ತಮಿಳುನಾಡು ಚುನಾವಣಾ ಪ್ರಚಾರದಲ್ಲಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಚೀನಾ- ಭಾರತದ ಗಡಿ ಸಂಘರ್ಷಕ್ಕೆ ಸಂಬಂಧಿಸಿದಂತೆ “ಮೋದಿ ಹೆದರಿದ್ದಾರೆ ಎಂದು ಚೀನಾಕ್ಕೆ ಗೊತ್ತಾಗಿದೆ” ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಏಪ್ರಿಲ್ 6ಕ್ಕೆ ತಮಿಳುನಾಡಿನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಅವರು ಹಮ್ಮಿಕೊಂಡಿರುವ ಮೂರು ದಿನಗಳ ಪ್ರವಾಸಕ್ಕೆ ಇಂದು (ಫೆ.27) ಚಾಲನೆ ನೀಡಿದ ನಂತರ ವಕೀಲರೊಂದಿಗೆ ನಡೆದ ಸಂವಾದದಲ್ಲಿ ಮಾತನಾಡಿದರು ಎಂದು ಎನ್‌ಡಿಟಿವಿ ವರದಿ ಮಾಡಿದೆ.
“ಪ್ಯಾಂಗಾಂಗ್ ಸರೋವರ ಪ್ರದೇಶಗಳ ಉತ್ತರ ಮತ್ತು ದಕ್ಷಿಣ ದಂಡೆಗಳಿಂದ ಸೇನಾಪಡೆಗಳು, ಶಸ್ತ್ರಾಸ್ತ್ರಗಳು ಮತ್ತು ಮಿಲಿಟರಿ ಯಂತ್ರೋಪಕರಣಗಳನ್ನು ಹಿಂತೆಗೆದುಕೊಳ್ಳುವ ಪ್ರಕ್ರಿಯೆಯು ಪೂರ್ಣಗೊಳ್ಳುವ ಮೂಲಕ ಮತ್ತು ಪೂರ್ವ ಲಡಾಖ್‌ನಲ್ಲಿ ಗಡಿ ಸಂಘರ್ಷ ನಿಷ್ಕ್ರಿಯಗೊಳಿಸುವ ಮೊದಲು, ಚೀನಿಯರು ಅತಿಕ್ರಮಣ ಆಲೋಚನೆಯನ್ನು 2017ರಲ್ಲಿ ದೋಕಲಾದಲ್ಲಿ ಪರೀಕ್ಷೆಗೆ ಒಳಪಡಿಸಿದ್ದರು” ಎಂದು ರಾಹುಲ್ ಗಾಂಧಿ ಹೇಳಿದರು.
ಇದನ್ನೂ ಓದಿ: ತಮಿಳುನಾಡು: ದಿ. ಕರುಣಾನಿಧಿ ಮೊಮ್ಮಗ ಉದಯನಿಧಿ ವಿರುದ್ಧ ಸ್ಪರ್ಧಿಸಲಿದ್ದಾರಾ ನಟಿ ಖುಷ್ಬೂ?
“ಚೀನೀಯರು ನಮ್ಮ ದೇಶದ ಪ್ರಮುಖ ಕಾರ್ಯತಂತ್ರದ ಪ್ರದೇಶಗಳನ್ನು ಅತಿಕ್ರಮಿಸಿಕೊಂಡಿದ್ದಾರೆ. ಭಾರತದ ಪ್ರತಿಕ್ರಿಯೆ ಏನಿರುತ್ತದೆ ಎಂಬುದನ್ನು ನೋಡಲು ತಮ್ಮ ಅತಿಕ್ರಮಣದ ಆಲೋಚನೆಯನ್ನು ಅವರು ಮೊದಲು ದೋಕಲಾದಲ್ಲಿ ಪರೀಕ್ಷಿಸಿದ್ದರು. ಭಾರತ ಪ್ರತಿಕ್ರಿಯಿಸುವುದಿಲ್ಲ ಎನ್ನುವುದನ್ನು ಅರಿತ ಅವರು, ನಂತರ ಅದನ್ನು ಲಡಾಖ್‌ನಲ್ಲಿ ಮತ್ತೊಮ್ಮೆ ಪರೀಕ್ಷಿಸಿದ್ದಾರೆ. ಮುಂದೆ ಅವರು ಅದನ್ನು ಅರುಣಾಚಲಪ್ರದೇಶದ ಮೇಲೂ ಪರೀಕ್ಷಿಸಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಚೀನಾ ಅತಿಕ್ರಮಣ ನಡೆಸಿದಾಗ ಪ್ರಧಾನಿ ಮೋದಿಯವರ ಮೊದಲ ಪ್ರತಿಕ್ರಿಯೆ ‘ಭಾರತದೊಳಕ್ಕೆ ಯಾರೂ ಬಂದಿಲ್ಲ’ ಎನ್ನುವುದಾಗಿತ್ತು. ಇದರಿಂದಾಗಿ ಭಾರತದ ಪ್ರಧಾನಿ ನಮಗೆ ಹೆದರಿಕೊಂಡಿದ್ದಾರೆ ಎನ್ನುವ ಸೂಚನೆ ಚೀನಾದವರಿಗೆ ಸಿಕ್ಕಿತು. ಭಾರತದ ಪ್ರಧಾನಿ ನಮ್ಮ ಎದುರು ನಿಲ್ಲಲು ಹೆದರುತ್ತಾರೆ ಎನ್ನುವುದನ್ನು ಅವರು ಚೆನ್ನಾಗಿ ಅರ್ಥಮಾಡಿಕೊಂಡಿದ್ದಾರೆ. ಅದೇ ಆಧಾರದ ಮೇಲೆ ಚೀನಾದವರು ಈಗಲೂ ಮಾತುಕತೆ ನಡೆಸಿದ್ದಾರೆ” ಎಂದು ನರೇಂದ್ರ ಮೋದಿಯವರನ್ನು ಟೀಕಿಸಿದ್ದಾರೆ.
ಇದನ್ನೂ ಓದಿ: ಮಾಧ್ಯಮಗಳು ಸುಳ್ಳು ಹೇಳುತ್ತಿವೆ: ರೈತರ ಮಹಾಪಂಚಾಯತ್ ವೇದಿಕೆಯಲ್ಲಿ ABP ಚಾನೆಲ್ ವರದಿಗಾರನ ರಾಜೀನಾಮೆ!
“ನನ್ನ ಮಾತನ್ನು ಚೆನ್ನಾಗಿ ನೆನಪಿಟ್ಟುಕೊಳ್ಳಿ, ಡೆಪ್ಸಾಂಗ್‌ನಲ್ಲಿರುವ ನಮ್ಮ ನೆಲ ಅತ್ಯಂತ ಮುಖ್ಯವಾದುದು. ಇದನ್ನು ಚೀನಾದವರು ಆಕ್ರಮಿಸಿಕೊಂಡಾಗಿದೆ. ಇದು ನಮಗೆ ಮರಳಿ ಸಿಗದು, ನಮ್ಮ ಪ್ರಧಾನಿ ಕೂಡ ಆ ಭೂಮಿಯನ್ನು ಮರಳಿ ಪಡೆಯುವುದಿಲ್ಲ. ಎಲ್ಲ ಸಮಸ್ಯೆಗಳನ್ನೂ ಸರಿಪಡಿಸಿದ್ದೇವೆ ಎಂದು ಸುಳ್ಳು ಹೇಳುತ್ತಿದ್ದಾರೆ ಅಷ್ಟೇ. ಆದರೆ, ನಮ್ಮ ದೇಶ ಆ ಪ್ರದೇಶವನ್ನು ಕಳೆದುಕೊಳ್ಳಲಿದೆ” ಎಂದು ವಿವರಿಸಿದರು.
“ದೇಶದೊಳಕ್ಕೆ ಯಾರೂ ಬಂದಿಲ್ಲ” ಎಂದು ಪ್ರಧಾನಿ ನೀಡಿರುವ ಹೇಳಿಕೆ ಭವಿಷ್ಯದಲ್ಲಿ ಭಾರತಕ್ಕೆ ಅಪಾಯವನ್ನು ತಂದೊಡ್ಡಲಿದೆ. ಇದರಿಂದಾಗಿ ಚೀನಾದವರು ಲಡಾಖ್‌ನಲ್ಲಿ ನಡೆಸುತ್ತಿರುವ ಸಂಘರ್ಷವನ್ನು ಇಷ್ಟಕ್ಕೆ ನಿಲ್ಲಿಸುವುದಿಲ್ಲ ಎಂದು ಎಚ್ಚರಿಸಿದ್ದಾರೆ.
“ಕಾಂಗ್ರೆಸ್ ನೇತೃತ್ವದ ಸರ್ಕಾರ ಇದ್ದಾಗ ಯಾವುದೇ ಹಿಂಜರಿಕೆ ಇಲ್ಲದೇ ಚೀನಾದೊಂದಿಗೆ ವ್ಯವಹರಿಸಿದೆ. ಭಾರತವನ್ನು ಸುತ್ತುವರಿಯಲು ನಮ್ಮಿಂದ ಸಾಧ್ಯವಿಲ್ಲವೆಂದು ಚೀನಾದವರು ಚೆನ್ನಾಗಿ ಅರ್ಥಮಾಡಿಕೊಂಡಿದ್ದರು. 2013ರಲ್ಲಿ ಚೀನಾದವರು ಭಾರತದ ಗಡಿ ಅತಿಕ್ರಮಿಸಲು ಮುಂದಾದಾಗ ನಾವು ದಿಟ್ಟ ಕ್ರಮ ತೆಗೆದುಕೊಂಡಿದ್ದೇವೆ. ನಾವು ಪ್ರತಿಯಾಗಿ ಅವರ ಪ್ರದೇಶಗಳನ್ನು ಆಕ್ರಮಿಸಿಕೊಂಡು, ಅವರೇ ರಾಜಿಮಾಡಿಕೊಳ್ಳುವಂತೆ ಮಾಡಿದ್ದೆವು. ಈಗಿನ ಪ್ರಧಾನಿಗೆ ಆ ಧೈರ್ಯವಿಲ್ಲ, ಪ್ರಧಾನಿಯೇ ರಾಜಿ ಮಾಡಿಕೊಳ್ಳಲಿದ್ದಾರೆ ಎನ್ನುವುದು ಚೀನಾದವರಿಗೆ ತಿಳಿದಿದೆ” ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ಆಘಾತಕಾರಿ ಸುದ್ದಿ: ವಸತಿ ಶಾಲೆಯೊಂದರಲ್ಲಿನ 317 ಹೆಣ್ಣುಮಕ್ಕಳ ಸಾಮೂಹಿಕ ಅಪಹರಣ!