Homeಮುಖಪುಟಹೆಬ್ಬಾವಿಗೆ ಬಡಿದು ಜಿಂಕೆ ಉಳಿಸಿದ ಘಟನೆಯ ಸುತ್ತ; ನೀತಿಶಾಸ್ತ್ರ ಮತ್ತು ಪ್ರಕೃತಿ ನಿಯಮಗಳು ಒಂದಕ್ಕೊಂದು ಪೂರಕವೇ?

ಹೆಬ್ಬಾವಿಗೆ ಬಡಿದು ಜಿಂಕೆ ಉಳಿಸಿದ ಘಟನೆಯ ಸುತ್ತ; ನೀತಿಶಾಸ್ತ್ರ ಮತ್ತು ಪ್ರಕೃತಿ ನಿಯಮಗಳು ಒಂದಕ್ಕೊಂದು ಪೂರಕವೇ?

- Advertisement -
- Advertisement -

ಸರಿ ತಪ್ಪುಗಳ ವಿಂಗಡಣೆ, ಆ ಸರಿ ತಪ್ಪುಗಳ ಪಾಲನೆಯ ಮೇಲೆ ಸನ್ನಡತೆ ಹಾಗೂ ದುರ್ನಡತೆ ಅಂತ ನೈತಿಕತೆ(Morality) ವಿವರಿಸುತ್ತದೆ. ಮನುಷ್ಯರ ವಿಕಾಸದ ಭಾಗವಾಗಿಯೇ ನೈತಿಕತೆ ಕ್ಷೇತ್ರ ಬೆಳೆದುಬಂದಿದೆ. ಅಲೆಮಾರಿ ಮಾನವ ಸಾಮಾಜಿಕ ವ್ಯವಸ್ಥೆಗೆ ವಿಕಾಸವಾದಾಗ ನೈಸರ್ಗಿಕ ಹಾಗೂ ಸಾಮಾಜಿಕ ಒತ್ತಡದ ಪರಿಣಾಮ ಈ ಚಿಂತನೆ ಬೆಳೆದುಬಂದಿರಬೇಕು. ಮುಂದೆ ಸಾಮಾಜಿಕ ವ್ಯವಸ್ಥೆಯ ನಿರ್ವಹಣೆಗೆ ಬೇಕಾದ ಕಟ್ಟುಪಾಡುಗಳನ್ನು ರೂಪಿಸುವಲ್ಲಿ ಕೂಡ ಈ ನೈತಿಕತೆಯ ಅಂಶಗಳು ಅವುಗಳನ್ನು ಒಳಗೊಂಡ ನೀತಿಶಾಸ್ತ್ರದ (ಒಳ್ತನದರಿಮೆಗಳು/Ethics) ಅಡಿಪಾಯವಾದವು.

ಮೆದುಳಿನ ಬೆಳವಣಿಗೆಯ ಜೊತೆಗೆ ಸಾಮಾಜಿಕ ಹಾಗೂ ಬದಲಾವಣೆಗಳು ಆದವು. ಅಲೆಮಾರಿ ಕಾಡಿನ ಪ್ರಾಣಿಯಂತಿದ್ದ ಮನುಷ್ಯ ವಿಕಾಸವಾಗುತ್ತಾ ನೈತಿಕತೆ ಪ್ರಶ್ನೆಗಳನ್ನು ಕೇಳಿಕೊಳ್ಳಲು ಯಾವಾಗಲೋ ಶುರು ಮಾಡಿರಬೇಕು. ಸಮುದಾಯದಲ್ಲಿ ಬದುಕುವ ಜೀವಿಗಳಲ್ಲಿ ಇಂತಹ ಒಂದು ಚಿಂತನೆ ಸಾಮೂಹಿಕ ನಡತೆ ಸಹಜ.  ಅದೇ ಮುಂದುವರೆದು ನ್ಯಾಯ ವ್ಯವಸ್ಥೆ, ಆಡಳಿತ ವ್ಯವಸ್ಥೆ, ಇತರೆ ಕಟ್ಟುಪಾಡುಗಳಿಗೆ ಕಾರಣವಾಯಿತು. ಆ ನೈತಿಕ ಪ್ರಶ್ನೆಗಳು, ವಿವರಣೆಗಳು ಮನುಷ್ಯ ಸಮುದಾಯಕ್ಕೆ ಸೀಮಿತವಾದಾಗ ಸಮಾಜ ಸಮುದಾಯ ಬೆಳೆಯಿತು. ಆದರೆ  ಅದೇ ಕಟ್ಟುಪಾಡುಗಳನ್ನು ನಾವು ವಿಕಾಸವಾಗುತ್ತಾ ಪಳಗಿಸಿದ ಇತರ ಜೀವಿಗಳಿಗೆ, ಹಾಗೂ ಪರಿಸರದ ಜೀವಿಗಳಿಗೆ ಅನ್ವಯಿಸುವಾಗ ಸಮಸ್ಯೆ ಆಯಿತು. ಕಾಡಿನ ಪ್ರಾಣಿಗಿಂತ ಭಿನ್ನವಾಗುತ್ತಾ ಮನುಷ್ಯರು ಕಾಡು ಸಸ್ಯಗಳನ್ನು ಗುರುತಿಸಿ ತನ್ನ ಆಹಾರಕ್ಕೆ ಬೆಳೆಯಲು ಶುರು ಮಾಡಿದರು. ಹಾಗೆಯೇ ಕಾಡು ಪ್ರಾಣಿಗಳನ್ನು ಪಳಗಿಸಿ ಆಹಾರ ಸಾಗಾಣಿಕೆ ಇತ್ಯಾದಿಗೆ ಬಳಸಿದರು. ಒಬ್ಬ ಇನ್ನೊಬ್ಬನನ್ನು ತನಗಾಗಿ ಕೆಲಸ ಮಾಡುವಂತೆ ಪ್ರೇರೇಪಿಸಲು ಶಕ್ತನಾದ  ನಂತರ ಅದೇ ಮುಂದುವರೆದು ಮನುಷ್ಯ ಜನಾಂಗದಲ್ಲೇ ಕೆಲವರು ಆಡಳಿತ ಮಾಡುವವರು ಬಾಕಿ ಜನ ಅವರ ಗುಲಾಮರು ಅಂತಾಯಿತು. ತಮ್ಮ ಅನುಕೂಲಕ್ಕೆ ತಕ್ಕಂತೆ ಜೀವಿಗಳನ್ನು ಇತರ ಮನುಷ್ಯರನ್ನು ವಿಂಗಡಿಸಲಾಯಿತು ಹಾಗೂ ಅದೇ ರೀತಿಯ ಸಂಬಂಧ ಬೆಳೆಸಲಾಯಿತು. ಸಮಾನ ಹೊಂದಾಣಿಕೆಯ ಸಹಬಾಳ್ವೆಯ ನೈಸರ್ಗಿಕ ವ್ಯವಸ್ಥೆ ಅಸಮಾನ ವ್ಯವಸ್ಥೆಯಾಗಿ ರೂಪಾಂತರವಾಗತೊಡಗಿತು.

ಶೋಷಣೆ ವ್ಯವಸ್ಥೆಯ ಭಾಗವಾದಾಗ ಶೋಷಣೆಯ ಅನುಷ್ಠಾನ ಹಾಗೂ ಶೋಷಣೆಯ ವಿರುದ್ದ ಪ್ರತಿರೋಧ, ಶೋಷಕರಲ್ಲಿ ಮೂಡುವ ಪ್ರಶ್ನೆಗಳು, ಸರಿ -ತಪ್ಪುಗಳ ನೈತಿಕ ಸಂಘರ್ಷ, ಒಳ್ತನದರಿಮೆಯಲ್ಲಿ(Ethical Dilemma) ಗೊಂದಲಗಳಿಗೆ ಕಾರವಾಗುತ್ತದೆ. ಈ ಸಹಜ ಗೊಂದಲಗಳು, ಜಿಜ್ಞಾಸೆ ಆರೋಗ್ಯಕರ. ಅವು ನಮ್ಮನ್ನು ಮತ್ತಷ್ಟು ತಿಳುವಳಿಕಸ್ತ  ಮನುಷ್ಯತ್ವ ಇರುವ ಮಾನವೀಯ ಗುಣದ ವ್ಯಕ್ತಿಗಳನ್ನಾಗಿ ರೂಪಿಸಿದರೆ, ಗೊಂದಲಗಳನ್ನು ಸಮರ್ಪಕವಾಗಿ ಪರಿಹರಿಸದೆ ಮಿತಿಮೀರಿ ಬೆಳೆಯಲು ಬಿಟ್ಟರೆ ಅಂತಹ ವ್ಯಕ್ತಿತ್ವಗಳು ಸಾಮಾಜಿಕವಾಗಿ ಸಮಸ್ಯೆಯಾಗಿ ಮಾರ್ಪಡುತ್ತದೆ.

ಎರಡು ಕಡ್ಡಾಯವಾಗಿ ನಡೆಯಬಹುದಾದ ನೈತಿಕ ಸನ್ನಿವೇಶಗಳಲ್ಲಿ ಆಯ್ಕೆಯ ಪ್ರಶ್ನೆ ಬಂದಾಗ, ಒಂದರ ಆಯ್ಕೆ ಮತ್ತೊಂದರ ಸಂಘರ್ಷಕ್ಕೆ ಕಾರಣವಾಗಬಹುದಾದ ಸಮಯದಲ್ಲಿ ಒಳ್ತನದರಿಮೆಯಲ್ಲಿ ಗೊಂದಲಗಳು ಮೂಡುತ್ತವೆ ಅಂತ ಮನಶಾಸ್ತ್ರಜ್ಞರು ಗುರುತಿಸುತ್ತಾರೆ.

ಹೆಣ್ಣನ್ನು ಪೂಜನೀಯ ದೇವತೆ  ನಂಬುವ ಪೂಜಿಸುವ ಸಮುದಾಯದ ವ್ಯಕ್ತಿಗೆ, ಹೆಣ್ಣನ್ನು ದೈಹಿಕ ಹಸಿವಿನ ಕಾರಣ ಕಾಮದ ಭಾವನೆಯಲ್ಲಿ ಗಮನಿಸುವಾಗ ಈ ಸಂಘರ್ಷ ಮನದಲ್ಲಿ ಹುಟ್ಟಬಹುದು(ಹೆಣ್ಣಿಗೆ ಗೌರವ ಕೊಡಬೇಕು ಹಾಗೆಯೇ ಹೆಣ್ಣನ್ನು ಕಾಮದ ದೃಷ್ಟಿಯಲ್ಲಿ ಪೂರ್ಣವಾಗಿ ನೋಡದಿರುವುದು ಸಾದ್ಯವಿಲ್ಲದಿರುವಾಗ ಯಾವುದು ಸರಿ ಎಂಬ ಪ್ರಶ್ನೆ). ಮಾಂಸ ತಿನ್ನುವ ವ್ಯಕ್ತಿಗೆ ಕುರಿ ಕೋಳಿ ಕಡಿಯುವಾಗ ತಾನು ಕಟುಕನೆ ಅಥವಾ ಅಮಾನವೀಯವೇ ಅಂತ ಗೊಂದಲ ಹುಟ್ಟಬಹುದು (ತನಗಾಗಿ ಒಂದು ಜೀವ ತೆಗಿತ ಇದೀನಿ ಹಾಗೂ ಆಹಾರದ ಪ್ರಶ್ನೆ.) ಈ ಪ್ರಶ್ನೆಗಳು ಮಾನವ ವಿಕಾಸದ, ಮಾನಸಿಕ ಬೆಳವಣಿಗೆಯ ಭಾಗವಾಗಿಯೇ ನಮ್ಮ ನಡುವಿದೆ. ಈ ನೈತಿಕತೆ ಕಟ್ಟುಪಾಡುಗಳು ಜಾಗತಿಕವೇ ಅಂದರೆ ಖಂಡಿತ ಇಲ್ಲ. ಬೇರೆ ಬೇರೆ ಸಮಾಜ, ಸಮುದಾಯಕ್ಕೆ ಭಿನ್ನತೆ ಇದೆ.

ರೋಗ ತರುವ ಜೀವಿಗಳು ಜೀವಿಗಳಾದರೂ ಅವು ನಮ್ಮ ಜೀವ ತೆಗೆಯುವುದರಿಂದ, ನಮ್ಮ ಜೀವ ಅಮೂಲ್ಯವಾಗಿರುವುದರಿಂದ?! ಬದುಕಲು ಅರ್ಹ ಅಲ್ಲ ಎಂದು, ವ್ಯಕ್ತಿಯೊಬ್ಬನನ್ನು ಮಾಂಸಾಹಾರಿ ಜೀವಿ ಆಹಾರಕ್ಕೆ ಆಕ್ರಮಣ ಮಾಡಿದಾಗ ಅದನ್ನು ಕೊಲ್ಲುವುದು ಸರಿಯೆಂದು, ಕೋಳಿ, ಕುರಿ ತರಹದ ಜೀವಿಗಳು ಆಹಾರಕ್ಕೆ ಮಾತ್ರ ಯೋಗ್ಯವೆಂದು, ಹೆಣ್ಣು ಭೋಗಕ್ಕೆ ಮಾತ್ರ ಸರಿಯೆಂದು, ಒಂದಿಷ್ಟು ಜನ ಅರ್ಥಿಕವಾಗಿ ಸಬಲರಾಗುವುದು ಸಹಜ ನ್ಯಾಯವೆಂದು, ಎಲ್ಲರೂ ಅಸಮಾನರೆಂದು, ಸಿರಿವಂತರು ಮೇಲ್ಜಾತಿ ಜನರು ಆಡಳಿತಕ್ಕೆ ಯೋಗ್ಯರು ಎಂದು ಬಾಕಿ ಆಳಿಸಿಕೊಳ್ಳಲು ಯೋಗ್ಯರು ಎಂದು, ನೈತಿಕತೆಯನ್ನು ಒಂದಿಷ್ಟು ಜನ ತೀರ್ಮಾನಿಸಿ ಇತರರ ಮೇಲೆ ಅಧಿಕಾರಯುತವಾಗಿ ಹೇರುವ ಹಂತಕ್ಕೆ ಸಮಾಜಕ್ಕೆ ಬಂದು ನಿಂತಿದೆ.

ಇಂತಹ ಗೊಂದಲಗಳು, ನೈತಿಕತೆಗಳ ನಡುವಿನ ತಿಕ್ಕಾಟ ಹೊಟ್ಟೆ ತುಂಬಿದ ಮಂದಿಯ ಸ್ವಭಾವಗಳಷ್ಟೆ. ಮುಂದಿನ ಊಟದ ಬಗ್ಗೆ ಏನು ಎಂದು ಭರವಸೆ ಇಲ್ಲದವರಿಗೆ ಇಂತಹ ಪ್ರಶ್ನೆಗಳು ಅರ್ಥ ಕೊಡಲಾರವು ಎಂಬ ತಿಳುವಳಿಕೆ ನಮಗಿರಬೇಕು. ಈ ಪ್ರಶ್ನೆಗಳು ಮಾನಸಿಕ ಗೊಂದಲ ಕಸಿವಿಸಿ ತಪ್ಪೇ ಅಂದರೆ ಖಂಡಿತ ಅಲ್ಲ. ಆ ಪ್ರಶ್ನೆಗಳೇ ನಮ್ಮನ್ನು ಇಷ್ಟು ದೂರ ತಂದಿವೆ. ಆದರೆ ಹೇಗೆ ಭೂಮಿಯನ್ನು ಅನಿಯಮಿತ ಆಸೆಯ ಪೂರೈಕೆಗೆ  ಭೋಗವಾಗಿ ಮಾತ್ರವೇ ಬಳಸುವ ವಿನಾಶಕಾರಿ ಶಕ್ತಿಗಳು ಮನುಷ್ಯರನ್ನು(ಅಥವಾ ಮನುಷ್ಯರಲ್ಲಿ ಕೆಲವರನ್ನು) ಉಪ್ಪರಿಗೆಯಲ್ಲಿಟ್ಟು ಇಡಿಯ ಭೂಮಿ ಎಲ್ಲಾ ಜೀವ-ನಿರ್ಜೀವಗಳು ಅವರಿಗಾಗಿಯೇ ಇದೆ ಅಂತ ಭಾವಿಸಿ ಶೋಷಿಸುವ/ ಉಪಭೋಗಿಸುವ ನಿರ್ಧಾರ ಮಾಡುತ್ತಾರೋ ಹಾಗೆಯೇ ಇನ್ನೊಂದು ಪ್ರಭಾವಿ ಗುಂಪು ತನ್ನನ್ನು ಪರಿಸರ ಸಂರಕ್ಷಕ ಅಂತ ಅಂದುಕೊಂಡು, ಕೆಲವರ ವಿನಾಶಕ್ಕೆ ಎಲ್ಲರ ಹೊಣೆ ಮಾಡಿ ಇನ್ನೊಂದು ಅತಿರೇಕವನ್ನು ಪರಿಹಾರವಾಗಿ ಪ್ರತಿಪಾದಿಸುತ್ತಾರೆ. ಕೋಳಿ ನಮಗಾಗಿಯೇ ಹುಟ್ಟಿದೆ ಅಂತ ಮೊದಲ ಗುಂಪು ಅಂದುಕೊಂಡು, ವರ್ತಿಸಿದರೆ, ವಿರುದ್ದ ಗುಂಪು ಕೋಳಿ ನಮ್ಮ ಸಮನಾದ ಮನುಷ್ಯ ಜೀವಿ ಅದನ್ನು ಕೊಂದು ತಿನ್ನುವ ನಾವು ಮನುಷ್ಯರೇ ಅಲ್ಲ ಅಂತ ಪ್ರತಿಪಾದಿಸುತ್ತದೆ.

ಆದರೆ ನೈಸರ್ಗಿಕ ವ್ಯವಸ್ಥೆ ಇವೆರಡೂ ವಾದವನ್ನು ಒಪ್ಪದೆ ಮಧ್ಯಹಾದಿಯ ಸಮತೋಲನವನ್ನು ಹೇಳುತ್ತದೆ. ಪ್ರಕೃತಿ ಯಾವುದೇ ಜೀವ ಸಮುದಾಯ ಇರಲಿ ಅಥವಾ ಸಮುದಾಯದ ಸದಸ್ಯರನ್ನಾಗಲಿ ಮೇಲೂ-ಕೀಳು ಎಂದು ವಿಭಾಗಿಸಿಲ್ಲ. ಪ್ರಕೃತಿಯಲ್ಲೊಂದು ಸಮಾನತೆ ಇದೆ. ಎಲ್ಲರಿಗೂ ಬದುಕುವ ಸಮಾನ ಅವಕಾಶವಿದೆ. ಬದುಕಿಗೆ ಬೇಕಾದ ವ್ಯವಸ್ಥೆ ಇದೆ ಹಾಗೂ ನಿಯಂತ್ರಣಕ್ಕೆ ತಡೆಗಳು ಇವೆ. ನಿಸರ್ಗ ಅವಲಂಬನೆಯನ್ನು ಪ್ರತಿಪಾದಿಸುತ್ತದೆ ಸಹಬಾಳ್ವೆ ಹೇಳುತ್ತದೆ. ಇಲ್ಲಿ ಪ್ರತೀ ಜೀವಿಯು ಮುಖ್ಯ, ಒಂದರ ಅಬ್ಬರ ಹೆಚ್ಚಿ ಇನ್ನೊಂದು ನಶಿಸಿದರೆ ಸಮತೋಲನ ತಪ್ಪುತ್ತದೆ. ಯಾವ ಜೀವಿಯು ಇಲ್ಲಿ ಖಾಯಂ ಅಲ್ಲ. ಆದರೆ ಮನುಷ್ಯ ಮಾತ್ರ ತನ್ನನ್ನ ಖಾಯಂ ಅಂತ ಭಾವಿಸಿದ್ದಾನೆ. ವಿನಾಶಕಾರಿ ಶಕ್ತಿಗಳ ಅಬ್ಬರ ದಿನಕಳೆದಂತೆ ಮಿತಿಮೀರಿದ ಪರಿಣಾಮ ಅವರದ್ದೆ ಸಂಗಡದ ಅಥವಾ ಒಂದು ಕಾಲದಲ್ಲಿ ಪ್ರಭಾವ ಹೊಂದಿದ್ದ, ಅಥವಾ ವಿನಾಶಕರಿಗಳ ಪಾಪ-ಪರಿಹಾರದ ಭಾಗವಾಗಿ ಸಂರಕ್ಷಕರ ದಂಡು ಹುಟ್ಟಿಕೊಂಡಿದೆ.

ಮನುಷ್ಯರು ಪ್ರಕೃತಿಯೊಂದಿಗೆ ಸಹಬಾಳ್ವೆ ನಡೆಸಿ ಸಮತೋಲನ ಕಾಯ್ದುಕೊಂಡಿದ್ದಿದ್ದರೆ ಭೂಮಿಯ ಪರಿಸ್ಥಿತಿ ಇಷ್ಟು ಹದಗೆಡುತ್ತಿರಲಿಲ್ಲ. ಈ ಹಿನ್ನಲೆಯಲ್ಲಿ ಮೊನ್ನೆ ಸಾಮಾಜಿಕ ಜಾಲತಾಣದಲ್ಲಿ ನಡೆದ ಒಂದು ಚರ್ಚೆಯನ್ನು ಗಮನಿಸೋಣ.

ಜಾಲತಾಣದಲ್ಲಿ ದೃಶ್ಯಾಸುರುಳಿಯೊಂದು ವ್ಯಾಪಕ ಪ್ರಚಾರ ಪಡೆಯಿತು. ಹೆಬ್ಬಾವಿನಿಂದ ಜಿಂಕೆಯನ್ನು ವ್ಯಕ್ತಿಯೊಬ್ಬರು ರಕ್ಷಣೆ ಮಾಡಿದ ದೃಶ್ಯಸುರುಳಿ.

ಜಿಂಕೆಯನ್ನು ಹಿಡಿದ ಹೆಬ್ಬಾವು

ಜಿಂಕೆಯನ್ನು ಹಿಡಿದು ನುಂಗಲು ಯತ್ನಿಸಿದ ಹೆಬ್ಬಾವು..ಅರಣ್ಯ ಅಧಿಕಾರಿಗಳಿಂದ ಜಿಂಕೆ ರಕ್ಷಣೆ…ನಾಗರಹೊಳೆ ಅರಣ್ಯದಲ್ಲಿ ಘಟನೆ…

Posted by Sri Kannada TV on Monday, June 1, 2020

ಆ ವ್ಯಕ್ತಿ ಮಾಡಿದ್ದು ಸರಿಯೆಂದು, ಜಿಂಕೆಯನ್ನು ಮಾನವೀಯ ತಳಹದಿಯಲ್ಲಿ ರಕ್ಷಣೆ ಮಾಡಲಾಗಿದೆಯೆಂದು, ನೀವೇ ಜಿಂಕೆಯ ಸ್ಥಾನದಲ್ಲಿ ಇದ್ದಿದ್ರೆ ರಕ್ಷಣೆ ಸರಿಯಾಗಿ ಇರುತ್ತಿತ್ತು ಅಲ್ಲವೇ ಅಂತ ಪ್ರಶ್ನೆ ಮಾಡುವ ಒಂದು ಗುಂಪು, ಕಾಡುಪ್ರಾಣಿಗಳ ಜೀವನಕ್ರಮದಲ್ಲಿ ಈಗಾಗಲೇ ಮನುಷ್ಯರ ಹಸ್ತಕ್ಷೇಪದಿಂದ ಅಸಮತೋಲನವಾಗಿದೆ, ಅದರಿಂದ ಪಾಠ ಕಲಿಯದೆ ಈಗ ಪ್ರಾಣಿಗಳ ಆಹಾರ ಪದ್ದತಿಯನ್ನೇ ಬದಲಿಸಲು ಹೊರಟಿರುವಂತೆ ಈ ಘಟನೆ ಯಾವುದೇ ಕಾರಣಕ್ಕೂ ಸರಿಯಲ್ಲವೆಂದು ಇನ್ನೊಂದು ಗುಂಪು ಚರ್ಚಿಸಿದೆ.

ಆ ವ್ಯಕ್ತಿಗೆ ಜಿಂಕೆಯನ್ನು ರಕ್ಷಿಸಬೇಕು ಅಂತ ಯಾಕೆ ಅನ್ನಿಸಿರಬಹುದು ಅಂತ ನೋಡಿದಾಗ ಜಿಂಕೆ ಚೆಂದ, ಜಿಂಕೆ ಸಾಧುಪ್ರಾಣಿ ಅನ್ನುವ ಭಾವನೆ, ಹಾವು ಕೆಟ್ಟದ್ದು, ಅಪಾಯಕಾರಿ ಅನ್ನುವ ಹಣೆಪಟ್ಟಿ ಇರಬಹುದು. ಈ ಹಿಂದಿನ ಪಾಠದ ಕಾರಣ ಹಾವು ಆಕ್ರಮಣಕಾರಿ ಕೆಟ್ಟ ಜೀವಿಯಾಗಿ ಜಿಂಕೆ ಸಹಾಯದ ನಿರೀಕ್ಷೆಯ ಸಂತ್ರಸ್ತನಾಗಿ ಕಂಡ ಪರಿಣಾಮ ಹಾವಿನಿಂದ ಜಿಂಕೆಯನ್ನು ಬದುಕಿಸುವ ಪ್ರಯತ್ನ ಮಾಡಿರಬೇಕು. ಹಾವು ಎಷ್ಟು ಹೊತ್ತು ಹಿಡಿದಿತ್ತೋ ಅದರ ಹಿಡಿತದಿಂದ ದೇಹದ ಒಳಗೆ ಏನೆಲ್ಲಾ ಮುರಿದಿರಬಹುದು ಹಾನಿಯಾಗಿರಬಹುದು, ಆ ಜಿಂಕೆ ಎಷ್ಟು ದಿನ ಬದುಕಬಹುದು, ಮುಂದೆ ಹಾವಿನ ಬದಲು ಹುಲಿ ಜಿಂಕೆ ಹಿಡಿದಾಗಾಲು ಹೀಗೆಯೇ ಮಾಡುವೆನೆ? ಜಿಂಕೆ ಏನು ಚಿರಂಜೀವಿಯೆ? ಎಂಬಿತ್ಯಾದಿ ಪ್ರಶ್ನೆಗಳು ಬಚಾವು ಮಾಡಿದಾತ ಕೇಳಿಕೊಂಡಿರಲಾರ. ಆ ಕ್ಷಣದಲ್ಲಿ  ಜೀವನಾನುಭವ ಹೇಳಿದ್ದು ನೈತಿಕತೆಯ ಮೌಲ್ಯಗಳ ಜೀವನದಲ್ಲಿ ಅಳವಡಿಸಿಕೊಂಡಿರುವುದು ಜಿಂಕೆಯ ಪಕ್ಷದಲ್ಲಿತ್ತು ಅಷ್ಟೇ. ಆದರೆ ಇದನ್ನೇ ನಿಯಮವಾಗಿ ಮಾಡಿದ್ರೆ, ಕಟ್ಟಳೆಯಾಗಿ ಹೇರಿದ್ರೆ ಏನಾಗಬಹುದು?

ಜಿಂಕೆಗಳಿರುವ ಕಾಡಿನ ಹತ್ತಿರದ ರೈತರು ಯಾರಾದ್ರೂ ಇದೆ ಪರಿಸ್ಥಿತಿಯಲ್ಲಿ ಇದ್ದಿದ್ದ್ರೆ ಅವರು ಜಿಂಕೆಯನ್ನು ರಕ್ಷಣೆ ಮಾಡುವ ಕೆಲಸಕ್ಕೆ ಹೋಗದೆ ತಮ್ಮ ಬೆಳೆನಾಶ ಕಡಿಮೆ ಮಾಡಿದ ಹಾವಿಗೆ ಕೃತಜ್ಞತೆ ಹೇಳೀರೋರು. ಜಿಂಕೆ ಬದುಕಿಸಿದವ ಮಾನವೀಯ ಗುಣದ ಸಜ್ಜನ ಜಿಂಕೆಯನ್ನು ಸಾಯಲು ಬಿಡುವ ರೈತ ದುರ್ಜನ ಅಂತ ಅರ್ಥವೇ? ಖಂಡಿತ ಇಲ್ಲ. ನಾಳೆ ಹುಲಿಯೊಂದು ಜಿಂಕೆ ಹಿಡಿದಿದೆ ಅಂತ ಆದ್ರೆ ಆಗಲು ಜಿಂಕೆಯನ್ನು ಹುಲಿ ಬಾಯಿಯಿಂದ ಬಿಡಿಸಲು ಹೋಗುವರೆ ಅಂದ್ರೆ ಖಂಡಿತಾ ಇಲ್ಲ. ಆಗ ಜಿಂಕೆಗಿಂತ ಸ್ವಂತದ ಪ್ರಾಣ ಮುಖ್ಯ ಆಗಿರುತ್ತೆ. ಇದು ಏನನ್ನು ಹೇಳುತ್ತದೆ ಅಂದ್ರೆ ಆ ಕ್ಷಣದ ನಿರ್ಧಾರ, ಹಾಗೂ ಪೂರ್ಣವಾಗಿ ವ್ಯಕ್ತಿಗತ ತೀರ್ಮಾನ ಅಷ್ಟೇ. ಇದನ್ನು ಕರುಣೆ-ಕನಿಕರ, ಸಂತ್ರಸ್ತರಿಗೆ ಸಹಾಯ ಅನ್ನುವ ನೈತಿಕ ಮೌಲ್ಯಕ್ಕೆ ಕೊಟ್ಟ ಮನ್ನಣೆ ಅಂತ ಖಂಡಿತ ಗುರುತಿಸುವಂತಿಲ್ಲ.

ಹಾಗಾಗಿ ಪ್ರಶ್ನೆ ಈಗ ಮನುಷ್ಯರ ಹಸ್ತಕ್ಷೇಪ ಇತರ ಜೀವಿಗಳ ಅಥವಾ ಇತರ ಮನುಷ್ಯರ ವಯಕ್ತಿಕ ಜೀವನದಲ್ಲಿ ಸರಿಯೇ ತಪ್ಪೇ ಎಂಬುದು. ನೈಸರ್ಗಿಕ ವ್ಯವಸ್ಥೆಯಲ್ಲಿ ಆಹಾರ ಸರಪಳಿಯಲ್ಲಿ ಒಂದು ಜೀವಿ ಇನ್ನೊಂದರ ಮೇಲೆ, ಜೀವ, ನಿರ್ಜೀವ ಲವಣ, ಗಾಳಿ ಸೂರ್ಯ ಇತ್ಯಾದಿಯ ಮೇಲೆ ಅವಲಂಬಿತವಾಗಿದೆ ಎಂಬುದನ್ನು ಗುರುತಿಸಲಾಗಿದೆ. ಮನುಷ್ಯರ ಆಹಾರಪದ್ದತಿ ಬೇರೆ ಎಲ್ಲಾ ಪ್ರಾಣಿಗಳ ಆಹಾರ ಪದ್ದತಿಗಿಂತ ಸಂಕೀರ್ಣ ಹಾಗೂ ವಿಕಾಸವಾಗುತ್ತಿರುವ, ನಿರಂತರ ಬದಲಾವಣೆ ಹಾಗೂ ಆಯ್ಕೆಯ ಮೇಲೆ ನಿಂತಿದೆ. ಬೇರೆ ಯಾವುದೇ ಜೀವಿ ಇಡಿಯ ಭೂಮಿಗೆ ಹರಡಿಕೊಂಡಿಲ್ಲ ಹಾಗೂ ಭಿನ್ನ ಭಿನ್ನ ವಾತಾವರಣಕ್ಕೆ ಹೊಂದಿಕೊಂಡಿಲ್ಲ. ಮನುಷ್ಯ ಹಾಗೂ ಮನುಷ್ಯರ ಜೊತೆಗಿನ ಕೆಲವು ಜೀವಿಗಳ ಆಹಾರ ಪದ್ದತಿ ಹೀಗೆಯೇ ಇದೆ. ನಮಗೆ ಗಡಿಯಿಲ್ಲ, ನಿರ್ಬಂಧವಿಲ್ಲ. ಹಾಗಂತ ನಾವು ಸಿಕ್ಕಿದ್ದೆಲ್ಲಾ ತಿನ್ನಲಾರೆವು ಕೂಡ. ಇತರ ಜೀವಿಗಳಿಗಿಂತ ಹೆಚ್ಚು ವಿಕಾಸವಾಗಿರುವ ನಮ್ಮ ದೇಹದ ಅಗತ್ಯಕ್ಕೆ ತಕ್ಕಂತೆ ನಮ್ಮ ಆಹಾರಪದ್ದತಿ ಇದೆ. ಅದರಲ್ಲಿ ಏನೇ ಏರುಪೇರು ಮಾಡಿಕೊಂಡರು ಅದಕ್ಕೆ ತಕ್ಕ ಸಮಸ್ಯೆ ಕೂಡ ನಮ್ಮನ್ನು ಕಾಡುವುದು.

ನೈಸರ್ಗಿಕ ಆಹಾರ ಸರಪಳಿಯಲ್ಲಿ ನಮ್ಮ ಹಸ್ತಕ್ಷೇಪದಿಂದ ನೈಸರ್ಗಿಕ ವ್ಯವಸ್ಥೆಯಲ್ಲಿ ಅಸಮತೋಲನವಾಗುತ್ತದೆ. ಪ್ರಕೃತಿ ಪ್ರತಿಯೊಂದು ಜೀವಿ ತನ್ನ ಸುತ್ತಲಿನ ಪರಿಸರ ಹಾಗೂ ಇತರ ಜೀವಿಗಳೊಂದಿಗೆ ಬೇರೆ ಬೇರೆ ರೀತಿಯ ಅನಿವಾರ್ಯ ಸಂಬಂಧಗಳನ್ನು ಹೊಂದುವುದು ಕಡ್ಡಾಯ ಮಾಡಿದೆ. ಯಾವುದೇ ಜೀವಿಯು ಸಮತೋಲಿತ ಪ್ರಮಾಣಕ್ಕಿಂತ ಹೆಚ್ಚು ಸಂಖ್ಯೆ ಬೆಳೆಸಿಕೊಳ್ಳಬಾರದೆಂದು ನಿಯಂತ್ರಣಕ್ಕೆ ಬೇರೆ ಬೇರೆ ಕ್ರಮಗಳನ್ನು ಪ್ರಕೃತಿಯೇ ರೂಪಿಸಿದೆ. ಜಿಂಕೆಗಳನ್ನು ಎಲ್ಲಾ ಮಾಂಸಾಹಾರಿಗಳಿಂದ ಕಾಪಾಡುತ್ತಾ ಹೋದರೆ ಮುಂದೆ ಅವು ಅನಿಯಂತ್ರಿತ ಬೆಳೆದು ಯಾವುದೇ ಧಾನ್ಯಗಳ ಉತ್ಪಾದನೆ ಬಿಡುವುದಿಲ್ಲ. ಆಗ ಧಾನ್ಯಗಳನ್ನು ತಿಂದು ಬದುಕುವ ಮನುಷ್ಯ ಸೇರಿದಂತೆ ಇತರ ಜೀವಿಗಳ ಕಥೆ? ಕೀಟಗಳನ್ನು ಶತ್ರುಗಳೆಂದು ಪರಿಗಣಿಸಿ ಕೀಟ ನಿಯಂತ್ರಣ ಬಿಟ್ಟು, ಕೀಟ ನಾಶಕ್ಕೆ ಇಳಿದ ಪರಿಣಾಮ ಕೀಟಗಳ ನೈಸರ್ಗಿಕ ನಿಯಂತ್ರಕಗಳು ಗಂಭೀರ ಸಮಸ್ಯೆಯಲ್ಲಿವೆ, ಹಾಗೂ ಕೀಟಗಳಲ್ಲಿ ಗಟ್ಟಿಜಾತಿಗಳ ವಿಕಾಸವಾಗಿ ಆಹಾರಭದ್ರತೆಗೆ ಸವಾಲೊಡ್ದಿವೆ. ಮಂಗನ ಬ್ಯಾಟೆ ಮಾಡದಂತೆ ಮಾಡಿ, ಮಂಗನ ನೈಸರ್ಗಿಕ ನಿಯಂತ್ರಕಗಳು ಇಲ್ಲವಾಗಿ ಮಂಗಗಳು ವಿಪರೀತ ಬೆಳೆದು ಮಲೆನಾಡಿನಲ್ಲಿ ವ್ಯವಸಾಯ ದುಸ್ತರವಾಗಿದೆ. ಸ್ಥಾಪಿತ ಹಿತಾಸಕ್ತಿಯ ರಾಜಕೀಯದಿಂದ ಕಾಡುಪ್ರಾಣಿಗಳ ಸಂಖ್ಯೆ ದೊಡ್ಡ ಮಟ್ಟದಲ್ಲಿ ಬೆಳೆದು, ಅವುಗಳ ಆಹಾರಕ್ಕೆ ಹಾಗೂ ವಾಸಕ್ಕೆ ಕೊರತೆಯಾಗಿ ಪ್ರಾಣಿ ಮನುಷ್ಯರ ಸಂಘರ್ಷ ಹೆಚ್ಚಾಗಿದೆ.

ನಮ್ಮಲ್ಲಿ ಬಲಬಿಡಂಗಿತನ ಗಾಢವಾಗಿದೆ. ನಮ್ಮಾನುಕೂಲಕ್ಕೆ ತಕ್ಕಂತೆ ನೈತಿಕತೆಯ ಮೌಲ್ಯಗಳನ್ನು ಬದಲಾಯಿಸಿಕೊಳ್ಳುತ್ತೇವೆ, ಹಾಗೂ ತಕ್ಕ ಕಳ್ಳ ಸಮರ್ಥನೆ ಕೂಡ ನಮ್ಮಲ್ಲಿ ಸಿದ್ದವಾಗಿರುತ್ತದೆ.

ನಮಗೆ ಕಾಯಿಲೆ ತರುವ ಜೀವಿಗಳು ಜೀವಿಗಳೇ, ನಮ್ಮ ಬೆಳೆಗಳನ್ನು ನಾಶಮಾಡುವ ಜೀವಿಗಳು ಜೀವಿಗಳೇ, ನಮ್ಮ ರಕ್ತ ಹೀರುವ ಸೊಳ್ಳೆ ನೊಣ ಹಿಂಬಳ ಜೀವಿಗಳಲ್ಲವೇ? ಅವು ಜೀವಿಗಳು ಅಂತ ಯಾರಾದ್ರೂ ನಮ್ಮನ್ನು ಕಚ್ಚಲು ಬಿಡುವಿರಾ? ನಾವೆಷ್ಟು ಜಾಣರು ಅಂದ್ರೆ ಜೀವಿಗಳನ್ನು ನಮ್ಮ ಅನುಕೂಲಕ್ಕೆ ಬರುವ ಬಾರದಿರುವ ಅಂತ ವಿಂಗಡಿಸಿ ಅನುಕೂಲಕ್ಕೆ ಬರುವವನ್ನು ಮಿತ್ರರೆಂದು ಬಾರದಿರುವವರನ್ನು ಶತ್ರುಗಳೆಂದು ಕರೆದು ಶೋಷಣೆಯನ್ನು ಅವ್ಯಾಹತ ಮಾಡುತ್ತಿದ್ದೇವೆ. ಇತರ ಜೀವಿಗಳನ್ನು ತನ್ನ ಅನುಕೂಲಕ್ಕೆ ಪಳಗಿಸಿದ ಹಾಗೂ ಬಳಸುವ ಮನುಷ್ಯ ಆ ಜೀವಿಗಳಲ್ಲಿ ಹಲವು ಜೀವಿಗಳ ನೈಸರ್ಗಿಕ ಬದುಕನ್ನೇ ಇನ್ನಿಲ್ಲವೆಂಬಂತೆ ಮಾಡಿ ಅವುಗಳ ಜೀವನ ನಮ್ಮ ಹೊರತು ಅಸಾಧ್ಯ ಎಂಬ ಪರಿಸ್ಥಿತಿ ಸೃಷ್ಟಿಸಿದ್ದಾನೆ. ನೈಸರ್ಗಿಕ ವ್ಯವಸ್ಥೆಯನ್ನು ತಿಳಿಯದೆ ನಾನು ಸಸ್ಯಾಹಾರಿ ನಮ್ಮನೆ ನಾಯಿಯನ್ನು ಸಸ್ಯಾಹಾರ ಮಾಡಿ ಅಹಿಂಸೆಯನ್ನು ಎತ್ತಿಹಿಡಿದ ಆಧುನಿಕ ಬುದ್ಧ ನಾನು ಎಂದು ಅಂದುಕೊಳ್ಳುವುದು ಮನಸ್ಸಿನಲ್ಲಿ ಆಗ್ತಾ ಇರುವ ನೈತಿಕ ಸಂಘರ್ಷದಲ್ಲಿ ಕೊಂಚ ಶಾಂತಿಯನ್ನು ತರುವುದಷ್ಟೇ ಆಗಿದೆ.

ಜೀವನದಲ್ಲಿ ಸುಸ್ತಿಯಲ್ಲಿರುವವರಿಗೆ ಒಂದಿಷ್ಟು ಪಾಪಪ್ರಜ್ಞೆಗಳು ಕಾಡುತ್ತಿರುತ್ತವೆ. ಪಾಪಗಳನ್ನು ಕಡಿಮೆ ಮಾಡಿಕೊಳ್ಳಲಾರದಷ್ಟು ಆ ಬದುಕಿಗೆ ಹೊಂದಿಕೊಂಡಿರುವ ಅವರು ಪಾಪ ಪರಿಹಾರಕ್ಕೆ ಒಂದಿಷ್ಟು ದಾನ ಧರ್ಮ ಅಂತ ಮಾಡ್ತಾರೆ. ಪಾಪಗಳು ನಡೀತಾ ಇರ್ತವೆ, ಅದನ್ನು ತಡೆಯಕ್ಕೆ ಆಗೋಲ್ಲ ಅದು ಸೃಷ್ಟಿಯ ನಿಯಮ, ಕಾಲದ ಮಹಿಮೆ, ಪೂರ್ವಜನ್ಮದ/ ಕರ್ಮದ ಕಾರಣ ಹಾಗಾಗಿ, ಪರಿಹಾರ ಕ್ಕೆ ಅಂತ ಒಂದಿಷ್ಟು ದಾರಿಗಳನ್ನು ಕೂಡ ಹುಟ್ಟುಹಾಕಿದ್ದೇವೆ. ಅದನ್ನು ಪಾಲಿಸಿದರೆ ಪುಣ್ಯದ ಲೆಕ್ಕಾಚಾರದಲ್ಲಿ ಸಮತೋಲನ ತಂದು ನರಕದಿಂದ ಬಚಾವ್ ಆಗಬಹುದು ಅನ್ನುವ ನಂಬಿಕೆ. ಇದನ್ನೇ ಮುಖ್ಯಸ್ಥರದ ಮತಗಳು ಕೂಡ ಬೋಧಿಸುತ್ತವೆ.

ಕಳೆದ 2000 ವರ್ಷಗಳಲ್ಲಿ ಮನುಷ್ಯರ ವಿಕಾಸದ ವೇಗ ಅತಿಯಾಗಿದೆ. ತಾಂತ್ರಿಕತೆಯ ವಿಕಾಸ ಹೆಚ್ಚಾದಂತೆ ವಿನಾಶ ಕಮ್ಮಿ ಆಗಬೇಕಾಗಿದ್ದು ಜಾಸ್ತಿ ಆಗ್ತಾ ಇದೆ. ಮನುಷ್ಯರಿಗೆ ಮಿತಿಯ ಬಗ್ಗೆ, ತೃಪ್ತಿಯ ಬಗ್ಗೆ ತಿಳುವಳಿಕೆ ಕಲಿಸುವ ಅಗತ್ಯವಿದೆ. ಒಬ್ಬ ಮನುಷ್ಯನಿಗೆ ಸಂತೋಷವಾಗಿ ಬದುಕಲು ಎಷ್ಟು ಬೇಕು ಅನ್ನುವ ಕಲ್ಪನೆಯೇ ಇಲ್ಲದೆ ಹೋದರೆ ಆತನ ವಿಸ್ತರಣೆ ಅದಕ್ಕೆ ಮಾಡುವ ನಾಶಕ್ಕೆ ಮಿತಿಯಿರಲು ಸಾದ್ಯವೇ? ನಮಗೆ ಇಷ್ಟರಲ್ಲಿ ತೃಪ್ತಿ ಸಿಗುತ್ತದೆ ಅಂತ ಅರಿವಿಗೆ ಬಂದಾಗ ನೈಸರ್ಗಿಕ ವ್ಯವಸ್ಥೆಯ ಜೊತೆ ಹೊಂದಿಕೊಂಡಾಗ, ಸಮತೋಲನ ಸಾದ್ಯವಾಗುತ್ತದೆ, ಭೂಮಿಯು ಜೀವಗಳಿಗೆ ಕೊಡುವ ಆಸರೆಯ ಕಾಲ ಹೆಚ್ಚಾಗುತ್ತದೆ. ಹಾಗೂ ವಿಕಾಸ ಮುಂದುವರೆದು ಇನ್ನಷ್ಟು ಬದಲಾವಣೆ ಸಾಧ್ಯವಾಗಬಹುದು.

(ಶೃಂಗೇರಿಯವರಾದ ಕೃಷಿಕ್ Regenerative Medicine ನಲ್ಲಿ MSc ಮಾಡಿದ್ದಾರೆ. ಸಾಮಾಜಿಕ ಆಗುಹೋಗುಗಳ ಮೇಲೆ ಸೂಕ್ಷ್ಮವಾಗಿ ಸ್ಪಂದಿಸುವ ಈ ಯುವಕ ಸದ್ಯಕ್ಕೆ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ.)


ಇದನ್ನೂ ಓದಿ: ಫ್ಯಾಕ್ಟ್‌ಚೆಕ್‌: ಕೇರಳದಲ್ಲಿ ಗರ್ಭಿಣಿ ಆನೆ ಸಾವು – ಎಲ್ಲೆಡೆ ಹರಡಿದ ಎರಡು ದೊಡ್ಡ ಸುಳ್ಳುಗಳು 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಗೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ: ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ

0
ಲೋಕಸಭೆ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರದ ಟಿಕೆಟ್‌ ಕೈತಪ್ಪಿದ ಹಿನ್ನೆಲೆ ಬಿಜೆಪಿ ವಿರುದ್ದ ಮುನಿಸಿಕೊಂಡಿದ್ದ ಹಾಲಿ ಸಂಸದ ಸಂಗಣ್ಣ ಕರಡಿ ಅವರು ತಮ್ಮ ಸಂಸದ ಸ್ಥಾನಕ್ಕೆ ಮತ್ತು ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ...