ಮಹಾರಾಷ್ಟ್ರದಲ್ಲಿ ಶಿವಸೇನೆ ನೇತೃತ್ವದಲ್ಲಿ ಎನ್‌ಸಿಪಿ ಹಾಗೂ ಕಾಂಗ್ರೆಸ್ ಸೇರಿ ಸರ್ಕಾರ ರಚನೆ ನಿರ್ಣಾಯಕ ಹಂತ ತಲುಪಿದೆ. ಮುಖ್ಯಮಂತ್ರಿ ಸೇರಿದಂತೆ ಸಚಿವ ಸ್ಥಾನದ ಹಂಚಿಕೆ ಕುರಿತು ರಾಜ್ಯದಲ್ಲಿ ಸರ್ಕಾರ ರಚಿಸುವ ಎಲ್ಲಾ ವಿವರಗಳನ್ನು ಬಹಿರಂಗಪಡಿಸಲು ಶಿವಸೇನೆ, ಎನ್‌ಸಿಪಿ ಹಾಗೂ ಕಾಂಗ್ರೆಸ್ ಮತ್ತೊಂದು ಸುತ್ತಿನ ಸಭೆ ನಡೆಸಲಿವೆ.
ನಿರ್ಣಾಯಕ ಸಭೆಯಲ್ಲಿ ಶಿವಸೇನೆ, ಎನ್‌ಸಿಪಿ ಮತ್ತು ಕಾಂಗ್ರೆಸ್ ತಮ್ಮ ಮೈತ್ರಿಯ ವಿವರಗಳನ್ನು ಮತ್ತು ರಾಜಕೀಯ ನಿರ್ಣಾಯಕ ವಿವರಗಳ ಕುರಿತು ಮಾತುಕತೆ ನಡೆಸಲಿವೆ. ಶರದ್ ಪವಾರ್, ಉದ್ಧವ್ ಠಾಕ್ರೆ, ಕಾಂಗ್ರೆಸ್ ಮುಖಂಡರಾದ ಅಹ್ಮದ್ ಪಟೇಲ್, ಮಲ್ಲಿಕಾರ್ಜುನ್ ಖರ್ಗೆ ಸೇರಿದಂತೆ ಮೂರು ಪಕ್ಷಗಳ ನಾಯಕರು ಮುಂಬೈನಲ್ಲಿ ಸಭೆ ನಡೆಸಲಿದ್ದಾರೆ ಎಂದು ಶಿವಸೇನೆ ವಕ್ತಾರ ಸಂಜಯ್ ರಾವತ್ ತಿಳಿಸಿದ್ದಾರೆ. ಇಂದು ಸಂಜೆ ವೇಳೆಗೆ ಸರ್ಕಾರ ರಚನೆಯ ಅಧಿಕೃತ ಘೋಷಣೆ ಮಾಡುವ ಸಾಧ್ಯತೆಯಿದೆ.
ಇದನ್ನೂ ಓದಿ: ‘ಪುದುಚೇರಿಯನ್ನು ಕೇಂದ್ರ ‘ಟ್ರಾನ್ಸ್ ಜೆಂಡರ್’ನಂತೆ ಪರಿಗಣಿಸುತ್ತಿದೆ’: ಸಿಎಂ ನಾರಾಯಣಸ್ವಾಮಿ ಅಸಮಾಧಾನ
ಮುಂದಿನ ದಿನಗಳಲ್ಲಿ ಎನ್‌ಸಿಪಿ, ಕಾಂಗ್ರೆಸ್ ಜತೆ ಶಿವಸೇನೆ ಮೈತ್ರಿ ಸರ್ಕಾರ ರಚನೆಯಾಗಲಿದೆ. ಹೀಗಾಗಿ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ, ಹೊಸ ಸರ್ಕಾರದ ಮುಂದಾಳತ್ವ ವಹಿಸಬೇಕು ಅಂದರೆ ಸಿಎಂ ಹುದ್ದೆಯನ್ನು ಅಲಂಕರಿಸಬೇಕು ಎಂದು ಶಿವಸೇನೆ ಶಾಸಕರು ಒತ್ತಾಯಿಸಿದ್ದಾರೆ.
ಇದೇ ಮೊದಲ ಬಾರಿಗೆ ಠಾಕ್ರೆ ಕುಟುಂಬದ ಕುಡಿ ಆದಿತ್ಯ ಠಾಕ್ರೆ ಚುನಾವಣೆಯಲ್ಲಿ ಸ್ಪರ್ಧಿಸಿ ವಿಜಯಿಯಾಗಿದ್ದಾರೆ. ಈಗ ಒಂದು ವೇಳೆ ಉದ್ಧವ್ ಠಾಕ್ರೆ ಸಿಎಂ ಆದಲ್ಲಿ ಅಧಿಕಾರ ವಹಿಸಿದ ಠಾಕ್ರೆ ಕುಟುಂಬದ ಮೊದಲಿಗರಾಗಲಿದ್ದಾರೆ.
ಈ ಮೊದಲು ಉದ್ಧವ್ ಠಾಕ್ರೆ ತಮ್ಮ ಮಾತೋಶ್ರೀ ನಿವಾಸದಲ್ಲಿ ಶಾಸಕಾಂಗ ಸಭೆ ಕರೆದಿದ್ದರು. ಈ ವೇಳೆ ಎಲ್ಲಾ ಶಾಸಕರು ಉದ್ಧವ್ ಜೀ, ಸರ್ಕಾರವನ್ನು ಮತ್ತು ಪಕ್ಷವನ್ನೂ ಮುನ್ನಡೆಸಬೇಕು ಎಂದು ಒತ್ತಾಯಿಸಿದ್ದಾರೆ ಎಂದು ಪ್ರತಾಪ್ ಸರ್ ನಾಯಕ್ ಮಾಹಿತಿ ನೀಡಿದ್ದಾರೆ.
ಶಾಸಕ ಉದಯ್ ಸಮಂತ್ ಮಾತನಾಡಿ, ಸರ್ಕಾರ ರಚನೆ ಮತ್ತು ಮಹಾರಾಷ್ಟ್ರದ ಮುಖ್ಯಮಂತ್ರಿ ಹುದ್ದೆಗೆ ಸಂಬಂಧಿಸಿದ ಎಲ್ಲಾ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಧಿಕಾರ ಉದ್ಧವ್ ಠಾಕ್ರೆ ಅವರಿಗೆ ಬಿಟ್ಟು ಕೊಡಲಾಗಿದೆ. ಅವರ ನಿರ್ಣಯವೇ ಅಂತಿಮ ಎಂದು ಹೇಳಿದರು. ಆದರೆ, ಠಾಕ್ರೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ.
ಇನ್ನು ಶಿವಸೇನೆಯ ಹಿರಿಯ ಮುಖಂಡ ಏಕನಾಥ್ ಶಿಂಧೆ ಕೂಡ ಸಿಎಂ ಆಕಾಂಕ್ಷಿಯಾಗಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ. ಮುಂದಿನ ಸೂಚನೆ ನೀಡುವವರೆಗೆ ಎಲ್ಲಾ ಶಾಸಕರಿಗೆ ಮುಂಬೈನಲ್ಲೇ ಇರುವಂತೆ ಸೂಚಿಸಲಾಗಿದೆ ಎಂದು ಸಮಂತ್ ಹೇಳಿದರು.