Homeಕರ್ನಾಟಕಧರ್ಮಸ್ಥಳದ ’ನಿರ್ಭಯಾ’ ಪ್ರಕರಣ: ಪರಮ ಪಾಪಿಗಳ ಪಾರು ಮಾಡಲು ಫಿಕ್ಸ್ ಮಾಡಲಾಗಿದ್ದ ಸಂತೋಷ್ ರಾವ್ ಕುಟುಂಬದ...

ಧರ್ಮಸ್ಥಳದ ’ನಿರ್ಭಯಾ’ ಪ್ರಕರಣ: ಪರಮ ಪಾಪಿಗಳ ಪಾರು ಮಾಡಲು ಫಿಕ್ಸ್ ಮಾಡಲಾಗಿದ್ದ ಸಂತೋಷ್ ರಾವ್ ಕುಟುಂಬದ ಕಣ್ಣೀರ ಕತೆ!!

- Advertisement -
- Advertisement -

ಧರ್ಮಸ್ಥಳದ ಸೌಜನ್ಯ ಗೌಡ ಅತ್ಯಾಚಾರ-ಕೊಲೆ ಪ್ರಕರಣಕ್ಕೆ ಒಂದಲ್ಲ, ಎರಡೆರಡು ಬರ್ಬರ-ಭಯಾನಕ ಮತ್ತು ಅಷ್ಟೇ ಕರುಣಾಜನಕ ಆಯಾಮವಿದೆ. ಪಿಯುಸಿ ಓದುತ್ತಿದ್ದ ಪುಟ್ಟ ಬಾಲಕಿ ಸೌಜನ್ಯಳನ್ನು ಹಾಡುಹಗಲೆ ಅಪಹರಿಸಿದ ನುರಿತ ರೇಪಿಸ್ಟ್‌ಗಳು ರಾತ್ರಿಯಿಡೀ ಅತ್ಯಾಚಾರ-ಹಿಂಸಾಚಾರಮಾಡಿ ಕೊನೆಗೆ ಕೊಂದುಹಾಕಿ ಬೆಳಕು ಹರಿಯುವುದರಲ್ಲಿ ಛಿಧ್ರ-ವಿಚ್ಛಿದ್ರ ಅರೆಬೆತ್ತಲೆ ಮೃತ ದೇಹವನ್ನು ಕಾಡಿನಲ್ಲಿ ಎಸೆದುಹೋದ ಪಾತಕಕ್ಕೆ ಮತ್ತೊಂದು ಹೃದಯವಿದ್ರಾವಕವಾದ ದೌರ್ಜನ್ಯ ಕಥನ ಹೆಣೆದುಕೊಂಡಿದೆ! ಧರ್ಮಸ್ಥಳದಲ್ಲಿ ಇಂಥದೊಂದು ಘನಘೋರ ಕರ್ಮಕಾಂಡ ಆಗಿರುವುದು ಒಂಚೂರೂ ಗೊತ್ತಿಲ್ಲದ ಸಂತೋಷ್ ರಾವ್ ಎಂಬ ಭಾಗಶಃ ಮಾಸಿಕ ಅಸ್ವಸ್ಥತೆಯ ನಿಷ್ಪಾಪಿ ತರುಣನೇ ಅತ್ಯಾಚಾರಿ ಕೊಲೆಗಡುಕನೆಂದು ಹಸಿಹಸೀ ಸುಳ್ಳು ಕೇಸುಹಾಕಿ ಚಿತ್ರ ಹಿಂಸೆಕೊಟ್ಟು ಕಾಡಿದ ಲೋಕಲ್-ಸಿಐಡಿ-ಸಿಬಿಐ ಪೊಲೀಸರು ಅವರ ಇಡೀ ಕುಟುಂಬವನ್ನೇ ಬರ್ಬಾದ್ ಮಾಡಿಬಿಟ್ಟಿದ್ದಾರೆ! ಸೌಜನ್ಯ (ಅ)ಧರ್ಮಸ್ಥಳದ “ದೇವಮಾನವ” ಪರಿವಾರ ಸನ್ನಿಧಿಯ ಮಣ್ಣಲ್ಲಿ ಮಣ್ಣಾಗಿಹೋಗಿದ್ದರೆ, ಸಂತೋಷ್ ರಾವ್ ಜೀವಂತ ಶವವಾಗಿ ದಿನದೂಡುತ್ತಿದ್ದಾರೆ.

ಅದು ಕಲ್ಲು ಕರಗುವ ಸಮಯ! ಕಾರ್ಕಳದ ಬೈಲೂರಿನ ಹತ್ತಿರತ್ತಿರ ಎಂಭತ್ತು ವರ್ಷದ ಹಣ್ಣುಹಣ್ಣು ಹಿರಿಯ ಜೀವ ಸುಧಾಕರ್ ರಾವ್ ಮನೆಯ ಪುಟ್ಟ ಪಡಸಾಲೆಯಲ್ಲಿ ಕುಳಿತು ಸದ್ದಿಲ್ಲದೆ ರೋದಿಸುವುದನ್ನು ಕೇಳಿದ ಎಂಥ ಗಟ್ಟಿ ಗುಂಡಿಗೆಯವರನ್ನೂ ಒಂದುಕ್ಷಣ ಕಂಗೆಡಿಸದೆ ಇರದು! ಈ ಸುಧಾಕರ್ ರಾವ್ ಸೌಜನ್ಯ ಪ್ರಕರಣದ ಅಸಲಿ ಪಾಪಿಗಳನ್ನು ಬಚಾವ್ ಮಾಡಲು ಫಿಕ್ಸ್ ಮಾಡಲಾಗಿದ್ದ ಸಂತೋಷ್ ರಾವ್ ತಂದೆ. ಹುಸಿ ಅಪವಾದದ ಬರಸಿಡಿಲಿನಿಂದ ಸುಧಾಕರ್ ರಾವ್ ಕುಟುಂಬದ ಒಳ-ಹೊರಗೆ ಸೃಷ್ಟಿಯಾಗಿರುವ ಅಸಹನೀಯ ಸಂಕಟ ಊಹೆಗೂ ನಿಲುಕದಂಥದ್ದು. ಈಚೆಗೆ ಸಂತೋಷ್ ನಿರಪರಾಧಿಯೆಂದು ಸಿಬಿಐ ನ್ಯಾಯಾಲಯ ತೀರ್ಪು ಘೋಷಿಸಿದೆ. ಆದರೆ ಸುಧಾಕರ್ ರಾವ್ ಕುಟುಂಬ ಕಳೆದ 11 ವರ್ಷದಿಂದ ಅನುಭವಿಸುತ್ತಿರುವ ಮಾನಸಿಕ-ಸಾಮಾಜಿಕ-ಆರ್ಥಿಕ ಕಷ್ಟ-ನಷ್ಟ, ಅಪಮಾನ-ಅವಹೇಳನ ಹೇಳತೀರದು. “ನನ್ನ ತಮ್ಮ ನಿರ್ದೋಷಿಯೆಂದು ಈಗ ಕೋರ್ಟ್ ಹೇಳಿದೆ.ಸುಳ್ಳು ಮೊಕದ್ದಮೆ ಹಾಕಿ ನಮ್ಮ ಮನೆಯ ಸಂತೋಷ-ನೆಮ್ಮದಿ ಹಾಳುಗೆಡವಿ ಬದುಕು ಮುರಿದು ಹಾಕಿದರಲ್ಲ; ಈಗವನ ಬದುಕು ಯಾರು ಕಟ್ಟಿಕೊಡುತ್ತಾರೆ? ನಮ್ಮ ತಾಯಿಯನ್ನು ಯಾರು ತಂದುಕೊಡುತ್ತಾರೆ?” ಎನ್ನುತ್ತ ತಮ್ಮನಿಗಾಗಿ ಸುದೀರ್ಘ ಕಾನೂನು ಹೋರಾಟ ನಡೆಸಿದ್ದ ಸಂತೋಷ್ ಅಣ್ಣ ಸಂಜಯ್ ರಾವ್ ಉಮ್ಮಳಿಸಿ ಬರುವ ದುಃಖ ತಡೆಯಲಾಗದೆ ಬಿಕ್ಕಳಿಸುತ್ತಾರೆ.

ಸರಿಸುಮಾರು 38 ವರ್ಷ ವಿದ್ಯಾರ್ಥಿ ಸಮೂಹಕ್ಕೆ ವಿದ್ಯೆ-ಬುದ್ಧಿ ಕಲಿಸಿದ ಸುಧಾಕರ್ ರಾವ್‌ರ ನಾಲ್ಕು ಮಕ್ಕಳಲ್ಲಿ ಸಂತೋಷ್ ಮೂರನೆಯವರು. ಡಿಪ್ಲೊಮಾ ಮಾಡಿಕೊಂಡಿದ್ದ ಸಂತೋಷ್‌ಗೆ ಮಾನಸಿಕ ಸಮಸ್ಯೆ ಶುರುವಾಗಿತ್ತು. ವರ್ಷಾನುಗಟ್ಟಲೆ ಶಿವಮೊಗ್ಗದ ಮನೋರೋಗ ತಜ್ಞ ವೈದ್ಯರೊಬ್ಬರಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ವಿದ್ಯೆಗೆ ತಕ್ಕ ಉದ್ಯೋಗ ಸಿಗದ ಬೇಸರವೂ ಇತ್ತು. ಸ್ವಲ್ಪ ಆರಾಮಾದಾಗ ಅಲ್ಲಿ-ಇಲ್ಲಿ ಹೊಟೇಲ್ಲು ಮತ್ತಿತರೆಡೆ ಕೆಲಸ ಮಾಡುತ್ತಿದ್ದ ಸಂತೋಷ್, ಸೌಜನ್ಯ ಅಪಹರಣ ಮತ್ತು ಅತ್ಯಾಚಾರವಾದ ದಿನ (9.10.2012) ಶೃಂಗೇರಿಯಲ್ಲಿದ್ದರು; ಶೃಂಗೇರಿಯ ಶಾರದಾ ಹೊಟೇಲಿನಲ್ಲಿ ಕ್ಲೀನರ್-ಸಪ್ಲೈಯರ್ ಆಗಿದ್ದ ಸಂತೋಷ್ ಆಧ್ಯಾತ್ಮದೆಡೆ ಆಕರ್ಷಿತರಾಗಿದ್ದರು. ಕೈಗೆ ನಾಲ್ಕು ಕಾಸು ಸಿಕ್ಕರೆ ಗುಡಿ-ಗುಂಡಾರ ಸುತ್ತುವ ಸ್ವಭಾವದ ಸಂತೋಷ್ ಸೌಜನ್ಯ ಮೃತ ದೇಹ ಸಿಕ್ಕಿದ ಎರಡನೇ ದಿನ (11.10.2012) ಮುಂಜಾನೆ ಶೃಂಗೇರಿಯಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಂದಿದ್ದರು; ಅಲ್ಲಿ ದೇವರ ದರ್ಶನ ಮುಗಿಸಿ ಸಂಜೆ ಹೊತ್ತಿಗೆ ಧರ್ಮಸ್ಥಳಕ್ಕೆ ಬಂದಿದ್ದರು. ಸಂಜೆಗತ್ತಲಿನಲ್ಲಿ ರೂಮಿಗಾಗಿ ಹುಡುಕಾಡಿದ್ದಾರೆ; ಯಾತ್ರಿಕರು ಹೆಚ್ಚಿದ್ದರಿಂದ ರೂಮ್ ಸಿಗಲಿಲ್ಲ.

ಹಾಗೇ “ಧರ್ಮ”ದ ಬೀಡಲ್ಲಿ ಅಡ್ಡಾಡುತ್ತ ಸುಸ್ತಾದ ಸಂತೋಷ್ ಗೊಮ್ಮಟಗಿರಿಯ ಮೆಟ್ಟಿಲುಗಳ ಮೇಲೆ ಕುಳಿತಿದ್ದಾರೆ. ಧರ್ಮಸ್ಥಳ ದೇವಳದ ಅಕೌಂಟೆಂಟ್ ಮಲ್ಲಿಕ್ ಜೈನ್ ಹಾಗು ಕಾವಲುಗಾರ ರವಿ ಪೂಜಾರಿ ಮುಂದಾಳತ್ವದ ಗುಂಪೊಂದು ಇದ್ದಕ್ಕಿದ್ದಂತೆ ಸಂತೋಷ್ ಮೇಲೆ ಮುಗಿಬಿದ್ದು ಹಲ್ಲೆ ಮಾಡುತ್ತದೆ. “ಈತನೆ ಸೌಜನ್ಯಳ ರೇಪ್-ಮರ್ಡರ್ ಮಾಡಿದ್ದಾನೆ” ಎಂದು ಸಂತೋಷ್‌ರನ್ನು ಅವರು ಪೊಲೀಸರರಿಗೆ ಒಪ್ಪಿಸುತ್ತಾರೆ. ಮಲ್ಲಿಕ್ ಜೈನ್ ತಂಡದ ಅಮಾನುಷ ದಾಳಿಯಿಂದ ಮಾತಾಡಲಾರದಷ್ಟು ನಿತ್ರಾಣರಾಗಿದ್ದ ಸಂತೋಷ್‌ರನ್ನು ಬೆಳ್ತಂಗಡಿ ಪೊಲೀಸರು ಜೀಪಿಗೆ ತುಂಬಿಕೊಂಡು ಠಾಣೆಗೆ ಕರೆದೊಯ್ಯುತ್ತಾರೆ; ಠಾಣೆಯಲ್ಲಿ ಪೊಲೀಸರೂ ಹೊಡೆದು-ಬಡಿದು ಸೌಜನ್ಯಳ ರೇಪ್-ಕೊಲೆ ಮಾಡಿರುವುದಾಗಿ ಒಪ್ಪಿಕೊಳ್ಳುವಂತೆ ಬಲವಂತ ಮಾಡುತ್ತಾರೆ. ತನಗೇನೂ ಗೊತ್ತಿಲ್ಲ; ತಾನು ನಿರಪರಾಧಿಯೆಂದು ಸಂತೋಷ್ ಪರಿಪರಿಯಾಗಿ ಗೋಗರೆದರೂ ಪೊಲೀಸರದು ಒಂದೇ ಒತ್ತಾಯ, ರೇಪ್-ಮರ್ಡರ್ ಒಪ್ಪಿಕೋ ಎನ್ನುವುದಾಗಿತ್ತು ಎಂದು ಸಂತೋಷ್ ಅಣ್ಣ ಸಂಜಯ್ ಹೇಳುತ್ತಾರೆ.

ಸಂತೋಷ್‌ರನ್ನು ಕಾರ್ಕಳ ಠಾಣೆಗೆ ಕರೆತಂದಾಗ ಮಗನನ್ನು ಬಿಡಿಸಿಕೊಂಡು ಬರುವ ಆಸೆಯಿಂದ ಸುಧಾಕರ್ ರಾವ್ ತಮ್ಮ ಸಹೋದರನನ್ನು ಕರೆದುಕೊಂಡು ಹೋಗುತ್ತಾರೆ. ಅಲ್ಲಿ ತನ್ನೆದುರೆ ಪೊಲೀಸರು ಮಗನನ್ನು ಹಿಂಸಿಸುವುದು ನೋಡಲಾಗದೆ ಮನೆಗೆ ಓಡಿಬರುತ್ತಾರೆ. ರಾತ್ರಿ ಸುಧಾಕರ್ ರಾವ್‌ಗೆ ಫೋನಾಯಿಸಿದ ಪೊಲೀಸರು “ಸಂತೋಷ್ ವಿಪರೀತ ಗಲಾಟೆ ಮಾಡುತ್ತಿದ್ದಾನೆ; ನೀವೊಮ್ಮೆ ಬನ್ನಿರಿ” ಎನ್ನುತ್ತಾರೆ. ಸುಧಾಕರ್ ರಾವ್ ಸ್ಟೇಷನ್ನಿಗೆ ಹೋದಾಗ ಅಲ್ಲಿ ಎಸ್ಪಿ ಅಭಿಷೇಕ್ ಗೋಯಲ್ ಸಂತೋಷ್ ತಲೆಯನ್ನು ಗೋಡೆಗೆ ಚಚ್ಚುತ್ತ “ತಪ್ಪೊಪ್ಪಿಕೊಇಲ್ಲದಿದ್ದರೆ ನಿನ್ನ ತಂದೆ ಮತ್ತು ಅಣ್ಣ-ತಮ್ಮಂದಿರನ್ನು ಪ್ರಕರಣದಲ್ಲಿ ಸೇರಿಸಬೇಕಾಗುತ್ತದೆ” ಎಂದಬ್ಬರಿಸುತ್ತಿದ್ದರೆಂದು ಸುಧಾಕರ್ ದಶಕದ ಹಿಂದಿನ ದುರ್ಘಟನೆಯನ್ನು ನೆನಪುಮಾಡಿ ಹೇಳುತ್ತಾರೆ.

ಇದನ್ನೂ ಓದಿ: ಸೌಜನ್ಯ ಕೇಸ್: ‘ಅಭಿಮಾನಿಗಳನ್ನು ನಾನೇ ತಡೆದಿರುವೆ, ಏನನ್ನಾದರೂ ಮಾಡಲು ಸಿದ್ದ’: ಹೋರಾಟಗಾರರಿಗೆ ಹೆಗ್ಗಡೆ ಪರೋಕ್ಷ…

ಸಂತೋಷ್ ಪೊಲೀಸರ ಚಿತ್ರ ಹಿಂಸೆ ತಾಳಲಾರದೆ “ಅಪ್ಪಾ, ನಾನು ತಪ್ಪೊಪ್ಪಿಕೊಂಡು ಬಿಡುತ್ತೇನೆ,ಪೊಲೀಸರ ಹೊಡೆತದ ನೋವು ನನ್ನಿಂದ ಸಹಿಸಲು ಸಾಧ್ಯವಿಲ್ಲ” ಎಂದು ಹೇಳುತ್ತಾರೆ. “ಮಾಡದ ತಪ್ಪು ನೀನ್ಯಾಕೆ ಒಪ್ಪಿಕೊಳ್ಳುತ್ತೀಯಾ; ಒಪ್ಪಬೇಡ” ಎಂದು ಸುಧಾರ್ ರಾವ್ ಮಗನಿಗೆ ಸಮಾಧಾನ ಮಾಡುತ್ತಾರೆ. “ಇಲ್ಲ ಅಪ್ಪ ನಾನು ಸತ್ತರು ಸರಿ; ನಿನಗೇನೂ ಆಗಬಾರದು. ಇನ್ನೂ ಮೂವರು ಸೋದರಿಯರ ಸಲುವಾಗಿ ನಿನಗೆ ತೊಂದರೆ ಆಗಬಾರದು” ಎಂದು ತಮ್ಮ ಸಂತೋಷ್ ರಾವ್ ಹೇಳಿದ್ದನೆಂದು ಹಿಂದಿನ ಯಾತನಾಮಯ ದಿನಗಳ ಕತೆ ಸಂಜಯ್ ಹೇಳುತ್ತಾರೆ. ಈ ಪ್ರಕರಣದಲ್ಲಿ ವಿಪರೀತ “ಆಸಕ್ತಿ” ವಹಿಸಿದ್ದ ಅಂದಿನ ದಕ್ಷಿಣ ಕನ್ನಡದ ಎಸ್ಪಿ ಅಭಿಷೇಕ್ ಗೋಯಲ್ ಆದಿಯಾಗಿ ರಾಜ್ಯ-ಕೇಂದ್ರದ ಪೊಲೀಸ್ ವ್ಯವಸ್ಥೆ ಧರ್ಮಸ್ಥಳದ “ದೇವರ” ಪ್ರೇರಣೆಯೋ ಎಂಬಂತೆ ಖಾಕಿ ನಿಯತ್ತಿನ ಬದ್ಧತೆ ತೋರಿಸದೆ ಕೇಸನ್ನು ಹಳ್ಳಹಿಡಿಸುವ ಪೂರ್ವಸಿದ್ಧತೆಯ ನಾಟಕ ನಡೆಸಿದರೆಂದು ಸೌಜನ್ಯ ಸಾವಿಗೆ ನ್ಯಾಯ ಕೊಡಿಸುವ ಹೋರಾಟದ ಕಟ್ಟಿದ ಮುಂದಾಳುಗಳು ಆಕ್ರೋಶ ವ್ಯಕ್ತಪಡಿಸುತ್ತಾರೆ.

ಪೊಲೀಸರ ಬೂಟು-ಲಾಠಿ ಏಟಿಗೆ ಹೈರಾಣಾದ ಸಂತೋಷ್ ಮಾಡದ ಅಪರಾಧ ಮಾಡಿದ್ದೇನೆ ಎನ್ನುವಂತಾಗುತ್ತದೆ. ಅತ್ತ ಸಂತೋಷ್ ಜೈಲಿನಲ್ಲಿ ಯಮಯಾತನೆ ಅನುಭವಿಸುತ್ತಿದ್ದರೆ, ಇತ್ತ ಸಂತೋಷ್ ಕುಟುಂಬ ಒಂಥರಾ ಸಾಮಾಜಿಕ ಬಹಿಷ್ಕಾರಕ್ಕೆ ತುತ್ತಾಗುತ್ತದೆ. ಹಂತಹಂತವಾಗಿ ಸಂತೋಷ್ ಮತ್ತವರ ಕುಟುಂಬದ ಬದುಕು ಅಕ್ಷರಶಃ ನರಕವಾಗುತ್ತ ಹೋಗುತ್ತದೆ. ಸುತ್ತಮುತ್ತಲಿನಲ್ಲಿ ಸುಧಾಕರ್ ರಾವ್ ಸಂಸಾರಕ್ಕೆ ಮರ್ಯಾದೆ ಇಲ್ಲದಂತಾಗುತ್ತದೆ; ಸಮಾಜದಲ್ಲಿ ತಲೆಯೆತ್ತಿ ತಿರುಗಾಡದಂತಾಗುತ್ತದೆ. ನೆಂಟರು-ಬಂಧುಗಳು ದೂರಾದರು; ಪರಿಚಿತರು ಮುಖ ತಿರುಗಿಸಿಕೊಂಡು ಹೋಗಲಾರಂಭಿಸಿದರು. ಸಂತೋಷ್ ಅಣ್ಣ ಮತ್ತು ತಮ್ಮನಿಗೆ 38-40 ವರ್ಷವಾದರೂ ಮದುವೆಗೆ ಹೆಣ್ಣು ಸಿಗದಂತಾಯ್ತು. ಸಂತೋಷ್ ತಾಯಿ ಪುತ್ರ ಶೋಕದಿಂದ ಹಾಸಿಗೆ ಹಿಡಿದರು. ಮಗನ ಭೇಟಿಗೆ ಅವಕಾಶ ಕಲ್ಪಿಸುವಂತೆ ಪದೇಪದೇ ಅರ್ಜಿ ಹಾಕಿದರೂ ಆ ತಾಯಿಯ ಮನವಿಯನ್ನು ನ್ಯಾಯಾಲಯ ಪುರಸ್ಕರಿಸಲಿಲ್ಲ. ಕೊರಗಿಕೊರಗಿ ಸಂತೋಷ್ ತಾಯಿ ಅಸುನೀಗಿದರು! ಹಿರಿಯ ಸೊಸೆ ಮನೆಗೆ ಬರಲು ತಯಾರಿಲ್ಲ; ಬಂದರೆ ತನ್ನೆರಡು ಹೆಣ್ಣು ಮಕ್ಕಳ ಭವಿಷ್ಯಕ್ಕೆ ತೊಂದರೆಯಾಗುತ್ತದೆಂಬ ಭಯ. ಬದುಕಿನ ಸಂಜೆಯಲ್ಲಿರುವ ಸುಧಾಕರ್ ರಾವ್‌ರನ್ನು ನೋಡಿಕೊಳ್ಳುವವರಿಲ್ಲದಾಗಿದೆ. ಗಂಡು ಮಕ್ಕಳು ಅಪ್ಪನಿಗೊಂದಿಷ್ಟು ಬೇಯಿಸಿಟ್ಟು ಹೋದರೆ ಬರುವುದು ಕತ್ತಲಾದಮೇಲೆ. ದೇವರ ಹೆಸರಲ್ಲಿ ಪ್ರಭಾವ ಬೆಳೆಸಿಕೊಂಡು ಸರಕಾರಗಳನ್ನೇ ಆಡಿಸುವ ದಾರ್ಷ್ಟ್ಯದ ದೇವದೂತರ ಪರಿವಾರದ ಪಾತಕ ಮುಚ್ಚಿಚಿಡಲು ಅಮಾಯಕ ಸುಧಾಕರ್ ರಾವ್‌ರ ಇಡೀ ಕುಟುಂಬವನ್ನೇ ಬಲಿ ಕೊಡಲಾಗಿದೆ ಎಂಬ ಭಾವನೆ ಈಗ ಜನಮಾನಸದಲ್ಲಿ ಮೂಡಿದೆ.

ಧೀರಜ್ ಜೈನ್, ಮಲ್ಲಿಕ್ ಜೈನ್, ಉದಯ ಜೈನ್

ಇನ್ನೊಂದೆಡೆ ಕೋರ್ಟ್-ಕಚೇರಿಯೆಂದು ತಿರುಗಾಡಿ ಆರ್ಥಿಕವಾಗಿಯೂ ಸುಧಾಕರ್ ರಾವ್ ಕುಟುಂಬ ಜರ್ಜರಿತವಾಗಿದೆ. ಐದು ವರ್ಷ ಜೈಲಲ್ಲಿ ಕಳೆದ ಸಂತೋಷ್‌ಗೆ 2017ರಲ್ಲಿ ಜಾಮೀನು ಸಿಕ್ಕಿದೆ; ಈಗ ನಿರ್ದೋಷಿಯೆಂದು ಸಿಬಿಐ ನ್ಯಾಯಾಲಯ ಸಾರಿದೆ. ಆದರೂ ತಾಯಿಯಿಲ್ಲದ ಮನೆಗೆ ಬರಲು ಸಂತೋಷ್‌ಗೆ ಮನಸ್ಸಾಗುತ್ತಿಲ್ಲ; ಇಳಿ ವಯಸ್ಸಿನ ತಂದೆಯ ಕಣ್ಣೀರು ನೋಡಲಾಗುತ್ತಿಲ್ಲ; ಅದ್ಯಾವುದೋ ಸಣ್ಣದೊಂದು ದೇವಾಲಯದಲ್ಲಿ ಪೂಜೆ, ಸ್ವಚ್ಛತೆಗೆ ನೆರವಾಗುತ್ತ, ಭಜನೆ-ಧ್ಯಾನ ಮಾಡುತ್ತ ಸಂತೋಷ್ ಕಾಲ ಕಳೆಯುತ್ತಿದ್ದಾರೆ. ಪೊಲೀಸ್ ದೌರ್ಜನ್ಯದಿಂದ ಘಾಸಿಗೊಂಡಿರುವ ಸಂತೋಷ್ ಕಾಲುನೋವು, ಹೊಟ್ಟೆನೋವು, ಮೂಳೆಗಳ ನೋವಿನಿಂದ ಬಳಲುತ್ತಿದ್ದಾರೆ. ಸಂತೋಷ್ ಬದುಕು ಬರಡಾಗಿದೆ. ಈಗವರ ಕತ್ತಲೆಯ ಬಾಳಿಗೆ ಯಾರು ಆಸರೆಯಾಗುತ್ತಾರೆ? ಎರಡೆರಡು ಕುಟುಂಬಗಳು “ಪ್ರಭಾವಿ”ಗಳ ಪರೋಕ್ಷ ದೌರ್ಜನ್ಯಕ್ಕೆ ಈಡಾಗುತ್ತಿದ್ದರೂ ಶಾಸಕ-ಸಂಸದ-ಸಚಿವರೆಲ್ಲ ಕಂಡೂಕಾಣದಂತಿದ್ದಾರೆ. ದಕ್ಷಿಣ ಕನ್ನಡದಲ್ಲಾಗುವ ಕ್ಷುಲ್ಲಕ ತಂಟೆಗಳನ್ನೆಲ್ಲ ಹಿಂದುತ್ವದ ಕಣ್ಣಿಂದ ಕಾಣುವ “ಧರ್ಮಾತ್ಮ”ರೆಲ್ಲ ಸೌಜನ್ಯ ಮತ್ತು ಸಂತೊಷ್ ರಾವ್ ಕುಟುಂಬಕ್ಕೆ ಒಂದರ ಹಿಂದೊಂದರಂತೆ ಅನ್ಯಾಯ-ಆಘಾತ ಆಗುತ್ತಿದ್ದರೂ ಸುಮ್ಮನಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.

ಧರ್ಮಸ್ಥಳ-ಉಜಿರೆ-ಬೆಳ್ತಂಗಡಿ ಪರಿಸರದ ಆಡಳಿತ ವ್ಯವಸ್ಥೆಯನ್ನು ಹಿಡಿತಕ್ಕೆ ಒಳಪಡಿಸಿಕೊಂಡಿರುವ ಪಾಳೇಗಾರಿ-ಜಮೀನ್ದಾರಿ ಪ್ರವೃತ್ತಿಯ “ದೇವಮಾನವರ” ಮರ್ಜಿಯಲ್ಲಿ ತನಿಖೆ ಆಗುತ್ತಿದೆ; ಧರ್ಮಸ್ಥಳದ ದೇವರ “ಯಜಮಾನರ” ಬಂಧು-ಬಾಂಧವರ ಪುಂಡ ಕುಲಕಂಠೀರವರು ಈ ರೇಪ್-ಮರ್ಡರ್ ಪ್ರಕರಣದ ರೂವಾರಿಗಳು ಎಂಬ ಅನುಮಾನ ಒಂದು ದಶಕದಿಂದ ಬೆಳ್ತಂಗಡಿಯ ಜನರಲ್ಲಿದೆ. ಸಂತೋಷ್ ರಾವ್ ಬಂಧನವಾದಾಗಲೆ ಆತ ಆರೋಪಿಯಲ್ಲವೆಂದು ಸೌಜನ್ಯ ಹೆತ್ತವರಾದಿಯಾಗಿ ಎಲ್ಲರೂ ಹೇಳಿದ್ದರು. ಧರ್ಮಸ್ಥಳದ ಧರ್ಮಾಧಿಕಾರಿ-ಬಿಜೆಪಿ ರಾಜ್ಯಸಭಾ ಸದಸ್ಯ ವೀರೇಂದ್ರ ಹೆಗ್ಗಡೆ, ತಮ್ಮ ಹರ್ಷೇಂದ್ರ ಹೆಗ್ಗಡೆ, ಪುತ್ರ ನಿಶ್ಚಲ್ ಹೆಗ್ಗಡೆ ಬಂಧುಗಳಿಗೆ ಪರಮಾಪ್ತರಾಗಿರುವ ಅನ್ನಪೂರ್ಣ ಟ್ರಸ್ಟ್ ಮ್ಯಾನೇಜರ್ ಮಗ ಧೀರಜ್ ಕೆಲ್ಲ, ದೇವಳದ ಕಚೇರಿಯಲ್ಲಿ ಆಯಕಟ್ಟಿನ ಹಣಕಾಸಿನ ವ್ಯವಹಾರ ನೋಡಿಕೊಳ್ಳುವ ಮಲ್ಲಿಕ್ ಜೈನ್, ಉದಯ್ ಜೈನ್ ಮತ್ತು ಹರ್ಷಿತ್ ಜೈನ್- ಈ ಕಾರ್ಟೆಲ್ ಸುತ್ತ ಅನುಮಾನದ ಹುತ್ತ ಎದ್ದಿದೆ. ಸೌಜನ್ಯಳ ತಾಯ್ತಂದೆ ಮತ್ತು ಹೋರಾಟದ ಮುಂಚೂಣಿಯಲ್ಲಿದ್ದ ಮಹೇಶ್ ಶೆಟ್ಟಿ ತಿಮರೋಡಿ ಮೇಲಿನ ಪಟ್ಟಿಯ ಕೊನೆಯ ನಾಲ್ವರು ಪರಮಾಪ್ತ ಮಿತ್ರರ ಮಂಡಳಿಯನ್ನು ನಿಷ್ಠುರ ತನಿಖೆಗೆ ಒಳಪಡಿಸುವಂತೆ ಬಹಿರಂಗವಾಗಿ ಆಗ್ರಹಿಸುತ್ತಲೇ ಇದ್ದಾರೆ; ಲಕ್ಷಾಂತರ ಜನರು ಬೀದಿಗಿಳಿದು ಕ್ರಮಬದ್ಧ-ನ್ಯಾಯೋಚಿತ ತನಿಖೆ ನಡೆಸುವಂತೆ ಪ್ರತಿಭಟನೆ ನಡೆಸಿದ್ದರು!

ಜನಾಕ್ರೋಶ ಜೋರಾದಾಗ ಅಂದಿನ ಸಿಎಂ ಸದಾನಂದ ಗೌಡರ ಸರಕಾರ ಪ್ರಕರಣವನ್ನು ಸಿಓಡಿಗೆ ವಹಿಸಿತ್ತು. ಸಿದ್ದು ಸರಕಾರ-1ರ ಆಡಳಿತದಲ್ಲಿ ಸಿಬಿಐಗೆ ಕೊಡಲಾಯಿತು. ಆಘಾತಕಾರಿ ವಿಷಯವೆಂದರೆ, ಈ ಎರಡೂ ರಾಜ್ಯ ಮತ್ತು ಕೇಂದ್ರದ ಉನ್ನತ ತನಿಖಾ ಏಜೆನ್ಸಿಗಳು ಸ್ವತಂತ್ರ-ಪ್ರಾಮಾಣಿಕ ತನಿಖೆ ಕೈಗೊಳ್ಳಲಿಲ್ಲ; ನಿಜ ಅಪರಾಧಿಗಳನ್ನು ಮರೆಮಾಚುವ ಬೆಳ್ತಂಗಡಿ ಪೊಲೀಸರ ಹುನ್ನಾರದ ಜಾಡಿನಲ್ಲೇ ಸಾಗುತ್ತ ನಿಷ್ಪಾಪಿ ಸಂತೋಷ್ ರಾವ್ ಸುತ್ತಲೆ ಗಿರಕಿ ಹೊಡೆದು ಪ್ರಕರಣದ ದಿಕ್ಕು ತಪ್ಪಿಸಲಾಯ್ತು; ಹಲವು ಆರೋಗ್ಯ ಸಂಬಂಧಿ ಕಾಯಿಲೆಗಳಿಂದ ಸಂತೋಷ್ ಅತ್ಯಾಚಾರ ಮಾಡುವ ಸಾಧ್ಯತೆ ತೀರಾ ಕಡಿಮೆ ಎಂದು ವೈದ್ಯಕೀಯ ಪರೀಕ್ಷೆಗಳ ನಂತರ ಖಾತ್ರಿಯಾದ ಬಳಿಕವೂ ಶಂಕಿತ ಆರೋಪಿಗಳತ್ತ ಕಣ್ಣು ಹಾಯಿಸಲಿಲ್ಲ. ಕ್ಲುಪ್ತ ಕಾಲ(ಗೋಲ್ಡನ್ ಅವರ್)ದಲ್ಲಿ ಸಾಕ್ಷ್ಯಾಧಾರ ಸಂಗ್ರಹಿಸದೆ ಅಪರಾಧಿಗಳು ಸಿಕ್ಕಿಬೀಳದಂತೆ ಹಿಕಮತ್ತು ನಡೆಸಲಾಯಿತು; ಸೌಜನ್ಯ ಬಸ್ಸಿನಿಂದ ಇಳಿದದ್ದು ಧರ್ಮಸ್ಥಳ ಸಂಸ್ಥಾನದವರ ಪ್ರಕೃತಿ ಚಿಕಿತ್ಸಾಲಯ(ಶಾಂತಿವನ)ದ ಗೇಟಿನ ಬಳಿಯ ಬಸ್ ನಿಲ್ದಾಣದಲ್ಲಿ; ಪ್ರಕೃತಿ ಚಿಕಿತ್ಸಾಲಯದ ಗೇಟಿನಲ್ಲಿ 24‍x7 ಕಾವಲುಗಾರನಿರುತ್ತಾನೆ. ಅಲ್ಲಿ ಸಿಸಿ ಕ್ಯಾಮರಾ ಸಹ ಅಳವಡಿಸಲಾಗಿದೆ. ಸೌಜನ್ಯಳ ಅಪಹರಣವಾಗಿದ್ದು ಮತ್ತು ಮೃತ ದೇಹ ಕಂಡುಬಂದಿದ್ದು ಆ ಗೇಟಿನಿಂದ ಕೇವಲ ನೂರು ಮೀಟರ್ ಅಂತರದಲ್ಲಿ. ಆದರೂ ಪ್ರಾಥಮಿಕ ತನಿಖೆ ನಡೆಸಿದ ಬೆಳ್ತಂಗಡಿ ಪೊಲೀಸರಾಗಲಿ, ಸಿಐಡಿಯವರಾಗಲಿ ಅಥವಾ ಸಿಬಿಐನ ತನಿಖಾಧಿಕಾರಿಗಳಾಗಲೀ ಸಿಸಿ ಕ್ಯಾಮೆರಾ ಫುಟೇಜ್ ಮತ್ತಿತರ ಸಾಕ್ಷ್ಯಗಳನ್ನು ಬುದ್ಧಿಪೂರ್ವಕವಾಗೇ ಸಂಗ್ರಹ ಮಾಡಿಲ್ಲ ಎಂಬ ಆಕ್ಷೇಪದ ಚರ್ಚೆಗಳು ಬೆಳ್ತಂಗಡಿಯಲ್ಲಿ ನಡೆಯುತ್ತಿವೆ.

ಧರ್ಮಸ್ಥಳ ಸಂಸ್ಥಾನದ ಹೈಸ್ಕೂಲ್ ಬಸ್ಸಿನಲ್ಲಿ ಬರುತ್ತಿದ್ದ ಎಚ್.ಎಂ ಪರಿಮಳಾ ಮತ್ತು ಸಿಬ್ಬಂದಿ ಹುಡುಗಿಯೊಬ್ಬಳು ಸೌಜನ್ಯಳನ್ನು ನಾಲ್ವರು ಎಳೆದುಕೊಂಡು ಹೋಗುತ್ತಿದ್ದನ್ನು ನೋಡಿದ್ದರು. ಮರುದಿನ ಆ ಎಚ್.ಎಂ ದೂರು ಕೊಡಲೆಂದು ಪೊಲೀಸ್ ಠಾಣೆಗೆ ಹೋಗಿದ್ದಾರೆ. ಪಿಎಸ್‌ಐ ಯೋಗೀಶ್ ದೂರು ದಾಖಲಿಸದೆ “ನಾಳೆ ಬನ್ನಿ” ಎಂದು ಸಾಗಹಾಕಿದ್ದಾರೆ. ಆದರೆ ಮರುದಿನ ಎಚ್.ಎಂಗೆ ಮತ್ತೆ ಠಾಣೆಗೆ ಹೋಗುವ ಧೈರ್ಯ ಬರವುದಿಲ್ಲ; ಎಸ್‌ಐ ದೂರು ಪಡೆಯುವ ಕರ್ತವ್ಯ ಮಾಡುವುದಿಲ್ಲ. ಶಂಕಿತ ಆರೋಪಿಗಳೆನ್ನಲಾಗುತ್ತಿರುವ ಮಲ್ಲಿಕ್ ಜೈನ್ ಮತ್ತಿತರರು ಸೌಜನ್ಯಳ ಅಪಹರಣಕ್ಕಿಂತ ಮೂರು ತಾಸು ಮೊದಲು, ಸೌಜನ್ಯ ಶವ ಕಂಡುಬಂದಿದ್ದ ಮಣ್ಣುಸಂಕದ ಹೊಂಡದಿಂದ ಮೇಲೇರಿ ಬರುತ್ತಿದ್ದರು; ಅವರು “ಹಗಲಲ್ಲಿ ಎತ್ತಿಕೊಂಡು ಹೋಗೋದಕ್ಕೆ ಆಗೋದಿಲ್ಲ” ಎಂದು ಸಂಚು ರೂಪಿಸುವ ರೀತಿ ಮಾತಾಡಿಕೊಳ್ಳುತ್ತಿದ್ದರಂತೆ. ಇದನ್ನು ಖುದ್ದು ಸೌಜನ್ಯಳ ಚಿಕ್ಕಮ್ಮ ಯಶೋಧ ಅವರೇ ಕೇಳಿಸಿಕೊಂಡಿದ್ದಾಗಿ ಆರೋಪಿಸಿದ್ದಾರೆ. ಮಲ್ಲಿಕ್ ಜೈನ್ ಆಕೆಯ ಕ್ಲಾಸ್‌ಮೇಟ್ ಆಗಿದ್ದವ. ಮತ್ತೊಬ್ಬ ಶಂಕಿತ ಆರೋಪಿ ಧೀರಜ್ ಕೆಲ್ಲನ ಅಂಗಿಗೆ ರಕ್ತದ ಕಲೆಯಾಗಿದ್ದು ನೋಡಿದ್ದಾರೆಂದು ಸುದ್ದಿಯಾಗಿದ್ದ ಆತನ ಮನೆ ಕೆಲಸದಾಕೆ ವಾರಿಜ ಪೂಜಾರ್ತಿ ಅನುಮಾನಾಸ್ಪದವಾಗಿ ಬಾವಿಯಲ್ಲಿ ಹೆಣವಾಗಿದ್ದಾರೆ. ಪ್ರಕೃತಿ ಚಿಕಿತ್ಸಾಲಯದ ಸಿಸಿ ಕ್ಯಾಮೆರಾ ಫುಟೇಜ್‌ಅನ್ನು ನಾಶ ಮಾಡಲಾಗಿದೆ. ಈ ಪ್ರಬಲ ಸಾಕ್ಷ್ಯಾಧಾರಗಳನ್ನೆಲ್ಲ ಸಿಐಡಿ, ಸಿಬಿಐ ಪೊಲೀಸರು ಮತ್ತು ಅಧಿಕಾರಸ್ಥರು ಕಡೆಗಣಿಸಿ ನಿರಪರಾಧಿ ಸಂತೋಷ್ ರಾವ್ ಮತ್ತವರ ಕುಟುಂಬವನ್ನು ನಿರಂತರ 11 ವರ್ಷ ಕಣ್ಣೀರಲ್ಲಿ ಕೈ ತೊಳೆಯುವಂತೆ ಮಾಡಿದ್ದಾರೆ. ಈ ಕ್ರೂರ ಪ್ರಹಸನ ದೇವಧೂತರ ಹಿತಾಸಕ್ತಿಯ ನಿರ್ದೇಶನದಂತೆ ನಡೆದಿದೆ ಎಂದು ಸೌಜನ್ಯ ಪ್ರಕರಣದ ಹೋರಾಟದ ಮುಂದಾಳು ತಿಮರೋಡಿ ಮಹೇಶ್ ಶೆಟ್ಟಿ ಖಡಾಖಂಡಿತವಾಗಿ ಆರೋಪಿಸುತ್ತಾರೆ!

ಮಹೇಶ್ ಶೆಟ್ಟಿ ತಿಮರೋಡಿ

ಈಗ ಮೈಸೂರಿನ ಒಡನಾಡಿ ಸಂಸ್ಥೆ ಸೌಜನ್ಯ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಒಯ್ಯುವ ಪ್ರಯತ್ನ ಪ್ರಾರಂಭಿಸಿದೆ. ಕಾನೂನಿನ ಹೋರಾಟ ಮತ್ತು ಜನಾಂದೋಲನದ ಮೂಲಕ ಸೌಜನ್ಯ ಸಾವಿಗೆ ನ್ಯಾಯ ಕೊಡಿಸಲು ಟೊಂಕಕಟ್ಟಿನಿಂತಿದೆ; ಈ ವರದಿ ಸಿದ್ಧವಾಗುತ್ತಿರುವ ವೇಳೆಗೆ “ಒಡನಾಡಿ” ಮುಂದಾಳತ್ವದಲ್ಲಿ ಮೈಸೂರಲ್ಲಿ ಪ್ರತಿಭಟನೆಯಾಗಿದೆ. ಸೌಜನ್ಯ ಪ್ರಕರಣದ ಮರುತನಿಖೆ ನಿಷ್ಪಕ್ಷಪಾತವಾಗಿ ನಡೆದು ಅಸಲಿ ಅಪರಾಧಿಗಳು ಬೋನಿಗೆ ಬೀಳುವರಾ?! ಮಾಡದ ತಪ್ಪಿಗೆ ಚಿತ್ರ ಹಿಂಸೆ, ಜೈಲು ವಾಸ ಅನಭವಿಸಿದ ಸಂತೋಷ್ ರಾವ್ ಮತ್ತವರ ನಿಷ್ಪಾಪಿ ಕುಟುಂಬವನ್ನು ಗಾಢಾಂಧಕಾರದಿಂದ ಬೆಳಕಿಗೆ ತರುವ ಮಾನವೀಯ ಕೆಲಸವೂ ತಕ್ಷಣವೇ ಜರೂರಾಗಬೇಕಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...