Homeಮುಖಪುಟನ್ಯಾಯದ ಪರಿಕಲ್ಪನೆ ಮತ್ತು ಸಮಾನತೆಗೆ ಅಡ್ಡಿಪಡಿಸುವ ವ್ಯಾಖ್ಯಾನಗಳು

ನ್ಯಾಯದ ಪರಿಕಲ್ಪನೆ ಮತ್ತು ಸಮಾನತೆಗೆ ಅಡ್ಡಿಪಡಿಸುವ ವ್ಯಾಖ್ಯಾನಗಳು

- Advertisement -
- Advertisement -

ನ್ಯಾಯ ಎಂದರೇನು?

ನ್ಯಾಯದ ಪರಿಕಲ್ಪನೆಯನ್ನು ವ್ಯಾಖ್ಯಾನಿಸುವ ಕುತೂಹಲಕಾರಿ ಆಧುನಿಕ ಪ್ರಯತ್ನಗಳಲ್ಲಿ ಜಾನ್ ರಾಲ್ಸ್ ಅವರ ’ಥಿಯರಿ ಆಫ್ ಜಸ್ಟೀಸ್’ ಒಂದು. ಜಸ್ಟೀಸ್ ಅಥವಾ ನ್ಯಾಯ ಎಂದರೆ ನ್ಯಾಯಸಮ್ಮತೆ ಅಥವಾ ಫೇರ್‌ನೆಸ್ ಅಥವಾ ಸಮತೆ ಎಂದರ್ಥ ನೀಡಬೇಕೆನ್ನುವುದರ ಬಗ್ಗೆ ಅವರು ಒತ್ತುನೀಡುತ್ತಾರೆ. ಆದರೆ ಫೇರ್‌ನೆಸ್, ಸಮತೆ ಎಂದರೇನು? ಇದನ್ನು ಪರಿಶೀಲಿಸಲು ರಾಲ್ಸ್ ಒಂದು ಸಾಮಾಜಿಕ ಪ್ರಯೋಗವನ್ನು ಪ್ರಸ್ತಾಪಿಸುತ್ತಾರೆ, ಅದರಲ್ಲಿ ಒಂದು ಹೊಸ ಸಮಾಜಕ್ಕಾಗಿ ನಿಯಮ ಮತ್ತು ತತ್ವಗಳನ್ನು ರಚಿಸಲು ಕೆಲವು ವ್ಯಕ್ತಿಗಳ ಕಾಲ್ಪನಿಕ ತಂಡವನ್ನು ಕಲ್ಪಿಸಿಕೊಳ್ಳುತ್ತಾರೆ. ಆ ತಂಡದವರಿಗೆ ಆ ಹೊಸ ಸಮಾಜದಲ್ಲಿ ತಮ್ಮ ಸ್ಥಾನ ಏನಿರಲಿದೆ, ತಮ್ಮ ವರ್ಗ, ಸಾಮಾಜಿಕ ನಿಲುವು ಇತ್ಯಾದಿಗಳ ಬಗ್ಗೆ ತಿಳಿದಿರುವುದಿಲ್ಲ; ಮಾತ್ರವಲ್ಲ ನೈಸರ್ಗಿಕ ಸಂಪತ್ತು ಮತ್ತು ಸಾಮರ್ಥ್ಯಗಳಲ್ಲಿ ಅವರ ಪಾಲು, ಅವರ ಬುದ್ಧಿಮತ್ತೆ, ಕೌಶಲ್ಯ ಇತ್ಯಾದಿಗಳ ಬಗ್ಗೆಯೂ ಅವರಿಗೆ ತಿಳಿದಿರುವುದಿಲ್ಲ. ರಾಲ್ಸ್ ಪ್ರಕಾರ, ತಮ್ಮ ಈ ವಿಷಯಗಳ ಬಗ್ಗೆ ಅರಿವು ಇಲ್ಲದಿರುವುದು, ಎಲ್ಲರಿಗೂ ನ್ಯಾಯಸಮ್ಮತವಾಗಿರುವ ನಿಯಮಗಳನ್ನು ರಚಿಸಲು ಅನುವು ಮಾಡಿಕೊಡುತ್ತದೆ. ಒಂದುವೇಳೆ ಒಬ್ಬ ವ್ಯಕ್ತಿಗೆ ತನ್ನದೇ ಒಂದು ಪರಿಕಲ್ಪನೆಯ ಸಮಾಜದಲ್ಲಿ ತಾನು ಏನಾಗಿರಬಹುದು ಎಂದು ಗೊತ್ತಿಲ್ಲದಿದ್ದಾಗ, ಅವರು ಒಂದು ವರ್ಗದ ಜನರಿಗೆ ಮಾತ್ರ ಅನುಕೂಲವಾಗುವಂತೆ ಸಮಾಜವನ್ನು ರಚನೆ ಮಾಡುವುದಿಲ್ಲ, ಅದರ ಬದಲಿಗೆ ಎಲ್ಲರನ್ನೂ ಸಮಾನವಾಗಿ ಪರಿಗಣಿಸುವ ನ್ಯಾಯ ವ್ಯವಸ್ಥೆಯನ್ನು ರಚಿಸುತ್ತಾರೆ. ಈ ರೀತಿಯಲ್ಲಿ, ಎಲ್ಲರಿಗೂ ಸ್ವಾತಂತ್ರ್ಯ ಮತ್ತು ಸಮಾನತೆ (ಸಾಮಾಜಿಕ ಜೀವನದ ಮೂಲ ಸ್ವಾತಂತ್ರ್ಯಗಳಲ್ಲೂ ಹಾಗೂ ಸಾಮಾಜಿಕ ಸರಕುಗಳ ಹಂಚಿಕೆಗಳೆರಡರಲ್ಲಿಯೂ) ಅಧಿಕವಾಗಿರುತ್ತದೆ ಎಂದು ವಾದಿಸಿದರು.

ಆದರೆ, ಸ್ತ್ರೀವಾದಿ ಚಿಂತಕರಾದ ಮಾರ್ಥಾ ನಸಬಾಮ್ ಮತ್ತು ಐರಿಸ್ ಯಂಗ್ ಅವರು ರಾಲ್ಸ್‌ನ ನ್ಯಾಯ ಎಂದರೆ ನ್ಯಾಯಸಮ್ಮತೆ ಅಥವಾ ಸಮತೆ ಎಂಬ ಪರಿಕಲ್ಪನೆಯು ಕೇವಲ ಆರ್ಥಿಕ ಅನ್ಯಾಯಗಳನ್ನು ಗಣನೆಗೆ ತೆಗೆದುಕೊಳ್ಳುತ್ತದೆ ಎಂದರು. ಅದು ಸಾಮಾಜಿಕ ಶ್ರೇಣಿಕರಣದಿಂದ ಆಗುವ ಅನ್ಯಾಯಗಳನ್ನು ಗುರುತಿಸುವುದಿಲ್ಲ ಮತ್ತು ಸರಿಪಡಿಸುವುದಿಲ್ಲ. ಹಾಗಾಗಿ ಅವರು ಇನ್ನೊಂದು ನ್ಯಾಯದ ಪರಿಕಲ್ಪನೆಯ ಚೌಕಟ್ಟನ್ನು ಪ್ರತಿಪಾದಿಸಿದರು; ಜನರು ತಮ್ಮ ಭೌಗೋಳಿಕ, ಜನಾಂಗೀಯ, ಲಿಂಗ ಮತ್ತು ಔದ್ಯೋಗಿಕ ವ್ಯತ್ಯಾಸಗಳೊಂದಿಗೆ ತಮ್ಮ ದೃಷ್ಟಿಕೋನಗಳನ್ನು ಪ್ರತಿಪಾದಿಸುವ ಮತ್ತು ತಮ್ಮ ಧ್ವನಿಗಳನ್ನು ಪ್ರತಿನಿಧಿಸುವ ನಿಜವಾದ ಪಾಲ್ಗೊಳ್ಳುವಿಕೆಯ ಸಂರಚನೆಗಳನ್ನು ಕಟ್ಟುವುದರ ಬಗ್ಗೆ ಕೇಂದ್ರೀಕರಿಸುವ ನ್ಯಾಯದ ಚೌಕಟ್ಟು ಅವರದ್ದಾಗಿತ್ತು. ಈ ತಿಳಿವಳಿಕೆಯ ಪ್ರಕಾರ, ನ್ಯಾಯ ಎಂದರೆ, ಬೇರೆಬೇರೆ ಸಾಮಾಜಿಕ ಗುಂಪುಗಳ ನಡುವೆ ಇರುವ ವ್ಯತ್ಯಾಸಗಳನ್ನು ಸ್ಪಷ್ಟವಾಗಿ ಗುರುತಿಸುವ ಹಾಗೂ ವ್ಯತ್ಯಾಸಗಳನ್ನು ಗೌಣಗೊಳಿಸುವ ಕ್ರಮಗಳಿಗೆ ಮುಂದಾಗುವುದನ್ನು ಸ್ಪಷ್ಟವಾಗಿ ಒಪ್ಪಿಕೊಳ್ಳುವುದಾಗಿತ್ತು. ಯಂಗ್ ಅವರು, ದಬ್ಬಾಳಿಕೆಯ ಐದು ಮುಖಗಳನ್ನು ಸೂಚಿಸುತ್ತಾರೆ; ಶೋಷಣೆ, ಅಂಚಿಗೆ ತಳ್ಳುವುದು (ಕಡೆಗಣಿಸುವುದು), ಅಧಿಕಾರವಿಲ್ಲದಿರುವುದು, ಸಾಂಸ್ಕೃತಿಕ ಸಾಮ್ರಾಜ್ಯಶಾಹಿ ಹಾಗೂ ಹಿಂಸೆ. ನ್ಯಾಯ ಎಂದರೆ ಸಾಂಸ್ಥಿಕ ದಬ್ಬಾಳಿಕೆ ಮತ್ತು ಶೋಷಣೆಯನ್ನು ಇಲ್ಲವಾಗಿಸುವುದು. ಹಿಂಸೆಯಲ್ಲಿ ಸಾಮಾಜಿಕ ಅನ್ಯಾಯ ಅಂತರ್ಗತವಾಗಿದ್ದು ಹಾಗೂ ಅದು ಕೇವಲ ಒಬ್ಬ ವ್ಯಕ್ತಿಯ ಮೇಲೆಸಗುವ ನೈತಿಕ ತಪ್ಪು ಆಗಿರುವುದಿಲ್ಲ ಎಂದು ಯಂಗ್ ಅವರ ನ್ಯಾಯದ ಚೌಕಟ್ಟು ಹೇಳುತ್ತದೆ. ಹಾಗಾಗಿ, ನ್ಯಾಯ ಎಂಬುದು ರಾಚನಿಕ ಮತ್ತು ಸಾಂಸ್ಕೃತಿಕ ಬದಲಾವಣೆಗಳಿಗೆ ಕರೆ ಕೊಡುವುದರ ಪ್ರತಿಪಾದನೆಯಾಗಿದೆ.

ಸಮಾಜದಲ್ಲಿ ಚಾಲ್ತಿಯಲ್ಲಿರುವ ದಬ್ಬಾಳಿಕೆಯ (ಜಾತಿ, ಕೋಮುವಾದ, ಪುರುಷಪ್ರಾಧಾನ್ಯ ವ್ಯವಸ್ಥೆ, ವರ್ಗ ಇತ್ಯಾದಿ) ವ್ಯವಸ್ಥೆಗಳಿಗೆ ಸವಾಲೆಸೆದು ಹಾಗೂ ರ್‍ಯಾಡಿಕಲ್ ಆದ ಸಾಮಾಜಿಕ ಮರುಸಂರಚನೆಯನ್ನು ಮುಂದಿಟ್ಟು ಭಾರತೀಯ ಸಂವಿಧಾನವು ನ್ಯಾಯದ ಇದೇ ರೀತಿಯ ನೋಟವನ್ನು ಅಳವಡಿಸಿಕೊಂಡಿತ್ತು. ಭಾರತದ ಸಂವಿಧಾನದ ಪೀಠಿಕೆಯು ನ್ಯಾಯ- ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ನ್ಯಾಯದ ಭರವಸೆ ನೀಡುತ್ತದೆ ಹಾಗೂ ಈ ಗುರಿಯನ್ನು ಸಾಕಾರಗೊಳಿಸುವ ನಿರ್ಣಾಯಕ ಹೊಣೆಗಾರಿಕೆಯನ್ನು ಸರಕಾರದ ಮೇಲೆ ಹೊರಿಸುತ್ತದೆ. ಅದು ಜನರ ಹಿತ, ಕಲ್ಯಾಣವನ್ನು ಪ್ರಚುರಗೊಳಿಸಲು ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ನ್ಯಾಯದಲ್ಲಿ ಸಾಮಾಜಿಕ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ರಕ್ಷಿಸುವ ಮತ್ತು ಖಾತ್ರಿಪಡಿಸುವ ಹೊಣೆಗಾರಿಕೆ ಹೊಂದಿದೆ ಹಾಗೂ ರಾಷ್ಟ್ರೀಯ ಜೀವನದ ಎಲ್ಲಾ ಸಂಸ್ಥೆಗಳಿಗೆ ತಿಳಿಸಬೇಕಿದೆ. (1)

1946ರಲ್ಲಿ ಸಂವಿಧಾನ ರಚನಾ ಸಭೆಯಲ್ಲಿ ಪಂಡಿತ್ ನೆಹರು ಅವರು ಮುಂದಿಟ್ಟ objective resolution ಉದ್ದೇಶಗಳು, ಮುಂದೆ ಸಂವಿಧಾನ ಪೀಠಿಕೆಯ ಸ್ವರೂಪ ಪಡೆದುಕೊಂಡವು. ಈ ನಿರ್ಣಯದ ಬಗ್ಗೆ ರಚನಾ ಸಭೆಯಲ್ಲಿ ನಡೆದ ಚರ್ಚೆಗಳು, ನ್ಯಾಯ ಎಂಬುದರ ಪರಿಕಲ್ಪನೆಯನ್ನು ಸಂವಿಧಾನನದ ರಚನಕಾರರು ದೇಶಕ್ಕಾಗಿ ಹೇಗೆ ಅರ್ಥೈಸಿದ್ದರು ಎಂಬುದನ್ನು ಹೇಳುತ್ತವೆ. ಅಲ್ಲಾದಿ ಕೃಷ್ಣಸ್ವಾಮಿ ಅಯ್ಯರ್ ಹೀಗೆ ಹೇಳುತ್ತಾರೆ:

“ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ನ್ಯಾಯ ಎನ್ನುವುದು, ಈ ದೇಶ ಮತ್ತು ಶಾಸನಸಭೆಯನ್ನು, ಯಾವುದೇ ನಿರ್ದಿಷ್ಟ ವ್ಯಾಖ್ಯಾನದ ಅಡಿಯಲ್ಲಿ ಬರುವ ಯಾವುದೇ ನಿರ್ದಿಷ್ಟ ಸ್ವರೂಪದ ರಾಜಕೀಯ ವ್ಯವಸ್ಥೆಗೆ ಒಳಪಡಿಸದೆ, ಪ್ರಸಕ್ತ ದಿನದಲ್ಲಿ ಪ್ರತಿಯೊಂದು ಪ್ರಜಾಸತ್ತಾತ್ಮಕ ಸರಕಾರದ ಮೂಲಭೂತ ಗುರಿಯ ಮೇಲೆ ಒತ್ತು ನೀಡುವ ಉದ್ದೇಶ ಹೊಂದಿದೆ. ಒಂದು ಪ್ರಗತಿಪರ ಸಮಾಜಕ್ಕೆ ಬೇಕಾಗುವ ಹೊಂದಾಣಿಕೆ ಮತ್ತು ಅಭಿವೃದ್ಧಿಯ ಅವಶ್ಯಕ ಅಂಶಗಳನ್ನು ಈಗ ರಚಿಸಲಾಗಿರುವ ಸಂವಿಧಾನ ಹೊಂದಿರುತ್ತದೆ ಎಂಬುದರ ಬಗ್ಗೆ ನನಗೆ ಯಾವ ಸಂಶಯವೂ ಇಲ್ಲ.” (2)

ಡಾ. ಬಿ.ಆರ್. ಅಂಬೇಡ್ಕರ್ ಅವರು ಪೀಠಿಕೆಯಲ್ಲಿರುವ ’ನ್ಯಾಯ’ದ ಪರಿಕಲ್ಪನೆಯನ್ನು ಇನ್ನಷ್ಟು ಸ್ಪಷ್ಟವಾಗಿ ವಿವರಿಸಬೇಕೆಂದು ನಿರೀಕ್ಷಿಸಿದ್ದರು, ಅದು ದೇಶದಲ್ಲಿ ಸಾಮಾಜಿಕ ಮತ್ತು ಆರ್ಥಿಕ ನ್ಯಾಯವನ್ನು ಖಾತ್ರಿಪಡಿಸಬೇಕು, ಕೈಗಾರಿಕೆ ಮತ್ತು ಭೂಮಿಯ ರಾಷ್ಟ್ರೀಕರಣ ಮುಂತಾದವುಗಳನ್ನು ಒಳಗೊಳ್ಳಬೇಕು ಎಂದು ನಿರೀಕ್ಷಿಸಿದ್ದರು. ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ನ್ಯಾಯವನ್ನು ದೊರಕಿಸಲು ಒಂದು ರಾಷ್ಟ್ರದ ಆರ್ಥಿಕತೆ ’ಸಮಾಜವಾದಿ ಅರ್ಥಿಕತೆ’ ಆಗಿರಬೇಕು ಎಂದು ನಂಬಿದ್ದರು. (3) ಅಂಬೇಡ್ಕರ್ ಅವರ ಪ್ರಜಾಪ್ರಭುತ್ವದ ವಿಶಾಲವಾದ ಅರ್ಥೈಸುವಿಕೆಯನ್ನು ಗಮನಿಸಿದಾಗ, ಒಂದು ಸಮಾಜವಾದಿ ಆರ್ಥಿಕತೆ, ಆರ್ಥಿಕ ಬದುಕಿನಲ್ಲಿಯೂ ಪ್ರಜಾಸತ್ತಾತ್ಮಕ ಒತ್ತಡಗಳಿಗೆ ಒಳಗಾಗುವ ಒಂದು ವ್ಯವಸ್ಥೆಯಾಗಿರುತ್ತದೆ ಎಂದು ತಿಳಿಯುತ್ತದೆ. ಹಾಗಾಗಿ, ಯಾವುದೇ ಒಂದು ನಿಜವಾದ ಪ್ರಜಾಸತ್ತಾತ್ಮಕ ಸಮಾಜವು ನ್ಯಾಯವನ್ನು ಸಾಕಾರಗೊಳಿಸುವ ಖಾತ್ರಿಯನ್ನೂ ನೀಡುತ್ತದೆ. ಅಂಬೇಡ್ಕರ್ ಅವರಿಗೆ ನ್ಯಾಯ ಎಂಬುದು ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವವೇ ಆಗಿತ್ತು. (4)

ಸಂವಿಧಾನ ರಚನಾಸಭೆಯ ಮತ್ತೊಬ್ಬ ಸದಸ್ಯರಾಗಿದ್ದ ಎಂ.ಆರ್. ಮಸಾನಿ ಅವರ ಅಭಿಪ್ರಾಯದಲ್ಲಿ ನ್ಯಾಯದ ಸಂವಿಧಾನಿಕ ತತ್ವದ ದಾರಿಯಲ್ಲಿ ನಡೆಯುವ ಭಾರತವು ದೇಶದಲ್ಲಿ ಅಸ್ತಿತ್ವದಲ್ಲಿರುವ ಆಳವಾದ ಮತ್ತು ಅತಿರೇಕದ ಮಟ್ಟದಲ್ಲಿರುವ ಅಸಮಾನತೆಗಳನ್ನು ಸಹಿಸಲಾಗುವುದಿಲ್ಲ. ಅದು ಒಬ್ಬ ವ್ಯಕ್ತಿಯ ಶ್ರಮವನ್ನು ಇನ್ನೊಬ್ಬ ವ್ಯಕ್ತಿಯು ಶೋಷಣೆ ಮಾಡುವುದನ್ನು ಸಹಿಸುವುದಿಲ್ಲ. ಎಲ್ಲರ ಸಾಮಾನ್ಯ ಒಳಿತಿಗಾಗಿ ದುಡಿಯುವ ಪ್ರತಿಯೊಬ್ಬ ವ್ಯಕ್ತಿಗೂ ತನ್ನ ಶ್ರಮದ ನ್ಯಾಯಸಮ್ಮತವಾದ ಪಾಲು ದೊರೆಯುವುದು ಎಂದು ಅದು ನಿರ್ದಿಷ್ಟವಾಗಿ ಅರ್ಥೈಸುತ್ತದೆ. ಈ ದೇಶದ ಜನರು- ಒಂದು ಸಂವಿಧಾನ ಅವರನ್ನು ಎಲ್ಲಿಯವರೆಗೂ ಒಳಗೊಂಡು ಪೊರೆಯುತ್ತದೆಯೋ- ಅಲ್ಲಿಯವರೆಗೂ ಈ ದೇಶದ ಜನರು ಸಾಮಾಜಿಕ ಭದ್ರತೆ ಪಡೆಯುತ್ತಾರೆ- ತಮ್ಮ ಸಮುದಾಯದಿಂದ ಕೆಲಸ ಮಾಡುವ ಅಥವಾ ನಿರ್ವಹಣೆ ಒದಗಿಸುವ ಹಕ್ಕನ್ನು ಪಡೆಯುತ್ತಾರೆ. (5)

1950ಲ್ಲಿ ನಮಗೆ ನಾವೇ ಸಂವಿಧಾನವನ್ನು ಅರ್ಪಿಸಿಕೊಂಡೆವು. ಅದು ’ಹೆಜಮನಿಯ ಅಥವಾ ಯಜಮಾನ್ಯದ ವಿರೋಧಿ ನ್ಯಾಯದ ಕಲ್ಪನೆಗಳಿಗೆ ಧ್ವನಿ ನೀಡಿತು’ ಎಂದು ಕಲ್ಪನಾ ಕನ್ನಬೀರನ್ ವಾದಿಸಿದರು. (6) ಭಾರತೀಯ ಸಂವಿಧಾನವನ್ನು ಪ್ರೊ. ಉಪೇಂದ್ರ ಬಕ್ಷಿ ಹೀಗೆ ಬಣ್ಣಿಸುತ್ತಾರೆ; ’ಆಡಳಿತ ವ್ಯವಸ್ಥೆ, ಸಾಮಾಜಿಕ ಅಭಿವೃದ್ಧಿ, ಹಕ್ಕುಗಳು ಮತ್ತು ನ್ಯಾಯದ ಅರಿಕೆ, ಈ ನಾಲ್ಕು ಪರಿಕಲ್ಪನೆಗಳನ್ನು ಒಂದುಗೂಡಿಸುವ ಆಧುನಿಕ ಜಗತ್ತಿನ ಹಾಗೂ ವಸಾಹತುಶಾಹಿಯ ನಂತರದ ಮೊದಲ ಸಂವಿಧಾನವಾಗಿದೆ’. (7) ರಾಜಕೀಯ ನ್ಯಾಯದ ಪರಿಕಲ್ಪನೆಗಳ ಬಗ್ಗೆ ಭಾರತೀಯ ಸಂವಿಧಾನದ ಮೂರನೆಯ ಭಾಗದಲ್ಲಿ ಬರೆಯಲಾಗಿದೆ. ಅದರಲ್ಲಿ ಮೂಲಭೂತ ಹಕ್ಕುಗಳನ್ನು (ಪ್ರತಿಭಟಿಸುವ ಹಕ್ಕು, ಸಂಘ ರಚಿಸುವ ಹಕ್ಕು, ಅಭಿವ್ಯಕ್ತಿ ಸ್ವಾತಂತ್ರ್ಯ ಇತ್ಯಾದಿ) ಉಲ್ಲೇಖಿಸಲಾಗಿದೆ ಹಾಗೂ ಸಾಮಾಜಿಕ-ಆರ್ಥಿಕ ನ್ಯಾಯದ ತತ್ವಗಳನ್ನು ನಾಲ್ಕನೆಯ ಭಾಗದಲ್ಲಿ ಉಲ್ಲೇಖಿಸಲಾಗಿದೆ, ಅವುಗಳನ್ನು ಡಿರೆಕ್ಟಿವ್ ಪ್ರಿನ್ಸಿಪಲ್ಸ್ ಆಫ್ ಸ್ಟೇಟ್ ಪಾಲಿಸಿ (ರಾಜ್ಯ ನೀತಿಗಳ ನಿರ್ದೇಶಕ ತತ್ವಗಳು) ಎಂದು ಕರೆಯಲಾಗಿದೆ, ಅದರ ಅಡಿಯಲ್ಲಿ ಜೀವನೋಪಾಯದ ಹಕ್ಕುಗಳು, ಸಮಾನ ವೇತನದ ಹಕ್ಕು, ಶಿಕ್ಷಣದ ಹಕ್ಕುಗಳನ್ನು ಉಲ್ಲೇಖಿಸಲಾಗಿದೆ. ಒಂದು ಬಲವಾದ ಸಮಾಜವಾದಿ ಪ್ರಭಾವವನ್ನು ಹೊಂದಿರುವ ನಿರ್ದೇಶಕ ತತ್ವಗಳು ಸಾಮಾಜಿಕ ವಸ್ತುಗಳ ಸಾಮಾಜಿಕ ಬಳಕೆ ಮತ್ತು ಒಡೆತನವನ್ನು ಖಾತ್ರಿಪಡಿಸುವ ಅನೇಕ ಕ್ರಮಗಳನ್ನು ಒಳಗೊಂಡಿದೆ, ಉದಾಹರಣೆಗೆ.

1. ಸಮುದಾಯಕ್ಕೆ ಸೇರಿದ ವಸ್ತು ಸಂಪನ್ಮೂಲಗಳ ನಿಯಂತ್ರಣ ಮತ್ತು ಒಡೆತನವು ಎಲ್ಲರ ಸಾಮಾನ್ಯ ಒಳಿತಿಗಾಗಿ ಹಂಚಿಕೆಯಾಗಬೇಕು; (8)

2. ಸಂಪತ್ತು ಹಾಗೂ ಉತ್ಪಾದನಾ ಸಾಮರ್ಥ್ಯ ಒಂದೆಡೆ ಕೇಂದ್ರೀಕೃತವಾಗದಂತೆ ಹಾಗೂ ಸಾಮಾನ್ಯ ಒಳಿತಿಗೆ ಧಕ್ಕೆಯಾಗುವಂತಹ ಉತ್ಪಾದನೆಗೆ ಕಾರಣವಾಗದೇ ಇರುವಂತಹ ಆರ್ಥಿಕ ವ್ಯವಸ್ಥೆಯ ನಿರ್ವಹಣೆ; (9)

3. ಉದ್ಯಮಗಳ, ಸಂಸ್ಥೆಗಳ ಅಥವಾ ಸಂಘಟನೆಗಳ ನಿರ್ವಹಣೆಯಲ್ಲಿ ಕಾರ್ಮಿಕರ ಪಾಲ್ಗೊಳ್ಳುವಿಕೆ; (10)

ಹಾಗಾಗಿ, ನ್ಯಾಯ ಎಂದರೇನು ಹಾಗೂ ಅದನ್ನು ಸಾಧಿಸುವುದು ಹೇಗೆ ಎಂಬುದರ ವ್ಯಾಖ್ಯಾನ ಮತ್ತು ವಿವರಣೆ ಒಂದು ಅಮೂರ್ತವಾದ ರಾಜಕೀಯ ಅಭಿವ್ಯಕ್ತಿ ಆಗಿರದೇ, ಭಾರತೀಯ ಸಂವಿಧಾನದಲ್ಲಿ ಅದೊಂದು ನಿರ್ದಿಷ್ಟವಾದ ಗುರಿಯಾಗಿದೆ. ಸಂವಿಧಾನದ ಸಮಾಜವಾದಿ ನಿಲುವುಗಳನ್ನು ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ನ್ಯಾಯವನ್ನು ಪಡೆದುಕೊಳ್ಳಲು ಇರುವ ದಾರಿಗಳೆಂದು ಪರಿಗಣಿಸಲಾಗಿದೆ. (11)

ಭಾರತೀಯ ಸಂದರ್ಭದಲ್ಲಿ, ಸಮಾನ ಹಕ್ಕುಗಳನ್ನು ಖಾತ್ರಿಪಡಿಸುವ ಸಾಮೂಹಿಕ ಜೀವನವು ಸಾಂವಿಧಾನಿಕ ಪ್ರಜಾಪ್ರಭುತ್ವದ ಒಂದು ಆಯಾಮ ಎಂಬುದನ್ನು ಪ್ರಗತಿಯಲ್ಲಿರುವ ಕೆಲಸ ಎಂದಷ್ಟೇ ಹೇಳಬಹುದಾಗಿದೆ. (12) ಡಾ. ಅಮರ್ತ್ಯ ಸೆನ್ ಅವರು ಸಾಮಾಜಿಕ ನ್ಯಾಯದ ಯೋಜನೆಯನ್ನು ನೋಡುವ ಪರ್ಯಾಯ ದಾರಿಯನ್ನು ಮುಂದಿಡುತ್ತಾರೆ; ಅದನ್ನು ಬೈನರಿಯಲ್ಲಿ, ಸಾಧಿಸಿದ್ದೇವೆಯೇ ಅಥವಾ ಇಲ್ಲವೇ ಎಂದು ನೋಡದೇ, ಅದರ ಬದಲಿಗೆ ನಿರಂತರತೆ ಹಾಗೂ ಪ್ರಮಾಣದ ಪರಿಭಾಷೆಯಲ್ಲಿ ಪರಿಶೀಲಿಸುತ್ತಾರೆ. (13) ಈ ಪ್ರಬಂಧದಲ್ಲಿ, ಭಾರತದಲ್ಲಿ ನ್ಯಾಯದ ಸಾಂವಿಧಾನಿಕ ಭರವಸೆಯನ್ನು ಪೂರ್ಣಗೊಳಿಸುವಲ್ಲಿ ಯಾವ ಮಟ್ಟಕ್ಕೆ ಯಶಸ್ವಿಯಾಗಿದ್ದೇವೆ ಎಂಬುದನ್ನು ಪರಿಶೀಲಿಸುತ್ತಿದ್ದೇನೆ.

ಸಾಮಾಜಿಕ-ಆರ್ಥಿಕ ನ್ಯಾಯ

ಸಾಮಾಜಿಕ ನ್ಯಾಯ ಎಂಬುದು ಅನಾನುಕೂಲಕರ ಸ್ಥಾನದಲ್ಲಿರುವವರ ಬವಣೆ-ನೋವುಗಳನ್ನು ತಗ್ಗಿಸಲು ಹಾಗೂ ಅವರ ಸಾಮಾಜಿಕ ಅಂಗವಿಕಲತೆಯನ್ನು ಕೊನೆಗಾಣಿಸಿ, ಒಬ್ಬ ವ್ಯಕ್ತಿಯು ಘನತೆಯಿಂದ ಜೀವಿಸಲು ಬೇಕಾದ ಸಮಾನತೆಯ ಮಟ್ಟಕ್ಕೆ ಕೊಂಡೊಯ್ಯಲು ಇರುವ ಸಾಧನವಾಗಿದೆ. ಅದು ಪ್ರತಿಯೊಬ್ಬ ನಾಗರಿಕನ ಕ್ರಮಬದ್ಧವಾದ ಬೆಳವಣಿಗೆ ಮತ್ತು ವ್ಯಕ್ತಿತ್ವದ ಅಭಿವೃದ್ಧಿಗೆ ಅಗತ್ಯವಿರುವ ಹಲವಾರು ತತ್ವಗಳನ್ನು ಒಳಗೊಂಡಿರುತ್ತದೆ. (14) ಆರ್ಥಿಕ ನ್ಯಾಯ ಎಂದರೆ, ಜನರ ನಡುವಿನ ಆರ್ಥಿಕ ಅಸಮಾನತೆಗಳಿಗೆ ಕಾರಣವಾಗುವ ಆರ್ಥಿಕ ಪರಿಸ್ಥಿತಿಗಳನ್ನು ಅಂತಿಮವಾಗಿ ನಿರ್ಮೂಲನೆ ಮಾಡುವುದೇ ಆಗಿದೆ. ಅದು ಸ್ಥಾನಮಾನದ ಸಮಾನತೆಯನ್ನು ಅರ್ಥಪೂರ್ಣವಾಗಿಸುತ್ತದೆ ಹಾಗೂ ಅವಕಾಶಗಳ ಅಸಮಾನತೆಗಳನ್ನು ತೆಗೆದುಹಾಕಿ ಜೀವನವನ್ನು ಜೀವಿಸಲು ಯೋಗ್ಯವಾಗಿಸುತ್ತದೆ.

ಶ್ರಮದ ಗುತ್ತಿಗೆ

ಗುತ್ತಿಗೆ ಕಾರ್ಮಿಕ (ನಿಯಂತ್ರಣ ಮತ್ತು ನಿರ್ಮೂಲನೆ) ಕಾಯಿದೆ, 1970 (ಸಿಎಲ್‌ಆರ್‌ಎ ಆಕ್ಟ್, 1970), ಈ ಕಾಯಿದೆಯನ್ನು ಎಲ್ಲೆಲ್ಲಿ ಸಾಧ್ಯವೋ, ಅಲ್ಲಿ ಗುತ್ತಿಗೆ ಕಾರ್ಮಿಕ ಪದ್ಧತಿಯನ್ನು ನಿರ್ಮೂಲನೆ ಮಾಡುವ ಹಾಗೂ ಇತರ ಕಡೆ ಅದನ್ನು ನಿಯಂತ್ರಿಸುವ ಉದ್ದೇಶದಿಂದ ತರಲಾಗಿತ್ತು. ಗುತ್ತಿಗೆ ಕಾರ್ಮಿಕ ಪದ್ಧತಿಯಲ್ಲಿ, ಕೆಲಸವನ್ನು ಉಪಗುತ್ತಿಗೆ ನೀಡಿ, ಅದರಿಂದ ಕಾರ್ಮಿಕ-ಮಾಲೀಕರ ಸಂಬಂಧವನ್ನು ತಪ್ಪಿಸಲು ಹಾಗೂ ಕಾರ್ಮಿಕರ ಬಗೆಗಿನ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಸಾಧನವನ್ನಾಗಿ ಬಳಸಲಾಗಿತ್ತು. ಇದನ್ನು ಬಳಸಿಕೊಳ್ಳುವ ವಿಧಾನ ನೋಡಿದರೆ, ಗುತ್ತಿಗೆ ಕಾರ್ಮಿಕ ಪದ್ಧತಿಯು ಜೀತ ಪದ್ಧತಿಗೆ ಹೋಲುತ್ತದೆ ಹಾಗೂ ಕಾರ್ಮಿಕರಿಗೆ ಸಾಮಾಜಿಕ ಘನತೆ, ಸಮಾನತೆ, ಶಿಕ್ಷಣದ ಹಕ್ಕು, ವಸತಿ ಹಾಗೂ ಉದ್ಯೋಗ ಭದ್ರತೆಯನ್ನು ನಿರಾಕರಿಸುತ್ತದೆ. ಕಾರ್ಮಿಕರನ್ನು ಗುತ್ತಿಗೆ ಪದ್ಧತಿಯಲ್ಲಿ ಕೆಲಸ ಮಾಡಿಸಿಕೊಳ್ಳುವುದು ಉದಾರೀಕರಣದ ನಂತರ ಹೆಚ್ಚಾಗಿದೆ ಹಾಗೂ ವರ್ಷಗಳು ಕಳೆಯುತ್ತಿದ್ದಂತೆ ಉದ್ದೇಶಪೂರ್ವಕವಾಗಿ ಕೈಗೊಂಡ ನೀತಿ ನಿರ್ಣಯಗಳು ಗುತ್ತಿಗೆ ಪದ್ಧತಿಯನ್ನು ನಿರ್ಮೂಲನೆ ಮಾಡುವ ಬದಲಿಗೆ ಈ ವ್ಯವಸ್ಥೆಯನ್ನು ಇನ್ನಷ್ಟು ಗಟ್ಟಿಗೊಳಿಸಿವೆ.

ಅಂಕಿಅಂಶಗಳು ಹೇಳುವುದೇನೆಂದರೆ, ಔಪಚಾರಿಕ ವಲಯದಲ್ಲಿ ಸುಮಾರು 9 ಕೋಟಿ 20 ಲಕ್ಷ ಜನರು ದುಡಿಯುತ್ತಿದ್ದಾರೆ. ಅದರಲ್ಲಿ ಅರ್ಧದಷ್ಟು ಜನರು ಅನೌಪಚಾರಿಕ ಕಾರ್ಮಿಕರಾಗಿ ನೇಮಕಗೊಂಡಿದ್ದಾರೆ. (15) ಈ ಅನೌಪಚಾರಿಕ ಕಾರ್ಮಿಕರಲ್ಲಿ ಅರ್ಧಕ್ಕಿಂತ ಹೆಚ್ಚು ಜನರು ದಲಿತರ ಅಥವಾ ಇತರ ಅಂಚಿನಲ್ಲಿರುವ ಕಡೆಗಣಿತ ಸಮುದಾಯಗಳಿಂದ ಬಂದವರಾಗಿರುತ್ತಾರೆ. ಸಿಎಲ್‌ಆರ್‌ಎ ಆಕ್ಟ್‌ನ ರಚನೆ, ಅದರ ಅನುಷ್ಠಾನ ಮತ್ತು ಕಾನೂನಾತ್ಮಕ ವ್ಯಾಖ್ಯಾನಗಳು ಗುತ್ತಿಗೆ ಕಾರ್ಮಿಕ ವ್ಯವಸ್ಥೆಯನ್ನು ನಿರ್ಮೂಲನೆ ಮಾಡುವಲ್ಲಿ ವಿಫಲವಾಗಿದ್ದಷ್ಟೇ ಅಲ್ಲದೇ, ವಾಸ್ತವದಲ್ಲಿ ಅದರ ಅಸ್ತಿತ್ವವನ್ನು ನ್ಯಾಯಸಮ್ಮತಗೊಳಿಸಿವೆ; ಯಾವ ಪ್ರಮಾಣಕ್ಕೆಂದರೆ, ಇಂದು ಒಂದು ಹೊಸ ಕಾನೂನಾತ್ಮಕ ಚೌಕಟ್ಟು- ಔದ್ಯೋಗಿಕ ಸುರಕ್ಷತೆ ಮತ್ತು ಆರೋಗ್ಯ ಸಂಹಿತೆ, 2020, ಅಸ್ತಿತ್ವಕ್ಕೆ ಬರತೊಡಗಿದೆ. ಅದರಲ್ಲಿ ಗುತ್ತಿಗೆ ಕಾರ್ಮಿಕ ಪದ್ಧತಿಯನ್ನು ಕೆಟ್ಟ ಪದ್ಧತಿ ಎಂದು ಗುರುತಿಸುವುದೇ ಇಲ್ಲ, ಅದರ ಬದಲಿಗೆ ನಿಯತ, ಪರ್ಮನೆಂಟ್ ಕೆಲಸವನ್ನು ನಿರ್ಮೂಲನೆ ಮಾಡಿದಂತಾಗಿದೆ. (16)

ಡಾ. ಕಾಲಿನ್ ಗೊನ್ಸಾಲ್ವೆಸ್

ಹೆಸರಾಂತ ಮಾನವ ಹಕ್ಕುಗಳ ವಕೀಲ ಡಾ. ಕಾಲಿನ್ ಗೊನ್ಸಾಲ್ವೆಸ್ (17) ಅವರು ಸುಪ್ರೀಮ್ ಕೋರ್ಟ್ ಕೂಡ, ಆರ್‌ಕೆ ಪಂಡಾ ವರ್ಸಸ್ ಎಸ್‌ಎಐಎಲ್ ಪ್ರಕರಣದಲ್ಲಿ ಕಾರ್ಮಿಕರ ಘನತೆಯ ಹಕ್ಕುಗಳ ಹೋರಾಟಕ್ಕೆ ದ್ರೋಹ ಬಗೆಯಿತು ಎಂಬುದರ ಬಗ್ಗೆ ಮಾತನಾಡಿದ್ದಾರೆ. ಈ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯವು ಒಂದು ಆದೇಶವನ್ನು ಜಾರಿಗೊಳಿಸಿತು. ಅದರ ಪ್ರಕಾರ ಗುತ್ತಿಗೆ ಕಾರ್ಮಿಕ ಪದ್ಧತಿಯ ನಿರ್ಮೂಲನೆ ಕಾಯಿದೆಯಿಂದ, ಪರಿಣಾಮ ಎದುರಿಸುವ ಕಾರ್ಮಿಕರನ್ನು ಮೂಲ ಮಾಲಿಕರು ತಮ್ಮ ಸಂಸ್ಥೆಗೆ ವಾಪಸ್ಸು ಕೆಲಸಕ್ಕೆ ಸೇರಿಕೊಳ್ಳುವ ಜವಾಬ್ದಾರಿ ಹೊಂದಿರುತ್ತಾರೆ ಎಂದಿತ್ತು. ಆದರೆ ಇದಕ್ಕಿಂತ ದೊಡ್ಡದಾದ ಸರ್ವೋಚ್ಚ ನ್ಯಾಯಾಲಯದ ಪೀಠವು ಗುತ್ತಿಗೆ ಕಾರ್ಮಿಕ ಪದ್ಧತಿಯನ್ನು ನಿರ್ಮೂಲನೆ ಮಾಡುವುದರಿಂದ ದುಡಿಮೆಯನ್ನೇ ನಿರ್ಮೂಲನೆ ಮಾಡಲು ಕಾರಣವಾಗುತ್ತದೆ ಎಂದು ಹೇಳುತ್ತ, ಮೇಲಿನ ತೀರ್ಪನ್ನು ತಳ್ಳಿಹಾಕಿತು. ಈ ತೀರ್ಪಿನ ಕಾರಣದಿಂದ, ನಗರೀಕರಣ ಮತ್ತು ಬಂಡವಾಳಶಾಹಿ ನೀತಿ ರಚನೆಯ ನಂತರದಲ್ಲಿ ಹುಟ್ಟಿಕೊಂಡ ಹಲವಾರು ವಿಧದ ಗುಲಾಮಗಿರಿಗೆ ದೇಶದ ಲಕ್ಷಾಂತರ ಕಾರ್ಮಿಕರನ್ನು ತಳ್ಳಿದಂತಾಯಿತು.

ಅದೇ ಸಮಯದಲ್ಲಿ ಈ ವ್ಯವಸ್ಥೆಯು ಸಾಮಾಜಿಕ ದಬ್ಬಾಳಿಕೆಗೂ ಕಾರಣವಾಗಿದೆ. ಉದಾಹರಣೆಗೆ, ಹೊಸದಾಗಿ ಅನುಷ್ಠಾನಗೊಳಿಸಲಾದ ಕಾರ್ಮಿಕ ಸಂಹಿತೆಗಳು ಇನ್ನಷ್ಟು ಶೋಷಣೆಯ ಬಗೆಗಳನ್ನು ನ್ಯಾಯಸಮ್ಮತಗೊಳಿಸುತ್ತವೆ ಹಾಗೂ ಕಾನೂನುಬದ್ಧಗೊಳಿಸುತ್ತವೆ. ಈ ಸಂಹಿತೆಯ ಅಡಿಯಲ್ಲಿ, ಆಯಾ ಉದ್ಯಮ ’ಕೋರ್ ಆಕ್ಟಿವಿಟಿ’ ಅಂದರೆ ಉದ್ಯಮದ ’ಮೂಲ ಕೆಲಸಗಳ’ ಅಡಿಯಲ್ಲಿ ಬಾರದ ಕೆಲಸಗಳಿಗೆ ಗುತ್ತಿಗೆ ಕಾರ್ಮಿಕರನ್ನು ನೇಮಕ ಮಾಡುವುದಕ್ಕೆ ಅನುಮತಿ ನೀಡಲಾಗಿದೆ. ಕಸ ಗುಡಿಸುವ, ಸ್ವಚ್ಛಗೊಳಿಸುವ, ತ್ಯಾಜ್ಯ ವಸ್ತು ವಿಲೇವಾರಿ, ಕ್ಯಾಂಟೀನ್ ಸೇವೆಗಳು, ತೋಟ ನಿರ್ವಹಣೆ, ನಿರ್ಮಾಣ ಕಾರ್ಯ, ಇತರ ನಿರ್ವಹಣೆಯ ಕೆಲಸ ಮುಂತಾದವುಗಳು ’ಕೋರ್ ಆಕ್ಟಿವಿಟಿ’ ಆಗುವುದಿಲ್ಲ, ಹಾಗಾಗಿ ಅವುಗಳನ್ನು ಗುತ್ತಿಗೆ ಕಾರ್ಮಿಕರು ಮಾಡಬಹುದು. ಆದರೆ, ಇಲ್ಲಿ ಸ್ಪಷ್ಟವಾಗುವ ಅಂಶವೇನೆಂದರೆ, ಈ ಎಲ್ಲ ಕೆಲಸಗಳು ದೈಹಿಕ ದುಡಿಮೆಯನ್ನು ಒಳಗೊಂಡಿರುತ್ತವೆ ಹಾಗೂ ಬಹುತೇಕ ಸಮಯದಲ್ಲಿ ಇವು ಐತಿಹಾಸಿಕವಾಗಿ ಶೋಷಿತ ಸಮುದಾಯಗಳು ಮಾಡುವ ಜಾತಿ ಆಧಾರಿತ ಕೆಲಸಗಳಾಗಿರುತ್ತವೆ.

ಇದನ್ನೂ ಓದಿ: ಸಿಎಂ ನಿವಾಸ ನವೀಕರಣದ ವಿವಾದ: ಸುಳ್ಳು ತನಿಖೆ ನಡೆಸಿದ್ದಕ್ಕಾಗಿ ಪ್ರಧಾನಿ ರಾಜೀನಾಮೆ ನೀಡುತ್ತಾರಾ?; ಕೇಜ್ರಿವಾಲ್

ಇದರ ಪರಿಣಾಮವಾಗಿ, ಗುತ್ತಿಗೆ ಕಾರ್ಮಿಕರು ಸಮಾನ ಮತ್ತು ಸಮಯಕ್ಕೆ ಸರಿಯಾದ ವೇತನ, ಘನತೆಯುಳ್ಳ ಕೆಲಸದ ಪರಿಸರ, ಪರಿಸ್ಥಿತಿ, ರಜೆ, ಆರೋಗ್ಯ ಸೇವೆ, ಶಿಕ್ಷಣಕ್ಕಾಗಿ ಅವಕಾಶ, ಇವೆಲ್ಲವುಗಳಿಗಾಗಿ ನಿರಂತರ ಹೋರಾಟ ಮಾಡಬೇಕಾಗುತ್ತದೆ. ಸಾಮಾಜಿಕ ಚಲನೆಗೆ ಸಾಧ್ಯತೆಯೇ ಇಲ್ಲದಂತಹ ಬಡತನಕ್ಕೆ ಜನರನ್ನು ದೂಡಲು ವಿನ್ಯಾಸಗೊಳಿಸಿದ ವ್ಯವಸ್ಥೆ ಇದಾಗಿದೆ. ಯಾವಾಗ ವ್ಯವಸ್ಥೆಯು ನ್ಯಾಯದ ದಿಕ್ಕಿನಲ್ಲಿ ಚಲಿಸುವುದಿಲ್ಲವೋ, ಆಗ ಸಮಾಜದ ದೊಡ್ಡ ಜನಸಮೂಹದ ಶೋಷಣೆಯು ಆಕಸ್ಮಿಕವಾಗಿರದೆ, ಅದು ಸಾಂಸ್ಥಿಕವಾದ ಶೋಷಣೆಯಾಗುತ್ತದೆ.

ಕಾನೂನಿನ ಹೊರತಾಗಿಯೂ ಜಾತಿ ಅಸ್ತಿತ್ವದಲ್ಲಿ ಏಕಿದೆ?

ಭಾರತದಲ್ಲಿ ಜಾತಿಯೇ ಕಾನೂನು ಎಂದು ಕೆ. ಬಾಲಗೋಪಾಲ್ ಅವರು ವಾದಿಸಿದ್ದರು. ಸಂವಿಧಾನವನ್ನು ರಚಿಸುವ ಸಮಯದಲ್ಲಿ ಡಾ. ಅಂಬೇಡ್ಕರ್ ಅವರು ಕಾನೂನು ವ್ಯವಸ್ಥೆಯ ಮೂಲಕ ಜಾತಿಯ ಕಾನೂನಾತ್ಮಕ ಮತ್ತು ನೈತಿಕ ಚೌಕಟ್ಟನ್ನು ತೆಗೆದುಹಾಕುವ ಒಂದು ಅವಕಾಶವನ್ನು ಮನಗಂಡಿದ್ದರು. ಪರಿಣಾಮವಾಗಿ, ಅಸ್ಪೃಶ್ಯತೆ ಆಚರಣೆಯನ್ನು ಅಸಂವಿಧಾನಿಕ ಎಂದು ಪರಿಗಣಿಸುವ ಅನುಚ್ಛೇದ 17ಅನ್ನು ಪರಿಚಯಿಸಿದರು. ಅಂಬೇಡ್ಕರ್ ಅವರು ಜಾತಿಹಿಂಸೆಯ ಇತರ ವಿಧಾನಗಳ ಆಚರಣೆಗಳು ಕ್ರಿಮಿನಲ್ ಆಫೆನ್ಸ್ ಆಗಬೇಕು ಎಂದು ಬಯಸಿದ್ದರು, ಹಾಗಾಗಿ ಬಹುಸಂಖ್ಯಾತ ವಿರೋಧಿಯಾದ ಅಸ್ಪೃಶ್ಯತೆ (ಅಪರಾಧಗಳು) ಕಾಯಿದೆ, 1955ಅನ್ನು ಜಾರಿಗೊಳಿಸಲಾಯಿತು. ಅದನ್ನು ನಂತರ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ ಆಕ್ಟ್, 1955 ಎಂದು ಮರುನಾಮಕರಣ ಮಾಡಲಾಯಿತು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆಗಟ್ಟುವಿಕೆ) ಕಾಯಿದೆ, 1989ಅನ್ನು ಪ.ಜಾ. ಮತ್ತು ಪ.ಪಂ. ಸಮುದಾಯಗಳ ವಿರುದ್ಧ ಜಾತಿಯಾಧಾರಿತ ಹಿಂಸೆಯನ್ನು ತಡೆಗಟ್ಟುವ ನಿರ್ದಿಷ್ಟ ಉದ್ದೇಶದಿಂದ ಜಾರಿಗೊಳಿಸಲಾಯಿತು.

ಆದರೆ, 2018 ಮತ್ತು 2020ರ ಮಧ್ಯದ ಅವಧಿಯಲ್ಲಿ ಪ.ಜಾ. ಮತ್ತು ಪ.ಪಂ. ಸಮುದಾಯಗಳ ವಿರುದ್ಧ ಅಪರಾಧಗಳ ಸಂಖ್ಯೆಗಳು ನಿರಂತರವಾಗಿ ಹೆಚ್ಚಳವಾಗಿವೆ. ಇದು ಗೃಹ ಇಲಾಖೆಯ ಸಚಿವಾಲಯದ ಅಂಕಿಅಂಶಗಳಿಂದಲೇ ಬೆಳಕಿಗೆ ಬಂದಿದೆ. (18) 2022ರಲ್ಲಿ ಕರ್ನಾಟಕದ ರಾಜ್ಯವೊಂದರಲ್ಲೇ 2018ಕ್ಕೆ ಹೋಲಿಸಿದಾಗ ಪ.ಜಾ. ಮತ್ತು ಪ.ಪಂ.ಗಳ ವಿರುದ್ಧ ದೌರ್ಜನ್ಯಗಳ ಪ್ರಮಾಣದಲ್ಲಿ 41% ಹೆಚ್ಚಳ (19) ಕಂಡಿದೆ. ಇದು ಸಮಾಜದಲ್ಲಿ ಜಾತಿ ಎಂಬುದು ಒಂದು ಕಾನೂನಾತ್ಮಕ ಸ್ಥಾನಮಾನವಾಗಿ ಮುಂದುವರಿದಿದೆ ಎಂದು ತೋರಿಸುತ್ತದೆ ಹಾಗೂ ಜಾತಿ ಆಧಾರಿತ ತಾರತಮ್ಯ ನಿರ್ಬಂಧಿಸುವ ಕಾನೂನುಗಳು ಸಾಮಾಜಿಕ ನ್ಯಾಯಸಮ್ಮತೆಯನ್ನು ಪಡೆದಿಲ್ಲ ಎಂಬುದನ್ನೂ ತೋರಿಸುತ್ತವೆ. (20)

ಕೆ. ಬಾಲಗೋಪಾಲ್

ಈ ಸಮುದಾಯಗಳನ್ನು ರಕ್ಷಿಸುವಲ್ಲಿ ವಿಫಲವಾಗಿದ್ದಕ್ಕೆ ಹಾಗೂ ಜಾತಿ ದೌರ್ಜನ್ಯಗಳ ಸಂಖ್ಯೆ ಕಡಿಮೆ ಮಾಡುವಲ್ಲಿ ಆದ ವಿಫಲತೆಗೆ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣದ ಸಚಿವಾಲಯದ ಸ್ಥಾಯಿ (ಸ್ಟ್ಯಾಂಡಿಂಗ್ ಕಮಿಟಿ) ಸಮಿತಿಯು ಈ ಕೆಳಗಿನ ಕಾರಣಗಳನ್ನು ನೀಡಿದೆ. (21)

ಅ) ದೌರ್ಜನ್ಯಗಳು ಆದ ಸ್ಥಳಕ್ಕೆ ಕೂಡಲೇ ಭೇಟಿ ನೀಡದೇ ಇರುವುದು

ಬ) ಎಫ್‌ಐಆರ್ ದಾಖಲಿಸುವಲ್ಲಿ ವಿಳಂಬ ಅಥವಾ ಕಾಯಿದೆಯ ಸಮರ್ಪಕ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸದೇ ಇರುವುದು

ಕ) ಚಾರ್ಜ್‌ಶೀಟ್ ದಾಖಲಿಸುವುದರಲ್ಲಿ ವಿಳಂಬ

ಡ) ಆರೋಪಿ ವ್ಯಕ್ತಿಗಳನ್ನು ಕೂಡಲೇ ಬಂಧಿಸಲು ಹಿಂಜರಿಕೆ

ಇ) ನ್ಯಾಯಾಲಯಗಳು ಆರೋಪಿಗಳನ್ನು ನಿಜವಾದ ಆಧಾರದ ಬದಲಿಗೆ ಪ್ರೊಸೀಜರಲ್ (ಕಾರ್ಯವ್ಯತ್ಯಯ) ಆಧಾರದ ಮೇಲೆ ಬಿಡುಗಡೆ ಮಾಡುವುದು

ಫ) ಸಮಯಕ್ಕೆ ಸರಿಯಾಗಿ ಪರಿಹಾರ ನೀಡದೇ ಇರುವುದು

ಈ ಬಹುಸಂಖ್ಯಾತ ವಿರೋಧಿ ಕಾಯಿದೆಗಳನ್ನು ಅನುಷ್ಠಾನಗೊಳಿಸುವಲ್ಲಿ ಹೇಗೆ ಕಾರ್ಯವಿಧಾನಗಳನ್ನು ಉಲ್ಲಂಘಿಸಲಾಗಿದೆ ಎಂಬುದು ಈ ಕಾಯ್ದೆಗಳ ಅನುಷ್ಠಾನದಲ್ಲಿ ಎದುರಾಗುತ್ತಿರುವ ಸಮಸ್ಯೆಯ ಸೂಚನೆಯಾಗಿದೆ.

ನ್ಯಾಯಾಂಗ ವ್ಯವಸ್ಥೆಗೂ ಜಾತೀಯತೆಯ ಮತ್ತು ಪುರುಷಪ್ರಾಧಾನ್ಯ ವ್ಯವಸ್ಥೆಯ ಪೂರ್ವಾಗ್ರಹಪೀಡಿತ ನಿಲುವುಗಳಿಂದ ಮುಕ್ತಿ ಪಡೆಯಲು ಸಾಧ್ಯವಾಗಿಲ್ಲ. ವಿಶಾಖ ವರ್ಸಸ್ ಸ್ಟೇಟ್ ಆಫ್ ರಾಜಸ್ಥಾನ ಪ್ರಕರಣದಲ್ಲಿನ ಈ ಒಂದು ತೀರ್ಪನ್ನು ಗಮನಿಸಬಹುದು; ಭನವಾರಿ ದೇವಿ ಎಂಬ ಮಹಿಳೆಯು ಬಾಲ್ಯವಿವಾಹ ಮತ್ತು ಮಹಿಳೆಯರ ಕಲ್ಯಾಣಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಸರಕಾರದೊಂದಿಗೆ ಕೆಲಸ ಮಾಡುತ್ತಿರುತ್ತಾರೆ. ತನ್ನ ಕೆಲಸದ ಭಾಗವಾಗಿ ಭನವಾರಿ ದೇವಿಯು ಒಂದು ಪ್ರಬಲ ಜಾತಿಗೆ ಸೇರಿದ ಕುಟುಂಬದ ಶಿಶುವಿವಾಹವನ್ನು ತಪ್ಪಿಸುತ್ತಾರೆ. ಇದರಿಂದ ಕ್ರೋಧಗೊಂಡ ಆ ಪ್ರಬಲ ಜಾತಿಯ ಕುಟುಂಬದವರು 1992ರ ಡಿಸೆಂಬರ್ ತಿಂಗಳಲ್ಲಿ ಭನವಾರಿ ದೇವಿ ಮತ್ತು ಆಕೆಯ ಗಂಡನ ಮೇಲೆ ಹಲ್ಲೆ ನಡೆಸುತ್ತಾರೆ. ಭನವಾರಿ ದೇವಿಯ ಗಂಡನನ್ನು ಥಳಿಸಲಾಗುತ್ತದೆ ಹಾಗೂ ಭನವಾರಿ ದೇವಿಯ ಮೇಲೆ ಅಮಾನುಷವಾಗಿ ಸಾಮೂಹಿಕ ಬಲಾತ್ಕಾರ ಎಸಗಲಾಗುತ್ತದೆ. ಆದರೆ ಆಘಾತಕಾರಿ ಅಂಶವೆಂದರೆ ರಾಜಸ್ಥಾನದ ಉಚ್ಚ ನ್ಯಾಯಾಲಯವು ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸುತ್ತದೆ, ಅದಕ್ಕೆ ಅವರು ನೀಡಿದ ಕಾರಣ: ಮೇಲ್ಜಾತಿಗೆ ಸೇರಿದ ಗಂಡಸರು ಒಬ್ಬ ’ಕೆಳಜಾತಿ’ಗೆ ಸೇರಿದ ಮಹಿಳೆಯ ಬಲಾತ್ಕಾರ ಮಾಡಲಾರರು, ಏಕೆಂದರೆ ಅವರು ಆ ಮಹಿಳೆಯನ್ನು ಮುಟ್ಟಲೂ ಬಯಸುವುದಿಲ್ಲ ಎಂದು. ಸರ್ವೋಚ್ಚ ನ್ಯಾಯಾಲಯದಲ್ಲಿ ಭನವಾರಿ ದೇವಿಯ ಮನವಿ ಇನ್ನೂ ಇತ್ಯರ್ಥವಾಗಬೇಕಿದೆ.

ಪ್ರಭುತ್ವದ ಕಾನೂನು ಸಮಾಜದಲ್ಲಿರುವ ಜಾತಿಯತೆಯ ತಡೆಗಟ್ಟಲು ಒಂದು ಆರಂಭಿಕ ಹಂತವಾಗಿದ್ದರೂ, ಅದಕ್ಕೆ ತನ್ನದೇ ಆದ ಮಿತಿಗಳಿವೆ. ಡಾ. ಬಿ.ಆರ್. ಅಂಬೇಡ್ಕರ್ ಅವರು ಈ ಮುಂಚೆಯೇ, ಮುಂದೊದಗಲಿರುವ ಸಮಸ್ಯೆಗಳನ್ನು ಗುರುತಿಸಿ ಈ ರೀತಿ ವಾದಿಸಿದ್ದರು: ’ಸಮಾಜವು ಅನುವು ಮಾಡಿಕೊಟ್ಟ ಹಕ್ಕುಗಳನ್ನು ಮಾತ್ರ ಹಕ್ಕುಗಳೆಂದು ಕರೆಯಬಹುದು’; ಮುಂದುವರಿದು, ’ಹಕ್ಕುಗಳು ಕಾನೂನಿಂದ ರಕ್ಷಿಸಲ್ಪಟ್ಟಿಲ್ಲ, ಅದರ ಬದಲಿಗೆ ಸಮಾಜದ ಸಾಮಾಜಿಕ ಮತ್ತು ನೈತಿಕ ಆತ್ಮಸಾಕ್ಷಿಯಿಂದ ಹಕ್ಕುಗಳು ರಕ್ಷಿಸಲ್ಪಡುತ್ತವೆ’ ಒಂದುವೇಳೆ ಸಾಮಾಜಿಕ ಆತ್ಮಸಾಕ್ಷಿಯು, ಕಾನೂನುಗಳು ಅನುಷ್ಠಾನಗೊಳಿಸುವ ಹಕ್ಕುಗಳನ್ನು ಗುರುತಿಸುವಂತಿದ್ದರೆ, ಹಕ್ಕುಗಳು ಸುರಕ್ಷಿತ ಮತ್ತು ಭದ್ರವಾಗಿರುತ್ತವೆ. ಆದರೆ ಒಂದು ವೇಳೆ ಮೂಲಭೂತ ಹಕ್ಕುಗಳನ್ನು ಸಮುದಾಯವು ವಿರೋಧಿಸಿದಾಗ, ಯಾವ ಸಂಸತ್ತು ಆಗಲೀ, ಯಾವ ನ್ಯಾಯಾಂಗ ವ್ಯವಸ್ಥೆ ಆಗಲೀ, ನಿಜವಾದ ಅರ್ಥದಲ್ಲಿ ಆ ಹಕ್ಕುಗಳನ್ನು ಖಾತ್ರಿಪಡಿಸಲು ಆಗುವುದಿಲ್ಲ.’ (22)

ಇಲ್ಲಿ ಕಲಿಕೆ ಎರಡು ಹಂತಗಳಲ್ಲಿದೆ: 1. ಕಾನೂನು, ಇಂದು ಅದು ಇರುವಂತೆ, ಜಾತಿ ಶ್ರೇಣಿಕರಣದ ಅಪಾಯಗಳಿಂದ ಮುಕ್ತವಾದ ಸಾಂವಿಧಾನಿಕ ಸಮಾಜದ ನಮ್ಮ ಆಶಯವನ್ನು ಸೂಚಿಸುತ್ತದೆ. ಆದರೆ ನಾವು, ಕಾಯಿದೆಯ ಅಡಿಯಲ್ಲಿ ನ್ಯಾಯವನ್ನು ಸಾಕಾರಗೊಳಿಸಲು ಆ ಕಾನೂನಿನ ಕಾರ್ಯವಿಧಾನದ ಅಂಶಗಳ ಹೆಚ್ಚು ಕೆಲಸ ಮಾಡಬೇಕಿದೆ.

2. ಕಾನೂನು ರೋಗವನ್ನು ತಡೆಗಟ್ಟುವಲ್ಲಿ ಸಹಾಯ ಮಾಡಬಹುದು, ಆದರೆ ಆ ರೋಗವನ್ನು ಗುಣಪಡಿಸುವುದಿಲ್ಲ. ಹಾಗಾಗಿ, ನಾವೆಲ್ಲ ವ್ಯವಸ್ಥಿತವಾದ ಕಾರ್ಯಕ್ರಮಗಳ ಮೂಲಕ ಸಾಮಾಜಿಕ ಮತ್ತು ನೈತಿಕ ಆತ್ಮಸಾಕ್ಷಿಗೆ ಅಂಬೇಡ್ಕರ್ ಅವರು ಕೊಟ್ಟ ಮನವಿಗಳಿಗೆ ಓಗೊಟ್ಟು, ಅವುಗಳನ್ನು ರೂಢಿಮಾಡಿಕೊಳ್ಳಬೇಕು. ಇತರರ ಮಾನವೀಯತೆಯನ್ನು ಗುರುತಿಸಲು ಮತ್ತು ರಕ್ಷಿಸಲು ಇದೊಂದೇ ಮಾರ್ಗವಾಗಿದೆ.

ನ್ಯಾಯಾಂಗದ ಮತ್ತು ಶಾಸನಗಳ ಆಚೆಗೆ ದಬ್ಬಾಳಿಕೆಯ ರಚನೆಗಳ ವಿರುದ್ಧ ಕೆಲಸ ಮಾಡುವಲ್ಲಿ ಆದ ವಿಫಲತೆಯು ಇಂದು ಜಾತಿಯ ಹಿಡಿತವನ್ನು ಗಟ್ಟಿಗೊಳಿಸಿದೆ. ಇದರಿಂದ ನಾವೇನು ಮಾಡಿದರೂ ಏನು ಆಗುವುದಿಲ್ಲ ಎಂಬ ಸಂಸ್ಕೃತಿ ಬೆಳೆದಿದೆ. ಸಮಾನಾವಕಾಶದ ಮತ್ತು ಭ್ರಾತೃತ್ವದ ಸಮಾಜಕ್ಕೆ ಇದು ಒಡ್ಡಿರುವ ಸವಾಲು ಇನ್ನಷ್ಟು ಕ್ಲಿಷ್ಟವಾಗಿದೆ. ದಲಿತ ಸಂಘರ್ಷ ಸಮಿತಿಯನ್ನು ಹುಟ್ಟುಹಾಕಿದವರಲ್ಲಿ ಒಬ್ಬರಾದ ಕೋಟಿಗಾನಹಳ್ಳಿ ರಾಮಯ್ಯನವರು ಹೀಗೆ ವಾದಿಸುತ್ತಾರೆ, ’ಆಗಿನ ದಿನಗಳಲ್ಲಿ, ದೌರ್ಜನ್ಯಕ್ಕೆ ಕಾರಣಗಳಿರುತ್ತಿದ್ದವು, ಆದರೆ ಈಗ, ದೌರ್ಜನ್ಯದ ಸ್ವರೂಪಗಳು ಬದಲಾಗಿವೆ. ಇಂದು ಒಬ್ಬ ದಲಿತ ಗಡಿಯಾರ ಹಾಕಿಕೊಂಡರೆ ಕೊಲೆಯಾಗುತ್ತಾನೆ, ಒಬ್ಬ ದಲಿತ ಮದುವೆಯ ಮೆರವಣಿಗೆಯಲ್ಲಿ ಪಾಲ್ಗೊಂಡರೆ ಕೊಲೆಯಾಗುತ್ತಾನೆ’. (23) ಪೆರಂದೂರು ಎಂಬ ಊರಿನಲ್ಲಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದಿದ್ದರಿಂದ ಚಿನ್ನದುರೈ ಎಂಬ 17 ವರ್ಷದ ಬಾಲಕನ ಮೇಲೆ ಪ್ರಬಲ ಜಾತಿಗೆ ಸೇರಿದ ಆತನ ಸಹಪಾಠಿಗಳು ಮಾಡಿದ ಮಾರಣಾಂತಿಕ ಹಲ್ಲೆಯು ರಾಮಯ್ಯನವರ ಮಾತುಗಗಳಿಗೆ ಪ್ರಬಲ ಸಾಕ್ಷಿ ಒದಗಿಸುತ್ತದೆ. (24)

ಕೋಟಿಗಾನಹಳ್ಳಿ ರಾಮಯ್ಯ

ಶಿಕ್ಷಣದ ವ್ಯವಸ್ಥೆಯನ್ನು ನೋಡಿದಾಗ ಅಲ್ಲಿಯೂ ನಮಗೆ ಅದೇ ಚಿತ್ರಣ ಕಂಡುಬರುತ್ತದೆ, ಸಂವಿಧಾನದ ಆಶಯವನ್ನು ಸೋಲಿಸುವುದಕ್ಕಾಗಿಯೇ ನಿರಂತರವಾಗಿ ಕೆಲಸ ಮಾಡಿರುವ ಹಲವಾರು ನಿರ್ಣಯಗಳು ಕಳೆದ ಕೆಲವು ವರ್ಷಗಳಲ್ಲಿ ನಮಗೆ ಕಂಡುಬಂದಿವೆ. ಕರ್ನಾಟಕದ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್‌ಗೆ ಸಾಂವಿಧಾನಿಕವಲ್ಲದ ನಿರ್ಬಂಧ ಹೇರಿದ್ದು, ರಾಜ್ಯದಲ್ಲಿ ಮುಸ್ಲಿಂ ಸಮುದಾಯಕ್ಕೆ ಇದ್ದ 4% ಮೀಸಲಾತಿಯನ್ನು ತೆಗೆದುಹಾಕಲು ಮಾಡಿದ ಪ್ರಸ್ತಾಪ, ಅಂಚಿನಲ್ಲಿರುವ ಸಮುದಾಯಗಳಿಗೆ ಇರಬೇಕಾದ ಸಾಮಾಜಿಕ ಚಲನೆಯ ಅವಕಾಶಗಳನ್ನು ಹೊಸಕಿಹಾಕುವ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ, ಇವೆಲ್ಲವುಗಳು ಸಾಮಾಜಿಕ ಅಸಮಾನತೆಗಳನ್ನು ಸೃಷ್ಟಿಸುವ ಹದಗೆಟ್ಟ ಸಾಂಸ್ಥಿಕ ಮಾರ್ಗಗಳು ಆಳವಾಗಿ ಬೆಳೆದಿರುವುದನ್ನು ತೋರಿಸುತ್ತವೆ. ಇದು ಸ್ವತಃ ಸರಕಾರ ಪ್ರಸರಿಸುತ್ತಿರುವ ಅನ್ಯಾಯದ ಒಂದು ಸ್ವರೂಪವಾಗಿದೆ.

ಎಲ್ಲರಿಗೂ ಅನ್ವಯವಾಗುವಂತೆ ’ನ್ಯಾಯದ ತತ್ವ’ವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸದಿದ್ದರೆ, ಶಿಕ್ಷಣ ಮುಂದೆ ದಾರಿಯಿಲ್ಲದ ಸ್ಥಿತಿಗೆ ಬಂದು ನಿಂತುಬಿಡುತ್ತದೆ. (25) ಯಾವಾಗ ದಲಿತರು, ಮುಸ್ಲಿಮರು ಮತ್ತು ಇತರ ಅಂಚಿನಲ್ಲಿರುವ ಸಮುದಾಯದ ಜನರು ತಮ್ಮದೇ ಆದ ಚಿಂತಕರನ್ನು ಹೊಂದುವರೋ, ಆಗ ಮಾತ್ರ ನ್ಯಾಯದ ನಿಜವಾದ ಅರ್ಥವನ್ನು ಸಾಕಾರಗೊಳಿಸಬಹುದು. ಗುಣಮಟ್ಟದ ಶಿಕ್ಷಣಕ್ಕೆ ಎಲ್ಲರಿಗೂ ಅವಕಾಶ ಕಲ್ಪಿಸುವುದು ಹಾಗೂ ಈ ಸಮುದಾಯಗಳ ಕಲ್ಯಾಣಕ್ಕಾಗಿ ದುಡಿಯುವುದು ಸರಕಾರದ ಕರ್ತವ್ಯವಾಗಿದೆ.

ರಾಜಕೀಯ ನ್ಯಾಯ

ಸಾರ್ವತ್ರಿಕ ವಯಸ್ಕ ಮತದಾನದ ಹಕ್ಕು ನಮ್ಮ ಸಂವಿಧಾನದವು ರಾಜಕೀಯ ನ್ಯಾಯವನ್ನು ಎತ್ತಿಹಿಡಿದ ಒಂದು ಚರಿತ್ರಾರ್ಹ ಉದಾಹರಣೆಯಾಗಿದೆ. ಆದರೆ, ನಮ್ಮ ಸಮಾಜದೊಳಗೆ ಕೆಲಸ ಮಾಡುವ ಇತರ ಶಕ್ತಿಗಳು ಅದನ್ನು ಶಕ್ತಿಹೀನವಾಗಿಸಿವೆ.

ರಾಜಕೀಯ ಭಾಗೀದಾರಿಕೆ ಇಲ್ಲದೇ, ಸಾಮಾಜಿಕ-ಆರ್ಥಿಕ ನ್ಯಾಯ ಸಿಗದು. ಎಲ್ಲರಿಗೂ ನ್ಯಾಯ ಮತ್ತು ಸಮಾನತೆ ಖಾತ್ರಿಪಡಿಸಲು ಇದು ಅತ್ಯಂತ ಪ್ರಮುಖ ಹೆಜ್ಜೆಯಾಗಿದೆ. ಉದಾಹರಣೆಗೆ, ಒಕ್ಕೂಟ ಸರಕಾರವು ಏಕರೂಪ ನಾಗರಿಕ ಸಂಹಿತೆಯನ್ನು ರಚಿಸಿ, ಜಾರಿಗೊಳಿಸಬೇಕು ಎಂಬುದರ ಬಗ್ಗೆ ಒತ್ತುನೀಡುತ್ತಿದೆ. ಮಾಜಿ ಕಾನೂನು ಸಚಿವ ಕಿರಣ್ ರಿಜುಜು ಅವರು ನೀಡಿದ ಅಂಕಿಅಂಶಗಳ ಪ್ರಕಾರ, ಲೋಕಸಭೆಯಲ್ಲಿಯ ಮಹಿಳಾ ಸಂಸದರ ಪ್ರಮಾಣ 14.94% ಇದ್ದರೆ, ರಾಜ್ಯಸಭೆಯಲ್ಲಿ ಆ ಪ್ರಮಾಣ 14.05% ಇದೆ. (26) ದಲಿತ, ಆದಿವಾಸಿ ಮತ್ತು ಲೈಂಗಿಕ ಅಲ್ಪಸಂಖ್ಯಾತ ಸಮುದಾಯಗಳ ಪ್ರಮಾಣ ನಗಣ್ಯವಾಗಿದೆ. ಹಾಗೆಯೇ, ಸದ್ಯಕ್ಕೆ ಸಂಸತ್ತಿನಲ್ಲಿ ಮುಸ್ಲಿಂ ಸದಸ್ಯರ ಪ್ರಮಾಣ ಕೇವಲ 3.5% ಆಗಿದೆ. (27) ಕಳೆದ ಒಂದು ದಶಕದಲ್ಲಿ ಮುಸ್ಲಿಮರನ್ನು ರಾಜಕೀಯವಾಗಿ ಕಡೆಗಣಿಸುವ ಪ್ರಕ್ರಿಯೆ ಇನ್ನಷ್ಟು ತೀವ್ರವಾಗಿದೆ.

ಮಹಿಳೆಯರ ಮೀಸಲಾತಿ ಮಸೂದೆ ಈವರೆಗೆ ನಾಲ್ಕು ಸಲ, 1996, 1998, 1999 ಹಾಗೂ 2008ರಲ್ಲಿ ಮಂಡಿಸಲಾಗಿದೆ ಆದರೆ ಇನ್ನೂ ಜಾರಿಗೊಳಿಸಲಾಗಿಲ್ಲ. ಈ ಮಸೂದೆ ಲೋಕಸಭೆಯಲ್ಲಿ ಮತ್ತು ರಾಜ್ಯದ ವಿಧಾನಸಭೆಗಳಲ್ಲಿ ಮಹಿಳೆಯರಿಗೆ 33% ಸದಸ್ಯತ್ವ ಮೀಸಲಿಡುವ ಪ್ರಸ್ತಾಪ ಹೊಂದಿದೆ. ಆದರೆ, ಸಂಸತ್ತಿನಲ್ಲಿ ಇದಕ್ಕೆ ಪ್ರಬಲವಾದ ವಿರೋಧ ವ್ಯಕ್ತವಾಗಿದ್ದು, ಎರಡು ದಶಕಗಳಾದರೂ ಜಾರಿಗೊಳಿಸಲು ಸಾಧ್ಯವಾಗಿಲ್ಲ. ತಮ್ಮ ಸಮುದಾಯಗಳ ಮೇಲೆ ಪರಿಣಾಮ ಬೀರುವಂತಹ ಶಾಸನಗಳು ಜಾರಿಗೊಳಿಸುವ ಸಮಯದಲ್ಲಿಯೇ, ಇಂತಹ ಅಸಮಾನ ಪ್ರಾತಿನಿಧ್ಯವು ಆ ಸಮುದಾಯಗಳ ಧ್ವನಿಗಳನ್ನು ಕ್ಷೀಣಗೊಳಿಸುತ್ತವೆ. ಇದು ವಾಸ್ತವದಲ್ಲಿ ಸಂವಿಧಾನದ ಆಶಯಕ್ಕೆ ವಿರುದ್ಧವಾದ ಸಂಗತಿಯಾಗಿದೆ.

ಭಾರತದ ಸಂವಿಧಾನ ಸಭೆಯನ್ನು ಉದ್ದೇಶಿಸಿ ಮಾಡಿದ ಕೊನೆಯ ಭಾಷಣದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರು, ’ತನ್ನ ತಳಹದಿಯಲ್ಲಿ ಒಂದುವೇಳೆ ಸಾಮಾಜಿಕ ಪ್ರಜಾಪ್ರಭುತ್ವ ಇಲ್ಲದೇ ಹೋದಲ್ಲಿ, ರಾಜಕೀಯ ಪ್ರಜಾಪ್ರಭುತ್ವ ಮುಂದುವರಿಯುವುದು ಸಾಧ್ಯವಿಲ್ಲ’ ಎಂದು ಎಚ್ಚರಿಸಿದ್ದರು. (28) ದುರದೃಷ್ಟವಶಾತ್, ಇಂದು ಭಾರತದಲ್ಲಿ ಒಂದು ರೀತಿಯ ದುರ್ಬಲವಾದ ರಾಜಕೀಯ ಪ್ರಜಾಪ್ರಭುತ್ವವಷ್ಟೇ ಅಸ್ತಿತ್ವದಲ್ಲಿದೆ. ವ್ಯಾಪಕವಾದ ಸಾಮಾಜಿಕ ನಿಯಮಗಳಲ್ಲಿ ಯಾವುದೇ ರೀತಿಯ ಬದಲಾವಣೆಗಳು ಆಗದೇ ಇದ್ದಾಗ ಇಂತಹ ರಾಜಕೀಯ ಸಬಲೀಕರಣ ಎಷ್ಟು ಪರಿಣಾಮಕಾರಿಯಾಗಬಲ್ಲದು? ಉದಾಹರಣೆಗೆ, ಚಿತ್ರದುರ್ಗದ ಎಂಪಿ ನಾರಾಯಣಸ್ವಾಮಿ ಅವರೊಂದಿಗೆ ಆದ ಘಟನೆ ತೆಗೆದುಕೊಳ್ಳಿ, ಸಂಸದರು ದಲಿತರಾಗಿದ್ದ ಕಾರಣಕ್ಕೆ, ತುಮಕೂರಿನ ಪೆಮ್ಮನಹಳ್ಳಿ ಎಂಬ ಊರಿನಲ್ಲಿ ಅವರಿಗೆ ಪ್ರವೇಶವನ್ನು ನಿರಾಕರಿಸಲಾಯಿತು. ಜನರ ಪ್ರತಿನಿಧಿಯಾಗಿ ತನ್ನ ಕರ್ತವ್ಯಗಳನ್ನು ನಿರ್ವಹಿಸಲು ಹಾಗೂ ವಸತಿ ಮತ್ತು ಇತರ ಮೂಲಭೂತ ಸೌಕರ್ಯಗಳ ವಿಷಯಗಳನ್ನು ಉದ್ದೇಶಿಸಿ ಮಾತನಾಡಲು ಆ ಹಳ್ಳಿಗೆ ಅವರು ಹೊರಟಿದ್ದಾಗ ಈ ಘಟನೆ ನಡೆದಿತ್ತು. (29)

ದೇಶದಲ್ಲಿಯ ದಲಿತ ಮಹಿಳಾ ಪಂಚಾಯತಿ ಅಧ್ಯಕ್ಷರು ತಮ್ಮ ಅನುಭವಗಳಲ್ಲಿ ಹೇಳಿದ್ದೇನೆಂದರೆ (30), ಪ್ರಬಲ ಜಾತಿಗಳ ಮತದಾರರ ಮತಗಳನ್ನು ಕೇಳಬೇಕಾದರೆ ಅವರಿಗೆ ಕೈಮುಗಿದು, ಕಾಲಿಗೆ ಬಿದ್ದು ಮತಯಾಚನೆ ಮಾಡಬೇಕಾಗುತ್ತದೆ. ಮೇಲ್ಜಾತಿಯ ವ್ಯಕ್ತಿಗಳಿಗೆ ’ಅಯ್ಯ’ ಮತ್ತು ’ಅಮ್ಮಯೀರ್’- (ಇಂಗ್ಲಿಷಿನಲ್ಲಿ ಸರ್ ಮತ್ತು ಮೇಡಂಗೆ ಸಮಾನಾರ್ಥಕ ಪದಗಳು) ಎಂದು ಕರೆಯಬೇಕಾಗುತ್ತದೆಯೇ ಹೊರತು ’ಅಣ್ಣ’ ಅಥವಾ ’ಅಕ್ಕ’ ಎಂದು ಕರೆಯುವಂತಿಲ್ಲ. ’ಕೆಲವು ಕಡೆ ಧ್ವಜಾರೋಹಣ ಮಾಡಲು ಅವಕಾಶವಿರುವುದಿಲ್ಲ ಹಾಗೂ ಕೆಲವು ಕಡೆ ಪೊಲೀಸ್ ರಕ್ಷಣೆಯಲ್ಲಿ ಧ್ವಜಾರೋಹಣ ಮಾಡಬೇಕಾದ ಪರಿಸ್ಥಿತಿ ಇನ್ನೂ ಇದೆ. ಯಾವ ತೀರ್ಮಾನಗಳನ್ನೂ ಜಾರಿಗೊಳಿಸಲು ಅವರಿಗೆ ಅನುಮತಿ ಇಲ್ಲದೇ ಇರುವುದನ್ನು ಮಹಿಳಾ ಪಂಚಾಯತಿ ಅಧ್ಯಕ್ಷರು ವಿವರಿಸಿದ್ದಾರೆ ಹಾಗೂ ಅವರ ನಾಮಫಲಕಗಳನ್ನು ಧ್ವಂಸಗೊಳಿಸಿ, ಖುದ್ದು ತಮ್ಮದೇ ಕಚೇರಿಗಳಿಗೆ ಪ್ರವೇಶ ನಿರಾಕರಿಸಿದ ಘಟನೆಗಳನ್ನು ಕೂಡ ಹಲವರು ಹೇಳಿಕೊಂಡಿದ್ದಾರೆ.

ನಮ್ಮ ಸಂವಿಧಾನ ರಾಜಕೀಯ ನ್ಯಾಯದ ಭರವಸೆ ನೀಡುತ್ತದೆ. ಅದರ ಅನುಗುಣವಾಗಿ, ದಲಿತರಿಗೆ ಕ್ಷೇತ್ರಗಳನ್ನು ಮೀಸಲಿಡಲಾಗಿದೆ ಹಾಗೂ ಪಂಚಾಯತಿಗಳಲ್ಲಿ ಮಹಿಳೆಯರಿಗೆ 50% ಸ್ಥಾನಗಳನ್ನು ಮೀಸಲಿಡಲಾಗಿದೆ. ಆದರೆ. ಸಾಮಾಜಿಕ ನಿಯಮಗಳು ಸಂವಿಧಾನಿಕ ನಿಯಮಗಳನ್ನು ತಡೆಗಟ್ಟುತ್ತಿವೆ. ತಳಮಟ್ಟದಲ್ಲಿ ನಿಜವಾದ ಪ್ರಜಾಪ್ರಭುತ್ವವನ್ನು ಕಟ್ಟಬೇಕಾದರೆ ರಾಜಕೀಯ, ಸಾಮಾಜಿಕ ಹಾಗೂ ಆರ್ಥಿಕ ನ್ಯಾಯ, ಈ ಮೂರು ಪರಿಕಲ್ಪನೆಗಳನ್ನು ಸಾಕಾರಗೊಳಿಸಬೇಕಾಗುತ್ತದೆ. ಇಲ್ಲವಾದಲ್ಲಿ, ಕೋಮುವಾದಿ ಬಹುಸಂಖ್ಯಾತರು ಶಾಶ್ವತವಾಗಿ ಅಧಿಕಾರದಲ್ಲಿರುತ್ತಾರೆ ಹಾಗೂ ನಮಗೆ ಕೇವಲ ಬಹುಸಂಖ್ಯಾತವಾದಿ ಪ್ರಜಾಪ್ರಭುತ್ವ ಲಭ್ಯವಾಗಲಿದೆ. (31)

ಮುಂದಿನ ಹಾದಿ

ಭಾರತೀಯ ಸಮಾಜವು ಅನಾದಿಕಾಲದಿಂದ ಲಿಂಗ, ಜಾತಿ ಮತ್ತು ವರ್ಗ ಆಧಾರಿತ ಶ್ರೇಣೀಕೃತ ಅಸಮಾನತೆಗಳು, ಸಾಮಾಜಿಕ ಪೂರ್ವಗ್ರಹಗಳು ಹಾಗೂ ಪೂರ್ವಾಗ್ರಹವುಳ್ಳ ಜನರ, ಸಮುದಾಯಗಳ ಪಡಿಯಚ್ಚುಗಳಿಂದ ಸಂರಚನೆಗೊಂಡಿದೆ. ಭಾರತದ ಸಂವಿಧಾನವು ನಮ್ಮ ಸಮಾಜವನ್ನು ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವದ ಆಧಾರದ ಮೇಲೆ ಮರುರಚಿಸುವ ಪ್ರಯತ್ನ ಮಾಡಿದೆ. ಆದರೆ, ಶಾಸನಗಳ ಮೂಲಕ ಮತ್ತು ನ್ಯಾಯಾಂಗದ ನಿರ್ದೇಶನಗಳ ಮೂಲಕ ಬದಲಾವಣೆ ಬರುತ್ತಿದ್ದರೂ, ಈ ಅಸಮಾನತೆಗಳನ್ನು ಪೋಷಿಸುವ ಸಾಮಾಜಿಕ ಸಂರಚನೆಗಳು ಹಾಗೆಯೇ ಉಳಿದಿವೆ. ಸಾಂವಿಧಾನಿಕ ನೈತಿಕತೆಯನ್ನು ಅಳವಡಿಸಿಕೊಳ್ಳುವುದರ ಮೂಲಕ ಹಾಗೂ ಬದಲಾವಣೆಗಳಿಗೆ ಮುಕ್ತವಾಗಿರುವ ಮೂಲಕವೇ ಇದನ್ನು ಇಲ್ಲವಾಗಿಸಬಹುದು. ಸಾಂವಿಧಾನಿಕ ನೈತಿಕತೆಯನ್ನು ಒಳಗೊಳ್ಳುವುದರ ಅರ್ಥ ಜಾತಿ, ಲಿಂಗ, ವರ್ಗ ಮತ್ತು ಕೋಮುವಾದಿಕರಣದಂತಹ ಆಳವಾಗಿ ಬೇರೂರಿದ ಅಧಿಕಾರದ ಸಂರಚನೆಗಳಿಗೆ ಸವಾಲು ಹಾಕುವುದೇ ಆಗಿದೆ. ಇದರ ಬಗ್ಗೆ ಅಂಬೇಡ್ಕರ್ ಅವರು ಹೀಗೆ ಹೇಳಿದ್ದಾರೆ, “ಸಾಂವಿಧಾನಿಕ ನೈತಿಕತೆ ಒಂದು ಸ್ವಾಭಾವಿಕವಾದ/ಸಹಜವಾದ ಭಾವನೆಯಲ್ಲ. ಅದನ್ನು ಬೆಳೆಸಬೇಕಾಗುತ್ತದೆ. ನಮ್ಮ ಜನರು ಅದನ್ನು ಇನ್ನೂ ಕಲಿಯಬೇಕಿದೆ ಎಂಬುದನ್ನು ನಾವು ಅರಿತುಕೊಳ್ಳಬೇಕು. ಭಾರತದಲ್ಲಿ ಪ್ರಜಾಪ್ರಭುತ್ವ ಎಂಬುದು ಮೂಲಭೂತವಾಗಿ ಪ್ರಜಾಸತ್ತಾತ್ಮಕವಲ್ಲದ ಭಾರತೀಯ ಮಣ್ಣಿನ ಮೇಲೆ ಒಂದು ಹೊದಿಕೆ ಮಾತ್ರ.” (32)

ಸುಪ್ರೀಂ ಕೋರ್ಟ್ (PC: Adnan Abidi / Reuters)

ಅಧಿಕಾರದ ಈ ಸಂರಚನೆಗಳ ಮೂಲಕ್ಕೆ ಪೆಟ್ಟು ನೀಡಲು ಹಾಗೂ ಬಹುಸಂಖ್ಯಾತವಾದದ ಪಕ್ಷಪಾತದ ಧೋರಣೆಯನ್ನು ನಿವಾರಿಸಲು ಕ್ರಮಗಳನ್ನು ಕೈಗೊಳ್ಳಲು ಶಾಸಕಾಂಗ ಮತ್ತು ನ್ಯಾಯಾಂಗದ ಹಸ್ತಕ್ಷೇಪಗಳು ಅವಶ್ಯಕವಾಗಿವೆ. ಆದರೆ, ಅವಷ್ಟೇ ಸಾಕಾಗುವುದಿಲ್ಲ. ಈ ಕಾಲಕ್ಕೆ ಅವಶ್ಯಕತೆ ಇರುವುದು, ಜಾತಿವಿನಾಶ ಮಾಡಲು, ಪುರುಷಪ್ರಧಾನ ಹಿಂಸೆಯನ್ನು ಕಿತ್ತೆಸೆಯಲು ಹಾಗೂ ಇಸ್ಲಾಮೊಫೋಬಿಯಾವನ್ನು ಬೇರು ಸಮೇತ ಕಿತ್ತೆಸೆಯಲು ಪ್ರಬಲವಾದ ಜನಾಂದೋಲನ ಕಟ್ಟಬೇಕಿದೆ. ನಾವು ದೇಶಕ್ಕೆ ಒಂದು ಹೊಸದಾದ ಮುನ್ನೋಟ ನೀಡುವ ಪ್ರಗತಿಪರ ಸಂವಿಧಾನವನ್ನು ನಮಗೆ ಅರ್ಪಿಸಿಕೊಂಡಾಗಲೇ, ’ವಿ ದಿ ಪೀಪಲ್ ಅಥವಾ ನಾವು ಭಾರತೀಯರು’, ಸಂವಿಧಾನದದ ಆಶಯಗಳನ್ನು ತಿಳಿಸಿ ಹೇಳುವ ಕೆಲಸಕ್ಕೆ ಸರಕಾರದಿಂದ ಅಥವಾ ನಾಗರಿಕ ಸಮಾಜದಿಂದ ಎಷ್ಟು ಗಮನ ಪಡೆಯಬೇಕಿತ್ತೋ, ಅಷ್ಟು ಪಡೆದಿಲ್ಲ. ಮುಂದಿನ ದಶಕದಲ್ಲಿ, ಸಾಂವಿಧಾನಿಕ ಮೌಲ್ಯಗಳನ್ನು ಪ್ರಚುರಪಡಿಸಲು ವ್ಯಾಪಕವಾದ ಸಾಂವಿಧಾನಿಕ ಸಾಕ್ಷರತೆಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ನಾವೆಲ್ಲಾ ಸಂಘಟಿತ ಪ್ರಯತ್ನವನ್ನು ಮಾಡಬೇಕಿದೆ. ಇದರಿಂದ ಸಾಮಾಜಿಕ ನೈತಿಕತೆಯಿಂದ ಸಾಂವಿಧಾನಿಕ ನೈತಿಕತೆಯ ಕಡೆಗೆ ಸಾಗಬೇಕಿದೆ.

ಇದನ್ನೂ ಓದಿ: ಬಿಜೆಪಿಯ ಪ್ರಭಾವಿ ನಾಯಕರುಗಳು ಕಾಂಗ್ರೆಸ್ ಸೇರಲಿದ್ದಾರೆ: ಹೊಸ ಬಾಂಬ್ ಸಿಡಿಸಿದ ಶೆಟ್ಟರ್

ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಹಾಗೂ ನ್ಯಾಯದ ಸಾಂವಿಧಾನಿಕ ಭರವಸೆಗೆ ನಾವೆಲ್ಲರೂ ಬದ್ಧರಾಗಿದ್ದೇವೆ ಎಂಬುದನ್ನು ಖಾತ್ರಿಪಡಿಸಲು, ನಾವು ನಡೆಸಬೇಕಾದ ಸಂವಾದಗಳ ಮೇಲೆಯೇ ನ್ಯಾಯದ ಆಧಾರದದಲ್ಲಿ ಒಂದು ನಿಜವಾದ ಪ್ರಜಾಸತ್ತಾತ್ಮಕವಾದ ಸಮಾಜವನ್ನು ಕಟ್ಟುವ ಕೆಲಸ ನಿಂತಿದೆ.

ಅಡಿ ಟಿಪ್ಪಣಿ

(1) ಭಾರತ ಸಂವಿಧಾನ, 1950, ವಿಧಿ 38

(2) ಸಂವಿಧಾನ ರಚನಾ ಸಭೆಯ ನಡಾವಳಿಗಳು, ಸಂಪುಟ 1, 19 ಡಿಸೆಂಬರ್, 1946

(3) ಸಂವಿಧಾನ ರಚನಾಸಭೆಯ ನಡಾವಳಿಗಳು, ಸಂಪುಟ 1, 17 ಡಿಸೆಂಬರ್, 1946

(4) ಸಂವಿಧಾನ ಪೀಠಿಕೆ: ಒಂದು ಸಂಕ್ಷಿಪ್ತ ಪರಿಚಯ (https://altlawforum.org/wp-content/uploads/2023/04/PreambleBooklet_ALF_May2022_compressed.pdf )

(5) ಸಂವಿಧಾನ ರಚನಾ ಸಭೆಯ ನಡಾವಳಿಗಳು, ಸಂಪುಟ 1, 17 ಡಿಸೆಂಬರ್, 1946

(6) ಕನ್ನಬೀರನ್, Tools of Justice (2015)

(7) ಉಪೇಂದ್ರ ಬಕ್ಷಿ, ‘The Judiciary as a Resource for Indian Democracy’

(8) ಭಾರತ ಸಂವಿಧಾನ, 1950, ವಿಧಿ 39 (ಬಿ)

(9) ಭಾರತ ಸಂವಿಧಾನ, 1950, ವಿಧಿ 39 (ಸಿ)

(10) ಭಾರತ ಸಂವಿಧಾನ, 1950, ವಿಧಿ 43 (ಎ)

(11) ಅನಂತ, ಕೃಷ್ಣ, The Indian Constitution and Social Revolution, 2015

(12) ಅರವಿಂದ ನಾರಾಯಣ್ ಮತ್ತು ಅರುಣ್ ತಿರುವೆಂಕಟಮ್, ‘Social Justice Lawyering and the meaning of Indian Constitutionalism: A Case Study of the Alternative Law Forum (2014)

(13) ಅಮರ್ತ್ಯ ಸೆನ್, The Idea of Justice, The Belknap Press of Harvard University Press, Cambridge (2009).[1]

(14) Suresh Kumar &Ors.DalmiaCement vs Union Of India &Ors

(15) NSSO Survey (2017-18)

(16) Whither Contract Labour Abolition?: From Rise to Repeal ಸುಧಾ ಭಾರದ್ವಾಜ್ ಅವರ ಅಧ್ಯಯನ (https://www.workersunity.com/india/informal-sector/the-contract-labour-regulation-and-abolition-act-1970-from-rise-to-repeal/)

(17)Two Supreme Court Judgements Killed the working Class & Converted India Into A Country of Slaves: ಕಾಲಿನ್ ಗೊನ್ಸಾಲ್ವೆಸ್ ಮತ್ತು ಕನ್ನಬೀರನ್ ಉಪನ್ಯಾಸ (https://www.livelaw.in/columns/colin-gonsalves-kannabiran-lecture-supreme-court-working-class-168842)

(18) Telling Numbers | Crimes against SCs, STs: rise in cases, and trends by state (https://indianexpress.com/article/explained/crimes-against-scs-sts-rise-in-cases-and-trends-by-state-8044455/ )

(19) 41% rise in crimes against SCs and STs in Karnataka in five years (https://www.newindianexpress.com/states/karnataka/2023/apr/06/41-per-centrise-in-crimes-against-scs-sts-in-karnataka-in-fiveyears-2563148.html )

(20) Arvind Narrain, Radical Constitutionalism: Towards Ambedkarite Jusrisprudence, BR AMBEDKAR, A QUEST FOR JUSTICE (2021)

(21) ‘The Sixth Report of the Standing Committee on Social Justice and Empowerment on Scheduled Castes and Scheduled Tribes (Prevention of Atrocities) to consider Amendment to the Act, Lok Sabha Secretariat, 2014-15. [1]

(22) Dr BR Ambedkar ,‘Ranade, Gandhi and Jinnah’

(23) The Rise and Disarray of the Dalit Movement in Karnataka by Anisha Reddy (https://www.outlookindia.com/national/the-rise-and-disarray-of-dalit-movement-in-karnataka–news-310553)

(24) Brutal Attack on Two Dalit Teens exposes caste fanaticism among school kids in TN by Azeefa Fathima (https://www.thenewsminute.com/article/brutal-attack-two-dalit-teens-exposes-caste-fanaticism-among-school-kids-tn-181172)

(25) Zene, Cosimo, BR Ambedkar and Antonio Gramsci: Justice for the Excluded, Education for Democracy, BR AMBEDKAR, THE QUEST FOR JUSTICE (2021)

(26) https://pib.gov.in/PressReleaseIframePage.aspx?PRID=1882226

(27) Lack of Muslim Representation in Politics: Is only BJP to blame? By Omkar Poojari (https://theleaflet.in/lack-of-muslim-representation-in-politics-is-only-bjp-to-blame/)

(28) https://prasarbharati.gov.in/whatsnew/whatsnew_653363.pdf

(29)Dalit BJP MP denied entry by Karnataka villagers citing his caste https://www.thehindu.com/news/national/karnataka/dalit-bjp-mp-denied-entry-by-karnataka-villagers-citing-his-caste/article29434346.ece

(30) Deeksha, Joanna, The Caste of a Chair (https://scroll.in/article/1054648/the-caste-of-a-chair)

(31)Preamble: A Brief Introduction, ALTERNATIVE LAW FORUM, BANGALORE (https://altlawforum.org/wp-content/uploads/2023/04/PreambleBooklet_ALF_May2022_compressed.pdf_)

(32) ಸಂವಿಧಾನ ರಚನಾಸಭೆಯ ನಡಾವಳಿಗಳು, ಸಂಪುಟ 11, ನವೆಂಬರ್ 25, 1949, ಪುಟ: 972-981

(ಈ ಬರಹಕ್ಕೆ ಮೈತ್ರೆಯಿ ಕೆ ಮತ್ತು ವಿನಯ್ ಕೆ ಶ್ರೀನಿವಾಸ ಅವರು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ)

ಪೂರ್ಣ ಆರ್

ಪೂರ್ಣ ಆರ್
ಬೆಂಗಳೂರಿನ ಆಲ್ಟರ್ನೇಟಿವ್ ಲಾ ಫೋರಂನಲ್ಲಿ ವಕೀಲರಾಗಿ ಮತ್ತು ಸಂಶೋಧಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಂವಿಧಾನಿಕ ಮೌಲ್ಯಗಳ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇಂದ್ರ ಬಜೆಟ್‌ನಲ್ಲಿ ತಮಿಳುನಾಡಿಗೆ ತಾರತಮ್ಯ; ಬಿಜೆಪಿ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಕರೆಕೊಟ್ಟ ಡಿಎಂಕೆ

0
ಇತ್ತೀಚಿನ ಕೇಂದ್ರ ಬಜೆಟ್‌ನಲ್ಲಿ ತಮಿಳುನಾಡಿಗೆ ದ್ರೋಹ ಬಗೆಯಲಾಗಿದೆ ಎಂದು ಆರೋಪಿಸಿ, ಕೇಂದ್ರ ಸರ್ಕಾರದ ನಡೆ ಖಂಡಿಸಿ ಆಡಳಿತಾರೂಢ ಡಿಎಂಕೆ ಶನಿವಾರ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ನೀಡಿದೆ. ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್...