Homeಅಂಕಣಗಳುಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಶಿರಹಟ್ಟಿ: ಮೇಲ್ವರ್ಗದ ಮೇಲಾಟದ ಕುರುಕ್ಷೇತ್ರ; ಹೆಸರಿಗಷ್ಟೇ ಮೀಸಲು ಕ್ಷೇತ್ರ!

ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಶಿರಹಟ್ಟಿ: ಮೇಲ್ವರ್ಗದ ಮೇಲಾಟದ ಕುರುಕ್ಷೇತ್ರ; ಹೆಸರಿಗಷ್ಟೇ ಮೀಸಲು ಕ್ಷೇತ್ರ!

- Advertisement -
- Advertisement -

ಉತ್ತರ ಕರ್ನಾಟಕದ ಸಹ್ಯಾದ್ರಿ ಎಂಬ ಅಭಿದಾನದ ಕಪ್ಪತಗುಡ್ಡದ ತಪ್ಪಲಲ್ಲಿರುವ ಶಿರಹಟ್ಟಿ-ಲಕ್ಷ್ಮೇಶ್ವರ ಮತ್ತು ಮುಂಡರಗಿ ತಾಲೂಕುಗಳು ಐತಿಹಾಸಿಕ-ಸಾಂಸ್ಕೃತಿಕ-ಸಾಹಿತ್ಯಿಕ ಮತ್ತು ಜನಪದೀಯ ಸಿರಿ-ಸಂಪ್ರದಾಯದ ಬೆಳವಲ ಭೂಮಿ; ಧರ್ಮ ಸಹಿಷ್ಣುತೆ ಮತ್ತು ಕೋಮು ಸೌಹಾರ್ದಕ್ಕೆ ಇಡೀ ದೇಶಕ್ಕೇ ಮಾದರಿಯಾಗಿರುವ ಬಯಲು ಸೀಮೆ. ಸಕಲ ಧರ್ಮದ ಅನುಯಾಯಿಗಳಿರುವ ಸೂಫಿ ಸಂತರ ದರ್ಗಾಗಳು, ಹಿಂದು-ಮುಸ್ಲಿಂ ವಾಸ್ತುಶೈಲಿಯ ಕಟ್ಟಡ ಹಾಗು ಎರಡೂ ಧರ್ಮಗಳ ಆರಾಧನಾ ವಿಧಾನದ ಫಕೀರೇಶ್ವರ ಮಠದಂಥ ಭಾವೈಕ್ಯತಾ ತಾಣಗಳ ಈ ಸರ್ವಜನಾಂಗದ ಶಾಂತಿಯ ತೋಟದಲ್ಲಿ ಮಳೆ ಬಿದ್ದರಷ್ಟೇ ಸುಗ್ಗಿ. ಒಣ ಬೇಸಾಯದಿಂದ ಬದುಕು ಕಟ್ಟಿಕೊಳ್ಳಲಾಗದೆ ಈ ಮೂರೂ ತಾಲೂಕಿನ ಮಂದಿ ಬದುಕು ಅರಸಿ ಎಲ್ಲೆಲ್ಲಿಗೊ ಗುಳೆ ಹೊರಡುತ್ತಾರೆ; ಕನಿಷ್ಠ ಮೂಲಸೌಕರ್ಯಗಳೂ ಇಲ್ಲದ ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಸಮಸ್ಯೆ-ಸಂಕಟ, ಬಡತನ-ಬವಣೆಯ ಗೋಳು ಹೇಳತೀರದು.

ಶಿರಹಟ್ಟಿ-ಲಕ್ಷ್ಮೇಶ್ವರ-ಮುಂಡರಗಿಯ ಸಾಮಾಜಿಕ, ರಾಜಕೀಯ, ಆರ್ಥಿಕ, ಶೈಕ್ಷಣಿಕ- ಹೀಗೆ ಸಕಲ ವಲಯಗಳೂ ಪ್ರಬಲ ಲಿಂಗಾಯತರ ಹಿಡಿತದಲ್ಲಿವೆ. ಸ್ವಾತಂತ್ರ್ಯಾನಂತರದಲ್ಲಿ ಜರುಗಿದ ಚುನಾವಣೆಗಳೆಲ್ಲ ಲಿಂಗಾಯತ ಜಾತಿಪ್ರತಿಷ್ಠೆಯ ಜಿದ್ದಾಜಿದ್ದಿಗಳಾಗಿವೆಯೇ ಹೊರತು ಪ್ರಗತಿ, ಅಭಿವೃದ್ಧಿಯ ಮಾತು ಮುಂದಿಟ್ಟು ಲಡಾಯಿ ನಡೆದ ನಿದರ್ಶನವೇ ಕಾಣಿಸದು! ಕ್ಷೇತ್ರದಲ್ಲಿ ಪಾಳೇಗಾರಿ ಗೌಡಿಕೆ ಕಂಡೂಕಾಣದಂತೆ ನಾಜೂಕಾಗಿ ನಡೆದುಕೊಂಡಿದೆ. ಕುಡಿಯಲು ನೀರಿಲ್ಲದಿದ್ದರೂ ಜಾತಿ ರಾಜಕೀಯ ಪಂದ್ಯಾವಳಿಯ ’ಕ್ರೇಜ್’ ಕಮ್ಮಿಯೇನಿಲ್ಲ. ಲಾಗಾಯ್ತಿನಿಂದಲೂ ಬಹುಸಂಖ್ಯಾತ ಅಹಿಂದ ವರ್ಗವನ್ನು ಲಿಂಗಾಯತ ಏಕಸ್ವಾಮ್ಯದ ಮೇಲಾಟಕ್ಕೆ ಬಳಸಿಕೊಳ್ಳುತ್ತಾ ಬರಲಾಗಿದೆ; ಈ ಬಾರಿಯ ಚುನಾವಣಾ ಅಖಾಡದಲ್ಲೂ ಹಳೆ ವರಸೆಗಳೇ ಹೊಸ ಹಿಕಮತ್ತಿನಲ್ಲಿ ಪ್ರಯೋಗವಾಗಲಿವೆಯಷ್ಟೆ ಎಂದು ಕ್ಷೇತ್ರದ ಚಹರೆ ಬಲ್ಲ ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ.

ಇತಿಹಾಸ-ಸಂಸ್ಕೃತಿ

ಶಿರಹಟ್ಟಿ, ಲಕ್ಷ್ಮೇಶ್ವರ ಮತ್ತು ಮುಂಡರಗಿಗಳದ್ದು ಭವ್ಯ ಇತಿಹಾಸ. ಸಮೃದ್ಧ ಸಾಹಿತ್ಯ-ಸಂಸ್ಕೃತಿಯ ಲಕ್ಷ್ಮೇಶ್ವರ ಕರ್ನಾಟಕದ ಶ್ರೀಮಂತ ಪರಂಪರೆಯ ’ತಿರುಳ್ಗನ್ನಡ ನಾಡು’ ಎಂದು ಗುರುತಿಸಲ್ಪಟ್ಟಿದೆ; ಕನ್ನಡದ ಸಾಹಿತ್ಯ-ಸಾಂಸ್ಕೃತಿಕ ಕುರುಹುಗಳನ್ನು ನೃಪತುಂಗನ ಕಾಲಕ್ಕೂ ಹಿಂದಿನಿಂದ ಇಲ್ಲಿ ಕಾಣಬಹುದು. ಕವಿ ಪಂಪನಾದಿಯಾಗಿ ಹಲವು ಕನ್ನಡ ಕವಿ ಪುಂಗವರು ಲಕ್ಷ್ಮೇಶ್ವರ ಅತ್ಯಂತ ಪರಿಪಕ್ವ ಅಚ್ಚ ಕನ್ನಡ (ತಿರುಳ್ಗನ್ನಡ) ಭಾಷೆಯಲ್ಲಿ ಸಂವಹನ ನಡೆಸುತ್ತಿದ್ದ ಸ್ಥಳವೆಂದು ಬಣ್ಣಿಸಿದ್ದಾರೆ. ಲಕ್ಷ್ಮೇಶ್ವರ ಸುತ್ತಮುತ್ತಲಿನ ಪ್ರದೇಶ ತಿರುಳ್ಗನ್ನಡ ನಾಡಿನ ಹೃದಯ ಭಾಗವೆಂದು ಪಂಪ ಎಂದು ಉದ್ಗರಿಸಿದ್ದಾರೆ. ಪಂಪ ತಮ್ಮ ಮೌಲಿಕ ಕೃತಿಗಳಾದ ’ವಿಕ್ರಮಾರ್ಜುನ ವಿಜಯ’ ಮತ್ತು ’ಆದಿಪುರಾಣ’ ರಚಿಸಿದ್ದು ಇದೇ ಲಕ್ಷ್ಮೇಶ್ವರದಲ್ಲಿ! ಕನ್ನಡ ಕವಿ ಕಾಲಸೇನ 1081ರ ಲಕ್ಷ್ಮೇಶ್ವರ ಶಾಸನದ ಪ್ರಕಾರ ನರೇಂದ್ರಸೇನ-2ರ ಶಿಷ್ಯನಾಗಿದ್ದ.

ಪ್ರಾಚೀನಕಾಲದಲ್ಲಿ ಲಕ್ಷ್ಮೇಶ್ವರದ ಹೆಸರು ’ಪುಲಿಗೇರಿ’ ಅಥವಾ ’ಹುಲಿಗೆರೆ’ ಎಂದಾಗಿತ್ತೆಂಬ ವಾದವಿದೆ. ಹುಲಿಗೆರೆಯೆಂದರೆ ಹುಲಿಗಳ ಕೆರೆ ಎಂದರ್ಥ. ಕಾಲಕ್ರಮೇಣ ಹುಲಿಗೇರಿ, ಪುಲಿಗೇರಿ, ಪುಲಿಕರ ಎಂದು ಬದಲಾಯಿತಂತೆ. 12ನೇ ಶತಮಾನದಲ್ಲಿ ಕಲ್ಯಾಣ ಚಾಲುಕ್ಯರ 6ನೇ ವಿಕ್ರಮಾದಿತ್ಯ ಮಹಾಮಂಡಲೇಶ್ವರ ಲಕ್ಕರಸ ಯಾನೆ ಲಕ್ಷ್ಮರಸನ ಪಾರುಪತ್ಯದಲ್ಲಿದ್ದ ಈ ಊರಿನಲ್ಲಿ ಆತ ಲಕ್ಷ್ಮಣೇಶ್ವರನಿಗೆ ಸಮರ್ಪಿತವಾದ ಶೈವ ದೇಗುಲವೊಂದನ್ನು ಕಟ್ಟಿಸಿದ್ದರಿಂದ ’ಲಕ್ಷ್ಮೇಶ್ವರ; ಎಂಬ ಹೆಸರಿನ ವ್ಯತ್ಪತ್ತಿ ಆಯಿತೆನ್ನಲಾಗಿದೆ. ದೊಡ್ಡ ಶಿಕ್ಷಣ ಕೇಂದ್ರವಾಗಿದ್ದ ಲಕ್ಷ್ಮೇಶ್ವರ ಹಿಂದೆ 120 ಮಹಾಜನರಿಂದ ಕೂಡಿದ ರಾಜಧಾನಿ ಪಟ್ಟಣ ಬ್ರಹ್ಮೇಶ್ವರಗಿರಿ ಅಥವಾ ಬ್ರಹ್ಮಗೇರಿ ಘಟಕ ಸ್ಥಾನವಾಗಿತ್ತು ಎಂಬ ಉಲ್ಲೇಖ ಕ್ರಿ.ಶ.686ರ ಬಾದಾಮಿ ಚಾಲುಕ್ಯ ವಿಕ್ರಮಾದಿತ್ಯನ ಶಾಸನದಲ್ಲಿದೆ. ಈ ಪ್ರದೇಶ ಹಿಂದೆ ತಿರುಳ್ಗನ್ನಡ ನಾಡಿನ ಕೇಂದ್ರವಾಗಿದ್ದ ಪುಲಿಗೆರೆ ಮುನ್ನೂರು ಪ್ರಾಂತ್ಯದ ರಾಜಧಾನಿಯಾಗಿತ್ತು; ಇದು ಜೈನ ಕವಿಗಳು, ವಿದ್ವಾಂಸರು, ಪಂಡಿತರ ಮತ್ತು ಸಂತರ ನೆಲೆಯಾಗಿತ್ತು ಎಂದು ಇತಿಹಾಸ ಹೇಳುತ್ತದೆ. ಇಲ್ಲಿ ಆದಿಕವಿ ಪಂಪ ಮತ್ತು ಖ್ಯಾತ ಹಳಗನ್ನಡ ಕವಿ ಆದಯ್ಯ ವಾಸವಾಗಿದ್ದರು.

ಬಾದಾಮಿ ಚಾಲುಕ್ಯರು, ಕಲ್ಯಾಣ ಚಾಲುಕ್ಯರು, ರಾಷ್ಟ್ರಕೂಟರು, ಕಳಚೂರಿಗಳು, ಸೇವುಣರು, ಹೊಯ್ಸಳರು, ವಿಜಯನಗರ ಅರಸರು, ಆದಿಲ್ ಶಾಹಿಗಳವರೆಗೆ ಬಹುತೇಕ ಎಲ್ಲ ರಾಜ ಮನೆತನಗಳ ಆಳ್ವಿಕೆ ಕಂಡಿದ್ದ ಲಕ್ಷ್ಮೇಶ್ವರ ಸ್ವಾತಂತ್ರ್ಯದ ನಂತರದ ಆರಂಭದಲ್ಲಿ ಮೀರಜ್‌ನ ಪಟವರ್ಧನ್‌ಗಳ ಸುಪರ್ದಿಯಲ್ಲಿತ್ತು. ಮೊದಲು ಜೈನರ ಮುಖ್ಯ ಕೇಂದ್ರವಾಗಿದ್ದ ಲಕ್ಷ್ಮೇಶ್ವರಕ್ಕೆ ಸಂಬಂಧಿಸಿದಂತೆ ಜೈನ ಧರ್ಮದ ಸುದೀರ್ಘ ಇತಿಹಾಸವಿದೆ. ಜೈನರೆಲ್ಲ ವಣಿಕರಾಗಿದ್ದವರು. ಬಾದಾಮಿ ಚಾಲುಕ್ಯರ 2ನೇ ಪುಲಕೇಶಿ ಕಾಲದಲ್ಲಿ ಇಲ್ಲಿ ಮೊಟ್ಟಮೊದಲ ಬಾರಿಗೆ ಜೈನರ ಶಂಖ ಬಸದಿ ನಿರ್ಮಿಸಲಾಯಿತು. ಈ ಅತ್ಯಂತ ಪುರಾತನವಾದ ಸಣ್ಣ ಮಾದರಿಯ ಚತುರ್ಮುಖ ಬಸದಿಯಲ್ಲಿ ಕುಳಿತು ಪಂಪ ಸಾಹಿತ್ಯ ರಚಿಸಿದರು. ಲಕ್ಷ್ಮೇಶ್ವರದಲ್ಲಿ ಮತ್ತೊಂದು ಜೈನ ದೇವಾಲಯ ಸನ್ನಬಸದಿ ಸಹ ಇದೆ.

10-12ನೇ ಶತಮಾನದಲ್ಲಿ ಶೈವ ಪಂಥ ಪ್ರವರ್ಧಮಾನಕ್ಕೆ ಬಂದಾಗ ಲಕ್ಷ್ಮೇಶ್ವರ ಸುತ್ತಲಿನಲ್ಲಿ ಹಲವು ಶೈವ ದೇವಾಲಯಗಳು ಅಸ್ತಿತ್ವಕ್ಕೆ ಬಂದವು. ಅದರಲ್ಲಿ ಈಗಿರುವ ಸೋಮೇಶ್ವರ ದೇಗುಲ ಪ್ರಸಿದ್ಧವಾಗಿದೆ. ಈ ಸೋಮನಾಥ ಮೂರ್ತಿಯನ್ನು ಶಿವಶರಣ ಆದಯ್ಯ ಸೌರಾಷ್ಟ್ರದಿಂದ ತಂದು ಸ್ಥಾಪಿಸಿದರೆಂಬ ಪ್ರತೀತಿಯಿದೆ; ಆದರೆ ಇದೊಂದು ಸ್ವಯಂಭೂಮೂರ್ತಿಯೆಂಬುದು ಜನರ ನಂಬಿಕೆ. ಗರ್ಭಗುಡಿಯ ಹೊರಗೆ ಲಿಂಗವಿರುವ ಕರ್ನಾಟಕದ ಏಕೈಕ ದೇವಾಲಯವಿದು. ಗರ್ಭಗುಡಿಯಲ್ಲಿನ ಮೂರ್ತಿ, ಶಿವ ಪಾರ್ವತಿಯೊಡಗೂಡಿ ನಂದಿ ಮೇಲೆ ಸವಾರಿ ಹೊರಟಂತಿದೆ. ಈ ದೇವಾಲಯದ ಸಂಕೀರ್ಣದಲ್ಲಿ ಹಲವು ಪುಟ್ಟಪುಟ್ಟ ಶಿವ ಸಮರ್ಪಿತ ಗುಡಿಗಳಿವೆ. ಎತ್ತರದ ಗೋಡೆಗಳಿಂದ ಆವೃತವಾದ ಸೋಮೇಶ್ವರ ದೇವಸ್ಥಾನ ಮೂರು ಮುಖ್ಯ ದ್ವಾರಗಳನ್ನು ಹೊಂದಿದೆ. ಚಾಲುಕ್ಯರ ವಾಸ್ತುಶಿಲ್ಪದ ಅತ್ಯದ್ಭುತ ಮಾದರಿಯಾದ ಈ ದೇವಾಲಯದ ಸಂಕೀರ್ಣದಲ್ಲಿ ಸಾಂಸ್ಕೃತಿಕ ಪ್ರಾಮುಖ್ಯತೆಯ ಅನೇಕ ಕನ್ನಡ ಶಾಸನಗಳಿವೆ. ಕಲಾತ್ಮಕ ಮೆಟ್ಟಿಲುಗಳುಳ್ಳ ತೆರೆದ ಬಾವಿಯಿದೆ.

ಲಕ್ಷ್ಮೇಶ್ವರದಲ್ಲಿ ಹಲವು ಆಕರ್ಷಕ ಸ್ಮಾರಕಗಳಿವೆಯಾದರೂ ಪ್ರಮುಖವಾಗಿ ಮೌಸೋಲಿಯಂ ದರ್ಗಾ ಪ್ರಖ್ಯಾತವಾಗಿದೆ. ದೂದ್ ನಾನಾ ವಲ್ಲಿ ಎಂದು ಕರೆಯಲ್ಪಡುವ ಈ ದರ್ಗಾ ಪ್ರಸಿದ್ಧ ಸೂಫಿ ಸಂತ ಹಜರತ್ ಸಯ್ಯದ್ ಸುಲೈಮಾನ್ ಬಾದಶಾ ಖಾದ್ರಿಯವರ ಸಮಾಧಿಯಾಗಿದೆ. 16 ಮತ್ತು 17ನೇ ಶತಮಾನದಲ್ಲಿ ಬಿಜಾಪುರದ ಆದಿಲ್ ಶಾಹಿ ಸಾಮ್ರಾಜ್ಯದ ಜನರಲ್ ಸೈಯ್ಯದ್ ಅಂಕುಶ್ ಲಕ್ಷ್ಮೇಶ್ವರವನ್ನು ಆಳಿದ್ದರು. ಈ ಯೋಧ ಉದಾತ್ತ ಧಾರ್ಮಿಕ ಸಂತರೂ ಆಗಿದ್ದರು; ಹಾಗಾಗಿ ರಾಜ, ಲಕ್ಷ್ಮೇಶ್ವರ ಮತ್ತದರ ಸುತ್ತಲಿನ ಹಳ್ಳಿಗಳನ್ನು ಜಹಗೀರಾಗಿ ಜನರಲ್ ಅಂಕುಶ್ ಖಾನ್‌ಗೆ ಕೊಟ್ಟಿದ್ದರು. ಇಂದಿನ ಲಕ್ಷ್ಮೇಶ್ವರದ ಕಂದಾಯ ಇಲಾಖೆಯ ಕಚೇರಿ ಪ್ರದೇಶ ಜನರಲ್ ಅಂಕುಶ್ ಖಾನ್‌ನ ಕೋಟೆಯ ಭಾಗವಾಗಿತ್ತು. ಅನೇಕ ಇಸ್ಲಾಮಿಕ್ ಸ್ಮಾರಕಗಳನ್ನು ಸ್ಥಾಪಿಸಿದ್ದ ಜನರಲ್ ಅಂಕುಶ್ ಖಾನ್ ಶಿರಹಟ್ಟಿಯಲ್ಲಿ ಧಾರ್ಮಿಕ ಚಟುವಟಿಕೆ ನಡೆಸಲು ದೇಸಾಯಿ ಒಬ್ಬರಿಗೆ ಜಹಗೀರು ದಾನ ಮಾಡಿದ ಉಲ್ಲೇಖಗಳಿವೆ.

ಇತಿಹಾಸದಲ್ಲಿ ಶಹರಪೂರ ಎಂದು ದಾಖಲಾಗಿರುವ ಶಿರಹಟ್ಟಿ ಭಾವೈಕ್ಯತೆಯ ತಾಣ. “ದ್ವೇಷ ಬಿಡು; ಪ್ರೀತಿ ಮಾಡು” ಎಂಬ ಸಂದೇಶ ಸಾರುವ ಹಿಂದು-ಮುಸ್ಲಿಮ್ ಸಾಮರಸ್ಯದ ಫಕೀರಸ್ವಾಮಿ ಸಂಪ್ರದಾಯವನ್ನು ಶಿರಹಟ್ಟಿಯಲ್ಲಿ ಜನರಲ್ ಅಂಕುಶ್ ಖಾನ್ ಹುಟ್ಟುಹಾಕಿದರು. ಇಲ್ಲಿರುವ ಹಿಂದು-ಮುಸ್ಲಿಮ್ ಶೈಲಿಯ ಕಟ್ಟಡದ ಫಕೀರೇಶ್ವರ ಮಠ ಎರಡೂ ಧರ್ಮಗಳ ಬಾಂಧವ್ಯದ ಸಂಕೇತದಂತಿದೆ. ಎರಡೂ ಧರ್ಮಗಳ ಆಚರಣೆ-ಆರಾಧನೆ ನಡೆಯುವ ಮಠದ ಉತ್ತರ ದ್ವಾರ ಇಸ್ಲಾಮ್ ಶೈಲಿಯಲ್ಲಿದ್ದರೆ, ದಕ್ಷಿಣ ದ್ವಾರ ಹಿಂದು ವಾಸ್ತು ಸಂಪ್ರದಾಯದಲ್ಲಿದೆ. ಗದ್ದುಗೆ ಮೇಲಿನ ಮಂಟಪ ಹಿಂದೂ-ಮುಸ್ಲಿಮ್ ಭಾವೈಕ್ಯತೆಯ ದ್ಯೋತಕವಾಗಿದೆ. ಹಿಂದು-ಮುಸ್ಲಿಮ್ ಸಹಬಾಳ್ವೆಯ ಬೀಜ ಬಿತ್ತಿದ ಫಕೀರೇಶ್ವರ ಮಠದ ಜಾತ್ರೆ ದೇಶದ ಸೌಹಾರ್ದ ಪರಂಪರೆಯಲ್ಲಿ ಅಗ್ರಗಣ್ಯ ಸ್ಥಾನ ಪಡೆದಿದೆ. ಪ್ರತಿ ವರ್ಷದ ಆಗಿ ಹುಣ್ಣಿಮೆಯಂದು ಜರಗುವ ಈ ಜಾತ್ರೆಗೆ ಸರ್ವ ಧರ್ಮದ ಲಕ್ಷಾಂತರ ಜನರು ಸೇರುತ್ತಾರೆ. ಶಿಥಿಲ ಕೋಟೆಯಿರುವ ಶಿರಹಟ್ಟಿಯಲ್ಲಿ 300 ವರ್ಷಗಳ ಪ್ರಾಚೀನ ಇತಿಹಾಸವಿರುವ ಅವ್ವಲಿಂಗ ಸಮಾಧಿ ಮತ್ತು ಮಠವಿದೆ; 35 ಹೆಕ್ಟೇರ್ ಪ್ರದೇಶದಲ್ಲಿ ವ್ಯಾಪಿಸಿರುವ ಮಾಗಡಿ ಪಕ್ಷಿಧಾಮಕ್ಕೆ ಪ್ರತಿ ವರ್ಷ 130 ಜಾತಿಯ ಸುಮಾರು ಐದು ಸಾವಿರ ಪಕ್ಷಿಗಳು ವಿದೇಶದಿಂದ ವಲಸೆ ಬರುತ್ತವೆಯೆಂದು ಅಧ್ಯಯನ ವರದಿಗಳು ಹೇಳುತ್ತವೆ.

1617ರಲ್ಲಿ ಜನರಲ್ ಅಂಕುಶ್ ಖಾನ್ ಲಕ್ಷ್ಮೇಶ್ವರದಲ್ಲಿ ಕಲ್ಲಿನ ಜುಮ್ಮಾ ಮಸೀದಿ ಕಟ್ಟಿಸಿದರು. ದ್ರಾವಿಡ ಶೈಲಿಯ ಈ ಮಸೀದಿಯ ಬೃಹತ್ ಬಾಗಿಲುಗಳು ಕೋಟೆಯ ಪ್ರವೇಶ ದ್ವಾರದಂತಿವೆ. ಇಲ್ಲಿರುವ ಸರಪಳಿ ಒಂದೇ ಕಲ್ಲಿನಲ್ಲಿ ಕೆತ್ತನೆ ಮಾಡಿ ನಿರ್ಮಿಸಿರುವುದು ಕುತೂಹಲಕರವಗಿದೆ. ಲಕ್ಷ್ಮೇಶ್ವರದಲ್ಲಿ ಅಂಕುಶ್ ಖಾನ್ ಸಮಾಧಿ-ಬಡೆ ನಾನಾ ದರ್ಗಾ ಇದೆ. ಪ್ರತಿ ತಿಂಗಳು ಇಲ್ಲಿ ಸಕಲ ಧರ್ಮದ ಶ್ರದ್ಧಾಳುಗಳು ಸೇರುತ್ತಾರೆ; ವಾರ್ಷಿಕ ಉರುಸ್‌ಗೆ ಲಕ್ಷಾಂತರ ಮಂದಿ ಬರುತ್ತಾರೆ. ಇಲ್ಲಿರುವ ದರ್ಗಾ-ಮಸೀದಿಗಳು ಬಿಜಾಪುರದ ಸುಲ್ತಾನರ ಕಾಲದ ಇಂಡೋ ಸಾರ್ಸೆನಿಕ್ ವಾಸ್ತುಶಿಲ್ಪ ಶೈಲಿಯದಾಗಿವೆ.

ಹಲವು ಐತಿಹಾಸಿಕ-ಧಾರ್ಮಿಕ ಸ್ಥಳಗಳಿರುವ ಮುಂಡರಗಿ, ಸಿಪಾಯಿದಂಗೆಯ ಕಾಲದ ಬಂಡಾಯದ ನೆಲವೆಂದು ಖ್ಯಾತವಾಗಿದೆ. ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಟಗಾರರು ಇಲ್ಲಿ ಬೀಡುಬಿಟ್ಟಿದ್ದರು. 1857ರ ದಂಗೆಯ ಸಂದರ್ಭದಲ್ಲಿ ಬ್ರಿಟಿಷ್ ಅಧಿಕಾರಿಯಾಗಿದ್ದ ಭೀಮ್‌ರಾವ್ ನಾಡಗೌಡ ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧ ಸಿಡಿದೆದ್ದು ಕೆಚ್ಚದೆಯಿಂದ ಹೋರಾಡಿದ್ದರು. ಮುಂಡರಗಿ ಪಟ್ಟಣಕ್ಕೆ 400 ವರ್ಷಗಳಿಗೂ ಹೆಚ್ಚಿನ ಇತಿಹಾಸವಿದೆ. ಇಲ್ಲಿರುವ ’ಮುರುಡಗಿರಿ’ ಬೆಟ್ಟದಿಂದ ಮುಂಡರಗಿ ಎಂಬ ಹೆಸರು ಬಂತೆಂದು ಸ್ಥಳನಾಮ ಪುರಾಣ ಹೇಳುತ್ತದೆ. ಇಲ್ಲಿಯ ಕಲ್ಲಿನ ಬೆಟ್ಟದ ಮೇಲೆ 18ನೇ ಶತಮಾನದಲ್ಲಿ ರಂಗರಾವ್ ನಾಡಗೌಡ ಕಟ್ಟಿಸಿದ ನರಸಿಂಹ ದೇವಾಲಯವಿದೆ. ತಾಲೂಕಿನ ಡಂಬಳ, ಕಲ್ಯಾಣಿ ಚಾಲುಕ್ಯರ ಪುರಾತತ್ವ ಅವಶೇಷಗಳ ನೆಲೆಯಾಗಿದೆ.

ಉತ್ತರ ಕರ್ನಾಟಕದ ಮಣ್ಣಿನ ಸೊಗಡಿನ ಕನ್ನಡ ಸಾಂಸ್ಕೃತಿಕ ಪರಂಪರೆಯ ಶಿರಹಟ್ಟಿ-ಮುಂಡರಗಿ ಮತ್ತು ಲಕ್ಷ್ಮೇಶ್ವರದಲ್ಲಿ ಸಂವಹನ ಮುಖ್ಯವಾಗಿ ನಡೆಯುವುದು ಖಡಕ್ ಜವಾರಿ ಕನ್ನಡದಲ್ಲಿ. ಉರ್ದು, ಲಂಬಾಣಿ, ಗುಜರಾತಿ, ರಾಜಸ್ಥಾನಿ ಭಾಷೆಗಳೂ ಕೇಳಿಬರುತ್ತವೆ. ಡೊಳ್ಳು ಕುಣಿತ, ಪುರವಂತರ ಕುಣಿತ, ಕೋಲಾಟ, ಭಜನೆ, ಝಾಂಝ್ ಮುಂತಾದ ಸಾಂಸ್ಕೃತಿಕ ಬದುಕಿನೊಂದಿಗೆ ಅವಿನಾಭಾವಸಂಬಂಧ ಹೊಂದಿರುವ ಪ್ರದೇಶವಿದು; ಅಪ್ಪಟ ದೇಶಿ ಕ್ರೀಡೆ ಮಲ್ಲಕಂಬ ಲಕ್ಷ್ಮೇಶ್ವರದ ಜನ ಜೀವನದ ಭಾಗವಾಗಿದೆ. ಶಾಲೆಗಳಲ್ಲೂ ಈ ಕ್ರೀಡೆಯನ್ನು ಕಲಿಸುವಷ್ಟು ಮಹತ್ವ ಪಡೆದಿದೆ. ಹಲವು ಭಾವೈಕ್ಯತಾ ಜಾತ್ರೆಗಳ ಶಿರಹಟ್ಟಿ-ಲಕ್ಷ್ಮೇಶ್ವರ-ಮುಂಡರಗಿ ಭಾಗದಲ್ಲಿ ಖಾಲಿ ಗಾಡ್ (ಚಕ್ಕಡಿ) ಸ್ಪರ್ಧೆ, ಟಗರು ಕಾಳಗ, ಕೊಬ್ಬರಿ ಹೋರಿ ಸ್ಪರ್ಧೆ, ಕಬಡ್ಡಿ ಜನಪದ ಕ್ರೀಡೆಗಳಾಗಿವೆ. ಪ್ರಸಿದ್ದ ಜಾನಪದ ಕಲಾವಿದರು-ತಜ್ಞರ ತವರೂರಿದು. ಸ್ವಾತಂತ್ರ್ಯ ಚಳುವಳಿಯ ಮುಂಚೂಣಿಯಲ್ಲಿದ್ದ-ಸ್ವಾತಂತ್ರ್ಯಾನಂತರ ಜಮೀನ್ದಾರಿ ದರ್ಪದ ವಿರುದ್ಧ ಹೋರಾಟ ಕಟ್ಟಿದ್ದ ಗೂಳಪ್ಪ ಕಮತ್ ಶಿರಟ್ಟಿಯವರು.

ಒಣ ಆರ್ಥಿಕತೆ!

“ಹೊಲ-ಮನಿ ಕೆಲ್ಸ ಮಾಡ್ಬೇಕ; ಇಲ್ಲಂತಂದ್ರ ಊರು ಬಿಡ್ಬೇಕ”- ಇದು ಶಿರಹಟ್ಟಿ-ಲಕ್ಷ್ಮೇಶ್ವರ-ಮುಂಡರಗಿ ವಿಧಾನಸಭಾ ಕ್ಷೇತ್ರದ ಆರ್ಥಿಕತೆಯ ಸ್ಥಿತಿ-ಗತಿ! ಕಪ್ಪುಮಣ್ಣಿನ ಫಲವತ್ತಾದ ಭೂಮಿ ಮೂರೂ ತಾಲೂಕಿನಲ್ಲಿದೆ; ಆದರೆ ನೀರಾವರಿ ಇಲ್ಲ. ಮಳೆ ಬಂದರಷ್ಟೆ ಫಸಲು-ಬದುಕು. ಒಣ ಬೇಸಾಯದ ಮೇಲೆ ಕ್ಷೇತ್ರದ ಜೀವನ-ಜೀವನೋಪಾಯ ಅವಲಂಬಿಸಿದೆ. ಕೃಷಿ ಪ್ರಧಾನ ಆರ್ಥಿಕ ವ್ಯವಸ್ಥೆಯ ಪ್ರದೇಶವಿದು. ವ್ಯವಸಾಯೋತ್ಪನ್ನ ಇಲ್ಲವೆಂದಾದರೆ ಮೂರೂ ತಾಲೂಕಿಗೆ ಕಳೆ ಇರದು. ಈ ಪ್ರದೇಶ ಸಿರಿ ಧಾನ್ಯದ ಕಣಜದಂತಿತ್ತು; ಮಳೆ ಮತ್ತಿತರ ಕಾರಣದಿಂದ ಈ ಬೆಳೆ ಕೈಕೊಡತೊಡಗಿತು. ಈಗ ರೈತರು ಹಂಗಾಮಿಗೆ ಅನುಗುಣವಾಗಿ ಹತ್ತಿ, ಜೋಳ, ಶೇಂಗಾ, ಕಡಲೆ, ಕುಸುಬಿ, ಈರುಳ್ಳಿ, ಮೆಣಸು ಬೆಳೆಯುತ್ತಿದ್ದಾರೆ. ಕಲವು ಕುಟುಂಬಗಳು ಹೂ-ಹಣ್ಣು-ತರಕಾರಿ ಕೃಷಿಯಿಂದ ಬದುಕುತ್ತಿವೆ. ಪ್ರಮುಖ ವಾಣಿಜ್ಯ ಬೆಳೆಯೆಂದರೆ ಹತ್ತಿ, ಕಬ್ಬು, ಗೋವಿನ ಜೋಳ ಹಾಗು ಶೇಂಗಾ. ಮುಂಡರಗಿಯ ಕೆಲವು ಹಳ್ಳಿಗಳಿಗೆ ಸಿಂಗಟಾಲೂರು ಏತ ನೀರಾವರಿ ಯೋಜನೆಯಿಂದ ನೀರು ಸಿಗುತ್ತದೆ. ಹತ್ತಿರದಲ್ಲೇ ತುಂಗಭದ್ರಾ ನದಿ ಹರಿಯುತ್ತದೆ. ನೀರು ದೊರೆಯುವ ಭಾಗದಲ್ಲಿ ಕಬ್ಬು, ಭತ್ತ ಬೆಳೆಯಲಾಗುತ್ತಿದೆ. ಹಾಗೆಂದು ಮುಂಡರಗಿ ರೈತರು ಸುಖವಾಗೇನಿಲ್ಲ; ಶಿರಹಟ್ಟಿಯಷ್ಟು ಪರಿಸ್ಥಿತಿ ಕೆಟ್ಟದಾಗಿಲ್ಲ ಎನ್ನಬಹುದು.

ಶಿರಹಟ್ಟಿ ಭಣಗುಡುವ ಒಣ ಭೂಮಿಯ ತಾಲೂಕು. ಒಂದೇಒಂದು ನೀರಾವರಿ ಯೋಜನೆಯಿಲ್ಲ; ಬೋರ್ ಕೊರೆದರೆ ನೀರು ಸಿಗುವುದು ಖಾತ್ರಿಯಿಲ್ಲ. ಕೆರೆ ತುಂಬಿಸಿಲ್ಲ. ಒಣ ಬೇಸಾಯವೂ ದಕ್ಕದಿದ್ದರೆ ತಾಲೂಕು ಗರ ಬಡಿದಂತಾಗುತ್ತದೆ! ಲಕ್ಷ್ಮೇಶ್ವರದಲ್ಲೂ ನೀರಾವರಿ ಸೌಲಭ್ಯವಿಲ್ಲ. ಆದರೆ ಕಳೆದ ಕೆಲವು ವರ್ಷದಿಂದ ಮಳೆ ಸಾಕಷ್ಟಾಗುತ್ತಿರುವುದರಿಂದ ಅಂತರ್ಜಲ ಹೆಚ್ಚಿ ಬೋರ್‌ಗಳಲ್ಲಿ ಭರಪೂರಾ ನೀರು ಬರುತ್ತಿದೆ. ಕೆಲವೆಡೆ ಕೆರೆಗಳಲ್ಲೂ ನೀರಿದೆ. ಹಾಗಾಗಿ ಲಕ್ಷ್ಮೇಶ್ವರ ಸ್ವಲ್ಪ ಹಸಿರಾಗಿದೆ ಎಂಬ ಮಾತು ಕೇಳಿಬರುತ್ತಿದೆ. ಬೆಳೆದ ಕಬ್ಬನ್ನು ಮುಂಡರಗಿಯ ಗಂಗಾಪೂರ ಸಕ್ಕರೆ ಫ್ಯಾಕ್ಟರಿಗೆ ಹಾಕಲಾಗುತ್ತಿದೆ. ಆದರೆ ರೈತರಿಗೆ ಈ ಕಾರ್ಖಾನೆಯ ಬಂಡವಾಳಶಾಹಿ ಯಜಮಾನರು ಸರಿಯಾಗಿ ಹಣ ಪಾವತಿಸುತ್ತಿಲ್ಲ. ಕ್ಲುಪ್ತ ಕಾಲದಲ್ಲಿ ಕಬ್ಬು ಖರೀದಿಸದೆ ಶೋಷಿಸುತ್ತಿದ್ದಾರೆ; ಕಬ್ಬು ಬೆಳೆಗಾರರು ಪ್ರತಿಯೊಂದಕ್ಕೂ ಪ್ರತಿಭಟನೆ-ಹೋರಾಟ ಮಾಡಬೇಕಾಗಿದೆ ಎಂದು ರೈತ ಮುಂದಾಳೊಬ್ಬರು ’ನ್ಯಾಯಪಥ’ಕ್ಕೆ ತಿಳಿಸಿದರು.

ಲಕ್ಷ್ಮೇಶ್ವರ ಗದಗ ಜಿಲ್ಲೆಯ ಸಾಧಾರಣ ವಾಣಿಜ್ಯ ಪಟ್ಟಣ; ಶಿಕ್ಷಣ-ವ್ಯಾಪಾರ-ವಹಿವಾಟಿನ ನಗರ. ಶೇಂಗಾ ವ್ಯಾಪಾರಕ್ಕೆ ಹೆಸರುವಾಸಿಯಾದ ದೊಡ್ಡ ಎಪಿಎಂಸಿ ಇದೆ; ರೈತರಿಗಿಂತ ಮೋಸಗಾರ ದಲ್ಲಾಳಿಗಳಿಗೆ ಈ ಎಪಿಎಂಸಿಯಿಂದ ಲಾಭ ಜಾಸ್ತಿ; ರೈತರಿಗೆ ಬೇಕಾದಾಗ ಅಧಿಕಾರಸ್ಥರು ಖರೀದಿ ಕೇಂದ್ರಗಳನ್ನು ತೆರೆಯದೆ ದಲ್ಲಾಳಿಗಳ ವಂಚನೆಗೆ ಆಸ್ಪದವಾಗುತ್ತಿದೆ ಎಂಬ ಆಕ್ಷೇಪವಿದೆ. ಶೇಂಗಾ, ಹತ್ತಿ, ಈರುಳ್ಳಿ ಮಂಡಿ ಮತ್ತು ಪೇಟೆಯ ವಹಿವಾಟು ಲಿಂಗಾಯತರ ಸುಪರ್ದಿಯಲ್ಲಿದೆ. ಮುಸ್ಲಿಮರು ತರಕಾರಿ-ಹೂವು-ಹಣ್ಣು ಮತ್ತು ಮಾಂಸದ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದಾರೆ.

ಒಂದು ಕಾಲದಲ್ಲಿ ಲಕ್ಷ್ಮೇಶ್ವರ ಎಣ್ಣೆ ತೆಗೆಯುವ ಉದ್ಯಮ ಮತ್ತು ನೇಕಾರಿಕೆಯ ಕೇಂದ್ರವಾಗಿತ್ತು. ಮಣ್ಣಿನ ಪಾತ್ರೆ ತಯಾರಿಕೆಗೆ ಹೆಸರುವಾಸಿಯಾಗಿತ್ತು. ಎಣ್ಣೆ ಕಾಳು ಹೆಚ್ಚು ಬೆಳೆಯುತ್ತಿದ್ದ ಲಕ್ಷ್ಮೇಶ್ವರದ ಸುತ್ತಲಿನ ಮನೆಮನೆಗಳಲ್ಲಿ ಎಣ್ಣೆ ತೆಗೆಯುವ ಗಾಣಗಳಿದ್ದವು; ಲಕ್ಷ್ಮೇಶ್ವರ-ಶಿಂಗ್ಲಿ ಭಾಗದಲ್ಲಿ ಸೀರೆ ನೇಯುವ ಕೈಮಗ್ಗ ಕಸುಬಿನ ದೊಡ್ಡ ಸಮೂಹವಿತ್ತು. ಎಣ್ಣೆ, ಮಣ್ಣಿನ ಪಾತ್ರೆ ಮತ್ತು ಕೈಮಗ್ಗದ ಬಟ್ಟೆಗಳಿಗೆ ಮಾರುಕಟ್ಟೆ ಒದಗಿಸುವ ಯೋಜನೆ ತರುವ ಹೊಣೆಗಾರಿಕೆಯನ್ನು ಇಲ್ಲಿಯ ಶಾಸಕ-ಸಂಸದರು ಬದ್ಧತೆ-ನಿಯತ್ತಿನಿಂದ ನಿಭಾಯಿಸಲಿಲ್ಲ. ಈಗ ಈ ಉದ್ಯಮ ನಶಿಸಿ ಜನರು ಉದ್ಯೋಗ ಕಳೆದುಕೊಂಡು ತೊಂದರೆ-ಅನುಭವಿಸುತ್ತಿದ್ದಾರೆ; ಕೆಲವರು ಪವರ್ ಲೂಮ್ ಹಾಕಿಕೊಂಡಿದ್ದಾರಾದರೂ ಆ ಉದ್ಯಮಕ್ಕೆ ಪ್ರೋತ್ಸಾಹ ಸರಕಾರದಿಂದ ಸಿಗುತ್ತಿಲ್ಲ ಎಂದು ಹಳೆ ತಲೆಮಾರಿನ ಮಂದಿ ಹೇಳುತ್ತಾರೆ.

ಶಿರಹಟ್ಟಿ ಮತ್ತು ಮುಂಡರಗಿ ಪೇಟೆಗಳು ಲಕ್ಷ್ಮೇಶ್ವರದ ಅರ್ಧದಷ್ಟೂ ಬೆಳೆದಿಲ್ಲ. ಮೂರೂ ತಾಲೂಕಲ್ಲಿ ಉದ್ಯೋಗಾವಕಾಶದ ಕೈಗಾರಿಕೆ, ಉದ್ಯಮವಿಲ್ಲ. ಮುಂಡರಗಿ ಕೈಗಾರಿಕಾ ಪ್ರದೇಶದಲ್ಲಿರುವುದು ನೂರರ ಲೆಕ್ಕದ ಸೀಮಿತ ಉದ್ಯೋಗ; ಲಕ್ಷ್ಮೇಶ್ವರದಲ್ಲಿ ಕೈಗಾರಿಕಾ ವಸಾಹತುವಿನಲ್ಲಿ ಸೈಟ್ ಹಂಚಿಕೆಯನ್ನು ಅಧಿಕಾರಸ್ಥರು ಮಾಡುತ್ತಿಲ್ಲ. ಸ್ಥಳೀಯವಾಗಿ ಬದುಕು ಕಟ್ಟಿಕೊಳ್ಳಲಾಗದೆ ಬಂಜಾರರೂ ಸೇರಿದಂತೆ ಮುಂತಾದ ತಳ ಸಮುದಾಯದ ಮಂದಿ ಕರಾವಳಿ, ಗೋವಾದತ್ತ ಗುಳೆಹೋಗುತ್ತಿದ್ದಾರೆ. ಕಲಿತ ಯುವಸಮೂಹ ಹೊಟ್ಟೆಪಾಡಿನ ಅನ್ನ ಅರಸುತ್ತ ಬೆಂಗಳೂರು, ಹುಬ್ಬಳ್ಳಿ, ಮಂಗಳೂರು ಸೇರುತ್ತಿದೆ. ಶಾಸಕ-ಸಂಸದರು ರಾಜಕೀಯ ಇಚ್ಛಾಶಕ್ತಿಯಿಂದ ಪ್ರಾಮಾಣಿಕ ಪ್ರಯತ್ನ ನಡೆಸಿದರೆ ಶಿರಹಟ್ಟಿ, ಲಕ್ಷ್ಮೇಶ್ವರದ ಕೃಷಿ ಜಮೀನಿಗೆ ಹತ್ತಿರದಲ್ಲೆ ಇರುವ ತುಂಗಭದ್ರೆಯ ನೀರು ಹರಿಸುವುದೇನೂ ದೊಡ್ಡ ಮಾತಲ್ಲ; ಆದರೆ ಇಲ್ಲಿಂದ ಗೆದ್ದು ಎಂಪಿ, ಎಮ್ಮೆಲ್ಲೆಯಾದವರಿಗೆ ಕ್ಷೇತ್ರದ ಕಾಳಜಿ ಇಲ್ಲ ಎಂದು ನೊಂದ ರೈತರು ಅಲವತ್ತುಕೊಳ್ಳುತ್ತಾರೆ. ಹತ್ತಿ ಹೆಚ್ಚು ಉತ್ಪತ್ತಿಯಾಗುವುದರಿಂದ ಜವಳಿ ಪಾರ್ಕ್ ಸ್ಥಾಪಿಸುವಂತೆ ರೈತರು ಆಗ್ರಹಿಸುತ್ತಿದ್ದಾರೆ. ಆದರೆ ಇದ್ಯಾವುದೂ ತಮಗೆ ಸಂಬಂಧಿಸಿದ್ದಲ್ಲ ಎಂಬಂತೆ ಆಳುವವರು ಆರಾಮಾಗಿದ್ದಾರೆಂಬ ಆಕ್ರೋಶ ಕ್ಷೇತ್ರದಲ್ಲಿ ಮಡುಗಟ್ಟಿದೆ.

ಬಲಿತವರ ಪ್ರತಿಷ್ಠೆಯ ದಲಿತ ಕ್ಷೇತ್ರ

ಶಿರಹಟ್ಟಿ-ಲಕ್ಷ್ಮೇಶ್ವರ-ಮುಂಡರಗಿ ಲಿಂಗಾಯತ ’ಪ್ರಜ್ಞೆ’ಯ ಅಖಾಡ. ಎದುರಾಳಿಗಳು ಲಿಂಗಾಯತರೇ ಆಗಿರುತ್ತಿದ್ದ ಕಾಲದಲ್ಲಿ ವ್ಯಕ್ತಿ-ಪಕ್ಷ ಪ್ರತಿಷ್ಠೆ ಪ್ರಧಾನವಾಗುತ್ತಿತ್ತು. ಈ ಲಿಂಗಾಯತ ’ಸಂಸ್ಥಾನ’ದಲ್ಲಿ ಎರಡು ಬಾರಿ ಬ್ರಾಹ್ಮಣರು ಶಾಸಕರಾಗಿದ್ದೂ ಇದೆ. 2007ರಲ್ಲಿ ವಿಧಾನಸಭಾ ಕ್ಷೇತ್ರಗಳ ಪುನರ್ ವಿಂಗಡನೆಯ ಮೊದಲು ಮುಂಡರಗಿ ಮತ್ತು ಶಿರಟ್ಟಿ-ಲಕ್ಷ್ಮೇಶ್ವರ ಪ್ರತ್ಯೇಕ ಎರಡು ಅಖಾಡಗಳಾಗಿದ್ದವು. ಆಗಲೂ ಈ ಎರಡು ಕ್ಷೇತ್ರ ಲಿಂಗಾಯತರ ಹಿಡಿತದಲ್ಲಿದ್ದವು. ಸಹಕಾರಿ ಧುರೀಣ ಎಸ್.ಎಸ್.ಪಾಟೀಲ್ ಮುಂಡರಗಿಯಲ್ಲಿ ಪ್ರಭಾವಿಯಾಗಿದ್ದರೆ, ಶಿರಟ್ಟಿ-ಲಕ್ಷ್ಮೇಶ್ವರವನ್ನು ಉಪನಾಳ್ ಗೂಳಪ್ಪ, ಗಡ್ಡದೇವರಮಠ್ ತಮ್ಮ ಆಡುಂಬೊಲ ಮಾಡಿಕೊಂಡಿದ್ದರು. ಈಗಲೂ ಎದುರಾಳಿಗಳಾದ ಮಾಜಿ ಶಾಸಕರಾದ ಕಾಂಗ್ರೆಸ್‌ನ ಗಡ್ಡದೇವರಮಠ ಮತ್ತು ಬಿಜೆಪಿಯ ಮಹಾಂತಶೆಟ್ಟರ್ ಕ್ಷೇತ್ರದಲ್ಲಿ ಪ್ರಭಾವ ಉಳಿಸಿಕೊಂಡಿದ್ದಾರೆ.

ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಗದಗ: ಸಮಬಲದ ಹೋರಾಟದಲ್ಲಿ ಎಚ್ಕೆ ಪಾಟೀಲ್ ಪ್ರತಿಷ್ಠೆ ಪಣಕ್ಕೆ?!

2007ರ ನಂತರ ಪಿಚ್ ಬದಲಾಗಿದೆ. ಮುಂಡರಗಿ ಕ್ಷೇತ್ರವನ್ನು ರದ್ದುಮಾಡಿ ಅದರ ಮುಂಡರಗಿ ಹೋಬಳಿ, ಸಂಪೂರ್ಣ ಶಿರಹಟ್ಟಿ ಮತ್ತು ಲಕ್ಷ್ಮೇಶ್ವರ ತಾಲೂಕು ಸೇರಿಸಿ ಶಿರಹಟ್ಟಿ ಮೀಸಲು ಕ್ಷೇತ್ರ ರಚಿಸಲಾಗಿದೆ. ಕ್ಷೇತ್ರ ಪರಿಶಿಷ್ಟ ಜಾತಿಗೆ ಮೀಸಲಾಗಿದ್ದರೂ ರಾಜಕಾರಣ ಮಾತ್ರ ಮೇಲ್ವರ್ಗದ ಪ್ರಬಲ ಲಿಂಗಾಯತ ಇಷ್ಟಾನಿಷ್ಟದಂತೆಯೇ ನಡೆಯುತ್ತಿದೆ. ತಮ್ಮ ನಿಷ್ಠಾನುಯಾಯಿಯನ್ನು ಶಾಸಕರನ್ನಾಗಿಸಲು ಕಾಂಗ್ರೆಸ್ ಹಾಗು ಬಿಜೆಪಿಯ ಆಯಕಟ್ಟಿನ ಲಿಂಗಾಯತ ಲೀಡರ್‌ಗಳು ಯೋಜನಾಬದ್ಧ ದಾಳ ಉರುಳಿಸುತ್ತಾರೆ. ಶಿರಹಟ್ಟಿ ಮೀಸಲು ಕ್ಷೇತ್ರವಾದ ಬಳಿಕ ಪಕ್ಕಾ ಜಾತಿ ಸಮೀಕರಣದ ಅಖಾಡವಾಗಿದೆ. ಎಸ್ಸಿ-ಎಸ್ಟಿ-ಲಂಬಾಣಿ ಮತಗಳು ದೊಡ್ಡ ಪ್ರಮಾಣದಲ್ಲಿದೆ. ಈ ದಲಿತ ಮತ ಬ್ಯಾಂಕ್ ವಿಭಜಿಸಿ ಕ್ಷೇತ್ರವನ್ನು ಕಬ್ಜಾ ಮಾಡಿಕೊಳ್ಳಲು ಲಿಂಗಾಯತ ನಾಯಕತ್ವ ಕಾರ್ಯಾಚರಣೆ ಮಾಡುತ್ತದೆಂದು ರಾಜಕೀಯ ವಿಶ್ಲೇಷಕರು ಹೇಳುತ್ತಾರೆ.

ಅಹಿಂದ ವರ್ಗದಲ್ಲಿ ಒಗ್ಗಟ್ಟು-ರಾಜಕೀಯ ಪ್ರಜ್ಞೆ ಮೂಡಿಸುವ ನಾಯಕತ್ವದ ಕೊರತೆಯಿಂದ ಕ್ಷೇತ್ರದಲ್ಲಿ ಬಿಜೆಪಿ ಮೇಲುಗೈ ಸಾಧಿಸುತ್ತಿದೆ; ಮೀಸಲು ಕ್ಷೇತ್ರವಾದ ಬಳಿಕ ಪಿಚ್ ಬಿಜೆಪಿ ಪರವಾಗಿ ಹದವಾಗಿದೆ. ಒಟ್ಟೂ 2,12,260 ಮತದಾರರಲ್ಲಿ ಒಳ ಪಂಗಡಗಳೆಲ್ಲ ಸೇರಿ ಲಿಂಗಾಯತರು 65 ಸಾವಿರ, ಎಸ್ಸಿ-ಎಸ್ಟಿ 38 ಸಾವಿರ, ಕುರುಬರು 30 ಸಾವಿರ, ಮುಸ್ಲಿಮ್ 25 ಸಾವಿರ, ಬ್ರಾಹ್ಮಣರು 4 ಸಾವಿರ ಮತ್ತು ಇತರ ಒಬಿಸಿಗಳು 35 ಸಾವಿರ ಇರಬಹುದೆಂದು ಅಂದಾಜಿಸಲಾಗಿದೆ.

ಕಾಂಗ್ರೆಸ್ ವರ್ಸಸ್ ಸ್ವತಂತ್ರ ಪಕ್ಷ

ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಚುನಾವಣಾ ಇತಿಹಾಸ ಅವಲೋಕಿಸಿದಾಗ ರಾಜಾಜಿಯವರ ಸ್ವತಂತ್ರ ಪಕ್ಷದ ಗಟ್ಟಿ ನೆಲೆ ಇದಾಗಿತ್ತೆಂಬುದು ಸ್ಪಷ್ಟವಗುತ್ತದೆ. 1957ರ ಮೊದಲ ಚುನಾವಣೆಯಲ್ಲಿ ಕಾಂಗ್ರೆಸ್‌ನ ಲೀಲಾವತಿ ಮಾಗಡಿ (16,644) ಎದುರು ಪಕ್ಷೇತರರಾಗಿ ಸ್ಪರ್ಧಿಸಿ ಸೋತಿದ್ದ ಸಿದ್ದಯ್ಯ ಕಾಶೀಮಠ್ (8,343) ಕ್ಷೇತ್ರದಲ್ಲಿ ಸ್ವತಂತ್ರ ಪಕ್ಷ ಕಟ್ಟಿ ಬೆಳೆಸಿದ್ದರು. 1962ರಲ್ಲಿ ಸ್ವತಂತ್ರ ಪಕ್ಷದ ಹುರಿಯಾಳಾಗಿದ್ದ ಕಾಶೀಮಠ್ 17,347 ಮತ ಗಳಿಸಿ ಕಾಂಗ್ರೆಸ್ ಎದುರಾಳಿ ಶಾಸಕಿ ಲೀಲಾವತಿ ಮಾಗಡಿಯವರನ್ನು 515 ಮತಗಳಿಂದ ಮಣಿಸಿ ಶಾಸನಸಭೆಗೆ ಪ್ರವೇಶ ಪಡೆದರು. 1967ರಲ್ಲಿ ಸ್ವತಂತ್ರ ಪಾರ್ಟಿಯ ಕಾಶೀಮಠ್ ಮತ್ತೆ ಗೆಲುವು ಕಂಡರು. ಈ ಬಾರಿ ಕಾಶೀಮಠ್ ಕಾಂಗ್ರೆಸ್‌ನ ವೆಂಕಟೇಶ್(22,661)ರನ್ನು 985 ಮತದಿಂದ ಸೋಲಿಸಿದರು. ಆದರೆ 1972ರಲ್ಲಿ ಸ್ವತಂತ್ರ ಪಕ್ಷದ ಕಾಶೀಮಠ್ (9,797) ಬ್ರಾಹ್ಮಣ ಸಮುದಾಯದ ಕಾಂಗ್ರೆಸ್ ಅಭ್ಯರ್ಥಿ ವೆಂಕಣ್ಣ ವಾಯಿ (21,314) ಕೈಲಿ ದೊಡ್ಡ ಅಂತರದ ಮುಖಭಂಗ ಅನುಭವಿಸಬೇಕಾಯಿತು.

ಉಪನಾಳ್ ಗೂಳಪ್ಪ ಪ್ರವೇಶ!

1978ರ ಚುನಾವಣಾ ಕಣದಲ್ಲಿ ಕಾಂಗ್ರೆಸ್‌ನ ಗೂಳಪ್ಪ ಉಪನಾಳ್ ಮತ್ತು ಜನತಾ ಪಾರ್ಟಿಯ ಐ.ಸಿ.ನೂರಶೆಟ್ಟರ್ ಮುಖಾಮುಖಿಯಾದರು. ಅಕ್ಷರಾಭ್ಯಾಸವಿಲ್ಲದಿದ್ದರೂ ಜನಪರ ಕೆಲಸಗಳಿಂದ ಲಕ್ಷ್ಮೇಶ್ವರದ ಮುನ್ಸಿಪಾಲಿಟಿ, ಪಿಎಲ್‌ಡಿ ಬ್ಯಾಂಕ್, ಎಪಿಎಂಸಿ, ಸಹಕಾರ ಕ್ಷೇತ್ರ ಮತ್ತು ಸಾಮಾಜಿಕ ವಲಯದಲ್ಲಿ ಗೂಳಪ್ಪ ಉಪನಾಳ್ ಪ್ರಭಾವಿಯಾಗಿದ್ದರು. ಕಟ್ಟುಮಸ್ತು ದೇಹ-ಉದ್ದ ದೋರ್ತ-ಜುಬ್ಬಾ-ಭಾರಿ ಪಟ್ಗಾ(ರುಮಾಲು)ದ ಲಿಂಗಾಯತರ ಕೂಡ ಒಕ್ಕಲಿಗ ಒಳಪಂಗಡದ ಗೂಳಪ್ಪ ಉಪನಾಳ್ 28,606 ಮತ ಪಡೆದು ಜನತಾ ಪಕ್ಷದ ನೂರಶೆಟ್ಟರ್‌ರನ್ನು 14,140 ಮತದ ಭರ್ಜರಿ ಅಂತರದಿಂದ ಮಣಿಸಿದರು. ಶಾಸಕರಾದ ನಂತರ ಸಹಿ ಹಾಕುವುದನ್ನು ರೂಢಿಸಿಕೊಂಡಿದ್ದ ಧಾಡಸಿ ವ್ಯಕ್ತಿತ್ವದ ಉಪನಾಳ್ ಅಂದಿನ ಸಿಎಂ ಗುಂಡೂರಾವ್‌ರನ್ನು ಎದುರುಹಾಕಿಕೊಂಡಿದ್ದರು. ಉಪನಾಳರಿಗೆ 1983ರಲ್ಲಿ ಕಾಂಗ್ರೆಸ್ ಟಿಕೆಟ್ ಸಿಗಲಿಲ್ಲ. ಪಕ್ಷೇತರರಾಗಿ ಅಖಾಡಕ್ಕೆ ಧುಮುಕಿದ್ದ ಉಪನಾಳ್ 25,825 ಮತ ಪಡೆದ ಬ್ರಾಹ್ಮಣ ಸಮುದಾಯದ ಕಾಂಗ್ರೆಸ್ ಕ್ಯಾಂಡಿಡೇಟ್ ಎನ್.ಜಿ.ಕುಲಕರ್ಣಿಯವರನ್ನು 5,285 ಮತದಿಂದ ಪರಾಭವಗೊಳಿಸಿ ಎರಡನೆ ಸಲ ಶಾಸಕ ಎನಿಸಿಕೊಂಡರು.

ಕಾಂಗ್ರೆಸ್-ಜನತಾ ಜಿದ್ದಾಜಿದ್ದಿ

1985ರಲ್ಲಿ ಉಪನಾಳ್ ತುಂಬ ದುರ್ಬಲರಾಗಿದ್ದರು. ಆಗ ಬೀಸಿದ ಜನತಾ ಗಾಳಿಯಲ್ಲಿ 24,362 ಮತಗಳಿಸಿದ ಆ ಪಕ್ಷದ ಅಭ್ಯರ್ಥಿ ಟಿ.ಬಿ.ಬಾಳಿಕಾಯಿ ವಿಧಾನಸಭೆಯತ್ತ ತೇಲಿದರು. 21,568 ಮತ ಪಡೆಯುವಷ್ಟರಲ್ಲೆ ಸುಸ್ತಾದ ಕಾಂಗ್ರೆಸ್‌ನ ಎಸ್.ಎನ್.ಪಾಟೀಲ್ ಸೋಲೊಪ್ಪಿಕೊಳ್ಳಬೇಕಾಯಿತು. 1989ರಲ್ಲಿ ಕಾಂಗ್ರೆಸ್‌ನ ಎಸ್.ಎನ್.ಪಾಟೀಲ್ (24,882) ಮತ್ತು ಜನತಾ ದಳದ ಜಿ.ಎಂ.ಮಹಾಂತ ಶೆಟ್ಟರ್ (23,715) ನಡುವೆ ನೇರ-ನಿಕಟ ಹೋರಾಟವಾಯಿತು. ಪಾಟೀಲ್ 1,167 ಮತಗಳ ಸಣ್ಣ ಅಂತರದಲ್ಲಿ ಚುನಾಯಿತರಾದರು. 1994ರಲ್ಲಿ ಪಕ್ಷೇತರರಾಗಿ ಸ್ಪರ್ಧೆ ಮಾಡಿದ್ದ ಮಾಜಿ ಶಾಸಕ ಉಪನಾಳ್ ಗೂಳಪ್ಪ (23,637) ಪ್ರಬಲ ಪೈಪೋಟಿ ನೀಡಿದರಾದರೂ ನಿಕಟ ಎದುರಾಳಿ ಜನತಾದಳದ ಜಿ.ಎಂ.ಮಹಾಂತ ಶೆಟ್ಟರ್‌ರನ್ನು (26,449) ಸೋಲಿಸಲಾಗಲಿಲ್ಲ.

ಗೂಳಪ್ಪ ಉಪನಾಳ್

ಲಕ್ಷ್ಮೇಶ್ವರ ಪುರಸಭೆಯ ಅಧ್ಯಕ್ಷರಾಗಿದ್ದ ಲಿಂಗಾಯತರ ಅಯ್ನೋರು (ಜಂಗಮ) ಪಂಗಡದ ಜಿ.ಎಸ್.ಗಡ್ದೇವರಮಠ್ 1999ರಲ್ಲಿ ಕಾಂಗ್ರೆಸ್ ಕಲಿಯಾಗಿ ಕಣಕ್ಕಿಳಿದರು. ಬಹುಸಂಖ್ಯಾತ ಪಂಚಮಸಾಲಿ ಸಮುದಾಯದವರಾದರೂ ಜನತಾ ಪರಿವಾರದ ಬಗ್ಗೆ ಜನರಿಗೆ ಮೂಡಿದ್ದ ಬೇಸರ-ತಾತ್ಸಾರದಿಂದ ಜೆಡಿಯು ಅಭ್ಯರ್ಥಿ-ಶಾಸಕ ಮಹಾಂತಶೆಟ್ಟರ್‌ಗೆ ಸಾಮಾನ್ಯ ಹೋರಾಟವೂ ಸಾಧ್ಯವಾಗಲಿಲ್ಲವೆಂದು ಅಂದಿನ ಕಾಳಗ ಕಂಡವರು ಹೇಳುತ್ತಾರೆ. 34,547 ಮತ ಬಾಚಿದ ಕಾಂಗ್ರೆಸ್‌ನ ಗಡ್ಡದೇವರಮಠ್ 21,888 ಮತಗಳ ಅಂತರದಿಂದ ಚುನಾಯಿತರಾದರು. 2004ಲ್ಲಿ ಕಾಂಗ್ರೆಸ್‌ನ ಗಡ್ಡದೇವರಮಠ್ (34,151) ಮತ್ತು ಜೆಡಿಯುನ ಮಹಾಂತಶೆಟ್ಟರ್ (31,205) ಮಧ್ಯೆ ಕತ್ತುಕತ್ತಿನ ಕದನ ನಡೆಯಿತು. ಗಡ್ಡದೇವರಮಠ್ ಎರಡನೇ ಬಾರಿ ಎಮ್ಮೆಲ್ಲೆಯಾದರು.

ಮೀಸಲು ನಂತರ

2008ರಲ್ಲಿ ಶಿರಹಟ್ಟಿ-ಲಕ್ಷ್ಮೇಶ್ವರ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾಯಿತು; ಕ್ಷೇತ್ರದಲ್ಲಿನ ಲಿಂಗಾಯತ ಕೇಂದ್ರಿತ ಜಾತಿ ಸಮೀಕರಣದ ಸ್ವರೂಪವೂ ಬದಲಾಯಿತು; ಆ ಸಂದರ್ಭದಲ್ಲಿ ರಾಜ್ಯ ಲಿಂಗಾಯತರ ಮುಂದಾಳಾಗಿ ಅವತರಿಸಿದ್ದ ಯಡಿಯೂರಪ್ಪರ ಪ್ರಭಾವಳಿಯಿಂದ ಕ್ಷೇತ್ರದಲ್ಲಿ ಬೇರುಗಳೇ ಇಲ್ಲದ ಬಿಜೆಪಿ ದಿಢೀರ್ ಬಲಗೊಂಡಿತು. ಜಿಪಂ ಸದಸ್ಯರಾಗಿದ್ದ ರಾಮಣ್ಣ ಲಮಾಣಿ ಬಿಜೆಪಿ ಟಿಕೆಟ್ ಪಡೆದರು. ಕಾಂಗ್ರೆಸ್ ಮತ ಬ್ಯಾಂಕ್ ಆ ಪಕ್ಷದ ಎಚ್.ಆರ್.ನಾಯಕ್ (29,358) ಮತ್ತು ಪಕ್ಷೇತರ ಅಭ್ಯರ್ಥಿ ಜಯಶ್ರೀ ಹಳ್ಳೆಪ್ಪನವರ್ (16,397) ನಡುವೆ ಹರಿದು ಹಂಚಿಹೋಯಿತು. ಹಾಗಾಗಿ 39,859 ಮತ ಗಳಿಸಿದ ಬಿಜೆಪಿಯ ರಾಮಣ್ಣ ನಿರಾಯಾಸವಾಗಿ ಗೆಲುವು ಕಂಡರೆಂಬ ಮಾತು ಕ್ಷೇತ್ರದಲ್ಲಿ ಕೇಳಿಬರುತ್ತದೆ. 2013ರಲ್ಲಿ ಯಡಿಯೂರಪ್ಪರ ಕೆಜೆಪಿ, ರೆಡ್ಡಿ-ರಾಮುಲುರ ಬಿಎಸ್‌ಆರ್‌ಸಿಯಿಂದ ಬಿಜೆಪಿಗೆ ಹಾನಿಯಾಯಿತು.

ಕಾಂಗ್ರೆಸ್‌ನ ರಾಮಕೃಷ್ಣ ದೊಡ್ಮನಿ (44,738), ಬಿಜೆಪಿಯ ರಾಮಣ್ಣ ಲಮಾಣಿ(44,423) ಮತ್ತು ಬಿಎಸ್‌ಆರ್‌ಸಿಯ ಜಯಶ್ರೀ ಹಳ್ಳೆಪ್ಪನವರ್ (26,791) ಮಧ್ಯೆ ತ್ರಿಕೋನ ಕಾಳಗವಾಯಿತು. ಕೇವಲ 315 ಮತಗಳಿಂದ ಕಾಂಗ್ರೆಸ್‌ನ ದೊಡ್ಮನಿ ಶಾಸಕ ಭಾಗ್ಯ ಕಂಡರು. 2018ರಲ್ಲಿ ಕ್ಷೇತ್ರದಲ್ಲಿ ಲಿಂಗಾಯತ ರಾಜಕಾರಣ ಪರಾಕಾಷ್ಠೆ ತಲುಪಿತು. ಯಡಿಯೂರಪ್ಪ ಸಿಎಂ ಆಗುತ್ತಾರೆಂಬ ಒಂದೇ ಕಾರಣಕ್ಕೆ ಲಿಂಗಾಯತರು ಒಗ್ಗಟ್ಟಾಗಿದ್ದರು. ಪಕ್ಷ ಪ್ರಧಾನವಾಗಿ ಅಭ್ಯರ್ಥಿಯ ಗುಣಾವಗುಣ ಗೌಣವಾಯಿತು. ಬಿಜೆಪಿ (91,967) ಮತ್ತು ಕಾಂಗ್ರೆಸ್ (61,974) ನಡುವೆ ನೇರ ಜಿದ್ದಾಜಿದ್ದಿಯಾಯಿತು. ಬಿಜೆಪಿ ಕೆರಳಿಸಿದ ಲಿಂಗಾಯತ ’ಪ್ರಜ್ಞೆ’ ಗೆದ್ದಿತು ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಾರೆ.

ಸಮಸ್ಯೆ-ಸಂಕಷ್ಟದ ಕ್ಷೇತ್ರ!

ಶಿರಹಟ್ಟಿ-ಲಕ್ಷ್ಮೇಶ್ವರ ಮತ್ತು ಮುಂಡರಗಿ ಅಕ್ಷರಶಃ ಹಿಂದುಳಿದ ತಾಲೂಕುಗಳು; ಕೃಷಿ ಕಾಯಕದ ಈ ಮೂರೂ ತಾಲೂಕುಗಳಲ್ಲಿ ರೈತಾಪಿ ವರ್ಗದ ಘೋರ ಬವಣೆ-ಬಡತನ ಒಂದೆಡೆಯಾದರೆ, ಮತ್ತೊಂದೆಡೆ ಕನಿಷ್ಠ ಮೂಲಸೌಕರ್ಯಗಳಿಗಾಗಿ ಪರದಾಡಬೇಕಾದ ಸಮಸ್ಯೆ-ಸಂಕಟಗಳಿವೆ! ನಂಜುಂಡಪ್ಪ ವರದಿಯಲ್ಲಿ ಶಿರಹಟ್ಟಿ ತೀರಾ ಹಿಂದುಳಿದ ತಾಲೂಕೆಂದು ನಮೂದಾಗಿದೆ; ಲಕ್ಷ್ಮೇಶ್ವರ ಹೆಸರಿಗಷ್ಟೆ ತಾಲೂಕು. ಸ್ವತಂತ್ರ ತಾಲೂಕೆಂದು ಘೋಷಣೆಯಾಗಿ ಐದು ವರ್ಷ ಕಳೆದರೂ ಲಕ್ಷ್ಮೇಶ್ವರದ ದೆಸೆ ಬದಲಾಗಿಲ್ಲ; ತಾಲೂಕಾ ಮಟ್ಟದ ಕಚೇರಿಗಳು, ಸೌಲಭ್ಯ ಜನರಿಗೆ ಸಿಗುತ್ತಿಲ್ಲ.

ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಶಿಗ್ಗಾವಿ-ಸವಣೂರು: ಸಾಮ್ರಾಜ್ಯ ಉಳಿಸಿಕೊಳ್ಳುವರಾ ಸಿಎಂ ಬೊಮ್ಮಾಯಿ?!

ಮುಂಡರಗಿ ತಾಲೂಕಿನಲ್ಲಿ ಪ್ರಗತಿಯ ಯಾವ ಚಹರೆಯೂ ಕಾಣಿಸದು. ಕುಡಿಯುವ ನೀರು, ರಸ್ತೆ, ಶಿಕ್ಷಣ, ಆರೋಗ್ಯ, ಸಾರಿಗೆ, ಸೂರು ಮತ್ತು ನೈರ್ಮಲ್ಯದಂಥ ಅನಿವಾರ್ಯ ಅವಶ್ಯಕತೆಗಳಿಗೆ ಮೂರೂ ತಾಲೂಕಿನ ಮಂದಿ ಗೋಳಾಡುವುದು ಹೇಳತೀರದು.

ಈ ತ್ರಿವಳಿ ತಾಲೂಕಿನಲ್ಲಿ ಕುಡಿಯುವ ನೀರು ಮತ್ತು ರಸ್ತೆ ಸಂಪರ್ಕ ಸಮಸ್ಯೆ ಭೀಭತ್ಸವಾಗಿದೆ. 15-20 ದಿನಕ್ಕೊಮ್ಮೆ ನೀರು ಬರುತ್ತದೆ. ಲಕ್ಷ್ಮೇಶ್ವರಕ್ಕೆ ನೀರು ಸರಬರಾಜಾಗುವ ಪೈಪ್‌ಗಳು ಲಡ್ಡಾಗಿ ನೀರು ಸೋರಿಕೆ ಆಗುತ್ತಿದೆ. ನೀರಿನ ಕೊಳವೆಗಳು ಮುರಿದುಬಿದ್ದಿದ್ದು ಶಾಶ್ವತವಾಗಿ ನೀರು ಪೂರೈಕೆ ಸದ್ಯವೆ ಬಂದ್ ಆದರೂ ಆಶ್ವರ್ಯವಿಲ್ಲವೆಂದು ಆತಂಕಿತ ಜನರು ಉದ್ಗರಿಸುತ್ತಾರೆ. ಶಿರಹಟ್ಟಿ ಹಾಗು ಲಕ್ಷ್ಮೇಶ್ವರಕ್ಕೆ ಹೋಲಿಸಿದರೆ ಸಿಂಗಟಾಲೂರು ತುಂಗಭದ್ರಾ ಡ್ಯಾಮ್‌ನಿಂದ ಹತ್ತಿರದಲ್ಲಿರುವ ಮುಂಡರಗಿಯ ನೀರು-ನೀರಾವರಿ ಒಂಚೂರು ಪರವಾಗಿಲ್ಲ ಅನಿಸಿದರೂ ಉಳಿದ ಕಷ್ಟ-ಕಾರ್ಪಣ್ಯಗಳಲ್ಲಿ ವ್ಯತ್ಯಾಸವೇನಿಲ್ಲ!

ಜಿ.ಎಸ್ ಗಡ್ಡದೇವರಮಠ್

ಇಡೀ ಅಸೆಂಬ್ಲಿ ಕ್ಷೇತ್ರದ ರಸ್ತೆಗಳು ಚಿಂದಿಚಿಂದಿಯಾಗಿದೆ; ಹಗಲಿರುಳೂ ಮರಳು ಮತ್ತು ಜಲ್ಲಿಕಲ್ಲಿನ ಮಾಫಿಯಾದ ಸಾವಿರಾರು ಓವರ್‌ಲೋಡ್ ಗಾಡಿಗಳು ರಾಜಾರೋಷವಾಗಿ ಓಡಾಡುವುದರಿಂದ ರಸ್ತೆಗಳು ಹಾಳಾಗುತ್ತಿವೆ. ದುರವಸ್ಥೆಯ ರಸ್ತೆಯಲ್ಲಿ ಬಸ್ ಓಡಿಸಲು ಕೆಎಸ್‌ಆರ್‌ಟಿಸಿ ಒಲ್ಲೆಯೆನ್ನುತ್ತಿದೆ. ಲಕ್ಷ್ಮೇಶ್ವರ ಬಸ್ ಡೀಪೋದಲ್ಲಿರುವುದು ಡಕೋಟಾ ಬಸ್‌ಗಳು. ಶೈಕ್ಷಣಿಕ ಸೌಲಭ್ಯಗಳಿಲ್ಲದ ಕ್ಷೇತ್ರದಲ್ಲಿ ಇರುವ ಶಾಲೆ-ಕಾಲೇಜಿಗೆ ಹೋಗಿಬರಲಿಕ್ಕೂ ಬಸ್ ವ್ಯವಸ್ಥೆಯಿಲ್ಲದಾಗಿದೆ; ಸಾರಿಗೆ ಸಮಸ್ಯೆಯಿಂದ ಕ್ಷೇತ್ರದ ಆರ್ಥಿಕತೆಯ ಮೇಲೆ ದುಷ್ಪರಿಣಾಮವಾಗುತ್ತಿದೆ. ಸಾಮಾನ್ಯ ಬಜೆಟ್ ಕಾಮಗಾರಿಗಳು 40 ಪರ್ಸೆಂಟ್ ಕಮಿಷನ್ ಹೊಡೆತಕ್ಕೆ ಕಳಪೆಯಾಗಿವೆ; ಶಾಸಕರು ಕಂಟ್ರಾಕ್ಟರ್‍ಸ್ ಲಾಬಿಯನ್ನು ಪೋಷಿಸುತ್ತಿರುವುದರಿಂದ ಕಾಮಗಾರಿಯಲ್ಲಿ ಗುಣಮಟ್ಟವಿಲ್ಲದೆ ಆಧ್ವಾನವಾಗುತ್ತಿದೆ ಎಂಬ ಆಕ್ರೋಶದ ಅಭಿಪ್ರಾಯ ಸಾಮಾನ್ಯವಾಗಿದೆ.

ಕೈಗಾ-ಇಳಕಲ್ ಹೆದ್ದಾರಿ ಸಮಸ್ಯೆ ಪರಿಹಾರಕ್ಕಾಗಿ ಕಳೆದ ಇಪ್ಪತ್ತು ವರ್ಷದಿಂದ ಹೋರಾಟ ಆಗುತ್ತಿದೆ. ಇಲೆಕ್ಷನ್ ಸಂದರ್ಭದಲ್ಲಷ್ಟೆ ಕ್ಷೇತ್ರಕ್ಕೆ ಬರುವ ಸಂಸದ ಶಿವಕುಮಾರ್ ಉದಾಸಿ ಸಮಸ್ಯೆಗಳ ಬಗ್ಗೆ ಉದಾಸೀನದಿಂದಿದ್ದಾರೆ; ಸ್ಥಳೀಯ ಶಾಸಕರಿಗೆ ಎಂಪಿಯಿಂದ ಕೆಲಸ ಮಾಡಿಸಿಕೊಳ್ಳುವ ತಾಕತ್ತಿಲ್ಲ. ಗದಗ-ಎಲುಗಿ ರೈಲು ಲಕ್ಷ್ಮೇಶ್ವರದ ಮಂದಿಗೆ ಮರೀಚಿಕೆಯಾಗಿದೆ. ಅಧಿಕಾರಸ್ಥರ ಮತ್ತವರ ಹಿಂಬಾಲಕರ ಶಿಲೆ ಕಲ್ಲು ಗಣಿಗಾರಿಕೆ, ಜಲ್ಲಿ ಕ್ರಷರ್ ಮತ್ತು ಮರಳುಗಾರಿಕೆಯ ಹಾವಳಿಗೆ ಶಿರಹಟ್ಟಿ-ಮುಂಡರಗಿ-ಲಕ್ಷ್ಮೇಶ್ವರ ಏರಿಯಾದ ಜನರ ಜೀವನ ದಿಕ್ಕೆಟ್ಟುಹೋಗಿದೆ. ಶಿರಹಟ್ಟಿ ಮತ್ತು ಮುಂಡರಗಿಯ ಹೊಳೆ ಮತ್ತು ತುಂಗಭದ್ರಾ ನದಿ ಪಾತ್ರದಲ್ಲಿ ಅಕ್ರಮ ಮರಳುಗಾರಿಕೆಯನ್ನು ಅಧಿಕಾರಸ್ಥರ ಹಿಂಬಾಲಕರು ನಿರಂತರ-ನಿರಾತಂಕವಾಗಿ ನಡೆಸಿದ್ದಾರೆ; ಕಲ್ಲು ಗಣಿಯ ಸ್ಫೋಟಕ್ಕೆ ಅಸಹಾಯಕರ ಮನೆಗಳು ಬಿರುಕುಬಿಡುತ್ತಿವೆ; ಜಲ್ಲಿ ಕ್ರಷರ್‌ನ ಕರ್ಕಶ ಸದ್ದು ಮತ್ತು ಧೂಳಿನ ಮಾಲಿನ್ಯದಿಂದ ಜನಸಾಮಾನ್ಯರ ಆರೋಗ್ಯ ಕೆಡುತ್ತಿದೆ.

ಟಿಕೆಟ್ ಆಕಾಂಕ್ಷಿಗಳ ಸರತಿ ಸಾಲು

ಶಿರಹಟ್ಟಿ ಮೀಸಲು ಕ್ಷೇತ್ರದಲ್ಲಿ ಮೇಲ್ವರ್ಗದ ರಿಮೋಟ್ ನಾಯಕಾಗ್ರೇಸರ ತಂತ್ರಗಾರಿಕೆ ನಾಜೂಕಾಗಿ ನಡೆಯಲಾರಂಭಿಸಿದೆ. ತಮ್ಮ ಅಂಕೆ ಮೀರದ ಶಾಸಕನ ’ಸೃಷ್ಟಿ’ಗೆ ಕಾಂಗ್ರೆಸ್ ಮತ್ತು ಬಿಜೆಪಿಯ ಲಿಂಗಾಯತ ಯಜಮಾನರು ಸ್ಕೆಚ್ ಹಾಕುತ್ತಿದ್ದಾರೆ ಎಂಬುದು ಕ್ಷೇತ್ರದ ಎಲ್ಲರಿಗೆ ಗೊತ್ತಿರುವ ಗುಟ್ಟು. ಎರಡೂ ಪಕ್ಷದಲ್ಲಿ ಎಮ್ಮೆಲ್ಲೆ ಕನಸಿಗರ ಉದ್ದ ಸಾಲಿದೆ. ಮಾಜಿ ಸಿಎಂ ಯಡಿಯೂರಪ್ಪರ ಅನುಯಾಯಿ-ಹಾಲಿ ಶಾಸಕ ರಾಮಣ್ಣ ಲಮಾಣಿ ಬಗ್ಗೆ ಕ್ಷೇತ್ರದಲ್ಲಿ ಸದಭಿಪ್ರಾಯವಿಲ್ಲ. ಸಮಸ್ಯೆ ಹೇಳಿಕೊಂಡು ಬಂದವರಿಗೆ ಸಿಡಿಮಿಡಿ ಸ್ವಭಾವದ ಶಾಸಕರು ಸ್ಪಂದಿಸುವುದಿಲ್ಲ; ಮಾತಿನ ಮೇಲೆ ಹಿಡಿತವಿಲ್ಲ; ಎರಡು ಬಾರಿ ಎಮ್ಮೆಲ್ಲೆಯಾದರೂ ಕ್ಷೇತ್ರದ ನಾಡಿಮಿಡಿತ ಅರ್ಥಮಾಡಿಕೊಂಡು ಕೆಸಮಾಡಲು ವಿಫಲರಾಗಿದ್ದಾರೆ; ಮುಂಡರಗಿ ಭಾಗದಲ್ಲಂತೂ ಶಾಸಕರಿಗೆ ಪ್ರಬಲ ವಿರೋಧವಿದೆ ಎಂಬ ಪುಕಾರುಗಳು ಕ್ಷೇತ್ರದಲ್ಲಿದೆ.

ಈ ಬಾರಿ ರಾಮಣ್ಣ ಲಮಾಣಿಗೆ ಟಿಕೆಟ್ ಅನುಮಾನ ಎಂಬ ಮಾತುಗಳು ಬಿಜೆಪಿ ಬಿಡಾರದಿಂದ ಹೊರಬರುತ್ತಿದೆ. ಕ್ಷೇತ್ರದ ಹೊರಗಿನವರೊಬ್ಬರನ್ನು ಅಖಾಡಕ್ಕಿಳಿಸಲು ಆರೆಸ್ಸೆಸ್ ಸರದಾರರು ಪ್ಲಾನ್ ಹಾಕಿದ್ದಾರೆಂಬ ವದಂತಿಯೂ ಇದೆ. ಶಾಸಕ ಲಮಾಣಿ ತಮ್ಮ ಗಾಡ್‌ಫಾದರ್ ಯಡಿಯೂರಪ್ಪರವರನ್ನು ನಂಬಿಕೊಂಡಿದ್ದಾರೆ. ಸ್ಥಳೀಯ ಬಿಜೆಪಿಯ ಮೇಲೆ ಹಿಡಿತ ಹೊಂದಿರುವ ಮಾಜಿ ಶಾಸಕ ಮಹಾಂತಶೆಟ್ಟರ್ ನಿವೃತ್ತ ಸರಕಾರಿ ವೈದ್ಯ ಡಾ.ಚಂದ್ರ ಲಮಾಣಿ ಬೆನ್ನಿಗೆ ನಿಂತಿದ್ದಾರೆ; ಕಳೆದ ಬಾರಿಯೆ ಟಿಕೆಟ್‌ಗೆ ಸಕಲ ಪ್ರಯತ್ನ ನಡೆಸಿದ್ದ ಹಳಿಯಾಳದ ಗುರುನಾಥ್ ದಾನಪ್ಪನವರ್‌ಗೆ ಸಂಘಪರಿವಾರದ ಸಂಪರ್ಕವಿರುವ ಉತ್ತರ ಕನ್ನಡ ಮೂಲದ ನ್ಯೂಸ್ ಚಾನೆಲ್ ಒಂದರ ಸಂಪಾದಕ ಬಿಜೆಪಿ ಟಿಕೆಟ್ ಕೊಡಿಸಲು ತಮ್ಮ ಪ್ರಭಾವ ಬಳಸುತ್ತಿದ್ದಾರೆ. ಬಿಜೆಪಿ ಕಾರ್ಯಕಾರಿ ಸದಸ್ಯ ಡಾ.ಭೀಮ್‌ಸಿಂಗ್ ರಾಠೋಡ್ ಮತ್ತು ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷೆ ಉಷಾ ದಾಸರ್ ತಮ್ಮ ಬೆಂಗಳೂರು ಸಂಪರ್ಕಗಳನ್ನು ಬಳಸಿ ಟಿಕೆಟ್ ಪಡೆಯುವ ತಂತ್ರಗಾರಿಕೆಯಲ್ಲಿದ್ದಾರೆ ಎಂಬ ಚರ್ಚೆಗಳು ಸ್ಥಳೀಯ ರಾಜಕೀಯ ಕಟ್ಟೆಯಲ್ಲಿ ನಡೆದಿದೆ.

ಕಾಂಗ್ರೆಸ್ ಟಿಕೆಟ್‌ಗೆ 14 ಜನರಲ್ಲಿ ಪೈಪೋಟಿಯಿದೆ. ಮಾಜಿ ಶಾಸಕ ರಾಮಕೃಷ್ಣ ದೊಡ್ಮನಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಮೂಲಕ ಅಭ್ಯರ್ಥಿತನದ ಅವಕಾಶ ಪಡೆಯುವ ಪ್ರಯತ್ನದಲ್ಲಿದ್ದಾರೆ; ಕುರುಬ ಸಮುದಾಯದವರಾದ ಮಾಜಿ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಟಿ.ಈಶ್ವರ್ ಮಾಜಿ ಸಿಎಂ ಸಿದ್ದುರವರನ್ನು ಸಂಧಿಸಿದ್ದಾರೆ; ಈ ಮೂಲಕ ತನಗೆ ಟಿಕೆಟ್ ಕೊಡಿಸುತ್ತಾರೆಂಬ ಭರವಸೆಯೂ ದೊಡ್ಮನಿಯವರಿಗಿದೆಯಂತೆ. ಆದರೆ ಸ್ಥಳೀಯ ಕಾಂಗ್ರೆಸ್ ಒಡೆಯನಂತಿರುವ ಮಾಜಿ ಶಾಸಕ ಗಡ್ಡದೇವರಮಠ್ ರಾಮಕೃಷ್ಣ ದೊಡ್ಮನಿಗೆ ವಿರೋಧವಾಗಿದ್ದಾರೆ ಎನ್ನಲಾಗಿದೆ. ಗಡ್ಡದೇವರಮಠ್ 2009ರ ಲೋಕಸಭಾ ಚುನಾವಣೆಯಲ್ಲಿ ಚಿತ್ರದುರ್ಗದ ಕಾಂಗ್ರೆಸ್ ಕ್ಯಾಂಡಿಡೇಟಾಗಿದ್ದ ಡಾ.ಬಿ.ತಿಪ್ಪೇಸ್ವಾಮಿಯನ್ನು ಬೆಂಬಲಿಸುತ್ತಿದ್ದಾರೆ.

ಈ ಬಾರಿ ಕಾಂಗ್ರೆಸ್ ದಲಿತರಲ್ಲಿನ ಎಡಗೈ ಪಂಗಡಕ್ಕೆ ಟಿಕೆಟ್ ಕೊಡಲಿದೆ ಎಂಬ ಲೆಕ್ಕಾಚಾರದಲ್ಲಿ ಡಾ.ತಿಪ್ಪೇಸ್ವಾಮಿ ಶಿರಹಟ್ಟಿಗೆ ವಲಸೆ ಬಂದು ’ಹಣಾ’ಹಣಿ ಶುರುಹಚ್ಚಿಕೊಂಡಿದ್ದಾರೆನ್ನಲಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಕೃಪಾಕಟಾಕ್ಷವಿರುವ ತಿಪ್ಪೇಸ್ವಾಮಿ ಟಿಕೆಟ್ ದಕ್ಕುವ ವಿಶ್ವಾಸದಲ್ಲಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಹೇಳುತ್ತಾರೆ. ಜಿಪಂ ಮಾಜಿ ಅಧ್ಯಕ್ಷೆ ಸುಜಾತಾ ದೊಡ್ಮನಿ ಮಾಜಿ ಮಂತ್ರಿ ಎಚ್.ಕೆ.ಪಾಟೀಲ್ ಬಲದಿಂದ ಟಿಕೆಟ್ ತರುವ ಧೈರ್ಯದಲ್ಲಿದ್ದಾರೆ; ಎಚ್ಕೆಪಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರನ್ನು ಹಿಡಿದುಕೊಂಡು ಸುಜಾತಾರನ್ನು ಅಭ್ಯರ್ಥಿ ಮಾಡುವ ತಂತ್ರಗಾರಿಕೆಯಲ್ಲಿದ್ದಾರೆಂಬ ಚರ್ಚೆಗಳು ಕಾಂಗ್ರೆಸ್‌ನಲ್ಲಿದೆ. ಸದ್ಯದ ಸಮೀಕ್ಷೆಗಳು ಶಿರಹಟ್ಟಿ ಮೀಸಲು ಕ್ಷೇತ್ರದಲ್ಲಿ ಕಾಂಗ್ರೆಸ್-ಬಿಜೆಪಿಗೆ ಗೆಲ್ಲುವ ಸಮಾನ ಅವಕಾಶವಿದೆ ಎನ್ನುತ್ತಿವೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಘೋರ ಅಪರಾಧದ ಆರೋಪದ ಹೊರತು ಜಾಮೀನು ರಹಿತ ವಾರಂಟ್‌ ಹೊರಡಿಸಬಾರದು: ಸುಪ್ರೀಂ ಕೋರ್ಟ್‌

0
ಜಾಮೀನು ರಹಿತ ವಾರಂಟ್‌ಗಳನ್ನು ನೀಡುವುದನ್ನು ವಾಡಿಕೆಯಾಗಿರಿಸಿರುವ ಬಗ್ಗೆ ಮೇ 1ರಂದು ನೀಡಿದ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ಎಚ್ಚರಿಕೆ ನೀಡಿದೆ. ಆರೋಪಿಯ ಮೇಲೆ ಘೋರ ಅಪರಾಧದ ಆರೋಪ ಹೊರಿಸದ ಹೊರತು ಜಾಮೀನು ರಹಿತ ವಾರಂಟ್‌ಗಳನ್ನು...