ ಹೇಳಿದ್ದಾರೆ. “ನಾನು ಹೇಳುದ ವಿಚಾರವನ್ನು ತಿರುಚಲು ಬಿಜೆಪಿಯವರು ಇಷ್ಟಪಡುತ್ತಾರೆ” ಎಂದು ವ್ಯಂಗ್ಯವಾಡಿದ್ದಾರೆ.

ವಿರೋಧ ಪಕ್ಷಗಳು ದುರ್ಬಲವಾಗಿದೆ ಮತ್ತು ಅದರೊಳಗೆ ಬಿರುಕುಗಳಿವೆ ಎಂಬ ವಾದಗಳನ್ನು ರಾಹುಲ್ ಗಾಂಧಿ ನಿರಾಕರಿಸಿದ್ದಾರೆ. “ಆರ್‌ಎಸ್‌ಎಸ್ ಮತ್ತು ಬಿಜೆಪಿಯನ್ನು ಹೋರಾಡಿ ಸೋಲಿಸಬೇಕು ಎಂಬ ಮೂಲ ಕಲ್ಪನೆಯು ಪ್ರತಿಪಕ್ಷಗಳ ಮನಸ್ಸಿನಲ್ಲಿ ಆಳವಾಗಿ ಬೇರೂರಿದೆ” ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿರಿ: ಭಾರತದ ರಾಜಕಾರಣಿಗಳ ಮೇಲೆ ಪೆಗಾಸಸ್ ಕಣ್ಗಾವಲಿದೆ; ಕೇಂಬ್ರಿಡ್ಜ್‌ನಲ್ಲಿ ರಾಹುಲ್ ಪ್ರಸ್ತಾಪ

“ಕೆಲವು ಚರ್ಚೆಯ ಅಗತ್ಯವಿದೆ. ಆದರೆ ವಿರೋಧ ಪಕ್ಷಗಳು ಸಮಸ್ಯೆಯನ್ನು ಬಗೆಹರಿಸಲು ಸಮರ್ಥವಾಗಿವೆ. ಈ ಕುರಿತು ಚರ್ಚೆಗಳು ನಡೆಯುತ್ತಿವೆ” ಎಂದು ಸುಳಿವು ನೀಡಿದ್ದಾರೆ.

“ನಾವು ಭಾರತದ ಸಾಂಸ್ಥಿಕ ರಚನೆಗಳ ವಿರುದ್ಧ ಹೋರಾಡುತ್ತಿದ್ದೇವೆ. ಭಾರತದ ಬಹುತೇಕ ಎಲ್ಲಾ ಸಂಸ್ಥೆಗಳನ್ನು ವಶಪಡಿಸಿಕೊಂಡಿರುವ ಬಿಜೆಪಿ ಮತ್ತು ಆರ್‌ಎಸ್‌ಎಸ್ ವಿರುದ್ಧ ನಾವು ಹೋರಾಡುತ್ತಿದ್ದೇವೆ” ಎಂದು ಸಂವಾದದಲ್ಲಿ ತಿಳಿಸಿದ್ದಾರೆ.

ನಿರೂಪಣೆಗಳನ್ನು (ನೆರೇಟಿವ್‌ಗಳನ್ನು) ಕಟ್ಟುವಲ್ಲಿ ಕಾಂಗ್ರೆಸ್ ಸೋಲುತ್ತಿದೆ ಎಂಬುದನ್ನು ರಾಹುಲ್ ನಿರಾಕರಿಸಿದ್ದಾರೆ. “ಭಾರತ್ ಜೋಡೋ ಯಾತ್ರೆಯು ಪರಿಸ್ಥಿತಿಯನ್ನು ಬದಲಾಯಿಸಿದೆ. ಕಾಂಗ್ರೆಸ್ ಈಗ ನೆರೇಟಿವ್‌ಗಳನ್ನು ಮುನ್ನಡೆಸುತ್ತಿದೆ. ನಾವು ದೇಶಾದ್ಯಂತ ಯಾತ್ರೆಯನ್ನು ನಡೆಸಿದ್ದೇವೆ. ಇದರಿಂದಾಗಿ ಕಳೆದ ನಾಲ್ಕು ತಿಂಗಳಲ್ಲಿ ನೆರೇಟಿವ್‌ಗಳ ಮೇಲೆ ಪ್ರಾಬಲ್ಯ ಸಾಧಿಸಿದ್ದೇವೆ. ಇದು ರೂಪಾಂತರ ಸ್ಥಿತಿ. ರಾಷ್ಟ್ರೀಯ ಪತ್ರಿಕೆಗಳು ಯಾತ್ರೆಯನ್ನು ಕವರ್‌ ಮಾಡಲೇಬೇಕಾಯಿತು” ಎಂದು ಅಭಿಪ್ರಾಯಪಟ್ಟಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹೇಮಂತ್ ಕರ್ಕರೆ ಆರೆಸ್ಸೆಸ್‌ ನಂಟಿನ ಪೊಲೀಸ್ ಅಧಿಕಾರಿಯ ಗುಂಡಿಗೆ ಬಲಿಯಾಗಿದ್ದು: ವಿಜಯ್ ವಡೆಟ್ಟಿವಾರ್

0
2008ರ ಮುಂಬೈ ಭಯೋತ್ಪಾದಕ ದಾಳಿಯ ಸಮಯದಲ್ಲಿ ರಾಜ್ಯ ಭಯೋತ್ಪಾದನಾ ನಿಗ್ರಹ ದಳದ(ಎಟಿಎಸ್) ಮಾಜಿ ಮುಖ್ಯಸ್ಥ ಹೇಮಂತ್ ಕರ್ಕರೆ ಅವರನ್ನು ಹತ್ಯೆಗೈದಿದ್ದು ಭಯೋತ್ಪಾದಕ ಅಜ್ಮಲ್ ಅಮೀರ್ ಕಸಬ್ ಅಲ್ಲ, ಆರೆಸ್ಸೆಸ್‌ ಜೊತೆ ನಂಟು ಹೊಂದಿದ್ದ...