ಸಮಕಾಲೀನ ರಾಜಕೀಯ ಸಂದರ್ಭಕ್ಕೆ ಸಿನೆಮಾ ಮತ್ತು ರಂಗಭೂಮಿಯ ಪ್ರತಿಕ್ರಿಯೆ: ಬಿ.ಸುರೇಶ್

ನಮ್ಮ ನಾಡಿನ ಸಿನಿಮಾಗಳಿಗಿಂತ ಹಿಂದಿ, ಮಲೆಯಾಳಂ, ತಮಿಳು, ಬಂಗಾಳಿ ಭಾಷೆಗಳಲ್ಲಿ ಸಮಕಾಲೀನ ವಿವರಗಳಿಗೆ ಸ್ಪಂದಿಸಿದ ಸಿನಿಮಾಗಳ ಸಂಖ್ಯೆ ಹೆಚ್ಚು. ತಮಿಳಿನ 'ಪರಿಯೇರುಂ...', 'ಕಾಲಾ' ದಂತಹ ಸಿನಿಮಾಗಳು, ಹಿಂದಿಯ 'ಆರ್ಟಿಕಲ್ 15' 'ಪರ್ಜಾನಿಯ' ತರಹದ ಸಿನಿಮಾಗಳು, 'ಲೈಲಾ' ದಂತಹ ವೆಬ್ ಸೀರೀಸ್ ಸಮಕಾಲೀನ ವಿವರಗಳಿಗೆ ನೇರ ಪ್ರತಿಕ್ರಿಯೆಯಾಗಿ ಬಂದಿವೆ.

0

ಇಂಜಿನಿಯರ್ ಸುರೇಶ್ ಸಾರ್ವಜನಿಕ ಉದ್ದಿಮೆಯ ನೌಕರಿ ಬಿಟ್ಟು ಚಿತ್ರರಂಗ ಆರಿಸಿಕೊಂಡಿದ್ದು ಆಕಸ್ಮಿಕವಲ್ಲ. ಅವರ ಹೃದಯ, ಮನಸ್ಸು ಚಿಕ್ಕಂದಿನಿಂದಲೂ ರಂಗಭೂಮಿ ಮತ್ತು ಸಿನೆಮಾದ ಮೇಲೆಯೇ ನೆಟ್ಟಿತ್ತು. ಇಂದು ಅವರು ಕನ್ನಡದ ಯಶಸ್ವೀ ನಿರ್ಮಾಪಕರಲ್ಲೊಬ್ಬರು. ನಟ, ನಿರ್ದೇಶಕ, ನಿರ್ಮಾಪಕರಾಗಿ ಬಹುಪಾತ್ರಗಳನ್ನು ನಿರ್ವಹಿಸುತ್ತಲೇ, ಪ್ರತಿನಿತ್ಯ ಸಮಾಜದ ಬದಲಾವಣೆಯ ಜೀವಪರವಾದ ನೂರೆಂಟು ಸಂಗತಿಗಳಲ್ಲಿ ತನ್ನ ಪಾತ್ರವನ್ನೂ ಹುಡುಕಿಕೊಳ್ಳುತ್ತಿರುತ್ತಾರೆ.

‘ಸಮಕಾಲೀನ ಅಂದರೆ ಏನು’ ಎಂಬುದೇ ಅತ್ಯಂತ ವಿಶಿಷ್ಟವಾದ ಮತ್ತು ಸದಾ ಕಾಲ ಕಾಡುವಂಥ ಪ್ರಶ್ನೆ. ಯಾವುದು ಸಮಕಾಲೀನ? ಅಲ್ಲಮಪ್ರಭು ತನ್ನ ಒಂದು ವಚನದಲ್ಲಿ ಹೇಳುವ ಹಾಗೆ ಹರಿಯುವ ನದಿಗೆ ಮೈಯೆಲ್ಲ ಕಾಲು ಎನ್ನುವ ಹಾಗೆಯೇ ಈ ಕಾಲ ಎಂಬ ಸದಾಕಾಲ ಹರಿಯುವ ನದಿಗೆ ಪ್ರತಿಕ್ಷಣವೂ ಹೊಸ ನೀರಿನ ಆಗಮನದಿಂದ ಹರಿಯುತ್ತಲೇ ಇದೆ. ಹೀಗಿರುವಾಗ ಯಾರಿಗೆ ಯಾವುದು ಸಮಕಾಲೀನ? ಯಾವ ಕಾಲಘಟ್ಟದಿಂದ ಎಲ್ಲಿಯವರೆಗೆ ಈ ಸಮಕಾಲೀನದ ಲೆಕ್ಕ ಎಂಬ ಪ್ರಶ್ನೆ ಉಳಿಯುತ್ತದೆ.

ಇನ್ನೂ ರಂಗಭೂಮಿ ಮತ್ತು ಸಿನಿಮಾದಂತಹ ಅಭಿವ್ಯಕ್ತಿ ಮಾಧ್ಯಮಗಳು ಈ ಸಮಕಾಲೀನ ಎಂಬುದಕ್ಕೆ ಪ್ರತಿಕ್ರಿಯಿಸಿದ್ದನ್ನು ಪಟ್ಟಿ ಮಾಡುವುದು ಹೇಗೆ? ಮೌಲ್ಯಮಾಪನ ಮಾಡುವುದು ಹೇಗೆ? ಈ ಹಿನ್ನೆಲೆಯಲ್ಲಿ ಈ ದೇಶದ ಸ್ವಾತಂತ್ರ್ಯ ಹೋರಾಟದ ಕಾಲದಿಂದ ಈಗಿನವರೆಗಿನ ಒಂದು ಶತಮಾನವನ್ನು (1920 ರಿಂದ 2020) ಇಡಿಯಾಗಿ ನೋಡಬೇಕಾಗಬಹುದು. ಹಾಗೆ ನೋಡುವಾಗ ನನ್ನ ನೆನಪಿಗೆ ಬಂದ ಕೆಲವು ಗಮನಿಕೆಗಳನ್ನು ಕುರಿತು ಮಾತಾಡುತ್ತಾ, ಕ್ಲುಪ್ತ ಪದ ಮಿತಿಯೊಳಗೆ ನನ್ನ ಅಭಿಪ್ರಾಯ ಮಂಡಿಸಲು ಪ್ರಯತ್ನಿಸುವೆ.

ರಂಗಭೂಮಿ ಮನುಷ್ಯನು ಮಾತು ಕಲಿಯುವ ಮುಂಚಿನಿಂದಲೂ ಬದುಕಿರುವಂತಹದು. ತಾನು ಬೇಟೆಯಾಡಿದ ಕ್ರಮವನ್ನು ತನ್ನವರಿಗೆ ವರದಿ ಮಾಡಲು, ತನ್ನ ಮುಂದಿನ ತಲೆಮಾರು ಆ ಕೆಲಸ ಕಲಿಯುವುದಕ್ಕೆ ಅನುವಾಗಲು ಮನುಷ್ಯ ಅಭಿನಯಿಸಿದ್ದನಲ್ಲ, ಈ ಆದಿಮ ಕಾಲದಿಂದ ರಂಗಭೂಮಿ ಅಸ್ತಿತ್ವದಲ್ಲಿದೆ. ಈ ರಂಗಭೂಮಿಯು ಆಚರಣಾ ರಂಗಭೂಮಿಯಾಗಿ, ಜನಪದ ರಂಗಭೂಮಿಯಾಗಿ, ಈಗ ನಾವು ಗುರುತಿಸುವ ಆಧುನಿಕ ರಂಗಭೂಮಿ ಆಗುವ ವರೆಗಿನ ಪಯಣವು ಮಾನವಶಾಸ್ತ್ರದ ಪಯಣ ಮಾತ್ರ ಅಲ್ಲ ಮನುಷ್ಯನೆಂಬ ಸಾಮಾಜಿಕ ಪ್ರಾಣಿಯ ಎಲ್ಲಾ ಪಲ್ಲಟಗಳ ದಾಖಲೆಯೂ ಹೌದು.

ಇಂತಹ ಸದಾ ಪಲ್ಲಟಗೊಳ್ಳುತ್ತಿರುವ ಹೊಸ ದಾರಿಗಳ ಅನ್ವೇಷಣೆಯಲ್ಲಿ ಇರುವ ರಂಗಭೂಮಿ ಮೇಲೆ ಗುರುತಿಸಿದ ಶತಮಾನದ ಅವಧಿಯಲ್ಲಿ ಸದಾ ಕ್ರಿಯಾಶೀಲವಾಗಿ ಮತ್ತು ತನ್ನ ಸಮಕಾಲೀನ ಪ್ರಕ್ರಿಯೆಗೆ ಪ್ರತಿಕ್ರಿಯೆ ಮಾಡಿಕೊಂಡು ಜೀವಂತವಾಗಿದೆ.

ರಂಗಭೂಮಿಗೆ ಹೋಲಿಸಿದರೆ ಸಿನಿಮಾ ಎಳಸು. 1934ರಲ್ಲಿ ಮೊದಲ ಕನ್ನಡ ವಾಕ್ಚಿತ್ರ ಬಂದದ್ದು. ಈ ಸಿನಿಮಾ ಎಂಬ ಅಭಿವ್ಯಕ್ತಿ ಮಾಧ್ಯಮವು ಸರಿಯಾದ ತಾಂತ್ರಿಕ ಗುಣಮಟ್ಟ ಪಡೆದು, ನಿರಂತರತೆ ಸಾಧಿಸಿಕೊಳ್ಳುವುದಕ್ಕೇ ಮೊದಲ ಎರಡು ಎರಡೂವರೆ ದಶಕ ಆಗಿದೆ. ಆರಂಭದ ದಿನಗಳಲ್ಲಿ ಚಿತ್ರಿತ ರಂಗಭೂಮಿ ಎಂಬಂತೆ ಇದ್ದ ಸಿನಿಮಾ ತನ್ನದೇ ಶೈಲಿ, ಸ್ವರೂಪ ಪಡೆದುಕೊಳ್ಳುವ ಹೊತ್ತಿಗೆ ಈ ದೇಶಕ್ಕೆ ಸ್ವಾತಂತ್ರ್ಯ ಬಂದು ಹತ್ತು ವರ್ಷ ದಾಟಿತ್ತು. ಅಂದರೆ ಸುಮಾರು 1955ರ ನಂತರದ ಕಾಲ ಎನ್ನಬಹುದು. ಆಗಲೂ ಸಿನಿಮಾ ನಿರ್ಮಾಣದ ತಾಂತ್ರಿಕ ವಿವರಗಳು ಸ್ಟಾಂಡರ್ಡೈಸ್ ಆಗಿರಲಿಲ್ಲ. ಕನ್ನಡ ಸಿನಿಮಾಗಳು ರಂಗಕೃತಿಗಳನ್ನೇ ಚಿತ್ರಿಸುತ್ತಾ, ಸಿನಿಮಾ ಭಾಷೆಯನ್ನು ರೂಪಿಸಿಕೊಳ್ಳುವ ಪ್ರಯತ್ನದಲ್ಲಿ ಇದ್ದವು. ಸುಮಾರು ಎಪ್ಪತ್ತರ ದಶಕದ ಹೊತ್ತಿಗೆ ದೃಶ್ಯ ಭಾಷೆಯ ಮೇಲೆ ಸಿನಿಮಾ ತಯಾರಕರಿಗೆ ಹಿಡಿತ ಸಿಕ್ಕಿತು.

ಇದೇ ಅವಧಿಯಲ್ಲಿ ರಂಗಭೂಮಿಯ ಒಂದು ಬಣ ಪೌರಾಣಿಕ, ಐತಿಹಾಸಿಕ ನಾಟಕಗಳ ಹೆಸರಲ್ಲಿ ನೋಡುಗರಲ್ಲಿ ಸ್ವಾತಂತ್ರ್ಯ ಹೋರಾಟದ ಕೆಚ್ಚನ್ನು ಉಳಿಸುವ ಕೆಲಸವನ್ನು ಮಾಡುತ್ತಿದ್ದರೆ ಮತ್ತೊಂದು ಬಣ ಅಧಿಕಾರಶಾಹಿಯ ಒಲೈಕೆಗೆ ಆಗುವಂತಹ ರಂಜನೀಯ ನಾಟಕಗಳನ್ನು ಪ್ರದರ್ಶಿಸುತ್ತಿತ್ತು.

ಈ ಪರಿಸ್ಥಿತಿ ಅಂದಿನಿಂದ ಇಂದಿನವರೆಗೂ ನಮ್ಮ ರಂಗಭೂಮಿಯಲ್ಲಿ ಮುಂದುವರೆದಿದೆ. ಪ್ರತಿಭಟನೆಯ ಅಸ್ತ್ರವಾಗಿ ರಂಗಭೂಮಿಯನ್ನು ಬಳಸಿಕೊಳ್ಳುತ್ತಾ, ಸಮಕಾಲೀನ ರಾಜಕೀಯದಲ್ಲಿ ಇರುವ ಶೋಷಣೆಯ, ಭ್ರಷ್ಟತೆಯ ವಿವರಗಳನ್ನು ಬಿಚ್ಚಿಡುತ್ತಾ ನೋಡುಗರನ್ನು ಪ್ರಶ್ನೆ ಕೇಳಲು ಪ್ರೇರೇಪಿಸುವ ರಂಗ ಪ್ರಯೋಗಗಳನ್ನು ಮಾಡುವವರು ಒಂದೆಡೆಯಾದರೆ ಅಧಿಕಾರದಲ್ಲಿ ಇರುವವರನ್ನು ಮೆಚ್ಚಿಸಲೆಂದೇ ನಾಟಕ ಕಟ್ಟುವ ಬಣವೂ ನಮ್ಮಲ್ಲಿ ಇಂದಿಗೂ ಜೀವಂತ ಇದೆ. ಎಪ್ಪತ್ತರ ದಶಕದಲ್ಲಿ ಬೀದಿ ನಾಟಕಗಳ ಮೂಲಕ ಜನಾಂದೋಲನ ಕಟ್ಟುವ ಕೆಲಸ ಮಾಡಲಾಗಿದ್ದನ್ನು ಮರೆಯಲಾದೀತೇ. ತುರ್ತು ಪರಿಸ್ಥಿತಿ ಕಾಲದಲ್ಲಿ ಪೊಲೀಸರ ಕಣ್ಣು ತಪ್ಪಿಸಿ ಬೀದಿ ನಾಟಕಗಳನ್ನು ಪ್ರದರ್ಶಿಸುತ್ತಿದ್ದುದು ಇಂದಿಗೂ ಹಸಿರಾದ ನೆನಪು. ಆದರೆ ಈ ಬಗೆಯ ಪ್ರತಿಭಟನೆಯ ರಂಗಭೂಮಿಯಿಂದಲೇ ಬಂದ ಹಲವರು ರಾಜಕೀಯ ನಾಯಕರ ಚುನಾವಣಾ ಪ್ರಚಾರಕ್ಕೆ, ಸರ್ಕಾರದ ಯೋಜನೆಗಳ ಪ್ರಚಾರಕ್ಕೆ ಅದೇ ಬೀದಿ ರಂಗಭೂಮಿಯನ್ನು ಬಳಸಿಕೊಂಡು ಅನುಕೂಲ ಸಿಂಧು ನಡೆಯ ಮೂಲಕ ತಮ್ಮ ಅವಕಾಶವಾದೀತನ ಬಯಲಿಗಿಟ್ಟದ್ದು, ಇಂದಿಗೂ ಆ ಕೆಲಸ ಮಾಡುತ್ತಾ ಇರುವುದೂ ಹೌದು.

ಈಗಿನದೇ ಸಂದರ್ಭವನ್ನು ಹಿಡಿದು ಮಾತಾಡುವುದಾದರೆ ಬರುವ ತಿಂಗಳುಗಳಲ್ಲಿ ಗಿರೀಶ್ ಕಾರ್ನಾಡರ ಕೊನೆಯ ನಾಟಕದ ಎರಡು ಬಗೆಯ ಪ್ರದರ್ಶನ ಆಗುವುದಿದೆ. ಒಂದು ವೈಭವೋಪೇತ, ಬೃಹತ್ ಪ್ರವೇಶ ದರದ ಇಂಗ್ಲೀಷ್ ಪ್ರದರ್ಶನ ಮತ್ತೊಂದು ಕಡಿಮೆ ಹಣದ ಮೂಲಕ ನಾಡಿನ ಅನೇಕ ನಗರಗಳಲ್ಲಿ ಪ್ರದರ್ಶನ ಮಾಡುವ ಪ್ರಯತ್ನ. ಇವೆರಡೂ ಪ್ರಯತ್ನಗಳನ್ನು ಈ ಹಿಂದೆ ಹೇಳಿದ ಓಲೈಕೆ ಮತ್ತು ಆರಾಧನಾ ರಂಗಭೂಮಿ ಮಾದರಿಗಳು ಎಂದು ನೋಡಬಹುದು.

ರಂಗಭೂಮಿಗೆ ಸಮಾನಾಂತರವಾಗಿ ಸಿನಿಮಾದ ಬೆಳವಣಿಗೆಗೆ ನೋಡಿದರೆ, ಅದು ತನ್ನೆದುರಿನ ಕ್ಷಣಕ್ಕೆ ಪ್ರತಿಕ್ರಿಯೆ ಆಗುವುದಕ್ಕಿಂತ ನಾಯಕನ ವೈಭವೀಕರಣ ಮತ್ತು ಆದರ್ಶಗಳನ್ನು ದಾಟಿಸುವ ಕೆಲಸದಲ್ಲಿಯೇ ಹೆಚ್ಚು ತೊಡಗಿತ್ತು. ಈ ಮಾತಿಗೆ ಅಪವಾದ ಎಂಬ ಸಿನಿಮಾಗಳು ಕನ್ನಡದಲ್ಲಿ ಬಂದದ್ದು ಅರವತ್ತರ ದಶಕದ ಅಂತ್ಯದಲ್ಲಿ. ಅವುಗಳನ್ನು ಹೊಸ ಅಲೆ ಚಿತ್ರಗಳು ಎಂದು ಗುರುತಿಸಲಾಯಿತು. ಸಂಸ್ಕಾರ, ಕಾಡು, ಪಲ್ಲವಿ, ಚೋಮನದುಡಿ ತರಹದ ಚಿತ್ರಗಳು ತಮ್ಮ ಕಥಾವಸ್ತುವಿನ ನಿರ್ವಹಣೆ ಮೂಲಕವೇ ಸಮಕಾಲೀನ ವಿಷಯಗಳಿಗೆ ಸ್ಪಂದಿಸಿದ್ದವು. ಈ ಹೊಸ ಅಲೆ ಚಿತ್ರ ಚಳವಳಿಯು ಇಂದಿಗೂ ಸಮಕಾಲೀನ ವಿಷಯಕ್ಕೆ ಸ್ಪಂದಿಸುವ ಕೃತಿಗಳನ್ನು ನೀಡುತ್ತಿದೆ. ಅದಕ್ಕೆ ಉದಾಹರಣೆಯಾಗಿ “ಗುಲಾಬಿ ಟಾಕೀಸು”, “ಅರ್ಥ”, “ಭಾರತ್ ಸ್ಟೋರ್ಸ್”, “ನಾನು ಅವನಲ್ಲ ಅವಳು”, “ದೇವರನಾಡಲ್ಲಿ”, “ಅಮರಾವತಿ” ಮುಂತಾದ ಸಿನಿಮಾಗಳನ್ನು ಗಮನಿಸಬಹುದು. ಆದರೆ ಈ ಮಾದರಿಯ ಸಿನಿಮಾಗಳಿಗೆ ಇರುವ ಬೆಂಬಲ ಮತ್ತು ಇವು ತಲುಪುವ ನೋಡುಗರ ಸಂಖ್ಯೆ ತೀರಾ ಕಡಿಮೆ.

ಇವುಗಳಿಗೆ ಸಮಾನಾಂತರವಾಗಿ ಜನಪ್ರಿಯ ಸಿನಿಮಾ ಎಂಬ ಮಾದರಿಯು ಸದಾ ನಾಯಕನ ವೈಭವೀಕರಣದಲ್ಲಿಯೇ ತೊಡಗಿದೆ. ಅಪವಾದ ಎಂಬಂತೆ “ಭೂತಯ್ಯನ ಮಗ ಅಯ್ಯು”, ” ಹೇಮಾವತಿ”, “ಅಂತ” ದಂತಹ ಹಲವು ಸಾಮಾಜಿಕ ವಿಷಯಗಳಿಗೆ ಪ್ರತಿಕ್ರಿಯೆ ಎಂಬಂತೆ ಕಟ್ಟಿದ ಸಿನಿಮಾಗಳು ಸಹ ಬಂದಿವೆ. ಆದರೆ ಅವು ಅಂತಹ ವಸ್ತುವನ್ನು ಭಾವುಕತೆಯಲ್ಲಿ ತೋಯಿಸಿ ಬಿಡುವುದರಿಂದ, ಆ ಕೃತಿಯಿಂದ ಮೂಡುವ ಪರಿಣಾಮ ತೆಳುವಾಗಿ ಬಿಡುತ್ತದೆ ಅಥವಾ ತೀರಾ ಸರಳೀಕರಣ, ಸಾಮಾನ್ಯೀಕರಣ ಆಗಿರುತ್ತವೆ.

ನಮ್ಮ ನಾಡಿನ ಸಿನಿಮಾಗಳಿಗಿಂತ ಹಿಂದಿ, ಮಲೆಯಾಳಂ, ತಮಿಳು, ಬಂಗಾಳಿ ಭಾಷೆಗಳಲ್ಲಿ ಸಮಕಾಲೀನ ವಿವರಗಳಿಗೆ ಸ್ಪಂದಿಸಿದ ಸಿನಿಮಾಗಳ ಸಂಖ್ಯೆ ಹೆಚ್ಚು. ತಮಿಳಿನ ‘ಪರಿಯೇರುಂ…’, ‘ಕಾಲಾ’ ದಂತಹ ಸಿನಿಮಾಗಳು, ಹಿಂದಿಯ ‘ಆರ್ಟಿಕಲ್ 15’ ‘ಪರ್ಜಾನಿಯ’ ತರಹದ ಸಿನಿಮಾಗಳು, ‘ಲೈಲಾ’ ದಂತಹ ವೆಬ್ ಸೀರೀಸ್ ಸಮಕಾಲೀನ ವಿವರಗಳಿಗೆ ನೇರ ಪ್ರತಿಕ್ರಿಯೆಯಾಗಿ ಬಂದಿವೆ. ಇವುಗಳಿಗೆ ಸಮಾನಾಂತರವಾಗಿ ಸಿನಿಮಾದಲ್ಲಿ ಸಹ ಇರುವ ಓಲೈಕೆ ಬಣ ಪ್ರಧಾನಮಂತ್ರಿ ಅವರ ಹೆಸರಿನ ಬಯೋಪಿಕ್, ಸರ್ಕಾರದ ಯೋಜನೆಗಳ, ಕೆಲಸಗಳ ಪ್ರಚಾರ ಎಂಬಂತೆ ತಯಾರಾದ ‘ಪ್ಯಾಡ್ ಮ್ಯಾನ್’ ‘ಮಿಷನ್ ಮಂಗಳ್’ ಇತ್ಯಾದಿಗಳನ್ನು, ಈಗಿನ ಸರ್ಕಾರದ ‘ರಾಷ್ಟ್ರಭಕ್ತಿ’ ಎಂಬ ಅಫೀಮು ಹಂಚುವ ಕೆಲಸವನ್ನು ಮಾಡುವ ಹಲವು ಸಿನಿಮಾಗಳನ್ನು ನಿರ್ಮಿಸಿರುವುದು ಸಹ ಗಮನಿಸಬೇಕಾದ ವಿಷಯ. ಆದರೆ ಸರ್ಕಾರವನ್ನು ನೇರವಾಗಿ ಪ್ರಶ್ನಿಸುವ, ಸರ್ಕಾರದ ಧೋರಣೆಗಳನ್ನು ಖಂಡಿಸುವ ಸಿನಿಮಾಗಳ ತಯಾರಿಕೆಯು ಕಳೆದ ಐದು ವರ್ಷದಲ್ಲಿ ಗಣನೀಯವಾಗಿ ಕಡಿಮೆಯಾಗಿದೆ. ಇದಕ್ಕೆ ಆಳುವ ಸರ್ಕಾರ ಪ್ರತಿಭಟಿಸುವ ಶಕ್ತಿ ಇರುವವರನ್ನು ‘ದೇಶದ್ರೋಹಿ’ ಎಂದು ಬಂಧಿಸುವ, ತನ್ನ ಟ್ರಾಲ್ ಆರ್ಮಿ ಮೂಲಕ ನೈತಿಕ ಬಲ ಕುಗ್ಗಿಸುವ ಕೆಲಸ ಮಾಡುತ್ತಿರುವುದು ಸಹ ಪ್ರಧಾನ ಕಾರಣ ಆಗಿರಬಹುದು.

ಒಟ್ಟಾರೆಯಾಗಿ ಹೀಗೆನ್ನಬಹುದು. ನಮ್ಮ ನಾಡಿನ ಜನ ಎಲ್ಲಾ ಕಾಲಕ್ಕೂ ಒಲೈಸುವವರಾಗಿ ಮತ್ತು ಪ್ರತಿಭಟನಾ ಸ್ವರವಾಗಿ ಎರಡು ಬಣವಾಗಿ ರಂಗಭೂಮಿ, ಸಿನಿಮಾ ಮಾಧ್ಯಮಗಳನ್ನು ದುಡಿಸಿಕೊಳ್ಳುತ್ತಾ ಇದ್ದಾರೆ. ಇದು ಕಿರುತೆರೆಗೆ ಹೊಂದಿಸಿ ಹೇಳಬಹುದಾದ ಮಾತಲ್ಲ.ಕಿರುತೆರೆಯಲ್ಲಿ ಬಹುತೇಕ ಅತಿರಂಜಿತ ಕತೆಗಳು ಅಥವಾ ಭಾವನಾತ್ಮಕ ಕತೆಗಳು ಪ್ರಸಾರವಾಗುತ್ತವೆ. ಇದಕ್ಕೆ ಆಯಾ ಖಾಸಗಿ ವಾಹಿನಿಯವರೇ ಸ್ವತಃ ನಿರ್ಮಾಪಕರಾಗಿ, ಲಾಭ ಹುಡುಕುವುದೇ ಪ್ರಧಾನ ಕಾರಣವಾಗಿರುವುದು ಮತ್ತು ಎಲ್ಲ ನಿರ್ಧಾರಗಳು ರೇಟಿಂಗ್ ಹೆಚ್ಚಿಸುವ ಹಿನ್ನೆಲೆಯಲ್ಲಿ ಆಗುವುದು ಕಾರಣವಾಗಿದೆ.

ರಂಗಭೂಮಿ ಮಾತ್ರ ಇಂತಹ ವ್ಯಾಪಾರದ ಸಂಕಟಕ್ಕೆ ಬೀಳದೆ ನಿರಂತರವಾಗಿ ಪ್ರತಿಭಟನೆಗಳನ್ನು, ಪ್ರಶ್ನೆ ಕೇಳುವ ಪ್ರಯೋಗಗಳನ್ನು ಮಾಡುತ್ತಿದೆ.

ಆಳುವವರನ್ನು ಪ್ರಶ್ನಿಸುತ್ತ, ಸಮಾಜ ಕಟ್ಟುವ ಕಸುವು ಈ ಎಲ್ಲಾ ಮಾಧ್ಯಮಗಳಲ್ಲಿ ಜೀವಂತವಾಗಿ ಉಳಿಯಲಿ ಎಂದು ಹಾರೈಸೋಣ. ಜೊತೆಗೆ ಸಿನಿಮಾ ಮತ್ತು ರಂಗಭೂಮಿಯಲ್ಲಿ ಈ ಬಗೆಯ ಕೆಲಸ ಮಾಡುವವರನ್ನು, ಅವರ ಕೃತಿಗಳನ್ನು ಮತ್ತೆ ಮತ್ತೆ ಪ್ರದರ್ಶಿಸುವ ಅವಕಾಶ ಒದಗಿಸುತ್ತಾ, ಆ ಪ್ರಯೋಗ ಮಾಡಿದವರಿಗೂ ಬದುಕುವ ಅವಕಾಶ ಹಾಗೂ ಬೆಂಬಲ ನೀಡೋಣ.

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here