Homeಮುಖಪುಟಉಪಚುನಾವಣೆ: ಗಾಳಿ ಬೀಸಿದತ್ತ ಹೋದ ಅಲೆಯಷ್ಟೇ ಅಲ್ಲ, ಆಡಳಿತದ ವಿರುದ್ಧದ ಭಾವನೆ ಘನೀಭವಿಸಿಲ್ಲ

ಉಪಚುನಾವಣೆ: ಗಾಳಿ ಬೀಸಿದತ್ತ ಹೋದ ಅಲೆಯಷ್ಟೇ ಅಲ್ಲ, ಆಡಳಿತದ ವಿರುದ್ಧದ ಭಾವನೆ ಘನೀಭವಿಸಿಲ್ಲ

ಇವೆಲ್ಲದರ ಹೊರತಾಗಿಯೂ ಕ್ರಿಯಾಶೀಲ ವಿರೋಧ ಪಕ್ಷಗಳು ಆಡಳಿತ ಪಕ್ಷದ ದುರಾಡಳಿತದ ವಿರುದ್ಧ ನಡೆಸುವ ’ಹೋರಾಟ’ವು ಮತಗಳಾಗಿ ಪರಿವರ್ತನೆಯಾಗಿ ಮಾಡಲು ಸಾಧ್ಯವಾಗುವುದೇ ರಾಜಕಾರಣ.

- Advertisement -
- Advertisement -

ಉಪಚುನಾವಣೆಯೆಂದರೆ ಆಡಳಿತ ಪಕ್ಷಕ್ಕೆ ಹೆಚ್ಚಿನ ಅನುಕೂಲವಿರುತ್ತದೆ ಎಂಬುದು ಸಾಮಾನ್ಯವಾಗಿ ಕೇಳಿಬರುವ ಮಾತು. ಇದರಲ್ಲಿ ಹುರುಳಿದೆಯಾದರೂ ಇದು ಅರ್ಧ ಸತ್ಯವಷ್ಟೇ. ಆಡಳಿತ ಪಕ್ಷಕ್ಕೆ ಓಟು ಹಾಕಿದರೆ ಲಾಭ ಎಂಬ ಮತದಾರರ ಸಾಮಾನ್ಯ ಆಲೋಚನೆಯ ಜೊತೆಗೆ, ಸಾರ್ವತ್ರಿಕ ಚುನಾವಣೆಯಲ್ಲಿ ಸ್ವಲ್ಪವಾದರೂ ನ್ಯೂಟ್ರಲ್ ಆಗಿರುವ ಅಧಿಕಾರಶಾಹಿ, ಉಪಚುನಾವಣೆಗಳ ಸಂದರ್ಭದಲ್ಲಿ ಸಂಪೂರ್ಣ ಆಡಳಿತ ಪಕ್ಷಕ್ಕೆ ಸಹಾಯ ಮಾಡುತ್ತದೆ. ಹಣ ಹಂಚಲು, ದಬ್ಬಾಳಿಕೆ ನಡೆಸಲು ಆಡಳಿತ ಪಕ್ಷಕ್ಕೆ ವಿಪರೀತ ಅವಕಾಶವಿರುತ್ತದೆ. ಹೀಗಾಗಿ ಆಡಳಿತ ಪಕ್ಷ ಗೆಲ್ಲುವುದು ಸುಲಭ. ಆದರೆ, ಕೆಲವೊಮ್ಮೆ ಸಾರ್ವತ್ರಿಕ ಚುನಾವಣೆಯಲ್ಲಿ ಪಕ್ಷವೊಂದರ ಪರ ಬೀಸಿದ ಗಾಳಿ ನಂತರ ಇಲ್ಲದೆಯೂ ಇರಬಹುದು. ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ತೆರವುಗೊಳಿಸಿದ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಸೋತಿದ್ದು ಹಾಗೆಯೇ. ಯಡಿಯೂರಪ್ಪನವರ ಮೊದಲ ಅವಧಿಯಲ್ಲಿ ಆಪರೇಷನ್ ಕಮಲ ನಡೆದ ನಂತರ ಹಲವು ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿಲ್ಲ. ಆಡಳಿತ ಪಕ್ಷದ ದುರಾಡಳಿತದ ವಿರುದ್ಧದ ವಿರೋಧ ಪಕ್ಷಗಳ ಸಾಮರ್ಥ್ಯದ ಲಿಟ್ಮಸ್ ಟೆಸ್ಟ್ ಆಗಿಯೂ ಉಪಚುನಾವಣೆಗಳನ್ನು ನೋಡಬಹುದು. ಆ ಅರ್ಥದಲ್ಲಿ ಈ ಉಪಚುನಾವಣೆಗಳ ಫಲಿತಾಂಶವನ್ನು ನೋಡಿದರೆ ಬಿಜೆಪಿಯ ಆಡಳಿತದ ವಿರುದ್ಧದ ಅಲೆಯೇನೂ ದೇಶದಲ್ಲಿಲ್ಲ ಎಂದು ಹೇಳಬಹುದು. ಒಂದುವೇಳೆ ಆಡಳಿತದ ವಿರೋಧಿ ಭಾವನೆ ಇದ್ದರೂ, ಅದನ್ನು ಘನೀಭವಿಸುವಂತೆ ಮಾಡಲು ಬೇಕಾದ ಶಕ್ತಿ ವಿರೋಧ ಪಕ್ಷಗಳಿಗಿಲ್ಲ ಎಂಬುದಂತೂ ಸಾಬೀತಾಗಿದೆ.

ಬಿಹಾರದ ಚುನಾವಣೆಯನ್ನು ಪಕ್ಕಕ್ಕಿಟ್ಟು ನೋಡುವುದಾದರೆ, 11 ರಾಜ್ಯಗಳಲ್ಲಿ ವಿವಿಧ ಕಾರಣಗಳಿಂದ ತೆರವಾಗಿದ್ದ 58 ಸ್ಥಾನಗಳಿಗೆ ನಡೆದ ಉಪಚುನಾವಣೆಗೆ ಹಲವು ರೀತಿಯ ಮಹತ್ವವಿತ್ತು. ಮಧ್ಯಪ್ರದೇಶದಲ್ಲಿ ಈ ಉಪಚುನಾವಣೆ ಒಂದು ಸರ್ಕಾರವನ್ನು ಬೀಳಿಸುವಷ್ಟು ಪ್ರಮುಖವಾಗಿತ್ತಾದರೆ, ಉಳಿದ ರಾಜ್ಯಗಳಲ್ಲಿ ಇದು ಅಧಿಕಾರ ಹಿಡಿಯಲು ಮಾನದಂಡವಾಗದಿದ್ದರೂ ಸಹ ಅಲ್ಲಿನ ವಿರೋಧ ಪಕ್ಷಗಳಿಗೆ ಮುಂದಿನ ರಾಜಕೀಯ ದಿಕ್ಸೂಚಿಯಾಗಲಿತ್ತು. ಮಧ್ಯಪ್ರದೇಶ, ಗುಜರಾತ್ ಮತ್ತು ಕರ್ನಾಟಕದಲ್ಲಿ (ಇಲ್ಲಿನ ಒಂದು ಸ್ಥಾನ) ಕಾಂಗ್ರೆಸ್‌ನಿಂದ ಬಿಜೆಪಿಗೆ ವಲಸೆ ಹೋಗಲೆಂದು ರಾಜೀನಾಮೆ ಕೊಟ್ಟವರ ಕ್ಷೇತ್ರಗಳಲ್ಲಿ ಈ ಉಪಚುನಾವಣೆಗಳು ನಡೆದಿದ್ದವು.

ಛತ್ತೀಸ್‌ಗಢದ 1 ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ಕೆ.ಧ್ರುವ್ ಭಾರೀ ಮುನ್ನಡೆಯಲ್ಲಿ ಗೆದ್ದಿದ್ದಾರೆ. ಗುಜರಾತ್‌ನ 8 ಕ್ಷೇತ್ರಗಳಲ್ಲಿ 8 ಕ್ಷೇತ್ರಗಳನ್ನು ಬಿಜೆಪಿ ಗೆದ್ದುಕೊಂಡಿದೆ. ಹರಿಯಾಣದ 1 ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದಿದೆ. ಜಾರ್ಖಂಡ್‌ನ 2 ಕ್ಷೇತ್ರಗಳಲ್ಲಿ 1 ಕ್ಷೇತ್ರವನ್ನು ಜಾರ್ಖಂಡ್ ಮುಕ್ತಿ ಮೋರ್ಚಾ ಗೆದ್ದುಕೊಂಡಿದ್ದು, ಮತ್ತೊಂದನ್ನು ಕಾಂಗ್ರೆಸ್ ಗೆದ್ದುಕೊಂಡಿದೆ.

ಮಧ್ಯಪ್ರದೇಶದ 28 ಕ್ಷೇತ್ರಗಳಲ್ಲಿ ಬಿಜೆಪಿ 19 ಕ್ಷೇತ್ರಗಳನ್ನು ಗೆದ್ದುಕೊಂಡಿದ್ದು, 09 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಮಾಜಿ ಕಾಂಗ್ರೆಸ್ ಮುಖಂಡ ಜ್ಯೋತಿರಾದಿತ್ಯ ಸಿಂಧ್ಯ ನೇತೃತ್ವದಲ್ಲಿ ಆಪರೇಶನ್ ಕಮಲ ಮಾಡಿ ಕಮಲ್‌ನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಉರುಳಿಸಿ ಅಧಿಕಾರಕ್ಕೆ ಬಂದ ಶಿವರಾಜ್ ಸಿಂಗ್ ಚೌಹಾನ್ ಸರ್ಕಾರಕ್ಕೆ ಸದ್ಯಕ್ಕೆ ಯಾವುದೇ ಧಕ್ಕೆ ಇಲ್ಲ.

ಮಣಿಪುರದ 5 ಕ್ಷೇತ್ರಗಳಲ್ಲಿ 4 ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿದೆ. 1 ಕ್ಷೇತ್ರವನ್ನು ಸ್ವತಂತ್ರ ಅಭ್ಯರ್ಥಿ ಗೆದ್ದಿದ್ದಾರೆ. ನಾಗಾಲ್ಯಾಂಡ್‌ನ 2 ಕ್ಷೇತ್ರಗಳಲ್ಲಿ 1 ಸ್ವತಂತ್ರ ಅಭ್ಯರ್ಥಿ, 1 ನ್ಯಾಷನಲ್ ಡೆಮಾಕ್ರಟಿಕ್ ಪ್ರೊಗ್ರೆಸಿವ್ ಪಾರ್ಟಿ ಗೆದ್ದುಕೊಂಡಿದೆ. ಒರಿಸ್ಸಾದ 2 ಕ್ಷೇತ್ರಗಳಲ್ಲಿ ಬಿಜು ಜನತಾ ದಳ ಜಯ ಸಾಧಿಸಿದೆ. ತೆಲಂಗಾಣದ 1 ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಕಂಡಿದೆ. ಉತ್ತರ ಪ್ರದೇಶದ 7 ಕ್ಷೇತ್ರಗಳಲ್ಲಿ ಬಿಜೆಪಿ 6 ಗೆದ್ದುಕೊಂಡಿದ್ದು, ಸಮಾಜವಾದಿ ಪಕ್ಷ 1 ಕ್ಷೇತ್ರವನ್ನು ಗೆದ್ದುಕೊಂಡಿದೆ.

ಅಂದರೆ ಕೆಲವು ಅಪವಾದಗಳನ್ನು ಹೊರತುಪಡಿಸಿ ಬಹುತೇಕ ಕಡೆ ಆಡಳಿತಾರೂಢ ಪಕ್ಷಗಳೇ ಮುನ್ನಡೆ ಸಾಧಿಸಿವೆ. ಆದರೆ, ಮೇಲೆ ಹೇಳಿದ ಹಾಗೆ ಆಪರೇಷನ್ ಕಮಲವೆನ್ನುವುದು ಅನೈತಿಕ ರಾಜಕಾರಣ ಎಂದು ಮತದಾರರಿಗೆ ಅರ್ಥ ಮಾಡಿಸುವಲ್ಲಿ ವಿರೋಧ ಪಕ್ಷಗಳು ಸೋತಿವೆ. ಕೆಲವೇ ಸಮಯದ ಹಿಂದೆ ತಮ್ಮಲ್ಲೇ ಇದ್ದು, ಆಗ ತಮ್ಮ ಸಮರ್ಥನೆಗೆ ಒಳಗಾಗುತ್ತಿದ್ದ ಶಾಸಕ ಈಗ ಬಿಜೆಪಿ ಸೇರಿದಾಕ್ಷಣ ದೊಡ್ಡ ವಿಲನ್ ಹೇಗೆ ಎಂಬ ಮತದಾರರ ಪ್ರಶ್ನೆಗೆ ಉತ್ತರ ಕೊಡುವ ನೈತಿಕತೆ ಬಿಜೆಪಿಯೇತರ ಪಕ್ಷಗಳಲ್ಲಿ ಇಲ್ಲ. ಹಾಗಾಗಿ ಒಂದು ವೇಳೆ ದೊಡ್ಡ ಮೊತ್ತಕ್ಕೆ ಮಾರಿಕೊಂಡು ಪಕ್ಷಾಂತರ ಮಾಡಿದ್ದರೂ, ವಿರೋಧಿಗಳು ಸಾಚಾ ಅಲ್ಲ ಎಂಬ ಕಾರಣಕ್ಕೆ, ಮತದಾರರು ಹೆಚ್ಚಿನ ಹಣ ಡಿಮ್ಯಾಂಡ್ ಮಾಡಬಹುದು ಅಷ್ಟೇ. ಈಗ ನಡೆಯುತ್ತಿರುವುದು ಅದೇ ಆಗಿದೆ. ಜೊತೆಗೆ ಬಿಜೆಪಿಯ ಹಣಬಲವು ಗೆದ್ದಿದೆ ಎಂಬ ಮಾತು ಸಂಪೂರ್ಣ ಸುಳ್ಳಲ್ಲ; ಕಾಂಗ್ರೆಸ್ ಬಳಿ ಹಣವೇ ಇರಲಿಲ್ಲ ಎಂಬುದು ನಿಜವೂ ಅಲ್ಲ. ಆದರೆ ಹಣ ಹಂಚಿಕೆಯ ವಿಚಾರದಲ್ಲಿ ವ್ಯವಸ್ಥಿತ ಕೆಲಸ ಹಾಗೂ ಆಕ್ರಮಣಕಾರಿ ಸಾಧ್ಯತೆ ಬಿಜೆಪಿಗಷ್ಟೇ ಇರುತ್ತದೆ ಎಂಬುದು ವಾಸ್ತವ.

ಕರ್ನಾಟಕದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕಟ್‌ನಿಂದ ಆರ್.ಆರ್.ನಗರ ಕ್ಷೇತ್ರವನ್ನು ಗೆದ್ದಿದ್ದ ಮುನಿರತ್ನ ರಾಜೀನಾಮೆ ನೀಡಿ ಬಿಜೆಪಿಗೆ ಹೋದರು. ಚುನಾವಣಾ ಅಕ್ರಮ ಎದುರಿಸಿದ್ದರು ಎಂಬ ಆರೋಪಗಳ ಕಾರಣಕ್ಕೆ ಪ್ರಕರಣ ಎದುರಿಸುತ್ತಿದ್ದರಿಂದ ಅಂದು ಈ ಕ್ಷೇತ್ರದ ಉಪಚುನಾವಣೆ ನಡೆದಿರಲಿಲ್ಲ. ಮುನಿರತ್ನ ಮೇಲೆ ಮೊಕದ್ದಮೆ ಕೂಡ ದಾಖಲಾಗಿತ್ತು. ಆಗ ಆರೋಪ ಹೊತ್ತಿದ್ದ ಮುನಿರತ್ನ ಈ ಉಪಚುನಾವಣೆಯಲ್ಲಿ ಬಿಜೆಪಿಯ ಅಭ್ಯರ್ಥಿಯಾಗಿ ಅರ್ಹರಾದರು.

ಮುನಿರತ್ನ ಮೇಲೆ ಪಕ್ಷಾಂತರದ ಕಳಂಕವಿತ್ತು, ಮತದಾರರ ಗುರುತಿನ ಚೀಟಿ ಸಂಗ್ರಹಿಸಿದ್ದರೆನ್ನುವ ಕಳಂಕ ಸೇರಿದಂತೆ ರಾಜ್ಯ ಸರ್ಕಾರ ಆಡಳಿತದ ವೈಫಲ್ಯತೆಯ ನಕಾರಾತ್ಮಕ ಅಂಶಗಳು ಯಥೇಚ್ಛವಾಗಿದ್ದರೂ ಸಹ ಉಪಚುನಾವಣೆಯ ಫಲಿತಾಂಶದಲ್ಲಿ ಮುನಿರತ್ನ ಭಾರೀ ಮತಗಳ ಅಂತರದಲ್ಲಿ ಗೆಲುವನ್ನು ದಾಖಲಿಸಿದ್ದಾರೆ. ಗೆಲುವಿನ ಅಂತರ 58,113 ಮತಗಳು.

ದಿವಂಗತ ಅಧಿಕಾರಿ ಡಿ.ಕೆ.ರವಿ ಪತ್ನಿ ಕುಸುಮಾ ಅವರನ್ನು ಕಣಕ್ಕಿಳಿಸಿದ್ದ ಕಾಂಗ್ರೆಸ್ ಪರವಾಗಿ ಪಕ್ಷದ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಒಳಗೊಂಡಂತೆ ಪ್ರಚಾರವನ್ನು ಬಿರುಸಾಗಿ ನಡೆಸಿದರೂ ಗೆಲುವಿನ ಹತ್ತಿರ ಕೂಡ ಸುಳಿಯಲು ಸಾಧ್ಯವಾಗದೆ ಎರಡನೇ ಸ್ಥಾನಕ್ಕೆ (67,798 ಮತಗಳು) ತೃಪ್ತಿಪಟ್ಟುಕೊಳ್ಳಬೇಕಾಗಿದೆ. ಇನ್ನು ಜೆಡಿಎಸ್ ಅಭ್ಯರ್ಥಿಗೆ ಬಂದಿರುವ ಮತಗಳನ್ನು ಗಮನಿಸಿದರೆ (10,251) ಬಿಜೆಪಿಯ ಜೊತೆ ಒಳಒಪ್ಪಂದ ನಡೆದಿದೆ ಎಂಬ ಗುಮಾನಿಗೆ ಇಂಬು ಕೊಡುವಂತಿದೆ.

ಆದರೆ ಆ ಒಪ್ಪಂದದ ಊಹಾಪೋಹದಂತೆ ಶಿರಾ ಕ್ಷೇತ್ರ ಜೆಡಿಎಸ್‌ಗೆ ಒಲಿಯಬೇಕಿತ್ತು. ಆದರೆ ಅಲ್ಲಿ ಜೆಡಿಎಸ್ ಮೂರನೇ ಸ್ಥಾನಕ್ಕೆ (35982) ತಳ್ಳಲ್ಪಟ್ಟಿದೆ. ತಮ್ಮ ಪ್ರಾಬಲ್ಯದ ಕ್ಷೇತ್ರದಲ್ಲಿಯೇ ಆ ಪಕ್ಷಕ್ಕೆ ಒದಗಿರುವ ದುಸ್ಥಿತಿಯನ್ನು ತಿಳಿಸುತ್ತದೆ. ಶಿರಾದ ಶಾಸಕರಾಗಿದ್ದ ಸತ್ಯನಾರಾಯಣ ಅವರ ಅಕಾಲಿಕ ಮರಣದಿಂದ ತೆರವಾಗಿದ್ದ ಕ್ಷೇತ್ರದಲ್ಲಿ, ಅನುಕಂಪದ ಅಲೆಯನ್ನು ಸದುಪಯೋಗಪಡಿಸಿಕೊಳ್ಳುವ ಸಲುವಾಗಿ ಅವರ ಪತ್ನಿ ಅಮ್ಮಾಜಮ್ಮ ಅವರನ್ನು ಜೆಡಿಎಸ್ ಕಣಕ್ಕಿಳಿಸಿತ್ತು. ದೇವೇಗೌಡ ಮತ್ತು ಕುಮಾರಸ್ವಾಮಿ ಕ್ಷೇತ್ರದಲ್ಲಿಯೇ ಬೀಡುಬಿಟ್ಟು ಗೆಲುವಿಗಾಗಿ ಶ್ರಮಿಸುತ್ತಿದ್ದಾರೆ ಎಂದು ಜೆಡಿಎಸ್ ಆತ್ಮವಿಶ್ವಾಸ ತೋರುತ್ತಿತ್ತು. ಇನ್ನು ಕಾಂಗ್ರೆಸ್‌ನಿಂದ ಹಿರಿಯ ಅನುಭವಿ ನಾಯಕರಾದ ಟಿ.ಬಿ.ಜಯಚಂದ್ರ (61,573) ಅವರನ್ನು ಕಣಕ್ಕಿಳಿಸಿ, ಕಾಂಗ್ರೆಸ್ ಮುಖಂಡರೆಲ್ಲ ಭಿನ್ನಾಭಿಪ್ರಾಯ ತೊರೆದು ಪಕ್ಷದ ಗೆಲುವಿಗೆ ಕೆಲಸ ಮಾಡುತ್ತಿದ್ದಾರೆ ಎಂದು ಪ್ರಚಾರ ಮಾಡಿತ್ತು. ಕ್ಷೇತ್ರಕ್ಕೆ ಅಷ್ಟು ಪರಿಚಯವೇ ಇರದ ಡಾ.ರಾಜೇಶ್ ಗೌಡರ (74,522) ಎದುರು ಅವರು 12,949 ಮತಗಳ ಅಂತರದಿಂದ ಜಯಚಂದ್ರ ಸೋಲುಂಡಿದ್ದಾರೆ.

ಕೊರೊನಾ ನಿರ್ವಹಣೆಯಲ್ಲಿ ಭ್ರಷ್ಟಾಚಾರದ ಆರೋಪ, ನೆರೆ ಪರಿಹಾರ ತರುವುದರಲ್ಲಿ ವಿಫಲವಾಗಿರುವ ಅಂಶ, ಜಿಎಸ್‌ಟಿ ಪಾಲಿನಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದ್ದರೂ ಮುಖ್ಯಮಂತ್ರಿಗಳ ಮತ್ತು 25 ಬಿಜೆಪಿ ಸಂಸದರ ಜಾಣ ಮೌನ, ಸರ್ಕಾರಿ ವಲಯಗಳ ಖಾಸಗೀಕರಣ, ಸಿಎಎ-ಎನ್‌ಆರ್‌ಸಿ ವಿವಾದ, ಪ್ರತಿಗಾಮಿ ಕೃಷಿ ನೀತಿಗಳ ಸುಗ್ರೀವಾಜ್ಞೆ ಸೇರಿದಂತೆ ಹತ್ತಾರು ನಕಾರಾತ್ಮಕ ಅಂಶಗಳು ಸಾರ್ವತ್ರಿಕ ಚುನಾವಣೆಯಲ್ಲೇ ಚರ್ಚಾ ವಿಷಯಗಳಾಗದ ಮೇಲೆ, ಉಪಚುನಾವಣೆಯಲ್ಲಾದೀತೇ?

ಕಳೆದ ವಿಧಾನಸಭೆಯ ಅವಧಿಯಲ್ಲಿ ನಂಜನಗೂಡು, ಗುಂಡ್ಲುಪೇಟೆ ಹಾಗೂ ಬಳ್ಳಾರಿ ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಗೆದ್ದಿದ್ದೂ ಹಣಬಲ ಹಾಗೂ ಅಧಿಕಾರದ ಅನುಕೂಲದಿಂದಲೇ. ಅದೇ ಈಗಲೂ ಆಗಿದೆ. ಆದರೆ ಯಾವುದನ್ನು ಕಾಂಗ್ರೆಸ್ ಮಾಡುತ್ತದೋ, ಅದರ ಹತ್ತುಪಟ್ಟು ಅನೈತಿಕ ರಾಜಕಾರಣ ಮಾಡುವುದು ಬಿಜೆಪಿಯಿಂದ ಸಾಮರ್ಥ್ಯವಾಗಿದೆ. ಅದಕ್ಕೆ ಬಿ.ವೈ.ವಿಜಯೇಂದ್ರರಂತಹ ದಂಡನಾಯಕ ಸಿಕ್ಕಿದ್ದಾರೆ. ಕ್ಷೇತ್ರದ ಮೇಲೆ ಯಾವ ಹಿಡಿತವಿರದಿದ್ದರೂ, ಬಿಡುಬೀಸಾಗಿ ಖರ್ಚು ಮಾಡುವಷ್ಟು ಹಣವನ್ನು ಹೊತ್ತುಕೊಂಡು ಹೋಗಿ ಗೆಲ್ಲಿಸಿಕೊಂಡು ಬರುವವರಲ್ಲಿ ಜನಾರ್ದನರೆಡ್ಡಿ, ಶ್ರೀರಾಮುಲು, ಡಿ.ಕೆ.ಶಿವಕುಮಾರ್‌ರ ಜೊತೆಗೆ ಕರ್ನಾಟಕದಲ್ಲಿ ಇನ್ನೊಬ್ಬ ’ಹೊಸ ತಲೆಮಾರಿನ’ ನಾಯಕನಾಗಿ ವಿಜಯೇಂದ್ರ ಸಿಕ್ಕಿರುವುದು ಕರ್ನಾಟಕದ ಭಾಗ್ಯವೇ ಇರಬಹುದೇನೋ!? ಇವೆಲ್ಲವನ್ನೂ ದೌರ್ಭಾಗ್ಯವೆಂಬುದಕ್ಕಿಂತ, ಆಸ್ತಿಯೆಂಬಂತೆ ಪಕ್ಷಗಳು ಮಾತ್ರವಲ್ಲದೇ ಮತದಾರರೂ ಭಾವಿಸುತ್ತಿದ್ದಾರೆ ಎಂಬುದೇ ದುರಂತ.

ರಾಜರಾಜೇಶ್ವರಿನಗರದ ಗೆಲುವು ಬಿಜೆಪಿಗೆ ದೊಡ್ಡದೇನೂ ಆಗಿರಲಿಲ್ಲ. ಏಕೆಂದರೆ ಮುನಿರತ್ನರ ಬಗ್ಗೆ ಕ್ಷೇತ್ರದಲ್ಲಿ ಕೆಟ್ಟ ಹೆಸರೇನೂ ಇರಲಿಲ್ಲ. ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲೂ ಅವರು ಜನರಿಗೆ ಸಾಕಷ್ಟು ಕೆಲಸ ಮಾಡಿದರು ಎಂಬ ಭಾವನೆಯೇ ಇತ್ತು. ಕಾಂಗ್ರೆಸ್‌ಗೆ ಅಷ್ಟು ಬಲವಾದ ಅಭ್ಯರ್ಥಿಯೂ ಇರಲಿಲ್ಲ. ಆದರೆ, ಗೆಲುವಿನ ಅಂತರವು ಮುನಿರತ್ನರ ’ಸಾಧನೆ’ಯ ಜೊತೆಗೆ ಬಿಜೆಪಿ ಕಡೆಯಿಂದ ಆರ್.ಆರ್.ನಗರದ ದಂಡನಾಯಕ ಆರ್.ಅಶೋಕ್‌ರ ’ಶಕ್ತಿ’ಯ ಪ್ರದರ್ಶನವೂ ಆಗಿದೆ. ಈ ಭಾಗದ ’ಒಕ್ಕಲಿಗ’ ನಾಯಕ ಈಗ ತಾನೇ ಹೊರತು ಎಚ್.ಡಿ.ಕೆ ಅಥವಾ ಡಿ.ಕೆ.ಶಿ ಅಲ್ಲ ಎಂದು ಆರ್.ಅಶೋಕ್ ಗಟ್ಟಿಯಾಗಿ ಹೇಳಲು ಸಾಧ್ಯವಾಗಿರುವುದೂ ಈ ದೊಡ್ಡ ಅಂತರದಿಂದಲೇ ಆಗಿದೆ.

ಇವೆಲ್ಲದರ ಹೊರತಾಗಿಯೂ ಕ್ರಿಯಾಶೀಲ ವಿರೋಧ ಪಕ್ಷಗಳು ಆಡಳಿತ ಪಕ್ಷದ ದುರಾಡಳಿತದ ವಿರುದ್ಧ ನಡೆಸುವ ’ಹೋರಾಟ’ವು ಮತಗಳಾಗಿ ಪರಿವರ್ತನೆಯಾಗಿ ಮಾಡಲು ಸಾಧ್ಯವಾಗುವುದೇ ರಾಜಕಾರಣ. ಅದಕ್ಕೆ ಅಪಾರವಾದ ಸಾಧ್ಯತೆಯಿರುವುದು ಈಗಾಗಲೇ ಪ್ರತಿ ಬೂತ್ ಮಟ್ಟದಲ್ಲೂ ತಳವೂರಿರುವ ರಾಜಕೀಯ ಪಕ್ಷಗಳಿಗೆ. ಆದರೆ, ಈ ಪಕ್ಷಗಳೇ ಅದರಲ್ಲಿ ವಿಫಲವಾಗುತ್ತಿವೆ. ಅಂದರೆ ’ನಿಜವಾದ ರಾಜಕಾರಣ’ ಮಾಡುವುದರಲ್ಲಿ ಅವು ವಿಫಲವಾಗುತ್ತಿವೆ. ಇದಕ್ಕೆ ಎರಡು ಕಾರಣಗಳಿವೆ. ಎಲ್ಲಾ ಬಗೆಯ ಅನೈತಿಕತೆಯನ್ನೂ ಬಳಸಲು ಬಿಜೆಪಿ ಸ್ವಲ್ಪವೂ ಹಿಂಜರಿಯುವುದಿಲ್ಲ.

ಕರ್ನಾಟಕದಂತಹ ಹಣ ಚಲಾವಣೆ ವಿಪರೀತವಾಗುವ ರಾಜ್ಯಗಳಲ್ಲಿ ಅದು ನೆರವಿಗೆ ಬರುತ್ತದೆ. ಎರಡನೆಯದ್ದು ಧ್ರುವೀಕರಣ. ಜಾತಿ ಧ್ರುವೀಕರಣದಲ್ಲಿ ಉಳಿದವರೇನೂ ಪವಿತ್ರರಲ್ಲವಾದರೂ, ಅದನ್ನು ಮೈಕ್ರೋ ಲೆವೆಲ್‌ವರೆಗೆ (ಶಿರಾ ಚುನಾವಣೆಯಲ್ಲಿ ಮಾಡಿದಂತೆ) ತೆಗೆದುಕೊಂಡು ಹೋಗುವಲ್ಲೂ ಅವರು ಪಳಗಿದ್ದಾರೆ. ಇವೆರಡನ್ನೂ ಮಣಿಸಲು ಬೇಕಾದ ಸಾಮರ್ಥ್ಯ ಬೇರೆ ರೀತಿಯದ್ದು. ಅದು ಕಾಂಗ್ರೆಸ್‌ಗಾಗಲೀ, ಜೆಡಿಎಸ್‌ಗಾಗಲೀ ಇಲ್ಲವೆಂಬುದು ಈ ಉಪಚುನಾವಣೆಯಲ್ಲೂ ಎದ್ದು ಕಂಡಿತು.

  • ಪ್ರತಾಪ್ ವೇಲುಸ್ವಾಮಿ

ಇದನ್ನೂ ಓದಿ: ಬಿಹಾರ ಫಲಿತಾಂಶ ವಿಶ್ಲೇಷಣೆ: ನಿತೀಶ್ ಕಳೆದುಕೊಂಡದ್ದೇನು? ತೇಜಸ್ವಿ ಗಳಿಸಿದ್ದೇನು?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬೈಕ್‌ನಲ್ಲಿ ಓವರ್‌ಟೇಕ್ ಮಾಡಿದ್ದಕ್ಕೆ ದಲಿತ ಯುವಕನನ್ನು ಮರಕ್ಕೆ ಕಟ್ಟಿ ಥಳಿತ: ಅವಮಾನ ತಾಳಲಾರದೆ ಆತ್ಮಹತ್ಯೆ

0
ಬೈಕ್‌ನಲ್ಲಿ ಓವರ್‌ಟೇಕ್ ಮಾಡಿದ ಎಂಬ ಕ್ಷುಲ್ಲಕ ಕಾರಣಕ್ಕೆ ದಲಿತ ಯುವಕನ ಬೈಕ್ ಮತ್ತು ಮೊಬೈಲ್ ಕಿತ್ತುಕೊಂಡು ಸವರ್ಣೀಯರು ಮರಕ್ಕೆ ಕಟ್ಟಿ ಥಳಿಸಿರುವ ಮತ್ತು ಆ ಯುವಕ ಅವಮಾನ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿರುವ ಜಾತಿ...