ಇದೇ ತಿಂಗಳ 8 ರಂದು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ನಡೆಯಲಿರುವ ‘ಜನತಾ ನ್ಯಾಯಾಲಯ’ ವಿನೂತನ ಹೋರಾಟಕ್ಕೆ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಯ ದಂಡು ಬರುತ್ತಿದೆ. ರಾಜ್ಯದಲ್ಲಿ ಎಸ್‌ಐಆರ್‌ನಿಂದ ಆಗಿರುವ ಅನ್ಯಾಯಗಳ ಈ ಹೋರಾಟದಲ್ಲಿ ಅನವಾರಣ ಮಾಡಲಿದ್ದು, ಸಿಜೆಪಿಯ ಅಭಿಜೀತ್ ದಿಪ್ಕೆ, ಅಶುತೋಶ್ ರಾಂಕಾ ಮತ್ತು ಬಿಜೆಪಿಯ ಕಡು ವಿರೋಧಿಯಾಗಿರುವ ಮತ್ತೋರ್ವ ಖ್ಯಾತ ಯೂಟ್ಯೂಬರ್ ಸಹ ಆಗಮಿಸಲಿದ್ದಾರೆ.
ನಟ ಪ್ರಕಾಶ್ ರಾಜ್ ಅವರು ಕಳೆದ 15 ದಿನಗಳಿಂದ ರಾಜ್ಯದಾದ್ಯಂತ ಸಂಚರಿಸಿ ಸಂಗ್ರಹಿಸಿರುವ ಮಾಹಿತಿ ಮತ್ತು ಎಸ್‌ಐಆರ್ ವಿರೋಧಿ ಒಕ್ಕೂಟ ಹಾಗೂ ನಾಗರಿಕ ಮತ ಕಾವಲು ಸಮಿತಿ ಸಂಗ್ರಹಿಸಿರುವ ಎಸ್‌ಐಆರ್ ಅನ್ಯಾಯಗಳ ವರದಿಯನ್ನು ಜನರ ಮುಂದೆ ಇಡಲಾಗುತ್ತದೆ.
ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯ ಅಕ್ರಮಗಳ ವಿರುದ್ಧ ಮತ್ತು ಎಸ್‌ಐಆರ್‌ನಿಂದ ಸಂಕಷ್ಟಕ್ಕೆ ಸಿಲುಕಿರುವ ಸಂತ್ರಸ್ತರಿಗೆ ನ್ಯಾಯ ಒದಗಿಸಲು ಆಗ್ರಹಿಸಿ ಅಕ್ಟೋಬರ್ 8ರಂದು ‘ಜನತಾ ನ್ಯಾಯಾಲಯ’ ಎಂಬ ವಿನೂತನ ಪ್ರತಿಭಟನೆ ನಡೆಯಲಿದೆ ಎಂದು ಎಸ್‌ಐಆರ್ ವಿರೋಧಿ ಒಕ್ಕೂಟ ಮತ್ತು ನಾಗರಿಕ ಮತ ಕಾವಲು ಸಮಿತಿ ನಾಯಕರು ಇಂದು ನಡೆದ ಸುದ್ಧಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಫ್ರೀಡಂ ಪಾರ್ಕಿನಲ್ಲಿ ನಡೆಯುವ ಜನತಾ ನ್ಯಾಯಾಲಯದಲ್ಲಿ ಎಸ್‌ಐಆರ್ ಪ್ರಕ್ರಿಯೆಯ ಹಿನ್ನೆಲೆ ಮತ್ತು ಅದರಿಂದಾಗಿರುವ ಅನ್ಯಾಯಗಳನ್ನು ತೆರೆದಿಡುವ ಮಹತ್ವದ ಸಾಕ್ಷ್ಯಗಳನ್ನು ಸಾರ್ವಜನಿಕವಾಗಿ ಹಾಜರುಪಡಿಸಲಾಗುತ್ತದೆ. ದೇಶದ ಹಿರಿಯ ಮತ್ತು ಗಣ್ಯ ನ್ಯಾಯಮೂರ್ತಿಗಳು ಈ ಆರೋಪಗಳನ್ನು ಆಲಿಸಿ ತೀರ್ಪು ನೀಡಲಿದ್ದಾರೆ. ಪ್ರಜಾಪ್ರಭುತ್ವದ ಹಕ್ಕುಗಳ ರಕ್ಷಣೆಗಾಗಿ ನಡೆಯುತ್ತಿರುವ ಈ ವಿಶೇಷ ನಡಾವಳಿಯಲ್ಲಿ ರಾಜ್ಯದ ಪ್ರಜ್ಞಾವಂತ ನಾಗರಿಕರು ಪಾಲ್ಗೊಳ್ಳಬೇಕು ಎಂದು ಎಸ್‌ಐಆರ್ ವಿರೋಧಿ ಒಕ್ಕೂಟ ಕರೆ ನೀಡಿದೆ.
ಈ ಮಹತ್ವದ ಹೋರಾಟಕ್ಕೆ ನಟರಾದ ಪ್ರಕಾಶ್ ರಾಜ್ ಮತ್ತು ಕಿಶೋರ್ ಸೇರಿದಂತೆ ರಾಜ್ಯದ ಪ್ರಮುಖ ಸಾಹಿತಿಗಳು, ಚಿಂತಕರು, ಸಿಜೆಪಿ ಹಾಗೂ ವಿವಿಧ ವಿದ್ಯಾರ್ಥಿ-ಯುವಜನ ಸಂಘಟನೆಗಳು, ರೈತ, ಕಾರ್ಮಿಕ, ದಲಿತ ಮತ್ತು ಮಹಿಳಾ ಸಂಘಟನೆಗಳ ನಾಯಕರು ಸಂಪೂರ್ಣ ಬೆಂಬಲ ಸೂಚಿಸಿದ್ದಾರೆ.
ಕೊಡಗಿನಲ್ಲಿ ನಡೆದಿದ್ದ ಸಾರ್ವಜನಿಕ ಅಹವಾಲು:
ಸೆ.20 ರಂದು ಕೊಡಗಿನ ಪಾಲೆಮಾಡಿನಲ್ಲಿ ನಟ ಪ್ರಕಾಶ್ ರಾಜ್ ನೇತೃತ್ವದಲ್ಲಿ ‘ಬೃಹತ್ ಪಬ್ಲಿಕ್ ಹಿಯರಿಂಗ್’ ನಡೆದಿತ್ತು. ಅಲ್ಲಿಗೆ ಆಗಮಿಸಿದ್ದ ಸಂತ್ರಸ್ತ ಹಾಡಿ ಜನರು ತಮಗಾಗಿರುವ ಅನ್ಯಾಯವನ್ನು ಜನರ ಮುಂದೆ ಇಟ್ಟಿದ್ದರು.
ನಾಗರಿಕ ಮತಕಾವಲು ಸಮಿತಿ, ಭೂಮಿ ಮತ್ತು ವಸತಿ ವಂಚಿತರ ಹೋರಾಟ ಸಮಿತಿ ಹಾಗೂ ವಿವಿಧ ಜಾತ್ಯತೀತ ಪಕ್ಷ ಮತ್ತು ಸಂಘಟನೆಗಳು ಜಂಟಿಯಾಗಿ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ, ನಿರಾಶ್ರಿತರಾದ ಹಾಡಿ ಜನರು ಎಸ್‌ಐಆರ್‌ನಿಂದ ತಾವು ಎದುರಿಸಿದ ಸಂಕಟ ತೋಡಿಕೊಂಡರು.
ಬಿ.ಶೆಟ್ಟಿಗೇರಿಯ ಮಂಜುಳಾ ಎಂಬವರು ಮಾತನಾಡಿ, “ನನಗೆ ನೋಟಿಸ್ ಬಂದಿದೆ ಎಂದು ಹೇಳುತ್ತಿದ್ದಾರೆ, ಆದರೆ ಈವರೆಗೆ ಕೊಟ್ಟಿಲ್ಲ. ಐದಾರು ಬಾರಿ ಹೋದರೂ ‘ನಾಳೆ ಬಾ, ನಾಳೆ ಬಾ’ ಎಂದು ಹೇಳುತ್ತಿದ್ದಾರೆ. ನಾನು ಎನ್ಯುಮರೇಷನ್ ಫಾರಂ ಫಿಲ್ ಮಾಡಿ ಕೊಟ್ಟಿದ್ದೆ. ಆದರೆ, ನೋಟಿಸ್ ಬಂದಿದೆ ಎಂದು ಈವರೆಗೆ ನನಗೆ ತಿಳಿದಿರಲಿಲ್ಲ, ಅವರೇ ಇಟ್ಟುಕೊಂಡಿದ್ದಾರೆ. ನಾನು ಹುಟ್ಟಿ ಬೆಳೆದಿದ್ದೇ ಕೊಡಗಿನಲ್ಲಿ. ‘ಅನ್‌ಮ್ಯಾಪ್ಡ್’ ಎಂದು ಕಾರಣ ನೀಡಿ ನೋಟಿಸ್ ನೀಡಿದ್ದಾರೆ. ಐದಾರು ಬಾರಿ ಪಂಚಾಯಿತಿಗೆ ಭೇಟಿ ನೀಡಲು 300 ರೂಪಾಯಿ ಕೊಟ್ಟು ಆಟೋ ಮಾಡಿಕೊಂಡು ಹೋಗಿದ್ದೇವೆ. ನಾವು ಕೂಲಿ ಮಾಡುತ್ತಿದ್ದು, ಅಷ್ಟೊಂದು ಕೂಲಿಯೂ ಸಹ ನಮಗೆ ಸಿಗುತ್ತಿಲ್ಲ” ಎಂದು ಹೇಳಿದರು.
ಗೌರಿ ಎಂಬವರು ಮಾತನಾಡಿ, “ನನ್ನ ಹೆಸರು ಗೌರಿ. ನಮಗೆ ಈ ಮುಂಚೆ ಅಮ್ಮತಿಯಲ್ಲಿ ವೋಟು ಇತ್ತು. ನಾವು ಅಲ್ಲಿ ಹೋಗಿ ಕೇಳಿದಾಗ ‘ಬಿ.ಶೆಟ್ಟಿಗೇರಿಯಲ್ಲಿ ಮಾಡಿಕೊಳ್ಳಿ’ ಎಂದು ಹೇಳಿದರು. ನಾವು ಅಲ್ಲಿ ಇಲ್ಲ ಎಂಬ ಕಾರಣಕ್ಕೆ ನಮ್ಮ ವೋಟ್ ಡಿಲೀಟ್ ಮಾಡಿದ್ದಾರೆ” ಎಂದು ತಿಳಿಸಿದರು.
ಬಿ.ಶೆಟ್ಟಿಗೇರಿಯ ನಿವಾಸಿ ಕಮಲ ಎಂಬವರು 1995ರಲ್ಲಿ ಮತದಾನ ಮಾಡಿದ್ದು, ಆದರೆ 2002ರ ಮತದಾರರ ಪಟ್ಟಿಯಲ್ಲಿ ಅವರು ಹೆಸರು ಸಿಕ್ಕಿಲ್ಲ ಎನ್ನಲಾಗಿದೆ. ಹಾಗಾಗಿ, ಅವರಿಗೆ ಗಣತಿ ನಮೂನೆ (ಎನ್ಯುಮರೇಷನ್ ಫಾರಂ) ಬಂದಿಲ್ಲ ಎಂದು ತಿಳಿದು ಬಂದಿದೆ.
ಮೇಲೆ ಕೇವಲ ಮೂರು ಜನರ ಸಮಸ್ಯೆಗಳನ್ನು ಮಾತ್ರ ದಾಖಲಿಸಲಾಗಿದೆ.. ಕೊಡಗು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಾವಿರಾರು ಜನ ಕೂಲಿ ಕಾರ್ಮಿಕರು, ಬಡವರು, ದಲಿತರು, ಅಲೆಮಾರಿಗಳು ಹಾಗೂ ಮಹಿಳೆಯರು ಎಸ್‌ಐಆರ್‌ನಿಂದ ಬಾಧಿತರಾಗಿದ್ದಾರೆ. “ನಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಮತದಾನ ಮಾತ್ರ ನಮಗಿರುವ ಏಕೈಕ ಅಸ್ತ್ರ, ಈಗ ಅದನ್ನೇ ಕಿತ್ತುಕೊಳ್ಳಲಾಗುತ್ತಿದೆ” ಎಂದು ಅವರು ಆತಂಕಿತರಾಗಿದ್ದಾರೆ.
ಕೊಡಗಿನ ಬಳಿಕ ಈಗ ಬೆಂಗಳೂರಿನಲ್ಲಿ ‘ಜನತಾ ನ್ಯಾಯಾಲಯ’ ಹೋರಾಟ ನಡೆಯುತ್ತಿದ್ದು, ಮತ ಕಾವಲು ಸಮಿತಿ ಈವರೆಗೆ ರಾಜ್ಯದಾದ್ಯಂತ ಸಂಗ್ರಹಿಸಿರುವ ಮಾಹಿತಿಯನ್ನು ಹಾಗೂ ಚುನಾವಣಾ ಆಯೋಗ ನಡೆಸಿರುವ ಎಸ್‌ಐಆರ್ ಅಕ್ರಮಗಳನ್ನು ಜನರ ಮುಂದಿಡಲಾಗುತ್ತದೆ. ಈ ಬಗ್ಗೆ ನೇರವಾಗಿ ಸಂತ್ರಸ್ತರೆ ವೇದಿಕೆಗೆ ಬಂದು ತಗಾಗಿರುವ ಅನ್ಯಾಯಗಳ ಕುರಿತು ಮಾಹಿತಿ ನೀಡಲಿದ್ದಾರೆ.


