ಚಿಕ್ಕಮಗಳೂರು ಸಾಹಿತ್ಯ ಸಮ್ಮೇಳನ: ಕಲ್ಕುಳಿ ವಿಠಲ ಹೆಗಡೆಯವರ ಅಧ್ಯಕ್ಷ ಭಾಷಣದ ಆಯ್ದ ಭಾಗ

0

ಶೃಂಗೇರಿಯಲ್ಲಿ ಇಂದು ಆರಂಭವಾದ 16ನೇ ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಆರಂಭವಾಗಿದೆ. ಸಂಘಪರಿವಾರದಿಂದ ಬೆದರಿಕೆಗೆ ಒಳಗಾದ ಕಾರಣಕ್ಕೆ ಸಮ್ಮೇಳನ ಮಹತ್ವ ಪಡೆದಿತ್ತು.  ಅಧ್ಯಕ್ಷರಾದ ಕಲ್ಕುಳಿ ವಿಠಲ್ ಹೆಗ್ಗಡೆಯವರು ಅಧ್ಯಕ್ಷ ಭಾಷಣ ಮಾಡಿದರು. ಆಯ್ದ ಭಾಗ ಇಲ್ಲಿದೆ.

ನಮ್ಮ ಶೃಂಗೇರಿಯ ಆದಿಕವಿ ಬಾಹುಬಲಿಯನ್ನು ಸ್ಮರಿಸುತ್ತಾ ನನ್ನ ಭಾಷಣವನ್ನು ಪ್ರಾರಂಭಿಸುತ್ತಿದ್ದೇನೆ.

ಜಿಲ್ಲಾ 16ನೇ ಕನ್ನಡ ಸಾ ಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಪದವಿಯ ಈ ಗೌರವವನ್ನು ನಾನು ಬಯಸಿರಲಿಲ್ಲ; ನಿರೀಕ್ಷಿಸಿಯೂ ಇರಲಿಲ್ಲ. ಆದರೂ ನೀವೆಲ್ಲರೂ ಪ್ರೀತಿಯಿಂದ ಈ ಗೌರವ ನೀಡಿದ್ದೀರಿ. ಇದಕ್ಕಾಗಿ ನಾನು ನಿಮಗೆಲ್ಲರಿಗೂ ಅಭಾರಿಯಾಗಿದ್ದೇನೆ..

ನಾನು ಈ ಮೊದಲು ಸ್ಮರಿಸಿದ ಬಾಹುಬಲಿ ಎಂಬ ಜೈನ ಕವಿಯು, ಶೃಂಗೇರಿಯೂ ಆಡಳಿತಕ್ಕೊಳಪಟ್ಟಿದ್ದ ಕಾರ್ಕಳದ ದೊರೆ ಭೈರವೇಂದ್ರನ ಆಸ್ಥಾನದಲ್ಲಿ ಕವಿಯಾಗಿದ್ದನೆಂದು ಇತಿಹಾಸ ಹೇಳುತ್ತದೆ. ಈತನ ಗ್ರಂಥ ‘ನಾಗಕುಮಾರ ಚರಿತೆ’ಯಲ್ಲಿ ಮುಖ್ಯವಾಗಿ ಕರ್ಮಮಾರ್ಗದ ಪ್ರಸ್ತಾಪ ಬರುತ್ತದೆ. ನನ್ನದೂ ಕರ್ಮಮಾರ್ಗವೇ. ನಮ್ಮ ನೆಲ, ಜಲ ಮತ್ತು ನಮ್ಮ ಜನರಿಗೆ ಸರ್ಕಾರದಿಂದಲೇ ಆಗಲಿ, ಇನ್ಯಾರಿಂದಲೇ ಆಗಲಿ ಸಂಕಷ್ಟ ಬಂದಾಗಲೆ ಧ್ವನಿ ಎತ್ತುವ ಕಾಯಕ ಮಾಡಿದ್ದೇನೆ. ಅಗತ್ಯ ಬಿದ್ದಾಗ ಹೋರಾಟಕ್ಕಿಳಿದಿದ್ದೇನೆ. ಇದು ನನ್ನ ಕರ್ತವ್ಯವಾಗಿದೆ. ಈ ಅಧ್ಯಕ್ಷ ಸ್ಥಾನವು ಈ ಹಿಂದಿನ ನನ್ನ ಹೋರಾಟಕ್ಕೆ ಸಂದ ಗೌರವ ಎಂದು ಭಾವಿಸಿದ್ದೇನೆ . ನನ್ನ ಹೋರಾಟದ ಅನುಭವ ಮತ್ತು ಚಿಂತನೆಗಳು ನನ್ನ ಕೃತಿ, ಪ್ರಬಂಧ, ಲೇಖನಗಳಲ್ಲಿ ಅಭಿವ್ಯಕ್ತಗೊಂಡಿದ್ದು, ಅವೇ ಈ ವೇದಿಕೆಯನ್ನು ತಮ್ಮೆಲ್ಲರ ಅಭಿಮಾನದ ಮೇರೆಗೆ ದೊರಕಿಸಿಕೊಟ್ಟಿತ್ತೆಂದು ಕೊಳ್ಳುತ್ತೇನೆ. ನನ್ನನ್ನು ಆಯ್ಕೆಮಾಡಿದ ಜಿಲ್ಲ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು, ಪದಾಧಿಕಾರಿಗಳಿಗೆ, ಅಭಿಮಾನಿಗಳಿಗೆ, ಸ್ನೇಹಿತರಿಗೆ, ಸಮಸ್ತರಿಗೆ ಮೊದಲಿಗೆ ಅಂತರಾಳದ ನಮಸ್ಕಾರ ತಿಳಿಸುತ್ತೇನೆ.

ಶೃಂಗೇರಿ ಎಂದರೆ ಹಾವು ಗರ್ಭಿಣಿ ಕಪ್ಪೆಗೆ ನೆರಳು ನೀಡಿದ ಜಾಗ. ಸೌಹಾರ್ದತೆಯ ಪರಂಪರೆಗೆ ಇದಕ್ಕಿಂತ ದೊಡ್ಡ ಉದಾಹರಣೆ ನನಗಂತೂ ಸಿಕ್ಕಿಲ್ಲ. ಈ ಕಾರಣದಿಂದ ನನಗೆ ನನ್ನೂರಿನ ಬಗ್ಗೆ ಹೆಮ್ಮೆ ಎಲ್ಲರಿಗಿಂತಲೂ ಒಂದು ಹಿಡಿ ಹೆಚ್ಚು. ಇಂತಹ ನನ್ನೂರಿನಲ್ಲಿ ನಡೆಯುತ್ತಿರುವ ಈ ಕನ್ನಡ ಹಬ್ಬದಲ್ಲಿ ಈ ಗೌರವ ಪಡೆಯುತ್ತಿರುವುದರಿಂದ ಆಗುತ್ತಿರುವ ಸಂತೋಷವನ್ನು ಪದಗಳಲ್ಲಿ ಹೇಳಲಾರೆ.

ಪ್ರಿಯ ಬಂಧುಗಳೇ,

ಇದೊಂದು ಸಾಹಿತ್ಯ ಸಮ್ಮೇಳನ ಎಂಬುದಕ್ಕಿಂತ ಕನ್ನಡಿಗರ ಸ್ವಾಭಿಮಾನದ ಸಮಾವೇಶವಾಗಿ ಇತಿಹಾಸದಲ್ಲಿ ದಾಖಲಾಗಲಿದೆ. ಇದು ಚಿಕ್ಕಮಗಳೂರು ಜಿಲ್ಲಾ ಸಾಹಿತ್ಯ ಸಮ್ಮೇಳನವಾಗಿದ್ದರೂ, ಬುದ್ದಿಗೇಡಿಗಳಿಂದಾಗಿ ಅಖಿಲ ಕರ್ನಾಟಕ ಮಟ್ಟದಲ್ಲಿ ಸುದ್ದಿ ಮಾಡಿ ಪ್ರಚಾರ ಪಡೆದಿದೆ. ಎಷ್ಟೇ ಅಡೆ-ತಡೆಗಳು ಎದುರಾದರೂ ಇದರ ಯಶಸ್ಸಿಗಾಗಿ ಹಲವಾರು ಕನ್ನಡ ಕಾರ್ಯಕರ್ತರು ಹಗಲಿರುಳು ಶ್ರಮಿಸಿದ್ದಾರೆ. ಅನೇಕರು ತಮ್ಮ ಕೈಯಲ್ಲಾದಷ್ಟು ಆರ್ಥಿಕ ನೆರವು ನೀಡಿದ್ದಾರೆ. ಆ ಮೂಲಕ ಕನ್ನಡಿಗರ ಸ್ವಾಭಿಮಾನಕ್ಕೆ ಎಸೆದ ಸವಾಲನ್ನು ದಿಟ್ಟವಾಗಿ ಎದುರಿಸಿದ್ದಾರೆ. ಇದು ನನ್ನಲ್ಲಿ ಹೋರಾಟದ ಕಾವನ್ನು ಇನ್ನಷ್ಟು ಹೆಚ್ಚಿಸಿದೆ ಎಂದಷ್ಟೇ ನಾನು ಈ ಸಂದರ್ಭದಲ್ಲಿ ಹೇಳಬಲ್ಲೆ.

ಆತ್ಮೀಯ ಕನ್ನಡ ಪ್ರೇಮಿಗಳೇ,

ಸಾಹಿತ್ಯ ಸಮ್ಮೇಳನಗಳು ಕನ್ನಡ ನುಡಿ ಜಾತ್ರೆಗಳಾಗಿವೆಯೇ ಹೊರತು, ಕನ್ನಡಿಗರ ಧ್ವನಿಯಾದ ಉದಾಹರಣೆಗಳು ಬಹಳ ಕಡಿಮೆ. ಇನ್ನು ಸಮ್ಮೆಳನಾಧ್ಯಕ್ಷರ ಭಾಷಣದಲ್ಲಿನ ವಿಷಯಗಳನ್ನು ಮುಂದಿಟ್ಟುಕೊಂಡು ಗಂಭೀರ ಚರ್ಚೆ ನಡೆಸಿದ್ದಿಲ್ಲ. ಅಧ್ಯಕ್ಷೀಯ ಭಾಷಣದಲ್ಲಿನ ಬೇಡಿಕೆ, ಅಹವಾಲುಗಳಾಗಲೀ, ಅಥವಾ ಸಾವಿರಾರು ಕನ್ನಡಿಗರ ಸಮ್ಮುಖದಲ್ಲಿ ತೀರ್ಮಾನಿಸಿದ ನಿರ್ಣಯಗಳಾಗಲೀ, ಜಾರಿಗೆ ಬಂದಿದ್ದು, ನಾಡು-ನುಡಿಯ ಸಮಸ್ಯೆಗಳು ಬಗೆಹರಿದಿದ್ದು ಅಪರೂಪ. ನನ್ನ ಹೋರಾಟದ ಅನುಭವದಲ್ಲಿ ಹೇಳುವುದಾದರೆ ನಾನು ತುಮಕೂರಿನಲ್ಲಿ ಮತ್ತು ಶಿವಮೊಗ್ಗದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿ, ರಾಜ್ಯ ಮತ್ತು ಮಲೆನಾಡಿನ ವಿಷಯಗಳನ್ನು ಪ್ರಸ್ತಾಪಿಸಿದ್ದೇನೆ. ಇವುಗಳನ್ನು ಸಮ್ಮೇಳನದ ನಿರ್ಣಯಗಳಲ್ಲಿ ಸೇರಿಸಬೇಕೆಂದು ಒತ್ತಾಯ ಮಾಡಿ, ಪ್ರತಿಭಟನೆ ಕೂಡ ಮಾಡಿ, ಅದರಲ್ಲಿ ಯಶಸ್ವಿಯೂ ಆಗಿದ್ದೇನೆ. ಆದರೆ ಮುಖ್ಯಮಂತ್ರಿಗಳೇ ಭರವಸೆ ನೀಡಿದ್ದರೂ ಈ ನಿರ್ಣಯಗಳು ಕಾರ್ಯರೂಪಕ್ಕೆ ಬಂದಿಲ್ಲವೆಂಬ ಬಹುದೊಡ್ಡ ವಿಷಾದ ನನ್ನಲ್ಲಿದೆ.
ಅಂದ ಮಾತ್ರಕ್ಕೆ ಈ ರೀತಿಯ ಸಮ್ಮೇಳನದಲ್ಲಿ ನ್ಯಾಯಯುತ ಬೇಡಿಕೆಗಳನ್ನು, ಸಮಾಜದ ಸಂಕಟಗಳನ್ನು ಪ್ರಸ್ತಾಪಿಸುವುದು ವ್ಯರ್ಥವೆಂಬುದು ನನ್ನ ಅಭಿಪ್ರಾಯವಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರು ತಮ್ಮ ಅಹವಾಲನ್ನು, ಬೇಡಿಕೆಗಳನ್ನು ಸಲ್ಲಿಸುವುದು ಸಂವಿಧಾನಾತ್ಮಕ ಹಕ್ಕು. ಜನ ಜಾಗೃತರಾದರೆ ಸರ್ಕಾರಗಳು ಇವುಗಳಿಗೆ ಬೆಲೆ ನೀಡಲೇಬೇಕಾಗುತ್ತದೆ. ಆ ದೃಷ್ಟಿಯಿಂದ ಇಂದು ನಾನಿಲ್ಲಿ ಪ್ರಸ್ತಾಪಿಸುವ ವಿಷಯಗಳು ನಾವೆಲ್ಲರೂ ಸೇರಿ ನೀಡುತ್ತಿರುವ ಆದೇಶವೆಂದೂ, ಇದು ನನ್ನ ಜವಾಬ್ದಾರಿಯೂ ಹೌದೆಂದು ತಿಳಿದು ಈ ಭಾಷಣವನ್ನು ಮುಂದುವರೆಸುತ್ತೇನೆ.

ಈ ಸಾಹಿತ್ಯ ಸಮ್ಮೇಳನದಲ್ಲಿ ನಾನು ವಿನಮ್ರವಾಗಿ ಒಪ್ಪಿಕೊಳ್ಳುವುದೆಂದರೆ ನಾನು ಮೂಲತಃ ಸಾಹಿತ್ಯವನ್ನು ಶಾಸ್ತ್ರೀಯವಾಗಿ ಕಲಿತವನಲ್ಲ. ತಮಗೆಲ್ಲರಿಗೂ ಗೊತ್ತಿರುವಂತೆ ನಾನು ಪರಿಸರ ಮತ್ತು ಸಾಮಾಜಿಕ ಹೋರಾಟದ ಕಾರ್ಯಕರ್ತ. ಕಳೆದ ಭರ್ತಿ ನಾಲ್ಕು ದಶಕಗಳಿಂದ ಒಂದಿಂದು ಹೋರಾಟಗಳಲ್ಲಿ ತೊಡಗಿಸಿಕೊಂಡು ಬಂದಿದ್ದೇನೆ. ಹಾಗೆ ಹೇಳುವುದಾದರೆ ಯಾರಾದರೂ ನನ್ನ ಇತ್ತೀಚಿನ ಕೃತಿಗಳನ್ನು ಓದಿ ನನ್ನನ್ನು ಸಾಹಿತಿ ಎಂದು ಗುರುತಿಸುವುದಕ್ಕಿಂತ ಹೋರಾಟಗಾರನೆಂದರೆ ನನಗೆ ಹೆಚ್ಚು ಖುಷಿಯಾಗುತ್ತದೆ. ವಾಸ್ತವವೆಂದರೆ ರಾಜ್ಯದಾದ್ಯಂತ ನಡೆದ ಹೋರಾಟಗಳಲ್ಲಿ ಭಾಗವಹಿಸಿದ್ದರಿಂದ ನನಗೆ ಸಿಕ್ಕ ಸ್ನೇಹಿತರು, ಅಭಿಮಾನಿಗಳ ಬೆಂಬಲವೆಷ್ಟೋ ಅಷ್ಟೇ ನನ್ನ ಕೃತಿ ‘ಮಂಗನಬ್ಯಾಟೆ’ಗೂ ವಿಸ್ತತೃತವಾದ ಸ್ಪಂದನೆ ಸಿಕ್ಕಿದೆ. ಇದರ ಅರಿವೂ ನನಗಿದೆ. ಹೋರಾಟ ಸಾಹಿತ್ಯದಿಂದ ಹೊರತಲ್ಲ. ಸಾಹಿತ್ಯವೂ ಹೋರಾಟದಿಂದ ಹೊರತಲ್ಲ. ಅವು ಒಂದಕ್ಕೊಂದು ಪೂರಕವೇ. ಸೈದ್ಧಾಂತಿಕ ಪ್ರೇರಣೆಯಿಲ್ಲದ ಹೋರಾಟಗಳಾಗಲೀ; ಸಾಮಾಜಿಕ ಬದ್ಧತೆಯಿಲ್ಲದ ಸಾಹಿತ್ಯವಾಗಲೀ- ಎರಡೂ ಜೊಳ್ಳು. ಜನಸಮಾನ್ಯರ ಸಂಕಟಗಳನ್ನು ಪರಿಹರಿಸುವಲ್ಲಿ ಹೋರಾಟಗಳಿಗೆ ಎಷ್ಟು ಜವಾಬ್ದಾರಿ ಇರುತ್ತದೋ ಅಷ್ಟೇ ಜವಾಬ್ದಾರಿ ಸಾಹಿತ್ಯಕ್ಕೂ ಇರುತ್ತದೆ. ಮೌಲ್ಯಯುತ ಸಾಹಿತ್ಯ ಸಾಮಾಜಿಕ ಬದ್ಧತೆಯಿಂದ ಕೂಡಿರಬೇಕಾಗುತ್ತದೆ.

ಮಾನವತಾ ಪ್ರೇಮಿಗಳೇ,

ಹತ್ತು ಹನ್ನೊಂದನೇ ಶತಮಾನದಲ್ಲಿ ಐರೋಪ್ಯ ರಾಷ್ಟ್ರವೊಂದರಲ್ಲಿ ಒಂದು ಜಾನಪದ ಕಥೆ ಪ್ರಚಲಿತದಲ್ಲಿ ಇತ್ತಂತೆ. ಆ ಕತೆಯಲ್ಲಿ ಬರುವ ಗಿಳಿಯೊಂದು ತಾನು ನೋಡಿದ ಭೂಸ್ವರ್ಗದ ಬಗ್ಗೆ ವರ್ಣಿಸುತ್ತದೆ. ವರ್ಣನೆ ಹೇಗಿತ್ತೆಂದರೆ; ದೇವಲೋಕದಲ್ಲಿರುವ ಸ್ವರ್ಗದಂತಹ ಪ್ರದೇಶವೊಂದು ಭೂಮಿಯಲ್ಲಿ ಒಂದು ಕಡೆ ಇದೆ. ಆ ಭೂಮಿಯ ಸ್ವರ್ಗದಲ್ಲಿ ಹಗಲೆ ಸೂರ್ಯ ಪ್ರಜ್ವಲಿಸುತ್ತಾ ದಿನ ಪೂರ್ತಿ ಬೆಳಕು ಹರಿಸುತ್ತಿರುತ್ತಾನೆ. ಕಾಲಕಾಲಕ್ಕೆ ಮಳೆ, ಸಮೃದ್ಧವಾದ ಬೆಳೆ, ಬೆಚ್ಚಗಿನ ವಾತಾವರಣ ವಿಶಾಲವಾದ ಹಸಿರು, ಹುಲ್ಲಿನ ಬಯಲು, ಆಕಾಶದೆತ್ತರದ ಮರಗಳು, ಹಸಿರು ಉಕ್ಕಿಸುವ ನಿತ್ಯ ಹರಿದ್ವರ್ಣದ ಕಾಡು, ಆಕಾಶಕ್ಕೂ ಭೂಮಿ ಒಂದು ಮಾಡುವ ಪರ್ವತಗಳು, ಸುಂದರ ಗಿರಿ-ವನಗಳು ಪರ್ವತಗಳ ನೆತ್ತಿಯಿಂದ ನಿರಂತರ ಹರಿಯುವ ಜಲಪಾತ, ಬೆಳ್ಳಿಯ ಬೆಟ್ಟ, ಹಾಲಿನ ಹೊಳೆ, ಜೇನಿನ ಮಳೆ… ಅಲ್ಲಿ ಹಸಿವಿಲ್ಲ, ಭಯವಿಲ್ಲ, ಸಿಹಿನೀರಿನ ಬುಗ್ಗೆಗಳು… ಮರಗಳೆಲ್ಲವೂ ಶ್ರೀಗಂಧ, ಸದಾ ಹೂ-ಹಣ್ಣುಗಳಿದ್ದ ಮೇಳೈಸುವ ಗಿಡ-ಗುಂಟೆಗಳು… ಸಸ್ಯಗಳೆಲ್ಲವೂ ಔಷಧಿಯುಕ್ತ… ಪ್ರಾಣಿ-ಪಕ್ಷಿ ಮನುಷ್ಯರೆಲ್ಲರ ಸೌಹಾರ್ದ ಒಡನಾಟ… ಶತೃಗಳ ಭಯವಿಲ್ಲದ ಸ್ವಚ್ಛಂದ ಓಡಾಟ, ತೂಗುವ ತೆನೆಗಳು… ಹೂಬಿರಿದ ಮೊಗ್ಗುಗಳು… ಬಣ್ಣ ಬಣ್ಣದ ಜಲಚರಗಳು.. ಹೀಗೆ ಎಲ್ಲವೂ ಸಮೃದ್ಧವಾಗಿರುವ ಸುಖ-ಶಾಂತಿಯ ನೆಮ್ಮದಿಯ ಪ್ರದೇಶ ಏಳು ಸಾಗರವ ದಾಟಿ ಹೋದರೆ ಭೂಮಿಯ ಈ ಸ್ವರ್ಗವನ್ನು ತಲುಪಬಹುದು…
ಈ ಕತೆ ವರ್ಣನೆಯೊಂದಿಗೆ ಹೀಗೆ ಸಾಗುತ್ತದೆ. ಇದು ಕತೆ, ಆದರೆ ಇದನ್ನು ಓದಿದಾಗಲೆ ನನಗೆ ನಮ್ಮ ಮಲೆನಾಡನ್ನೇ ಈ ಕತೆಯಲ್ಲಿ ಕಟ್ಟಿಕೊಡಲಾಗಿತ್ತೇನೋ ಅನಿಸುತ್ತದೆ.

ಇಂತಹ ಮಲೆನಾಡಿಗೆ ಸಾಂಬಾರ ಪದಾರ್ಥಗಳ ಸುವಾಸನೆ ಹುಡುಕಿಕೊಂಡು 15ನೇ ಶತಮಾನದಲ್ಲಿ ಪಾಶ್ಚ್ಯಾತ್ಯರು ಬಂದು ಇನ್ನೂರು ವರ್ಷ ನಮ್ಮನಾಳಿದ್ದು ಎಲ್ಲರಿಗೂ ಗೊತ್ತಿದೆ. ಬ್ರಿಟೀಷರ ಆಳ್ವಿಕೆಯಲ್ಲಿ ಮಲೆನಾಡಿನ ಕಾಡೆಲ್ಲಾ ‘ಫಾರೆಸ್ಟ’ ಆಯಿತು. ಅವರು ಕಾಡಿನ ಲೂಟಿಗಾಗಿ ರೈಲು, ಲಾರಿಗಳನ್ನು ಓಡಿಸಿದರು. ದಿವಂಗತ ತ್ಯಾನಂದೂರು ಪುಟ್ಟಣ್ಣಯ್ಯ ‘ನಾ ಕಂಡ ಮಲೆನಾಡು’ ಕೃತಿಯಲ್ಲಿ ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿ ದ್ದಾರೆ. ಕಷಾಯ ಸಂಸ್ಕೃತಿಯ ಮಲೆನಾಡಿಗೆ ‘ಕಾಫಿ ಸಂಸ್ಕೃತಿ’ ತಂದ ಬ್ರಿಟೀಷರು ಕಾಫಿ-ಟೀ ಎಸ್ಟೇಟ್‌ಗಳಿಗಾಗಿ ಗುಡ್ಡ ಗುಡ್ಡಗಳನ್ನೇ ಬೋಳಿಸಿದರು. ಒಂದು ಅಂದಾಜಿನ ಪ್ರಕಾರ ಈ ಭೂಮಿಯಲ್ಲಿ ಕಾಡು ಸೃಷ್ಟಿಯಾದನಂತರ ಬ್ರಿಟೀಷರು ಭಾರತಕ್ಕೆ ಬರುವವರೆಗೆ ಎಷ್ಟು ಕಾಡು ನಾಶವಾಗಿತ್ತೋ ಅಷ್ಟು ಕಾಡನ್ನು ಬ್ರಿಟೀಷರು ಭಾರತಕ್ಕೆ ಬಂದ ನಂತರ ಎರಡು ಶತಮಾನಗಳಲ್ಲಿ ನಾಶ ಮಾಡಿದ್ದರು.

ತಮಗೆ ಬೇಕಾದಂತೆ ಕಾಡನ್ನು ನಾಶ ಮಾಡಿದ ಬ್ರಿಟಿಷರು ತಮ್ಮ ‘ಶಿಕಾರಿ’ ಹುಚ್ಚಿಗಾಗಿ ಕಾಡನ್ನು ‘ಮೀಸಲು ಅರಣ್ಯ’ಗಳೆಂದು ಘೋಷಿಸಿದರು. ‘ಕಾನ್ ದೈವ’ (ಕಾಡನ್ನೇ ದೇವರೆಂದುಕೊಂಡು) ಎಂದು ಕಾಡನ್ನು ಪೂಜಿಸುತ್ತಿದ್ದವರ ನಂಬಿಕೆಗಳನ್ನು ಬಡುಮೇಲು ಮಾಡಿದರು. ಬ್ರಿಟೀಷರು ಹೇಳಿದರೂ ಕಾಡು ಕಡಿಯದ ‘ಗೌಡ್ಲು’ಗಳು, ಹಾಡ್ಯ, ದರಖಾಸ್ತು ಎಂದು ಹೇಳಿಕೊಂಡು ಕಾಡು ಬೆಳೆಸಿಕೊಂಡೇ ಬಂದ ನಮ್ಮ ರೈತ ವರ್ಗ ಈ ನಮ್ಮ ಕಾಡಿನ ನಿಜವಾದ ವಾರಸುದಾರರು.

ಬ್ರಿಟೀಷರು ಕಾಡನ್ನು ಎಷ್ಟೇ ದೋಚಿದ್ದರೂ ಕಾಡಿನ ಜನರನ್ನು ಮಾತ್ರ ಒಕ್ಕಲೆಬ್ಬಿಸಿರಲಿಲ್ಲ! ಆದರೆ ಈಗ ಪರಿಸರದ ಹೆಸರಿನಲ್ಲಿ ಅರಣ್ಯದೊಂದಿಗೆ ಪರಿಸರ ಸ್ನೇಹಿಯಾಗಿ ಬದುಕುವ ಅರಣ್ಯ ನಿವಾಸಿಗಳನ್ನೆ ಹೊರ ಹಾಕುವ ಪರಿಸರ ಸಾಮ್ರಾಜ್ಯಶಾಹಿ ದಾಳಿ ನಡೆಯುತ್ತಿದೆ. ಇದರ ವಿರುದ್ಧ ಕಳೆದ ಎರಡು ದಶಕಗಳಿಂದ ಪರಿಸರ ಹೋರಾಟಗಾರನಾಗಿ ದನಿ ಎತ್ತಿ ದ್ದೇನೆ. ಈ ನಮ್ಮ ಮಲೆನಾಡು, ಇಲ್ಲಿಯ ಪರಿಸರ ನಮ್ಮದು, ಇದನ್ನು ನಮ್ಮದಾಗಿಯೇ ಉಳಿಸಿಕೊಳ್ಳಬೇಕಾಗಿದೆ. ಇದಕ್ಕಾಗಿ ಹೊರಗಿನವರು ಪರಿಸರ ಸಂರ ಕ್ಷಣೆಯ ಹೆಸರಿನಲ್ಲಿ, ನಮ್ಮ ಕಷ್ಟ-ಸುಖಗಳನ್ನು ಕೇಳದೆ, ವಿಶ್ವಾಸಕ್ಕೆ ತೆಗೆದುಕೊಳ್ಳದೇ ನೀಡಿದ ಕಸ್ತೂರಿ ರಂಗನ್ ವರದಿ, ಗಾಡ್ಗೀಳ್ ವರದಿಯನ್ನು ತಿರಸ್ಕರಿಸಬೇಕೆಂದು ನಾನು ಆಗ್ರಹಿಸುತ್ತೇನೆ.

ಹೀಗೆ ಹೇಳುವಾಗ ನನಗೆ ನೆನಪಾಗುವುದು 2019ರ ನವೆಂಬರ್ 16ರಂದು ನಮ್ಮ ಜಿಲ್ಲೆಯಲ್ಲಿರುವ ವಿದೇಶಿ ಪರಿಸರ ಸಂಘಟನೆಯೊಂದು ಹದಿನಾಲ್ಕು ರಾಜ್ಯಗಳ ಇಪ್ಪತ್ತೊಂದು ಅರಣ್ಯ ಸಂರ ಕ್ಷಣಾಧಿಕಾರಿಗಳಿಗೆ ಕಾಡಿನೊಳಗೆ ಬದುಕುವ ಜನರನ್ನು ಹೊರಗೆ ಹಾಕುವುದು ಹೇಗೆಂದು ತರಬೇತಿ ನೀಡಿದ ವಿಷಯ. ಈ ಸಂದರ್ಭದಲ್ಲಿ ಜನರ ಬಳಕೆಯಲ್ಲಿದ್ದ ಒಂದು ಲಕ್ಷ ೩೮ ಸಾವಿರ ಎಕರೆ ಕಂದಾಯ ಭೂಮಿಯನ್ನು ರಾತ್ರೋ ರಾತ್ರಿ ಅರಣ್ಯ ಇಲಾಖೆಗೆ ಒಪ್ಪಿಸಿದ ಆಗಿನ ಜಿಧಿಕಾರಿಗಳಿಗೆ ಸನ್ಮಾನವನ್ನೂ ಮಾಡಲಾಗಿದೆಯಂತೆ. ಇವರೆ ಮಲೆನಾಡಿ ಮೂಲ ನಿವಾಸಿಗಳಾದ ನಮ್ಮನ್ನು ಏನೆಂದು ತಿಳಿದುಕೊಂಡಿ ದ್ದಾರೆ ಎಂಬುದೇ ನನಗೆ ಅರ್ಥವಾಗುತ್ತಿಲ್ಲ. ಅರಣ್ಯ ಸಂರ ಕ್ಷಣೆಯ ಹೆಸರಿನಲ್ಲಿ ಎಲ್ಲರನ್ನೂ ಒಕ್ಕಲೆಬ್ಬಿಸುವ ಹುನ್ನಾರ ನಡೆದಿದೆಯೇ?

ನಾವು ಗಿರಿಜನರನ್ನು ಒಕ್ಕಲೆಬ್ಬಿಸುವುದು ಸೇರಿದಂತೆ ಮುಖ್ಯವಾಗಿ ನಾಲ್ಕು ಕಾರಣಗಳನ್ನು ಇಟ್ಟುಕೊಂಡು ಕುದುರೆ ಮುಖ ರಾಷ್ಟ್ರೀಯ ಉದ್ಯಾನಕ್ಕೆ ವಿರೋಧ ವ್ಯಕ್ತಪಡಿಸಿ ದ್ದವು. ಆದರೆ ಕರ್ನಾಟಕದಲ್ಲಿರುವ ಕೇವಲ ಶೇ.36 ಸಿಂಗಳಿಕ ಮಂಗಗಳು ‘ಭಗವತಿ’ ಅರಣ್ಯದಲ್ಲಿ ಮಾತ್ರ ಇವೆ ಎಂದು ಸುಳ್ಳು ವರದಿ ಕೊಟ್ಟು ಈ ಯೋಜನೆ ಜಾರಿಗೆ ತರಲಾಯಿತು.

ಇಂದು 10-12 ಸಾವಿರ ಜನರ ಬದುಕನ್ನು ಕಿತ್ತುಕೊಳ್ಳಲಾಗಿದೆ. ಕುದುರೆ ಮುಖ ರಾಷ್ಟ್ರೀಯ ಉದ್ಯಾನದೊಳಗೆ ಸಿಕ್ಕಿಹಾಕಿಕೊಂಡವರಿಗೆ ನೆಮ್ಮದಿಯಿಂದ ಬದುಕಲು ಬಿಡುತ್ತಿಲ್ಲ. ಕಾಡಿನೊಂದಿಗೆ ಬೆರೆತು ಬದುಕುತ್ತಿರುವ ಅವರಿಗೆ ಅಲ್ಲಿಯೇ ಬದುಕಲು ಬಿಡಿ, ಇಲ್ಲವೇ ಆಸುಪಾಸಿನಲ್ಲಿ ಪುನರ್ವಸತಿ ಯೋಜನೆಯಂತೆ ಬದುಕು ರೂಪಿಸಿಕೊಡಿ ಎಂದು ಆಗ್ರಹಿಸುತ್ತೇನೆ.

ನಮ್ಮ ಮಲೆನಾಡಿನಲ್ಲಿ ಕಳೆದ ಒಂದು ಶತಮಾನದಲ್ಲಿ ಎಷ್ಟು ಕಾಡು ನಾಶವಾಗಿದೆ, ಇದು ಮಳೆಯ ಮೇಲೆ ಯಾವೆ ಪರಿಣಾಮ ಬೀರಿದೆ ಎಂಬುದನ್ನು ನಾನು ದಾಖಲೆ ಸಹಿತ ವಿವರಿಸವೆ. ಆದರೆ ಎಲ್ಲದಕ್ಕೂ ಸ್ಥಳಿಯರೇ ಕಾರಣ ಎಂದು ಒಪ್ಪಲಾರೆ. ಈ ರೀತಿಯ ಆರೋಪ ಮಾಡುತ್ತಾ ಇಲ್ಲಿಯ ನಿವಾಸಿಗಳಿಗೆ ಅಗತ್ಯ ಮೂಲಸೌಕರ್ಯ ಒದಗಿಸದೇ ಇರುವುದು ಘೋರ ಅನ್ಯಾಯ. ಈ ವಿದೇಶಿ ಪರಿಸರ ವಾದಿಗಳ ಉಪಟಳ ಎಷ್ಟಿದೆಯೆಂದರೆ ಸೊಪುರ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯನ್ನು ಅಗತ್ಯ ಇರುವಲ್ಲಿ ಅಗಲ ಮಾಡಲೂ ಬಿಡುತ್ತಿಲ್ಲ. ಈ ಭಾಗದ ಜನತೆ ಆರೋಗ್ಯ, ವ್ಯವಹಾರಗಳಿಗೆ ಮಂಗಳೂರಿಗೆ ಹೋಗಬೇಕಾದರೆ ಇರುವ ಈ ಹೆದ್ದಾರಿಯಲ್ಲಿ ಬರುವ ಕೆರೆಕಟ್ಟೆ ರಸ್ತೆ, ಈ ರಸ್ತೆಯ ಅಕ್ಕಪಕ್ಕ ನಾಲ್ಕು ಅಡಿ ಮಣ್ಣು ಹಾಕಿ ಅಗಲ ಮಾಡಲು ಪರಿಸರ ಕಾಯ್ದೆಯನ್ನು ಬಳಸಿಕೊಂಡು ಅಡ್ಡಿಪಡಿಸುತ್ತಾರೆ ಅಂದರೆ ಮಲೆನಾಡಿಗರ ಪರಿಸ್ಥಿತಿಯ ಬಗ್ಗೆ ಎಲ್ಲರೂ ಯೋಚಿಸಬೇಕು. ವರ್ಷದಲ್ಲಿ ಈ ಹೆದ್ದಾರಿಯ 21 ಕಿ.ಮೀ. ವ್ಯಾಪ್ತಿಯಲ್ಲಿ ಹತ್ತು- ಇಪ್ಪತ್ತು ಅಪಘಾತಗಳಾಗಿ ಅಮಾಯಕರು ಅಸುನೀಗುತ್ತಿ ದ್ದಾರೆ. ಈ ಬಗ್ಗೆ ಜನ ಎಷ್ಟೇ ಹೋರಾಟ ಮಾಡಿದರೂ ಪ್ರಯೋಜನವಿಲ್ಲದಂತಾಗಿದೆ. ಅಗತ್ಯ ರಸ್ತೆ ಅಗಲೀಕರಣಕ್ಕೆ ವಿರೋಧ ವ್ಯಕ್ತಪಡಿಸುವವರು ಶೃಂಗೇರಿ -ಕೊಪ್ಪ ಜನರಿಗೆ 150 ಕಿ.ಮೀ. ಬಳಸಿ ಚಾರ್ಮುಡಿ ಮೂಲಕ ಮಂಗಳೂರಿಗೆ ತೆರಳಲು ಮಾರ್ಗವಿದೆ ಎಂದು ದಾರಿತಪ್ಪಿಸುತ್ತಿರುವುದು ಅಮಾನವೀಯವಲ್ಲವೇ? ಇದನ್ನು ಯಾರಾದರೂ ಪರಿಸರವಾದವೆಂದರೆ ಈ ವಾದ ನನ್ನದಂತೂ ಅಲ್ಲ.

ಆತ್ಮೀಯ ಬಂಧುಗಳೇ,

ಅರಣ್ಯ ಯೋಜನೆಗಳಿಂದ ಮಲೆನಾಡಿಗರು ಸಂಕಷ್ಟಕ್ಕೆ ಸಿಲುಕಿರುವ ಹೊತ್ತಿನಲ್ಲಿಯೇ ಇಲ್ಲಿಯ ಕೃಷಿ ಕೂಡ ಬಹುದೊಡ್ಡ ಬಿಕ್ಕಟ್ಟನ್ನು ಎದುರಿಸುತ್ತಿದೆ. ಈ ಸಂಕಷ್ಟವನ್ನು ಹೇಗೆ ನಿಭಾಯಿಸಿಕೊಳ್ಳುತ್ತಾರೆ ಎಂಬುದೇ ನನಗಿರುವ ಆತಂಕವಾಗಿದೆ.

ಮಲೆನಾಡೆಂದರೆ ಅಡಿಕೆ- ಅಡಿಕೆಯ ಹೊರತಾಗಿ ಮಲೆನಾಡನ್ನು ಕಲ್ಪಿಸಿಕೊಳ್ಳುವುದು ಕಷ್ಟ. ಇಂತಹ ಅಡಿಕೆಗೆ ಮಾರಕ ರೋಗವೊಂದು ತಗುಲಿ ಸುಮಾರು ನೂರು ವರ್ಷಗಳಾಗುತ್ತಿವೆ. ಇನ್ನು ಕೆಲವೇ ವರ್ಷದಲ್ಲಿ ಮಲೆನಾಡಿನಲ್ಲಿ ಅಡಿಕೆ ತೋಟ ಸಂಪೂರ್ಣ ನೆಲಸಮವಾಗುವ ಭೀತಿಯಲ್ಲಿದೆ. ಹಾಗಿದ್ದೂ ಇದರ ಸಂಶೋಧನೆಗೆ ಕೋಟಿ ಕೊಟ್ಟು ಸಂಶೋಧನಾ ಕೇಂದ್ರ ತೆರೆದ ಸರ್ಕಾರ ಇಲ್ಲಿಗೆ ವಿeನಿಗಳನ್ನೂ ನೇಮಿಸಿಲ್ಲ, ಅವರಿಗೆ ಬೇಕಾದ ಸಲಕರಣೆಗಳನ್ನೂ ಕೊಟ್ಟಿಲ್ಲ.

ನಾನು ಈ ಸಮ್ಮೇಳನದ ಮೂಲಕ ಒತ್ತಾಯಿಸುವುದೇನೆಂದರೆ ಮಲೆನಾಡಿನಿಂದ ಅಡಿಕೆ ಮಾಯವಾಗುವ ಮುಂಚೆ ಈ ರೋಗಕ್ಕೊಂದು ಪರಿಹಾರ ಕಂಡು ಹಿಡಿಯಲೇಬೇಕು. ಮಲೆನಾಡಿಗೆ ಅಡಿಕೆಯಂತೆ ಒಪ್ಪುವ ಇನ್ನೊಂದು ಬೆಳೆ ಸದ್ಯಕ್ಕಂತೂ ಇಲ್ಲ. ಮಲೆನಾಡಿನ ಸಂಸ್ಕೃತಿ ಅಡಿಕೆಯೊಂದಿಗೆ ಬೆಸೆದುಕೊಂಡಿದೆ.

ಇನ್ನು ಅಡಿಕೆಗೆ ಮಾರುಕಟ್ಟೆಯ ಸಮಸ್ಯೆಯೂ ಇದೆ. ಈಗಾಗಲೇ ಗುಟ್ಕಾ ಇದರ ಮಾನ ತೆಗೆದಿದೆ. ಈಗ ಅಡಿಕೆಯನ್ನು ಹಾನಿಕಾರಕ ಎಂದು ವ್ಯವಸ್ಥಿತವಾಗಿ ಪ್ರಚಾರ ಮಾಡಿ, ಅದನ್ನು ನಿಷೇಧಿಸುವ ಹುನ್ನಾರ ನಡೆದಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆದಿರುವ ಈ ಬೆಳವಣಿಗೆಯನ್ನು ಎದುರಿಸಲು ನಮ್ಮ ಸರ್ಕಾರಗಳು ಸಿದ್ಧತೆಯೇ ನಡೆಸಿಲ್ಲ. ವಿಶ್ಚ ಆರೋಗ್ಯ ಸಂಸ್ಥೆ (ಡಬ್ಲುಎಚ್‌ಒ)ಯ ಅಂಗ ಸಂಸ್ಥೆಯಾದ ಐಎಆರ್‌ಸಿ (ಇಂಟರ್ ನ್ಯಾಷನಲ್ ಏಜೆನ್ಸಿ ಫಾರ್ ಕ್ಯಾನ್ಸರ್ ರಿಸರ್ಚ್) ನೀಡಿರುವ ವರದಿ ಅಡಿಕೆಗೆ ಮರಣಶಾಸನವಾಗಿ ಪರಿಣಮಿಸಿದೆ. ಇದನ್ನು ಎದುರಿಸಲು ಸೂಕ್ತ ಸಂಶೋಧನೆಗಳು ನಡೆಯಲೇಬೇಕು ಎಂದು ಎಲ್ಲ ಅಡಿಕೆ ಬೆಳೆಗಾರರ ಪರವಾಗಿ ನಾನು ಈ ಸಮ್ಮೇಳದನದ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತೇನೆ.

ಸಾಮಾನ್ಯವಾಗಿ ಸಾಹಿತ್ಯ ಸಮ್ಮೇಳನದಲ್ಲಿ ನಾವು ಭಾಷೆಯ ಬಗ್ಗೆ ಚರ್ಚಿಸುತ್ತೇವೆ. ಭಾಷೆ ಉದ್ಯೋಗ, ಆಹಾರ, ಉತ್ಪನ್ನಗಳನ್ನು ಅವಲಂಬಿಸಿರುತ್ತದೆ. ನಮ್ಮ ಮಲೆನಾಡಿನ ಪ್ರಮುಖ ಬೆಳೆಯಾಗಿದ್ದ ಭತ್ತದ ಕೃಷಿ ಕಣ್ಮರೆಯಾಗುತ್ತಿದೆ. ಭತ್ತ ಬೆಳೆಯುತ್ತಿದ್ದ ಪ್ರದೇಶ ಶೇ.80 ರಷ್ಟು ಕಡಿಮೆಯಾಗಿದೆ ಎಂದರೆ ಪರಿಸ್ಥಿತಿಯ ಗಂಭೀರತೆ ನಿಮಗೆ ಅರ್ಥವಾಗಬಹುದು. ಇದರೊಂದಿಗಿನ ಉಪ ಕಸುಬುಗಳೂ ನಾಶವಾಗಿವೆ.

ಇದಕ್ಕೆ ಹಲವಾರು ಕಾರಣಗಳಿರಬಹುದು. ಆದರೆ ಈ ಕೃಷಿಯೊಂದಿಗೆ ಬಳಕೆಯಾಗುತ್ತಿದ್ದ ಭಾಷೆ, ಆಚರಣೆ, ಸಂಸ್ಕೃತಿಗಳೂ ಮಲೆನಾಡಿನಿಂದ ದೂರವಾಗುತ್ತಿರುವುದನ್ನು ನೋಡಿದಾಗ ಸಂಕಟವಾಗುತ್ತದೆ. ಇದೇ ಪರಿಸ್ಥಿತಿ ಮುಂದೆ ಅಡಿಕೆಗೂ ಬಂದರೆ, ಮಲೆನಾಡಿನ ಸಂಸ್ಕೃತಿಯೇ ನಾಶವಾದಂತೆ, ಅದರೊಂದಿಗೆ ಕನ್ನಡ ಭಾಷೆಯ ಸಾವಿರಾರು ಪದಗಳು, ನೂರಾರು ನುಡಿಗಟ್ಟುಗಳು ಇತಿಹಾಸದ ಪುಟ ಸೇರುತ್ತವೆ. ಹೀಗಾಗಿ ಮಲೆನಾಡಿನಲ್ಲಿ ನಡೆಯುತ್ತಿರುವ ಈ ಸಾಹಿತ್ಯ ಸಮ್ಮೇಳನದಲ್ಲಿ ಈ ಎಲ್ಲ ವಿಷಯಗಳ ಕುರಿತು ಗಂಭೀರ ಚರ್ಚೆಗಳಾಗಬೇಕೆಂದು ನಾನು ಆಶಿಸುತ್ತೇನೆ.

ಬಂಧುಗಳೇ

ಮಾನವತಾ ವಾದಿಗಳನ್ನು ಆತಂಕಕ್ಕೀಡುಮಾಡುವ ಘಟನೆಗಳು ಇಂದು ಮಲೆನಾಡಿನಲ್ಲಿ ಮಾತ್ರವಲ್ಲ ಇಡೀ ದೇಶದಲ್ಲಿ ಪ್ರತಿದಿನವೂ ನಡೆಯುತ್ತಲೇ ಇದೆ. ಇದೆಲ್ಲದಕ್ಕೆ ನಾವು ಹೆದರಬೇಕಾಗಿಲ್ಲ. ಕುವೆಂಪು ಅವರೇ ‘ರೈತನ ದೃಷ್ಟಿ’ ಕವನದಲ್ಲಿ ಬಡ ರೈತ ಸಾಮ್ರಾಜ್ಯಶಾಹಿಯನ್ನು ಹೇಗೆ ವಿರೋಧಿಸುತ್ತಾನೆ ಎಂಬುದನ್ನು ಕಟ್ಟಿಕೊಟ್ಟಿ ದ್ದಾರೆ. ಆ ಮೂಲಕ ನಮಗೂ ಬೆಳಕಿನ ದಾರಿ ತೋರಿಸಿ ದ್ದಾರೆ. ನಾವೂ ನಮ್ಮದೇ ಆದ ರೀತಿಯಲ್ಲಿ ಕನಸಿನ ಮಲೆನಾಡನ್ನು ಕಟ್ಟಬೇಕಾಗಿದೆ. ಸೌಹಾರ್ದತೆಯ ಪರಂಪರೆಗೆ ಹೊಸ ಮೆರುಗು ನೀಡಬೇಕಾಗಿದೆ.

ಇಲ್ಲಿಯ ಬಹುತೇಕ ಸಮಸ್ಯೆಗಳಿಗೆ ಮುಖ್ಯ ಕಾರಣಗಳಲ್ಲಿ ಒಂದು, ನಾವು ಆಡಳಿತ ವ್ಯವಸ್ಥೆಯ ಮೇಲೆ ಪ್ರಭಾವ ಬೀರುವಲ್ಲಿ ವಿಫಲವಾಗುತ್ತಿರುವುದು ಎಂಬುದು ನನ್ನ ಅಭಿಪ್ರಾಯ. ಶಾಸನ ಸಭಾ ಕ್ಷೇತ್ರಗಳನ್ನು ಜನಸಂಖ್ಯಾಧಾರಿತ ಮಾಡಿರುವುದರಿಂದ ನಮ್ಮ ವಿರಳ ಜನಸಂಖ್ಯೆಯಿಂದಾಗಿ ಶಾಸನ ಸಭೆಗಳಲ್ಲಿ ನಮ್ಮ ಪ್ರತಿನಿಧಿಗಳ ಸಂಖ್ಯೆ ಕಡಿಮೆಯಾಗಿದೆ. ಇಲ್ಲಿಯ ಸಮಸ್ಯೆಗಳು ವಿಧಾನಸಭೆಗಳಲ್ಲಿ ನಿರೀಕ್ಷೆಯಷ್ಟು ಪ್ರಸ್ತಾಪವಾಗುತ್ತಿಲ್ಲ.

ಓರ್ವ ಶಾಸಕರ ಕ್ಷೇತ್ರ ನೂರು ಕಿ.ಮೀ. ಇದ್ದರೆ ಆಕ್ಷೇತ್ರ ಯಾವ ರೀತಿ ಅಭಿವೃದ್ಧಿ ಕಾಣಬಹುದು? ಇದಕ್ಕೆ ಪರಿಹಾರವೆಂದರೆ ಭೌಗೋಳಿಕ ವಿಸ್ತೀರ್ಣದ ಆಧಾರದ ಮೇಲೆ ವಿಧಾನಸಭಾ ಕ್ಷೇತ್ರಗಳನ್ನು ಪುನರ್ ವಿಂಗಡಿಸಬೇಕಾಗಿದೆ. ಅದರ ಜತೆಗೆ ಮಲೆನಾಡಿನ ತಾಲೂಕುಗಳನ್ನು ಮಾತ್ರ ಸೇರಿಸಿ, ಜಿಗಳನ್ನು ಪುನರ್ ರೂಪಿಸಬೇಕಾಗಿದೆ. ಇದೆಲ್ಲದಕ್ಕಿಂತ ಮುಖ್ಯವಾಗಿ, ನಮ್ಮ ನೆಲ, ಜಲದ ಮೇಲೆ ನಮಗೇ ಹಕ್ಕು ಬೇಕಾಗಿದೆ. ಈಶಾನ್ಯ ರಾಜ್ಯಗಳಲ್ಲಿ ಇರುವಂತೆ ಮಲೆನಾಡನ್ನು ವಿಶೇಷ ಪ್ರದೇಶವೆಂದು ಘೋಷಿಸಿ, ಮಲೆನಾಡಿನ ಅಭಿವೃದ್ಧಿಗೆ ವಿಶೇಷ ಪ್ರಾಧಿಕಾರವನ್ನು ರಚಿಸಬೇಕು. ಎಲ್ಲೋ ಕುಳಿತು ರೂಪಿಸಿದ ಕಾನೂನುಗಳ ಜಾರಿಗೆ ತಡೆ ಇರಬೇಕು. ಮಲೆನಾಡಿನ ಸರ್ವತೋಮುಕ ಅಭಿವೃದ್ಧಿಯ ನಿಯಂತ್ರಣವನ್ನು ಪ್ರಾಧಿಕಾರಕ್ಕೆ ನೀಡಿ, ಅದಕ್ಕೆ ಸರ್ವಾಧಿಕಾರ ವಹಿಸಬೇಕೆಂದು ಸಮ್ಮೇಳನದ ಈ ವೇದಿಕೆಯಿಂದ ಆಗ್ರಹಿಸುತ್ತೇನೆ.

ಕೊನೆಯದಾಗಿ ಕುವೆಂಪು ಅವರ ಕವನದ ಮೂಲಕವೇ ನಾನು ನನ್ನ ಈ ಭಾಷಣವನ್ನು ಅಂತ್ಯಗೊಳಿಸುತ್ತೇನೆ.
ಸರ್ವಜನಾಂಗದ ಶಾಂತಿಯ ತೋಟ,
ರಸಿಕರ ಕಂಗಳ ಸೆಳೆಯುವ ನೋಟ!
ಎಲ್ಲರಿಗೂ ನಮಸ್ಕಾರ.

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here