ಸಾಮಾಜಿಕ ಮಾಧ್ಯಮದಲ್ಲಿ ಪರಿಶಿಷ್ಟ ಜಾತಿಯವರ ವಿರುದ್ಧ ಆಕ್ಷೇಪಾರ್ಹ ಪದ ಬಳಸಿ ಜಾತಿ ನಿಂದನೆ ಆರೋಪ ಎದುರಿಸುತ್ತಿರುವ ಬಾಲಿವುಡ್ ನಟಿ ಯುವಿಕಾ ಚೌಧರಿ ಅವರನ್ನು ಸೋಮವಾರ ಹರಿಯಾಣದ ಹನ್ಸಿ ಪೊಲೀಸರು ಬಂಧಿಸಿ, ಬಳಿಕ ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.

ಕ್ರಿಕೆಟಿಗ ಯಜುವೇಂದ್ರ ಚಾಹಲ್ ವಿರುದ್ಧ ಇನ್‌ಸ್ಟಾಗ್ರಾಮ್ ಲೈವ್ ವಿಡಿಯೋದಲ್ಲಿ ಅವರು ಜಾತಿ ನಿಂದನೆ ಮಾಡಿರುವ ಆರೋಪ ಎದುರಿಸುತ್ತಿರುವ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಅವರನ್ನು ಸೋಮವಾರವಷ್ಟೇ  ಬಂಧಿಸಿ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಹರಿಯಾಣ ಪೊಲೀಸರು ತಿಳಿಸಿದ್ದಾರೆ.

ನಟಿ ಯುವಿಕಾ ವಿರುದ್ಧ ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ದೂರು ದಾಖಲಾಗಿದೆ. ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ನಟಿಗೆ ಮಧ್ಯಂತರ ಜಾಮೀನು ನೀಡಿದೆ.

ಇದನ್ನೂ ಓದಿ: ವಂದನಾ ಜಾತಿ ನಿಂದನೆ ಪ್ರಕರಣ; ಘಟನೆ ನಾಚಿಕೆಗೇಡು ಎಂದ ಹಾಕಿ ತಂಡದ ನಾಯಕಿ

“ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಪರಿಶಿಷ್ಟ ಜಾತಿಯವರ ವಿರುದ್ಧ ಆಕ್ಷೇಪಾರ್ಹ ಪದ ಬಳಕೆ ಪ್ರಕರಣದಲ್ಲಿ ಹೈಕೋರ್ಟ್ ನೀಡಿದ ಮಾರ್ಗಸೂಚಿಗಳ ಪ್ರಕಾರ ನನ್ನ ಕಕ್ಷಿದಾರರು ತನಿಖೆಗೆ ಸಹಕರಿಸಿದ್ದಾರೆ. ಅವರು ಈಗ ಮಧ್ಯಂತರ ಜಾಮೀನಿನಲ್ಲಿದ್ದಾರೆ” ಎಂದು ನಟಿ ಯುವಿಕಾ ಚೌಧರಿ ಪರ ವಕೀಲ ಅಶೋಕ್ ಬಿಷ್ಣೋಯ್ ಹೇಳಿದ್ದಾರೆ.

ನಟಿ ಯುವಿಕಾ ವಿರುದ್ಧ ವಿರುದ್ಧ ದಲಿತ ಹೋರಾಟಗಾರ ರಜತ್ ಕಲ್ಸನ್ ಅವರು ಹರಿಯಾಣದ ಪೋಲಿಸ್ ಸ್ಟೇಷನ್‌ನಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಯುವಿಕಾ ವಿಡಿಯೊದಲ್ಲಿ ಪರಿಶಿಷ್ಟ ಜಾತಿ ಸಮುದಾಯದ ಬಗ್ಗೆ ಕೆಲವು ಅವಹೇಳನಕಾರಿ ಮತ್ತು ಆಕ್ಷೇಪಾರ್ಹ ಟೀಕೆಗಳನ್ನು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ನಟಿಯ ಪತಿ ಪ್ರಿನ್ಸ್ ನರುಲಾ ಅವರು ಚಿತ್ರೀಕರಿಸಿದ್ದ ವಿಡಿಯೋದಲ್ಲಿ ಜಾತಿ ನಿಂದನೆಯ ಪದ ಬಳಸಿದ್ದರು. ಇದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಆಕೆಯ ವಿಡಿಯೊ ಬಗ್ಗೆ ಆಕ್ಷೇಪ, ಆಕ್ರೋಶ ಉಂಟಾದ ಬಳಿಕ ಟ್ವಿಟರ್‌ ಖಾತೆಯಲ್ಲಿ ನಟಿ ಕ್ಷಮೆ ಕೇಳಿದ್ದರು.

“ನನ್ನ ಕೊನೆಯ ವಿಡಿಯೊದಲ್ಲಿ ನಾನು ಬಳಸಿದ ಪದದ ಅರ್ಥ ನನಗೆ ತಿಳಿದಿರಲಿಲ್ಲ, ನಾನು ಯಾರನ್ನೂ ನೋಯಿಸುವ ಉದ್ದೇಶವನ್ನು ಹೊಂದಿಲ್ಲ. ನಾನು ಯಾರನ್ನೂ ನೋಯಿಸಲು ಎಂದಿಗೂ ಸಾಧ್ಯವಿಲ್ಲ. ನಾನು ಪ್ರತಿಯೊಬ್ಬರಿಗೂ ಕ್ಷಮೆ ಕೇಳುತ್ತೇನೆ” ಎಂದು ಟ್ವೀಟ್ ಮಾಡಿದ್ದರು.

ನಟಿ ಯುವಿಕಾ ಚೌದರಿ, ಕನ್ನಡದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಮಳೆಯಲಿ ಜೊತೆಯಲಿ ಚಿತ್ರದಲ್ಲಿಯೂ ಅಭಿನಯಿಸಿದ್ದರು.

ಶಾರುಖ್ ಖಾನ್ ನಟನೆಯ ಓಂ ಶಾಂತಿ ಓಂ, ಫೀರ್‌ ಭೀ ದಿಲ್ ಹೈ ಹಿಂದೂಸ್ತಾನಿ, ದಿ ಪವರ್‌ ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ. ಹಿಂದಿ ಬಿಗ್ ಬಾಸ್-9 ರ ಸ್ವರ್ಧಿಯಾಗಿದ್ದರು.


ಇದನ್ನೂ ಓದಿ: ಕ್ರಿಕೆಟಿಗ ಚಾಹಲ್ ವಿರುದ್ಧ ಜಾತಿ ನಿಂದನೆ: ಯುವರಾಜ್ ಸಿಂಗ್‌ ಬಂಧನ, ಬಿಡುಗಡೆ

LEAVE A REPLY

Please enter your comment!
Please enter your name here