Homeಮುಖಪುಟಮಹಾರಾಷ್ಟ್ರ: ಬ್ರಾಹ್ಮಣರೇ ನಿರ್ಣಾಯಕವಾಗಿರುವ ಕಸ್ಬಾಪೇಠ್‌ ಕ್ಷೇತ್ರದಲ್ಲಿ ಬಿಜೆಪಿ ಸೋತಿದ್ದೇಕೆ?

ಮಹಾರಾಷ್ಟ್ರ: ಬ್ರಾಹ್ಮಣರೇ ನಿರ್ಣಾಯಕವಾಗಿರುವ ಕಸ್ಬಾಪೇಠ್‌ ಕ್ಷೇತ್ರದಲ್ಲಿ ಬಿಜೆಪಿ ಸೋತಿದ್ದೇಕೆ?

- Advertisement -
- Advertisement -

ಮಹಾರಾಷ್ಟ್ರ ಪುಣೆಯ ಹೃದಯ ಭಾಗದಲ್ಲಿರುವ ಕಸ್ಬಾಪೇಠ್‌ ವಿಧಾನಸಭಾ ಕ್ಷೇತ್ರವು ಬಿಜೆಪಿಯ ಭದ್ರಕೋಟೆಯಾಗಿತ್ತು. ಕಳೆದ ಮೂವತ್ತು ವರ್ಷಗಳಿಂದ ಈ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲುತ್ತಾ ಬಂದಿತ್ತು. ಆದರೆ ಈ ಭಾರಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಸೋಲಾಯಿತು.

ಮಾರ್ಚ್ 2 ರಂದು, ಕಸ್ಬಾ ಪೇಠ್‌‌ ವಿಧಾನಸಭಾ ಉಪಚುನಾವಣೆಯ ಫಲಿತಾಂಶ ಪ್ರಕಟವಾದಾಗ ಸಂಭ್ರಮಾಚರಣೆ ಭುಗಿಲೆದ್ದಿತ್ತು- ಬಿಜೆಪಿ ಕಚೇರಿಯಲ್ಲಿ ಅಲ್ಲ, ಬದಲಾಗಿ ಪುಣೆಯ ಶಿವಾಜಿನಗರದಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ.

ಕಾಂಗ್ರೆಸ್ ಅಭ್ಯರ್ಥಿ ರವೀಂದ್ರ ಧಾಂಗೇಕರ್ ಅವರು ಬಿಜೆಪಿ ಅಭ್ಯರ್ಥಿ ಹೇಮನ್ ರಸಾನೆ ಅವರನ್ನು 11,000ಕ್ಕೂ ಹೆಚ್ಚು ಮತಗಳ ಅಂತರದಲ್ಲಿ ಸೋಲಿಸಿ ಐತಿಹಾಸಿಕ ಗೆಲುವು ಸಾಧಿಸಿದ್ದಾರೆ. ರಾಜ್ಯದಲ್ಲಿ ಪಾಲಿಕೆ ಚುನಾವಣೆಗೂ ಮುನ್ನ ನಡೆದಿರುವ ಈ ಉಪಚುನಾವಣೆಯು ನ್ಯಾಷನಲಿಸ್ಟ್‌ ಕಾಂಗ್ರೆಸ್‌ ಪಾರ್ಟಿ (ಎನ್‌ಸಿಪಿ), ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ ಬಣ) ಮತ್ತು ಕಾಂಗ್ರೆಸ್ ಮೈತ್ರಿಗೆ ಬಹುದೊಡ್ಡ ಶಕ್ತಿಯನ್ನು ತುಂಬಿದೆ.

ಪುಣೆಯ ಕಸ್ಬಾ ಪೇಠ್‌‌ ಬಿಜೆಪಿಯ ಪ್ರಬಲ ನೆಲೆಯಾಗಿತ್ತು. ಉಪಮುಖ್ಯಮಂತ್ರಿ ದೇವೇಂದ್ರ ಫಡ್ನಾವೀಸ್ ಮತ್ತು ಮುಖ್ಯಮಂತ್ರಿ ಏಕನಾಥ್ ಶಿಂಧೆ ಸೇರಿದಂತೆ ರಾಜ್ಯದ ಪ್ರಮುಖ ನಾಯಕರು ರಾಸಾನೆಯನ್ನು ಬೆಂಬಲಿಸಿದರು. ಈ ಪ್ರದೇಶದಲ್ಲಿನ ಮೋತಿ ಭಾಗ್‌ನಲ್ಲಿ ಆರ್‌ಎಸ್‌ಎಸ್‌ ಕಚೇರಿಯೂ ಇದ್ದು, ಈ ಕ್ಷೇತ್ರವು ಸಾಂಪ್ರದಾಯಿಕ ಆರ್‌ಎಸ್‌ಎಸ್‌ ಬೆಂಬಲಿಗರಿಂದ ಕೂಡಿದೆ.

ಇದನ್ನೂ ಓದಿರಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಕೆ.ಆರ್ ಪೇಟೆ: ಆಡಳಿತ ವಿರೋಧಿ ಅಲೆ ಎದುರಿಸುತ್ತಿರುವ ಸಚಿವ ನಾರಾಯಣಗೌಡ ಪಕ್ಷಾಂತರಕ್ಕೆ ಸಜ್ಜು?

ಆದಾಗ್ಯೂ ಈ ಕಾಂಗ್ರೆಸ್‌ ಗೆದ್ದಿದ್ದು ಹೇಗೆ? ಭವಿಷ್ಯದಲ್ಲಿ ಏನಾಗಬಹುದು? ಎಂಬ ಪ್ರಶ್ನೆಗಳನ್ನು ಈ ಫಲಿತಾಂಶ ಹುಟ್ಟುಹಾಕಿದೆ.

1978ರಲ್ಲಿ ಭಾರತೀಯ ಜನಸಂಘದ ನಾಯಕ ಅರವಿಂದ್ ಲೆಲೆ ಅವರು ಕಸ್ಬಾ ಪೇಠ್ ಕ್ಷೇತ್ರದಲ್ಲಿ ಗೆದ್ದಿದ್ದರು ಮತ್ತು ನಂತರ 1980 ರಲ್ಲಿ ಬಿಜೆಪಿ ರಚನೆಯ ನಂತರ ಮತ್ತೊಮ್ಮೆ ಗೆಲುವು ಸಾಧಿಸಿದ್ದರು. ಅವರು 1985ರಲ್ಲಿ ಸೋತರು. ಆದರೆ 1990ರಲ್ಲಿ ಬಿಜೆಪಿಯ ಅಭ್ಯರ್ಥಿ ಅಣ್ಣಾ ಜೋಶಿಯವರು ಗೆದ್ದ ಬಳಿಕ ಪಕ್ಷದ ಹಿಡಿತಕ್ಕೆ ಕ್ಷೇತ್ರ  ಮರಳಿತು.

1995ರಿಂದ 2019 ರವರೆಗೆ ಅಂದರೆ 2019ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವವರೆಗೂ ಬಿಜೆಪಿಯ ಘಟಾನುಘಟಿ ನಾಯಕ ಗಿರೀಶ್ ಬಾಪಟ್ ಅವರು ಈ ಕ್ಷೇತ್ರದಲ್ಲಿ ಸತತವಾಗಿ ಗೆಲ್ಲುತ್ತಾ ಬಂದಿದ್ದರು. ನಂತರ ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ, ಸ್ವಾತಂತ್ರ್ಯ ಹೋರಾಟಗಾರ ಬಾಲಗಂಗಾಧರ ತಿಲಕ್ ಅವರ ಮೊಮ್ಮಗಳು ಮುಕ್ತಾ ತಿಲಕ್ ಸ್ಪರ್ಧಿಸಿ ಗೆದ್ದರು. ಡಿಸೆಂಬರ್ 2022ರಲ್ಲಿ ಅವರು ನಿಧನರಾಗಿದ್ದರಿಂದ, ಉಪಚುನಾವಣೆ ನಿಗದಿಯಾಗಿತ್ತು.

ಕಸ್ಬಾ ಪೇಠ್‌ನಲ್ಲಿ ಇರುವ ಬ್ರಾಹ್ಮಣ ಸಮುದಾಯದ ಜನಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ಬ್ರಾಹ್ಮಣ ಅಭ್ಯರ್ಥಿಗೆ ಬಿಜೆಪಿ ಟಿಕೆಟ್ ನೀಡುತ್ತಾ ಬಂದಿದೆ. ಈ ವರ್ಷ ಟಿಕೆಟ್ ಪಡೆದ ಅಭ್ಯರ್ಥಿ ಬ್ರಾಹ್ಮಣರಾಗಿರಲಿಲ್ಲ, ಹಾಗಾಗಿ ಅವರು ಸೋತರು ಎಂದು ಸಮೀಕ್ಷೆಗಾರರು ಹೇಳುತ್ತಾರೆ.

ಮಹಾರಾಷ್ಟ್ರ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸರ್ಕಾರಿ ಶಾಲೆಯ ಮುಖ್ಯಸ್ಥೆ ಪರಿಮಳ್ ಮಾಯಾ ಸುಧಾಕರ್ ಅವರು ‘ನ್ಯೂಸ್‌ಲಾಂಡ್ರಿ’ ಪ್ರತಿಕ್ರಿಯಿಸಿದ್ದು, “ಕಸ್ಬಾ ಪೇಠ್‌ ಫಲಿತಾಂಶದ ಮೇಲೆ ಮೂರು ಅಂಶಗಳು ಪ್ರಭಾವಿಸಿವೆ” ಎಂದಿದ್ದಾರೆ.

“ಮೊದಲನೇ ಅಂಶ: ಪ್ರತಿಪಕ್ಷಗಳ ಒಗ್ಗಟ್ಟು; ಕಾಂಗ್ರೆಸ್ ಅಭ್ಯರ್ಥಿಗಾಗಿ ಎನ್‌ಸಿಪಿ ನಾಯಕರು ಮತ್ತು ಆದಿತ್ಯ ಠಾಕ್ರೆ ಅವರು ಮಾಡಿದ ಬಹಿರಂಗ ಪ್ರಚಾರ. ಎರಡನೇ ಅಂಶ: ಬ್ರಾಹ್ಮಣ ಅಭ್ಯರ್ಥಿಗೆ ಬಿಜೆಪಿ ಟಿಕೆಟ್ ನಿರಾಕರಿಸಿದ ಕಾರಣ, ಕ್ಷೇತ್ರದಲ್ಲಿ ಶೇಕಡಾ 10ರಷ್ಟಿರುವ ಬ್ರಾಹ್ಮಣ ಮತದಾರರಲ್ಲಿ ಅಸಮಾಧಾನ ಉಂಟಾಗಿತ್ತು. ಮೂರನೇ ಅಂಶ: ಬಿಜೆಪಿ ಮತ್ತು ಶಿಂಧೆ ಬಣದ ಶಿವಸೇನೆಯ ಸಚಿವರು, ಪಕ್ಷದ ಪ್ರಮುಖರು ಭಾರೀ ಪ್ರಮಾಣದಲ್ಲಿ ಇಲ್ಲಿಗೆ ಬಂದಿದ್ದನ್ನು ಸಾಮಾನ್ಯ ಮತದಾರರು ಉತ್ತಮ ಮನೋಭಾವದಿಂದ ಸ್ವೀಕರಿಸಲಿಲ್ಲ” ಎಂದಿದ್ದಾರೆ ಪರಿಮಳ್ ಮಾಯಾ.

ಇದನ್ನೂ ಓದಿರಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಶಿರಹಟ್ಟಿ: ಮೇಲ್ವರ್ಗದ ಮೇಲಾಟದ ಕುರುಕ್ಷೇತ್ರ; ಹೆಸರಿಗಷ್ಟೇ ಮೀಸಲು ಕ್ಷೇತ್ರ!

“ಮತದಾರರಿಗೆ ದೊಡ್ಡ ಪ್ರಮಾಣದಲ್ಲಿ ಹಣವನ್ನು ಹಂಚುತ್ತಿದೆ ಎಂಬ ಆರೋಪಗಳಿಗೆ ಬಿಜೆಪಿ ಗುರಿಯಾಯಿತು. ಬಿಜೆಪಿ ಮತಗಳನ್ನು ಖರೀದಿಸುತ್ತಿದೆ ಎಂದು ಆರೋಪಿಸಿ ವಿಜೇತ ಕಾಂಗ್ರೆಸ್ ಅಭ್ಯರ್ಥಿ ಧಾಂಗೇಕರ್ ಪ್ರತಿಭಟನೆಯನ್ನೂ ನಡೆಸಿದ್ದರು.”

ಮುಕ್ತಾ ತಿಲಕ್ ಅವರ ಕುಟುಂಬದ ಸದಸ್ಯರಿಗೆ ಬಿಜೆಪಿಯು ಟಿಕೆಟ್ ನೀಡದ ಕಾರಣ ಕ್ಷೇತ್ರದ ಬಿಜೆಪಿ ಮತದಾರರು ಕೂಡ ಅಸಮಾಧಾನಗೊಂಡಿದ್ದರು. ಪುಣೆ ಮುನ್ಸಿಪಲ್ ಕಾರ್ಪೊರೇಷನ್‌ನ ಸ್ಥಾಯಿ ಸಮಿತಿ ಮುಖ್ಯಸ್ಥರಾಗಿದ್ದ ರಸಾನೆ ಅವರನ್ನು ಅಭ್ಯರ್ಥಿ ಎಂದು ಘೋಷಿಸಿದಾಗ, ಮುಕ್ತಾ ಅವರ ಪತಿ ಶೈಲೇಶ್ ತಿಲಕ್ ಪ್ರತಿಕ್ರಿಯಿಸಿ “ಇದು ಅನ್ಯಾಯ” ಎಂದು ಸಾರ್ವಜನಿಕವಾಗಿ ಹೇಳಿಕೆ ನೀಡಿದ್ದರು.

“ಕ್ಷೇತ್ರದಲ್ಲಿನ ವಾಸ್ತವಗಳೊಂದಿಗೆ ರಸಾನೆ ಅವರ ಒಡನಾಟ ಸೇರಿದಂತೆ ಹಲವು ಪ್ರಮುಖ ಅಂಶಗಳನ್ನು ಬದಿಗೊತ್ತಿ ಟಿಕೆಟ್ ನೀಡಲಾಯಿತು” ಎಂದು ಹೆಸರು ಹೇಳಲಿಚ್ಛಿಸದ ಬಿಜೆಪಿ ನಾಯಕರೊಬ್ಬರು ಮಾಹಿತಿ ನೀಡಿದ್ದಾರೆ. “ಅವರು ಮೂರು ವರ್ಷಗಳಿಂದ ಸ್ಥಾಯಿ ಸಮಿತಿಯಲ್ಲಿರಬಹುದು. ಆದರೆ ಅವರಿಗೆ ಜನರೊಂದಿಗೆ ಯಾವುದೇ ಸಂಪರ್ಕವಿಲ್ಲ. ಕ್ಷೇತ್ರದ ಅನೇಕ ಜನರಿಗೆ ಅವರ ಪರಿಚಯವೇ ಇಲ್ಲ. ತಿಲಕ್ ಕುಟುಂಬದ ಯಾರಿಗಾದರೂ ಟಿಕೆಟ್ ನೀಡಿದ್ದರೆ ಚುನಾವಣೆಯಲ್ಲಿ ಗೆಲ್ಲುವ ಸಾಧ್ಯತೆ ಹೆಚ್ಚುತ್ತಿತ್ತು” ಎಂದಿದ್ದಾರೆ.

ಪುಣೆಯ ಬಿಜೆಪಿ ಉಪಾಧ್ಯಕ್ಷ ಸಂದೀಪ್ ಖರ್ಡೇಕರ್ ಅವರು ‘ನ್ಯೂಸ್‌ಲಾಂಡ್ರಿ’ ಜೊತೆಯಲ್ಲಿ ಮಾತನಾಡಿದ್ದು, “ಚುನಾವಣೆಯಲ್ಲಿ ಏನಾಯಿತೆಂದು ಇನ್ನೂ ಆತ್ಮಾವಲೋಕನ ಮಾಡಿಕೊಳ್ಳುತ್ತಿದ್ದೇವೆ. ಧಾಂಗೇಕರ್ ಅವರ ವರ್ಚಸ್ಸು ಕೂಡ ಕೆಲಸ ಮಾಡಿದೆ” ಎಂದು ಒಪ್ಪಿಕೊಂಡಿದ್ದಾರೆ.

“ಎರಡು ಅಥವಾ ಮೂರು ವಿಷಯಗಳು ನಮ್ಮ ಗಮನಕ್ಕೆ ಬಂದಿವೆ. ಮೊದಲನೆಯದಾಗಿ, ನಮ್ಮ ಸಾಂಪ್ರದಾಯಿಕ ಬದ್ಧ ಮತದಾರರು ಮತದಾನ ಮಾಡಿಲ್ಲ. ಸುಮಾರು 16,000 ಮತದಾರರು ಕಸ್ಬಾ ಪೇಠದಿಂದ ನಗರದ ಇತರ ಭಾಗಗಳಿಗೆ ತೆರಳಿದ್ದರು. ಎರಡನೆಯದಾಗಿ ಎನ್‌ಸಿಪಿ, ಕಾಂಗ್ರೆಸ್ ಮತ್ತು ಶಿವಸೇನೆಯ (ಉದ್ಧವ್) ಸಂಯೋಜಿತ ಮತಗಳು ಒಟ್ಟಿಗೆ ಇದ್ದವು. ಮೂರನೆಯ ಹಾಗೂ ಪ್ರಮುಖ ಅಂಶವೆಂದರೆ- ಮೃದುವಾಗಿ ಮಾತನಾಡುವ ದಾಂಗೇಕರ್‌ ಅವರ ವ್ಯಕ್ತಿತ್ವ” ಎಂದು ವಿಶ್ಲೇಷಿಸಿದ್ದಾರೆ.

“ಜನಸಾಮಾನ್ಯರಿಗಾಗಿ ಕೆಲಸ ಮಾಡುವ ವ್ಯಕ್ತಿ ಎಂಬ ಇಮೇಜ್‌ ಅನ್ನು ಅವರು ರೂಪಿಸಿಕೊಂಡಿದ್ದಾರೆ. ಆದ್ದರಿಂದ ಈ ಚುನಾವಣೆ ವಾಸ್ತವವಾಗಿ ರವೀಂದ್ರ ಧಾಂಗೇಕರ್ ಮತ್ತು ಬಿಜೆಪಿ ನಡುವಿನ ಹೋರಾಟವಾಗಿದೆ ಹೊರತು ‘ಎಂವಿಎ’ ಮೈತ್ರಿ ಕೂಟ ಮತ್ತು ಬಿಜೆಪಿ ನಡುವಿನ ಸಮರವಾಗಿರಲಿಲ್ಲ” ಎಂದು ಅಭಿಪ್ರಾಯಪಟ್ಟಿದ್ದಾರೆ.

“ನಮ್ಮ ಪಕ್ಷವು ಬ್ರಾಹ್ಮಣ ಮತಗಳನ್ನು ಕಳೆದುಕೊಂಡಿದೆ ಎಂಬ ವಾದದಲ್ಲಿ ತಿರುಳಿಲ್ಲ” ಎಂದಿದ್ದಾರೆ ಖರ್ಡೇಕರ್.

“ಅದು ತಪ್ಪು ಕಲ್ಪನೆ. ವಾಸ್ತವವಾಗಿ, ಬ್ರಾಹ್ಮಣರ ಪ್ರಾಬಲ್ಯವಿರುವ ವಾರ್ಡ್ ಸಂಖ್ಯೆ 15ರಲ್ಲಿ ನಮಗೆ 7,500 ಮತಗಳ ಮುನ್ನಡೆ ಸಿಕ್ಕಿತ್ತು. ಆದರೆ ಮುಕ್ತಾ ತಿಲಕರಿಗೆ ಮತ ಹಾಕಿದವರಿಗೆ ಹೋಲಿಸಿದರೆ ಈ ಸಂಖ್ಯೆ ಕಡಿಮೆಯೇ ಆಗಿದೆ” ಎಂದು ಹೇಳಿದ್ದಾರೆ.

ಜನರೊಂದಿಗೆ ಬೆರೆಯುವ ವ್ಯಕ್ತಿ

ಗೆಲುವು ಸಾಧಿಸಿರುವ ಅಭ್ಯರ್ಥಿ ಧಾಂಗೇಕರ್ ಅವರು ರಾಜ್ ಠಾಕ್ರೆಯವರ ಮಹಾರಾಷ್ಟ್ರ ನವನಿರ್ಮಾಣ ಸೇನೆಗೆ ಸೇರುವ ಮೊದಲು ಶಿವಸೇನೆಯೊಂದಿಗೆ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದರು. 2017 ರಲ್ಲಿ, ಅವರು ಬಿಜೆಪಿಯಿಂದ ಹೊರಹಾಕಲ್ಪಟ್ಟ ನಂತರ ಕಾಂಗ್ರೆಸ್ ಸೇರಿದರು. 2009 ಮತ್ತು 2014ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಸ್ಬಾ ಪೇಠದಿಂದ ಸ್ಪರ್ಧಿಸಿ ಸೋತಿದ್ದ ಧಾಂಗೇಕರ್ ನಾಲ್ಕು ಬಾರಿ ಕಾರ್ಪೊರೇಟರ್ ಆಗಿ ಕೆಲಸ ಮಾಡಿದ್ದಾರೆ.

‘You can’t woo voters using only polarisation’: Why BJP lost its strongest constituency in old Pune
ಕಸ್ಬಾ ಪೇಠ್‌ನಲ್ಲಿ ಗೆಲುವು ಪಡೆದ ಅಭ್ಯರ್ಥಿ ರವೀಂದ್ರ ಧಾಂಗೇಕರ್‌ (PC: NewsLaundry)

ಪುಣೆ ಸಿಟಿ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಇಂದ್ರಜೀತ್ ಟಕವಾನೆ ಅವರು ‘ನ್ಯೂಸ್‌ಲಾಂಡ್ರಿ’ ಜೊತೆಯಲ್ಲಿ ಮಾತನಾಡಿ, “ಧಾಂಗೇಕರ್‌‌ ಸ್ಥಳೀಯರೊಂದಿಗೆ ಉತ್ತಮ ಸಂಪರ್ಕ ಹೊಂದಿದ್ದಾರೆ. ಇದು ಬಿಜೆಪಿ ವಿರುದ್ಧ ಗೆಲ್ಲಲು ಸಹಾಯ ಮಾಡಿತು. ಅವರು (ಧಾಂಗೇಕರ್‌) ಕಾರಿನಲ್ಲಿ ತಿರುಗಾಡುವುದನ್ನು ನೋಡಿಲ್ಲ. ಯಾರಿಗಾದರೂ ಸಹಾಯ ಮಾಡಲು ಹೊರಟಾಗ ಸ್ಕೂಟರ್‌ನಲ್ಲಿ ಹೋಗುವುದನ್ನು ಆಗಾಗ್ಗೆ ಕಾಣಬಹುದು. ಅಗತ್ಯವಿರುವವರಿಗೆ ಆಸ್ಪತ್ರೆಯ ಬಿಲ್‌ ಪಾವತಿ, ಆಧಾರ್ ಕಾರ್ಡ್, ಶಾಲೆ, ನೀರು, ವಿದ್ಯುತ್ ಸಮಸ್ಯೆ- ಹೀಗೆ ಯಾವುದೇ ಇರಲಿ ಜನರೊಂದಿಗೆ ಧಾಂಗೇಕರ್‌ ನಿಲ್ಲುತ್ತಿದ್ದರು. ತಳಸ್ಪರ್ಶಿಯಾಗಿ ಕೆಲಸ ಮಾಡುವ ವ್ಯಕ್ತಿಗೆ ಜನರು ಮತ ಹಾಕಿದ್ದರಿಂದ ಚುನಾವಣೆಯಲ್ಲಿ ಗೆಲುವು ಸಾಧ್ಯವಾಗಿದೆ” ಎಂದು ವಿವರಿಸಿದ್ದಾರೆ.

“ಮುಕ್ತಾ ತಿಲಕ್ ಅವರ ಕುಟುಂಬದ ಸದಸ್ಯರಿಗೆ ಬಿಜೆಪಿ ಟಿಕೆಟ್ ಸಿಕ್ಕಿದ್ದರೂ ಧಾಂಗೇಕರ್ ಗೆಲ್ಲುತ್ತಿದ್ದರು. ಹೌದು ಆಗ ಸ್ಪರ್ಧೆಯು ಹೆಚ್ಚು ತೀವ್ರವಾಗಿರುತ್ತಿತ್ತು, ಆದರೆ ಧಾಂಗೇಕರ್‌‌ ವಿಜಯಶಾಲಿಯಾಗುತ್ತಿದ್ದರು” ಎಂದು ತಿಳಿಸಿದ್ದಾರೆ.

ಪುಣೆ ಮೂಲದ ರಾಜಕೀಯ ವಿಮರ್ಶಕ ಸುಹಾಸ್ ಕುಲಕರ್ಣಿ, “ಬ್ರಾಹ್ಮಣ ಅಭ್ಯರ್ಥಿಯನ್ನು ಸ್ಪರ್ಧೆಗೆ ಇಳಿಸದೆ ಇದ್ದಿದ್ದರಿಂದ ರಾಷ್ಟ್ರೀಯ ಸ್ವಯಂಸೇವಕ ಸಂಘವು ಬಿಜೆಪಿಗೆ ಪರೋಕ್ಷ ಸಂದೇಶವನ್ನು ನೀಡಿದೆ. ಇದು ಕಾಂಗ್ರೆಸ್‌ಗೆ ಸಹಾಯ ಮಾಡಿದೆ” ಎನ್ನುತ್ತಾರೆ.

“ಬ್ರಾಹ್ಮಣ ಮತದಾರರು ಎಂದಿನ ರೀತಿಯಲ್ಲಿ ಮತದಾನ ಮಾಡಿಲ್ಲ ಮತ್ತು ಶೇಕಡಾವಾರು ಮತದಾನ ಕಡಿಮೆಯಾಗಿದೆ. ಬಿಜೆಪಿ ಬಗೆಹರಿಸದಿರುವ ಸ್ಥಳೀಯ ಸಮಸ್ಯೆಗಳೂ ಇವೆ. ಜನರು ಬೆಲೆ ಏರಿಕೆ ಮತ್ತು ಇತರ ಸಮಸ್ಯೆಗಳಿಂದ ಬೇಸತ್ತಿದ್ದಾರೆ. ಆದರೆ ಬಿಜೆಪಿ ಈ ಸಮಸ್ಯೆಗಳ ಕುರಿತು ಮಾತನಾಡದೆ ಧರ್ಮ ಮತ್ತು ಧ್ರುವೀಕರಣದ ವಿಷಯಗಳ ಬಗ್ಗೆ ಪ್ರಚಾರ ಮಾಡುತ್ತಿದೆ.”

ಇದನ್ನೂ ಓದಿರಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಗದಗ: ಸಮಬಲದ ಹೋರಾಟದಲ್ಲಿ ಎಚ್ಕೆ ಪಾಟೀಲ್ ಪ್ರತಿಷ್ಠೆ ಪಣಕ್ಕೆ?!

ಪುಣೆಯ ದರ್ಗಾವು ಮೊದಲು ಹಿಂದೂ ದೇವಾಲಯವಾಗಿತ್ತು ಎನ್ನುವಂತಹ ವಿವಾದವನ್ನು ಮುನ್ನೆಲೆಗೆ ತಂದು ಧ್ರುವೀಕರಣಕ್ಕೆ ಬಿಜೆಪಿ ಯತ್ನಿಸಿತ್ತು.

ಕಸ್ಬಾ ಪೇಠ್‌ನ ಬಿಜೆಪಿ ಮತದಾರರೊಬ್ಬರು, “ರಾಷ್ಟ್ರೀಯತೆ ಮತ್ತು ಇತರ ವಿಷಯಗಳು ಪರವಾಗಿಲ್ಲ. ಆದರೆ ನೀವು ಕೇವಲ ರಾಷ್ಟ್ರೀಯತೆ ಮತ್ತು ಧರ್ಮವನ್ನು ಬಳಸಿಕೊಂಡು ಮತದಾರರನ್ನು ಓಲೈಸಲು ಸಾಧ್ಯವಿಲ್ಲ. ಕಸ್ಬಾಪೇಠ್‌ ಕ್ಷೇತ್ರವು ಪುಣೆಯ ಅತ್ಯಂತ ಹಳೆಯ ಪ್ರದೇಶಗಳಲ್ಲಿ ಒಂದಾಗಿದೆ. ಪುನರಾಭಿವೃದ್ಧಿ, ಹಳೆಯ ಕಟ್ಟಡಗಳ ಶಿಥಿಲ ಸ್ಥಿತಿ, ನೀರು ಸರಬರಾಜು, ಸಂಚಾರ, ಇತ್ಯಾದಿಗಳಿಗೆ ಸಂಬಂಧಿಸಿದ ವಿವಿಧ ಸ್ಥಳೀಯ ಸಮಸ್ಯೆಗಳಿವೆ. ಈ ಸಮಸ್ಯೆಗಳಿಂದ ಬೇಸತ್ತು ಅನೇಕ ಜನರು ದೂರ ಸರಿದಿದ್ದಾರೆ. ಈ ವಿಷಯಗಳಿಗೆ ಆದ್ಯತೆ ನೀಡುವ ಬದಲು, ಪಕ್ಷವು ಧ್ರುವೀಕರಣ ಮತ್ತು ರಾಷ್ಟ್ರೀಯತೆಯ ಮೇಲೆ ಕೇಂದ್ರೀಕರಿಸಿದೆ. ಅದು ಮತದಾರರಿಂದ ಸಕಾರಾತ್ಮಕ ಪ್ರತಿಕ್ರಿಯೆ ಪಡೆಯಲಿಲ್ಲ” ಎಂದು ‌ಎಚ್ಚರಿಸಿದ್ದಾರೆ.

“ಆದರೆ ಕಸ್ಬಾ ಪೇಠ್ ವಿಜಯವು ಮಹಾರಾಷ್ಟ್ರದಲ್ಲಿ ಎಂವಿಎಗೆ ಸಹಾಯ ಮಾಡುತ್ತದೆ ಎಂಬುದು ಅಸಾಧ್ಯ ಮಾತು” ಎನ್ನುತ್ತಾರೆ ಕುಲಕರ್ಣಿ. “ಯಾವುದೇ ಶಾಶ್ವತ ಹೊಂದಾಣಿಕೆ ಕಂಡುಬರುತ್ತಿಲ್ಲ. ವಾಸ್ತವವಾಗಿ, ಈ ಗೆಲುವು ಎನ್‌ಸಿಪಿ ಮತ್ತು ಕಾಂಗ್ರೆಸ್ ನಡುವೆ ಟಿಕೆಟ್‌ಗಾಗಿ ಪೈಪೋಟಿಯನ್ನು ಹೆಚ್ಚಿಸಲಿದೆ. ಒಗ್ಗಟ್ಟಾಗಿ ಹೋರಾಡುವ ಮೂಲಕ ಬಿಜೆಪಿ ವಿರುದ್ಧ ಗೆಲ್ಲುವ ಅವಕಾಶ ಸಿಗಬಹುದು ಎಂಬುದನ್ನು ಈಗ ಮನಗಂಡಿದ್ದಾರೆ. ಆದರೆ ಮುಂಬರುವ ದಿನಗಳಲ್ಲಿ ಎರಡೂ ಪಕ್ಷಗಳು ತಮ್ಮ ಅಭ್ಯರ್ಥಿಗಳಿಗೆ ಟಿಕೆಟ್ ನಿಗದಿ ಮಾಡಲು ಹರಸಾಹಸಪಡಬಹುದು” ಎಂಬುದು ಅವರ ಅನಿಸಿಕೆ.

ವರದಿ ಕೃಪೆ: ನ್ಯೂಸ್‌ ಲಾಂಡ್ರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದೆಹಲಿಯ ಲೆಫ್ಟಿನೆಂಟ್ ಗವರ್ನರ್ ತಮ್ಮನ್ನೇ ನ್ಯಾಯಾಲಯ ಎಂದು ಭಾವಿಸಿರುವಂತಿದೆ: ಸುಪ್ರೀಂ ಕೋರ್ಟ್ ಕಿಡಿ

0
ಸುಪ್ರೀಂ ಕೋರ್ಟ್‌ ಆದೇಶ ಉಲ್ಲಂಘಿಸಿ ಉತ್ತರ ಅರಾವಳಿ ಚಿರತೆ ವನ್ಯಜೀವಿ ಕಾರಿಡಾರ್‌ ಆಗಿರುವ ದೆಹಲಿ ರಿಜ್‌ ಅರಣ್ಯ ಪ್ರದೇಶದಲ್ಲಿ ಸುಮಾರು 1,100 ಮರಗಳನ್ನು ಕಡಿಯಲು ನಿರ್ದೇಶನ ನೀಡುವಾಗ ದೆಹಲಿ ಅಭಿವೃದ್ಧಿ ಪ್ರಾಧಿಕಾರದ (ಡಿಡಿಎ)...