Homeಮುಖಪುಟನಾಯಕತ್ವದ ವಿವಿಧ ಬಗೆಗಳಲ್ಲಿ ನಿಮ್ಮದು ಯಾವ ವಿಭಾಗಕ್ಕೆ ಬರುತ್ತದೆ?

ನಾಯಕತ್ವದ ವಿವಿಧ ಬಗೆಗಳಲ್ಲಿ ನಿಮ್ಮದು ಯಾವ ವಿಭಾಗಕ್ಕೆ ಬರುತ್ತದೆ?

- Advertisement -
- Advertisement -

ಜೀವನ ಕಲೆಗಳು: ಅಂಕಣ: 24

ನಾಯಕರು ಬೇರೆ ಬೇರೆ ಆಕಾರ ಮತ್ತು ಅಳತೆಗಳಲ್ಲಿ ಬರುತ್ತಾರೆ ಆದರೆ ಆಧುನಿಕ ಮನಃಶಾಸ್ತ್ರದ ಪಿತಾಮಹ ಎನಿಸಿಕೊಂಡಿರುವ ಕುರ್ಟ್ ಲೆವಿನ್, ಜರ್ನಲ್ ಆಫ್ ಸೈಕಾಲಜಿಯಲ್ಲಿ 1939ರಲ್ಲಿ ಪ್ರಕಟಿಸಿದ ಲೇಖನದ ಪ್ರಕಾರ ನಾಯಕತ್ವದಲ್ಲಿ ಮುಖ್ಯವಾಗಿ ಮೂರು ಬಗೆಗಳಿವೆ. ನಾಯಕರ ನಡತೆಯ ಆಧಾರದ ಮೇಲೆ ನಾಯಕತ್ವದ ಬಗೆಯನ್ನು ವ್ಯಾಖ್ಯಾನವನ್ನು ಲೆವಿನ್ ಹೀಗೆ ಮಾಡಿರುತ್ತಾರೆ.

·         ಅಧಿಕಾರಶಾಹಿ ನಾಯಕತ್ವ

·         ಭಾಗವಹಿಸುವಿಕೆಯ ನಾಯಕತ್ವ

·         ಅಧಿಕಾರ ಬಿಟ್ಟುಕೊಡುವ ನಾಯಕತ್ವ

ಈ ಮೂರು ವಿಧಗಳನ್ನು ಇನ್ನಷ್ಟು ವರ್ಗೀಕರಿಸಿ, 5 ಮಾದರಿಗಳು, 7 ಬಗೆಗಳು, 10 ಬಗೆಗಳು… ಇತ್ಯಾದಿಯಾಗಿ ಅನೇಕರು ಈಗಾಗಲೇ ವಿಂಗಡನೆ ಮಾಡಿರುತ್ತಾರೆ.

ಈ ಮೂವರೊಳಗೆ ಯಾವುದು ಉತ್ತಮ ಎನ್ನುವ ಪ್ರಶ್ನೆ ಇಲ್ಲ, ಏಕೆಂದರೆ ಪ್ರತಿಯೊಂದು ಬಗೆಯೂ ಬೇರೆ ಬೇರೆ ಸನ್ನಿವೇಶದಲ್ಲಿ ಪ್ರಯೋಜನಕ್ಕೆ ಬರುತ್ತವೆ. ನಾಯಕರು ಜನರನ್ನು ಪ್ರೇರೇಪಿಸುತ್ತಿರುವಾಗ, ನಿರ್ದೇಶಿಸುತ್ತಿರುವಾಗ, ಮಾರ್ಗದರ್ಶನ ಮಾಡುತ್ತಿರುವಾಗ, ಲೆವಿನ್ ಅವರನ್ನು ವೀಕ್ಷಿಸಿ ಈ ನಿರ್ಣಯಕ್ಕೆ ಬಂದಿರುತ್ತಾರೆ

ಅಧಿಕಾರಶಾಹಿ ನಾಯಕತ್ವ ಅಥವಾ ಸ್ವಯಂ-ಪ್ರಭುತ್ವ:  ಈ ಪದಗಳನ್ನು ಓದಿದ ಕೂಡಲೇ ನಮ್ಮ ಮುಂದೆ ಬರುವ ಚಿತ್ರಣ ಅಡಾಲ್ಫ್ ಹಿಟ್ಲರ್, ಅಥವಾ ಸ್ಟಾಲಿನ್ ಮುಂತಾದವರು. ಇಂತಹ ನಾಯಕರು ತಮ್ಮ ಅನುಯಾಯಿಗಳಿಗೆ ಯಾವಾಗ, ಹೇಗೆ ಮತ್ತು ಏನು ಮಾಡಬೇಕು ಎನ್ನುವುದರ ಬಗ್ಗೆ ಬಹಳ ಸ್ಪಷ್ಟ ಆದೇಶಗಳನ್ನು ನೀಡುತ್ತಾರೆ ಮತ್ತು ನಿರೀಕ್ಷಣೆಗಳನ್ನು ಇಟ್ಟುಕೊಂಡಿರುತ್ತಾರೆ. ಇದರಲ್ಲಿ ಆಜ್ಞೆ ಮತ್ತು ನಿಯಂತ್ರಣ ವ್ಯವಸ್ಥೆ ಬಹಳ ಮುಖ್ಯ, ಯಾರು ನಾಯಕರು ಮತ್ತು ಯಾರು ಹಿಂಬಾಲಕರು ಎನ್ನುವ ಗೆರೆಯೂ ಸ್ಪಷ್ಟವಾಗಿರುತ್ತದೆ. ಅಧಿಕಾರಶಾಹಿ ನಾಯಕರು ತಮ್ಮ ನಿರ್ಧಾರಗಳನ್ನು ತಾವೇ ತೆಗೆದುಕೊಂಡು, ಮಿಕ್ಕವರಿಗೆ ತಮ್ಮ ಸಲಹೆ ನೀಡಲು ಅವಕಾಶವಿರುವುದಿಲ್ಲ. ಕೋಳಿಯನ್ನು ಕೇಳಿ ಯಾರೂ ಖಾರ ಅರೆಯುವುದಿಲ್ಲ.

ಇಂತಹ ನಾಯಕತ್ವದಲ್ಲಿ ಹೆಚ್ಚಿನ ಸೃಜನಾತ್ಮಕ ನಿರ್ಧಾರಗಳಿಗೆ ಅವಕಾಶವಿರುವುದಿಲ್ಲ. ಇಂತಹ ನಾಯಕತ್ವದ ಕಲೆಯನ್ನು ರೂಢಿಸಿಕೊಂಡ ನಾಯಕರಿಗೆ ಪ್ರಜಾಪ್ರಭುತ್ವ ನಾಯಕತ್ವದ ಶೈಲಿಗೆ ಬದಲಾಯಿಸಿಕೊಳ್ಳುವುದು ಕಷ್ಟ. ಅದೇ ರೀತಿ ಪ್ರಜಾಪ್ರಭುತ್ವ ನಾಯಕತ್ವದ ಶೈಲಿ ರೂಢಿಸಿಕೊಂಡ ನಾಯಕರಿಗೆ ಅಧಿಕಾರಶಾಹಿ ಶೈಲಿಗೆ ಹೊಂದಿಕೊಳ್ಳುವುದು ಅಷ್ಟೇ ಕಷ್ಟ. ಅಧಿಕಾರಶಾಹಿ ನಾಯಕರನ್ನು ಜನರು ನಿಯಂತ್ರಣಕಾರಿ, ನಿರಂಕುಶಧಾರಿ ಎಂದು ಪರಿಗಣಿಸುತ್ತಾರೆ. ಯಾವಾಗ ಎಲ್ಲರೊಂದಿಗೆ ಕೂತು ಚರ್ಚಿಸಲು ಸಮಯವಿಲ್ಲವೋ, ಚರ್ಚಿಸಲು ಸರಿಯಾದ ಜನರಿಲ್ಲವೋ ಅಥವಾ ತುರ್ತು ನಿರ್ಧಾಗಳನ್ನು ತೆಗೆದುಕೊಳ್ಳಾಬೇಕಾದ ಅವಶ್ಯಕತೆ ಇರುತ್ತದೋ, ಅಲ್ಲಿ ಇಂತಹ ನಾಯಕತ್ವ ಪ್ರಯೋಜನ ಬರುತ್ತದೆ. ಉದಾ: ಸೈನ್ಯ, ಪೋಲಿಸ್ ಇತ್ಯಾದಿ. ಇದರಲ್ಲಿ ಕೆಳ ಹಂತದ ನಾಯಕರು ಮತ್ತು ಸಿಬ್ಬಂದಿ ಮೇಲಿನ ಹಂತದ ನಾಯಕರ ಪ್ರತಿ ಸದಾ ನಿಷ್ಠೆ ತೋರಿಸುತ್ತಾರೆ ಎನ್ನುವುದು ಸಂದೇಹ.

ಭಾಗವಹಿಸುವಿಕೆ ಅಥವಾ ಪ್ರಜಾಪ್ರಭುತ್ವ ಮಾದರಿಯ ನಾಯಕತ್ವ: ಲೆವಿನ್ ಅಧ್ಯಯನದ ಪ್ರಕಾರ ಈ ಮಾದರಿಯ ನಾಯಕತ್ವ ಮಿಕ್ಕೆಲ್ಲ ಬಗೆಗಿಂತಲೂ ಹೆಚ್ಚು ಪರಿಣಾಮಕರಿ ಎಂದೆನಿಸಿಕೊಂಡಿದೆ. ಇಲ್ಲಿ ನಾಯಕರು ತಮ್ಮ ಹಿಂಬಾಲಕರಿಗೆ ಮಾರ್ಗದರ್ಶನ ಮಾಡುತ್ತಾರೆ, ಅಷ್ಟೇ ಅಲ್ಲ, ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾರೆ. ಇತರರಿಂದ ಸಲಹೆ/ಪ್ರತ್ಯಾದಾನ ಪಡೆಯುತ್ತಾರೆ. ಮಕ್ಕಳಲ್ಲಿ ಇಂತಹ ನಾಯಕತ್ವದ ಅಡಿಯಲ್ಲಿ ಅವರ ಪರಿಶ್ರಮ, ಅಧಿಕಾರಶಾಹಿ ಗುಂಪಿಗೆ ಹೋಲಿಸಿದರೆ, ಕಡಿಮೆ ಉತ್ಪನ್ನಕಾರಿಯಾಗಿ ಕಂಡು ಬಂತು ಆದರೆ ಅವರ ಕೆಲಸ ಉನ್ನತ ಗುಣ ಮಟ್ಟದ್ದಾಗಿತ್ತು.

ಭಾಗವಹಿಸುವ ನಾಯಕತ್ವದಲ್ಲಿ, ನಾಯಕರು ತಂಡದ ಸದಸ್ಯರೊಂದಿಗೆ ಕೆಲಸದಲ್ಲಿ ಭಾಗವಹಿಸಿ, ಅವರನ್ನು ಹುರಿದುಂಬಿಸಿ, ಅವರ ಅನಿಸಿಕೆಗಳನ್ನು ಕೇಳಿಸಿಕೊಳ್ಳುತ್ತಿದ್ದರೂ, ಅಂತಿಮ ನಿರ್ಧಾರವನ್ನು ಅವರು ತಮ್ಮ ಕೈಯಲ್ಲಿ ಇಟ್ಟುಕೊಂಡಿರುತ್ತಾರೆ. ಇದರಿಂದ ಗುಂಪಿನ ಸದಸ್ಯರು ಹೆಚ್ಚು ಸೃಜನಾತ್ಮಕವಾಗಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಇಂತಹ ನಾಯಕರು ತಂಡದ ಸದಸ್ಯರನ್ನು “ತಾವೂ ತಂಡಕ್ಕೆ ಬಹಳ ಮುಖ್ಯ” ಎಂದು ಅನಿಸುವಂತೆ ನಡೆದುಕೊಳ್ಳುತ್ತಾರೆ, ಇದರಿಂದ ತಂಡಕ್ಕೆ ಅದರ ಗುರಿ ತಲುಪಲು ಸಹಕಾರಿ ಆಗುತ್ತದೆ.

ಅಧಿಕಾರ/ಜವಾಬ್ದಾರಿ ಹಸ್ತಾಂತರದ ನಾಯಕತ್ವ: ಇದರಲ್ಲಿ ಮಕ್ಕಳು ಅತ್ಯಂತ ಕಡಿಮೆ ಉತ್ಪನ್ನಕಾರಿಯಾಗಿಯೂ, ತಮ್ಮ ನಾಯಕರಿಂದ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿರುವಂತೆಯೂ, ಕಡಿಮೆ ಸಹಕಾರ ನೀಡುವಂತೆಯೂ ಮತ್ತು ತಾವೇ ಸ್ವತ: ಸ್ವತಂತ್ರವಾಗಿ ಕೆಲಸ ಮಾಡಲು ಅಸಮರ್ಥರಂತೆ ಸಂಶೋಧಕರಿಗೆ ಕಂಡುಬಂದರು.

ಇಂತಹ ಅಧಿಕಾರ/ಜವಾಬ್ದಾರಿ ಹಸ್ತಾಂತರದ ನಾಯಕತ್ವದಲ್ಲಿ ನಾಯಕರು ತಮ್ಮ ಹಿಂಬಾಲಕರಿಗೆ ಯಾವುದೇ ಮಾರ್ಗದರ್ಶನ ಮಾಡುವುದಿಲ್ಲ ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳುವ ಕೆಲಸವನ್ನು ತಮ್ಮ ಕೈಯಲ್ಲಿ ಮುಟ್ಟದೇ ಹಿಂಬಾಲಕರಿಗೇ ಬಿಟ್ಟುಬಿಡುತ್ತಾರೆ. ತುಂಬಾ  ಜ್ಞಾನವುಳ್ಳ, ಅನುಭವವುಳ್ಳ ತಂಡದ ಸದಸ್ಯರಿದ್ದಾಗ ಇದು ಬಹಳ ಉಪಯುಕ್ತವಾಗಿರುತ್ತದೆ. ಇಲ್ಲಿ ಯಾರು ಏನು ಮಾಡುತ್ತಾರೆ, ಅವರ ಕೆಲಸ/ಜವಾಬ್ದಾರಿ ಏನು ಎಂಬುದರ ಸ್ಪಷ್ಟತೆ ಇರುವುದಿಲ್ಲ. ಇಂತಹ ನಾಯಕತ್ವವನ್ನು ಲೇಸಿ ಫೇ (Laissez Faire) ಎಂದೂ ಕರೆಯುತ್ತಾರೆ.

ಇಂತಹ ನಾಯಕತ್ವದಲ್ಲಿ ಗುಂಪುಗಳು ದಿಕ್ಕು-ದೆಸೆ ಇಲ್ಲದಂತೆಯೂ, ಒಬ್ಬರನ್ನೊಬ್ಬರು ಪರಸ್ಪರ ದೋಷಾರೋಪಣೆ ಮಾಡುವಂತೆಯೂ, ವೈಯುಕ್ತಿಕ ಜವಾಬ್ದಾರಿ ತೆಗೆದುಕೊಳ್ಳದವರಂತೆಯೂ ಕಂಡುಬಂದರು, ಇಲ್ಲಿಯ ಕೆಲಸದಲ್ಲಿ  ಸಾಕಷ್ಟು ಪ್ರಗತಿಯೂ ಕಾಣಿಸಲಿಲ್ಲ.

ನಾಯಕತ್ವದ ಕಾರಣ/ಪರಿಣಾಮದಿಂದಾಗಿ ನಾಯಕತ್ವವನ್ನು ಸಾಂದರ್ಭಿಕ (ಸಿಚ್ಯುಏಷನಲ್), ವ್ಯಾವಹಾರಿಕ (ಟ್ರಾನ್ಸಾಕ್ಟಿವ್) ಮತ್ತು ಪರಿವರ್ತನಕಾರಿ (ಟ್ರಾನ್ಸ್ಫಾರ್ಮೇಷನಲ್) ಎಂದು ವಿಂಗಡಿಸಲಾಗಿದೆ.

·         ಸಂದರ್ಭ ಎದುರಾದಾಗ, ಅವಕಾಶ ಸಿಕ್ಕಾಗ, ನಾಯಕತ್ವ ತೋರಿಸಬಲ್ಲ ವ್ಯಕ್ತಿಗಳು ಸಾಂದರ್ಭಿಕ ನಾಯಕರು. ಉದಾ: ಪ್ರವಾಹದಲ್ಲಿ ಸಿಲುಕಿಕೊಂಡಾಗ ಅವರನ್ನು ರಕ್ಷಿಸುವ ಶೂರ ವೀರರು, ಇತ್ಯಾದಿ.

·         ಯಾವುದೇ ವ್ಯವಹಾರಗಳನ್ನು ಸಮರ್ಪಕವಾಗಿ ನಿರ್ವಹಿಸಬಲ್ಲವರು ವ್ಯವಹಾರಿಕ ನಾಯಕರು. ಉದಾ: ಕಂಪನಿಯ ವ್ಯವಸ್ಥಾಪಕರು, ಮಾರುಕಟ್ಟೆ ಗಟ್ಟಿಗರು, ಇತ್ಯಾದಿ. ಇದರಲ್ಲಿ ಮೇಲ್ವಿಚಾರಣೆ, ಸಂಸ್ಥೆ, ಪ್ರದರ್ಶನ, ಲಾಭ-ನಷ್ಟ, ಇನಾಮು-ದಂಡನೆ, ಸೋಲು—ಗೆಲುವು ಮುಂತಾದ ಶಬ್ದಗಳ ಪ್ರಯೋಗ ಹೆಚ್ಚಿರುತ್ತದೆ. ಉದಾ: ಮುಕೇಶ್ ಅಂಬಾನಿ, ಅದಾನಿ ಮುಂತಾದವರು

·         ವ್ಯವಸ್ಥೆಯಲ್ಲಿ ಪರಿವರ್ತನೆ ತರಬಲ್ಲ, ಸಮಾಜವನ್ನು ಬದಲಾಯಿಸಬಲ್ಲವರು ಪರಿವರ್ತನಾ ನಾಯಕರು. ಉದಾ: ಮಹಾತ್ಮಾ ಗಾಂಧಿ, ಬಿ. ಆರ್. ಅಂಬೇಡ್ಕರ್, ಇತ್ಯಾದಿ.

ಇದಲ್ಲದೆ, ಇನ್ನೂ ಹಲವು ಬಗೆಯ ವಿಂಗಡನೆಗಳಾಗಿದ್ದು, ಇದರಲ್ಲಿ ಕರಿಶ್ಮ್ಯಾಟಿಕ್ (charismatic), ಸರ್ವೆಂಟ್ (Servant or Savant), ಬ್ಯೂರೋಕ್ರಾಟಿಕ್ (Bureaucratic) ಎಂಬ ಶೈಲಿಗಳೂ ಇವೆ.

ಯಾವುದೋ ಒಂದು ಕ್ಷೇತ್ರದಲ್ಲಿ ಸಾಧನೆ ಮಾಡಿ, ಹೆಸರು ಗಳಿಸಿ, ಇನ್ನೊಂದು ಕ್ಷೇತ್ರಕ್ಕೆ ತಮ್ಮ ವರ್ಚಸ್ಸನ್ನು ಜೊತೆಗೆ ತೆಗೆದುಕೊಂಡು ಹೋಗುವವರು ಕರಿಶ್ಮ್ಯಾಟಿಕ್ ನಾಯಕತ್ವ, ಉದಾ: ಅಮಿತಾಭ್ ಬಚ್ಚನ್, ವಿರಾಟ್ ಕೊಹ್ಲಿ, ಇತ್ಯಾದಿ. ಜನಸಾಮಾನ್ಯರು ಅವರನ್ನು ನೋಡಲು, ಮಾತುಗಳನ್ನು ಕೇಳಲು ಉತ್ಸುಕರಾಗಿರುತ್ತಾರೆ.

ಸೇವಾ ಮನೋಭಾವದಿಂದ ಜನರಿಗೆ ಸೇವೆ ಸಲ್ಲಿಸಿ ಹೆಸರುವಾಸಿಯಾದವರು ಸೇವಾ ನಾಯಕರು, ಉದಾ: ಮದರ್ ಥೆರೆಸ, ತುಮಕೂರಿನ ಡಾ. ಶಿವಕುಮಾರ ಸ್ವಾಮಿ ಇತಾದಿ. ಜನರು ಇವರ ಆಶೀರ್ವಾದ ಪಡೆಯಲು ಹಂಬಲಿಸುತ್ತಾರೆ.

ದೇಶದ ಕಾಯಿದೆ ಕಾನೂನು ಪಾಲಿಸಿ, ಯೋಜನೆಗಳನ್ನು ಜಾರಿಗೊಳಿಸಿ ಅಭಿವೃದ್ಧಿ ಕೆಲಸ ಮಾಡುವವರು ಬ್ಯೂರೋಕ್ರಾಟಿಕ್ ನಾಯಕರು, ಹೆಚ್ಚಾಗಿ ಸರಕಾರಿ ಉನ್ನತ ಅಧಿಕಾರಿಗಳು.

ಒಳ್ಳೆಯ ನಾಯಕರು ಕೇವಲ ಒಂದೇ ಶೈಲಿಯ ನಾಯಕತ್ವ ಬಳಸುವುದಿಲ್ಲ. ಸಮಯಕ್ಕೆ, ಸಂದರ್ಭಕ್ಕೆ ತಕ್ಕಂತೆ ತಮ್ಮ ಶೈಲಿಯನ್ನು ಹೊಂದಿಸಿಕೊಳ್ಳುತ್ತಾರೆ. ನೀವು ಎಂತಹ ನಾಯಕರಾಗುತ್ತೀರಿ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ.ಬಂಗಾಳ: ಲೈಂಗಿಕ ದೌರ್ಜ್ಯನ್ಯದ ಆರೋಪದ ಬೆನ್ನಲ್ಲಿ ರಾಜಭವನಕ್ಕೆ ಪೊಲೀಸರಿಗೆ ಪ್ರವೇಶ ನಿಷೇಧಿಸಿದ ಗವರ್ನರ್‌

0
ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ.ವಿ.ಆನಂದ ಬೋಸ್ ವಿರುದ್ಧ ನಿನ್ನೆ ರಾಜಭವನದ ಮಹಿಳಾ ಉದ್ಯೋಗಿಯೋರ್ವರು ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದ್ದರು. ಇದರ ಬೆನ್ನಲ್ಲಿ ರಾಜ್ಯಪಾಲರು ತನಿಖೆಯ ನೆಪದಲ್ಲಿ ಪೊಲೀಸರು ರಾಜಭವನಕ್ಕೆ ಪ್ರವೇಶಿಸದಂತೆ ನಿಷೇಧಿಸಿದ್ದಾರೆ, ಇದಲ್ಲದೆ...