ಬೆಂಗಳೂರು: “ಆದಿವಾಸಿಗಳು, ಬಡವರು ಮತ್ತು ಮುಸ್ಲಿಮರ ವೋಟುಗಳನ್ನು ತೆಗೆದಿದ್ದಾರೆ. ಪ್ರಜೆಗಳನ್ನು ಕೊಲ್ಲುವುದಕ್ಕೆ ಸಾಧ್ಯವಿಲ್ಲ, ಅದಕ್ಕೇ ಅವರ ವೋಟುಗಳನ್ನು ತೆಗೆದಿದ್ದಾರೆ” ಎಂದು ಬಹುಭಾಷಾ ನಟ ಪ್ರಕಾಶ್ ರಾಜ್ ಆರೋಪಿಸಿದ್ದಾರೆ.
ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ವಿರೋಧಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಅಕ್ಟೋಬರ್ 8ರಂದು ನಡೆದ ಬೃಹತ್ ಪ್ರತಿಭಟನೆ ಹಾಗೂ ‘ಜನತಾ ನ್ಯಾಯಾಲಯ’ ಸಮಾವೇಶದಲ್ಲಿ ಮಾತನಾಡಿದ ಅವರು, ತಮ್ಮ ಹೋರಾಟ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಮಾತ್ರ ಸೀಮಿತವಲ್ಲ, SIR ಪ್ರಕ್ರಿಯೆಯನ್ನೇ ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು.
“ಗ್ಯಾನೇಶ್ ಕುಮಾರ್ ಹೋದರೆ ಮತ್ತೊಬ್ಬ ಅಜ್ಞಾನೇಶ್ ಬರುತ್ತಾನೆ. ನಮಗೆ SIR ರದ್ದಾಗಬೇಕು. ಕಳ್ಳ ಗ್ಯಾನೇಶ್ ವಿಚಾರಣೆ ನಡೆಯಬೇಕು, ಅವರ ಮೇಲೆ ಕೇಸ್ ದಾಖಲಾಗಬೇಕು” ಎಂದು ಅವರು ಆಗ್ರಹಿಸಿದರು. ಗ್ಯಾನೇಶ್ ಕುಮಾರ್ ಅವರು “ರಂಗಾ-ಬಿಲ್ಲಾ, ಅಮಿತ್-ಮೋದಿ” ಅವರ ಮಾತು ಕೇಳಿದ್ದಾರೆ ಎಂದು ಆರೋಪಿಸಿದರು.
“ನಾವು ಯಾವುದೇ ರಾಜಕೀಯ ಪಕ್ಷವಲ್ಲ. ನಾವು ಈ ದೇಶದ ಪ್ರಜೆಗಳು. ಇದು ನಮ್ಮ ಹಕ್ಕಿಗಾಗಿ ನಡೆಯುತ್ತಿರುವ ಹೋರಾಟ” ಎಂದು ಪ್ರಕಾಶ್ ರಾಜ್ ಹೇಳಿದರು. SIRನಿಂದ ಮತದಾನದ ಹಕ್ಕು ಕಳೆದುಕೊಂಡವರನ್ನು ತಾವು ಭೇಟಿ ಮಾಡಿರುವುದಾಗಿ ತಿಳಿಸಿದ ಅವರು, “ಚುನಾವಣಾ ಆಯೋಗ ಚುನಾವಣಾ ಪಟ್ಟಿಯನ್ನು ಕ್ಲೀನ್ ಮಾಡುತ್ತಿಲ್ಲ, ನಮ್ಮನ್ನು ಪಟ್ಟಿಯಿಂದ ತೆಗೆಯಲು ಬಂದಿದೆ” ಎಂದು ಆರೋಪಿಸಿದರು.
ಬಡವರು ಮತ್ತು ಯುವಜನರು ತಮ್ಮ ನಿರ್ಧಾರವನ್ನು ಮಾಡಬಾರದು ಎಂಬ ಕಾರಣಕ್ಕೆ ಅವರ ಮತಗಳನ್ನು ತೆಗೆದುಹಾಕಲಾಗುತ್ತಿದೆ ಎಂದು ಆರೋಪಿಸಿದ ಅವರು, SIR ರದ್ದುಗೊಳಿಸಿ ಜನರ ಘನತೆ ಮತ್ತು ಹಕ್ಕನ್ನು ಮರಳಿಸುವವರೆಗೆ ಹೋರಾಟ ಮುಂದುವರಿಯಲಿದೆ ಎಂದು ಹೇಳಿದರು. ಶಾಂತಿಯುತವಾಗಿ ರಸ್ತೆಯಲ್ಲಿ ನಿಂತು ಹೋರಾಟ ನಡೆಸುವುದಾಗಿ ಪ್ರಕಾಶ್ ರಾಜ್ ಘೋಷಿಸಿದರು.


