Homeಕರ್ನಾಟಕಕಾವಲುಗಾರನಿಲ್ಲದ ಕೋಟೆ!

ಕಾವಲುಗಾರನಿಲ್ಲದ ಕೋಟೆ!

- Advertisement -
- Advertisement -

ಫೆಡರಿಕ್ ನೀಷ್ಹೆ ಎಂಬ ಜರ್ಮನ್ ತತ್ತ್ವಶಾಸ್ತ್ರಜ್ಞ ತನ್ನ ’ಎಟರ್‍ನಲ್ ರಿಟರ್ನ್’ ಅಥವಾ ’ನಿರಂತರ ಪುನರಾವರ್ತನೆ’ ಅನ್ನೊ ತತ್ತ್ವದ ಮೂಲಕ ಮನುಕುಲಕ್ಕೆ ಸವಾಲು ಹಾಕಿದ. ಎಂದರೆ ನಾವು ಸತ್ತಮೇಲೆ ಮತ್ತೆಮತ್ತೆ ಮರಳಿ ಹುಟ್ಟಿ ಬಂದರೂ ಈಗ ನಾವು ಬದುಕಿ ಬಿಟ್ಟ ಬದುಕನ್ನೇ ಯಥಾವತ್ ಹಾಗೆ ಬದುಕುತ್ತೇವೆ. ಯಾವ ರೀತಿಯ ಮಾರ್ಪಾಟೂ, ಯಾವ ರೀತಿಯ ಬದಲಾವಣೆಯೂ ಇಲ್ಲದೆ; ಹಾಗೊಂದು ವೇಳೆ ಆದರೆ ಅದೆಂತಹ ದುಃಸ್ವಪ್ನ-ಮತ್ತೆ ಅದೇ ದುರಂತ ಬದುಕನ್ನು ಬದುಕುತ್ತಾ ಇರುವುದೆಂದರೆ? ಅವನ ಕಳಕಳಿ ಆಶಯ ಇಷ್ಟೆ: ಪುನಃ ಬದುಕಿದರೂ ಹೊಸಹೊಸ ಅರ್ಥ ಕೊಡುವ ಹಾಗೆ ನಿಮ್ಮ ವ್ಯಕ್ತಿತ್ವವನ್ನು, ನಿಮ್ಮ ಜೀವನವನ್ನು ನೀವೇ ಕಟ್ಟಿಕೊಳ್ಳಿ; ಸೃಜನಶೀಲರಾಗಿ ಬದುಕಿ ಎಂಬುದು.

ಮಾನವ ಇತಿಹಾಸವನ್ನು ಅವಲೋಕಿಸಿದರೆ ನೀಷ್ಹೆಯ ಸಿದ್ಧಾಂತವನ್ನೇ ನಿಜಮಾಡುವತ್ತ ಸಾಗಿ ಬರುತ್ತಿರುವುದು ಕಂಡುಬರುತ್ತಿದೆ. ಉದಾಹರಣೆಗೆ ನಮ್ಮ ಕಣ್ಮುಂದಿನ ಇಂದಿನ ಬದುಕನ್ನೇ ನೋಡಬಹುದು. ಕಳೆದೆರಡು ವರ್ಷಗಳಿಂದ ಕೊರೊನಾ ವೈರಾಣು ಸೋಂಕಿನಿಂದ ಮನುಕುಲ ಸತ್ತಂತಾಗಿತ್ತು. ಒಂದಾದ ಮೇಲೊಂದು ಕೊರೊನಾ ಅಲೆಗೆ ಜನಜೀವನ ಅಸ್ತವ್ಯಸ್ತವಾಗಿತ್ತು, ನಿಜ. ಆದರೆ ನೆಲ ಜಲ ಗಾಳಿ ನಿರ್ಮಲವಾಗುತ್ತಿತ್ತು. ಈಗಿನ್ನೂ ಆ ವೈರಾಣು ಸಂಪೂರ್ಣ ನಾಶವಾಗಿಲ್ಲ. ನಿಯಂತ್ರಣಕ್ಕೆ ಬರುವ ಸೂಚನೆ ಇದೆ ಅಷ್ಟೆ. ಆದರೆ ಮನುಷ್ಯಕುಲ ಮಾತ್ರ ಪುನಃ ನಿಯಂತ್ರಣ ತಪ್ಪುತ್ತಿದೆ. ತನ್ನ ಮೊದಲಿನ ಚಾಳಿಗೇ ಹಿಂತಿರುಗುತ್ತಿದೆ. ಅತ್ತ ಉಕ್ರೇನ್-ರಷ್ಯಾ ಸಂಘರ್ಷದ ಸಾವು ನೋವು, ಆಸ್ತಿ ಪಾಸ್ತಿ ನಾಶವಾಗುತ್ತಿದ್ದರೆ ಇತ್ತ ಭಾರತದಲ್ಲಿ ರಾಜಕೀಯ ಹಿತಾಸಕ್ತಿಯ ಕೋಮು ಗಲಭೆಗಳು ಶಾಂತಿಯನ್ನು ಕದಡುತ್ತಿವೆ.

ಫೆಡರಿಕ್ ನೀಷ್ಹೆ

ಭಾರತ ಜನನಿಯ ತನುಜಾತೆಯಾದ ಕರ್ನಾಟಕವೂ ಅದಕ್ಕೆ ಹೊರತಲ್ಲ. ಕರುನಾಡು ಕೋಮು ಸಂಘರ್ಷ ಆಡುಬಲವಾಗುತ್ತಿದೆ. ಸರ್ವಜನಾಂಗದ ಶಾಂತಿಯ ತೋಟಕ್ಕೆ ಬೆಂಕಿ ಬೀಳುತ್ತಿದೆ. ಇದೆಲ್ಲ ಯಾಕಾಗಿ? ಯಾರಿಗಾಗಿ? ಈ ಕೇಡಿಗೆ ಕೊನೆಯುಂಟೆ? ಎಂಬ ಆತಂಕ ಕಾಡುತ್ತಿದೆ. ದಿನಬೆಳಗಾದರೆ ಕೇಡುಗಳ ಕೆಂಡದ ಮಳೆ ಧಾರಾಕಾರ ಸುರಿಯುತ್ತಿದೆ. ಅದನ್ನೇ ಮಾಧ್ಯಮಗಳು ತಿರುತಿರುಗಿ ಅಪ್ಪಳಿಸುತ್ತಿವೆ.

ಕಳೆದೆರಡು ತಿಂಗಳುಗಳಿಂದ ಹಲವು ಹಿಂದೂಪರ ಸಂಘಟನೆ ಕಾರ್ಯಕರ್ತರು ಮುಸ್ಲಿಮರ ಮೇಲೆ ಒಂದಲ್ಲ ಒಂದು ಕಿತಾಪತಿ ಜಗಳ ಝೂಟ್ ತೆಗೆಯುತ್ತಲೆ ಇದ್ದಾರೆ. ಅವರಿಗೆ ಗದರಿ ಕಿವಿಮಾತು ಹೇಳುವ ಸರ್ಕಾರ ಕಣ್ಣುಮುಚ್ಚಿಕೊಂಡು ಕೂತಿದೆ. ರಾಜ್ಯ ಕಾವಲುಗಾರರಿಲ್ಲದ ಕೋಟೆಯಂತಾಗುತ್ತಿದೆ. ಮುಸ್ಲಿಂ ಜನಾಂಗದ ವಿರುದ್ಧ ಅಜೆಂಡಾಗಳು ಅದೆಲ್ಲಿಂದ ಸೃಷ್ಟಿಯಾಗುತ್ತವೋ ಯಾರು ಸೃಷ್ಟಿ ಮಾಡುತ್ತಾರೋ? ಆ ಮರ್‍ಯಾದಾ ಪುರುಷೋತ್ತಮ ಶ್ರೀರಾಮನೇ ಬಲ್ಲ.

ಹಿಜಾಬ್-ಕೇಸರಿ ಶಾಲು ವಿವಾದದಿಂದ ಆರಂಭಗೊಂಡ ಈ ಘರ್ಷಣೆಗೆಳು ಹಲಾಲ್ ಕಟ್-ಜಟಕಾ ಕಟ್‌ವರೆಗೆ, ಆಜಾನ್ ನಿಷೇಧ, ಮುಸ್ಲಿಂ ವ್ಯಾಪಾರಿಗಳಿಗೆ ಬಹಿಷ್ಕಾರ, ಇತ್ಯಾದಿ ಕಿಡಿ ಹಾರುತ್ತಲೇ ಇವೆ. ಆದರೆ ಕರುನಾಡ ಜನ ಕಿವಿಗೊಡದೆ ಆ ಕಿಡಿಗಳಿಗೆ ಭಾವೈಕ್ಯದ ತಣ್ಣೀರು ಸುರಿದು ತಮ್ಮ ದೈನಂದಿನ ಬದುಕನ್ನು ಸಾಗಿಸುತ್ತಿರುವುದು ಸ್ವಾಗತಾರ್ಹ. ಆದರೆ ಬಿಸಿಬಿಸಿ ಸುದ್ದಿಗಾಗಿ ಹಾತೊರೆಯುವ ದೃಶ್ಯ ಮಾಧ್ಯಮಗಳ ಬೇಟೆಗಾರರು ಸುಮ್ಮನೆ ಇರಬೇಕಲ್ಲ! ಅಲ್ಲಿ ಇಲ್ಲಿ ಹಾರುವ ಕೊಳ್ಳಿ ಕಿಡಿಗಳಿಗೇ ಭೂತಗನ್ನಡಿ ಹಿಡಿದು ಬಹುಸಂಖ್ಯಾತ ಹಿಂದೂಗಳ ಹಾಲಿನಂತ ಮನಸ್ಸುಗಳಿಗೆ ಹುಳಿ ಹಿಂಡುವುದೂ ಅಲ್ಪಸಂಖ್ಯಾತರಿಗೆ ಅತಂಕ-ಕೀಳರಿಮೆ ಹುಟ್ಟಿಸುವುದೂ ಸತತ ನಡೆಯುತ್ತಲೇ ಇದೆ.

ಇತ್ತ ಒಳ ಜಗಳಗಳಿಂದ ಸತ್ತಂತಿರುವ ವಿರೋಧ ಪಕ್ಷಗಳನ್ನು ಬಡಿದೆಬ್ಬಿಸುವ ನವ ನಿರ್ಮಾಣ ವ್ಯಕ್ತಿ ಇಲ್ಲದೆ ಅವು ಗೊಂದಲದ ಗೂಡಾಗಿವೆ. ಒಟ್ಟಾರೆ ಮುಸ್ಲಿಮರ ಕೈಯಿಂದ ಅನ್ನಕ್ಕೆ ಮಾರ್ಗವಾದ ವ್ಯಾಪಾರ-ಸಾಪಾರ ಎಲ್ಲವನ್ನು ಕಿತ್ತುಕೊಳ್ಳುವ ’ಅನ್ನೇಕಾರರು’ ವಿಜೃಂಭಿಸುತ್ತಿದ್ದಾರೆ. ಬೇಟೆ ನಾಯಿಗೇನು ಗೊತ್ತು ಒಡೆಯನ ಕರಾಮತ್ತು? ಅವರೀಗ, ಸಂಗೀತ, ಸಾಹಿತ್ಯ, ಕ್ರೀಡೆ ಮುಂತಾದ ಸಕಲೆಂಟು ಕ್ಷೇತ್ರಗಳಿಗೂ ನುಗ್ಗಿ ದಾಂಧಲೆ ಎಬ್ಬಿಸುತ್ತಿದ್ದಾರೆ. ಅವುಗಳ ಪಾವಿತ್ರ್ಯತೆಯನ್ನು ಹಾಳುಮಾಡುವ ಮುನ್ಸೂಚನೆಗಳು ಕಂಡುಬರುತ್ತಿವೆ.

ತೆರೆಮರೆಯಲ್ಲಿ ಕುಮ್ಮಕ್ಕು ಇಲ್ಲದಿದ್ದರೆ ಇದೆಲ್ಲ ಸಂಭವಿಸುವುದಾದರೂ ಹೇಗೆ? ಇಡೀ ಮುಸ್ಲಿಮ್ ಜನಾಂಗ ಕೀಳರಿಮೆ ತೊರೆದು ಸ್ವಾಭಿಮಾನ ಸರ್ವೋತ್ಕೃಷ್ಟವೆಂದು ಬಗೆದು ಒಟ್ಟಾಗಿ ಬೀದಿಗಿಳಿದು ಭಾರತೀಯರು ನಾವು, ನಾವೇನು ವಲಸೆ ಬಂದವರಲ್ಲ. ಈ ಮಣ್ಣಿನ ಮಕ್ಕಳು, ಇಲ್ಲಿ ಬದುಕುವುದು ನಮ್ಮ ಹಕ್ಕು; ಸಂವಿಧಾನ ನಮ್ಮ ಪವಿತ್ರ ದೇವರಿದ್ದಂತೆ. ಎಂದು ಗಲಭೆಕೋರರ ಮುಖಕ್ಕೆ ರಾಚಿ ತೂರುವ ಸಾತ್ವಿಕ ಸಿಟ್ಟು ರೂಢಿಸಿಕೊಳ್ಳಬೇಕು ಮತ್ತು ನ್ಯಾಯಾಲಯದ ಮೆಟ್ಟಿಲು ಹತ್ತುವ ಒಗ್ಗಟ್ಟು ಗಳಿಸಿಕೊಳ್ಳಬೇಕು. ’ಸಹಿಷ್ಣು ಹಿಂದೂಗಳಿಗೆ ಇದೇನು ಸಭ್ಯತೆ, ಇದೇನು ಸಂಸ್ಕೃತಿ?’ ಎಂದು ಕೇಳುವ ನೈತಿಕತೆಯನ್ನು ಗಳಿಸಿಕೊಳ್ಳಬೇಕು.

ಕೊನೆಯದಾಗಿ ’ಪರಮಾತ್ಮ ನಮ್ಮನ್ನು ಕಾಪಾಡಲಿ, ನಾವು ಜೊತೆಗೂಡಿ ಒಟ್ಟಾಗಿ ಕೆಲಸ ಮಾಡೋಣ. ನಮ್ಮ ಶಕ್ತಿ ಬೆಳೆಯಲಿ, ಸಾಮರ್ಥ್ಯ ಬೆಳೆಯಲಿ. ನಾವು ಓದಿದ್ದು ತೇಜಸ್ಸು ಆಗಲಿ. ನಾವು ಯಾರನ್ನು ದ್ವೇಷಿಸುವುದು ಬೇಡ, ನಮಗೆ ಹಗೆತನ ಬೇಡ’ ಎಂದ ಉಪನಿಷತ್ ಋಷಿ – ಅವನ ’ಓಂ ಸಹನಾ ಭವತು’ ಎಂಬ ಶಾಂತಿಮಂತ್ರಕ್ಕೆ ನಾವು ವಾರಸುದಾರರಲ್ಲವೆ? ’ಸಹಿಷ್ಣು ಹಿಂದೂ’ ವಾದಿಗಳು ಈ ನಿಟ್ಟಿನಲ್ಲಿ ಆತ್ಮಾವಲೋಕನ ಮಾಡಿಕೊಳ್ಳಲು ಇದು ಸಕಾಲ. ದುರಿತಕಾಲ ಕೊನೆಗೊಳ್ಳಲಿ. ಶಾಂತಿ ನೆಲೆಸಲಿ.

ಪ್ರೊ. ಶಿವರಾಮಯ್ಯ

ಪ್ರೊ. ಶಿವರಾಮಯ್ಯ
ಕನ್ನಡ ಪ್ರಾಧ್ಯಾಪಕರಾಗಿ ನಿವೃತ್ತರಾಗಿರುವ ಶಿವರಾಮಯ್ಯನವರು ತಮ್ಮ ಅಧ್ಯಾಪನ ಮತ್ತು ಸಂಶೋಧನಾ ಕಾರ್ಯಗಳ ಜೊತೆಗೆ ಜನಪರ ಹೋರಾಟಗಳಲ್ಲಿ ಗುರುತಿಸಿಕೊಂಡವರು. ಸ್ವಪ್ನ ಸಂಚಯ (ಕವನ ಸಂಕಲನ), ಉರಿಯ ಉಯಾಲೆ (ವಿಮರ್ಶಾ ಬರಹಗಳ ಸಂಕಲನ), ದನಿ ಇಲ್ಲದವರ ದನಿ, ಪಂಪಭಾರತ ಭಾಗ-1 &2 (ಸಂಪಾದನೆ ಮತ್ತು ಗದ್ಯಾನುವಾದ) ಅವರ ಪುಸ್ತಕಗಳಲ್ಲಿ ಕೆಲವು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others


ಇದನ್ನೂ ಓದಿ: ಹಿಜಾಬ್: ಸಮತೋಲನವನ್ನು ಸಾಧಿಸದ, ಸಹಾನುಭೂತಿ ತೋರದ ತೀರ್ಪು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅಮಿತ್‌ ಶಾ ಸ್ಪರ್ಧಿಸುವ ಗಾಂಧಿನಗರದಲ್ಲಿ ಸ್ಪರ್ಧಿಸದಂತೆ ಅಭ್ಯರ್ಥಿಗಳಿಗೆ ಬಿಜೆಪಿ ನಾಯಕರು ಮತ್ತು ಪೊಲೀಸರಿಂದ ಬೆದರಿಕೆ?

0
ಗುಜರಾತ್‌ನ ಸೂರತ್ ಲೋಕಸಭಾ ಕ್ಷೇತ್ರವನ್ನು ಬಿಜೆಪಿ ಈಗಾಗಲೇ ಅವಿರೋಧವಾಗಿ ಗೆದ್ದುಕೊಂಡಿದೆ. ಇದರ ಬೆನ್ನಲ್ಲಿ ಅಮಿತ್ ಶಾ ಪ್ರತಿನಿಧಿಸುವ ಗಾಂಧಿನಗರ ಕ್ಷೇತ್ರದಲ್ಲಿ ಅಭ್ಯರ್ಥಿಗಳಿಗೆ ತಮ್ಮ ನಾಮಪತ್ರವನ್ನು ಹಿಂತೆಗೆದುಕೊಳ್ಳುವಂತೆ ಬೆದರಿಕೆ ಹಾಕಿರುವ ಆರೋಪ ಕೇಳಿ ಬಂದಿದೆ. ಗುಜರಾತ್‌ನ...