ಚಿಕ್ಕಮಗಳೂರು ಸಾಹಿತ್ಯ ಸಮ್ಮೇಳನ ಮತ್ತು ಶೃಂಗೇರಿಯಲ್ಲಿ ತಾಲಿಬಾನಿಗಳು – ಬಿ.ಚಂದ್ರೇಗೌಡ

ಶೃಂಗೇರಿ ಸಾಹಿತ್ಯ ಸಮ್ಮೇಳನಕ್ಕಾದ ಗತಿ ಕೇಳಿದ ದೇವನೂರು ಮಹಾದೇವ `ಇನ್ನ ಇವರು ಏನು ಮಾಡಲೂ ಹೇಸುವುದಿಲ್ಲ ಎಂದಿದ್ದಾರೆ!’. ಎದುರಿಸಲು ತಯಾರಾಗಬೇಕಷ್ಟೆ

ಚಿಕ್ಕಮಗಳೂರು ಜಿಲ್ಲೆ ವಿಷಯದಲ್ಲಿ, ಕಾಲಜ್ಞಾನಿಯಂತೆ ತೇಜಸ್ವಿ ಹೇಳಿದ ಮಾತು ಗಾಢ ಚಿಂತನೆಯಿಂದ ಹೊರಬಂದ ಮಾತೆಂಬುದು ಈಗ ಅರಿವಾಗುತ್ತಿದೆ. “ಈ ಜಿಲ್ಲೆಗೆ ಏನಯ್ಯ ಶಾಪ, ಇಷ್ಟೊಂದು ಕಾಡುಗಳಿವೆ, ಮಳೆ ಇದೆ, ಬೆಳೆ ಇದೆ, ತಣ್ಣಗೆ ಜೀವನೋಪಾಯ ಸಾಗಿಸ್ತಾರೆ. ಆದರೆ ಯಾವುದೋ ಒಂದು ಭಯಾನಕ ಕೊರತೆಯಿದೆ ಇಲ್ಲಿ. ಈ ಜಿಲ್ಲೆಯಿಂದ ಕಳೆದ ಹಲವಾರು ಶತಮಾನಗಳಿಂದ ಒಬ್ಬನೇ ಒಬ್ಬ ಅಸಾಧಾರಣ ವ್ಯಕ್ತಿ ಹುಟ್ಟಿಲ್ಲ ಎಂದರೆ ಏನಯ್ಯ, ಇಂಥಾದ್ದೊಂದು ಸಾಂಸ್ಕೃತಿಕ ನಿಷ್ಕ್ರಿಯತೆ ಕೇವಲ ಆಕಸ್ಮಿಕ ಕಣಯ್ಯ” ಎಂದಿದ್ದರು. ಆದರೆ ತೇಜಸ್ವಿಯವರ ವಿಷಾದಕ್ಕೆ ಉತ್ತರವೆಂಬಂತೆ ಸಿಟಿ ರವಿ ಎಂಬ ನಾಯಕ ಉದ್ಭವಿಸಿದ್ದಾನೆ. ಇವನೆಂತಹ ನಾಯಕನೆಂದರೆ, ಕನ್ನಡ ಭಾಷೆಯ ಭವ್ಯ ಪರಂಪರೆಯ ಸಂಭ್ರಮವನ್ನೇ, ಪೊಲೀಸ್ ಶಕ್ತಿ ಬಳಸಿ ನಿಲ್ಲಿಸುತ್ತಾನೆ. ಅಷ್ಟೇ ಅಲ್ಲ, ಸಮ್ಮೇಳನ ನಡೆಯುವ ಜಾಗಕ್ಕೆ ಪೆಟ್ರೋಲ್ ಬಾಂಬ್ ಹಿಡಿದು ಭಜರಂಗಿಗಳು ಬರುತ್ತವೆ. ಅವುಗಳನ್ನು ಚಚ್ಚಿ ಓಡಿಸಬೇಕಾದ ಪೊಲೀಸರು, ಸಮ್ಮೇಳನ ನಡೆಯದಂತೆ ಘೋಷಣೆ ಕೂಗಲು ಅವಕಾಶ ಮಾಡಿಕೊಡುತ್ತಾರೆ. ಅಷ್ಟಕ್ಕೂ ಈ ಸಮ್ಮೇಳನ ನಡೆದದ್ದು ಜನರ ಹಣದಿಂದ. ಕನ್ನಡಿಗರು ತಮ್ಮ ಖರ್ಚಿನಲ್ಲಿ ತಾವೇ ಸಮಾರಂಭ ಮಾಡದಂತೆ ತಡೆಹಿಡಿಯಲಾಯ್ತು.

ಶುಕ್ರವಾರ 10ನೇ ತಾರೀಖು ಬೆಳಿಗ್ಗೆ ಶೃಂಗೇರಿಯಲ್ಲಿಳಿದಾಗ ಇಡೀ ಬಸ್ಟ್ಯಾಂಡಿನಲ್ಲಿ ಪೊಲೀಸರನ್ನ ಬಿಟ್ಟರೆ ಜನರ್ಯಾರು ಇರಲಿಲ್ಲ. 19ನೇ ಅಕ್ಟೋಬರ್ ಎರಡರಂದು ಇಲ್ಲಿ ನಡೆದ ಅಂತರ್ಜಾತಿ ವಿವಾಹಿತರ ಸಮ್ಮೇಳನಕ್ಕೆ ಬಂದಿದ್ದ ನಾನು, ಇವತ್ತು ಬಂದಿದ್ದರಿಂದ ಈ ಊರು ಇರುವುದೇ ಹೀಗೇನೊ ಎಂದುಕೊಂಡು ಹೊರಟರೆ, ಬಲವಂತದ ಬಂದ್‍ಗೆ ಒಳಗಾಗಿದ್ದ ಶೃಂಗೇರಿ ಒಂದು ರೀತಿ ಪ್ರಕ್ಷುಬ್ಧವಾಗಿ ಕಂಡಿತು. ಆಟೋ ನಿಲ್ಲಿಸಿ, ಆದಿಚುಂಚನಗಿರಿ ಸಮುದಾಯ ಭವನಕ್ಕೆ ಬರುತ್ತೀರಾ ಎಂದರೆ, “ಅಲ್ಲೊಂದು ರಗಳೆ ಮಾರಾಯ್ರೆ” ಎನ್ನುತ್ತ ಯಾರೂ ಬರಲಿಲ್ಲ. ಕೊನೆಗೆ ಒಂದು ಸಂಸಾರವೇ ತುಂಬಿದ್ದ ಆಟೋದೊಳಕ್ಕೆ ಗೋಗರೆದು ನುಗ್ಗಿ ಸಮಾರಂಭದ ಜಾಗಕ್ಕೆ ತಲುಪಿದೆ.

ಅಲ್ಲಿನ ವೇದಿಕೆ ನೋಡಿ ಸಮಾಧಾನವಾಯ್ತು. ಮಾಜಿ ಮಂತ್ರಿ ಕಿಮ್ಮನೆ ರತ್ನಾಕರ್, ಸ್ಥಳೀಯ ಶಾಸಕ ರಾಜೇಗೌಡ, ಕಡಿದಾಳು ಶಾಮಣ್ಣ, ಪ್ರಸನ್ನ, ಭೋಜೇಗೌಡ, ವೀರಭದ್ರಪ್ಪನನ್ನ ನೋಡಿ ಖುಷಿಯಾಯ್ತು. ಆದರೆ ಅಲ್ಲಿಗೂ ಬಂದ ಪೊಲೀಸರು “ಮೈಕ್ ತೆಗೆಯಿರಿ ಅದನ್ನ ಹಾಕಬೇಡಿ” ಎಂದು ತಾಕೀತು ಮಾಡಿದರು. ಆಗ ಕಿಮ್ಮನೆ ರತ್ನಾಕರ್ ನಾನು 35 ವರ್ಷದಿಂದ ವಕೀಲಿಕೆ ಮಾಡಿದ್ದೇನೆ, ನನಗೆ ಕಾನೂನಿನ ಅರಿವಿದೆ. ಇದು ಕನ್ನಡದ ಹಬ್ಬ, ಖಾಸಗಿ ಜಾಗದ ಆವರಣದಲ್ಲಿ ನಡೆಯುತ್ತಿದೆ. ಎಲ್ಲಿ ಮೈಕ್ ಹಾಕಬೇಕು-ಹಾಕಬಾರದೆಂಬ ಅರಿವಿದೆ. ಈ ಬಗ್ಗೆ ಪೊಲೀಸರು ಕೇಸ್ ಹಾಕುವುದಾದರೆ, ನನ್ನ ಮೇಲೆ ಹಾಕಲಿ. ಕೋರ್ಟಿನಲ್ಲಿ ನಾನು ಎದುರಿಸುತ್ತೇನೆ” ಎಂದರು. ಅದೇ ವೇಳೆಗೆ ಸಮ್ಮೇಳನದ ಹೊರಗೆ, ಪುರೋಹಿತಶಾಹಿ ಪಿಂಡಗಳು ಘೋಷಣೆ ಕೂಗುತ್ತಿದ್ದವು. ಆ ಘೋಷಣೆಗಿಂತಲೂ ವೇದಿಕೆಯಲ್ಲಿ ಅರ್ಥಪೂರ್ಣವಾಗಿ ಮಾತನಾಡುತ್ತಿದ್ದವರ ಮೈಕು ಪೊಲೀಸರಿಗೆ ತೊಂದರೆ ಕೊಟ್ಟಿತ್ತು!

ಈ ಸಮಯದಲ್ಲಿ ಕಿಮ್ಮನೆಯವರು “ಹೊರಗೆ ಘೋಷಣೆ ಕೂಗುವವರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ, ಸಹನೆ, ಶಾಂತಿ, ತಾಳ್ಮೆಯಿಂದ ಮಾತ್ರ ಎಲ್ಲವನ್ನು ಗೆಲ್ಲಬಹುದೆಂದು ಬುದ್ಧ, ಬಸವ, ಗಾಂಧೀಜಿಯವರನ್ನ ಉದಾಹರಿಸಿ, ಸರ್ವಾಧಿಕಾರಿ ಹಿಟ್ಲರ್‍ನಂತವರು ಬಹಳದಿನ ಇರುವುದಿಲ್ಲ” ಎಂದು ಹೇಳಿದ್ದರಿಂದ ಸಾಹಿತ್ಯದ ಸಭೆ ಶಾಂತವಾದರೂ ಹೊರಗಿನಿಂದ ಕರ್ಕಶವಾದ ಘೋಷಣೆ ಸಭಾಂಗಣದವರಿಗೆ ಕಿರಿಕಿರಿ ಮಾಡುತ್ತಿತ್ತು.

ಆಗ ದಿಗ್ಗನೆದ್ದ ವಿಧಾನಪರಿಷತ್ ಸದಸ್ಯರಾದ ಭೋಜೇಗೌಡರು “ರೀ ಪೊಲೀಸ್‍ನೋರೆ, ಕನ್ನಡ ಸಮ್ಮೇಳನಕ್ಕೆ ಧಿಕ್ಕಾರ ಹೇಳಿಕೊಂಡು ಗಲಾಟೆ ಮಾಡ್ತಾಯಿರೋರ ದೂರ ಕರಕೊಂಡೋಗಿ, ನಮಗೂ ತಾಕತ್ತಿದೆ, ಇಲ್ಲಿರೋರಿಗೂ ರಕ್ತ ಕುದಿಯುತ್ತೆ. ನಾಡು-ನುಡಿ ಸಮ್ಮೇಳನಕ್ಕೆ ಅಡ್ಡಿ ಮಾಡೋರು ದೇಶದ್ರೋಹಿಗಳು, ನಾಚಿಕೆ ಮಾನಮರಿಯಾದೆ ಇಲ್ಲದೋರು. ಈ ಕೃತ್ಯಕ್ಕೆ ಆರೆಸ್ಸೆಸ್ ಭಜರಂಗದಳದ ಕುಮ್ಮಕ್ಕಿದೆ. ಮಿಸ್ಟರ್ ಸಿ.ಟಿ.ರವಿ, ಈ ಸಮ್ಮೇಳನಕ್ಕೆ ಬಂದಿರೊ ಶಿಕ್ಷಕರಿಗೆ ಓಓಡಿ ರದ್ದು ಮಾಡಿದ್ದೀಯಲ್ಲಾ, ನಿನಿಗೆ ವಿದ್ಯಾ ಬುದ್ಧಿ ಕಲಿಸಿದೋರು ಶಿಕ್ಷಕರಲ್ಲವ. ಆ ಶಿಕ್ಷಕರಿಂದ್ಲೆ ಈ ಸಮಾಜಕ್ಕೆ ಸತ್ಪ್ರಜೆಗಳು ತಯಾರಾಗೋದು, ಐಎಎಸ್-ಐಪಿಎಸ್ ಮಾಡಿ ಅಧಿಕಾರಿಗಳಾಗದು. ಶಿಕ್ಷಕರಿಗೆ ತೊಂದ್ರೆ ಕೊಟ್ಟವುನ್ಯಾರೂ ಉದ್ದಾರಾಗಿಲ್ಲ. ಇಂತ ಕೆಟ್ಟ ಮನಸ್ಸು ಬಿಟ್ಟು ನಾಡಿನ ಉದ್ಧಾರಕ್ಕೆ ಕೆಲಸ ಮಾಡಿ” ಎಂದು ಅಬ್ಬರಿಸಿದರು.

ಆದರೆ ಪೊಲೀಸರು ಮೇಲಿನ ಒತ್ತಡದಿಂದ ಅಸಹಾಯಕರಾಗಿದ್ದರು. ಸಾಮಾನ್ಯವಾಗಿ ಪೊಲೀಸರು ಸಾಹಿತ್ಯ ಸಮ್ಮೇಳನ ಮತ್ತಲ್ಲಿನ ಊಟವನ್ನ ಇಷ್ಟಪಡುವಂತಹ ಜನ. ಬರೀ ಬೈಗುಳವನ್ನೇ ಕೇಳುವ ಅವರಿಗೆ, ಸಾಹಿತ್ಯದ ವೇದಿಕೆ ಮಾತು ಆಪ್ಯಾಯಮಾನವಾಗಿರುತ್ತವೆ. ಆದರೆ ಶೃಂಗೇರಿಯಲ್ಲವರು ಹಿಟ್ಲರನ ಆಜ್ಞಾಪಾಲಕರಾಗಿ ಅಸಹಾಯಕರಾಗಿದ್ದರು.

ಆ ನಂತರ ಡಯಾಸ್ ಬಿಟ್ಟು, ಕೈಗೆ ಮೈಕ್ ತೆಗೆದುಕೊಂಡ ಕುಂ.ವೀರಭದ್ರಪ್ಪ, ನಿಜಕ್ಕೂ ಶೃಂಗೇರಿ ಸಾಹಿತ್ಯ ಸಮ್ಮೇಳನ ಏನು ಹೇಳಬೇಕಾಗಿತ್ತೋ ಅದನ್ನೆಲ್ಲಾ ಜಾಡಿಸಿದರು. “ಈ ಸಾಹಿತ್ಯ ಸಮ್ಮೇಳನಕ್ಕೆ ಅಡ್ಡಿ ಮಾಡ್ತ ಯಾರೊ ಘೋಷಣೆ ಕೂಗ್ತಯಿದಾರೆ. ಪಾಪ ಅವುಕ್ಕೆ ಘೋಷಣೆ ಬಿಟ್ಟು ಇನ್ನೇನೂ ಬರಲ್ಲ. ಅದು ಯಾರೊ ಹೇಳಿಕೊಟ್ಟು ಕಳಿಸಿರೋದು. ಧಿಕ್ಕಾರ ಬಿಟ್ರೆ ಜೈ ಅಂತವೆ, ಜೈ ಸಾಕಾದ್ರೆ ಧಿಕ್ಕಾರ ಅಂತವೆ. ಅವು ಸುಮ್ಮಸುಮ್ಮನೆ ಉದ್ಭವಿಸಿದ ಆತ್ಮಗಳಲ್ಲ. ನೂರಾರು ವರ್ಷದ ಹಿಂದೆ ಸತ್ತಂತವರ ಪ್ರೇತಾತ್ಮಗಳವು. ಸಾವರ್ಕರು, ಗೋಳವಾಲ್ಕರ್ ಇಂತವರ ಪ್ರೇತಾತ್ಮಗಳು ಅಲಿತಾಯಿದ್ದೋ. ಈಗ ಯಾರ್ಯಾರದೋ ದೇಹ ಹೊಕ್ಕಿ ಕೂಗತಾಯಿವೆ. ಮುಖ್ಯವಾಗಿ ಭಜರಂಗಿಗಳ, ಆರೆಸ್ಸೆಸ್, ವಿಶ್ವ ಹಿಂದೂ ಪರಿಷತ್‍ಗಳ ದೇಹ ಹೊಕ್ಕಿವೆ. ಈ ಪೈಕಿ ಒಂದಾತ್ಮ ಸಿ.ಟಿ ರವಿ ದೇಹ ಹೊಕ್ಕಿದೆ. ಇನ್ನ ಶೋಭಾ ಕರಂದ್ಲಾಜೆ ದೇಹನ ಯಾವ ಆತ್ಮ ಹೊಕ್ಕಿದೆಯೇ ಇನ್ನೂ ಗೊತ್ತಾಗಿಲ್ಲ.

ಅಪರೂಪದ ಲೇಖಕ ಮತ್ತು ಹೋರಾಟಗಾರ ಕಲ್ಕುಳಿ ವಿಠಲ ಹೆಗಡೆಯವರನ್ನ ನಕ್ಸಲ ಅನ್ನುವುದಾದರೆ ಪಂಪ, ಕುಮಾರವ್ಯಾಸ, ರಾಘವಾಂಕ, ಬಸವಣ್ಣ, ಸುಮಾರು ಏಳುನೂರ ಮೂವತ್ತು ವಚನಕಾರರೆಲ್ಲಾ ನಕ್ಸಲರೆ. ಕುವೆಂಪು, ಲಂಕೇಶ್, ತೇಜಸ್ವಿ ಇವರೆಲ್ಲಾ ನಕ್ಸಲರೆ. ಇದು ಎಲ್ಲರ ದೇಶ, ಸರ್ವಜನಾಂಗದ ಶಾಂತಿಯ ತೋಟ. ಇಲ್ಲಿ ಧಿಕ್ಕಾರ ಕೂಗದರಿಂದ ಏನೂ ಪ್ರಯೋಜನವಿಲ್ಲ. ಇಂತಹ ಪ್ರತಿಭಟನೆಗಳಿಂದ್ಲೆ ಕನ್ನಡ ಸಾಹಿತ್ಯ ಬೆಳೆದಿರೋದು. ಬೀದಿ ಮೇಲಿನ ಸಾಹಿತಿಗಳೇ ಉಳಿದಿರೋದು, ಪರ್ವದಂತಹ ಕೃತಿ ಬರೆದೋರಲ್ಲ. ಕನ್ನಡ ಸಾಹಿತ್ಯವನ್ನ ಶ್ರೀಮಂತಗೊಳಿಸಿದವರು ಎಡಪಂಥೀಯರು. ಅವರೆಲ್ಲಾ ಗ್ರಾಮೀಣ ಪ್ರದೇಶದಿಂದ ಬಂದವರು. ಅಲ್ಲಿ ಭಾಷೆ ಇದೆ, ಜೀವನಾನುಭವ ಇದೆ. ಕೋಸಂಬರಿ ಪಾನಕದ ಸಾಹಿತಿಗಳಿಂದ ಯಾವ ಸಾಹಿತ್ಯನೂ ಸಮೃದ್ದವಾಗಿಲ್ಲ. ಈಚೆಗೆ ಪಾನಕ, ಕೋಸಂಬರಿ ಸಾಹಿತಿಗಳ ಹಾವಳಿ ಜಾಸ್ತಿಯಾಗಿದೆ. ಇವರೊಂಥರ ಜೋಕರ್‍ಗಳಿದ್ದಂಗೆ, ಎಲ್ಲಾ ಪಾರ್ಟಿಗೂ ಹೊಂದಿಕೊಳ್ತರೆ. ಇವರೆ ನಿಜವಾದ ಸಾಹಿತ್ಯದ ದೊಡ್ಡ ಶತ್ರುಗಳು. ಕಂಬಾರನ್ನ ನೋಡಿ, ಹೋಗಿ ಭೈರಪ್ಪನ ಕಾಲಿಗೆ ಬೀಳ್ತರೆ. ಇದಕ್ಕೂ ಮೊದ್ಲು ಪೇಜಾವರ ಸ್ವಾಮಿ ಕಾಲಿಗೆ ಬಿದ್ದಿದ್ರು. ಇಂತವರ ಮನಸ್ಸಿನಲ್ಲಿ ಯಾವುದೋ ಸ್ಥಾನಮಾನಗಳು ಕೆಲಸ ಮಾಡ್ತ ಇರ್ತವೆ ಪಾಪ.

ಆ ಮನುಬಳಿಗಾರ ಅನ್ನೊ ಮನುಷ್ಯ ಏನು ಕಡುದು ಕಟ್ಟೆ ಹಾಕಿದಾನೆ ಅಂತ ನಾಡೋಜ ಪ್ರಶಸ್ತಿ ಕೊಟ್ಟವುರೆ? ಕನ್ನಡ ಸಾಹಿತ್ಯ ಪರಿಷತ್, ಸ್ವಾಯತ್ತ ಸಂಸ್ಥೆ. ಸರ್ವಾನುಮತದಿಂದ ಆಯ್ಕೆಯಾದ ಸದರಿ ಅಧ್ಯಕ್ಷ ಸಮ್ಮೇಳನಕ್ಕೆ ಹಣ ಬಿಡುಗಡೆ ಮಾಡೋದು ಅವರ ಕರ್ತವ್ಯ. ಆದ್ರೂ ಮಂತ್ರಿ ಸಹಿ ಪಡಕೊಂಡು ಬಾ ಅಂತಾರೆ ಅಂದ್ರೆ, ಅವರ ಮನಸ್ಸಲ್ಲಿ ಏನೊ ಇದೆ. ಇದೊಂದು ನೀಚಾತಿ ನೀಚ ನಡವಳಿಕೆ. ಇದು ನಿಜಕ್ಕೂ ಕನ್ನಡಕ್ಕೆ ಬಗೆದ ದ್ರೋಹ. ಇದು ತಾಲಿಬಾನ್ ಸಂಸ್ಕøತಿ, ಇದನ್ನ ನಾವು ಪ್ರತಿಭಟಿಸಬೇಕು. ಕನ್ನಡ ಭಾಷೆ ಯಾವತ್ತೂ ಆತಂಕವನ್ನ ಎದುರಿಸಬಾರದು. ಇಲ್ಲಿ ಶೃಂಗೇರೀಲಿ ಅಂತಹ ಒಂದು ಸ್ಥಿತಿ ನಿರ್ಮಾಣ ಮಾಡಿದಾರೆ” ಎಂದು ಕೂಗಿ ಹೇಳಿದಾಗ ಪೊಲೀಸರಿಗೆ ಏನನ್ನಿಸಿತೊ ಏನೊ, ಪ್ರತಿಭಟನಾಕಾರರನ್ನ ಬಸ್ಸಿಗೆ ತುಂಬಿಕೊಂಡು ಹೊರಟರು.

ಆದರೇನು ಶೃಂಗೇರಿಯ ಪುರೋಹಿತ ಶಾಹಿಗಳು ಕಂಪ್ಯೂಟರ್ ಮುಂದೆ ಕುಳಿತು ಇಡೀ ಪ್ರತಿಭಟನಾಕಾರರಿಗೆ ಸಂದೇಶ ಕೊಡುತ್ತಿದ್ದರಲ್ಲದೆ, ಯಾವಾಗ ಏನು ಮಾಡಬೇಕೆಂಬ ನಿರ್ದೇಶನವನ್ನೂ ಕೊಡುತ್ತಿದ್ದರು. ಅದರಂತೆ ಪ್ರತಿಭಟನಾ ಕಾರರನ್ನ ತುಂಬಿಕೊಂಡು ತರೀಕೆರೆಗೆ ಹೋಗುತ್ತಿದ್ದ ಬಸ್ಸನ್ನ ಕೊಪ್ಪ ತಾಲ್ಲೂಕು ಕಚೇರಿ ಎದುರು ಬೈಕ್‍ಗಳಲ್ಲಿ ಬಂದ ಭಜರಂಗಿಗಳು ತಡೆದು ಬಿಡಿಸಿಕೊಂಡರು. ಇದಿಷ್ಟೇ ಅಲ್ಲದೆ ಕಂಪ್ಯೂಟರ್ ಮುಂದೆ ಕುಳಿತ ಪುರೋಹಿತಶಾಹಿಗಳು, ಸಂಜೆ ಏನು ಮಾಡಬೇಕು ಮರುದಿನದ ಸಮ್ಮೇಳನ ಹೇಗೆ ತಡೆಯಬೇಕೆಂಬ ಸಂದೇಶವನ್ನು ಶೃಂಗೇರಿಯಿಂದ ಮಂಗಳೂರವರೆಗೂ ರವಾನಿಸುತ್ತಿದ್ದರು. ಎಲ್ಲೋ ಅಗೋಚರ ಜಾಗದಲ್ಲಿ ಕುಳಿತ ಪುರೋಹಿತಶಾಹಿಗಳು, ಜಿಲ್ಲೆಯ ಒಕ್ಕಲಿಗ ಲಿಂಗಾಯತರ ಮತ್ತು ಕೆಳಜಾತಿಗಳ ಜುಟ್ಟುಹಿಡಿದು ಆಡಿಸುತ್ತಿದ್ದ ಆಟ ನೋಡಿದರೆ, ಈ ದೇಶ ಸರ್ವನಾಶದ ಅಂಚಿಗೆ ಬಂದು ತಲುಪುತ್ತಿದೆ ಅನ್ನಿಸಿತು.

ಕ್ರಮೇಣ ಡಾ. ರಾಜೇಂದ್ರ ಚೆನ್ನಿಯವರ ಮಾತುಗಳು ನಿಜವಾಗುತ್ತಾ ಹೊರಟವು, “ಅಭಿವ್ಯಕ್ತಿ ಸ್ವಾತಂತ್ರದ ಹಕ್ಕು ಕಸಿಯಲಾಗುತ್ತಿದೆ. ಯಾರೂ ತಮಗೆ ವಿರುದ್ಧವಾದ ಅಭಿಪ್ರಾಯ ಹೇಳಬಾರದೆಂಬ ಪ್ರತಿಭಟನೆ ನಡೆಯುತ್ತಿದೆ. ಇಂತದರ ನಡುವೆ ಇದೊಂದು ಸಮ್ಮೇಳನ ಐತಿಹಾಸಿಕವಾಗಲಿದೆ” ಎಂದರು. ಚೆನ್ನಿಯವರು ಹೇಳಿದಂತೆ ಇದೊಂದು ಐತಿಹಾಸಿಕ ಸಾಹಿತ್ಯ ಸಮ್ಮೇಳನವಾದರೂ, ಕನ್ನಡ ಸಾಹಿತ್ಯ ಪರಿಷತ್ ಇತಿಹಾಸದಲ್ಲೂ ಇದೊಂದು ಹೇಯ ಘಟನೆಯಾಗಿ ದಾಖಲಾಯ್ತು. ನಮ್ಮದೇ ಹಣ ಖರ್ಚುಮಾಡಿ ನಡೆಸುತ್ತಿದ್ದ ಸಮ್ಮೇಳನವಾದರೂ ವೈ.ವಿ.ಎಸ್ ದತ್ತ ಮಾತನಾಡುತ್ತಿರಬೇಕಾದರೆ, ಪೊಲೀಸರು ಸಭಾಂಗಣಕ್ಕೆ ಬಂದು “ಮೈಕ್ ನಿಲ್ಲಿಸಿ. ಕಾರ್ಯಕ್ರಮ ನಿಲ್ಲಿಸಿ. ಜಾಗ ಖಾಲಿ ಮಾಡಿ” ಎಂದು ತಾಕೀತು ಮಾಡತೊಡಗಿದರು. ಅವರ ಮುಖದಲ್ಲಿ ಕಠೋರವಾಗಿ ಕಾನೂನು ಜಾರಿ ಮಾಡುವ ಭಾವ ಇಲ್ಲದಿದ್ದರೂ ಸಾಹಿತ್ಯ ಸಮ್ಮೇಳನ ಮತ್ತು ಪುಂಡರ ನಡುವೆ ಸಿಕ್ಕಿಕೊಂಡಂತೆ ಒದ್ದಾಡುತ್ತಿದ್ದರು. ಈ ನಡುವೆ ಕಿಮ್ಮನೆ ರತ್ನಾಕರ್, ಮುಡುಬೂರು ರಾಜೇಂದ್ರ, ಶಾಸಕ ಟಿ.ಡಿ.ರಾಜೇಗೌಡ, ದತ್ತ ಇಂತಹ ದೊಡ್ಡ ನಾಯಕರು ಪ್ಯಾಸಿಸ್ಟ್ ಪ್ರಭುತ್ವದ ಎದುರು ಅಸಹಾಯಕರಂತೆ ಕಾಣಿಸಿದರು. “ನಿಮ್ಮ ಆಜ್ಞೆ ಮೀರಿ ನಾವು ಮೈಕ್ ಹಾಕಿದ್ದರೆ, ಆ ಬಗ್ಗೆ ಕೇಸು ಮಾಡಿ, ನಾವು ಕೋರ್ಟಿನಲ್ಲಿ ವಿಚಾರಣೆಗೊಳಪಡುತ್ತೇವೆ” ಎಂದರು. ಪೊಲೀಸರ ಪ್ರಕಾರ ಸಮ್ಮೇಳನಕ್ಕೆ ನುಗ್ಗಲು ಒಂದು ಗುಂಪಾಗಲೇ ಬಸ್ಟ್ಯಾಂಡಿನಲ್ಲಿ ರೆಡಿಯಾಗಿತ್ತು. ಅವರಿಲ್ಲಿ ಬರುವುದರೊಳಗೆ ಜಾಗ ಖಾಲಿ ಮಾಡಿ ಎಂಬುದು, ಪೊಲೀಸರ ವಿನಂತಿಯಾಗಿತ್ತು. ಇದು ಶೃಂಗೇರಿಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಒದಗಿ ಬಂದ ಗತಿ!

ಆದರೂ ಈ ಸಮ್ಮೇಳನದ ಹಿಂದೆ ಜನ ಇದ್ದರು. ಯಾವಾಗ ಮನುಬಳಿಗಾರ ಐದು ಲಕ್ಷ ಕೊಡಲಾಗುವುದಿಲ್ಲ ಎಂದು ಹೇಳಿದರೊ ಆಗಲೇ ಜನರು ತಮ್ಮ ಕೈಲಾದ ಸಹಾಯ ಮಾಡತೊಡಗಿದರು. ಖಾಂಡ್ಯದ ಯುವಕನೊಬ್ಬ ಒಂದು ಲಕ್ಷ ರೂಗಳಿಗೂ ಹೆಚ್ಚು ಹಣ ನೀಡಿದರೆ, ಕೂಲಿ ಮಾಡುವವರೂ ಕೂಡ ಕೈಲಾದ ಧನಸಹಾಯ ಮಾಡಿದರು. ಭಾಷಣದ ನಡುವೆಯೇ ವೈಎಸ್‍ವಿ ದತ್ತ, ತಮ್ಮ ದೇಣಿಗೆ ನೀಡಿದರು. ಇದಕ್ಕು ಮೊದಲು ದೂರದ ರಾಮನಗರದಿಂದ ಶ್ರೀನಿವಾಸ್ ಕರಿಯಪ್ಪ ಫೋನ್ ಮಾಡಿ, ನಾನು ಬಂದು ಐದು ಸಾವಿರ ಕೊಡುತ್ತೇನೆ ಎಂದರು. ಆದರೆ ನಾನು “ಬೇಡ, ಶೃಂಗೇರಿ ಸಮಸ್ಯೆ ರಾಮನಗರದಲ್ಲೇ ಸಂಭವಿಸುವಂತೆ ಕಾಣುತ್ತಿದೆ. ಅಲ್ಲಿಗೇ ಕೊಡಿ” ಎಂದೆ.

ಸಂಜೆಯಾಗುತ್ತಿದ್ದಂತೆ ಎದುರಾಳಿಗಳ ದಾಳಿಯ ಬಗ್ಗೆ ಭೀತಿ ಹುಟ್ಟಿಸಿದ ಪೊಲೀಸರ ವಿನಂತಿಯನ್ನ ಮನ್ನಿಸಿ ಮರುದಿನದ ಸಮ್ಮೇಳನ ನಿಲ್ಲಿಸಲು ಒಪ್ಪಿಕೊಂಡರು. ಏಕೆಂದರೆ ನಿರೀಕ್ಷೆಗೂ ಮೀರಿ ನಾಡಿನ ಮೂಲೆಮೂಲೆಯಿಂದ ಸಾಹಿತ್ಯದ ಬಂಧುಗಳು ಆಗಮಿಸಿದ್ದರು. ಅರ್ಥಪೂರ್ಣ ಗೋಷ್ಠಿಗಳೂ ನಡೆದಿದ್ದವು. ಎಲ್ಲರೂ ಹೇಳುವುದನ್ನ ಹೇಳಿಯಾಗಿತ್ತು. ಅಂತಹ ಒಂದು ಸಂದರ್ಭದಲ್ಲಿ ಪ್ಯಾಸಿಸ್ಟರ ಪ್ರೊಫೆಸರ್ ತರಹ ಇದ್ದ, ಚಿ.ಮೂ. ನಿಧನರಾದ ಸುದ್ದಿ ಬಂತು. ಮರುದಿನವನ್ನ ಅವರಿಗರ್ಪಿಸಿ ನಮಿಸಿದೆವು.

ಬೆಳಿಗ್ಗೆ ಎದ್ದುಹೋಗಿ ವೇದಿಕೆಯನ್ನ ನೋಡಿದರೆ ಮರಿಮಂಗಗಳ ಹಿಂಡು ವೇದಿಕೆಯನ್ನಲಂಕರಿಸಿದ ಚಿತ್ತಾರದ ವಸ್ತುಗಳನ್ನ ಕಿತ್ತು ಬಿಸಾಡುತ್ತಿದ್ದವು. ಅದನ್ನ ನೋಡಿ ಒಂದೆರಡು ಕಲ್ಲು ಬೀರಿದೆ. ಪರದೆ ಮರೆಗೆ ಮುಖ ಮರೆಸಿಕೊಂಡ ಅವು ನನ್ನ ನಿರ್ಗಮನಕ್ಕೆ ಕಾಯುವಂತಿದ್ದು ಮತ್ತೆ ದಾಂಧಲೆ ಮಾಡುತ್ತಿರುವಾಗ ನನಗೆ ಏನೋ ಹೊಳೆದಂತೆ, `ಅರೆ, ಕಲ್ಕುಳಿ ವಿಠಲ ಹೆಗಡೆ ಮಂಗನ ಬ್ಯಾಟೆ ಪುಸ್ತಕ ಬರೆದದ್ದು ಇವುಗಳಿಗೇಗೆ ಗೊತ್ತಾಯ್ತು’ ಎನ್ನಿಸಿತು. ನಂತರ ಈ ಸಮ್ಮೇಳನ ನಡೆಸಲೇಬೇಕೆಂದು ಧೈರ್ಯದಿಂದ ನಿಂತ ಕುಂದೂರು ಅಶೋಕ್ ಮತ್ತು ರವೀಶ್ ಬಸಪ್ಪರೊಡನೆ ಮಾತನಾಡಿ ಇಡೀ ಪ್ರಕರಣವನ್ನ ವಿರೋಧ ಪಕ್ಷದ ನಾಯಕರಿಗೆ ಒಪ್ಪಿಸಲು ತೀರ್ಮಾನಿಸಿ ಹೊರಟೆವು. ಶೃಂಗೇರಿ ಸಾಹಿತ್ಯ ಸಮ್ಮೇಳನಕ್ಕಾದ ಗತಿ ಕೇಳಿದ ದೇವನೂರು ಮಹಾದೇವ `ಇನ್ನ ಇವರು ಏನು ಮಾಡಲೂ ಹೇಸುವುದಿಲ್ಲ ಎಂದಿದ್ದಾರೆ!’. ಎದುರಿಸಲು ತಯಾರಾಗಬೇಕಷ್ಟೆ.

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here